ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆಕೂಟಕ್ಕೆ 6 ವರ್ಷ, ಬೃಹತ್ ಸಮಾವೇಶಕ್ಕೆ ಸಿದ್ಧತೆ…

ನೀಲಿಚಿಟ್ಟೆ

ಕನ್ನಡ ಸಾಹಿತ್ಯ ಲೋಕದ ಬೆರಗು ಕಥೆಕೂಟ ಎಂಬ ವಾಟ್ಸಪ್ ಗ್ರೂಪಿಗೆ ಜೂನ್ 25ಕ್ಕೆ 6 ವರ್ಷ ತುಂಬುತ್ತಿದೆ. ಆ ಹಿನ್ನೆಲೆಯಲ್ಲಿ ಕಥೆಕೂಟ ಸಮಾವೇಶ ನಡೆಯಲಿದೆ.

ಸಾಮಾಜಿಕ‌ ಜಾಲತಾಣಗಳು ಬರಿಯ ನೇತ್ಯಾತ್ಮಕ ವಿಷಯಗಳ ಬಿತ್ತನೆಯಲ್ಲಿ ತೊಡಗಿರುತ್ತವೆ. ಅದರಿಂದ ಸಮಾಜಕ್ಕೆ ಉಪಯೋಗವೇನಿದೆ ಎಂದು‌ ಎಲ್ಲರೂ‌ ಪ್ರಶ್ನಿಸುತ್ತಿದ್ದ ಕಾಲವೊಂದಿತ್ತು. ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಗಳ ಮೇಲೆ ಸಾಹಿತ್ಯ ವಲಯದ ಕೆಲವು ತಕರಾರುಗಳಿದ್ದ ಕಾಲ ಅದು. ಅದರೆ ಆ ಕಾಲ ಈಗಿಲ್ಲ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ, ಹೋರಾಟಕ್ಕೆಳಸುವ, ಮುದ್ರಣ ಮಾಧ್ಯಮದಂತೆಯೆ ಉತ್ಕೃಷ್ಟ ಸಾಹಿತ್ಯ ಸೃಷ್ಟಿಸುವ ಜಗತ್ತಿನ ಎಲ್ಲೆಡೆ ಹರಡಿರುವ ಕನ್ನಡ ಮನಸುಗಳನ್ನ ಒಟ್ಟುಗೂಡಿಸುವ ತಾಣಗಳಾಗಿವೆ.

ಕನ್ನಡ ಕಥಾ ಪರಂಪರೆಯನ್ನು ಬೆಳೆಸಲು ಸಾಹಿತ್ಯ ಲೋಕ ಈ ಜಾಲತಾಣಗಳನ್ನು ಬಳಸಿಕೊಂಡ ಕಥೆಗಳು ಅಪರೂಪ. ಅದರಲ್ಲಿ ಮುಂಚೂಣಿ ‘ಕಥೆಕೂಟ’ ಎಂಬ ವಾಟ್ಸಾಪ್ ಗುಂಪಿನದ್ದು. ಆರು ವರ್ಷಗಳ ಹಿಂದೆ ಕಥೆಗಳ ದುರಿತಕಾಲದಲ್ಲಿ ಹುಟ್ಟಿದ, ಕಥೆಗಾರ ಗೆಳೆಯರಾದ ಜೋಗಿ ಮತ್ತು‌ ಗೋಪಾಲಕೃಷ್ಣ ಕುಂಟಿನಿಯವರ ಚಿಂತನೆಯ ರೂಪ ಈ ಕಥೆಕೂಟ.

ಹೊಸಹೊಸ ಸದಸ್ಯರ ಸೇರ್ಪಡೆಯೊಂದಿಗೆ, ನಲವತ್ತೊಂಬತ್ತು ಸದಸ್ಯರನ್ನ ಸದ್ಯದಲ್ಲಿ ಹೊಂದಿರುವ ಕೂಟ ಸಾವಿರಾರು ಕಥೆಗಳನ್ನು ಬರೆಸಿದೆ ತಿದ್ದಿದೆ. ಹಿರಿಯರ ಪ್ರೀತಿಯ ಮಾರ್ಗದರ್ಶನದಲ್ಲಿ ಸಾಹಿತ್ಯ ಸಂವಾದ ವಿಮರ್ಶೆ ಮುಂತಾದ ಚಟುವಟಿಕೆಗಳನ್ನು ಸದಾ ನಡೆಸುತ್ತಲಿದೆ. ಕಥೆಗಾರರ ಕಥೆಗಳಲ್ಲಿ ಉತ್ತಮವಾದದ್ದನ್ನು ಆಯ್ದು‌ ಪ್ರಕಟಿಸುತ್ತಲೂ ಬಂದಿದೆ. ಅನೇಕ ಪ್ರತಿಭೆಗಳು ಇಲ್ಲಿನ‌ ವಿಮರ್ಶೆಗಳ ಮೂಲಕ ಸತತ‌ವಾಗಿ ಪ್ರಯತ್ನಿಸುತ್ತಾ ಉತ್ತಮ ಕಥೆಗಳ ಸೃಷ್ಟಿಗೆ ತೆರೆದು ಕೊಂಡಿದ್ದಾರೆ. ಕಥೆಕೂಟದಲ್ಲಿ ಆಗಾಗ ಹೊಸಹೊಸ ವಿಷಯಗಳ ಮೇಲೆ ಕಥಾಕಮ್ಮಟ ನಡೆವುದು ಮಾಮೂಲು.

ಆರನೆಯ ವರ್ಷದ ಹೊಸ್ತಿಲಲ್ಲಿ ಇರುವ ಕೂಟಕ್ಕೆ ಈಗ ಜನ್ಮದಿನದ ಸಂಭ್ರಮ. ಅದಕ್ಕೆಂದೆ ವೇದಿಕೆ ಸಿದ್ಧವಾಗಿದೆ. ಎರಡು ದಿನ ಪರ್ಯಂತ ನಡೆಯಲಿರುವ ಸಮಾವೇಶದಲ್ಲಿ ರಾಜ್ಯದ ಎಲ್ಲೆಡೆ ಇರುವ ಸದಸ್ಯರು ಆಗಮಿಸಲಿದ್ದಾರೆ. ಉದ್ಘಾಟನೆಯ ನಂತರ ಕಥೆಗಳ ಸ್ವರೂಪ ಬರವಣಿಗೆಯ ವಿವಿಧ ಆಯಾಮ, ಕಥೆಗಳ ಹುಟ್ಟು, ಆಯ್ದ ಕಥೆಗಳ‌ ಓದು, ಇತ್ಯಾದಿಗಳ ಜೊತೆ ಮನರಂಜನೆ ಹಾಡು ಎಲ್ಲದರೊಂದಿಗೆ ಕಥೆಕೂಟ ವಿಜೃಂಭಿಸಲು ಸಿದ್ಧವಾಗಿದೆ. ಮತ್ತೊಂದಷ್ಟು ಹೊಸದಾದ ಅನುಭವ ಕೊಡಬಲ್ಲ ಕಥೆಗಳ ಸೃಷ್ಟಿಗೆ ವೇದಿಕೆಯಾಗಲಿದೆ.

‍ಲೇಖಕರು Admin

11 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading