ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ..

ಸಾಯೋದು ಮತ್ತು ಬದುಕೋದು ಅಂದರೆ ಹೀಗೆ..

prasad shenoy r kಪ್ರಸಾದ್ ಶೆಣೈ ಆರ್ ಕೆ

ಭಾನುವಾರದ ಬೆಚ್ಚನೆಯ ಮೆದು ಸ್ನಾನ ಆಗ ತಾನೇ ಪೂರೈಸಿತ್ತು. ಹೊರಗೆ ಬೋರೋ ಬೋರೋ ಅಂತ ಸುರಿಯೋ ಜಡಿ ಮಳೆ, ಅಷ್ಟೇ ಅರ್ಥವತ್ತಾಗಿ ಬಿದ್ದುಕೊಂಡ ಮೌನ, ಅದರ ನಡುವೆಯೇ ಸಣ್ಣಗೇ ಉಲಿಯುತ್ತಿದ್ದ ಗೆಲ್ಲೊಂದರಲ್ಲಿ ಕೂತ ಜಾಣ ಜಾಣ ಕಾಜಾಣ. ಇವೆಲ್ಲದರ ಲಕ್ಷ್ಯ ಇದ್ದೋ ಇಲ್ಲದೆಯೋ ಮಲೆಗಳಲ್ಲಿ ಮದುಮಗಳಿನ ಕಾನೂರಿನಲ್ಲೋ, ಹೂವಳ್ಳಿಯಲ್ಲೋ, ಚಿನ್ನಮ್ಮನ ಸೆರಗಿನ ಮರೆಯಲ್ಲೋ, ಗುತ್ತಿ ನಾಯಿಯ ಬೊಗಳಿನಲ್ಲೋ, ಕಳೆದೇ ಹೋಗಿದ್ದೆ.

ಹೂವಳ್ಳಿಯ ಅಂಗಳದಲ್ಲಿ ಆಗ ತಾನೇ ಮಳೆ ಜಿನುಗುತ್ತಿತ್ತು. ಮದ್ಯಾಹ್ನವಾಗಿತ್ತು… ಸುತ್ತಲೂ ಕತ್ತಲಾಗಿದ್ದ ವಾತಾವರಣ ಮೋಡ ಮುಸುಗಿ ಮತ್ತೂ ಕತ್ತಲಾಯ್ತು. ನಮ್ಮ ಮನೆ ಅಂಗಳದಲ್ಲೂ ಮಳೆ ಜಿನುಗುತ್ತಿತ್ತು. ಹೂವಳ್ಳಿಯಷ್ಟೇ ಕತ್ತಲಾಗಿತ್ತು… ಓದುತ್ತಾ ಓದುತ್ತಾ ಮುಳುಗಿದ್ದವನಿಗೆ ಮಳೆ ಬಂದದ್ದು ಕಾದಂಬರಿಯಲ್ಲೋ, ಮನೆ ಅಂಗಳದಲ್ಲೋ ಅಂತ ತಕ್ಷಣ ಗ್ರಹಿಸಲು ಆಗಲಿಲ್ಲ. ನೋಡಿ ಒಂದು ಕಾದಂಬರಿಗೆ ಅದೆಷ್ಟು ಶಕ್ತಿ ಇದೆ. ಓದುತ್ತಾ ಹೋದಂತೆಲ್ಲಾ ನೀವೂ ಹೂವಳ್ಳಿಯಲ್ಲಿಯೇ ಚಿನ್ನಮ್ಮನನ್ನು ಹಿಂಬಾಲಿಸುತ್ತಾ, ಹೋದಂತಾಂಗುತ್ತದೆ.

tundu-hykluಗುತ್ತಿ ಜೊತೆಯಲ್ಲಿಯೇ ಹೊಳೆ ದಾಟಿದಂತಾಗುತ್ತದೆ, ಹುಲಿಕಲ್ಲಿನ ನೆತ್ತಿನ ಮೇಲೆ ನೀವೂ ಅರೆಕ್ಷಣ ಬದುಕಿದಂತಾಗುತ್ತದೆ. ಹೀಗೆ ಕಾದಂಬರಿಗಳಲ್ಲೇ ಹೊಳೆ ದಾಟೋದು, ಬದುಕೋದು ಅದೆಷ್ಟು ಹಿತ ಅಂತ ಅಕ್ಷರಗಳಲ್ಲೇ ಮುತ್ತಿನ ಗಾಳಿಪಟ ಬಿಡುವ ನಿಮಗೆಲ್ಲಾ ಮತ್ತೆ ವಿವರಿಸಬೇಕಾ?

ಕುವೆಂಪು ಬರೆದ ಆ ಕಾದಂಬರಿಯ ಹಾಗೇ, ಬದುಕಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಆ ಮದ್ಯಾಹ್ನಕ್ಕೆ ತೀವ್ರವಾಗಿ ಅನ್ನಿಸಿಬಿಡುತ್ತಿತ್ತು. ಜನನಿಯ ಜೋಗುಳ ಘೋಷ ಅಂತ ಒಂದು ಸಾಲು ಹೇಳಿದರೂ ಸಾಕು, ಬದುಕು ಎಷ್ಟೊಂದು ಸಹ್ಯ ಅಂತ ನಿಬಿಢವಾಗಿ ಬದುಕುವ ಆಸೆಯಾಗೋದಿಲ್ಲವಾ?

ಉದಯದೊಳೇನ್ ಹೃದಯವ ಕಾಣ್… ಅದೇ ಅಮೃತದ ಹಣ್ಣೋ… ಅಂದಾಗ… ಎಲ್ಲಿ ಸತ್ತೇ ಹೋಗುತ್ತದೆ ಆ ಜಿಗುಪ್ಸೆ. ಅಂತ ತುಂಬಾ ಬೆರಗುಗೊಂಡಿದ್ದೇನೆ. ಈಗ ಮಲೆಗಳಲ್ಲಿ ಮದುಮಗಳು ಓದುತ್ತಾ ಕೂತವನಿಗೂ ಅಕ್ಷರ ಅನ್ನೋ ಅನಘ್ರ್ಯ ಮುತ್ತಿನ ಎದುರು ಅವಳು ಕೊಡುವ ಬಿಸಿಮುತ್ತು ಏನೂ ಅಲ್ಲ ಅನ್ನಿಸತೊಡಗಿತ್ತು. ನಮ್ಮ ಬದುಕಿಗೆ ಕ್ಷಣ ಕ್ಷಣವೂ ಸ್ಪೂರ್ತಿ ಕೊಡುವ ಅಕ್ಷರಮಾಲೆಯನ್ನು ಆಗಾಗ ಹಿಡಿದುಕೊಂಡೋ, ಇಳಿಸಿಕೊಂಡೋ, ಹೋಗುವಾಗ ಸಿಗುತ್ತದಲ್ಲಾ ಆ ಜೀವನ ಪ್ರೀತಿಯ ನುಚ್ಚಿನುಂಡೆ ಅದರ ಸಿಹಿಯನ್ನೂ ಯಾವ ಸಿಹಿತಿಂಡಿಯೂ ಕೊಡಲಾರದು ಅನ್ನಿಸುತ್ತದೆ.

ಮೊನ್ನೆ ಮೊನ್ನೆ ತಂಗಿಯಂತಹ ಹುಡುಗಿಯೊಬ್ಬಳು ತೀರ ಬೇಜಾರಲ್ಲಿದ್ದಳು, ನಂಗೂ ಜೀವನವೇ ಬೇಡ ಅನ್ನಿಸಿದೆ. ಸಾವು ಯಾಕೋ ಎಲ್ಲದ್ದಕ್ಕೆ ಪರಿಹಾರ ಅನ್ನಿಸುತ್ತಿದೆ. ಅಂದಾಗ, ನಾನು ಹೇಳಿದ.

ನಂಗೂ ಸಾಯಬೇಕನ್ನಿಸುತ್ತಿದೆ. ಆದ್ರೆ ಸತ್ತು ಮರುಕ್ಷಣದಲ್ಲಿಯೇ ಹುಟ್ಟು ಪಡೆಯೋ ಹಾಗೇ ಸಾಯೋದು…

she skirt butterflyಹೇಗೆ? ಆಕೆಯ ಮುಗ್ದ ಪ್ರಶ್ನೆ…

ಪುಟ್ಟ ಮಗು ಕಿಲ ಕಿಲ ನಗುವಾಗ, ನಿಗೂಢ ದಾರಿಯಲ್ಲಿ ಬಸ್ಸು ನೂರಾರು ಮಂದಿಗಳನ್ನು ಆಸ್ಥೆಯಿಂದ ಹೊತ್ತುಕೊಂಡು ಹೋಗೋದನ್ನು ನೋಡುವಾಗ, ರಾತ್ರಿ ಎಷ್ಟೊ ಮೈಲು ದೂರದಲ್ಲಿ ನಾಯಿ ಕೂಗುವಾಗ, ನಿಗೂಢ ರಾತ್ರಿಯಲ್ಲಿ ದೀಪ ಕಂಡಾಗ, ಬಿಕಾರಿ ಮಗು ಹೊಟ್ಟೆಗಿಲ್ಲದೇ ಜಾತ್ರೆಯ ಬಣ್ಣ ಬಣ್ಣದ ಜಿಲೇಬಿಗಳನ್ನು ನೋಡೋವಾಗ, ಚಪ್ಪಲಿಯೇ ಇಲ್ಲದೇ ಅದೆಷ್ಟೋ ದೂರ ಅಲೆಯೋ ಅಜ್ಜನನ್ನು ನೋಡಿದಾಗ, ಆಕಾಶದಲ್ಲಿ ಅಚಲವಾಗಿ ಹಾರೋ ಹದ್ದುವನ್ನು ನೋಡಿದಾಗ..

..ನೂರಾರು ಜನರ ಮದ್ಯೆ ಹೊರಳಿ, ನುಗ್ಗಿ ತಾಳ್ಮೆಯೇ ಬದುಕಿನ ಜೀವಾಳವೆನ್ನುವ ಕಂಡಕ್ಟರನನ್ನು ನೋಡುವಾಗ, ಅಮ್ಮಾ ಊಟ ಮಾಡದೇ ಬಟ್ಟಲಿಡಿದುಕೊಂಡು ನನ್ನ ದಾರಿ ಕಾಯುತ್ತಾ ಕೂರುವಾಗ, ಅರೆಕ್ಷಣ ಸಾಯ್ತೇನೆ ನಾನು. ಆದ್ರೆ ಮತ್ತೆ ಬದುಕ್ತೇನೆ. ಇಂತಹ ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲಿ ಸಾಯು. ನೀನು ಹುಟ್ಟಿಸುವ ಕವಿತೆಗಳಲ್ಲಿ, ಮೀಟುವ ವೀಣೆ ನಾದದಲ್ಲಿ, ಬಿಡಿಸಿಕೊಳ್ಳುವ ಸುಂದರ ಚಿತ್ರಗಳಲ್ಲಿ, ನಿನ್ನೊಳಗೇ ಮೂಡುವ ಅದ್ಬುತವಾದ ಸೃಷ್ಠಿಗಳಲ್ಲಿ ಸಾಯು, ಒಮ್ಮೆ ಆಗ ಮತ್ತೆ ಹುಟ್ಟಿಕೊಳ್ತಿಯಾ ಅಂದೆ.

ತಂಗಿಯಂತಹ ಹುಡುಗಿ ತುಂಬಿಕೊಂಡಳು. ಮತ್ತೆ ಹುಟ್ಟಿದಳು. ತುಂಬಿ ಕೊಂಡಳು. ಪುಟ್ಟ ಮಗುವಿನಂತೆ…

ಮತ್ತೆ ಬೇಂದ್ರೆ ಅಜ್ಜನ ಸಾಲು ಕಳಿಸಿಕೊಟ್ಟೆ…

ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ.. ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ.. ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ…

..ಅವಳು ಮಾತ್ರ ತುಂಬಿಕೊಳ್ಳಲಿಲ್ಲ. ನಾನೂ ಸತ್ತೆ… ಸತ್ತೆ… ಮತ್ತೆ ಮತ್ತೆ ಬದುಕಿದೆ… ಆ ಸಾಲುಗಳಲ್ಲಿ… ಬದುಕಿನ ಅದಮ್ಯತೆಗಳಲ್ಲಿ.

‍ಲೇಖಕರು Admin

September 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Vihiwadawadagi

    ಅದ್ಭುತ ತುಂಬ ಸೊಗಸಾಗಿದೆ ಮತ್ತೊಮ್ಮೆ ಮಲೆಗಳಲ್ಲಿ ಮದುಮಗಳು ಓದುವ ಆಸೆ ಹಚ್ಚಿದಿರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: