ರಾಯಚೂರಿನಲ್ಲಿ ಸಮುದಾಯ ತಂಡದಿಂದ ನಡೆದ
ಆ್ಯಂಟನ್ ಚೆಕಾಫ್ ರವರ ‘ವಾರ್ಡ ನಂ-6’ ನಾಟಕದ
ರೂಪಾಂತರವಾದ ‘ಕತ್ತಲೆ ದಾರಿ ದೂರ’ ನಾಟಕದ ಒಂದು ಅವಲೋಕನ
ರಮೇಶ ಗಬ್ಬೂರ್
ಬೆಳಕನ್ನೇ ಕಾಣದ ಅನಂತ ಕಾಲದ ನೆನಪುಗಳನ್ನು ನಮ್ಮ ಇತಿಹಾಸದುದ್ದಕ್ಕೂ ಕಾಣತ್ತಲೇ ಬಂದಿದ್ದೇವೆ. ಬೆಳಕೆಂದು ಭ್ರಮಿಸಿ ಇದೇ ಅಂತಿಮವೆಂದು, ಇನ್ನು ಮುಂದೆ ನಮಗ್ಯಾವ ಅಡ್ಡಿ ಆತಂಕಗಳಿಲ್ಲವೆಂದುಕೊಂಡಾಗಲೆಲ್ಲಾ ಕಾಲ ನಮ್ಮನ್ನು ಹಿಂದೆ ಸರಿಸಿ ಮುಂದಿನ ಹರಿವಿನ ದೂರವನ್ನು ಕಣ್ಣೆದುರಿಗಿಟ್ಟು ಕುಲುಕುಲು ನಗುತ್ತಲೇ ಮಾಯವಾಗುವ ಪರಿ ಅರ್ಥವಾಗುವುದಿಲ್ಲ. ಅಂತೆಯೇ ಕತ್ತಲೆ ದಾರಿ ದೂರ ನಾಟಕದ ಜಗನ್ನಾಥನ ಮತ್ತು ವೈದ್ಯನ ಪಾತ್ರದ ಮೂಲಕ ಅಂತಹ ಎಚ್ಚರದ ಸಂದೇಶವನ್ನು ಸಾರುತ್ತವೆ. ಮುಗಿಯಿತೆನ್ನುವುದರಲ್ಲಿಯೇ ಆರಂಭವ ಕಾಣುವ ನಾಟಕ ಗಂಭೀರವಾದ ಪ್ರಶ್ನೆಯೊಂದನ್ನು ನಮ್ಮ ಮುಂದಿಟ್ಟು ತಕ್ಷಣವೇ ನಮ್ಮ ಓದಿನ ಬೌದ್ಧಿಕ ಅಹಂಗಳಿಗೆ ಪರದಾ ಕಟ್ಟಿ ಹಗಲ ಕತ್ತಲೆಯಲ್ಲಿ ಸಾಯಿಸುವ ಸೂಚನೆ ನೀಡುತ್ತದೆ. ಮೂಲ ಕಥೆಯನ್ನು ಓದದೆಯೇ ಇರುವ ನಮಗೆ ಪಾತ್ರಗಳ ಮೂಲಕ ಓದಿಸುವ ಜಾಣ್ಮೆ ನಾಟಕದುದ್ದಕ್ಕೂ ನಡೆಯುತ್ತದೆ. ರೂಪಾಂತರ ಮತ್ತು ನಿದರ್ೇಶನದ ಮಧ್ಯೆ ಇರುವ ಹೊಂದಾಣಿಕೆಯ ಕಾರಣದಿಂದಾಗಿ ಈ ಪ್ರಯೋಗ ಯಶಸ್ವಿಯಾಗುತ್ತದೆ.
ಆಸ್ಪತ್ರೆಯ ಹುಚ್ಚರ ಶೆಲ್ನೊಳಗೆ ನಡೆಯುವ ಈ ಘಟನೆಗಳು ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಹೊರ ಪ್ರಪಂಚವನ್ನು ನೋಡಬೇಕೆನ್ನುವ ಕೂಗು ಕಮರಿ ಹೋಗುವ ಪ್ರಯತ್ನಗಳ ಪರಿಯು ನೋಡುವ ನಮ್ಮನ್ನು ದಿಗ್ಭ್ರಾಂತರನ್ನಾಗಿಸುತ್ತದೆ. ರಷ್ಯನ್ ಕಥೆಗಾರ ಆ್ಯಂಟನ್ ಚೆಕಾಫ್ ರವರ ‘ವಾರ್ಡ ನಂಬರ್-6’ ಎಂಬ 1982ರ ಕಾಲದ ಕಥೆಯನ್ನು ಪ್ರಸ್ತುತ ಸಂದರ್ಭಕ್ಕೆ ಒಗ್ಗಿಸಿಕೊಂಡು ನೋಡುವ ಹೊಸ ಪ್ರಯೋಗ ಇಲ್ಲಿದೆ. ಪಾಕಿಸ್ತಾನ ನಮ್ಮ ಶತೃವೆಂಬುದನ್ನು ಒಪ್ಪಿಕೊಳ್ಳದಿದ್ದರೆ ಪ್ರಗತಿಪರರನ್ನು ಸಾಯಿಸಿದರೂ ಪಾಪವಿಲ್ಲ ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದು ಪುರೋಗಾಮಿ ಚಿಂತಕರ ಮಾತುಗಳನ್ನು ಪಾತ್ರಗಳ ಮೂಲಕ ಹೇಳಿಸುತ್ತಾರೆ. ಜನರ ತಲೆಕೆಡಿಸಿ, ಸಕರ್ಾರದ ವಿರುದ್ಧ ಮಾತಾಡುವ ಅಪರಾಧಿಗಳಲ್ಲದವರನ್ನು ತಂದು ಹಿಂಸಿಸುವ, ಶೋಷಿಸುವ, ಮಾತೆತ್ತದಂತೆ ಮಾಡಿ ಜನರ ದೃಷ್ಟಿಯಲ್ಲಿ ಮೂರ್ಖರನ್ನಾಗಿಸುವ, ಹುಚ್ಚರನ್ನಾಗಿಸಿ ಕತ್ತಲೆಕೋಣೆಯಲ್ಲಿಡುವ ಮೂಲಕ ಬೌದ್ಧಿಕ ಲೋಕಕ್ಕೆ ಭೀತಿಯನ್ನುಟ್ಟಿಸುವ ಇಂದಿನ ವರ್ತಮಾನದ ತಲ್ಲಣಗಳನ್ನು ನಾಟಕ ಸೂಕ್ಷ್ಮವಾಗಿ ತೆರೆದಿಡುತ್ತದೆ.

ಆಳುವ ವರ್ಗದ ಬಗೆಗಿನ ವಿರೋಧಗಳಿಗೆ ಉತ್ತರವೆಂಬಂತೆ ಮೂಡುವ ನಾಟಕದ ದೃಶ್ಯಗಳು ಅವೈಜ್ಞಾನಿಕ ಮತ್ತು ಅವೈಚಾರಿಕ ಮನೋಭಾವದ ವ್ಯಕ್ತಿಗಳನ್ನೊಳಗೊಂಡ ಸಕರ್ಾರದ ಧೋರಣೆಯನ್ನು ಸಾರುತ್ತವೆ. ಪ್ರಗತಿಪರರನ್ನು ಪಾಕಿಸ್ತಾನದ ಏಜೆಂಟರಂತೆ ನೋಡುವ, ಆಳುವ ವರ್ಗದ ಹುಳುಕು ಮನಸ್ಸನ್ನು ಸ್ಪಸ್ಟವಾಗಿಸುವ ಪಾತ್ರಗಳು ನೋಡುಗರನ್ನು ಗಂಭೀರವಾಗಿಸುತ್ತವೆ.
ನೆಲದ ಗಬ್ಬನ್ನು ತೊಲಗಿಸಲು ಚಿಂತಿಸುವ ವೈದ್ಯ ಇಲ್ಲಿನ ಮೂರ್ಖರು ಮತ್ತು ಶತ ಮೂರ್ಖರ ಮಧ್ಯ ಕ್ರೀಯಾಶೀಲನಾಗಿರಬೇಕಾದ ಅಪಾಯ ಹೇಗೆಂದು ಚಿಂತಿಸುವ, ವೈದ್ಯನೊಬ್ಬ ಹುಚ್ಚರನ್ನು ಸಾಮಾನ್ಯರನ್ನಾಗಿಸುವ, ತಾನೆ ಆಳುವ ವರ್ಗದ ದಾಳಿಗೆ ತುತ್ತಾಗುವ, ಆ ಮೂಲಕ ಆಡಳಿತ ಮಂಡಳಿಯಿಂದ ವಿರೋಧ ಕಟ್ಟಿಕೊಂಡು ಸಮಿತಿಯಿಂದ ತನಿಖೆಗೆ ಒಳಪಡುವ ಪ್ರಕ್ರಿಯೆಯಲ್ಲಿ ಅವನನ್ನೇ ಹುಚ್ಚನನ್ನಾಗಿಸಿದ್ದು ರೋಗ ಹತ್ತಿದ ಮನಸ್ಸುಗಳೆಲ್ಲಾ ಸೇರಿ ಆಳುವ ಸಾಮ್ರಾಜ್ಯವನ್ನು ಸೃಷ್ಟಿಸಿಕೊಳ್ಳುವ ಸ್ಪಷ್ಟ ಸಂದೇಶವನ್ನು ಸಾರುತ್ತದೆ.
ಜನರನ್ನು ಎಚ್ಚರಿಸುವ ಜಗನ್ನಾಥನ ಪಾತ್ರವಂತೂ ಪ್ರಗತಿಪರ ವ್ಯಕ್ತಿಯನ್ನಾಗಿ ಚಿತ್ರಿಸಿರುವ ಕವಿ ಅಂತವನು ಹೊರಗಿದ್ದರೆ ಜನರ ತಲೆಕೆಡಿಸಬಹುದೆಂದು ಅವನನ್ನು ಹುಚ್ಚನನ್ನಾಗಿಸಿ ಆಸ್ಪತ್ರೆಯಲ್ಲಿ ನಿರ್ಭಂಧಿಸಲ್ಪಡುವ, ಸೆಲ್ ನಲ್ಲಿಯೂ ಪ್ರತಿಭಟಿಸುವ, ಪುರೋಗಾಮಿತನದ ಡ್ರಿಲ್ ಮಾಸ್ಟರ್ ನಂತಿರುವ ಕಾವಲುಗಾರ ಗೋವಿಂದನ ಮೂಲಕ ಅವನನ್ನು ಹತ್ತಿಕ್ಕುವ, ಜಗನ್ನಾಥನೊಡನೆ ಸಂವಾದಿಸುವ ವೈದ್ಯನನ್ನು ಸಂಶಯದಿಂದ ನೋಡುವ, ಆ ಮೂಲಕ ಆಡಳಿತ ನಡೆಸುವವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ‘ಗೂಟಕ್ಕೆ ಕಟ್ಟಿದ ನಾಯಿ’ಯಂತಾಗಿಸಿ ನೋಡುವಲ್ಲಿ ವೈದ್ಯನನ್ನು ಹುಚ್ಚನನ್ನಾಗಿಸುವ ದೃಷ್ಯ ಇಂದಿನ ಸಾಮಾಜಿಕ ಚಳುವಳಿಗಾರರಿಗೆ ಮತ್ತು ಬುದ್ಧಿ ಜೀವಿಗಳಿಗೆ ಸಣ್ಣಗೆ ತಿವಿಯುತ್ತದೆ ಮತ್ತು ಆಳುವವರನ್ನು ನಿಯಂತ್ರಿಸುವ ಕೋಮುವಾದಿಗಳ ಮೂಲಕ ಅತ್ಯಾಚಾರವನ್ನು ನಡೆಸುತ್ತದೆ.
ಆರಂಭದಲ್ಲಿ ಪ್ರಗತಿಪರರ ಮೇಲೆ ದಬ್ಬಾಳಿಕೆ ನಡೆಸಲು ‘ಜ್ಞಾನಪೀಠ ಮೂರ್ತಿ’ಎಲ್ಲಿ? ವಿಮಾನದ ಟಿಕೆಟ್ ಸಿದ್ಧವಿದೆ ಹೋಗುವುದು ಕರಾಚಿಗೋ ಪಾಕಿಸ್ತಾನಕ್ಕೋ ಎಂಬ ಮಾತುಗಳು ಕುಳಿತು ನೋಡುವ ವಿಶಾಲ ಮನಸ್ಸುಗಳನ್ನು ತಿವಿಯುತ್ತದೆ. ಪ್ರಗತಿಪರರನ್ನು ಕಮ್ಯೂನಿಷ್ಟರನ್ನು ತಲೆಕೆಳಗೆ ಹಾಕಿ ನೇತಾಕಿದರೂ ಯಾವ ಪಾಪವೂ ಬರೋದಿಲ್ಲ ಎಂಬ ಮಾತುಗಳು ಸಣ್ಣಗೆ ನಡುಗಿಸುತ್ತವೆ. ಇವೆಲ್ಲವೂ ಕತ್ತಲದಾರಿ ದೂರ ನಾಟಕದ ಪಾತ್ರಗಳ ಮೂಲಕ ಅಂತ ಅಂದುಕೊಂಡರೂ ಮುಂದಾಗುವ ಕೋಮು ಸುನಾಮಿಯ ಸಂಕೇತವನ್ನು ನೀಡುತ್ತದೆ.
ನಾಟಕದ ಮಧ್ಯದಲ್ಲಿ ಬರುವ ಹಜಾಮನ ಪಾತ್ರದ ಮೂಲಕ ಗೋವಿಂದ ಅವರನ್ನು ಬೆದರಿಸುವ ಬಗೆಯಿಂದಲೇ ಪ್ರೇರಿತರಾಗಿ ಪ್ರಗತಿಪರ ಹುಚ್ಚರು ಮಾತಾಡಿಕೊಂಡು ನಡೆಸುವ ವಿಫಲದಾಳಿ ಪ್ರಗತಿಪರ ಮತ್ತು ಚಳುವಳಿಗಾರರ ಮಧ್ಯದಲ್ಲಿ ಇರುವ ಹೊಂದಾಣಿಕೆಯ ಕೊರತೆ ಮತ್ತು ಸೈದ್ಧಾಂತಿಕ ಭಿನ್ನತೆಯನ್ನು ತೋರಿಸುತ್ತದೆ. ಕಥೆಯಲ್ಲಿ ಸೂಚ್ಯವಾಗಿರುವ ಅಂಶಗಳನ್ನು ರೂಪಾಂತರದ ಮೂಲಕ ರಂಗಕ್ಕೆ ತರುವ ಅಪಾಯವಿದ್ದರೂ ನೆಲ ಬದಲಾದರು ಯೋಚನೆ ಒಂದೇ ಹಾಗಾಗಿ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ.
ಒಟ್ಟಿನಲ್ಲಿ ಬೆಳಕಿನೆಡೆಗೆ ಸಾಗಿ ಹೋಗಲು ಸವೆಯಬೇಕಾದ ಕತ್ತಲೆಯ ದಾರಿ ಇನ್ನೂ ದೂರವಿದೆ. ಮುಂದಿನ ದಾರಿಯಲ್ಲಿ ಅಪಾಯವೂ ಇದೆ ಎಂಬ ಸ್ಪಷ್ಟ ಸಂದೇಶವನ್ನು ಸಾರುತ್ತಲೇ ನಾಟಕ ಮುಗಿಯುತ್ತದೆ. ನಾಟಕ ಮಂದಿರದಿಂದ ಹೊರಬರುವಾಗ ಶತೃವಿನೆಡೆಗೆ ಸಾಗುವ ಹಾದಿ ಅಪಾಯಕರವಾದದ್ದು ಎಂದು ಹೇಳುತ್ತಾ ಚಳುವಳಿ ಮತ್ತು ಚಿಂತನೆಗಳನ್ನು ಮರುಸೃಷ್ಟಿ ಮಾಡಿಕೊಳ್ಳುವಲ್ಲಿ ನಮ್ಮ ನಡೆ ಏನಾಗಿರಬೇಕೆಂದು ಎಚ್ಚರಿಸುತ್ತದೆ.
ಈ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದ ಡಿ.ಆರ.ನಾಗರಾಜ ರವರಿಗೆ, ನಿದರ್ೇಶಿಸಿದ ಪ್ರವೀಣ ರೆಡ್ಡಿ ಗುಂಜಳ್ಳಿ ಇವರಿಗೆ ಹಾಗೂ ರಂಗಕ್ಕೆ ತರಲು ಸಹಕರಿಸಿದ ರಾಯಚೂರು ಸಮುದಾಯದ ವಿ.ಎನ್.ಅಕ್ಕಿ ಮತ್ತು ರಾಜಶೇಖರ್ ರವರಿಗೆ ಅಭಿನಂದನೆಗಳು






this article is very informative to the public to think once again towards indian reality
ಅಭಿನಂದನೆಗಳು ಅವಧಿಗೆ….
ಕ್ಷಮಿಸಿ ಒಂದು ತಿದ್ದುಪಡಿ
ನಾನು ಟೈಪ್ ಮಾಡುವಾಗ ಆದ ದೋಷ. ರಷ್ಯನ್ ಲೇಖಕ ಚೆಕಾಪ್ ನ ಕಾಲ 1892 ಆಗಬೇಕಿತ್ತು.
ಹಾಗು ಈ ನಾಟಕದಲ್ಲಿ ಆರಿಫ್ ರಾಜಾ ರವರ’ರಾಜಧಾನಿಯ ಬೀದಿಗಳಲಿ’ ಕವಿತೆಯ ಸಾಲುಗಳಾದ “ಗೋಮಾಂಸವನ್ನಾದರೂ ತಿನ್ನುತ್ತೇವೆ, ಹಂದಿ ಮಾಂಸವನ್ನಾದರೂ ತಿನ್ನುತ್ತೇವೆ ಆದರೆ ಮನಷ್ಯ ಜೀವವನ್ನು ಮಾತ್ರ ತಿನ್ನುವುದಿಲ್ಲ” ಎಂಬ ಮಾತು ಬಳಸಿಕೊಳ್ಳಲಾಗಿದ್ದು ಅದು ಬಹಳ ಕಾಡುತ್ತದೆ.
nice miss maadikonda nou kaaduttide..abhinandanegalu gabbur avare..!!!!