ಸಿದ್ಧರಾಮ ಕೂಡ್ಲಿಗಿ
ನನಗೆ ಬೇಸರವಾದಾಗಲೆಲ್ಲ ಕೆಲವೊಮ್ಮೆ ಕಾಡಿಗೆ ಹೋಗುತ್ತೇನೆ, ಇಲ್ಲವೇ ಮನೆಯ ಮುಂದಿನ ಕೈತೋಟದ ಮುಂದೆ ಕುಳಿತು ಸಸ್ಯ ಪ್ರಪಂಚದ ಒಳಹೊಕ್ಕುಬಿಡುತ್ತೇನೆ. ಅಂದರೆ ಒಂದು ಗಿಡವನ್ನು ಅದರ ಕಾಂಡ, ಎಲೆ, ಚಿಗುರು, ಹೂಗಳ ಸಮೇತ ಇಡಿಯಾಗಿ ನೋಡುತ್ತ ಅವುಗಳಲ್ಲೇ ಒಂದಾಗಿಬಿಡೋದು.
ನಿನ್ನೆ ಮೆಟ್ಟಿಲು ಮೇಲೆ ಕುಳಿತು ದೂರದ ಕನಕಾಂಬರ ಗಿಡವನ್ನು ನೋಡುತ್ತಿದ್ದೆ. ವಿವಿಧ ಹಸಿರು ಗಿಡಗಳ ಮಧ್ಯೆ ಈ ಕನಕಾಂಬರ ಹೂಗಳು ಅತ್ಯಂತ ಮನಸೆಳೆದವು. ಹಸಿರು ಹಿನ್ನೆಲೆಯಲ್ಲಿ ಈ ಬಣ್ಣದ ಪುಟ್ಟ ನವಿರು ಹೂಗಳು ನನ್ನ ಮನಸನ್ನು ಮತ್ತಷ್ಟು ಮೃದುವಾಗಿಸಿದವು.
ಗೋಪುರದ ಹಾಗೆ ಏರಿದ ಗಿಡದ ಹೂ ಬಿಡುವ ಭಾಗಗಳು ಅದೆಷ್ಟು ಸುಂದರ. ತಮ್ಮ ಒಡಲಲ್ಲಿ ಈ ಮೃದುವಾದ ಹೂಗಳನ್ನು ಅದೆಷ್ಟು ಜತನದಿಂದ ಇರಿಸಿಕೊಂಡಿರಬಹುದು. ಆ ಒಡಲಿನಲ್ಲಿ ಸಸ್ಯ ಜಗತ್ತಿನ ಏನೇನು ಪ್ರಕ್ರಿಯೆಗಳು ನಡೆದಿರಬಹುದು, ಎಂಥ ಅದ್ಭುತ ಅಲ್ಲಿ ಸೃಷ್ಟಿಯಾಗುತ್ತಿರಬಹುದು ಹೀಗೇ ಏನೆಲ್ಲ ಯೋಚನೆಗಳು.

ತಮ್ಮ ಅತ್ಯಂತ ಸುಕೋಮಲ ಪಕಳೆಗಳಿಂದ ಹೂಗಳು ಅದೆಷ್ಟು ನನ್ನ ಮೃದುತ್ವವನ್ನು ಮೂಡಿಸಿಬಿಟ್ಟವೆಂದರೆ ಸ್ವತ: ನಾನೇ ಕನಕಾಂಬರವಾಗಿಬಿಟ್ಟೆನೋ ಎನಿಸುವಷ್ಟು. ಅದೆಷ್ಟು ಹೊತ್ತು ಅವುಗಳನ್ನೇ ನೋಡುತ್ತ ಕುಳಿತಿದ್ದೆನೋ ಗೊತ್ತಿಲ್ಲ. ಕನಕಾಂಬರ ಹೂಗಳ ಮೃದುತ್ವವೇ ನಾನು, ನಾನೇ ಕನಕಾಂಬರದ ಮೃದುತ್ವ ಎಂಬಂತೆ.
ಈ ಹೂವಿಗೆ ವಾಸನೆಯಿಲ್ಲ ನಿಜ ಆದರೆ ಸುಕೋಮಲತೆಗೆ ಇದರಷ್ಟು ಬೇರೆ ಹೂವಿಲ್ಲವೇನೋ ಅನಿಸಿಬಿಡುತ್ತದೆ. ಹೂವನ್ನು ಮೆಲ್ಲನೆ ಕೀಳದೆ ಒರಟುತನ ಮಾಡಿದರೆ ಹೂಗಳು ಹೇಗಾಗಿಬಿಡುತ್ತವೆಂದರೆ ಅದರ ಸುಂದರತೆಯನ್ನೇ ಹೊಸಕಿ ಹಾಕಿದಂತೆ. ಅಷ್ಟೊಂದು ಸೂಕ್ಷ್ಮ. ಅದೆಂಥ ಬಣ್ಣ, ಅದೆಂಥ ಚಲುವು.
ಸ್ವಲ್ಪ ಹೊತ್ತು ಮೈಮರೆತು ಕುಳಿತಿದ್ದ ನಾನು, ಮೆಲ್ಲನೆ ನವಿರಾಗಿ ಎದ್ದುಹೋಗಿ ಕೆಮರಾ ತಂದು ಕ್ಲಿಕ್ಕಿಸಿದೆ. ಇದೇನು ಮೆಲ್ಲನೆ ನವಿರಾಗಿ ಎದ್ದು ಹೋಗಿ ಅಂತ ಕೇಳಬಹುದು. ಕನಕಾಂಬರ ಹೂವಿನ ಮೃದುತ್ವ ನನ್ನನ್ನೂ ಅಷ್ಟೊಂದು ಆವಾಹಿಸಿಕೊಂಡುಬಿಟ್ಟಿತ್ತು.








0 Comments