ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಿದಾದ ತಿರುವುಗಳಲ್ಲಿ ಪ್ರೇಮದ ಪಯಣ 

ಗೊರೂರು ಶಿವೇಶ್

ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥೆಗಳು. ಆದರೆ ಆ ಮೂರು ಕಥೆಗಳು ಒಂದು ಕೇಂದ್ರದ ಕಡೆಗೆ ಸಂಚರಿಸುತ್ತಿವೆ. ಇಂಥದೊಂದು ಕಥೆಯನ್ನು ಹೊತ್ತು ತಂದಿರುವ ಚಿತ್ರ ಏಳು ಮಲೆ. ಚಿತ್ರದ ಕಥೆಯನ್ನು ತ್ರಿಭುಜದ ಗುರುತ್ವ ಕೇಂದ್ರಕ್ಕೆ ಹೋಲಿಸಬಹುದು. ರೇಖಾಗಣಿತದಲ್ಲಿ ಒಂದು ತ್ರಿಭುಜದ ಮೂರು ರೇಖೆಗಳ ಮಧ್ಯ ಬಿಂದುಗಳು ಸಂಧಿಸುವ ಬಿಂದುವನ್ನು ಅದರ ಗುರುತ್ವ ಕೇಂದ್ರ ಎಂದು ಹೇಳಲಾಗುತ್ತದೆ.

ಇಡೀ ಕಥೆಗಳು ನಡೆಯುವುದು ಒಂದು ರಾತ್ರಿಯಲ್ಲಿ. ಎಲ್ಲಾ ವಿರೋಧ ಹಾಗೂ ಒತ್ತಡಗಳ ನಡುವೆ ಇಬ್ಬರು ಪ್ರೇಮಿಗಳು ಪರಸ್ಪರ ಸಂಧಿಸಲು ಹೊರಟಿದ್ದಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಪೊಲೀಸರ ಕಣ್ಣು ತಪ್ಪಿಸಿ ಕಾಡಿನಲ್ಲಿರುವ ಅಪರಾಧಿಗಳಿಗೆ ನೀಡಲು ಒಂದು ತಂಡ ಹೊರಟಿದೆ. ಮತ್ತೊಂದೆಡೆ ವಿಚಾರಣೆಗೆಂದು ಕರೆತಂದ ಆರೋಪಿಗೆ ಪೊಲೀಸ್ ಟ್ರೀಟ್ಮೆಂಟ್ ನಡೆಯುತ್ತಿದೆ. ಈ ಮೂರು ಘಟನೆಗಳು ಆಪರೇಷನ್ ಕುಕುನ್(ಕಾಡುಗಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ಕೋಡ್ ವರ್ಡ್) ಎಂಬ ಗುರುತ್ವದ ಕಡೆಗೆ ಸೆಳೆಯಲ್ಪಡುತ್ತದೆ.. ಈ ಘಟನೆಗಳ ಕೇಂದ್ರ ಏಳು ಮಲೆಗಳ ಮಹದೇಶ್ವರ ಬೆಟ್ಟ. ಏಳು ಮಲೆಗಳ ತಿರುವಿನಲ್ಲಿ ಸಾಗುವ ಪ್ರಯಾಣಿಕನ ಅನುಭವ ಇಲ್ಲಿ ಚಿತ್ರ ಪ್ರೇಕ್ಷಕನಿಗೂ ಆಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಬಾರ್ಡರ್ ನಲ್ಲಿ ಘಟನೆಗಳು ನಡೆಯುವುದರಿಂದ ಸ್ಥಳಿಯ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಎರಡು ಭಾಷೆಗಳನ್ನು ಬಲ್ಲ ನಿರ್ದೇಶಕ ಪುನೀತ್ ರಂಗಸ್ವಾಮಿ ಕಥೆಯನ್ನು ಚೆನ್ನಾಗಿ ಕಟ್ಟಿದ್ದಾರೆ. ಒಂದು ನೈಜ ಘಟನೆಯ ಸುತ್ತ ಹೆಣೆದ ರೋಚಕ ಕಥೆ, ಮತ್ತು ಘಟನಾವಳಿಗಳು ನಿರ್ದೇಶಕರ ಸಾಮರ್ಥ್ಯವನ್ನು ಪ್ರತಿಬಿಂಬಿಸಿದೆ. ಹೊಸ ನಟ ನಟಿಯರಾದ ರಾಣಾ, ಪ್ರಿಯಾಂಕರ ಜೊತೆ ಕಿಶೋರ್ ಮತ್ತು ನಾಗಭರಣರ ಅಭಿನಯ ಗಮನ ಸೆಳೆಯುತ್ತದೆ. ಕತ್ತಲಿನ ಕರಾಳತೆಯನ್ನು ಬಿಂಬಿಸುವಲ್ಲಿ ಅದ್ವೈತ ಗುರುಮೂರ್ತಿಯವರ ಛಾಯಾಗ್ರಹಣ ಯಶಸ್ವಿಯಾಗಿದೆ.

ಮೂರು ಕಥೆಗಳು ಒಂದಕ್ಕೊಂದು ಪೂರಕವಾಗಿ ಘಟಿಸುತ್ತಾ ಹೋಗುತ್ತವೆ. ಪ್ರತಿ ಘಟನೆಗಳು ರಾತ್ರಿ ಕರಾಳ ಕತ್ತಲಿನಲ್ಲಿ ನಡೆಯುವುದು ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಎಲ್ಲ ಘಟನೆಗಳು ಪ್ರೇಕ್ಷಕನ ನಿರೀಕ್ಷೆಯನ್ನು ಮೀರಿ ಚಿತ್ರದ ಅಂತ್ಯದವರೆಗೂ ಸಾಗಿ ವಿಷಾದ ಅಂಚಿನಲ್ಲೂ ನೆಮ್ಮದಿಯ ನಗು ಮೂಡಿಸುತ್ತದೆ.

ಕಳೆದ ತಿಂಗಳು ಬಿಡುಗಡೆಯಾಗಿ ಯಶಸ್ವಿಯಾದ ಈ ಚಿತ್ರ z5 ಓಟಿಟಿಯಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ.

‍ಲೇಖಕರು Admin

21 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading