ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಕ್ಕೆ ಬೇಕಾಗಿದ್ದ ಉಪಯುಕ್ತ ಕೃತಿ ʼಪ್ರಾಕೃತ- ಕನ್ನಡ ಬೃಹತ್ ನಿಘಂಟುʼ

ಡಾ. ಆರ್. ಲಕ್ಷ್ಮೀನಾರಾಯಣ ಅವರ “ಪ್ರಾಕೃತ‌ – ಕನ್ನಡ ಬೃಹತ್ ನಿಘಂಟು”ವಿನ ಬಗ್ಗೆ ಅಧ್ಯಯನಶೀಲ ಲೇಖನವನ್ನು ಬರೆದಿದ್ದಾರೆ

ಎಸ್‌.ಆರ್.‌ ವಿಜಯಶಂಕರ

ಯಾವುದೇ ಭಾಷೆಯ ಆಳ ಅಗಲಗಳ ಬೆಳವಣಿಗೆಗೆ ಮತ್ತು ಜ್ಞಾನ ಸಮೃದ್ಧಿಗೆ ಅವುಗಳ ಆಕರ ಗ್ರಂಥಗಳ ಕೊಡುಗೆ ಬಹಳ ದೊಡ್ಡದು. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟವಾಗಿರುವ ಡಾ. ಆರ್.‌ ಲಕ್ಷ್ಮೀನಾರಾಯಣ ಅವರ “ಪ್ರಾಕೃತ-ಕನ್ನಡ ಬೃಹತ್ ನಿಘಂಟು” ಇಂತಹ ಒಂದು ಮುಖ್ಯ ಕೊಡುಗೆ.

ಮೂಲದಲ್ಲಿ ಈ ನಿಘಂಟು ಹರಗೋವಿಂದ ದಾಸ್‌ ತ್ರಿಕಮ್ ಚಂದ್ ಸೇಠ್‌ (1888 ರಿಂದ 1941) ಅವರು ರಚಿಸಿದ “ಪಾಇಅ-ಸದ್ದ-ಮಹಣ್ಣವೋ” ಎಂಬ ಪ್ರಾಕೃತ-ಹಿಂದೀ ಕೋಶ. ಹರಗೋವಿಂದ ದಾಸ್ ತ್ರಿಕಮ್‌ ಚಂದ್‌ ಸೇಠ್ ಪ್ರಾಕೃತ‌, ಸಂಸ್ಕೃತ ಮತ್ತು ಗುಜರಾತಿ ಭಾಷೆಗಳಲ್ಲಿ ಉದ್ದಾಮ ಪಂಡಿತರಾಗಿದ್ದರು. ಅವರು ಪ್ರಾಕೃತ-ಹಿಂದಿಯಲ್ಲಿ ರಚಿಸಿದ 1200 ಪುಟಗಳ ಈ ನಿಘಂಟು 1928 ರಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಕಟವಾದ ಬಳಿಕ ಐದು ಭಾಷೆಗಳಲ್ಲಿ 18 ಮುದ್ರಣಗಳನ್ನು ಕಂಡಿದೆ.

ಮೂರು ವರ್ಷಗಳ ಕಾಲ ಸತತ ಪರಿಶ್ರಮದಿಂದ ಡಾ. ಆರ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿ ಅಳವಡಿಸಿರುವ ಈ ಬೃಹತ್ ನಿಘಂಟನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ.

ಈ ನಿಘಂಟು ಮಾತ್ರವಲ್ಲದೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಬೌದ್ಧ ಸಾಹಿತ್ಯಕ್ಕೆ ಪ್ರವೇಶ ಪಡೆದುಕೊಳ್ಳುವ ಅಧ್ಯಯನಕ್ಕಾಗಿ ತಾವೇ ಸ್ವತಃ ರಚಿಸಿದ ಪಾಲಿ-ಇಂಗ್ಲಿಷ್ ಭಾಷೆಯ ನಿಘಂಟನ್ನು ಕೂಡಾ ಡಾ.ಆರ್.‌ ಲಕ್ಷ್ಮೀನಾರಾಯಣ ಕನ್ನಡಕ್ಕೆ ಅಳವಡಿಸಿದ್ದಾರೆ. ಈ ಪಾಲಿ-ಕನ್ನಡ ನಿಘಂಟನ್ನು ಕೂಡಾ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ.

ಹೀಗಾಗಿ ಈ ಪ್ರಾಕೃತ-ಕನ್ನಡ ಹಾಗೂ ಪಾಲಿ-ಕನ್ನಡ ಎರಡೂ ನಿಘಂಟುಗಳು ಕನ್ನಡದಲ್ಲಿ ಅಧ್ಯಯನಕ್ಕೆ ಆಕರ ಗ್ರಂಥಗಳಾಗಿ ದೊರಕಿವೆ. ಇದಕ್ಕಾಗಿ ವಿದ್ವಾಂಸರಾದ ಡಾ. ಆರ್. ಲಕ್ಷ್ಮೀನಾರಾಯಣ ಅವರಿಗೆ ಹಾಗೂ ಪ್ರಕಾಶಕರಾದ ಕುವೆಂಪು ಭಾಷಾ ಪ್ರಾಧಿಕಾರಕ್ಕೆ ಅಭಿನಂದನೆಗಳು.

     ಪ್ರಾಕೃತದ ಹುಟ್ಟಿನ ಬಗ್ಗೆ ಎರಡು ಮುಖ್ಯ ವಾದಗಳಿವೆ. ಅವುಗಳಲ್ಲಿ ಒಂದು, ಸಂಸ್ಕೃತದಿಂದ ಪ್ರಾಕೃತ ಹುಟ್ಟಿತು ಎಂಬುದು. ಪ್ರಾಕೃತವೇ ಮೂಲಭಾಷೆ. ಅದರಿಂದ ಸಂಸ್ಕಾರಗೊಂಡು ʼಸಂಸ್ಕೃತʼ ಹುಟ್ಟಿ ಬೆಳೆಯಿತು ಎಂಬುದು ಎರಡನೇ ವಾದ. ಇದು ಒಂದಕ್ಕೊಂದು ತೀರ ವಿರುದ್ಧವಾದ ವಾದಗಳು. ಈಚೆಗೆ ದೇಶ ಭಾಷೆಗಳ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ ಡಾ. ಷ. ಶೆಟ್ಟರ್‌ ಅವರ ʼಪ್ರಾಕೃತ ಜಗದ್ವಲಯʼ ಕೃತಿಗೆ ಬರೆದ ಮುನ್ನುಡಿಯಲ್ಲಿ ಡಾ. ಕೆ.ವಿ.‌ ತಿರುಮಲೇಶ್,  ಪ್ರಾಕೃತದಲ್ಲಿ ಹಲವು ʼತದ್ಭವʼ ಪ್ರಕ್ರಿಯೆಗೊಳಗಾದ ರೂಪಾಂತರ ಪದಗಳಿವೆ. ಮೂಲದಿಂದ ಮಾತ್ರ ʼತದ್ಭವʼ ವನ್ನು ಪಡೆಯಲು ಸಾಧ್ಯವಿದೆ. ಆದುದರಿಂದ ಪ್ರಾಕೃತವು ಸಂಸ್ಕೃತದಿಂದ ಹುಟ್ಟಿ ಬೆಳೆದುದಾಗಿರಬಹುದೆಂದು ಹೇಳುತ್ತಾರೆ. ಇದಲ್ಲದೆ ಇನ್ನೊಂದು ವಿಚಾರವೂ ಇದೆ. ಪ್ರಾಕೃತದಲ್ಲಿ ಕಾಣುವ ಹಲವು ಪದಗಳು ವೇದಗಳಲ್ಲಿ ಇವೆ. ವೇದಗಳ ಸಂಸ್ಕೃತ ಮತ್ತು ಕಾವ್ಯ ನಾಟಕಗಳ ಲೌಕಿಕ ಸಂಸ್ಕೃತಗಳಲ್ಲಿ  ವ್ಯತ್ಯಾಸ  ಇದೆ. ಈ ಹಿನ್ನೆಲೆಯಲ್ಲಿ ಹರಗೋವಿಂದ ದಾಸರು ಹೇಳುವ ಪ್ರಾಕೃತದ ‘ ತದ್ಭವ’ ಮತ್ತು ಲೌಕಿಕ ಸಂಸ್ಕತದ ‘ ತತ್ಸಮ’ ಗಳು ಕನ್ನಡ- ಸಂಸ್ಕೃತ  ತದ್ಭವ - ತಸ್ಸಮ ರೀತಿಯವು  ಅಲ್ಲ. 

ಪಾಲಿ, ಪೈಶಾಚಿ, ಚೂಲಿಕಾ ಪೈಶಾಚಿ, ಅರ್ಧಮಾಗದಿ, ಜೈನ ಮಹಾರಾಷ್ಟ್ರಿ, ಶೌ(ಸೌ)ರ ಸೇನೀ, ಮಾಗದಿ, ಮಹಾರಾಷ್ಟ್ರಿ ಮತ್ತು ಅಪಭ್ರಂಶ ಇವು ಪ್ರಾಕೃತದ ವಿಭಿನ್ನ ಪ್ರಭೇದಗಳು. ಇಂತಹ ಪ್ರಾಕೃತ ಭಾಷೆಗಳಲ್ಲಿ ಇದ್ದ ಕಥಾ ಸಾಹಿತ್ಯ ಕನ್ನಡದಲ್ಲಿ ಜೈನ ಸಾಹಿತ್ಯದ ಹುಟ್ಟು ಬೆಳವಣಿಗೆಗಳಿಗೆ ನೀಡಿದ ಕೊಡುಗೆ ಏನು ಎಂಬುದನ್ನು ವಿಶೇಷವಾಗಿ ಅಧ್ಯಯನ ಮಾಡಿ ತಮ್ಮ ಸಂಶೋಧನಾ ವಿವರಗಳನ್ನು ಪ್ರೊ. ಹಂಪ ನಾಗರಾಜಯ್ಯವರು ತಮ್ಮ “ಪ್ರಾಕೃತ ಕಥಾ ಸಾಹಿತ್ಯ: ಆಕೃತಿ – ಆಶಯ – ಆಯಾಮ – ಅನನ್ಯತೆ” ಎಂಬ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಮೇಲೆ ಹೆಸರಿಸಿದ ಇಬ್ಬರು ವಿದ್ವಾಂಸರಾದ ಷ.ಶೆಟ್ಟರ್ ಹಾಗೂ ಹಂಪನಾ ತಮ್ಮ ವಾದಗಳನ್ನು ಭಾಷಾ ಶಾಸ್ತ್ರ, ಸಾಹಿತ್ಯಾಧ್ಯಯನ, ಚರಿತ್ರೆ, ಶಾಸನ ಮೊದಲಾದ ಹಲವು ಸಂಶೋಧನಾ ಆಕರಗಳಿಂದ ವಿವರಿಸಿದ್ದಾರೆ. ಇವರುಗಳಲ್ಲದೆ ಆನೆ ಉಪಾಧ್ಯೆ ಮೊದಲಾದ ಇನ್ನೂ ಹಲವು ಹಿರಿಯ ವಿದ್ವಾಂಸರೂ ಈ ನಿಟ್ಟಿನಲ್ಲಿ ಸಂಶೋಧನಾ ಕೆಲಸಗಳನ್ನು ಮಾಡಿದ್ದಾರೆ.

