ಪರದೆ ಎಳೀರಿ…ಪರದೆ….

ಓ ಆದಿ ಕೇಶವನೆ, ನಾಟಕದ ನಾಯಕನೇ..ಸ್ವೀಕರಿಸಯ್ಯ ನಾಟಕ ಮೋದಕ…ಎಂಬ ಸ್ತುತಿ ಎಂತೆಂತಹ ನೆನಪಿನ ಓಣಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದು ರವೀಂದ್ರ ಕಲಾಕ್ಷೇತ್ರವೇ ಆಗಿರಬೇಕಿಲ್ಲ, ರಂಗ ಶಂಕರವೂ ಆಗಿರಬೇಕಿಲ್ಲ..ನಮ್ಮ ಮನೆಯ ಪಕ್ಕದಲ್ಲಿ ಆಡಿದ ಕಂಪನಿ ನಾಟಕ, ಬೀದಿಗೆ ಬಂದಿಳಿದ ಗಾರುಡಿಗರು, ನಮ್ಮನ್ನು ಕಲಾಕ್ಷೇತ್ರಕ್ಕೆ ಎಳೆದೊಯ್ಯುವಂತೆ ಮಾಡಿದ ಒಂದು ಪುಟ್ಟ ಬರಹ…ಎಲ್ಲವೂ ಈ ಒಂದು ಸೊಲ್ಲಿನೊಂದಿಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಎಳ್ಳುಂಡೆ ಜೇನುತುಪ್ಪವನ್ನು ಮೆಲ್ಲುವ ಆ ಗಣ ನಾಯಕನನ್ನು ಬರಮಾಡಿಕೊಳ್ಳುವ ಎಲ್ಲರಿಗೂ ಒಂದು ಸಲಾಂ
ಇಂದು ವಿಶ್ವ ನಾಟಕ ದಿನ.
ಬದುಕನ್ನು ನಾನಾ ಥರದಲ್ಲಿ ನಮ್ಮ ಮುಂದಿಡುವ, ನಮ್ಮೊಳಗಿನ ನಮ್ಮನ್ನು ಹುಡುಕಿಕೊಳ್ಳುವಂತೆ ಮಾಡುವ ರಂಗಭೂಮಿಗೆ ಶರಣು.
ಅವಧಿ ರಂಗಭೂಮಿಯನ್ನು ಸದಾ ಉಸಿರಾಡಿದೆ
ನೀವೆಲ್ಲಾ ಮುನ್ನಲೆಯಲ್ಲಿರಿ, ರಂಗದ ಕತ್ತಲು ಬೆಳಕಿಗೆ ನಾವು ಸಾಕ್ಷಿಯಾಗುತ್ತೇವೆ. ನೀವು ಪರದೆ ಎಳೆಯಲು ಸಜ್ಜಾದರೂ, ಸ್ಪಾಟ್ ಲೈಟ್ ಕಟ್ಟಲು ಮೇಲೆ ಏರಿದರೂ, ನಾಟಕದ ಮುಖಗಳಿಗೆ ಬಣ್ಣ ಮೆತ್ತಲು ಕುಳಿತರೂ, ಇಲ್ಲಾ…ವೇಷ ಭೂಷಣದ ಮೂಲಕ ಘನತೆ ತಂದೊಡ್ದಲು ಸಿದ್ಧರಾದರೂ ನಾವೆಲ್ಲ ನಿಮ್ಮ ಹಿಂದೆ, ಪರದೆಯ ಅಂಚಿನಲ್ಲಿ.
ಶರಣು ಹೇಳ್ತೀವಿ ಸ್ವಾಮಿ ನಾವು ನಿಮಗ, ಸ್ವಾಮಿ ನಾವು ನಿಮಗ
ಸದ್ದು ಗದ್ದಲ ಮಾಡಬೇಡಿ ಆಟದೊಳಗ, ಸ್ವಾಮಿ ಆಟದೊಳಗ
ಸಣ್ಣ ಹುಡುಗರು ನಾವು, ಬಣ್ಣಕ ಹೆದರುವವರು…
ಎಂಬಂತೆ ಅವಧಿ ತಂಡ ನಾಟಕದ ಈ ವಿಶೇಷ ಸಂಚಿಕೆಯೊಂದಿಗೆ ಬಣ್ಣದ ನಿಮ್ಮೆಲ್ಲರ ಬಳಿಗೆ ಬರುತ್ತಿದ್ದೇವೆ-
ಓ ಆಗಲೇ ಥರ್ಡ್ ಬೆಲ್ ಆಗ್ತಿದೆ-
ಪರದೆ ಎಳೀರಿ…ಪರದೆ….





ಪ್ರಿಯ ಸಂಪಾದಕರಿಗೆ:
ನಮಸ್ಕಾರ. ನಾಟಕದ ರಿಹರ್ಸಲ್‍ನಿಂದ ಹಿಡಿದು, ಕೈದಿಗಳ ಕಥನಗಳನ್ನು ಒಳಗೊಂಡು, ಪ್ರಸಾಧನ ಕಲೆಯೂ ಸೇರಿದಂತೆ ರಂಗಭೂಮಿಯ (ಬದುಕಿನ) ವರ್ಣಮಯ ಆಯಾಮಗಳನ್ನು ದರ್ಶಿಸುವ ಈ ಸಂಚಿಕೆ ಡಾಕ್ಟರಮ್ಮನಿಗೆ ಯೋಗ್ಯ ಹಾಗೂ ಅರ್ಥಪೂರ್ಣ ಕೊಡುಗೆ. ಬೇರೇನೂ ಸಾಧ್ಯವಿಲ್ಲದ್ದರಿಂದ ನಿಮ್ಮೊಡನೆ ನಾನೂ ಕೈಜೋಡಿಸಿ ’ವಿಜಯಮ್ಮನಿಗೆ ಶರಣು ಶರಣು’ ಎಂದಷ್ಟೇ ಹೇಳುತ್ತೇನೆ. ಸಿ. ಎನ್. ರಾಮಚಂದ್ರನ್