ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿ..

ಕುಸುಮ ಪಟೇಲ್

ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿದ್ದ. ಪರಿಣಿತರ ಮಾತಿನಂತೆ ಆ ಒಂದು ಚಿನ್ನದ ಗೆರೆಯ ಹುಡುಕಾಟದಲ್ಲಿ.. ಅದೇ ಕಥಾ ವಸ್ತುವಾದೀತು ಎಂಬ ಆಸೆ ಆತನಿಗೆ. ಮೇಜಿನ ಮೇಲೆ ಆತ ಯಾವಾಗಲೂ ಬಳಸುತ್ತಿದ್ದ ಪೆನ್ಸಿಲ್ ಮುಸುಕು ಹಾಕಿ ಮಲಗಿತ್ತು. ಅವನ ಬರವಣಿಗೆಯ ಪಯಣ ಶುರುವಾದದ್ದೇ ಅದರೊಂದಿಗೆ. ಅದರ ಮತ್ತು ಆತನ ಯೋಚನಾಲಹರಿಯ ವೇಗದಲ್ಲಿ ಎಂತಹ ಹೊಂದಾಣಿಕೆಯಿತ್ತು!! ಈ ವಿಷಯವಾಗಿ ಅವನನ್ನು ಎಲ್ಲರೂ ಹಾಸ್ಯ ಮಾಡಿದ್ದೇ ಮಾಡಿದ್ದು. ಅವನನ್ನು ಶಿಲಾ ಯುಗದ ಅಪರೂಪದ ಪ್ರಾಣಿಯೆಂದು ರೇಗಿಸಿದ್ದೂ ಉಂಟು. ಲ್ಯಾಪ್ ಟಾಪ್ ಬಂದ ನಂತರ ಅದರ ಬಳಕೆ ಅಷ್ಟಾಗಿ ಇಲ್ಲ. ಆದರೂ ಅದು ಒಂದು ರೀತಿ ಮೊದಲ ಪ್ರೀತಿಯ ತರಹ… ಮನಸ್ಸಿಗೆ ಆಪ್ತವಾದದ್ದು.. ಆತ ಅದನ್ನು ಮೆಲ್ಲಗೆ ಪ್ರೀತಿಯಿಂದ ಎತ್ತಿಕೊಂಡ…ತನ್ನನ್ನು ಮತ್ತೆ ಬಳಸುತ್ತಾನೆ ಎಂಬ ಖುಷಿಯಲ್ಲಿ ಅದರ ಮುಖದ ತುಂಬಾ ಸಂತಸ ಹರಡಿತು.

ಮತ್ತೆ ಕೆಳಗಿಟ್ಟಾಗ ಅಷ್ಟೇ ವೇಗದಲ್ಲಿ ಅದರ ಮುಖ ಜೋತು ಬಿದ್ದಿತ್ತು….” ನಾ ಅಂದ್ರೆ ಎಷ್ಟು ಅಸಡ್ಡೆ ಅಲಾ ನಿಂಗೆ…ಹೊಸ ನೀರು ಬಂದು ಹಳೆದು ಕೊಚ್ಕೊಂಡ್ ಹೋಯ್ತು ಅಂತಾರಲಾ ಹಾಗೆ …ನಿನಗೆ ಇವಾಗ ಲ್ಯಾಪ್ ಟಾಪೇ ಆಗ್ಬೇಕು ಅಲ್ವ..ಹಾಗಾದ್ರೆ ನನಗೇನ್ ಕೆಲ್ಸ ನನ್ನ ಕಳ್ಸ್ ಬಿಡು” ಎಂದಾಗ ಕಥೆಗಾರನಿಗೆ ನಗು  ತಡೆಯಲಾಗಲಿಲ್ಲ. “ಲ್ಯಾಪ್ ಟಾಪ್ ಕಂಡ್ರೆ ನಿಂಗ್ಯಾಕಷ್ಟು ಹೊಟ್ಟೆ ಕಿಚ್ಚು…ಎಷ್ಟು ಪೊಸ್ಸೆಸ್ಸೀವ್ ಗೊತ್ತಾ ನೀನು, ಎಲ್ಲಾ ಪ್ರೇಮಿಗಳನ್ನೂ ಮೀರಿಸ್ತಿಯ …ಅದಿರ್ಲಿ ನಿಂಗೆ ಈಗೇನ್ ಕಷ್ಟ ಹೇಳು, ನಿಂಗೆ ಯಾವುದಕ್ಕೆ ಕಮ್ಮಿ ಇದೆ ಹೇಳು?? ನಿನ್ ಕಂಡ್ರೆ ನಂಗೆ ಯಾವಾಗಲೂ ಇಷ್ಟಾನೆ, ಈಗ ಹೊಸದಾಗಿ ಟೈಪಿಂಗ್ ಕಲ್ತಿದಿನಲಾ ಅದಕ್ಕೆ ಹೀಗೆ, ನೀನು ಸ್ವಲ್ಪ ದಿನ ರೆಸ್ಟ್ ತಗೋ….” ಮಾತು ಮುಗಿಸುವಷ್ಟರಲ್ಲಿ ಯಾರೋ ಬಂದು ನಿಂತಂತಾಯಿತು,”ಯಾರು” ಎಂದದ್ದಕ್ಕೆ” ನಾನು ಸ್ವಾಮಿ” ಎಂದ ಆತ .”ಯಾರ್ ನೀವು, ನಾ ನೋಡೇ ಇಲ್ಲ. ನೀವು ಹೇಗೆ ಒಳಗೆ ಬಂದ್ರಿ.. ಬಾಗ್ಲು ಹಾಕಿತ್ತಲ್ಲಾ” ಕೊಂಚ ಗಾಬರಿಯಿಂದ ಕೇಳಿದ ಕಥೆಗಾರ.

ವ್ಯಕ್ತಿ ಸಣ್ಣಗೆ ನಕ್ಕಿತು..”ಅದೆಲ್ಲಾ ಇರ್ಲಿ ಸ್ವಾಮಿ ನೀವ್ ಕಥೆ ಬರೀತಿರಂತೆ. ಅದರ ಬಗ್ಗೇನೇ ಮಾತಾಡಮಾ ಅಂತ ಬಂದಿದ್ದು… ಯಾವ್ ಕಥೆ ಬರೀತಿರಾ ಬುದ್ಧಿ… ನಾ ಹೇಳ್ತೀನಿ ಕೇಳಿ ನಮ್ ದೇಶದಲ್ಲಿ ಖಾಕಿ, ಕಾವಿ, ಖಾದಿದೆ ಖದರ್. ನಿಜ ಹೇಳ್ಬೇಕಂದ್ರೆ ಪ್ರಪಂಚ ನಿಂತಿರಾದೆ ದುಡ್ಡಿನ್ ಮ್ಯಾಗ್ ನೋಡಿ..ನೀವು ಅದರ ಮ್ಯಾಗೇ ಕಥೆ ಬರೀರಿ. ಕೈಲಾಸಂ ಅಂತ ಇದ್ರು ಗೊತ್ತಾ ನಿಮ್ಗೆ.. ಹೆಂಗ್ ಬರೀತಿದ್ರು ಸಾಮಿ, ಸತ್ಯದ ತಲೆ ಮೇಲೆ ಹೊಡದಂಗೆ, ನಂಗು ಬರಿಯೋ ಆಸೆ ಅದ್ಕೆ ಅವ್ರಂಗೆ ಎಣ್ಣೆ ಹೊಯ್ಕಂತೀನಿ, ಆದ್ರೆ ಒಂದ್ ಅಕ್ಷರಾನೂ ಬರಿಯಾಕಾಗೊಲ್ವೆ.. ಏನ್ ಮಾಡಾನ ಹೇಳಿ. ಸತ್ಯ ಹುಡುಕ್ತಾ ಇದೀನಿ ಸಾಮಿ, ಸಿಗಾಕೆ ಒಲ್ದು, ಶಾನೆ ಬೇಸ್ರಾ ನೋಡಿ, ನೀವು ಮಾತ್ರ ದಿವಿನಾಗಿ ಬರೀರಿ” ಎಂದು ಹೇಳುತ್ತಲೇ ಗೊಳೋ ಎಂದು ಅಳಲು ಪ್ರಾರಂಭಿಸಿದ. ಅವನನ್ನು ಸಮಾಧಾನ ಮಾಡುವುದರಲ್ಲಿ ಸಾಕು ಬೇಕಾಯ್ತು ಕಥೆಗಾರನಿಗೆ. ಅವನನ್ನು ಕಳುಹಿಸಿ ಕಿಟಕಿ, ಬಾಗಿಲು ಭದ್ರ ಪಡಿಸಿದ ಆತ. ಸಧ್ಯ ಇನ್ನು ಆರಾಮ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟ.

ಆ ಸಮಾಧಾನ ಬಹಳ ಕಾಲ ನಿಲ್ಲಲಿಲ್ಲ. “ ಯಾರಯ್ಯಾ ನೀನು, ಸನ್ಯಾಸ, ವೈರಾಗ್ಯದ ಮೇಲೆ ಬರಿತೀಯಂತೆ, ಏನ್ ಗೊತ್ತು ನಿನಗೆ ಅದರ ಬಗ್ಗೆ. ಗೊತ್ತಿಲ್ವಾ ನಿಂಗೆ ಋಷಿ ಮೂಲ, ನದಿ ಮೂಲ ಹುಡುಕಬಾರದು ಅಂತ. ಏನ್ ಹೇಳ್ಬೇಕು ಅಂತ ಇದ್ದೀಯ? ಕಥೆಗಾರ ಗಾಬರಿಯಿಂದ ದನಿ ಬಂದ ಕಡೆ ತಿರುಗಿದ. ತಾನು ಎಂದೂ ನೋಡದ ಪಾತ್ರವದು. ಕಾವಿ ತೊಟ್ಟ ಒಂದು ವ್ಯಕ್ತಿ ಆತನ ಎದುರು ನಿಂತಿತ್ತು. “ಕ್ಷಮಿಸಿ, ನಂಗೆ ಬರೆಯೋ ಹುಚ್ಚು, ಪದಗಳ ಮೋಹ …ಬರಿಯೋದು ಸತ್ಯಕ್ಕೆ ಹತ್ತಿರವಾಗಿರಲಿ ಅನ್ನೋ ಒಂದು ಆಸೆ… ಇದು ಪ್ರಪಂಚವನ್ನು ನಾನು ಕಾಣುವ ಒಂದು ಚಿತ್ರಣ ಅಷ್ಟೆ. ಅಭಿಪ್ರಾಯಗಳು ಬೇರೆ ಇರಬಹುದಲ್ಲಾ. ನನ್ನದೊಂದು ಪ್ರಶ್ನೆಯಿದೆ… ಕಾವಿ ತೊಟ್ಟವರೆಲ್ಲಾ ವಿರಾಗಿಗಳೇ?”….”ಹೆಚ್ಚು ತಲೆಹರಟೆ ಬೇಡ, ನೀನು ಏನ್ ಬರೀತಿಯ ಅದರ ಬಗ್ಗೆ ಸ್ವಲ್ಪ ಎಚ್ಚರ ಇರ್ಲಿ” –ಎಚ್ಚರಿಕೆ ನೀಡಿ ವ್ಯಕ್ತಿ ಮಾಯವಾಯಿತು. ಏನಾಗುತ್ತಿದೆ ಎಂದು ತಿಳಿಯದೆ ಕಥೆಗಾರ ಗೊಂದಲಕ್ಕೊಳಗಾದ. ಯಾರೋ ತನ್ನ ತಲೆಯೊಳಗೆ ಕೈ ಹಾಕಿ ಒಂದೊಂದೇ ಪಾತ್ರವನ್ನು ಆಚೆ ಎಳೆದು ಬಿಟ್ಟಂತೆ ಭಾಸವಾಗುತ್ತಿತ್ತು.

ಹಾಗೇ ಕಣ್ಣು ಮುಚ್ಚಿ ಕುಳಿತವನಿಗೆ ಒಂದು ಹೆಣ್ಣು ದನಿ ಕೂಗಿ ಕರೆದಂತಾಯಿತು.” ನೀವು ಬರೀತಿರಾ ಸರಿ, ಆದ್ರೆ ನೀವು ಹೀಗೆ ಪರಕಾಯ ಪ್ರವೇಶ ಮಾಡಿ ಇನ್ನೊಬ್ಬರ ಅಂತರಂಗದ ಮಾತುಗಳನ್ನು ಹೀಗೆ ಬಿಚ್ಚಿ ಎಳೆ ಎಳೆಯಾಗಿ ಹರಡುವುದೆಂದರೆ ಏನು? ಯಾರು ನಿಮಗೆ ಆ ಸ್ವಾತಂತ್ರ ಕೊಟ್ಟವರು. ಒಂದು ರೀತಿಯ ಉದ್ಧಟತನವಲ್ಲವೇ ಇದು?” …

ಕಥೆಗಾರ: “ಅದು ಹೇಗೆ, ಇದು ನನಗೆ ಬರಹಗಾರನಿಗಿರುವ ಸ್ವಾತಂತ್ರ, ಇದರಿಂದ ನಿಮಗೆ ಬೇಸರವೇಕೋ ತಿಳಿಯುತ್ತಿಲ್ಲ” .. ಈ ಮಾತಿಗೆ ಧ್ವನಿ ಉತ್ತರಿಸಿತು ”ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಆದರೆ ಅರ್ಥ ಮಾಡಿಕೊಳ್ಳುವ ಸೂಕ್ಶ್ಮತೆ ನಿಮಗಿರಬೇಕು. ಕೊಳೆ ಬಟ್ಟೆಯನ್ನು ಯಾರಾದರೂ ಸಾರ್ವಜನಿಕವಾಗಿ ಒಗಿತಾರೆಯೇ?” ಕಥೆಗಾರ ಸುಮ್ಮನಿದ್ದ ಏನು ಹೇಳುವುದೆಂದು ಅರ್ಥವಾಗದೆ….

ಯಾರೋ ಬಾಗಿಲು ಬಡಿದಂತಾಯಿತು. ಕ್ಷಣಾರ್ಧದಲ್ಲಿ  ವ್ಯಕ್ತಿಯೊಬ್ಬ ಮುಂದೆ ನಿಂತಿದ್ದ. ಒಂದು ಚೀಟಿಯನ್ನು ಮುಂದೆ ಚಾಚಿ “ನಿಮಗೆ ಒಂದು ಅರೆಸ್ಟ್ ವಾರಂಟ್ ಇದೆ ಹೊರಡಿ” ಎಂದಾಗ ಕಥೆಗಾರ ನಿಜಕ್ಕೂ ಗಾಬರಿಯಾದ. “ನಾನೇನು ಮಾಡಿಲ್ವಲ್ಲ, ಏನೂ ಗೊತ್ತಾಗ್ತ್ಹಿಲ್ವೆ” ಎಂದು ತಡಬಡಾಯಿಸಿದ. “ ಹೊರಡಿ ಬೇಗ, ಬೇಗ ನಾ ಹೇಳ್ತಾ ಇದಿನಲ್ಲ, ನಿಮ್ ಮೊಬೈಲ್  ಕೊಡಿ ಇಲ್ಲಿ “ ಎಂದು ಫೋನ್ ಕಸಿದುಕೊಂಡ. “ನಮ್ಮ ವಕೀಲರಿಗೆ ಸ್ವಲ್ಪ ಮಾತಾಡ್ ಬಿಡ್ತೀನಿ, ನೀವು  ಯಾರು ಅಂತಲೇ ಗೊತ್ತಾಗ್ತಿಲ್ಲ” ಎಂದದ್ದಕ್ಕೆ ..”ನಾಯೇನ್ ಕಥೆ ಹೇಳ್ತಾ ಇದೀನ.. ಕೋರ್ಟ್ ನಿಂದ ಬಂದಿರಾದು ಹೊರಡಿ ಬೇಗ ಎಂದು ದರ್ಪ ಚಲಾಯಿಸಿದ”. ಮುಂದೆ ಕಣ್ಣು ಬಿಟ್ಟಾಗ ಆತ ಕೋರ್ಟ್ ನ ಹಾಲ್ ಒಂದರಲ್ಲಿದ್ದ. ಕೋರ್ಟ್ ಪ್ರಾರಂಭವಾಗಲು ಇನ್ನೂ ಸಮಯವಿತ್ತು. ಕರಿ ಕೋಟ್ ತೊಟ್ಟ ವಕೀಲರುಗಳು ಮೇಲೆ ಕೆಳಗೆ ಓಡಾಡುತ್ತಿದ್ದರು. ಗೋಡೆಯ ಮೇಲೆ ಗಾಂಧಿ ತಾತನ ಫೋಟೋ ಹಾಕಲಾಗಿತ್ತು. ಕೊಂಚ ಹೊತ್ತಿನಲ್ಲಿ ನ್ಯಾಯಾಧೀಶರ ಆಗಮನವಾಯಿತು. ಅವರು ಬಂದಾಗ ಎಲ್ಲರೂ ಎದ್ದು ನಿಂತರು. ಅವರು ಎಲ್ಲರಿಗು ನಮಸ್ಕರಿಸಿ ಆಸೀನನಾದರು. ಕೇಸ್ ನಂಬರ್ ಗಳನ್ನು ಒಂದಾದ ಮೇಲೆ ಒಂದರಂತೆ ಕರೆಯಲಾಯಿತು. ಈತನ ಹೆಸರು ಬಂದಾಗ ಪಿಸಿ ಆತನನ್ನು ಕೊಂಡೊಯ್ದು ನ್ಯಾಯಾಧೀಶರ ಮುಂದೆ ನಿಲ್ಲಿಸಿದ. ಕಥೆಗಾರನಿಗೆ ಏನಾಗುತ್ತಿದೆ ಎಂದು ಗಾಬರಿಯಾಯಿತು…. ಪ್ರಶ್ನಾವಳಿ ಶುರುವಾಯಿತು…” ನೀವು ನಮ್ಮ ಕಾರ್ಯ ವೈಖರಿಯ ಬಗ್ಗೆ ಎಲ್ಲಾ ಬರೀತಿರಾ ಅಂತ ದೂರು ಬಂದಿದೆ ಹೌದಾ”… “ ಸ್ವಾಮೀ ನಾನು ಕಥೆಗಾರ ನನಗೆ ಕಂಡದ್ದನ್ನು, ಸತ್ಯ ಅನಿಸಿದ್ದನ್ನು ಪ್ರಪಂಚಕ್ಕೆ ಪರಿಚಯಿಸುವುದು ನನ್ನ ಕೆಲಸ, ನ್ಯಾಯಾಂಗದ್ದು ಸತ್ಯ ಮತ್ತು ನ್ಯಾಯದ ಪರಿಪಾಲನೆ ಆಲ್ವಾ ಸ್ವಾಮೀ, ನಾನು ಅದನ್ನೇ ಮಾಡಿದ್ದೇನೆ ಅಷ್ಟೇ” …. “ಅಷ್ಟೆ ಆದ್ರೆ ಸರಿ, ಸಾಮಾನ್ಯವಾಗಿ ಅಸಮರ್ಥ ವಕೀಲರು ನ್ಯಾಯಾಧೀಶರಾಗುತ್ತಾರೆ ಅಂತೆಲ್ಲಾ ಬರಿತೀರ ಅಂತ ನಿಮ್ಮ ಮೇಲೆ ದೂರು ಇದೆ, ಹುಷಾರಾಗಿರಿ ನಮ್ಮ ವ್ಯವಸ್ಥೆ ಒಳಗೆಲ್ಲ ಕೈ ಹಾಕೋಕೆ ಹೋಗಬೇಡಿ ….ನ್ಯಾಯಾಂಗ ನಿಂದನೆ ಆಗುತ್ತೆ…ನಿಮ್ ವಕೀಲರೆಲ್ಲಿ..ಅವರೂ ಇಲ್ವಾ, ನಿಮ್ಗ್ಯಾಕ್ರಿ ಈ ತಲೆ ಹರಟೆ..ಈ ಸರಿ ವಾರ್ನ್ ಮಾಡಿ ಬಿಡ್ತಾ ಇದೀನಿ ಡೋಂಟ್ ರಿಪೀಟ್” ಎಂದು ಹೇಳಿದ ಮೇಲೆ ಕಥೆಗಾರ ಅವರಿಗೆ ನಮಸ್ಕರಿಸಿ ಆಚೆ ಬಂದ. ತಲೆ ಧಿಮಿಗುಟ್ಟುತ್ತಿತ್ತು. ಅವನನ್ನು ಕರೆದುಕೊಂಡು ಬಂದ ಪಿಸಿ ಅವನು ಏನಾರು ಕೊಟ್ಟಾನೇನೋ ಎಂದು ನೋಡುತ್ತಿದ್ದ. ಏನು ಗಿಟ್ಟುವುದಿಲ್ಲವೆಂದು ಗೊತ್ತಾದ ಮೇಲೆ ಮುಖ ತಿರುಗಿಸಿ ಹೊರಟು ಹೋದ. ಇದೆಲ್ಲಾ ಯಾಕಾಗುತ್ತಿದೆ ಎಂಬ ಗೊಂದಲದಲ್ಲಿದ್ದ ಕಥೆಗಾರ ಹಾಗೆಯೇ ಮನೆಯ ಕಡೆ ಹೆಜ್ಜೆ ಹಾಕಿದ. ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ಆತನೊಡನೆ ಮಾತಾನಾಡಲು ಪ್ರಯತ್ನಿಸುತ್ತಿದ್ದ. ಆಗಲೇ ಪೋಲೀಸಪ್ಪನ ದನಿ ಕೇಳಿದ್ದು… “ ಆಯ್ತಾ ಹಿಯರಿಂಗು, ಕೇಸ್ ಏನಾಯ್ತು?” 

ಆತ:”ಏನೂ ಇಲ್ಲ ಮುಂದಕ್ಕೆ ಹೋಗಿದೆ” 

ಪೋಲೀಸ್:” ಟೀಗೆ ಕಾಸ್ ಇಟ್ಟಿದಿಯಾ”…” “ಇಲ್ಲ”ವೆಂದು ತಲೆಯಾಡಿಸಿದ ಆ ವ್ಯಕ್ತಿ. 

ಪೋಲೀಸ್: “ನಿಮ್ ಯೋಗ್ಯತೆಗೆ ಅದೇ ಸರಿ ಬಿಡು, ಹಿಂಗೆ ಅಲೀತಾನೆ ಇರು…” ಎಂದು ಹೇಳಿ ಹೊರಟು ಹೋದ. 

ಕಥೆಗಾರ ಇದನ್ನೆಲ್ಲಾ ಗಮನಿಸುತ್ತಲೇ ಇದ್ದ .ಆತ ಸುಮಾರು 40-50 ವಯಸ್ಸಿನ ನಡುವಣ ವಯೋಮಾನದವನು. ಕೊಂಚ ಸಪೂರವಾಗಿ, ಎತ್ತರವಾಗಿದ್ದ ಆತ ಬಳಲಿದಂತೆ ಕಾಣುತ್ತಿದ್ದ. ಕೈಯಲ್ಲಿ ಒಂದು ಕೈ ಚೀಲವಿತ್ತು. ಅದರಲ್ಲಿ ಕೇಸಿಗೆ ಸಂಬಂಧಿಸಿದ ಕೆಲ ಚೀಟಿಗಳಿದ್ದವು. ಪೋಲೀಸಪ್ಪ ಅತ್ತ ಹೋದ ಮೇಲೆ ಆತ ಕಥೆಗಾರನ ಬಳಿಗೆ ಧಾವಿಸಿದ…”ಸಾರ್, ನನ್ನ ಕಥೆ ಬರೀತಿರಾ” ಎಂದಾಗ ಕಥೆಗಾರ ಸುಮ್ಮನೆ ನೋಡಿದ, ಏನಿರಬಹುದು ಇವನ ಕಥೆ ಎಂದು ಯೋಚಿಸುತ್ತ… ಆತ ಮಾತನಾಡುತ್ತಾ ಕಥೆಗಾರನ ಜೊತೆ ಹೆಜ್ಜೆ ಹಾಕಿದ ..”ನಾನು ಅಚ್ಯುತ .. ನನ್ನ ಸುಮ್ನೆ ಕೇಸಲ್ಲಿ ಫಿಟ್ ಮಾಡಿದಾರೆ ಸಾರ್, ಯಾರೋ ಒಬ್ಬ ನನ್  ಕೈಲಿ 20 ರುಪಾಯಿ ಇಟ್ಟು, ಲಂಚ ತಗೋತಿದಿನಿ ಅಂತ ಹಿಡ್ಕೊಟ್ ಬಿಟ್ಟ ಸಾರ್ …ಆ ಇಪ್ಪತ್ ರುಪಾಯಿಗೆ ನಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ ..ಕೆಲ್ಸ ಹೋಯ್ತು, ಮಾನ ಹೋಯ್ತು, ಪ್ರಾಯ ಹೋಗಿ ಮುಪ್ಪು ಬರ್ತಾ ಇದೆ..ನನ್  ಸಾಧನೆ ಏನೂ ಇಲ್ಲ ..ಕೋರ್ಟ್ ಅಲೆಯೋದು ಬಿಟ್ರೆ.. ಜೀವನ ಸಾಕಾಗಿದೆ ಸಾರ್ …ಇಪ್ಪತ್ತು ರುಪಾಯಿಗೆ ಇಪ್ಪತ್ತು ವರ್ಷದ ಶಿಕ್ಷೆ.. ನೀವೇ ಹೇಳಿ ಸಾರ್ ,ಇದು ಯಾವ ನ್ಯಾಯ..ಅದೂ ಮಾಡದ ತಪ್ಪಿಗೆ.. ನ್ಯಾಯ ಸತ್ತು ಯಾವ್ದೋ ಕಾಲ ಆಗಿದೆ..ಎಲ್ಲಾ ಭ್ರಮೆ … ಸಾಕ್ಷಿ ಕೇಳುತ್ತೆ ನ್ಯಾಯ, ಅದು ಸುಳ್ಳೋ, ಸತ್ಯನೋ ಪರಾಮರ್ಶೆ ಮಾಡೋರು ಯಾರು” ಆತನ ಮಾತಿನಲ್ಲಿ ಬೇಸರ, ಬೇಗುದಿ ಎದ್ದು ಕಾಣುತ್ತಿತ್ತು. ಕಥೆಗಾರನಿಗೆ ಆತನ ಬಗ್ಗೆ ಕರುಣೆ ಹುಟ್ಟಿತು… “ ನಿಮ್ ನೋವು ನನಗೆ ಅರ್ಥ ಆಗುತ್ತೆ. ಕಥೆ ಬರೀಬಹುದು ಆದ್ರೆ ಕಥೆ ನನ್ನ ಕೈಯಲ್ಲಿ ಇರಲ್ಲ. ಪಾತ್ರಗಳು ಹಾಗೇ ಹುಟ್ಟಿಕೊಳ್ಳುತ್ತವೆ, ನಿಧಾನವಾಗಿ ಬೆಳೆದು ರೂಪುಗೊಳ್ಳುತ್ತವೆ.. ಹಾಗೆ ಕಥೆ ತನ್ನ ಸ್ವರೂಪ ಪಡೆದುಕೊಳ್ಳುತ್ತದೆ. ಹೀಗೆ ರೂಪುಗೊಳ್ಳುವ ಕಥೆಗೆ ನಾನು ಪೂರಕ ಮಾತ್ರ. ನೋಡೋಣ ನಿಮ್ಮ ಕಥೆ ರೂಪ ಪಡೆದರೆ ಅದು ನಮ್ಮ ಇಬ್ಬರ ಅದೃಷ್ಟ” ಹೀಗೆ ಹೇಳುತ್ತಾ ಅವರು ಮನೆ ಸೇರಿಯಾಗಿತ್ತು.

ಅವರು ಮನೆ ಸೇರಿ ಇನ್ನೇನು ಬಾಗಿಲು ಹಾಕಬೇಕು ಎನ್ನುವಷ್ಟರಲ್ಲಿ ಮದ್ದಾನೆಗಳಂತಹ ಒಂದು ಧಾಂಡಿಗರ ಗುಂಪು ಮನೆಯೊಳಗೆ ನುಗ್ಗಿತು. ಎಲ್ಲರೂ ಸುಮಾರು 6 ಅಡಿ ಎತ್ತರದ ದಷ್ಟ ಪುಷ್ಟವಾದ ಧಾಂಡಿಗರೇ ….”ಏಯ್, ಅಣ್ಣಂಗೊಂದು ಕುರ್ಚಿ ಹಾಕ್ರೋ” ಎಂದು ಒಂದು ಕುರ್ಚಿಯನ್ನು ಅವರೇ ಹುಡುಕಿ ತಂದು ಕೋಣೆಯ ಮಧ್ಯದಲ್ಲಿ ಹಾಕಿದರು. ಅದರ ಮೇಲೆ ಒಬ್ಬ ಬಿಳಿ ಬಟ್ಟೆ ಹಾಕಿದ ವ್ಯಕ್ತಿ ಠೀವಿಯಿಂದ ಕುಳಿತ. ಇವರನ್ನು ಕಂಡ ಅಚ್ಯುತ ಭಯದಿಂದ ಮೂಲೆಯಲ್ಲಿ ಅವಿತುಕೊಂಡ. ಕಥೆಗಾರ ದಂಗಾಗಿ ನೋಡುತ್ತಿದ್ದ…. 

“ನೀನೆ ಏನಯ್ಯಾ ಕಥೆ ಬರಿಯವ್ನು, ಬೇರೆ ಏನು ಕೇಮ್ ಇಲ್ವಾ ನಿಂಗೆ…ನಮ್ಮಣ್ಣನ್ ಬಗ್ಗೆ ಬಾಯಿಗೆ ಬಂದಂಗೆ ಬರೀತಿಯಾ …ನಮ್ ಅಣ್ಣ ಎಂತಾ ಧರ್ಮಾತ್ಮ ಅಂತ ಗೊತ್ತಯ್ತೇನ್ಲಾ ನಿಂಗೆ..ಏನಾರ ಬರಿಯೋದಿದ್ರೆ ಒಳ್ಳೇದ್ ಬರೀ ನಮ್ ಬಗ್ಗೆ … ನಾವ್ ಏನ್ ಮಾಡ್ತಿವಿ, ಬಿಡ್ತಿವಿ ಅದನ ಕಟ್ಕೊಂಡು ಏನ್ಲಾ ನಿಂಗೆ.. ಹುಷಾರ್.. ನಮ್ ತಂಟೆಗೆ ಬಂದ್ರೆ ಸರಿ ಇರಾಕಿಲ್ಲ” ಎಂದು ಬಂದಿದ್ದ ಗುಂಪಿನಲ್ಲಿದ್ದ ಒಬ್ಬ ಗುಟುರು ಹಾಕುತ್ತಿದ್ದರೆ ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿ ಸಭ್ಯ ನಗೆ ಬೀರುತ್ತಾ…” ನೋಡಿ ಇವರೇ.. ನಮಗೆ ನಿಮ್ಮನ್ನ ಕಂಡ್ರೆ ದ್ವೇಷ ಇಲ್ಲ. ಸುಮ್ನೆ ನಮ್ಮನ್ನ ಎದುರು ಹಾಕ್ಕೋ ಬೇಡಿ. ನಿಮ್ ಪಾಡಿಗೆ ನೀವು ಇದ್ಬಿಡಿ. ನಾವು ಜನರ ಮಧ್ಯೆ ಇರೋವರು.. ನಿಮಗೇನು ಗೊತ್ತು ಸ್ವಾಮೀ ನಮ್ ಕಷ್ಟ …ಎಚ್ಚರಿಕೆ ಕೊಟ್ಟು ಹೋಗೋಣ ಅಂತ ಬಂದಿದ್ದು. ಇನ್ಮೇಲೆ ಹುಷಾರಾಗಿರಿ… ಇಲ್ಲಾಂದ್ರೆ ಮುಂದೇನಾದ್ರು ಆದ್ರೆ ಆದಕ್ಕೆ ನಾವು ಜವಾಬ್ದಾರರಲ್ಲ, ಗೊತ್ತಾಯ್ತಲ..ಬನ್ರೋ ಎಲ್ಲಾ’ ಎಂದು ತನ್ನ ದಂಡಿನ ಜೊತೆ ಹೊರ ನಡೆದ. ಅವನ ಹಿಂದೆಯೇ ಅವನ ಚೇಲಾಗಳು ಕಣ್ಣಲ್ಲೇ ಎಚ್ಚರಿಸುತ್ತಲೇ ಹೊರ ನಡೆದರು… “ ಎಲ್ಲಾ ಒಂದೇ ನಾಣ್ಯದ ಎರಡು ಮುಖಗಳು…ಎಲ್ಲಾ ನಮ್ ತಪ್ಪು. ಇಂತಹವರನ್ನು ಆಯ್ಕೆ ಮಾಡ್ತಿವಲ್ಲ.. ನಮ್ಮನ್ನ ನಾವ್ ಹೊಡ್ಕೊಬೇಕು” ಮೆಲ್ಲಗೆ ಕಥೆಗಾರ ಗೊಣಗುತ್ತಿದ್ದ. ಮರೆಯಲ್ಲಿದ್ದ ಅಚ್ಯುತ ಮೆಲ್ಲಗೆ ಹೊರ ಬಂದ….”ನೋಡಿ ಸಾರ್ ಇಂಥವರ್ಗೆ ಈ ಕಾಲ, ಕಳ್ಳರು ಕಾಕರು ಆರಾಮಾಗಿ ರಾಜಾರೋಷವಾಗಿ ಇರ್ತಾರೆ, ನಮ್ಮಂತಹವರನ್ನೆ ಎಲ್ಲಾ ಕಾಡೋದು. ನಾ ಬರ್ತೀನಿ ಸಾರ್..ನನ್ಕಥೆ ಬರದ್ರೆ ತುಂಬಾ ಸಂತೋಷ..” ಎಂದವನು “ಬರ್ತೀನಿ ಸಾರ್, ನಿಮ್ಮನ್ನ ನೋಡಿದ್ದು ನನ್ ಅದೃಷ್ಟ” ಅಂತ ಹೇಳಿ ಹೊರಟ.ಅವನು ಹೋದ ಮೇಲೆ ಕತೆಗಾರ ಕಣ್ಣುಮುಚ್ಚಿ ಆ ದಿನ ನಡೆದ ಘಟನೆಗಳ ಮೆಲಕು ಹಾಕುತ್ತಾ ಕುಳಿತಿದ್ದ.  

ವಿಚಿತ್ರವಾದ ಸದ್ದುಗಳು..ಹೆದರಿಕೆ ಹುಟ್ಟಿಸುವ ರೀತಿ..ಹೆಣದ ವಾಸನೆ, ಪ್ರೇತಗಳ ಚೀತ್ಕಾರ..ನಿಜ ಅಂದರೆ ಆತ ರುದ್ರ ಭೂಮಿಯಲ್ಲಿದ್ದ. ಸುತ್ತಲು ವಿಚಿತ್ರವಾದದ್ದು ಸಂಭವಿಸುತ್ತಿತ್ತು. ಜೋರಾಗಿ ಬೀಸುವ ಗಾಳಿ, ಸದ್ದು ಮಾಡುತ್ತಾ ತುಯ್ದಾಡುವ ಮರಗಳು, ಅಳುವ ನಾಯಿಯ ಸದ್ದು, ಕಿಲ ಕಿಲ ನಗುವಿನೊಡನೆ ಗೆಜ್ಜೆಯ ಸದ್ದು…ಬಂದೆ.. ನಾ ಬಂದೇ ಎಂದು ಕೂಗುವ ಹೆಣ್ಣಿನ ದನಿ…ಕಥೆಗಾರ ಸಣ್ಣಗೆ ಬೆವರ ತೊಡಗಿದ. ಕಣ್ಣನ್ನು ಇನ್ನು ಬಿಗಿಯಾಗಿ ಮುಚ್ಚಿ ಕೊಂಡ. ಒಮ್ಮೆಲೇ ಎಲ್ಲಾ ಪ್ರೇತಗಳೂ ಗಹಗಹಿಸಿ ನಗಲಾರಂಭಿಸಿದವು…” ಕಥೆ ಬರೀತೀಯಾ, ನಮ್ ಕತೇನೂ ಬರೀತಿಯಾ.. ಕೇಳುಸ್ಕೋ …ಎಂದು ಒಂದರ ಹಿಂದೆ ಒಂದರಂತೆ ಅವನ ಹತ್ತಿರ ಬರಲಾರಂಭಿಸಿದವು. ಕಥೆಗಾರ ಬದುಕಿದರೆ ಸಾಕೆಂದು ಓಡಲಾರಂಭಿಸಿದ. ಮಣ ಮಣ ಮಂತ್ರ ಹೇಳುತ್ತಾ ಓಡುತ್ತಲೇ ಇದ್ದ. ಕಡೆಗೆ ಅವುಗಳ ಧ್ವನಿ ಕೇಳಿಸದಷ್ಟು ದೂರ…ಮೈಯೆಲ್ಲಾ ಸಂಪೂರ್ಣ ಬೆವೆತಿತ್ತು. 

ಬಾಗಿಲು ಬಡಿವ ಸದ್ದು.. ಮತ್ತೆ ಭೂತಗಳು ಬಂದವೇನೋ ಎಂದು ಆತ ಮೈಯನ್ನು ಹೊದಿಕೆಯಿಂದ ಭದ್ರವಾಗಿ ಮುಚ್ಚಿ ಕೊಂಡ…ಮುಖವನ್ನೂ ಸೇರಿಸಿ. ಬಾಗಿಲ ಸದ್ದು ಜೋರಾಯಿತು.. ನಂತರ ಕಾಲಿಂಗ್ ಬೆಲ್ ನ ಸದ್ದು.. ಕಿವಿ ತೂತು ಬೀಳುತ್ತದೆಯೇನೋ ಎಣಿಸಿದ ಆತ ಕಿರುಗಣ್ಣಲ್ಲಿ ನೋಡುತ್ತಾ ಮೆಲ್ಲಗೆ  ಹೊದಿಕೆ ಸರಿಸಿದ. ಆಗಲೇ ಕತ್ತಲು ಸರಿದು ಬೆಳಕಾಗಿತ್ತು. “ಅಣ್ಣಾ…ಅಣ್ಣಾ” ಎಂದು ಕೂಗುತ್ತಿದ್ದ ಹೆಂಗಸಿನ ದನಿ ಕೇಳಿಸಿತು. ಕಣ್ಣು ಉಜ್ಜಿಕೊಳ್ಳುತ್ತಾ ಹೋಗಿ ಬಾಗಿಲು ತೆಗೆದ… ಬಾಗಿಲಲ್ಲಿ ಕೆಲಸದ ನಿಂಗಿ ನಿಂತಿದ್ದಳು.

ನಿಂಗಿ: ಎಷ್ಟಣಾ ಕೂಗೋದು.. ಆಪಾಟಿ ನಿದ್ದೇನಾ…ಸರಿಯಾಯ್ತು..” ಒಳ ಬಂದ ಆಕೆಯ ಕಣ್ಣಿಗೆ ಬಿದ್ದದ್ದೇ ಮೇಜಿನ ಮೇಲಿನ ಬಾಟಲ್ ..” ಓ ಗೊತ್ತಾಯ್ತು ಬಿಡ್ರಿ, ಅಕ್ಕ ಇಲ್ರಾ” ಎಂದು ಕೊಂಕು ನೋಟ ಬೀರಿದಾಗ ಕಥೆಗಾರ ತಬ್ಬಿಬ್ಬಾದ. “ಅದು ನಾ ನಾ ಕುಡಿದದ್ದಲ್ಲ ಅದು ಹೆಂಗ್ ಬಂತೋ ಗೊತ್ತಿಲ್ಲ” ಎಂದು ಚಡಪಡಿಸಿದ. ಅವನ ಚಡಪಡಿಕೆ ನಿಜವೂ ಆಗಿತ್ತು. ಯಾರ್ ತಂದಿಟ್ಟಿರಬಹುದು, ಯೋಚಿಸುತ್ತಾ ಹೋಗಿ ಕೊನೆಗೆ ಮೊದಲು ಬಂದ ಆ ಕುಡುಕನೆ ಇರಬೇಕು ಎಂಬ ನಿರ್ಧಾರಕ್ಕೆ ಬಂದ.

ನಿಂಗಿ ಮಾತ್ರ “ಸರಿಯಾಯ್ತ್ ಬಿಡಣ್ಣ, ನೀವ್ ಅಲ್ಲ ಅಂದ್ರೆ ಏನ್ ಭೂತ ತಂದಿಡ್ತಾ, ನಾನೇನ್ ಅಕ್ಕಂಗೆ ಹೇಳಲ್ಲ ಬಿಡಿ, ಕಾಫಿ ಏನಾರ ಕುಡಿತಿರಾ” ಎಂದು ಕೇಳುತ್ತಾ ತನ್ನ ಕೆಲಸದಲ್ಲಿ ತೊಡಗಿದಳು. ಕಥೆಗಾರ ಮಾತ್ರ ಒಂದು ರೀತಿಯ ಟ್ರಾನ್ಸ್ ನಲ್ಲಿಯೇ ಇದ್ದ. ಟೇಬಲ್ ಮೇಲಿನ ಪೆನ್ಸಿಲ್ ಮಾತ್ರ ಲ್ಯಾಪ್ ಟಾಪ್ ನ ಕಡೆ ನೋಡುತ್ತಾ ಕಳ್ಳ ನಗು ನಗುತ್ತಿತ್ತು.             

‍ಲೇಖಕರು Admin

27 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading