ಕನ್ನಡನಾಡಿನ ಸಮಸ್ಯೆಗಳು : ಮಂಪರಿನಲ್ಲಿರುವ ಸಮುದಾಯ

(ಒಂದಷ್ಟು ಒಳನೋಟಗಳು)

ಕು ಸ ಮದುಸೂದನ್

ಕರ್ನಾಟಕದ ವಿಶಿಷ್ಟತೆ ದಿನೇದಿನೇ ನಾಶವಾಗುತ್ತಿದೆ. ಇಲ್ಲಿನ ನೆಲ,ಜಲ,ಪರಂಪರಾನುಗತ ವೈಶಿಷ್ಟ್ಯತೆಗಳು ಕಾಲಗರ್ಭದಲ್ಲಿ ಲೀನಾಗುವಂತೆ ಕಾಣುತ್ತಿವೆ. ವಿವಿದ ರೀತಿಯ ಸಮಸ್ಯೆಗಳು ನಮ್ಮನ್ನು ಎಡೆಬಿಡದೆ ಕಾಡುತ್ತಿವೆ. ನಾಡಿನ ಸಮಸ್ಯಗಳಿಗೆ ಪರಿಹಾರ ಕಂಡು ಹಿಡಿಯಬೇಕಾದ ಆಡಳಿತ ವ್ಯವಸ್ಥೆ ತನ್ನ ಅವಿವೇಕತನದಿಂದ ಸಮಸ್ಯೆಗಳನ್ನು ಇನ್ನಷ್ಟು ಜಾಸ್ತಿ ಮಾಡುತ್ತ ಹೋಗುತ್ತಿದೆ. ಸಾಂಪ್ರದಾಯಿಕ ರಾಜಕಾರಣದ ದುಷ್ಟತೆಯಿಂದಾಗಿ ಉಳ್ಳವರು ಉಳ್ಳವರಾಗುತ್ತ ಇಲ್ಲದವರು ಇನ್ನೂ ಇಲ್ಲದವರಾಗುತ್ತ ಅಸಮಾನತೆಯ ಸಮಾಜ ನಿಮರ್ಾಣವಾಗುತ್ತಿದೆ. ಇವೆಲ್ಲವನ್ನು ಗುರುತಿಸಿ ಪ್ರತಿಭಟಿಸ ಬೇಕಾಗಿದ್ದ ಜನಪರ ಚಳುವಳಿಗಳು ದಶಕಗಳ ಹಿಂದೆಯೇ ಮರಣಶಯ್ಯೆ ತಲುಪಿದ್ದು, ಅವುಗಳಿಂದ ಜನ ಯಾವ ನಿರೀಕ್ಷೆಯನ್ನು ಮಾದದ ಸ್ಥಿತಿ ತಲುಪಿದ್ದಾರೆ. ಮೇಲ್ವರ್ಗದ ಸಿರಿವಂತರು ತಮ್ಮ ಸುಖಲೋಲುಪ ಬದುಕಿನ ಕೋಟೆಯೊಳಗೆ ಬಂದಿತರಾಗಿದ್ದರೆ, ಕೆಳವರ್ಗದ ಬಡವರು ಅಸಹಾಯಕತೆಯ ಹತಾಶೆಯ ಸ್ಥಿತಿ ತಲುಪಿದ್ದಾರೆ. ಮದೈಮವರ್ಗದವರು ತಮ್ಮ ಮನೆಯಾಚೆಯ ಯಾವುದೂ ತಮಗೆ ಸಂಬಂದಿಸಿದ್ದಲ್ಲವೆಂದುಕೊಳ್ಳುತ್ತಾ ತಮ್ಮ ವೈಯುಕ್ತಿಕ ಬದುಕಿನ ಪರಿಧಿಯಾಚೆಯ ಎಲ್ಲವೂ ಅನ್ಯವೆಂದು ಬಾವಿಸುತ್ತ ಸಿನಿಕರಾಗುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಾಡಿನ ಎಲ್ಲ ಸಮಸ್ಯೆಗಳಿಗೂ ಕಾರಣ ರಾಜಕಾರಣವೆಂದು, ಮತ್ತು ಅವುಗಳಿಗಿರಬಹುದಾದ ಪರಿಹಾರಗಳು ರಾಜಕಾರಣದಿಂದಲೇ ಸಾದ್ಯವೆಂದು ಜನರನ್ನು ನಂಬಿಸಲಾಗುತ್ತಿದೆ. ಹೀಗಾಗಿ ಕಳೆದೊಂದು ದಶಕದಿಂದ ಬೇರೆಲ್ಲ ವಿಷಯಗಳೂ ನಗಣ್ಯವಾಗಿ ರಾಜಕಾರಣವೇ ಸರ್ವಸ್ವವಾಗಿಬಿಟ್ಟಿದೆ. ಕಳೆದ ಎರಡು ಮೂರು ಸಾರ್ವತ್ರಿಕ ಚುನಾವಣೆಗಳನ್ನು ಅವು ನಡೆದ ರೀತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನನ್ನ ಮಾತಿನ ಅರ್ಥ ಗೊತ್ತಾಗುತ್ತದೆ. ನಾಡಿನ ಬಹುಮುಖ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದವರ ಮೌನವೇ ನನನ್ನು ಈಸಾಹಸಕ್ಕೆ ಕೈ ಹಾಕುವಂತೆ ಮಾಡಿದೆ. ಇಂತಹ ಚರ್ಚೆ ಮಾಡಬೇಕಿದ್ದ ಆಯಾ ಕ್ಷೇತ್ರಗಳ ತಜ್ಞರುಗಳು ಸರಕಾರ ಕೊಡುವ ಅಂಕಿಅಂಶಗಳಿಗೆ ಜೋತುಬಿದ್ದು ಕಂದಾಯ ಇಲಾಖೆಯ ಗುಮಾಸ್ತರುಗಳಂತೆ ವರದಿ ಕೊಡುತ್ತಿದ್ದಾರೆ. ನಾನಿಲ್ಲಿ ತಮ್ಮ ಮುಂದೆ ಚರ್ಚಿಸಲಿರುವ ಬಹಳಷ್ಟು ವಿಷಯಗಳನ್ನು ಈ ನೆಲದ ಅರ್ಥ ಶಾಸ್ತ್ರಜ್ಞರುಗಳು,ಪರಿಸರ ತಜ್ಞರು, ಇತರೇ ಕ್ಷೇತ್ರಗಳ ತಜ್ಞರು ಚರ್ಚಿಸಿದ್ದರೆ ಅದಕ್ಕೊಂದು ತೂಕವಿರುತ್ತಿತ್ತೆಂದು ನಾನು ನಂಬಿದ್ದರೂ ಅಂತಹ ಯಾವ ಪ್ರಯತ್ನಗಳೂ ನನಗೆ ತಿಳಿದಂತೆ ನಡೆಯುತ್ತಿಲ್ಲವೆಂಬ ಕಾರಣಕ್ಕೆ ನಾನಿದನ್ನು ಮಾಡಲು ಮುಂದಾಗಿದ್ದೇನೆ. ಕಳೆದ ಮುವತ್ತು ವರ್ಷಗಳಿಂದಲೂ ಗ್ರಾಮೀಣ ಭಾರತದ ಒಂದು ಹಿಸ್ಸೆಯಾಗಿ ಬದುಕುತ್ತಿರುವ ನನ್ನಂತವಳು ಈ ವಿಷಯಗಳನ್ನು ಚರ್ಚಿಸಿದರೆ ತಪ್ಪಾಗಲಾರದೆಂದು ನಂಬಿದ್ದೇನೆ.

ಇಲ್ಲಿ ನಾನು ಚರ್ಚಿಸಿರುವ ವಿಷಯಗಳಿಗೆ ಒಂದಷ್ಟು ಪರಿಹಾರ ಕಾಣಿಸುವ ನಿಟ್ಟಿನಲ್ಲಿ ಯಾರಾದರು ಯೋಚಿಸುವಂತಾದರೆ ಈ ಬರಹದ ಸಾರ್ಥಕೆಯಿದೆಯೆಂದು ಬಾವಿಸಿರುವೆ.
1.ಅತಿವೃಷ್ಟಿ ಮತ್ತು ಅನಾವೃಷ್ಟಿ
ಕಳೆದೊಂದು ದಶಕದಿಂದ ಕರ್ನಾಟಕವನ್ನು ಅತಿವೃಷ್ಠಿ ಮತ್ತು ಅನಾವೃಷ್ಠಿಗಳು ಬಿಟ್ಟೂಬಿಡದಂತೆ ಕಾಡುತ್ತಿವೆ. ಒಂದು ವರ್ಷ ಬರಗಾಲ ಬಡಿದರೆ ಮತ್ತೊಂದು ವರ್ಷ ಅತಿವೃಷ್ಠಿ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಅವುಗಳನ್ನು ಎದುರಿಸಲು ಬೇಕಾದ ಗಂಭೀರ ಪ್ರಯತ್ನವನ್ನು ನಮ್ಮ ಯಾವುದೇ ಸರಕಾರಗಳೂ ಮಾಡುತ್ತಿಲ್ಲವೆಂಬುದು ವಿಷಾದದ ಸಂಗತಿ. ಎಂತಹ ಬೀಕರ ಬರಗಾಲವೂ ಸರಕಾರವನ್ನು ಬೆಚ್ಚಿಬೀಳಿಸದಷ್ಟು ನಮ್ಮ ಸರಕಾರಗಳು ಭಂಡತನ ಪ್ರದಶರ್ಿಸುತ್ತಿವೆ. ಜೊತೆಗೆ ಬರಗಾಲದಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುಷ್ಟತನ ತೋರಿಸುತ್ತಿವೆ.
ನಮಗೆ ಗೊತ್ತಿರುವಂತೆ ಬರಗಾಲಕ್ಕೆ ಕಾರಣ ಸರಿಯಾದ ಕಾಲದಲ್ಲಿ ಮಳೆ ಬಾರದೇ ಇರುವುದು ಅನ್ನುವುದು ನಿಜವಾದರು ಮಳೆ ಬಾರದೇ ಇರುವುದಕ್ಕೆ ಕಾರಣ ಮನುಷ್ಯ ಎಂದರೆ ತಪ್ಪಾಗಲಾರದು. ನಮ್ಮ ಬದಲಾದ ಜೀವನಶೈಲಿ,ನಾವು ಅಳವಡಿಸಿಕೊಂಡ ಅಭಿವೃದ್ದಿಯ ಪಥಗಳು ಬರಗಾಲವನ್ನು ಸೃಷ್ಠಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಇದೆ ತೆರನಾದ ನೀತಿಗಳನ್ನು ನಾವು ಅನುಸರಿಸುತ್ತ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ಮರುಭೂಮಿಯಗವುದರಲ್ಲಿ ಅನುಮಾನವಿಲ್ಲ. ಸ್ವಾತಂತ್ರ ಬಂದ ನಂತರದ ಸ್ವಯಂ ಆಡಳಿತದಲ್ಲಿ ನಾವು ವಿವಿದ ನೆಪಗಳಲ್ಲಿ ಕಾಡನ್ನು ಕಡಿಯುತ್ತಲೇ ಬರುತ್ತಿದ್ದೇವೆ ಮತ್ತು ಕ್ಷಾಮವನ್ನು ಬೆಳೆಯುತ್ತಲೇ ಬರುತ್ತಿದ್ದೇವೆ.
ಹಾಗಾಗಿ ನಾನು ಮೊದಲು ನಮ್ಮ ಅರಣ್ಯನಾಶದ ಬಗ್ಗೆ ಮಾತಾಡಲು ಬಯಸುತ್ತೇನೆ:
ನಮ್ಮ ಅರಣ್ಯಗಳು ನಾಶವಾದ ಪರಿ:
ಸ್ವಾತಂತ್ರಾ ನಂತರ ನಾವು ಮುಂದಿನ ಪೀಳಿಗೆಗೆ ಮಾಡಿದ ಮೊದಲ ಮಹಾದ್ರೋಹವೆಂದರೆ ಅವರಿಗೆ ಬೇಕಾದ ಹಸಿರಿನ ಹೊದಿಕೆಯನ್ನು ನಾಶ ಪಡಿಸುತ್ತ ಹೋದದ್ದು. ಸುಖದಿಂದ ಬದುಕುವ ಆಸೆಗೆ ಬಿದ್ದ ನಾವು ಭವಿಷ್ಯತ್ತಿನ ಬಗ್ಗೆ ಹಿಂದೆ ಮುಂದೆ ಯೋಚಿಸದೆ ನಮ್ಮ ನಿತ್ಯಹರಿದ್ವರ್ಣದ ಕಾಡುಗಳನ್ನು ಸತತವಾಗಿ ಕಡಿಯುತ್ತ ಹೋದೆವು. ಅದರ ಪರಿಣಾಮವಾಗಿ ಆದ ಕಾಡಿನ ನಾಶದ ಪ್ರಮಾಣವನ್ನು ತಿಳಿಯಬೇಕಾದರೆ ಕೆಲವು ಅಂಕಿಅಂಶಗಳ ನರವು ಬೇಕಾಗುತ್ತದೆ:
ನಮ್ಮ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ನಮ್ಮ ದೇಶದಾದ್ಯಂತ ಇರಬೇಕಾದ ಅರಣ್ಯದ ಪ್ರಮಾಣ 1/3(ಮೂರನೇ ಒಂದರಷ್ಟು) ಇರಬೇಕಾಗುತ್ತದೆ.  ಕರ್ನಾಟಕದಲ್ಲಿ 1950ರಲ್ಲಿ ಇದ್ದ ಅರಣ್ಯ ಸರಿಸುಮಾರು 28 ಸಾವಿರ ಚದರಕಿಲೋಮೀಟರ್. ಒಂದು ಅಂದಾಜಿನಂತೆ ಈಗಿರುವ ಅರಣ್ಯದ ಪ್ರಮಾಣ ಕೇವಲ 16 ಸಾವಿರ ಚ.ಕಿ.ಮೀ. ಮಾತ್ರ ಅಂದರೆ ವರ್ಷಕ್ಕೆ ಶೇಕಡಾ ಹದಿನೈದರಷ್ಟು ಅರಣ್ಯ ನಾಶವಾಗುತ್ತ ಬಂದಿದೆ.
ನಾನು ಮೇಲೆ ಹೇಳಿದ ಅರಣ್ಯದ ಪ್ರಮಾಣದಲ್ಲಿ ಕಳೆದೆರಡು ದಶಕಗಳಿಂದ ನಾವು ಬೆಳೆಯುತ್ತ ಬಂದಿರುವ ನೀಲಗಿರಿ ತೋಪುಗಳು ಸಹ ಸೇರಿವೆ. ಅಲ್ಲಿಗೆ ನಮ್ಮ ನಿಜವಾದ ಅರಣ್ಯದ ಪ್ರಮಾಣ ಕೇವಲ 12 ರಿಂದ 14 ಸಾವಿರ ಚ.ಕಿ.ಮೀ. ಇರಬಹುದೆನಿಸುತ್ತೆ. ಹಾಗಾದರೆ ಈ ಪ್ರಮಾಣದಲ್ಲಿ ನಾವು ಅರಣ್ಯ ನಾಶ ಮಾಡಿದ್ದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಸಿಗುವುದು. ನಾನು ಮೊದಲಿಗೆ ಹೇಳಿದ ನಮ್ಮ ಅಭಿವೃದ್ದಿಯ ಹಾದಿ!
ನಾವು ಸ್ವಾತಂತ್ರಾನಂತರ ಆರಿಸಿಕೊಂಡ ಅಭಿವೃದ್ದಿ ಮಾದರಿಯಲ್ಲಿ ಇದ್ದ ಸಂಗತಿಗಳೆಂದರೆ-
1. ಬೃಹತ್ ಕೈಗಾರಿಗೆಗಳು
2. ದೈತ್ಯಾಕಾರಿ ಅಣೆಕಟ್ಟುಗಳು
3. ಅರಣ್ಯಾಧಾರಿತ ಕೈಗಾರಿಕೆಗಳು.
ಸ್ವಾತಂತ್ರ ಸಿಕ್ಕ ಹುಮ್ಮಸ್ಸಿನಲ್ಲಿದ್ದ ನಾವು ಪಶ್ಚಿಮದ ಉದಾಹರಣೆಯೊಂದಿಗೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಒತ್ತು ಕೊಡುತ್ತ ಹೋದೆವು. ಇದರ ಪರಿಣಾಮವಾಗಿ ಕೈಗಾರಿಕೆಗಳಿಗೆ ಬೇಕಾದ ಅಗತ್ಯಗಳಿಗೆ ತಕ್ಕಂತೆ ಕಾಡುಕಡಿಯಲು ಪ್ರಾರಂಭಿಸಿದೆವು. ಅದು ಇವತ್ತಿನವರೆಗೂ ನಿರಂತರವಾಗಿ ನಡೆಯುತ್ತ ಬಂದಿದೆ. ಜೊತೆಗೆ ಕೃಷಿಗೆ ಬೇಕಾದ ನೀರಾವರಿಯನ್ನು ಅಳವಡಿಸಿಕೊಳ್ಳಲು ಮತ್ತು ನಾವೇ ಸ್ಥಾಪಿಸಿದ ಕೈಗಾರಿಕೆಗಳಿಗೆ ಬೇಕಾದ ವಿದ್ಯುತ್ ಉತ್ಪಾದಿಸಲು ದೈತ್ಯಾಕಾರಿ ಅಣೆಕಟ್ಟುಗಳನ್ನು ನಿರ್ಮಿಸಿದೆವು.ಮೊದಲು ಅಣೆಗಳನ್ನು ನಿರ್ಮಿಸಲು ಬೇಕಾದ ಕಾಡನ್ನು ಕಡಿದರೆ ನಂತರದಲ್ಲಿ ಅದರಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಇನ್ನೊಂದಿಷ್ಟು ಕಾಡು ಕಡಿದೆವು. ಇಷ್ಟೇ ಅಲ್ಲದೆ ಬೇಕಾದ ಪ್ರಮಾಣದಲ್ಲಿ ಕಾಡುಕಡಿಯದೆ ಪಟ್ಟಭದ್ರ ಹಿತಾಸಕ್ತಿಗಳ ಅಪ್ರಾಮಾಣಿಕ ಬೇಡಿಕೆ ಈಡೇರಿಸಲೆಂದು ಅನಗತ್ಯವಾಗಿ ಹೆಚ್ಚು ಹೆಚ್ಚು ಕಾಡನ್ನು ಕಡಿಯಲಾಯಿತು. ಹೋಗಲಿ ಕಡಿದ ಕಾಡಿಗೆ ಬದಲಿ ಕಾಡು ಬೆಳೆಸುವ ಯಾವುದೇ ಯೋಜನೆಯನ್ನು ಹಾಕಿಕೊಳ್ಳದೆ ರಾಜ್ಯದ ಅರ್ದ ಮಲೆನಾಡನ್ನು ಬಯಲು ಸೀಮೆಯನ್ನಾಗಿ ಮಾಡಿದೆವು.
ನಂತರದ ಸರದಿ ನಮ್ಮ ಅರಣ್ಯಾಧಾರಿತ ಕೈಗಾರಿಕೆಗಳದ್ದು. ಅಭಿವೃದ್ದಿಯ ವೇಗಕ್ಕೆ ಮಾರುಹೋದ ನಾವು ದಟ್ಟ ಅರಣ್ಯಗಳ ಅಕ್ಕಪಕ್ಕದಲ್ಲಿಯೇ ಕಾಡಿನ ಉತ್ಪನ್ನಗಳಿಂದ ನಡೆಯುವ ವಿವಿಧ ರೀತಿಯ ಕೈಗಾರಿಕೆಗಳನ್ನು ಬೇಕಾ ಬಿಟ್ಟಿಯಾಗಿ ಸ್ಥಾಪಿಸಿದೆವು. ಅದರಲ್ಲಿ ಪ್ರಮುಖವಾದವುಗಳೆಂದರೆ: ಕಾಗದದ ಕಾರ್ಖಾನೆಗಳು, ಪ್ಲೈವುಡ್ ಕಾರ್ಖಾನೆಗಳು, ಬೆಂಕಿಪೊಟ್ಟಣದ ಕೈಗಾರಿಕೆಗಳು, ಟಿಂಬರ್ ಕೈಗಾರಿಕೆಗಳು ಇತ್ಯಾದಿ. ಈ ಕೈಗಾರಿಕೆಗಳು ಸರಕಾರಕ್ಕೆ ತಂದು ಕೊಡುವ ಲಾಭದ ನೂರರಷ್ಟು ನಷ್ಟವನ್ನು ನಮಗೆ ಉಂಟುಮಾಡುತ್ತಿವೆ, ಇದರ ಜೊತೆಗೆ ತಾಂತ್ರಿಕತೆ ಬೆಳೆದಂತೆ ಸಿಂಥೆಟಿಕ್ ಬಟ್ಟೆಗಾಗಿ ಸರಕಾರವೇ ಫಲವತ್ತಾದ ಭೂಮಿಯಲ್ಲಿ ನೀಲಗಿರಿ, ಅಕೇಶಿಯಾ ತೋಪುಗಳನ್ನು ಬೆಳೆಯಲು ಪ್ರಾರಂಭಿಸಿತ್ತು. ಅದಕ್ಕಾಗಿ ಬಯಲು ಸೀಮೆಯಲಿದ್ದ ಅಲ್ಪಸ್ವಲ್ಪ ಕುರುಚಲು ಕಾಡುಗಳನ್ನೂ ನಾಶ ಮಾಡಲಾಯಿತು.ಒಂದಷ್ಟು ಆಸೆಬುರುಕರ ಲಾಭಕ್ಕಾಗಿ ನಮ್ಮ ನಿತ್ಯ ಹರಿದ್ರ್ಣದ ಕಾಡುಗಳನ್ನು ನಾಶ ಮಾಡಿದ ನಾವಿವತ್ತು ಬರದ ಬೀಕರತೆಯಲ್ಲಿ ನರಳುತ್ತಿದ್ದೇವೆ.
ಕಡಿದ ಕಾಡಿಗೆ ಪರ್ಯಾಯವಾಗಿ ಅದರ ಅರ್ದದಷ್ಟನ್ನಾದರು ನಾವು ಹೊಸಕಾಡುಗಳನ್ನು ಬೆಳೆಸಿದ್ದರೆ ನಮಗಿವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜೊತೆಗೆ ಬದಲಾದ ನಮ್ಮ ಕೃಷಿಪದ್ದತಿಯೂ ಸಹ ನಮ್ಮ ಸಾಮಾಜಿಕ ಕಾಡುಗಳನ್ನು ನಾಶ ಮಾಡಿದೆ. ಹಿಂದೆಲ್ಲ ದೊಡ್ಡ ಹಿಡುವಳಿದಾರರು ತಮ್ಮ ನೆಲದ ಸುತ್ತಲೂ ಹೊಂಗೆ ತೇಗ ಮುಂತಾದ ಮರಗಳನ್ನು ಹಾಕುತ್ತಿದ್ದರು. ಆದರಿವತ್ತು ಸಣ್ಣದಾಗುತ್ತ ಹೋಗುತ್ತಿರುವ ಹಿಡುವಳಿಗಳು, ಬದಲಾದ ಬೆಳೆಗಳು ಅದಕ್ಕೆ ಆಸ್ಪದ ನೀಡುತ್ತಿಲ್ಲ. ನೈಸರ್ಗಿಕವಾದ ಅರಣ್ಯ ನಾಶವಾದ ಮೇಲೆ ಉಳಿದಿರುವ ಭೂಮಿಯಲ್ಲಿ ಯಾವ ಫಲವತ್ತತೆಯೂ ಉಳಿದಿಲ್ಲ. ನೆಲದಾಳದೊಳಗಿನ ಜಲವೂ ಬತ್ತಿ ಹೋಗಿದೆ. ಮಾಯವಾದ ಕಾಡುಗಳ ಬಯಲಲ್ಲಿ ಕೂತು ಕನಸಿದರೆ ಮಳೆಯಾದರೂ ಹೇಗೆ ಬಂದೀತು?
ಹೀಗಾಗಿ ಇವತ್ತು ನಮ್ಮ ಅಭಿವೃದ್ದಿಯ ಪಥವನ್ನು ಬದಲಾಯಿಸಿಕೊಳ್ಳಲೆ ಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದಲಿ ಮುಂದಿನ ಪೀಳಗೆಗೆ ನಾವು ಅಪರಾಧಿಗಳಾಗಿಬಿಡುತ್ತೇವೆ.
ಇನ್ನು ಮತ್ತೆ ಬರಗಾಲದ ಬಗ್ಗೆ ಮಾತಾಡುವುದಾದರೆ ಒಂದು ಬರವನ್ನು ಎದುರಿಸಲು ನಾವು ಮಾಡಿಕೊಳ್ಳಬೇಕಾದ ಪೂರ್ವಸಿದ್ದತೆಯ ಬಗ್ಗೆ ನಮ್ಮ ವೃತ್ತಿಪರ ರಾಜಕಾರಣಿಗಳಿಗಾಗಲಿ ಅಥವಾ ಹೃದಯಹೀನ ಅಧಿಕಾರವರ್ಗಕ್ಕಾಗಲಿ ಯಾವುದೇ ಅರಿವಿರುವಂತೆ ಕಾಣುತ್ತಿಲ್ಲ. ಪ್ರತಿಬಾರಿ ಬರಗಾಲ ಬಂದಾಗಲೂ ಒಂದಷ್ಟು ತಾಲ್ಲೂಕುಗಳನ್ನು ಬರಪೀಡಿತವಂದು ಘೋಷಿಸಿ ಬೆರಳೆಣಿಕೆಯ ಗಂಜಿಕೇಂದ್ರಗಳನ್ನು-ಗೋಶಾಲೆಗಳನ್ನು ಶುರುಮಾಡುವುದರ ಹೊರತಾಗಿ ಬೇರಿನ್ನಾವ ರೀತಿಯ ಮಾರ್ಗೋಪಾಯಗಳು ನಮ್ಮ ಸರಕಾರಗಳ ಮುಂದಿರುವಂತೆ ಕಾಣುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ ಈ ವರ್ಷದ ಬರದ ಬಗ್ಗೆ ವಿದಾನಸಭೆಯಲ್ಲಿ ಮಾತಾಡಿದ ಕಂದಾಯ ಸಚಿವರಾದ ಶ್ರೀನಿವಾಸ ಪ್ರಸಾದ್ ಅವರು 125 ತಾಲ್ಲೂಕುಗಳನ್ನುಬರಪೀಡಿತವೆಂದು ಘೋಷಿಸಿ, 400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ ಈಗಾಗಲೆ 26 ಗೋಶಾಲೆಗಳನ್ನು ಪ್ರಾರಂಭಿಸಿಲಾಗಿದೆಯೆಂದೂ,ಕೇಂದ್ರದಿಂದ 2000ಕೋಟಿ ರೂಪಾಯಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಇದೀಗ ನಿಮಗೆ ಅರ್ಥವಾಗಿರಬಹುದು ಅಂದುಕೊಳ್ಳುತ್ತೇನೆ. 125 ತಾಲ್ಲೂಕುಗಳಿಗೆ 400 ಕೋಟಿ ರೂಪಾಯಿ ಹಣ ಯಾವ ಮೂಲೆಗೆ ಆಗಬಹುದು?
ಹೆಚ್ಚೆಂದರೆ ಈ 400 ಕೋಟಿ ರೂಪಾಯಿ ಹಣದಿಂದ ಆ ತಾಲ್ಲೂಕುಗಳ ಹಳೆಯ ಶಾಲೆಗಳ ಅಂಗನವಾಡಿಗಳ ದುರಸ್ತಿ ಮಾಡಿಸಲು ಬಳಸಬಹುದಷ್ಟೆ! ಕುಡಿಯುವ ನೀರಿಗಾಗಿ ಇವರು ಯಾವದೇ ರೀತಿಯ ಪ್ರತ್ಯೇಕ ಯೋಜನೆಗಳನ್ನೂ ರೂಪಿಸಿದಂತೆ ಕಾಣುತ್ತಿಲ್ಲ. ಬದಲಿಗೆ ಈ ಬಾರಿ ಬರ ಎದುರಾಗಬಹುದೆಂಬ ಸೂಚನೆ ಆರು ತಿಂಗಳ ಮುಂಚೆಯೇ ತಿಳಿದಿದ್ದರು, ಅದನ್ನು ಎದುರಿಸುವ ಯಾವ ತಯಾರಿಯನ್ನು ನಮ್ಮ ಸರಕಾರಗಳು ಮಾಡಿಕೊಂಡಿರಲಿಲ್ಲ. ಇದು ಎಲ್ಲ ಸರಕಾರಗಳ ಹಣೆಬರಹವಾಗಿದೆ. ಪ್ರಗತಿಪರವಾಗಿ ಯೋಚಿಸಿ, ಇಚ್ಛಾ ಶಕ್ತಿಯನ್ನು ತೋರಿಸುವ ಯಾವ ಸರಕಾರಗಳು ಹೀಗೆ ಆರಾಮಾಗಿರಲು ಸಾದ್ಯವಿಲ್ಲ. ಸರಕಾರಗಳಿಗೆ ಬರಪರಿಸ್ಥಿತಿಯನ್ನು ಎದುರಿಸುವ ಮನಸ್ಸು ಇದ್ದಿದ್ದೇ ಆದರೆ ಅದು ತನ್ನ ಅಧಿಕಾರಿಗಳನ್ನು ಮಾತ್ರ ನಂಬದೆ ಕರ್ನಾಟಕದ ಬಗ್ಗೆ ಗಂಬೀರವಾಗಿ ಯೋಚಿಸುವ ತಜ್ಞರ ಅಭಿಪ್ರಾಯಗಳನ್ನು ಪಡೆೆದು ಬರ ಎದುರಿಸುವ ತಯಾರಿ ಮಾಡುತ್ತಿತ್ತು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿರುವ ನಮ್ಮ ನಾಯಕರುಗಳಿಗೆ ಬರ ಸಹ ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಇರುವ ಒಂದು ಸ್ಥಿತಿಯಾಗಿದೆ. ಇನ್ನಾದರು ನಮ್ಮ ಸರಕಾರಗಳು ಮುಂದಿನ ಹತ್ತು ವರ್ಷಗಳನ್ನು ಗುರಿಯಾಗಿಸಿಟ್ಟುಕೊಂಡು ಬರಪೀಡಿತ ತಾಲ್ಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಟಾನಕ್ಕೆ ತರಬೇಕಾಗಿದೆ ಮತ್ತು ವಾಷರ್ಿಕ ಆಯವ್ಯಯದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಅತಿವೃಷ್ಠಿ ಅನಾವೃಷ್ಠಿಗಳಂತ ಪ್ರಕೃತಿ ವಿಕೋಪಗಳಿಗಾಗಿ ಮೀಸಲಿಡಬೇಕಾಗಿದೆ. ಇದಕ್ಕೆ ಬೇಕಾಗಿರುವುದ ರಾಜಕೀಯ ಸಂಕಲ್ಪಶಕ್ತಿ ಮತ್ತು ಸ್ಪಂದಿಸಬಲ್ಲ ನೌಕರಶಾಹಿ. ಇಲ್ಲದಿದ್ದಲ್ಲಿ ಮುಂದಾಲೋಚನೆಯಿರದ ನಾಯಕತ್ವ ಮತ್ತು ಬದ್ದತೆಯಿರದ ನೌಕರಶಾಹಿ ಮಾಡುವ ಅನಾಹುತಗಳನ್ನು ನಾವೀಗಾಗಲೆ ಕಂಡಿದ್ದು ,ಮುಂದೆಯೂ ಅದು ಪುನರಾವರ್ತನೆಯಾಗ ಬಹುದಾಗಿದೆ.

2. ಪ್ರಾಥಮಿಕ ಶಿಕ್ಷಣವೆಂಬ ಬಡಕೂಸು!


ಮೊನ್ನೆ ಕೆಂದ್ರ ಸರಕಾರ ಆಯವ್ಯಯ ಮಂಡಿಸಿದಾಗ ನಮ್ಮ ರಾಜಕಾರಣಿಗಳು ಬಹಳ ಕೊರಗಿದ್ದು ಕನರ್ಾಟಕಕ್ಕೊಂದು ಐ.ಐ.ಟಿ. ಮಂಜೂರು ಮಾಡಲಿಲ್ಲವೆಂದು. ನಮ್ಮ ಸರಕಾರಗಳ ಯೋಗ್ಯತೆಗೆ ಪ್ರಾಥಮಿಕ ಶಿಕ್ಷಣವನ್ನೇ ಸರಿಯಾಗಿ ನಡೆಸಲು ಆಗುತ್ತಿಲ್ಲ, ಇಂತಹುದರಲ್ಲಿ ಇವರುಗಳು ಯಾವ ಮುಖ ಇಟ್ಟುಕೊಂಡು ಅಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೇಳುತ್ತಾರೆಯೊ ನನಗರ್ಥವಾಗುತ್ತಿಲ್ಲ. ಇವತ್ತು ವಿದ್ಯಾಥಿಗಳಿಲ್ಲದೆ ಸರಕಾರದ ಕನ್ನಡ ಶಾಲೆಗಳನ್ನು ಮುಚ್ಚಬೆಕಾದ ಪರಿಸ್ಥಿತಿ ಬಂದೊದಗಿದ್ದರೆ ಅದಕ್ಕೆ ನೇರ ಕಾರಣ ನಮ್ಮ ಸರಕಾರಗಳೇ!. ಇವತ್ತು ನಮ್ಮಲ್ಲಿ ಪ್ರಾಥಮಿಕ ಶಿಕ್ಷಣವೆಂಬ ಇಲಾಖೆ ಯಾರಿಗೂ ಬೇಡವಾದ ಇಲಾಖೆಯಾಗಿದೆ. ಆರೋಗ್ಯವಂತ ಸಮಾಜವೊಂದು ನಿಮರ್ಾಣವಾಗಬೇಕಾದಲ್ಲಿ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣದ ಅಗತ್ಯವಿದೆಯೆಂಬುದು ನಮ್ಮನ್ನಾಳುವವರಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಆದರೆ ಹಾಲು ಕರೆಯಬಲ್ಲ ಹಸುವಿನಂತ ಉನ್ನತ ಶಿಕ್ಷಣಸಂಸ್ಥೆಗಳೆ ಅವರಿಗೆ ಮುಖ್ಯವಾಗಿ ಬಿಟ್ಟಿವೆ. ಯಾಕೆಂದರೆ ಇವತ್ತು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಅದಿಕಾರಸ್ಥರಿಗೆ ದೊರೆಯುವ ಲಾಭ ಅಪಾರವಾದುದು. ಸರಕಾರಿ ಲೆಕ್ಕದಲ್ಲಿ ಒಂದಷ್ಟು ಸೀಟುಗಳನ್ನು ಕೊಟ್ಟಂತೆ ಮಾಡಿ ಉಳಿದ ಸೀಟುಗಳನ್ನು ಮಾರಿಕೊಂಡರೆ ಕೋಟಿಗಟ್ಟಲೆ ದುಡ್ಡು ಎಣಿಸಬಹುದಗಿದೆ. ಹಾಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಭೂಮಿ ಇನ್ನಿತರೇ ಮೂಲಭೂತ ಸೌಕರ್ಯಗಳನ್ನು ತಕ್ಷಣ ಒದಗಿಸುವ ಸರಕಾರಗಳು ತನ್ನದೇ ಹಿಡಿತದಲ್ಲಿರುವ ಪ್ರಾಥಮಿಕ ಶಿಕ್ಷಣದ ವಿಷಯಕ್ಕೆ ಬಂದರೆ ಮಾತ್ರ ಇನ್ನಿಲ್ಲದ ನಿರ್ಲಕ್ಷ್ಯ ತೋರುತ್ತದೆ. ಒಳ್ಳೆಯ ಕಟ್ಟಡಗಳು, ಆಟದ ಮೈದಾನ, ಗುಣಮಟ್ಟದ ಶಿಕ್ಷಕರುಗಳಿರದ ಸರಕಾರಿ ಶಾಲೆಗಳು ಪೋಷಕರನ್ನು ಆಕಷರ್ಿಸದೆ ಅವರುಗಳು ಖಾಸಗಿ ಶಾಲೆಗಳ ಕಡೆ ಮುಖ ಮಾಡುವಂತೆ ಮಾಡುತ್ತಿವೆ.ನಿಜಕ್ಕೂನನಗೆ ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳ ಕಟ್ಟಡಗಳನ್ನು ಮತ್ತು ಸರಕಾರಿ ಶಾಲೆಗಳ ಕಟ್ಟಡಗಳನ್ನೂ ನೋಡಿದಾಗ ಅವುಗಳ ಗುಣಮಟ್ಟದಲ್ಲರುವ ಅಂತರ ಕಂಡು ವಿಷಾದವಾಗುತ್ತದೆ. ಭ್ರಷ್ಟತೆಯನ್ನು ಪ್ರೋತ್ಸಾಹಿಸುವ ಮತ್ತು ಹೆಚ್ಚಿಸುವ ಛಾತಿಯುಳ್ಳ ಖಾಸಗಿ ಶಿಕ್ಷಣ ಮಾಫಿಯಾ ಒಂದಕ್ಕೆ ಬಲಿಯಾದ ಸರಕಾರಗಳು ಪ್ರಾಥಮಿಕ ಶಿಕ್ಷಣಕ್ಕೆ ಅಪಾರ ಅನ್ಯಾಯ ಮಾಡುತ್ತಿವೆ.
ಕನ್ನಡ ಶಾಲೆಗಳನ್ನು ಬಲಿಕೊಟ್ಟು ಖಾಸಗಿ ಶಾಲೆಗಳಲ್ಲಿನ ಇಂಗ್ಲೀಷ್ ಕಲಿಕೆಗೂ ಸರಕಾರಗಳೇ ಪರೋಕ್ಷವಾಗಿ ಸಹಕರಿಸುವುದು ಕಂಡು ಬರುತ್ತಿದೆ. ಆಳುವ ಜನಕ್ಕೆ ಜನತೆಯ ಬಗ್ಗೆ ನೈಜ ಕಾಳಜಿ ಇಲ್ಲದೇ ಹೋದಾಗ ಆ ರಾಜ್ಯದ ಪ್ರಾಥಮಿಕ ಶಿಕ್ಷಣ ಮಟ್ಟ ಕುಸಿಯುತ್ತ ಹೋಗುತ್ತದೆ. ಕನರ್ಾಟಕದಲ್ಲಿ ನಾವಿವತ್ತು ಇಂತಹದೇ ಚಿತ್ರವನ್ನು ಕಾಣುತ್ತಿದ್ದೇವೆ.
ಇದಕ್ಕೆ ಪೂರಕವಾಗಿ ಸರಕಾರವೇ ನೀಡಿರುವ ಕೆಲ ಅಂಕಿಅಂಶಗಳನ್ನು ನೋಡಿ: ಇಂಡಿಯಾದಲ್ಲಿರುವ ಒಟ್ಟು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ 25ರಷ್ಟು ಕಾಲೇಜುಗಳು ಕನರ್ಾಟಕ ಒಂದರಲ್ಲಿಯೇ ಇವೆ. ದೇಶದ ಒಟ್ಟು ಇಂಜಿನಿಯರಿಂಗ್ ಪಧವೀದರರಲ್ಲಿ ಶೇಕಡಾ 50ರಷ್ಟುಜನ ನಮ್ಮ ರಾಜ್ಯದವರೇ ಆಗಿದ್ದಾರೆ. ಇಂಡಿಯಾದ ಮಟ್ಟಿಗೆ ಕರ್ನಾಟಕ ಇಂಜಿನಿಯರ್ ಗಳನ್ನು ಉತ್ಪಾದಿಸುವ ಕಾರ್ಖಾನೆಯಾಗಿದೆ,ನಿಜ. ಆದರೆ ಇದಾಗಿರುವುದು ನಮ್ಮ ಪ್ರಾಥಮಿಕ ಶಿಕ್ಷಣವನ್ನು ಬಲಿಪಶು ಮಾಡಿ ಅನ್ನುವುದನ್ನು ಮರೆಯಬಾರದು.
3. ಕಣ್ಮರೆಯಾಗುತ್ತಿರುವ ಕೃಷಿ-ನಾಶಗೊಳ್ಳುತ್ತಿರುವ ಹಳ್ಳಿಗಳು
ಇವತ್ತು ಯಾರಾದರು ರೈತ ಈ ದೇಶದ ಬೆನ್ನೆಲುಬು ಎಂಬ ಮಾತಾಡಿದರೆ ಅದಕ್ಕಿಂತ ಹಾಸ್ಯಾಸ್ಪದ ಮಾತು ಇನ್ನೊಂದಿಲ್ಲವೆನಿಸುತ್ತೆ. ನಮ್ಮ ರಾಜಕಾರಣಿಗಳು ಸಿಕ್ಕ ವೇದಿಕೆಗಳಲ್ಲೆಲ್ಲ ಈ ಮಾತುಗಳನ್ನಾಡಿ ಅದಕ್ಕೆ ಬೆಲೆಯಿಲ್ಲದಂತೆ ಮಾಡಿದ್ದಾರೆ.
ಇವತ್ತು ಕೃಷಿಗೆ ಇಂತಹ ದುಸ್ಥಿತಿ ಬಂದಿದ್ದರೆ ಅದಕ್ಕೆ ನೇರ ಹೊಣೆ ಸ್ವಾತಂತ್ರ ಬಂದಾಗಿನಿಂದಲು ನಮ್ಮ ಸರಕಾರಗಳು ಪಾಲಿಸಿಕೊಂಡುಬಂದ ಇಬ್ಬಗೆಯ ಆಥರ್ಿಕ ನೀತಿಗಳೇ ಕಾರಣ. ಪಶ್ವಿಮವನ್ನು ಮಾದರಿಯಾಗಿಟ್ಟುಕೊಂಡು ತಮ್ಮ ನೀತಿಗಳನ್ನು ರೂಪಿಸಿಕೊಂಡ ಸರಕಾರಗಳು ಅಗತ್ಯಕ್ಕಿಂತ ಹೆಚ್ಚಾಗಿ ಬೃಹತ್ ಕೈಗಾರಿಕೆಗಳಿಗೆ ಆಧ್ಯತೆ ನೀಡುತ್ತಾ ಹೋದವು. ಎಲ್ಲ ಕ್ಷೇತ್ರಗಳಿಗೂ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಸವಲತ್ತುಗಳು ಕೇವಲ ಕೈಗಾರಿಕೆಗಳ ಪಾಲಾಗಿ ಕೃಷಿಯೆನ್ನುವುದು ಅನಾಥವಾಯಿತು. ಅದರಲ್ಲೂ ತೊಂಭತ್ತರ ದಶಕದಲ್ಲಿ ಜಾರಿಗೆ ಬಂದ ಮುಕ್ತ ಆಥರ್ಿಕ ನೀತಿ ಬಸವಳಿದಿದ್ದ ನಮ್ಮ ಕೃಷಿಗೆ ಇನ್ನಷ್ಟು ಪೆಟ್ಟು ನೀಡಿತ್ತು. ಖಾಸಗಿ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುವ ಭರದಲ್ಲಿ ಕೃಷಿಗೆ ಬೀಳಬಹುದಾದ ಹೊಡೆತಗಳ ಬಗ್ಗೆ ಯಾರೂ ಯೋಚಿಸಲಿಲ್ಲ. ಜನಸಂಖ್ಯೆ ಹೆಚ್ಚಾದಂತೆ ಕೃಷಿಭೂಮಿಯೇನು ಹೆಚ್ಚಾಗುವುದಿಲ್ಲ,ಹೀಗಿರುವಾಗ ಬೇರೆ ಕಡೆಯಿಂದ ಬಂದು ಇಲ್ಲಿ ಬಂಡವಾಳ ಹೂಡುವವರಿಗಾಗಿ ಭೂಮಿ ನೀಡುವಾಗ ಉತ್ತಮ ಕೃಷಿ ಭೂಮಿಯನ್ನು ಬಂಜರೆಂದು ದಾಖಲೆ ಸೃಷ್ಠಿಸಿ ಖಾಸಗಿಯವರಿಗೆ ನೀಡುವ ಪರಿಪಾಠ ಶುರುವಾಯಿತು. ಜೊತೆಗೆ ಹೊಸ ಆಥರ್ಿಕ ನೀತಿಗನುಗುಣವಾಗಿ ಸಬ್ಸಿಡಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಇದರಿಂದಾಗಿ ರೈತನಿಗೆ ಅಗತ್ಯವಾದ ಬೀಜ ಗೊಬ್ಬರ ಇತ್ಯಾದಿ ವಸ್ತುಗಳ ಬೆಲೆ ಗಗನಕ್ಕೇರತೊಡಗಿತು. ಕ್ರಮೇಣ ಕೃಷಿಚಟುವಟಿಕೆ ದುಬಾರಿಯಾಗ ತೊಡಗಿತು. ಮೊದಲೇ ನಮ್ಮಲ್ಲಿ ಎಲ್ಲ ಕೃಷಿಭೂಮಿಗೆ ನೀರಾವರಿಯ ಸೌಲಭ್ಯವಿಲ್ಲ. ಮಳೆಯನ್ನು ನಂಬಿಕೊಂಡು ಮಾಡುವ ಕೃಷಿಗೆ ನೂರೆಂಟು ವಿಘ್ನಗಳು. ಹಾಗಾಗಿ ಬೆಳೆದ ಬೆಳೆ ಕೊಯಿಲಿಗೆ ಬರುವಷ್ಟರಲ್ಲಿ ರೈತನ ಸಾಲ ದುಪ್ಪಟ್ಟಾಗತೊಡಗುತ್ತದೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತನಿಗೆ ಬೇಕಾದ ಸಾಲ ನಿಗದಿತ ಅವದಿಯಲ್ಲಿ ದೊರೆಯದೆ ಹೋಗುವುದರ ಕಾರಣ ಆತ ಖಾಸಗಿ ಫೈನಾನ್ಸ್ಗಳಲ್ಲಿ ಸ್ಥಳೀಯ ಬಡ್ಡಿ ವ್ಯಾಪಾರಿಗಳಲ್ಲಿ ಸಾಲ ಮಾಡುವುದು ಅನಿವಾರ್ಯವಾಗುತ್ತಿದೆ. ಇಂತಹ ಸಾಲಗಳ ಬಡ್ಡಿಯೇ ಅಸಲಿಗಿಂತ ಹೆಚ್ಚಾಗುವುದರಿಂದ ಅದನ್ನು ತೀರಿಸಲು ಆತ ಪರದಾಡಬೇಕಾಗುತ್ತದೆ.
ಬೆಳೆ ಕೊಯ್ಲಿಗೆ ಬಂದಾಗ ಅದನ್ನು ಕಟಾವು ಮಾಡಿ ಮರುಕಟ್ಟೆಗೆ ಸಾಗಿಸುವ ಹೊತ್ತಿಗೆ ಹೈರಾಣಾಗುವ ರೈತನಿಗೆ ಅಲ್ಲಿಯೂ ನಿರಾಸೆ ಕಾಯುತ್ತಿರುತ್ತದೆ. ಆತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವುದಿಲ್ಲ. ತಾನು ಬೆಳೆದ ಬೆಳೆಗೆ ಬೆಲೆ ನಿಗದಿ ಪಡಿಸಿಕೊಳ್ಳುವ ಶಕ್ತಿಯಾಗಲಿ, ಅಧಿಕಾರವಾಗಲಿ ಇರದ ರೈತ ಮದ್ಯವರ್ತಿಗಳು ನಿಗದಿ ಮಾಡುವ ಕನಿಷ್ಠ ಬೆಲೆಗೆ ತನ್ನ ಬೆಳೆ ಮಾರುವ ಅನಿವಾರ್ಯತೆಗೆ ಸಿಲುಕುತ್ತಾನೆ. ಇಂತಹ ಸನ್ನಿವೇಶದಲ್ಲಿ ರೈತ ತಾನು ಮಾಡಿದ ಸಾಲದ ಬಡ್ಡಿಯನ್ನೂ ತೀರಿಸಲಾರದೆ ಆತ್ಯಹತ್ಯೆಯತ್ತ ಮುಖ ಮಾಡುತ್ತಿದ್ದಾನೆ.
ಇದನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸಿ ರೈತನ ನೆರವಿಗೆ ಬರಬೇಕಾದ ಸರಕಾರಗಳು ಕೈಗಾರಿಕೆಗಳಿಗೆ ಮಾತ್ರ ತಮ್ಮ ಗಮನ ಕೇಂದ್ರೀಕರಿಸಿ ಕೃಷಿಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾವೆ. ಕೈಗಾರಿಕಾ ನೀತಿಯನ್ನು ರೂಪಿಸಿ ಉದ್ಯಮಿಗಳಿಗೆ ನೆರವಾಗುವ ಸರಕಾರಗಳು ಕೃಷಿಗೆ ಮಾತ್ರ ಯಾವುದೇ ನೀತಿಯನ್ನೂ ರೂಪಿಸದೆ ಅದನ್ನು ಒಂದು ಅಸಂಘಟಿತ ಕ್ಷೇತ್ರವನ್ನಾಗಿ ಮಾಡಿಟ್ಟಿದ್ದಾವೆ. ಯಾವುದೇ ಸರಕಾರಗಳಿಗೆ ರೈತರ ಬಗ್ಗೆ ಸ್ವಲ್ಪವಾದರು ಕಾಳಜಿಯಿದ್ದಿದ್ದೇ ಆದರೆ ಅವು ಕೃಷಿನೀತಿಯೊಂದನ್ನು ರೂಪಿಸುವ ದಿಸೆಯಲ್ಲಿ ಕೆಲಸ ಮಾಡ ಬೇಕಿದೆ. ಮನಸ್ಸು ಮಾಡಿದರೆ ಅಂತಹ ಒಂದು ನೀತಿ ರೂಪಿಸಿ ಕೃಷಿಯನ್ನು ಕೃಷಿಕರನ್ನು ರಕ್ಷಿಸುವುದು ದೊಡ್ಡ ವಿಷಯವೇನಲ್ಲ.
ದುರಂತವೆಂದರೆ ಇಂತಹ ಕೆಲಸ ಮಾಡಬೇಕಾದ ಸರಕಾಗಳು ಖಾಸಗಿಯವರ ಮರ್ಜಿಗನುಗುಣವಾಗಿ ತಮ್ಮ ನೀತಿ ರೂಪಿಸುತ್ತಿವೆ. ಜಾಗತೀಕರಣದ ಭೂತವನ್ನು ಆವಾಹಿಸಿಕೊಂಡಿರುವ ಕೇಂದ್ರ ಮತ್ತು ರಾಜ್ಯಸರಕಾರಗಳಿಗೆ ಕೃಷಿಯ ಬಗ್ಗೆ ಯಾವುದೇ ಕಾಳಜಿಇರುವಂತೆ ಕಾಣಿಸುತ್ತಿಲ್ಲ. ಕೈಗಾರಿಕರಣದಿಂದ ಮಾತ್ರ ನಮ್ಮ ಜಿ.ಡಿ.ಪಿ.ಹೆಚ್ಚಳ ಸಾದ್ಯವೆಂದು ಬಾವಿಸಿರುವ ಸರಕಾರಗಳು ಆ ದಿಸೆಯಲ್ಲಿ ಕೆಲಸ ಮಾಡುತ್ತಿವೆ.
ಸಮಕಾಲೀನ ಕರ್ನಾಟಕ ಎದುರಿಸುತ್ತಿರುವ ಈ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಳುವವರು ಮಾತ್ರವಲ್ಲದೆ ಸಮುದಾಯವೂ ಪ್ರಯತ್ನಿಸಬೇಕಾಗಿದೆ. ಆದರೆಸರಕಾರವೊಂದು ಸದಾ ಜನಪರವಾಗಿರುವಂತೆ ನೋಡಿಕೊಳ್ಳಬೇಕಾದ ಸಮುದಾಯ ಸದಾ ಎಚ್ಚರದ ಸ್ಥಿತಿಯಲ್ಲಿರುವುದು ಅವಶ್ಯಕ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆನಮ್ಮ ಸಮಾಜ ಒಂದು ತೆರನಾದ ಮಂಪರಿನಲ್ಲಿರುವಂತೆ ತೋರುತ್ತಿದೆ. ಒಂದು ಸಮಾಜವನ್ನು ಜಾಗೃತವಾಗಿರುವಂತೆನೋಡಿಕೊಳ್ಳಲು ಆ ಸಮಾಜದಲ್ಲಿ ಒಂದಷ್ಟು ಜನಪರ ಕಾಳಜಿಗಳನ್ನುಳ್ಳ ಚಳುವಳಿಗಳು ಸದಾ ಕ್ರಿಯಾಶೀಲವಾಗಿರಬೇಕಾಗುತ್ತದೆ. ಆದರೆ ಎಂಭತ್ತರ ದಶಕದ ಪೂರ್ವಾರ್ಧದ ನಂತರ ನಮ್ಮ ಬಹುತೇಕ ಚಳುವಚಳಿಗಳು ತಮ್ಮ ಕಾವು ಕಳೆದುಕೊಂಡವು. ಆಗ ಬಿರುಸಾಗಿದ್ದ ಕನ್ನಡ ಚಳುವಳಿ ,ರೈತ ಚಳುವಳಿಮತ್ತು ದಲಿತ ಚಳುವಳಿಗಳು ಒಂದು ನಿರ್ಧಿಷ್ಟಾವದಿಯ ನಂತರ ಕಾಣೆಯಾಗುತ್ತ ಹೋದವು.
ಗೋಕಾಕ್ ವರದಿಯ ಅನುಷ್ಠಾನದ ನಂತರ ಕನ್ನಡ ಚಳುವಳಿ ನಿಷ್ಕ್ರಿಯಗೋಡಿತು. ಅದೇ ರೀತಿ ಒಂದು ಹಂತದಲ್ಲಿ ರಾಜ್ಯದ ರಾಜಕಾರಣದ ದಿಕ್ಕುಗಳನ್ನು ಬದಲಿಸುವ ಶಕ್ತಿ ಹೊಂದಿದ್ದ ರೈತ ಚಳುವಳಿ ಅದರ ನಾಯಕರುಗಳ ವೈಯುಕ್ತಿಕ ಪ್ರತಿಷ್ಠೆಗಳಿಂದಾಗಿ ಹಲವು ಬಣಗಳಾಗಿ ಒಡೆದು ತನ್ನ ಹಿಂದಿನ ಮೊನಚು ಕಳೆದುಕೊಂಡಿತು. ಸಾಹಿತಿಗಳಿಂದ ಸ್ಪೂರ್ತಿ ಪಡೆದು ಶುರುವಾಗಿದ್ದ ದಲಿತ ಮತ್ತು ಬಂಡಾಯ ಚಳುವಳಿಗಳು ಸಹ ವ್ಯಕ್ತಿಗತ ಭಿನ್ನಾಭಿಪ್ರಾಯಗಳಿಂದಾಗಿ ಪೇಲವವಾಗುತ್ತ ಸಾಗಿತು. ನಾನು ಮೇಲ್ಕಾಣಿಸಿದ ಎಲ್ಲ ಚಳುವಳಿಗಳಲ್ಲಿಯೂ ಅಂದಿನ ವಿದ್ಯಾವಂತ ಯುವ ಸಮುದಾಯ ಕ್ರಿಯಾಶೀಲವಾಗಿ ಬಾಗವಹಿಸಿ ಆ ಹೋರಾಟಗಳಿಗೊಂದು ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗಿತ್ತು. ತೊಂಭತ್ತರ ದಶಕದಲ್ಲಿ ಜಾರಿಗೆ ಬಂದ ಮುಕ್ತ ಆಥರ್ಿಕ ನೀತಿ ಬಹುಪಾಲು ವಿದ್ಯಾವಂತ ಯುವ ಸಮುದಾಯವನ್ನು ತನ್ನ ಆಮೀಷಗಳಿಗೆ ಬಲಿ ಪಡೆಯಿತು. ಅದರಲ್ಲೂ ಮೇಲ್ವರ್ಗದ ವಿದ್ಯಾವಂತ ಯುವಕರುಗಳು ಖಾಸಗಿಕರಣದ ಫಲಾನುಭವಿಗಳಾಗಿ ಸಮಾಜದ ಜನಪರ ಚಳುವಳಿಗಳಿಂದ ದೂರ ಉಳಿದರು. ಹೀಗಾಗಿ ಇವತ್ತು ರಾಜ್ಯ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಒತ್ತಾಯಿಸಬೇಕಾಗಿದ್ದ ಕನ್ನಡ ಸಮುದಾಯ ನಿದ್ರಾವಸ್ಥೆಯಲ್ಲಿರುವಂತೆ ಕಾಣುತ್ತಿದೆ. ಸಮುದಾಯದ ಇಂತಹ ಜಡಾವಸ್ಥೆಯನ್ನು ಬಳಸಿಕೊಂಡ ಖಾಸಗಿ ಬಂಡವಾಳಶಾಹಿಗಳು ತಮ್ಮ ಕೋಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಕೋಮುವಾದಿ ಶಕ್ತಿಗಳು ಪ್ರಬಲಗೊಳ್ಳುತ್ತಿವೆ.
ಇದೀಗ ನಿದ್ರಾವಸ್ಥೆಯಲ್ಲಿರುವಂತೆ ಕಾಣುತ್ತಿರುವ ಸಮುದಾಯವನ್ನು ಎಚ್ಚರಗೊಳಿಸಿ ಆಳುವವರ ಮೇಲೆ ಒತ್ತಡ ಹಾಕದೆ ಹೋದರೆ ಕನರ್ಾಟಕದ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವುದು ಖಚಿತ. ಈ ದಿಸೆಯಲ್ಲಿ ಎಪ್ಪತ್ತು-ಎಂಭತ್ತರ ದಶಕಗಳ ರೀತಿಯಲ್ಲಿ ಜನಪರ ಹೋರಾಟಗಳು ರೂಪುಗೊಳ್ಳಬೇಕಾಗಿದೆ. ಕನ್ನಡನಾಡಿನ ಪ್ರಜ್ಞಾವಂತ ಜನತೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗ ಬೇಕಿರುವದು ಇವತ್ತಿನ ಅನಿವಾರ್ಯವಾಗಿದೆ.
ಕೊನೆಯ ಮಾತು: ಮಂಪರಿನಲ್ಲಿರುವ ಸಮಾಜವೊಂದನ್ನು ಯಾರೂ ನಾಶ ಮಾಡಬೇಕಿಲ್ಲ. ಅದು ತಾನೇ ತಾನಾಗಿ ಆತ್ಮಹತ್ಯೆಮಾಡಿಕೊಳ್ಳುವುದು ಖಚಿತ!
 

‍ಲೇಖಕರು G

October 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

    • Anonymous

      ಪೂರ್ಣ ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಓ ಕೆ ನಾ. .

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: