ಬಿಜಿಎಲ್ ಸ್ವಾಮಿ ಅವರ ಕೃತಿ ‘ಹಸುರು ಹೊನ್ನು’.
ಈ ಕೃತಿಯನ್ನು ಜ್ಯೋತಿ ನಟರಾಜ್ ಇಂಗ್ಲಿಷ್ ನಲ್ಲಿ ‘Hasuru Honnu’ ಅನುವಾದಿಸಿದ್ದಾರೆ.
‘ಡಿವಿಜಿ ಬಳಗ ಪ್ರತಿಷ್ಠಾನ’ವು ಈ ಪುಸ್ತಕವನ್ನು ಪ್ರಕಟಿಸಿದೆ.
ಈ ಕೃತಿಯ ಬಗ್ಗೆ ಕಿರಣ್ ರಾಜನಹಳ್ಳಿ ಅವರ ಅನಿಸಿಕೆ ಇಲ್ಲಿದೆ.
–ಕಿರಣ್ ರಾಜನಹಳ್ಳಿ
ಪ್ರವಾಸ ಕಥನಗಳು ಅದೆಷ್ಟೋ ಪ್ರಕಟವಾಗಿವೆ. ಅವುಗಳಲ್ಲಿ ಬಹಳಷ್ಟು ಕೃತಿಗಳು ಓದುಗರ ಮನಸ್ಸನ್ನೂ ಗೆದ್ದಿವೆ. “ಆ ಪ್ರದೇಶ ನೋಡುತ್ತೇವೋ ಇಲ್ಲವೋ… ಆದರೆ ಈ ಕೃತಿಯ ಮೂಲಕ ಆ ಪ್ರದೇಶ ಹೃದಯವನ್ನಾವರಿಸಿಬಿಟ್ಟಿದೆ. ಅಕ್ಷರಗಳಲ್ಲೇ ಆ ತಾಣವನ್ನು ಕಣ್ಣೆದುರು ನಿಲ್ಲಿಸಿಬಿಟ್ಟಿದೆ”, ಎಂದೆನ್ನಿಸುವಷ್ಟು ಸೊಗಸಾದ ಪ್ರವಾಸ ಕಥನಗಳು ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿವೆ. ನನ್ನ ಓದಿನಲ್ಲಿ ಅಂಥ ಅದ್ಭುತ ಪ್ರವಾಸ ಕಥನಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಬಿ.ಜಿ.ಎಲ್ ಸ್ವಾಮಿಯವರು ರಚಿಸಿದಂತಹ “ಹಸುರು ಹೊನ್ನು”! ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸದಾಕಾಲ ಹಸಿರಾಗಿರುವ ಹೊನ್ನ ಸಿರಿಯೇ ಅದು. ಸಸ್ಯಲೋಕವನ್ನು ಮುಖ್ಯ ಪಾತ್ರವನ್ನಾಗಿಟ್ಟುಕೊಂಡು ಅತ್ಯಪೂರ್ವ ಫ್ಯಾಂಟಸಿ ಲೋಕವೊಂದರ ಫೀಲ್ ಕೊಡುವಂತೆ ರಚಿಸುವುದೆಂದರೆ ಸಾಧಾರಣ ಕೆಲಸವಲ್ಲ. ಹಸುರು ಹೊನ್ನು ಪುಸ್ತಕದಲ್ಲಿ ನವಿರಾದ ಹಾಸ್ಯರಸ ಅಲ್ಲಲ್ಲಿ ಹರಿಯುತ್ತಾ ಮಂದಹಾಸ ಮೂಡಿಸಿತ್ತದಲ್ಲಾ…ಅದೊಂದು ಶುದ್ದ ಹಾಸ್ಯದ ಮಾನದಂಡವನ್ನಾಗಿಸುತ್ತದೆ.
ಹಾಗೆ ನೋಡಿದರೆ ಹಸುರು ಹೊನ್ನು ಒಂದು ಸಂಕೀರ್ಣ ವಸ್ತುವಿನ ಪ್ರವಾಸ ಕಥನ. ಅದರಲ್ಲಿ ರೋಚಕತೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದೆಂದರೆ ಸುಲಭವಲ್ಲವೇ ಅಲ್ಲ. ಅಂಥ ಕೃತಿಯನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವುದೆಂದರೆ ದೊಡ್ಡ ಸವಾಲೊಂದನ್ನು ಮೈಮೇಲೆ ಎಳೆದುಕೊಂಡಂತೆ!
ಶ್ರೀಮತಿ ಜ್ಯೋತಿ ನಟರಾಜನ್ ಹಸುರು ಹೊನ್ನು ಕೃತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುತ್ತಿದ್ದಾರೆ ಎಂದು ಕೇಳಿದ ತಕ್ಷಣ ನನ್ನಲ್ಲಿ ಮೊದಲು ಮೂಡಿದ ಪ್ರಶ್ನೆಯೇ “ಇದು ಸಾಧ್ಯವೇ?!”, ಎಂಬುದು. ಏಕೆಂದರೆ ಹಸುರು ಹೊನ್ನು ಕೃತಿಯಲ್ಲಿ ಬಿಜಿಎಲ್ ಸ್ವಾಮಿಯವರು ಅನೇಕ ಕಡೆ ಹಳೆಗನ್ನಡ, ಸಂಸ್ಕೃತ ಮುಂತಾದ ಭಾಷೆಗಳಿಂದ ವಿವರಣೆಗಳನ್ನು, ಸಾಲುಗಳನ್ನು ಉದಾಹರಣೆಗಳಿಗಾಗಿ ಬಳಸಿಕೊಂಡಿದ್ದಾರೆ. ವಚನಗಳನ್ನು, ದಾಸ ಸಾಹಿತ್ಯವನ್ನು, ಉಕ್ತಿಗಳನ್ನು ಹೆಣೆದುಕೊಂಡು ಕನ್ನಡ ಭಾಷೆಯ ವಿವಿಧ ರೂಪಗಳ ಮಿಶ್ರಣವಾಗಿರುವ ರಚನೆಯಿದು. ಕನ್ನಡದಲ್ಲಿ ಅಡಗಿರುವ ವಿವಿಧ ರೂಪಗಳನ್ನು ಕನ್ನಡದಲ್ಲಿ ಮಾತ್ರ ತೋರಿಸಬಹುದು. ಆದರೆ ಇಂಗ್ಲೀಷ್‌ನಲ್ಲಿ ಆ ಬಗೆಬಗೆಯ ಸೊಗಡನ್ನು ಮೂಡಿಸುವುದು ಕಷ್ಟವೇ.
ಉದಾಹರಣೆಗೆ ನೋಡಿ, ಹಸುರು ಹೊನ್ನು ಪುಸ್ತಕದಲ್ಲಿ ಒಂದು ಕಡೆ ಅಡಿಕೆಯ ಬಗ್ಗೆ ವಿವರ ಬರುತ್ತದೆ. ಅದೊಂದು ವಿವವರಣೆಯಲ್ಲೇ ಹಳೆಗನ್ನಡ, ನಡುಗನ್ನಡ, ಸಂಸ್ಕ್ರತ ಎಲ್ಲವೂ ಸೇರಿಕೊಂಡಿವೆ. ಚರಕ ಸಂಹಿತ, ರಾಮಾಯಣ ಮುಂತಾದವುಗಳಿಂದ ಪೂರಕವಾದ ಅಂಶಗಳನ್ನು ಸಮೃದ್ಧವಾಗಿ ತುಂಬಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಕನ್ನಡದಲ್ಲಿ ಬರೆಯುವ ಹಾಗೆ ಸೊಗಡುಗಳನ್ನು ವಿಂಗಡಿಸಿ ಬರೆಯುವುದು ಕಷ್ಟ. ಆ ಕುತೂಹಲದಿಂದಲೇ ಜ್ಯೋತಿ ನಟರಾಜ್ ಅನುವಾದಿಸಿದ ಪುಸ್ತಕವನ್ನು ಗಮನವಿಟ್ಟು ಓದಿದೆ. ಅವರೆಷ್ಟು ಸೊಗಸಾಗಿ ಅನುವಾದಿಸಿದ್ದಾರೆಂದರೆ ಇಂಗ್ಲೀಷ್ ಸಾಲುಗಳಲ್ಲೂ ವಿಶಿಷ್ಠವಾದ ಕನ್ನಡದಲ್ಲಿರುವ ಹಲವಾರು ಪರಿಮಳಗಳು ದಕ್ಕುತ್ತವೆ.
ಹಸುರು ಹೊನ್ನು ಪುಸ್ತಕದಲ್ಲಿ ಬರುವ ಮುದ್ದಣನ ಮಾತುಗಳು ಹೀಗಿವೆ:
“ಪಚ್ಚೆಯ ಚೆಂಬದಳದ
ಲಂಬಳದಿಂ ಸಿಂಗರಿಸಿ
ಸೋಗೆವೀಲಿಯಂ ಬಿಗಿದು
ಕಣ್ಗಡ್ಡಮಾಗಿರ್ಕುಂ ಕೌಂಗುದೋಟಂ” ಎಂದು ಅಡಿಕೆಯ ಬಗ್ಗೆ ವರ್ಣನೆಯಿದೆ. ಇದನ್ನು ಜ್ಯೋತಿ ನಟರಾಜ್‌ರವರು ಅದೆಷ್ಟು ಸುಲಲಿತವಾಗಿ, ಸರಳವಾಗಿ ಇಂಗ್ಲೀಷ್‌ನಲ್ಲಿ ಅನುವಾದಿಸಿದ್ದಾರೆಂದರೆ ಓದುತ್ತಲೇ ಖುಷಿಯಾಗುತ್ತದೆ.
“The tall green areca,
adorned by leaves
that look like a
bedecked bride” ಎಂದು ಅನುವಾದಿಸುತ್ತಾ ಮುದ್ದಣನ ವರ್ಣನೆಯನ್ನು ಇಂಗ್ಲೀಷ್‌ನಲ್ಲಿ ಹಿಡಿದಿಡುತ್ತಾರೆ.
ಹಸಿರು ಹೊನ್ನು ಪುಸ್ತಕದಲ್ಲಿ ಬರುವ ಅನಫಿಲಮ್ ಎಂಬ ಹೂವಿನ ಗಿಡದ ಕುರಿತಾಗಿ ಬರೆದಿರುವ ವಿವರಣೆಯನ್ನು ಓದಿದವರ್ಯಾರೂ ಒಂದಷ್ಟು ಕಾಲ ಮರೆಯುವುದಕ್ಕೇ ಸಾಧ್ಯವಿಲ್ಲ! ಆ ವಿವರಣೆಯಲ್ಲಿ ರೋಚಕತೆ, ಕುತೂಹಲ, ತಮಾಷೆ, ಆಧ್ಯಾತ್ಮ, ವಾಸ್ತವ…ಎಲ್ಲವೂ ಬೆರೆತು ಹೋಗಿವೆ. ಅದರಲ್ಲಿ ಕನಕದಾಸರ ರಚನೆಯೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ.
ಕುಸುಮದೊಳು ಗಂಧವೋ
ಗಂಧದೊಳು ಕುಸುಮವೋ
ಕುಸುಮಗಂಧಗಳೆರಡು
ಘ್ರಾಣದೊಳಗೋ?
ಎಂಬ ಅವರ ಪ್ರಶ್ನೆಯನ್ನು ಜ್ಯೋತಿ ನಟರಾಜನ್‌ರವರು
Is petal within the fragrance
Or is fragrance within the petal?
Or are petal and fragrance
Both, within the sense of smell? ಎಂದು ಅನುವಾದಿಸಿದ್ದಾರೆ.
ಈ ಅನುವಾದದ ಉದಾಹರಣೆಗಳನ್ನು ಏಕೆ ಉಲ್ಲೇಖಿಸಿದೆ ಎಂದರೆ ಈ ಬೃಹತ್ ಕೃತಿಯನ್ನು ಇದೇ ರೀತಿ ಲೀಲಾಜಾಲವಾಗಿ ಬೆಣ್ಣೆಯಲ್ಲಿ ಬರೆದಂತೆ ಕನ್ನಡದ ದನಿಯೇ ಎಂಬಂತೆ ಭಾಸವಾಗುವ ರೀತಿಯಲ್ಲಿ ಇಂಗ್ಲೀಷ್‌ನಲ್ಲಿ ಅನುವಾದ ಮಾಡಿದ್ದಾರೆ.
ಕನ್ನಡದ ಹಸಿರು ಹೊನ್ನು ಕೃತಿ ನೀಡುವಷ್ಟೇ ಓದಿನ ಖುಷಿಯನ್ನೂ, ಮುದವನ್ನೂ ಇಂಗ್ಲೀಷ್ ಪುಸ್ತಕ “Hasuru honnu, when green is gold” ಎಂಬ ಭಾವಾನುವಾದವೂ ನೀಡುತ್ತದೆ.
ಪ್ರತಿಭಾವಂತ ಅನುವಾದಕಿ ಜ್ಯೋತಿ ನಟರಾಜನ್‌ರವರಿಂದ ಇನ್ನಷ್ಟು ಮೇರು ಕೃತಿಗಳು ಅನುವಾದಗೊಳ್ಳಲಿ. ಕನ್ನಡದ ಅಮೂಲ್ಯ ಕೃತಿಗಳು ಇಂಗ್ಲೀಷ್ ಓದುಗರನ್ನೂ ತಲುಪಲಿ ಎಂದು ಹಾರೈಸುವೆ.
ಗೆಳತಿ ಜ್ಯೋತಿ ನಟರಾಜ್ ಕನ್ನಡದ ಹೆಮ್ಮೆಯ ಸಾಹಿತಿ ಡಿ.ವಿ.ಜಿಯವರ ಮೊಮ್ಮಗನ ಮಡದಿ. ಸದಾ ಲವಲವಿಕೆಯಿಂದಿರುವ ಜೀವನ್ಮುಖಿ ಜ್ಯೋತಿ young at heart ಎಂಬ ನುಡಿಗೆ ದಿ ಬೆಸ್ಟ್ ಉದಾಹರಣೆ. ಅವರನ್ನು ಭೇಟಿಯಾದಾಗಲೆಲ್ಲಾ ಆ ಸಮಯವನ್ನು ಚೇತೋಹಾರಿಯನ್ನಾಗಿ ಮಾಡಿಬಿಡುವಂತಹ ಜ್ಯೋತಿ ನಟರಾಜನ್ ನಿಜಕ್ಕೂ ಒಂದು ಬೆಳಕು.






0 Comments