ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದವ ತಟ್ಟಿದವರಾರು?

door_number142.jpg“ಡೋರ್ ನಂ. 142” ಕಾಲಂ

 

 

ಬಹುರೂಪಿ

ಬಾಗಿಲು ಬಡಿದ ಸದ್ದಾಯಿತು. ನಾಲ್ಕು ದಿನಕ್ಕೆ ಅಂತಾ ಅಮ್ಮನ ಬಳಿಗೆ ಬಂದಿದ್ದ ನಾನು ಓಡಿಹೋಗಿ ಬಾಗಿಲು ತೆಗೆದೆ. ಪಕ್ಕದ ಮನೆ ಅಜ್ಜಿ ನಿಂತಿದ್ರು. ಮೈ ಗುಬ್ಬಚ್ಚಿ ಥರಾ ಹಿಡಿ ಮಾಡ್ಕೊಂಡಿದ್ರು. ಅಮ್ಮ ಬೇಕಾಗಿತ್ತು ಅಂದ್ರು. ಆಮೇಲೆ ಅಮ್ಮ ಮತ್ತು ಅಜ್ಜಿ ನಡುವೆ ಒಂದಿಷ್ಟು ಗುಸುಗುಸು ನಡೀತು. ಅಜ್ಜಿ ವಾಪಸ್ ಹೋದ್ಮೇಲೆ ಏನಮ್ಮ ಅಂದೆ. ಮೊಮ್ಮಗನಿಗೆ ಫೀಸ್ ಕಟ್ಟೋದಕ್ಕೆ ಇವತ್ತು ಲಾಸ್ಟ್ ಡೇಟ್ ಅಂತೆ. ಸಾಲ ಕೊಡ್ತೀರಾ ಅಂತಾ ಬಂದಿದ್ರು ಅಂದ್ರು.

ಯಾಕೊ ಸಳಕ್ಕನೆ ಕಣ್ಣಲ್ಲಿ ನೀರು ಉದುರಿತು. ಇದೇ ಮನೆ. ಇದೇ ಅಮ್ಮ. ಆದ್ರೆ ಕಾಲ ಮಾತ್ರ ಒಂದಿಪ್ಪತ್ತು ವರ್ಷ ಹಿಂದೆ. ಅಣ್ಣ ಇಂಜಿನಿಯರಿಂಗ್ ಓದ್ತಾ ಇದ್ದ. ಮನೇಲಿ ಇರೋರೆಲ್ಲ ಶಾಲೆ ಕಾಲೇಜ್ನಲ್ಲಿರೋರೇ. ಅಪ್ಪನಿಗೆ ಯಮನಂಥ ಸಿಟ್ಟು. ಅಕ್ಷರ ಸಿಕ್ತಾ ಇರೋದ್ರಿಂದಾನೇ ಎಲ್ಲಾ ಪ್ರಾಬ್ಲಂ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿದ್ರು. ಮನೆ ತುಂಬಾ ಇದ್ದ ಮಕ್ಕಳಿಗೆ ಫೀಸು, ಯೂನಿಫಾರ್ಮು, ಬಸ್ ಚಾರ್ಜು, ಬುಕ್ಕು, ನೂರೆಂಟು ಖರ್ಚು. ಈ ಮಧ್ಯೆ ಅಣ್ಣನಿಗೆ ಇಂಜಿನಿಯರಿಂಗ್ ಸೀಟು.

ಒಂದು ದಿನ ಇದ್ದಕ್ಕಿದ್ದ ಹಾಗೇ ಬಚ್ಚಲ ಮನೆಗೆ ಹೋದಾಗ ಅಲ್ಲಿದ್ದ ಉರಿ ಒಲೆನೇ ಮಾಯ ಆಗಿತ್ತು. ಅದ್ರಲ್ಲಿದ್ದ ತಾಮ್ರದ ಹಂಡೆ ಆಚೆ ಬಂದು ಕೂತಿತ್ತು. ಯಾಕಪ್ಪಾ ಅಂತಾ ಯೋಚನೆ ನನಗೆ. ಮಧ್ಯಾಹ್ನ ಆದಾಗ ಅಮ್ಮ ಆ ಹಂಡೆ ಎತ್ಕೊಂಡ್ರು. ಬೀದೀಲಿ ಎಲ್ರೂ ನೋಡ್ತಾ ಇರೋವಾಗ್ಲೇ ಅದನ್ನ ಹೊತ್ಕೊಂಡು ರಸ್ತೆಯಿಂದ ಮಾಯ ಆದ್ರು. ವಾಪಸ್ ಬಂದಾಗ ಅಮ್ಮನ ಮುಖದಲ್ಲಿ ನೆಮ್ಮದಿ ಇತ್ತು. ಅಣ್ಣ ಮಾರನೇ ದಿನ ಫೀಸ್ ಕಟ್ಟಿದ್ದ.

eemane.jpg

ಯಾಕೊ ಈ ಎಲ್ಲಾ, ಎಲ್ಲಾ ನನ್ನ ಕಣ್ಮುಂದೆ ಬಿಚ್ಕೊಳ್ತಾ ಹೋಯ್ತು. ಅಜ್ಜಿ ಇದ್ದ ಮನೇನಲ್ಲಿ ಆಗ ಒಂದು ಗುಜರಾತಿ ಕುಟುಂಬ ಇತ್ತು. ಬಾಗಿಲು ಬಡಿಯೋರು ಮಾತ್ರ ಬದ್ಲಾಗಿದ್ರು. ಅಕ್ಕಿ ಬೇಕಾದ್ರೆ, ಬೇಳೆ ಬೇಕಾದ್ರೆ, ಫೀಸ್ ಗೆ ಬೇಕಾದ್ರೆ ಅಮ್ಮನ ಸವಾರಿ ಪಕ್ಕದ ಮನೆಗೆ. ಅಜ್ಜಿ ಥರಾ ಅಮ್ಮನೂ ಗುಬ್ಬಚ್ಚಿ ಆಗೋಗ್ತಿದ್ರಾ?

ಒಂದಿವ್ಸ ಇದ್ದಕ್ಕಿದ್ದ ಹಾಗೇ ನನ್ನ ಫ್ರೆಂಡ್ಸು ಬಂದ್ರು. ತಂಗಿ ಜೊತೆ ಹೋಟ್ಲಲ್ಲಿ ಉಳಿಯೋದು ಸರಿಯಲ್ಲ ಅಂತಾ ನೇರ ಮನೆಗೇ ಬಂದಿದ್ರು. ಆ ರಾತ್ರಿನಲ್ಲಿ ಮನೆಲೇನಿದೆ, ಅಡುಗೆ ಮಾಡಿ ಹಾಕೋದಕ್ಕೆ? ನಾಲ್ಕು ರಸ್ತೆ ಆಚೆ ಇದ್ದ, ಒಂದಿಷ್ಟೇ ಇಷ್ಟು ಪರಿಚಯ ಇದ್ದ ಹಿರಿಯರ ಮನೆ ಬಾಗಿಲು ತಟ್ದೆ. ಸುಳ್ಳು ಸಾವಿರ ಹೇಳಿದ್ದಾಯ್ತು. ಆದ್ರೂ ಉಹೂಂ, ಪರಿಹಾರ ಸಿಗಲಿಲ್ಲ. ಅಮ್ಮ ಮನೇಲಿದ್ದ ನುಚ್ಚನ್ನೇ ಅಷ್ಟು ಹೊತ್ತಿಗೆ ಒಟ್ಟು ಮಾಡಿದ್ರು. ಹುಣಸೆ ಹಣ್ಣನ್ನು ಕಿವುಚಿದ್ರೆ ಅದಕ್ಕೆ ಗೊಡ್ಡು ಸಾರು ಅನ್ನೋ ಹೆಸ್ರು. ಆ ದಿನ ಮನೆಗೆ ಬಂದ ಅತಿಥಿಗಳಿಗೆ ಅದೇ ಗ್ರ್ಯಾಂಡ್ ಡಿನ್ನರ್. ಅಮ್ಮನ ಮುಖದಲ್ಲಿ ಸೋಲಲ್ಲ ಅನ್ನೋ ಕೆಚ್ಚು. ನಾನು ಮಾತ್ರ ಗುಬ್ಬಚ್ಚಿ ಥರಾ. ಮಾತು, ನಡೆ, ನುಡಿ ಎಲ್ಲಾ ಕುಗ್ಗಿ ಹೋಗಿತ್ತು, ಅಕ್ಕಿ ನುಚ್ಚಿನಂತೆ.

ಸ್ಕೂಲಲ್ಲಿ ಭೂಗೋಳದ ಕ್ಲಾಸ್ ನಡೀತಿತ್ತು. ಸೂರ್ಯಗ್ರಹಣ, ಚಂದ್ರಗ್ರಹಣ ಪಾಠ ಮಾಡ್ತಿದ್ರು. ತುಂಬಾ ಒಳ್ಳೇ ಮೇಷ್ಟ್ರು. ಸ್ಟೂಡೆಂಟ್ಸಿಗೆ ಅರ್ಥ ಆಗ್ಲಿ ಅಂತಾ ಪ್ರಾಯೋಗಿಕವಾಗಿ ವಿವರಿಸ್ತಾ ಇದ್ರು. ಭೂಮಿ  ಸುತ್ತುತ್ತಾ ಇರೋವಾಗ ಹೇಗೆ ಬೆಳಕು, ಕತ್ತಲೆ ಆಗುತ್ತೆ ಅನ್ನೋದನ್ನ ವಿವರಿಸಬೇಕಾಗಿತ್ತು. ನನಗೆ ಸ್ಟೇಜ್ ಮೇಲೆ ಬರೋದಕ್ಕೆ ಹೇಳಿದ್ರು. ಭೂಮಿ ಥರಾನೇ ತಿರುಗೋಕ್ಕೆ ಹೇಳಿದ್ರು. ಎಲ್ಲಾ ಸಹಪಾಠಿಗಳ ಕಣ್ಣು ನನ್ನ ಕಡೆನೇ ಇತ್ತು. ತಿರುಗಿದೆ. ಥೇಟ್ ಭೂಮಿ ಥರಾನೇ ತಿರುಗಿದೆ. ಆದ್ರೆ ಶಾಲೆ ಮಾತ್ರ ಗಪ್ ಚಿಪ್. ನನ್ನ ಚಡ್ಡಿಯ ಹಿಂಭಾಗ ಹರಿದಿತ್ತು. ಅಮ್ಮ ಹೇಗೋ ಅದಕ್ಕೆ ತೇಪೆ ಹಚ್ಚಿದ್ರು. ಭೂಮಿ ಥರಾ ತಿರುಗ್ತಾ ತಿರುಗ್ತಾ ನಾನು ನನ್ನನ್ನೇ ಬಿಚ್ಚಿಟ್ಟುಕೊಂಡಿದ್ದೆ. ಒಂದು ಸಲ ತಿರುಗಿದ್ದಕ್ಕೇ ಬೆಳಕು ಕತ್ತಲಾಗಿ ಹೋಗಿತ್ತು.

ಸ್ಕೂಲ್ ಟ್ರಿಪ್ ಅಂದ್ರೆ ಸಂಕೋಚದ ಮುದ್ದೆ ಆಗೋಗ್ತಿದ್ವಿ. ದುಡ್ಡಿಲ್ಲ ಅಂತಾ ಗೊತ್ತಾಗುತ್ತಲ್ಲಾ ಅಂತಾ. ಶನಿವಾರ ಬರುತ್ತೆ ಅಂದ್ರೆ ಸಾಕು, ಭೂಮಿ ಬಾಯ್ಬಿಟ್ಟ ಹಾಗಾಗ್ತಿತ್ತು. ಯಾಕೆಂದ್ರೆ ಶನಿವಾರ ಕಲರ್ ಡ್ರೆಸ್ ದಿನ. ಎಲ್ರೂ ಶನಿವಾರ ಬರ್‍ಲಿ ಅಂತಾ ಕಾಯ್ತಿದ್ರು. ಮನೇನಲ್ಲಿದ್ದ ಬಣ್ಣ ಬಣ್ಣದ ಡ್ರೆಸ್ ಎಲ್ಲಾ ಆಚೆ ಬರ್ತಿತ್ತು. ಆದ್ರೆ ನಾನು ಮಾತ್ರ ಮುದುಡೋಗ್ತಿದ್ದೆ. ಕಲರ್ ಡ್ರೆಸ್ ಅಂತಾ ಹಾಕ್ಕೊಳ್ಳೋದಕ್ಕೆ ಏನಿತ್ತು ನನ್ನತ್ರ? ಶನಿವಾರಾನೂ ಯೂನಿಫಾರ್ಮನ್ನೇ ಹಾಕ್ಕೊಂಡೋಗ್ತಿದ್ದೆ. ಶಾಲೆ ಮೈದಾನದಲ್ಲಿ, ಕ್ಲಾಸ್ ರೂಮಲ್ಲಿ ಬಣ್ಣ ಬಣ್ಣದ ಡ್ರೆಸ್ ಗಳ ಮಧ್ಯೆ ವೈಟ್ ಅಂಡ್ ವೈಟ್. ಅದ್ಕೇ ಆಗ್ಲೂ ಈಗ್ಲೂ ನಾನು ಯೂನಿಫಾರ್ಮ್ ಪರ. ಅಷ್ಟೇ ಅಲ್ಲ, ಎಲ್ಲಾ ಆರು ದಿನಾನೂ ಯೂನಿಫಾರ್ಮೇ ಇರ್ಬೇಕು ಅನ್ನೋದರ ಪರ. ಯೂನಿಫಾರ್ಮ್ ನಮ್ಮನ್ನು ಮಾತ್ರ ಅಲ್ಲ, ನಮ್ಮ ಸಮಸ್ಯೆಗಳ ಮಾನಾನೂ ಕಾಪಾಡೋದು.

ಸುಳ್ಯದ ರಬ್ಬರ್ ತೋಟದಲ್ಲಿದ್ದ ಹುಡುಗಿ ಉಡುಪಿಯಲ್ಲಿ ದೊಡ್ಡ ಲಾಯರಂತೆ ಅಂತಾ ಓದಿದಾಗ, ಸೈಕ್ಲಿಂಗ್ ನಲ್ಲಿ ದೊಡ್ಡ ದೊಡ್ಡ ಪ್ರಶಸ್ತಿ ಗುಡ್ಡೆ ಹಾಕಿಕೊಂಡ ಆ ಹುಡುಗೀರ ಫೊಟೋ ನೋಡ್ದಾಗ, ಬಾಣಂತಿಯರಿಗೆ ಕ್ಯಾಲ್ಸಿಯಂ ಮಾತ್ರೆ ಅಡ್ವರ್ಟೈಸ್ ಮೆಂಟ್ ನೋಡೋವಾಗ ಯಾಕೊ ಪಕ್ಕದ್ಮನೆ ಅಜ್ಜಿ ನೆನಪಾಗ್ತಾರೆ. ಒಂದು ಕಾಲಕ್ಕೆ ಬೇರೆಯವರಿಗೆ ಪಕ್ಕದ ಮನೆಯವರಾಗಿದ್ದ ಅಮ್ಮ ನೆನಪಾಗ್ತಾರೆ.

ಬಡತನ ಅನ್ನೋದು ಕೇವಲ ಪಾತ್ರೆ ಪಗಡೀನಲ್ಲ, ಲಾಲಿ ಹಾಡನ್ನೂ ಹರಾಜು ಹಾಕ್ಬಿಡತ್ತೆ ಅಂದಿದ್ರಲ್ಲಾ ಆ ಬೊಚ್ಚು ನಗೆಯ ಅಜ್ಜ, ಅವ್ರೂ ನೆನಪಾಗ್ತಾರೆ.

“ಕಿಚನ್ ಯಾತ್ರಾ” ನಡೀತಿತ್ತು. ಅಡುಗೆ ಮನೆಗೂ ಒಂದು ಯಾತ್ರೇನಾ ಅನ್ನಿಸ್ತು. ಪೆವಿಲಿಯನ್ ನಲ್ಲಿ ಸುತ್ತು ಹಾಕ್ತಾ ಇರೋವಾಗ ಅಲ್ಲಿ ನೀರು ಕಾಯ್ಸೋ ಗೀಸರ್ ಸ್ಟಾಲು ಕೂಡ ಇತ್ತು. ಥರ ಥರಾವರಿ ಗೀಸರುಗಳು. ಬಣ್ಣ ಬಣ್ಣದ್ದು. ಯಾಕೊ ನಮ್ಮನೇಲಿ ಇತ್ತಲ್ಲ, ಆ ತಾಮ್ರದ ಹಂಡೆ, ಅದು ನೆನಪಾಯ್ತು. ಅಣ್ಣನ್ನ ಸಾಫ್ಟ್ ವೇರ್ ಜೇಂಟ್ ಆಗಿಸ್ತಲ್ಲ! ಯಸ್, ಅದೇ ಅದೇ ಆ ಹಂಡೆ ನೆನಪಾಯ್ತು.       

‍ಲೇಖಕರು avadhi

14 September, 2007

1 Comment

  1. guru

    Really Hear touching, kannanchu oddeyayitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading