ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಥೆಯ ಚುಂಗು ಕಾಲದ ಸತ್ಯವನ್ನು ಹಿಡಿದಿಟ್ಟೀತೇ?’ – ಡಾ ವಿನಯಾ

ಬಸು ಬೇವಿನಗಿಡದ ಅವರ

ಬಾಳೆಯ ಕಂಬ

-ಡಾ. ವಿನಯಾ

 

 

ಇಷ್ಟಕ್ಕೂ ಕತೆ ಯಾಕೆ ಹುಟ್ಟುತ್ತದೆ? ಎಂಬುದೊಂದು ಆದಿಮ ಕುತೂಹಲವೇ. ಸುತ್ತಲ ವಿದ್ಯಮಾನಗಳು ಮೀಟುಗೋಲಿನ ಹಾಗೆ ನಿನ್ನೆಗಳನ್ನು ಎಬ್ಬುತ್ತ ಇಂದಿನ ದರ್ದುಗಳಿಗೆ ರೂಪವನ್ನು ನಿರ್ಮಿಸಿಕೊಳ್ಳುವ ಕಲಸು ಕ್ರಿಯೆಯಲ್ಲಿ ಬಹುತೇಕ ಕತೆಗಳು ಸಂಭವಿಸುತ್ತಿವೆ. ಇಂದಿನ ರೂಹುಗಳನ್ನು ನಿನ್ನೆಯ ಕ್ಯಾನವಾಸಿನಲ್ಲಿ ಕಾಣಿಸುವ ವಿಧಾನದಲ್ಲಿ ‘ಬಾಳೆಯ ಕಂಬ’ ಸಂಕಲನದ ಕತೆಗಳಿವೆ. ಮೊದಲ ಕಥಾಸಂಕಲನ ‘ತಾಯವ್ವ’ ದಿಂದಲೇ ಉತ್ತರ ಕರ್ನಾಟಕದ ಗ್ರಾಮೀಣ ಬದುಕನ್ನು ಆ ಮೂಲಕ ತನ್ನ ಸಮುದಾಯ ಸ್ಮತಿಕೊಶವನ್ನು ಉಜ್ಜಿನೋಡುವ ಕ್ರಮವನ್ನು ಬೇವಿನಗಿಡದ ಅವರು ಬಳಸಿಕೊಂಡರು. ಗ್ರಾಮ, ನಗರ ಎಂಬ ವರ್ಗೀಕೃತ ಜೀವನ ಇಲ್ಲವಾಗುತ್ತಿರುವ ಸಂಕೀರ್ಣ ಕಾಲದಲ್ಲಿ ಗ್ರಾಮೀಣ ಎಂಬ ಪರಿಕಲ್ಪನೆ ವೈಭವೀಕರಣದ ಅಂಚಿಗೆ ಒತ್ತರಿಸುವ ಅಪಾಯ ಉಂಟಾಯಿತು. ಇಂತಹ ಪೂರ್ವಕಲ್ಪಿತಗಳನ್ನು ನಾಜೂಕಾಗಿ ಮೀರುವುದು ಇಲ್ಲಿಯ ಕತೆಗಳ ಮುಖ್ಯ ಕಾಳಜಿಗಳೊಂದು. ತಳಸಮುದಾಯಗಳು ಮತ್ತು ಮೇಲ್ ಸಮುದಾಯಗಳು ಗ್ರಾಮೀಣ ಬದುಕನ್ನು ಕಾಣುವ ಮುಖ್ಯ ವ್ಯತ್ಯಾಸವೇ ಇದು. ತಳಸಮುದಾಯದ ಸಂವೇದನೆಯು ತನ್ನ ಅನುಭವಲೋಕಕ್ಕೆ ಪ್ರಾಮಾಣಿಕವಾಗುತ್ತ ತನ್ನ ಮೇಲೆ ಆಕ್ರಮಿತವಾಗುವ ರೋಮ್ಯಾಂಟಿಕ್ ಸ್ವೀಕರಣಗಳನ್ನು ನಿರಾಕರಿಸುತ್ತದೆ. ಹಳ್ಳಿ ಅನ್ನೋದು ಭೌಗೋಳಿಕ ಗುರುತು ಮಾತ್ರವಾಗುತ್ತದೆ. ಅಲ್ಲಿ ಚಲನಶೀಲವಾಗಿರುವ ಚಿಂತನೆಗಳು ನಗರಪ್ರಜ್ಞೆಯಿಂದ ಹೊರತಾದುದಲ್ಲ ಅಲ್ಲವೇ? ಎಂಬ ಪ್ರಶ್ನೆಯನ್ನು ಇಲ್ಲಿಯ ಕತೆಗಳು ಮುನ್ನಲೆಗೆ ತರುತ್ತವೆ. ನಗರದ ಕೊಳ್ಳುಬಾಕತನ, ಬಕಾಸುರ ಪ್ರಜ್ಞೆ, ಭ್ರಷ್ಟತೆಗಳ ಪ್ರಭಾವ ಹಳ್ಳಿಗಳ ಮೇಲಾಯಿತೇ? ಅಥವಾ ಅತಿಭೋಗದ ರೋಗದ ಬೀಜಗಳು ಹಳ್ಳಿಯ ಜಮೀನ್ದಾರೀ ವ್ಯವಸ್ಥೆಯೊಳಗಿಂದಲೇ ಬೆಳೆದವಾ? ಎಂಬ ತಾತ್ವಿಕ ಪ್ರಶ್ನೆಯನ್ನಿವು ಮುಖ್ಯವಾಗಿಸುತ್ತವೆ. ಉದ್ಯೋಗಸ್ಥ ಮಧ್ಯಮವರ್ಗದ ವ್ಯಕ್ತಿಗಳು ಹಳ್ಳಿಯ ಬೇರುಗಳನ್ನು ಉಳಿಸಿಕೊಳ್ಳಲಾಗದೆ, ನಗರದಲ್ಲಿ ಬೇರೂರಲಾಗದೆ ಅನುಭವಿಸುವ ಅತಂತ್ರ ಸ್ಥಿತಿಯ ಚಿತ್ರಣಗಳಿವೆ. ನವ್ಯದ ಕತೆಗಳು ಇಂಥ ಅತಂತ್ರತೆಯ ಕಾರಣಗಳನ್ನು ನಗರ ಬದುಕಿನಲ್ಲಿ ಶೋಧಿಸಿದವು. ಆದರೆ ಇಲ್ಲಿಯ ಕತೆಗಳು ಹಳ್ಳಿಯಲ್ಲಿ ಹರಡಿರುವ ಸ್ವಾರ್ಥವಂಚನೆಯ ಮತ್ತೊಂದು ನೆಲೆಯೆಡೆಗೆ ಆಸಕ್ತವಾಗಿವೆ. ಸಮುದ್ರ ಕಸವನ್ನು ಹೊರದೂಡುವಂತೆ ಹಳ್ಳಿ ಉದ್ಯೋಗಸ್ಥನನ್ನು ಅಂಚಿಗೆ ದೂಡುವ, ನಿರಾಕರಿಸುವ ಅಮಾನವೀಯತೆ ಮತ್ತು ಇಂತಹ ವಾಸ್ತವಗಳಿಂದ ಹೊರಗುಳಿಯಲಾಗದ ಅಸಹಾಯಕತೆಗಳನ್ನು ಇಲ್ಲಿಯ ಕತೆಗಳು ಹೇಳುತ್ತವೆ. 90ರ ದಶಕದಿಂದೀಚಿನ ಕತೆಗಳು ನಗರಗಳನ್ನು ಸಮುದಾಯ ಬದುಕಿನ ಸಹನಶೀಲ ಪ್ರವೃತ್ತಿಗಳಾಗಿ ತನ್ನೆಲ್ಲ ಕುರೂಪಗಳಾಚೆಯೂ ತರಹೇವಾರಿ ಜೀವನಗಳನ್ನು ತೆಕ್ಕೆಯಲ್ಲಿಟ್ಟುಕೊಂಡು ಜೋಪಾನ ಮಾಡುವ ಮಡಿಲುಗಳಾಗಿ ನಿರ್ವಚನಗೊಳಸುತ್ತಿವೆ.

ಮತ್ತೆ ಮತ್ತೆ ನಮ್ಮ ಸಂದರ್ಭದ ಕತೆಗಳು ಹಳ್ಳಿಯನ್ನು ಹೊಕ್ಕಾಡುವುದಕ್ಕೆ ಇನ್ನೊಂದು ಕಾರಣವೂ ಇದ್ದಂತಿದೆ. ಜಾಗತೀಕರಣ ಮತ್ತು ಅದರ ಸಹೋತ್ಪನ್ನಗಳ ದಮನ ತಂತ್ರವು ಹೆಚ್ಚು ಛಿದ್ರಗೊಳಿಸುತ್ತಿದ್ದುದು ಹಳ್ಳಿಯ ದುರ್ಬಲ ಸಮೂಹವನ್ನು ಅವರ ಬದುಕುಗಳ ಛಿದ್ರತೆಯ ಮೂಲಕವೇ ಗ್ಲೋಬಲ್ ಎಕಾನಮಿ ಉಂಟುಮಾಡುತ್ತಿರುವ ಅವಾಂತರಗಳನ್ನು ಕಾಣಿಸುವುದು ಸಾಧ್ಯ. ‘ಬಾಳೆಯ ಕಂಬ’ ಕತೆಯ ಕಮಲವ್ವ ಮತ್ತು ಅವಳ ಬದುಕಿಗೆ ಪಿರಿಪಿರಿಯಾಗಿರುವ ಅತ್ತೆ ಇಬ್ಬರ ದೃಷ್ಟಿಕೋನಗಳು ಒಂದೇ ಆಗಿರುವುದು; ಇಬ್ಬರೂ ಸೇರಿಯೇ ಎಲ್ಲವನ್ನೂ ಮಾರಿಕೊಳ್ಳಲು ಸಿದ್ಧವಾಗಿ ನಿಂತ ಮನೆಯ ಯಜಮಾನನನ್ನು ಅವನ ಶೋಕಿದಾರಿಕೆಯು ತಮ್ಮ ಬದುಕಿನ ಕಡೆಯ ಆಧಾರವನ್ನೂ ಕಸಿದುಕೊಳ್ಳುವುದನ್ನು ಎದುರಿಸುವ ಪರಿಯೇ ಕೊಳ್ಳುಬಾಕತನಕ್ಕೆ ಹೆಣ್ಣಿನ ಸಂಗೋಪನಾ ಶಕ್ತಿಯು ಎದುರಾಗಬೇಕಾದ ಆಶಾವಾದವನ್ನು ಹೇಳುತ್ತದೆ.

‘ಬಾಳೆಯ ಕಂಬ’ ಸಂಕಲನ ಇನ್ನೊಂದು ಕಾರಣಕ್ಕಾಗಿಯೂ ಮುಖ್ಯವಾಗುತ್ತದೆ. ಇಪ್ಪತ್ತೊಂದನೇ ಶತಮಾನದ ಈ ಮೊದಲ ದಶಕ ಚಳವಳಿಗಳಿಲ್ಲದ ಕಾಲ ಎಂಬ ಐಡೆಂಟಿಟಿಗೆ ಒಳಗಾಗಿದೆ. ಸ್ತ್ರೀವಾದವನ್ನು ಕ್ಲೀಷೆ ಎಂದು ಕೇಳಿಸಲಾಗುತ್ತಿದೆ. ಆರೋಪವಿದೆ. ತಾತ್ವಿಕ ಬದ್ಧತೆಯಿಂದ ಲೇಖಕ ಹೊರಗುಳಿಯುವುದೇ ನಿಜವಾದ ಸಂವೇದನಾಶೀಲತೆ ಎಂಬ ಸುಳ್ಳು ಮತ್ತೆ ಮತ್ತೆ ಪ್ರಸ್ತಾಪಗೊಳ್ಳುತ್ತ ಸತ್ಯದ ಪೋಷಾಕನ್ನು ತೊಡಿಸಲಾಗುತ್ತಿದೆ. ಸ್ತ್ರೀವಾದವನ್ನು ಕನ್ನಡದ ಪ್ರಧಾನಕಥನ ಪರಂಪರೆ ಆರಂಭದಲ್ಲಿ ಕರುಣೆಯಿಂದ, ಸಹನೆಯಿಂದ, ಗುಮಾನಿಯಿಂದ ನೋಡುತ್ತ ಬಂದಿತ್ತು. ‘ಕವಲು’ ಎಂಬ ಗದ್ಯ ಸ್ತ್ರೀವಾದವನ್ನು ಭವ್ಯ ಭಾರತೀಯ ಸಂಸ್ಕೃತಿಗೆ ಎಸಗುತ್ತಿರೋ ವಿದ್ರೋಹ ಎಂದು ವ್ಯಾಖ್ಯಾನಿಸುವುದಕ್ಕೂ ಬಂಡವಾಳವಾದ ಹೆಣ್ಣನ್ನು ಭೋಗದ ಸರಕು ಎಂದು ವಿವರಿಸಿಕೊಳ್ಳುವುದಕ್ಕೂ ಗಾಢವಾದ ಸಂಬಂಧವಿದೆ. ಹೆಣ್ಣನ್ನು ವಸ್ತುಮೌಲ್ಯಕ್ಕೆ ಹೊರಳಿಸುತ್ತಿರುವ ಈ ಕಾಲದಲ್ಲಿ ಕನ್ನಡ ಕಥನ ಸಾಹಿತ್ಯ ಹೆಣ್ಣನ್ನು ಹೆಣ್ಣಾಗಿ ವ್ಯಕ್ತಿಪ್ರಜ್ಞೆಯಿಂದ ನೋಡುವ ವಿವೇಕವನ್ನು ದರ್ಶಿಸಿದೆ. ‘ಬಾಳೆಯ ಕಂಬ’ ಸಂಕಲನ ಅಂತಹ ಮುಖ್ಯ ಗುರುತಾಗಿದೆ. ಇಲ್ಲಿ ಹೆಣ್ಣು ಬದುಕನ್ನು ಕಾಣಿಸುವ ನೋಟವಾಗುತ್ತಾಳೆ.

ಲೂಟಿಕೋರ ಜಗತ್ತಿನ ಬಿಕನೇಸಿ ಬಾಳಿನಲ್ಲಿ ‘ಬೆಳಕಿನ ಚಿಗುರ ಚಿವುಟಿ’ ಕತೆಯ ಮುದುಕಿ ಬಸಮ್ಮನ ಉಪವಾಸ-ಮುಷ್ಕರಗಳು ಆರಂಭವಾಗುತ್ತವೆ. ಈ ದೈನೇಸಿ ಜೀವಗಳು ಬಡಿದಾಡಬೇಕಾಗಿದ್ದು ತಮ್ಮದೇ ಗಂಡ, ಮಗ ಮತ್ತು ಅವರು ಆದಾಗಲೇ ಸೇರಿ ಹೋಗಿರುವ ಹರಾಮಿ ವ್ಯವಸ್ಥೆಯ ವಿರುದ್ಧ. ನವಪುರುಷಶಾಹಿ ನಿಲುವುಗಳು ಹೆಣ್ಣಿನ ಮೇಲೆಸಗುವ ಹಿಂಸಾರತಿಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿದಂತೆ ಹೆಣ್ಣಿನ ಹೋರಾಟದ ಸಂಕಥನಗಳೂ ಬೆಳೆಯಲೇಬೇಕಾದ ಅನಿವಾರ್ಯತೆಯನ್ನಿವು ಸೂಚಿಸುತ್ತಿವೆ. ಹೆಣ್ಣನ್ನು ಕುರಿತು ಪೂರ್ವಕಲ್ಪಿತಗಳನ್ನು, ಸ್ತ್ರೀವಾದ ಕುರಿತ ಪೂರ್ವಗ್ರಹಗಳನ್ನು ಮುತುವಜರ್ಿಯಿಂದ ಮೀರುವಲ್ಲಿ ಇಲ್ಲಿಯ ಕತೆಗಳು ಆಸಕ್ತವಾಗಿವೆ. ಆ ಕಾರಣಕ್ಕಾಗಿಯೇ ಅವು ಸ್ತ್ರೀ ಸಂವೇದನೆಯ ಅನುಭೂತಿಯಾಗುತ್ತವೆ. ‘ನುಡಿಯಲಾರದ ಗಿಲಗಂಚಿ’ ಕತೆಯ ಯಮುನವ್ವ ಅಕಾರಣವಾಗಿ ಹರಲಿಯನ್ನು ಹೊರಬೇಕಾಗುವುದು ಮತ್ತು ತಾಯಿ, ಗಂಡ ಎರಡೂ ಹತ್ತಿರದ ಜೀವಗಳು ಅವಳ ಸಂಕಟವನ್ನು ಅರ್ಥೈಸಿಕೊಳ್ಳದಿರುವುದು ಅವಳು ಯಾರನ್ನೂ ಗುರುತು ಹಿಡಿಯದಂತೆ ಮಾಡಿಬಿಡುತ್ತದೆ. ಇಂತಹ ಭಾವನಾತ್ಮಕ ಹಲ್ಲೆಯಿಂದ ಕಲ್ಲಾಗುವ ಯಮುನವ್ವಳಿಗೆ ಮಾಸ್ತರರು ಮತ್ತು ಮಠದ ಸ್ವಾಮಿಗಳು ಅವಳ ಜೀವನದ ಕಂದೀಲು ಆರದಂತೆ ಕಾಪಿಡುತ್ತಾರೆ.

ಈ ಕತೆ ನನ್ನ ಬಾಲ್ಯದಲ್ಲಿ ಕೇಳಿ ಅರಗಿಸಿಕೊಂಡಿದ್ದ ಪುಟ್ಟ ಕತೆಯೊಂದನ್ನು ತಟ್ಟನೆ ಮೇಲಕ್ಕೆತ್ತಿದ್ದು ಅಚ್ಚರಿಯೆನಿಸಿತ್ತು. ಒಂದಾನೊಂದು ಊರಲ್ಲಿ ಒಬ್ಬ ಹೆಂಗಸು ಹೊಳೆಗೆ ನೆಗಸ ಬಂದಾಗ ತನ್ನ ಮಗನನ್ನು, ತಮ್ಮನನ್ನು ಕರೆದುಕೊಂಡು ಹೊಳೆದಾಟೋ ಪ್ರಸಂಗ ಬರುತ್ತದೆ. ಪಾತಿದೋಣಿ ಹೊಳೆಯ ನಡೂ ಬಂದಾಗ ಯಾರಾದರೊಬ್ಬರನ್ನ ಹೊಳೆಗೆ ಒಗೆಯದಿದ್ದರೆ ಗತ್ಯಂತರವಿರೋದಿಲ್ಲ. ಅವಳು ಮಗನನ್ನು ಒಗೀತಾಳೆ. ತಮ್ಮನನ್ನೂ ಉಳಿಸಿಕೊಳ್ಳುತ್ತಾಳೆ. ಈ ಕತೆಯನ್ನು ತಮ್ಮನಿಗೆ ಅಕ್ಕನಾಗಿದ್ದ ನನಗೆ ಕೇಳಿಸಿದ್ದ ವ್ಯವಸ್ಥೆಯ ಜಾಣ್ಮೆಯ ಬಗ್ಗೆ ಈಗಲೂ ಭಯವಾಗುತ್ತದೆ. ಕಥೆಯೊಂದು ನಮ್ಮದೇ ಅನುಭವಗಳೊಂದಿಗೆ ಸಂವೇದನೆಗಳೊಂದಿಗೆ ಮುಖಾಮುಖಿಯಾಗುವುದು ಅದರ ಇತ್ಯಾತ್ಮಕ ಗುಣ ಎಂದೇ ನಾನು ಭಾವಿಸುತ್ತೇನೆ. ಹೆಣ್ಣಿನ ಸಂವೇದನೆಯ ಸಹನೆಯಾದಂಥ ಇಲ್ಲಿಯ ಕತೆಗಳು ಆಪ್ತವೆನಿಸುತ್ತವೆ.

‘ಕಥೆಯ ಒಂದು ಚುಂಗು ಇಡೀ ಕಾಲದ ಸತ್ಯವನ್ನು ಆಕ್ರಮಿತ ಸ್ವರೂಪದಲ್ಲಿ ಹಿಡಿದಿಟ್ಟೀತೇ?’ ಎಂಬ ನಮ್ಮ ತಲೆಮಾರಿನ ಎಲ್ಲ ಕಥೆಗಾರರೂ ಎದುರಿಸಬೇಕಾದ ಪ್ರಶ್ನೆಗೆ ಇಲ್ಲಿಯ ಕಥೆಗಳೂ ಹೊರತಾಗಿಲ್ಲ.

‍ಲೇಖಕರು G

8 December, 2012

1 Comment

  1. basu bevinagidad

    many many thanks to dr vinaya and ‘avadhi’
    -dr basu bevinagidad

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading