'ಕಡೇ ನಾಲ್ಕು ಸಾಲು' ಎಂಬ ಫಿಲ್ಟರ್ ಕಾಫಿ

ಉಮಾ ಮುಕುಂದ್ ಅವರ ಕವಿತಾ ಸಂಕಲನ ‘ಕಡೇ ನಾಲ್ಕು ಸಾಲು’

ಮೊದಲ ಸಂಕಲನಕ್ಕೇ ‘ಕಡೇ ನಾಲ್ಕು ಸಾಲು’ ಎಂಬ ಹೆಸರು ಬೇಕೇ? ಎಂದು ಕೇಳಿದವರು ಹಲವಾರು 
ಆದರೂ ಉಮಾ ನಕ್ಕು ವೋಟ್ ಮಾಡಿದ್ದು ಇದೊಂದೇ ಹೆಸರಿಗೆ 
‘ಬಹುರೂಪಿ’ ಹೊರತಂದಿರುವ ಈ ಕೃತಿಗೆ ಜಿ ಎನ್ ಮೋಹನ್ ಬರೆದ ಮಾತು ಇಲ್ಲಿದೆ-

-ಜಿ ಎನ್ ಮೋಹನ್
‘ಹೌದೇನೇ ಉಮಾ ಹೌದೇನೇ
ಜಗವೆನ್ನುವುದಿದು ನಿಜವೇನೇ ?’
-ಇವು ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಜನಪ್ರಿಯ ಸಾಲುಗಳು. ಯಾಕೋ ಗೊತ್ತಿಲ್ಲ ಆಗೀಗ ಈ ಸಾಲುಗಳು ನನ್ನ ಮನದೊಳಗೆ ಗುಂಯ್ ಗುಡುತ್ತಲೇ ಇರುತ್ತದೆ.
ಹಾಗಿರುವಾಗ ಈ ಸಾಲುಗಳು ನಿಜವೇನೋ ಎನ್ನುವಂತೆ ಉಮಾ ಮುಕುಂದ್ ತಮ್ಮ ಕವಿತೆಗಳೊಂದಿಗೆ ರಂಗ ಪ್ರವೇಶಿಸಿಯೇಬಿಟ್ಟರು. ಮುಕುಂದ್, ಮುಕುಂದ್ ಮತ್ತು ಮುಕುಂದ್ ಕುಟುಂಬದಲ್ಲಿ ಎ ಎನ್ ಮುಕುಂದ್ ಹಾಗೂ ಪ್ರತೀಕ್ ಮುಕುಂದ್ ಇಬ್ಬರೂ ಕ್ಯಾಮೆರಾ ಕಣ್ಣಿನ ಮೂಲಕ ಜಗತ್ತನ್ನು ಅಳೆದವರು. ಆ ಕಾರಣಕ್ಕಾಗಿಯೇ ಸಾಕಷ್ಟು ಬೆಳಕನ್ನು ಪಡೆದವರು.
ಈ ಇಬ್ಬರೂ ಕ್ಯಾಮೆರಾ ಕಣ್ಣಿನಿಂದ ಜಗತ್ತನ್ನು ನೋಡುತ್ತಿರುವ ವೇಳೆ ಸದ್ದಿಲ್ಲದೇ ಕಾವ್ಯ ಕಣ್ಣಿನ ಮೂಲಕ ಜಗತ್ತನ್ನು ನೋಡಲು ಹೊರಟವರು ಉಮಾ ಮುಕುಂದ್. ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ತಮ್ಮ ಕೃತಿ —ಯಲ್ಲಿ ಹೇಗೆ ಉಮಾ ತಮ್ಮ ಫೋಟೋ ಯಾನದ ಭಾಗವಾಗಿದ್ದರು ಹಾಗೂ ಅದರ ಯಶಸ್ಸಿನ ಪಾಲುದಾರರು ಎನ್ನುವುದನ್ನು ಹೇಳಿದ್ದಾರೆ. ಅಷ್ಟು ಮಾತ್ರ ಎಂದು ನಾವೆಲ್ಲರೂ ಅಂದುಕೊಂಡಿರುವಾಗ ಉಮಾ ಕವಿತೆಗಳ ಮೂಲಕ ಮಾತನಾಡಲಾರಂಭಿಸಿದರು. ತಮ್ಮ ಬದುಕಿನ ಐದು ದಶಕದ ನಂತರ. ಆಗಲೇ ಜಿ ಎಸ್ ಎಸ್ ಕವಿತೆಗೆ ಆದ ಆಶ್ಚರ್ಯ ನನಗೂ ಆದದ್ದು.
ಉಮಾ ಮುಕುಂದ್ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು ‘ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು. ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ.
ಯಾಕೆಂದರೆ ಅವರು ‘ಥೇಟ್ ನನ್ನಂತೆಯೇ..’ ಅವರ ಕವಿತೆಗಳು ಸಹಜವಾಗಿ ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಭಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ.. ಹೀಗೆ ಉಮಾ ಮುಕುಂದ್ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ.. ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ. ಇವರ ಕವಿತೆಗೆ ಕಾಲು ದಾರಿಯೂ ಗೊತ್ತು, ಹೈವೇಯೂ ಗೊತ್ತು,
ಬಿ ವಿ ಕಾರಂತರು ಸಖತ್ ಮೂಡ್ ನಲ್ಲಿರುವಾಗ ಒಮ್ಮೆ ನನ್ನೊಡನೆ ಮಾತನಾಡುತ್ತ ‘An Actor is like a beggar’s Bag’ ಎಂದಿದ್ದರು. ‘ಒಬ್ಬ ಕಲಾವಿದನಾದವನು ಭಿಕ್ಷುಕನ ಜೋಳಿಗೆಯಂತಿರಬೇಕು. ಅದರಲ್ಲಿ ಸಿಕ್ಕ ಸಿಕ್ಕದ್ದೆಲ್ಲಾ ತುಂಬಿರಬೇಕು. ಅವು ಅರ್ಥಪೂರ್ಣವಾಗಿ ಆಚೆ ಬರಬೇಕು’ ಎನ್ನುತ್ತಿದ್ದರು. ಹಾಗೆ.. ಥೇಟ್ ಹಾಗೆಯೇ ಉಮಾ ಕವಿತೆಗಳು. ಇಲ್ಲಿ ಎಲ್ಲವೂ ಇವೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು.. ಈ ಎಲ್ಲವೂ ನಿಧಾನವಾಗಿ ಐದು ದಶಕದ ಸೋಸುವಿಕೆಗೆ ಒಳಪಟ್ಟು ಕವಿತೆಗಳಾಗಿ ಚಿಮ್ಮಿವೆ.

ಬಿ ಎ ವಿವೇಕ ರೈ ಅವರು ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಎನ್ನುವ ಅಂಕಣ ಬರಹದಲ್ಲಿ ಮನಸ್ಸುಗಳನ್ನು ಅರಿಯಲು ಬಿಚ್ಚಬೇಕಾದ ಕಟ್ಟಡಗಳೇನು ಎಂದು ವಿವರಿಸಿದ್ದರು. ಉಮಾ ಇಲ್ಲಿ ತಾವೇ ತಾವಾಗಿ ತಮ್ಮ ಕವಿತೆಗಳ ಮೂಲಕ ಆಲಿಸಬೇಕಾದ ದನಿಗಳನ್ನು ಮುಂದಿಟ್ಟಿದ್ದಾರೆ.
ಕವಿತೆಯೆಂಬ ಕ್ಯಾಮೆರಾದಲ್ಲಿ ಕಾಣುವುದಕ್ಕೂ, ಕ್ಯಾಮೆರಾದಲ್ಲಿ ಕಾಣುವ ಲೋಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕ್ಯಾಮೆರಾ ಕಂಡ ಲೋಕದ ಮೂಲಕ ತಮ್ಮ ಜಗತ್ತು ಕಟ್ಟಿಕೊಂಡ ಉಮಾ ಮುಕುಂದ್ ಕವಿತೆಯೆಂಬ ಕ್ಯಾಮೆರಾ ಮೂಲಕ ಹೊಸದನ್ನೇ ನಮಗೆ ಕಾಣಿಸುತ್ತಿದ್ದಾರೆ.
ಇವರ ಕವಿತೆಗಳು ಕಾಫಿ ಡೇಯ ಕೆಪುಚಿನೊ ಅಲ್ಲ , ನಮ್ಮ ಮನಸ್ಸು ಸದಾ ಹಾತೊರೆಯುವ ಫಿಲ್ಟರ್ ಕಾಫಿ….

ಬಹುರೂಪಿ ಕೃತಿಗಳನ್ನು ಕೊಳ್ಳಲು..


 

‍ಲೇಖಕರು avadhi

December 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: