ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..

ಸತ್ಯಮಂಗಲ ಮಹಾದೇವ

**

ಕಾಡು ಕಣಿವೆಯ ಹಾದು

ತೊರೆ, ಹಳ್ಳ ಗಿರಿಪಂಕ್ತಿಗಳ ಕಂಡು

ಮನದಣಿಯುವನಕ ಮೈಚಾಚಿ ಮಲಗಬೇಕು

ಮಣ್ಣಿನಲಿ ಮೊರಟಿರುವ ಕಲ್ಲುಮುಳ್ಳುಗಳೆದೆಯಲ್ಲಿ

ಗಾಯದಾ ಹಾಡುಗಳ ಕೇಳಬೇಕು

ನಡೇದಷ್ಟೂ ನೆಲ, ಹರಿದಷ್ಟೂ ಗಾಳಿ, ನೋಡಿದಷ್ಟೂ ನೋಟ

ಕಣ್ಣು ಅರಿಯದ ಸತ್ಯ ಮನದಿ ಹೊಳೆಯುವಾಗ

ಸ್ಪರ್ಷದ ದಿವ್ಯತೆಯ ಮಹಾನಂದವನು ಅರಿವಿಗೆ ದಾಟಿಸಬೇಕು

ಉದುರಿಬಿದ್ದಿರುವ ಹೂಪಕಳೆಗಳೆಲ್ಲಾ

ಮಣ್ಣಿನಲಿ ಮಣ್ಣಾಗಿ ಹಣ್ಣಿಗೆ ಹೊಸ ಕಣ್ಣಾಗಿ

ತನಿರಸವಾಗುವ ಸೋಜಿಗವ ಅರಿಯಬೇಕು

ಅರಿತು ಮರೆತರೆ ಸಾಕೆ? ಬೆರೆಯಬೇಕು

ಗಿಡಗೆಂಟೆಗಳ ಮೈಬೆವರಿನಿಂದ

ನಾನೆಂಬ ಮುಖವಾಡ ತೊಳೆಯಬೇಕು 

ಸಾಗುತಿರಬೇಕು ಬೀಗುತಿರಬೇಕು

ಹೆಜ್ಜೆಗಳಿಗಂಟಿದ ತರಚುಗಾಯದ ಪ್ರೇಮ

ಕೆಂಪಾಗುವುದ ಕಂಡು ನಲಿಯಬೇಕು

ಗಾಯಗಳನ್ನು ನೆನೆದು ನೋವೆನ್ನಬೇಡ

ಹೊಕ್ಕ ಮುಳ್ಳಿನ ಪ್ರೀತಿ ಮನವು ಮಾಗಿದ ಕಾಂತಿ

ಕಾನನದ ಕಡುಮೋಹದಿಂದುಳಿದ ಜೀವ ಹರ್ಷವಿನ್ನೆಲ್ಲಿ ಕಾಣಬೇಕು

ಪಯಣಿಸಬೇಕು ಹೊರಗಿರುವಂತೆ ಒಳಗೂ

ತೆರೆದುಕೊಂಡಷ್ಟೂ ಬೆರಗು ಭಾವಿದಷ್ಟೂ ಬೆಳಗು

ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ

ಅಪ್ಪಿಯೂ ಅಪ್ಪದಿರುವಂತೆ ತಪ್ಪದೆ ಕಾಯುವುದೇ ಪ್ರೇಮ

ನಡೆನಡೆದು ಸುಸ್ತಾದಾಗ ಆಕಾಶಕ್ಕೆ ಮುಖಮಾಡಿ ನಸುನಗೆಯ ಬೀರಬೇಕು

ಕೆತ್ತಿ ಕೊರೆದರೂ ಉಗಿದು ಕೊಳೆ ಬೆರೆಸಿದರೂ

ಮರೆಯದೆ ಕೊಡುವ ಮುಗುಳುನಗೆಯ ಮೃದುತನವನು

ಮಣ್ಣಗುಣವನ್ನು ಬೊಗಸೆಯಲ್ಲಿಡಿದು ಎದೆಗೆ ಬಸಿದುಕೊಳ್ಳಬೇಕು

ಪ್ರಯಾಣ ಮುಗಿಯಿತೆನಬೇಡ

ನಿಲ್ಲದಿರುವುದ ಕಲಿತು ಜಡಮರೆತು ಸಾಗುತ್ತಿರಬೇಕು

ಗಾಳಿಯಲ್ಲಿ ಮೈಪಡೆದ ಭಾವಕುಸುಮಗಳನ್ನು

ಎದೆಗೊತ್ತಿ, ಕಣ್ಗೊತ್ತಿ, ನಡೆದು ಬಂದ ದಾರಿಗೆ ಕೃತಜ್ಞತೆಯಾಗಿ ಚೆಲ್ಲಬೇಕು

ವಿಜ್ಞಾನದ ಬೂದಿಯಲಿ ಮೊಳೆದ

ಆಧ್ಯಾತ್ಮಕ್ಕೆ ಒಳಗನ್ನು ತೆರೆಯಬೇಕು

ರೂಪು ನೂರರಲ್ಲಿ ಅಡಗಿರುವ ಚೈತನ್ಯವ ನಾವು ಹುಡುಕಬೇಕು

‍ಲೇಖಕರು Admin MM

June 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: