ಎಚ್.ಆರ್. ರಮೇಶ
ಮಾರನಾಯಕ ಸಾಯುವುದಕ್ಕೂ ಹಿಂದಿನ ಸಂಜೆ ಸೂರ್ಯ ಇನ್ನೇನು ತನ್ನ ಬಳಿ ಯಾವ ಬಣ್ಣವೂ ಉಳಿದಿಲ್ಲವೆನೋ ಎನ್ನುವಂತೆ ತನ್ನಲ್ಲಿ ಇದ್ದಬದ್ದದ್ದನ್ನೆಲ್ಲ ಚೆಲ್ಲಿ, ಮೈಮೇಲೂ ಒಷ್ಟನ್ನೂ ಸುರುವಿಕೊಂಡು ಮುಳುಗಿ ಹೋಗಿದ್ದ. ಅವನು ಹಾಗೆ ಮುಳುಗಿ ಹೋಗುವುದನ್ನು ಯಾರೂ ನೋಡಿರಲಿಲ್ಲ, ಅಥವಾ ಅವನು ಹಾಗೆ ಮುಳುಗುತ್ತಿರುವುದನ್ನು ಯಾರೂ ಕಂಡಿರಲಿಲ್ಲ. ಅವೊತ್ತು ದೇಶದಲ್ಲಿ ಗಲಭೆಯೋ ಗಲಭೆ. ಈಶಾನ್ಯದ ಕಡೆಯಂತೂ ಹತ್ತಿಕೊಂಡಿದ್ದ ಬೆಂಕಿ ಆರಿರಲಿಲ್ಲ. ಆದರೆ, ಸಾಲು ಸಾಲು ಇರವೆಗಳು ತಾವಿದ್ದ ಮಾವಿನ ಮರದ ಕೆಳಗೆ ಒಂದು ಕ್ಷಣ ಗಕ್ಕನೆ ನಿಂತು ದಟ್ಟವಾಗಿ ಮೈ ತುಂಬಿಕೊಂಡಿರುವ ಮಾವಿನ ಎಲೆಗಳ ಮೇಲೆ ಬಿದ್ದಂತಹ ಬಣ್ಣ ಆಗೊಮ್ಮ ಈಗೊಮ್ಮೆ ಕಾಣದೆ ಬೀಸುವ ಗಾಳಿಗೆ ಗಲುಗಲು ಅಲುಗಾಡಿ ಮರಕ್ಕೆ ಒಂದು ಮೆರಗು ತಂದದ್ದನ್ನು ಬೆರಗಾಗಿ ನೋಡಿದ್ದವು. ಅರೆ! ಇವೇನು ಹೀಗೆ ನಿತ್ಕಂಡವು ಅಂತ ಅಚ್ಚರಿಗೊಂಡಿದ್ದ ಮಾರನಾಯಕ ಅವುಗಳನ್ನ ನೋಡಿ. ಆಮೇಲೆ ಇಷ್ಟಿಷ್ಟೇ ಬೀಳುತ್ತಿದ್ದ ಕತ್ತಲನ್ನು ನೆಲವು ತನ್ನ ಎರಡೂ ಕೈಗಳ ತೆಕ್ಕೆಯಲ್ಲಿ ಬಾಚಿಕೊಳ್ಳತೊಡಗಿತು. ಈ ನಿತ್ಯದ ಆಟವನ್ನು ನೋಡಲು ಆಕಾಶದಲ್ಲಿ ನಕ್ಷತ್ರಗಳು ಸಂತೆಗೆ ಜನ ಸೇರಿದ ಹಾಗೆ ಒಂದೊಂದೇ ಕಾಣಿಸಿಕೊಳ್ಳತೊಡಗಿದವು. ನವಣೆ ಅನ್ನ ಹುರುಳಿ ಕಟ್ಟಿನ ಸಾರನ್ನು ಉಂಡ ಮಾರನಾಯಕ ಯಥಾಪ್ರಕಾರ ಮಲಗಿದ. ಅವನ ಹೆಂಡತಿ ಈರಜ್ಜಿ ಹಜಾರದಲ್ಲಿ ತಮ್ಮ ಮೊಮ್ಮಕ್ಕಳಿಗೆ ಕತೆ ಹೇಳ್ತಾ ಇದ್ದಳು. ನಂತರ ಎಷ್ಟೋ ಹೊತ್ತಾದಮೇಲೆ ಯಾರ್ಯಾರು ಯಾವಾಗ ಮಲಗಿದರೋ ಗೊತ್ತಿಲ್ಲ. ಬೆಳಗ್ಗೆ ಬೆಳಕು ನೆಲದ ಮೇಲೆ ಸುರಿಯುತ್ತಿತ್ತು, ಮಾರನಾಯಕನ ಉಸಿರು ನಿಂತಿತ್ತು. ಇಡೀ ದಿನ ನೆಂಟರು, ಬಂಧುಗಳು, ಸ್ನೇಹಿತರು, ಊರಿನವರು ಬರತೊಡಗಿದರು. ಈರಜ್ಜಿ ಇಡೀ ದಿನ ತನ್ನ ದುಃಖವನ್ನು ತನ್ನ ಎರಡು ಕಣ್ಣುಗಳ ದಡದಲ್ಲೇ ತಡೆದುಕೊಂಡು ತನ್ನ ಗಂಡ ಮಾರನಾಯಕನ ಪಕ್ಕದಲ್ಲಿ ಹಚ್ಚಿಟ್ಟಿದ್ದ ಮಣ್ಣಿನ ಹಣತೆಯನ್ನು ನೋಡುತ್ತ ಕೂತಳು. ಸಂಜೆ ನಾಲಕ್ಕರ ಸಮಯ. ಮಧ್ಯಾಹ್ನ ಮಲ್ಲಿಗೆ ಹೂವುಗಳು ಅರಳಿದ್ದವು. ಅವುಗಳ ಕಂಪು ಅಡರತೊಡಗಿತ್ತು. ಸಾವಿನ ಮನೆಯ ಮೌನದಲ್ಲಿ ಅವುಗಳ ಕಂಪನ್ನು ಯಾರೂ
ಗಮನಿಸದ ಹಾಗೆ ಕಾಣಲಿಲ್ಲ. ಆದರೆ ನಿನ್ನೆ ಮುಳುಗುತ್ತಿರುವ ಸೂರ್ಯನನ್ನು ಕ್ಷಣ ನಿಂತು ಬೆಕ್ಕಸ ಬೆರಗಾಗಿ ನೋಡಿದ್ದ ಸಾಲು ಸಾಲು ಇರುವೆಗಳು ಗುಂಪು ಗುಂಪಾಗಿ ಬೆಳದಿದ್ದ ಗಿಡಗಳ ತುಂಬೆಲ್ಲ ಅರಳಿದ್ದ ಆ ಹೂವುಗಳ ಮೈಮೇಲೆ ಹರಿದಾಡಿಕೊಂಡು ಸೀದ ಮಾರನಾಯಕನ ದೇಹದ ಗುಂಡ ಸಾಗಿ ಮತ್ತೆ ಯಾವ ಕಡೆ ಹೋದವೋ ಗೊತ್ತಾಗಲಿಲ್ಲ. ಮಣ್ಣಮಾಡಿ ಬಂದಮೇಲೆ ಸಾವಿಗೆ ಬಂದಿದ್ದವರೆಲ್ಲ ಈರಜ್ಜಿಗೆ ಎಲೆಅಡಿಕೆ ಕೊಟ್ಟು ತೆರಳಿದರು. ಈರಜ್ಜಿ ಅವೊತ್ತು ಇಡೀ ರಾತ್ರಿ ಹಣತೆಯನ್ನು ನೋಡುತ್ತ ಕೂತಿದ್ದಳು. ಈರೂ ಯಾಕಮ್ಮಿ ಇವೊತ್ತು ಕತೆ ಹೇಳ್ತಿಲ್ಲ, ಹೋಗಮ್ಮಿ ನಿನ್ನೆ ಬಿಟ್ಟಿದ್ದ ಕತೆನಾ ಮುಂದುವರೆಸು ಎಂದ ಹಾಗೆ ಈರಜ್ಜಿಗೆ ಕೇಳಿಸಿತು. ಸುತ್ತ ಮುತ್ತ ನೋಡಿದಳು ಯಾರೂ ಕಾಣಲಿಲ್ಲ. ಪಡಸಾಲೆಯ ದೀಪದ ಬೆಳಕು ಮಾರನಾಯಕ ಸಾಯುವುದಕ್ಕೂ ಹಿಂದಿನ ಸಂಜೆ ಸೂರ್ಯ ಹರಡಿಕೊಂಡಿದ್ದ ಬಣ್ಣದ ಹಾಗೆ ಆವರಿಸಿಕೊಂಡಿತ್ತು. ಆ ಬೆಳಕಿನಲ್ಲಿ ಒಂದು ನೆರಳು ಮನುಷ್ಯನಾಕೃತಿಯನ್ನು ಪಡೆದುಕೊಂಡು ಗೋಡೆ ಮೇಲೆ ಹಾದೋಯಿತು. ಈರಜ್ಜಿಯ ಕತೆಗಳ ಕೇಳುತ್ತಿದ್ದ ಹೈಕ್ಳುಗಳು ಬೆಳೆದು ದೊಡ್ಡವರಾಗ ತೊಡಗಿದರು. ಕೊನೆಗೆ ಈರಜ್ಜಿ ಒಂದು ದಿನ ತನ್ನ ಜೀವದ ಹಕ್ಕಿಯ ರೆಕ್ಕೆಗಳ ಬಡಿಯಲಾಗದೆ ಸುಸ್ತಾದಂತಾಗಿ, ಮಲಗಿದವಳು ಮೇಲಕ್ಕೆ ಏಳಲಿಲ್ಲ. ಮಾರನಾಯಕ ಸತ್ತು ಹನ್ನೊಂದೂ ವರೆ ವರ್ಷಗಳು ಕಳೆದಮೇಲೆ ಈರಜ್ಜಿ ಈ ಲೋಕದ ಬದುಕ ಮುಗಿಸಿದಳು. ಅವಳು ಸತ್ತ ಮಾರನೇ ದಿನ ಮಳೆಯೋ ಮಳೆ. ಸುಮ್ಮನೇ ಸುರೀತಿತ್ತು. ಮದುವೆಗೆಂದು ಹೋದವರು ವಾಪಸ್ಸು ಬರುವಾಗ ತಮ್ಮ ಕೊಡೆಗಳನ್ನು ಹಿಡಿದು ಕೊಂಡಿದ್ದರು. ಮಳೆ ತನ್ನ ತೀವ್ರತೆಯನ್ನು ಹೆಚ್ಚಿಸಕೊಳ್ಳತೊಡಗಿತು. ಹೀಗೆ ಮಳೆ ಈ ಥರ ಸುರಿಯುವಾಗ ಇದ್ದಕ್ಕಿದ್ದಹಾಗೆ ಗಾಳಿನೂ ಅಡ್ಡಾದಿಡ್ಡಿಯಾಗಿ ಬೀಸತೊಡಗಿತು. ಕೊಡೆಗಳೆಲ್ಲ ಆಕಾಶದ ತುಂಬೆಲ್ಲ ಹಾರಾಡತೊಡಗಿದವು. ನಭೋಮಂಡಲ ಅಂತರಿಕ್ಷದಲ್ಲಿ ಸುರಿವ ಮಳೆಯಲ್ಲಿ ಕೊಡೆಗಳು ಕಪ್ಪು ಹೂವುಗಳಾಗಿ ಕಾಣುತ್ತಿದ್ದವು. ಅವಳು ಸಾಯುವುದಕ್ಕೂ ಹತ್ತು ನಿಮಿಷ ಮುಂಚೆ, ಸಂಜೆ ಆರರ ಸಮಯ. ದೀಪ ಹಚ್ಚಿದಳು ಕುಲದೇವರು ಶಕುನದ ಬೆಟ್ಟದ ರಂಗಯ್ಯಸ್ವಾಮಿಗೆ. ಅದರ ಬೆಳಕಿಗೆ ಯಾಕೋ ಏನೋ ಕೆಲವು ನೆನಪುಗಳು ಮುಂಗಾರಿನ ಮಿಂಚಿನಂತೆ ಧಿಗ್ಗೆಂದು ಬರುತ್ತ ಹೋಗುತ್ತ ಸುಳಿದಾಡುತ್ತಿದ್ದವು ಅವಳ ಮನಸ್ಸಿನಲ್ಲಿ. ಈರಜ್ಜಿ ಆಗ ಈರಮ್ಮ. ಹದಿನೆಂಟರ ಪ್ರಾಯ. ತನ್ನ ಓರಗೆಯವರೆಲ್ಲ ಮದುವೆಯಾಗಿ ಎರಡೋ ಮೂರೋ ಹಡೆದಿದ್ದರು. ಈರಮ್ಮ ಒಬ್ಬಳೇ ಮದುವೆಯಾಗದೆ ಉಳಿದದ್ದು. ಯುಗಾದಿ ಹಬ್ಬಕ್ಕೆ ಒಂದು ವಾರವಿತ್ತು. ಬೇವಿನ ಮರ ಹೂವುಗಳಿಂದ ತುಂಬಿಕೊಂಡು ಕಂಗೊಳಿಸುತ್ತಿತ್ತು. ದುಂಬಿ, ಜೇನ್ನೊಣಗಳ ಸದ್ದು ಝೀಂಗುಡುತ್ತಿತ್ತು. ರಾಗಿ ಕಪ್ಲೆಯಲ್ಲಿ ಹಸುಗಳ ಮೇಯಿಸುತ್ತ ಕೂತಿದ್ದಳು. ಎದುರಿಗೆ ಮುತ್ತುಗದ ಮರ. ಹೂವೆಲ್ಲ ಅರಳಿ, ಮುಗಿದು, ಚಿಗುರೊಡೆಯುತ್ತಿದ್ದ ಎಳೆಯ ಎಲೆಗಳು ಹಸುಳೆಯ ಕೆನ್ನೆಯಂತೆ ಹೊಳೆಯುತ್ತಿದ್ದವು. ಈರು ಎಲ್ಲಿ ಅಂತ ಹುಡುಕೋದು ನಿನ್ನ ಸಿವ ಸಿವ. ಎಲ್ಡುವರ್ಷಗಳಿಂದ ಹುಡುಕ್ತನೇ ಐದ್ನಿ. ಒಂದು ಊರಲ್ಲ, ಕೇರಿಯಲ್ಲ, ಏಳೇನು ಎಂಟು ಜೋಡು ಸವೆದು ಇವು ಒಂಬತ್ತ್ನೆವು ಎಂದು ಮುತ್ತುಗದ ಮರದ ದಿಕ್ಕಿನಿಂದ ಬರುತ್ತಿದ್ದ ಅಪರಿಚಿತ ವ್ಯಕ್ತಿ ಹೇಳಿದ್ದಕ್ಕೆ ಯಾರಪ್ಪ ಮಾನುಭಾವ, ನನ್ನುನ್ನ್ಯಾಕೆ ಹುಡುಕ್ತಿದಿಯಾ ಅಂತ ಕೇಳಿದಳು ಈರಮ್ಮ. ದಿನಾ ಅದೇ ಕನ್ಸು ಈರು ಎಂದ ಮುತ್ತುಗದ ಕಡೆಯಿಂದ ಬಂದ ಆಗಂತುಕ. ಯಾವ ಕನಸೋ ಏನೋ ಇತ್ತ ಬಾ ಹಸುಗಳು ಬೆದರ್ಯಾವು ಅಂದಳು. ಥೇಟ್ ಕನಸಲ್ಲಿ ಇದ್ದಂಗೆ ಐದಿಯಾ, ಆಹಾ ನನ್ನ ಚಂದವೇ ಅದೇ ಕಣ್ಣು, ಅದೇ ಮಾತು, ಅದೇ ನೋಟ ದೇವರೇ ಎಳ್ಕಬಂದ ನೋಡು ಇವೋತ್ತು. ಇಷ್ಟು ದಿನ ಕಾಯ್ಬೇಕಾಯ್ತು ನಿನ್ನ ನೋಡೋಕೆ, ನಿನ್ನ ಹತ್ತಿರ ಬರೋಕೆ ಎಂದ. ಇವನ ಮಾತು, ಹಾವಾ ಭಾವ ಗಳೆಲ್ಲ ಈರಮ್ಮನಿಗೆ ವಿಚಿತ್ರ ಎನ್ನಿಸಿದವು. ಯಾವೂರಯ್ಯ ನಿಂದು ಒಳ್ಳೆ ಜೋಗೇರಿದ್ದಂಗಿದಿಯಾ, ಏನ್ ಮೋಡಿಗೀಡಿ ಮಾಡೋರೋ ಏನೋ ಹೋಗಯ್ಯ ಎಂದ ಅವಳ ಮಾತಿಗೆ ಅಂಗೈಯಲ್ಲಿ ಬೆಣ್ಣೆ ಹುಡುಕಿಕೊಂಡು ತುಪ್ಪಕ್ಕೆ ಹುಡುಕಾಡಿದರಂತಲ್ಲ ಹಾಗಾಯ್ತು ನನ್ನ ಕತೆ. ಪಕ್ಕದ ಊರಾಗೆ ಇರೋ ನಿನ್ನ ಹುಡುಕದ್ನ ಬಿಟ್ಟು ಎಲ್ಲೆಲ್ಲೋ ಹುಡುಕಾಡಿದೆ ನಿನ್ನ ಎಂದ. ಈ ಸೀಮೆಗೆ ನಿನ್ನ ಎಲ್ಲೂ ಎಂದೂ ಕಂಡಿಲ್ಲ ಬಿಡು ಬಿಡು ಎಂದಳು. ಹಾಗೆ ಅಂದವಳೇ ಸೀದ ತನ್ನ ಹಸುಗಳ ಹೊಡಕೊಂಡು ಮನೆಯ ಕಡೆ ನಡೆದಳು. ಅವನ ಮುಂದಿನ ಯಾವ ಮಾತಿಗೂ ಜವಾಬು ಕೊಡದೆ ಮುಂದೆ ಸಾಗಿದಳು. ಅವನು ನಾಳಿಕ್ಕೆ ಬತ್ತೀನಿ ಕಣಮ್ಮಿ ಅಂದವನು ಮುತ್ತುಗದ ಮರದ ಕಡೆ ಹೋಗಿ ಮರೆಯಾದನು. ಹೀಗೆ ದಿನಾಲೂ ಅದೇ ಜಾಗದಲ್ಲಿ ಕಾಣಿಸಿಕೊಳ್ಳತೊಡಗಿದ. ನೂರು ದಿನಗಳು ತನ್ನ ಬಿಗುಮಾನವನ್ನು ಬಿಡದೆ ಮಾತಾಡುತ್ತಿದ್ದ ಈರಮ್ಮನಿಗೆ ಅವನ ಜೊತೆ ಒಂದು ದಿನ ತನಗೆ ಅರಿವಾಗದೆ ಸಲಿಗೆ ಸ್ನೇಹ ಬೆಳೆಯಿತು. ನೂರಾ ಒಂದನೇ ದಿನ ನಿನ್ನ ಹೆಸರೇನು ಅಂತ ಕೇಳಿದಳು. ಅದನ್ನೇ ಇಷ್ಟು ದಿನ ಕಾಯತಾ ಇದ್ದವನ ಹಾಗೆ ಆಹಾಹಾ ಇಷ್ಟು ಸಾಕು ಕಣಮಿ ಅಂದವನು ಮಾರನಾಯಕ ಎಂದು ಹೇಳಿದ. ಅಂತ ಹೆಸರಿನವರು ಯಾರೂ ಇಲ್ಲವಲ್ಲ ಪಕ್ಕದೂರಿನಲ್ಲಿ ಎಂದಳು. ಸಂಬಂಧ ಬೆಳೆಸುವುದಕ್ಕೆ ಕಂಡವರೇ ಆಗಬೇಕೆನಮ್ಮಿ, ಕಂಡೇಇಲ್ಲದ ನಾನು ನಿನ್ನ ಹುಡುಕ್ಕೆಂಡು ಬಂದೈದಿನಿ ಕನಸನ್ನ ನೆಚ್ಚಿಕೊಂಡು. ಅವೊತ್ತು ಮನೆಯವರಿಗೆ ಹೇಳಿದಳು ನಡೆದ ವಿಷಯವನ್ನು. ಅವಳ ಅಪ್ಪ ಅರೆ ನನಗೆ ಗೊತ್ತಿಲ್ಲದೆ ಇರೋರೂ ಯಾರೈದಾರೆ ಅಲ್ಲಿ ಮಾರನಾಯಕ ಅನ್ನೋನು ಎಂದು ಕೊಂಡವನು ತಾನೇ ಖುದ್ದಾಗಿ ಹೋಗಿ ವಿಚಾರಿಸಿದಾಗ ಅಲ್ಲಿ ಅಂತ ಆ ಹೆಸರಿನವರು ಯಾರು ಇಲ್ಲ ಎಂದು ತಿಳಿದುಕೊಂಡ. ಮನೆಗೆ ಬಂದವನೆ ಮಗಳು ಈರಮ್ಮನಿಗೆ ನಾಳೆ ಅವನು ಬಂದರೆ ಮನೆಗೆ ಕರಕಂಡು ಬಾ ನೋಡನ ಅಂದ.






ಒಂಥರಾ ವಿಶೇಷವಾಗಿದೆ
ಕಥೆ ಮುಗೀತಾ ಅಥವಾ ಬೆಳೆಯುತ್ತದ? ಹೊಸದೊಂದು ಬಗೆಯ ತಾಕಲಾಟದಲ್ಲಿ ನಡೆದಾಡುವ ವಿಶೇಷ ಇದೆ ರಮೇಶ್ ಇಲ್ಲಿ….ಕಥೆಯೊಳಗಿನ ಬಾಳಿಗೆ ನೈಜತೆಯ ಮೆತ್ತಿ ಚೆಂದವಾಗಿ ಬರೆದಿದ್ದೀರಿ…… ಈ ಕಥೆಯ ಸೂರ್ಯ, ಇರುವೆಗಳು ಈಗ ನನ್ನ ಜೊತೆಗೆ ಇವೆ…. ಹೀಗೆ ಜೊತೆಗೆ ಇರುವ ಕಥೆಗಳೇ ನಿಮಗೆ ಬೇಕು ಸಹಜವಾಗಿ …….
ಕಥೆ ಗೊಂದಲದ ಗೂಡು ಅನಿಸಿತು ನನಗೆ