ಈ ಎಲ್ಲಾ ಸಂಶೋಧನಾ ಕಾರ್ಯಗಳ ಹಿನ್ನೆಲೆಯಲ್ಲಿ ಇಂದು ನಾವು ಹಳೆಗನ್ನಡ-ಜೈನ ಸಾಹಿತ್ಯ ಕೃತಿಗಳನ್ನು ಹೊಸ ಬೆಳಕಿನಲ್ಲಿ ಅಧ್ಯಯನ ಮಾಡಲು ಸಾಧ್ಯವಿದೆ. ಮುಖ್ಯವಾಗಿ ಅಂತಹ ಹಳೆಗನ್ನಡ ಸಾಹಿತ್ಯದ ಅಧ್ಯಯನಗಳಲ್ಲಿ ಗಂಭೀರ ಓದುಗರು ಪ್ರಾಕೃತ ಪದಗಳನ್ನು ಅರಿಯಲು ಒಂದು ಉತ್ತಮ ನಿಘಂಟಿನ ಅಗತ್ಯ ಇತ್ತು. ಡಾ. ಆರ್. ಲಕ್ಷ್ಮೀನಾರಾಯಣ ಅವರು ಅನುವಾದಿಸಿ ಕನ್ನಡಕ್ಕೆ ತಂದ ‌ʼಪ್ರಾಕೃತ-ಕನ್ನಡ ಬೃಹತ್ ನಿಘಂಟುʼ ಆ ಕೊರತೆಯನ್ನು ನೀಗಿಸಿದೆ. ಅಂತಹ ಆಳವಾದ ಅಧ್ಯಯನಗಳಲ್ಲಿ ತೊಡಗುವ ವಿದ್ಯಾರ್ಥಿಗಳು ತಕ್ಷಣ ನೋಡಬಹುದಾದ ಆಕರ ಗ್ರಂಥವಾಗಿಯೂ ಈ ನಿಘಂಟು ಉಪಯೋಗಕ್ಕೆ ಬರಲಿದೆ. ವಡ್ಡಾರಾಧನೆ, ಪಂಪ ಭಾರತ, ಚಾವುಂಡರಾಯ ಪುರಾಣ ಮುಂತಾದ ಕೃತಿಗಳ ಅಧ್ಯಯನದ ಸಮಯದಲ್ಲಿ, ಪ್ರಾಕೃತ ಪದಗಳ ಸ್ಪಷ್ಟ ಅರ್ಥ ತಿಳಿಯಲು ಇನ್ನು ಹಿಂದಿನಂತೆ ಹಲವು ನಿಘಂಟುಗಳಲ್ಲಿ ಹುಡುಕಬೇಕಾಗಿಲ್ಲ.

ದ್ರಾವಿಡ ಭಾಷೆ ಒಡೆದುಕೊಳ್ಳಲು ಅನ್ಯಭಾಷಾ ಸಂಪರ್ಕ ಕೂಡಾ ಒಂದು ಕಾರಣ ಎಂಬ ಅಭಿಪ್ರಾಯವಿದೆ. ನಮ್ಮಲ್ಲಿ ಹಲವು ಪದಗಳ ಮೂಲವನ್ನು ಹುಡುಕುವಾಗ ಅಂತಹ ಅನೇಕ ವಿಚಾರಗಳು ಸಹಕಾರಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಡಾ. ಎಚ್. ಶಶಿಕಲಾ ಅವರು ಪ್ರಜಾವಾಣಿಯ (24-11-2019) ತಮ್ಮ ಲೇಖನವೊಂದರಲ್ಲಿ ಕನ್ನಡದ ʼಅಜ್ಜʼ ಪದ ಬಂದಿರುವುದು ಯಾವ ಭಾಷೆಯಿಂದ ಎಂದು ವಿವರಿಸಿದ ಚರ್ಚೆ ನೆನಪಾಗುತ್ತಿದೆ.

ʼಅಜ್ಜʼ ಪದ ಬಂದಿರುವುದು ಸಂಸ್ಕೃತದ ʼಆರ್ಯʼ ಅಥವಾ ʼಅದ್ಯʼ ಪದಗಳಿಂದವೋ? ಕನ್ನಡದ ನಿತ್ಯಬಳಕೆಯ ಈ ಪದದ ಮೂಲ ಸಂಸ್ಕೃತವೋ ಅಥವಾ ಪ್ರಾಕೃತವೋ? ಡಾ. ಎಚ್.‌ ಶಶಿಕಲಾ ಅವರು ಪ್ರಾಕೃತದ ʼಅಜ್ಜʼ ಪದ ಕನ್ನಡದಲ್ಲಿ ಬಳಕೆಗೆ ಬಂತು ಎಂಬುದನ್ನು ವಿವರಿಸಿದರು. ಪ್ರಾಕೃತ-ಕನ್ನಡ ನಿಘಂಟು ನಮಗೆ ಈಗ ʼಅಜ್ಜʼ ಪದದ ಹಲವು ವಿವರಗಳನ್ನು ನೀಡುತ್ತದೆ. ಹಾಗೆ ಅಜ್ಜಂ (ಅದ್ಯ) ಅಜ್ಜಕಾಲಿಅ (ಅದ್ಯಕಾಲಿಕ – ಈಗಿನ, ಪ್ರಸ್ತುತ, ಈ ಕಾಲದ) ಹಾಗಯೇ ಅಜ್ಜಯ (ಆರ್ಯಕ) ಮಾತಾಮಹ- ತಾಯಿಯ ತಂದೆ; ಹಾಗೆಯೇ ವಿಶೇಷಣ ರೂಪದಲ್ಲಿ ಅಜ್ಜಯ (ಅರ್ಜಕ)- ಸಂಪಾದನೆ ಮಾಡುವವನು-ಹೀಗೆ ಪದಗಳ ಮೂಲಕ ಹಲವು ಚಿಂತನಾ ದಾರಿಗಳನ್ನು, ಸಾಂಸ್ಕೃತಿಕ ವಿವರಗಳನ್ನು ಅರಿತುಕೊಳ್ಳಲು ಈ ನಿಘಂಟು ಸಹಕರಿಸುತ್ತದೆ.

ಪ್ರಾಕೃತ-ಕನ್ನಡ-ಸಂಸ್ಕೃತ ಪದಗಳ ಒಂದು ಪಟ್ಟಿಯನ್ನು ಷ.ಶೆಟ್ಟರ್‌ ಅವರು ನೀಡಿದ್ದಾರೆ. (ನೋಡಿ: ಪ್ರಾಕೃತ ಜಗದ್ವಲಯ). ಸಮಾನ ಪದವೆಂದು ನಾವು ʼಅಕ್ಖಂಡʼ ಪದವನ್ನು ಗಮನಿಸಿದರೆ ಅದು ಅಖ್ಖಂಡ (ಪ್ರಾಕೃತ ಕನ್ನಡ) ಹಾಗೂ ಅಖಂಡ (ಸಂಸ್ಕೃತ) ರೂಪಗಳಲ್ಲಿದೆ. ಅಂಗರಖ್ಖ (ಸಮಾನ ಪದ) ಅಂಗರೇಕು/ಅಂಗರಖಾ/ಅಂಗರೇಖು (ಪ್ರಾಕೃತ ಕನ್ನಡ) ಹಾಗೂ ಅಂಗರಕ್ಷ (ಸಂಸ್ಕೃತ) ಆಗಿದೆ. ಉವಜ್ಝಯ/ಉವಜ್ಝಾಯ (ಸಮಾನ ಪದ) ಓವಝ/ಓವಜ್ಜ/ಓಜ(ಪ್ರಾಕೃತ-ಕನ್ನಡ) ಉಪಾಧ್ಯಾಯ (ಸಂಸ್ಕೃತ). ನಾವು ಇತ್ತೀಚಿಗೆ ಪುನಃ ಪ್ರಚಾರಕ್ಕೆ ತಂದ ನಾಡೋಜ ಮುಂತಾದ ಪದಗಳು ಈ ರೀತಿಯ ಅರಿವಿನಲ್ಲಿ ಹೆಚ್ಚು ಉಜ್ವಲವಾಗುತ್ತವೆ.

ಡಾ. ಕೆ.ವಿ. ತಿರುಮಲೇಶ್ ಹಾಗೂ ಷ. ಶೆಟ್ಟರ್‌ ಪ್ರಾಕೃತ ಕನ್ನಡಗಳ ಭಾಷಿಕ ಸಮಾನ್ಯತೆ ಕುರಿತು ಹೇಳಿರುವ ಮಾತುಗಳು ಆಸಕ್ತಿದಾಯಕವಾಗಿವೆ. ಅವುಗಳ ನಡುವಿನ ಸ್ವರಗಳ ಹಲವು ಸಾಮಾನ್ಯತೆ ಕುರಿತ ಹಲವು ವಿಚಾರಗಳಿವೆ. ಅದಲ್ಲದೆ ಈ ನಿಘಂಟಿನ ಮೂಲಕ ಕನ್ನಡದಲ್ಲಿ ಇರುವಂತೆ ಪ್ರಾಕೃತದಲ್ಲಿಯೂ ಇರುವ ತತ್ಸಮ, ತದ್ಭವ ಮತ್ತು ದೇಶ್ಯ ಎಂಬ ಮೂರು ರೀತಿಯ ಶಬ್ದಗಳ ತಿಳುವಳಿಕೆಗೆ ಈ ನಿಘಂಟು ಅತ್ಯಂತ ಸಹಕಾರಿ.

ಯಾವ ರೀತಿಯ ವ್ಯತ್ಯಾಸಕ್ಕೂ ಒಳಗಾಗದೆ ಯಥಾವತ್ತಾಗಿ ಸಂಸ್ಕೃತದಿಂದ ಬಂದ ಶಬ್ದಗಳು ʼತತ್ಸಮʼ. ಸಂಸ್ಕೃತದಿಂದ ವರ್ಣಲೋಪ, ವರ್ಣವಿಕಾರ, ವರ್ಣಾಗಮ ಅಥವಾ ವರ್ಣ ಪರಿವರ್ತನೆಗಳಾಗಿ ಕನ್ನಡದಲ್ಲಿ ಬಳಕೆಯಾಗುವ ಪದಗಳು ತದ್ಭವಗಳು. ಪ್ರಕೃತಿ, ಪ್ರತ್ಯಯ ವಿಭಜನೆಗೆ ಒಳಗಾಗದೆ ಇರುವ ʼದೇಶ್ಯʼ ಶಬ್ದಗಳು. ಈ ಹಿನ್ನೆಲೆಯಲ್ಲಿ ಪ್ರಾಕೃತ-ಕನ್ನಡ ನಿಘಂಟನ್ನು ಗಮನಿಸಿದರೆ ಇಂದು ನಾವು ಸಂಸ್ಕೃತವೆಂದು ಗುರುತಿಸುವ ಹೆಚ್ಚಿನ ಶಬ್ದಗಳು ಪ್ರಾಕೃತವಾಗಿವೆ. ಅಥವಾ ಪ್ರಾಕೃತದ ಮೂಲಕವಾಗಿ ಕನ್ನಡಕ್ಕೆ ಬಂದಿವೆ.

ಭಾಷೆಯ ಶಾಸ್ತ್ರೀಯ ಅಧ್ಯಯನಕ್ಕೆ ಮಾತ್ರವಲ್ಲ ನಮ್ಮ ಸಾಂಸ್ಕೃತಿಕ ತಿಳುವಳಿಕೆಗೂ ಅಂತಹ ಸೂಕ್ಷ್ಮ ಓದು ಸಹಕಾರಿ. ಅದೇ ರೀತಿ ಕನ್ನಡ ಛಂದಸ್ಸಿನ ಮೇಲೂ (ಉದಾ. ಕಂದಪದ್ಯಗಳು) ಆಗಿರಬಹುದಾದ ಪ್ರಾಕೃತದ ಪ್ರಭಾವದ ಅಧ್ಯಯನದ ಸಂದರ್ಭಗಳಿಗೂ ಇಂತಹ ನಿಘಂಟು ಸಹಕಾರಿ. (ಉದಾಹರಣೆಗೆ: ಕಂದಪದ್ಯಗಳ ಹಿನ್ನೆಲೆಯಲ್ಲಿ- ಖಂಧ ಅ>ಖಂಧ> ಕಂದ ಎಂಬುದು ಸಹಜ ವ್ಯುತ್ಪತ್ತಿಯಂತೆ ತೋರುತ್ತದೆ.)

ನಮ್ಮ ಚಿಂತನಾಕ್ರಮ ಸೂಕ್ಷ್ಮವಾಗಬೇಕಾದರೆ ಭಾಷೆಗಳಲ್ಲಿ ಪದ ಪದಗಳ ವ್ಯತ್ಯಾಸಗಳನ್ನು ಅನುಭವಿಸಲು ಕಲಿಯಬೇಕು. ಪದಗಳ ವ್ಯುತ್ಪತ್ತಿ ಮತ್ತು ಅವು ಇತರ ಭಾಷೆಗಳಿಂದ ಹರಿದು ಬಂದ ಕ್ರಮಗಳ ತಿಳುವಳಿಕೆಯೂ ನಮ್ಮ ಜ್ಞಾನ ಪರಿದಿಯನ್ನೂ ಸಾಂಸ್ಕೃತಿಕ ತಿಳುವಳಿಕೆಯನ್ನೂ ವಿಸ್ತರಿಸಿಕೊಳ್ಳಲು ಸಹಕಾರಿ. ವರಕವಿ ದ.ರಾ ಬೇಂದ್ರೆಯವರ ಮನೆಯ ಖಾಸಗಿ ಗ್ರಂಥಾಲಯದಲ್ಲಿ 480 ಕ್ಕೂ ಹೆಚ್ಚು ವಿದದ ನಿಘಂಟುಗಳಿದ್ದವು. ಸಂಸ್ಕೃತ, ಕನ್ನಡ ಮೊದಲಾದ ತಮ್ಮ ಪ್ರಿಯ ನಿಘಂಟುಗಳನ್ನು ಓದುತ್ತಾ ಕವಿ ಗೋಪಾಲಕೃಷ್ಣ ಅಡಿಗರು ಪದ ಧ್ಯಾನ ಮಾಡುತ್ತಿದ್ದರು. ಪದಗಳ ಒಳಗೆ ಅವಿತಿರುವ ಲೋಕದ ನೆನಪುಗಳನ್ನು ತಮ್ಮ ಕಾವ್ಯದ ಮೂಲಕ ಎತ್ತಿ ಹೊರಜಗತ್ತಿಗೆ ತೋರಿಸಲು ಶ್ರೇಷ್ಠ ಕವಿಗಳು ಶಕ್ತರಾಗಿರುತ್ತಾರೆ.

ಪದಗಳ ಮೂಲಕ ಹಾಗೂ ಪದಗಳ ಕುರಿತಾಗಿ ಯೋಚಿಸಲು ನಿರುದ್ದಿಶ್ಯವಾಗಿ ನಿಘಂಟಿನ ಒಂದು ಪುಟವನ್ನು ತೆರೆದು ಅಲ್ಲಿನ ಪದಗಳನ್ನು ಓದುವ, ತಿಳಿಯುವ ಅಭ್ಯಾಸವೊಂದನ್ನು ನಾನು ಬೆಳೆಸಿಕೊಂಡಿದ್ದೇನೆ. ಪ್ರಾಕೃತ-ಕನ್ನಡ ನಿಘಂಟನ್ನು ಕೊಂಡು ತಂದು ನಿರುದ್ದಿಶ್ಯವಾಗಿ ಪುಟ ತಿರುಗಿದಾಗ ನನ್ನ ಕಣ್ಣಿಗೆ ಬಿದ್ದುದು ʼಗೇಹಿಣೀʼ (ಗೇಹಿನೀ) ಎಂಬ ಸ್ತ್ರೀಲಿಂಗ ಪದ. ಅದರ ಅರ್ಥ ಗೃಹಿಣಿ, ಮನೆಯ ಯಜಮಾನಿ, ಪತ್ನಿ ಎಂದು ನೀಡಲಾಗಿದೆ.

ನಮ್ಮ ನಿತ್ಯ ಬಳಕೆಯಲ್ಲಿರುವ ಗೃಹಿಣಿ ಪದದ ಹಿಂದೆ ʼಗೃಹʼ (ಮನೆ) ಇದೆ ಎಂದು ನಾವು ಸಹಜವಾಗಿ ತಿಳಿಯುತ್ತೇವೆ. ಗೇಹ ಎಂಬುದೂ ವಾಸಸ್ಥಳ, ಮನೆ ಎಂಬ ಅರ್ಥದ ಸಂಸ್ಕೃತ ಪದ ಎಂದು ನಾವು ತಿಳಿದಿದ್ದೇವೆ. ಈ ಹಿನ್ನೆಲೆಯಲ್ಲಿ ಗೇಹಿಣೀ ನಮಗೆ ಪದಗಳ ಹಲವು ಸಾಧ್ಯತೆ ಹಾಗೂ ಶಬ್ದ ಸಾಮಿಪ್ಯವನ್ನು ತಿಳಿಸುತ್ತದೆ. ಶಬ್ದ ಹಾಗೂ ಅರ್ಥಗಳ ಅನ್ಯೋನ್ಯ ಹಾಗೂ ಅನ್ಯ ಸಂಬಂಧಗಳ ಅರಿವು ಭಾಷಾ ಬಾಂಧವ್ಯದ ಸುಖಗಳಲ್ಲೊಂದು. ವಿಶೇಷಣವಾಗಿ ಗೇಹಿ ಅ( ಗೇಹಿಕ) ಅಂದರೆ ಗೃಹಸ್ಥ. ಪುಲ್ಲಿಂಗವಾಗಿ ಗಂಡ, ಪತಿ, ಮನೆಯ ಯಜಮಾನ ಎಂಬುದು ಪ್ರಾಕೃತದ ಅರ್ಥ.

ಪ್ರಾಕೃತ-ಹಿಂದಿ ನಿಘಂಟಿನ ಈ ಕನ್ನಡ ಅನುವಾದದಲ್ಲಿ ಡಾ. ಆರ್.‌ ಲಕ್ಷ್ಮೀನಾರಾಯಣ ಅವರು ಪ್ರಾಕೃತದಲ್ಲಿ ಕೃದಂತ ರೂಪ ಎಲ್ಲಾ ಕಡೆ ಒಂದೇ ಆಗಿರುವುದರಿಂದ ಬಹುಶಃ ನಿಘಂಟಿನ ಗಾತ್ರವನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಎಲ್ಲಾ ಕ್ರಿಯಾಪದಗಳ ಆ ರೂಪಗಳನ್ನು ಅಚ್ಚು ಹಾಕಿಲ್ಲ. ಹಿಂದಿ ಮೂಲದಲ್ಲಿ ಕರ್ಮಣಿ ಪ್ರಯೋಗ ಹೆಚ್ಚು ಇದೆ. ಕನ್ನಡ ಅನುವಾದದಲ್ಲಿ ನಮ್ಮ ಓದಿಗೆ ಸುಲಭವಾಗುವಂತೆ ಕರ್ತರಿ ಪ್ರಯೋಗದಲ್ಲಿ ವಿವರಣೆ ನೀಡಿದ್ದಾರೆ.

ಇಂದು ನಾವು ಮಾಹಿತಿ ಯುಗದಲ್ಲಿದ್ದೇವೆ. ಆದರೆ ಮಾಹಿತಿಯು ಜ್ಞಾನವಾಗಿ ಪರಿವರ್ತನೆ ಹೊಂದುವ ಅಥವಾ ಮಾಹಿತಿಯು ಜ್ಞಾನಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ಆಗಬೇಕಾದ ಅಗತ್ಯ ಇಂದು ಇದೆ. ಉಪಯುಕ್ತ ಮಾಹಿತಿ ಉಳ್ಳ ಕೃತಿಗಳ ಅನುವಾದಗಳೂ ಅಂತಹ ಕಾರ್ಯದಲ್ಲಿ ಸಹಕಾರಿ. ʼಪ್ರಾಕೃತ- ಕನ್ನಡ ಬೃಹತ್ ನಿಘಂಟುʼ ಈ ದೃಷ್ಠಿಯಿಂದ ಕನ್ನಡಕ್ಕೆ ಬೇಕಾಗಿದ್ದ ಉಪಯುಕ್ತ ಕೆಲಸ.

ಒಂದು ಸಂಸ್ಥೆ ಮಾಡಬೇಕಾಗಿದ್ದ ಕೆಲಸವನ್ನು ಡಾ. ಆರ್.‌ ಲಕ್ಷ್ಮೀನಾರಾಯಣ ಒಬ್ಬರೇ ಕುಳಿತು ಶ್ರದ್ಧೆಯಿಂದ ಮಾಡಿದ್ದಾರೆ. ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಸಂಸ್ಥೆಗಳ ಗ್ರಂಥಾಲಯಗಳಲ್ಲಿ ಈ ನಿಘಂಟು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡುವುದು ಕೂಡ ಕನ್ನಡದ ಕೆಲಸವೇ ಆಗಿದೆ. ಕನ್ನಡ ಪ್ರಾಧಿಕಾರ ಮುಂತಾದ ಸಂಸ್ಥೆಗಳು ಈ ಬಗ್ಗೆ ಪ್ರಯತ್ನ ಮಾಡುವುದು ಉಚಿತವಾಗುತ್ತದೆ.

‍ಲೇಖಕರು avadhi

28 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading