” ನಮ್ಮ ಊರಿನ ಪಂಚಾಯತಿ ಲೈಬ್ರರಿಯಲ್ಲಿ ಎಷ್ಟೊಂದು ಕಥೆ ಪುಸ್ತಕಗಳಿವೆ ಗೊತ್ತಾ ” ಇದು ನನ್ನ ಸ್ನೇಹಿತನೊಬ್ಬ ಅವರ ಊರಿಗೆ ನನ್ನನ್ನು ಸೆಳೆಯಲು ಒಡ್ಡಿದ ಆಮಿಷ. ಅವನ ಊರಿನಲ್ಲಿ ಇದ್ದು ಓದಿದರೆ ಅವನ ಅಜ್ಜಿ ಮುದ್ದು ಮಾಡಿ ಕೆಡಿಸುತ್ತಾಳೆಂದು ಅವರ ಅಪ್ಪ ನಮ್ಮ ಮನೆಯಲ್ಲಿ ಬಿಟ್ಟಿದ್ದರು. ನಮ್ಮ ಮನೆಯಲ್ಲಿಯೇ ಇದ್ದು ಶಾಲೆಗೆ ಹೋಗುತ್ತಿದ್ದ ಅವನ ಊರಾದ ಮಾಗಡಿ ತಾಲ್ಲೂಕಿನ ಬೆಳಕವಾಡಿಗೆ ಹೋಗಲು ನಾನು ನನ್ನತಂಗಿ, ತಮ್ಮಂದಿರೆಲ್ಲಾ ತುದಿಗಾಲಲ್ಲಿ ನಿಂತಿರುತ್ತಿದ್ದೆವು.ಅಲ್ಲಿ ತೋಟ ಗದ್ದೆ ಸುತ್ತುವುದು, ಕಬ್ಬಿನ ಜಲ್ಲೆಗಳನ್ನು ಜಗಿಯುವುದು , ಆಲೆಮನೆಯ ಕಬ್ಬಿನ ಹಾಲು , ಬಿಸಿ ಅಂಟು ಬೆಲ್ಲ , ಕೆರೆ , ಕಾಲುವೆಗಳಲ್ಲಿ ಮೀನು , ಏಡಿ ಹಿಡಿಯುವುದು , ಅಲ್ಲಿಯೇ ಸುಟ್ಟು ತಿನ್ನವುದು, ಕಾಡು ಮೇಡು ಅಲೆಯುವುದು ಯಾರಿಗೆ ಬೇಡಾ. ಆದರೆ ಆ ಬಾರಿ ನನಗೂ ಅವನಿಗೂ ಜಗಳವಾಗಿ ಮುನಿಸಿಕೊಂಡು ಮಾತು ಬಿಟ್ಟಿದ್ದೆವು. .
ನಾನು ಭೂಗೋಳ ಪಾಠದ ಔಟ್ ಲೈನ್ ಮ್ಯಾಪ್ ಪುಸ್ತಕ ಕಳೆದು ಬಿಟ್ಟಿದ್ದೇನೆಂದು ಅವನು ನನ್ನ ತಂದೆಯ ಬಳಿ ಚಾಡಿ ಹೇಳಿದ್ದ. ಅದರಿಂದ ಅವರು ನನಗೆ ಬಾಸುಂಡೆ ಬರುವಂತೆ ಹೊಡೆದದ್ದಲ್ಲದೆ ಎರಡು ದಿನ ಊಟ ಹಾಕಬಾರದೆಂದು ಉಪವಾಸದ ಶೀಕ್ಷೆ ವಿಧಿಸಿದ್ದರು.ಎರಡು ದಿನ ನೀರು ಬಿಟ್ಟು ಮತ್ತೇನೂ ಇಲ್ಲದೆ ನಾನು ಹಸಿವಿನಿಂದ ನರಳಿ ಹೋಗಿದ್ದೆ. ಆದ್ದರಿಂದ ನನ್ನ ಸಿಟ್ಟು ಸಹಜವೇ ಆಗಿತ್ತು. ಹೀಗಾಗಿ ಅವನೊಡನೆ ಮಾತು ಬಿಟ್ಟು ಮೂರು ತಿಂಗಳಾಗಿತ್ತು. ಆದ್ದರಿಂದ ಅವನ ಊರಿನ ಎಲ್ಲ ಆಕರ್ಷಣೆಗಳೂ ನನ್ನನ್ನು ಸೆಳೆಯಲಾರವು ಎಂದು ಅರಿತುಕೊಂಡ ಅವನು ನನ್ನ ಸೆಳೆಯಲು ಕೊನೆಯ ಆಸ್ತ್ರ ಬಳಸಿದ್ದ. ಯಾವುದೇ ಕಾಗದದ ಮೇಲೆ ಮುದ್ರಿತ ಅಕ್ಷರ ಕಂಡರೂ ಅದನ್ನು ಕಂಡ ಕಂಡಲ್ಲೇ ಓದುತ್ತಾ ನಿಲ್ಲುತ್ತಿದ್ದ ನನ್ನ ಓದಿನ ಹಸಿವು ಎಲ್ಲಾ ಸಿಟ್ಟನ್ನು ತೊಡೆದು ಹಾಕುವುದೆಂದು ಅವನಿಗೆ ಗ್ಯಾರಂಟಿ ಗೊತ್ತಿತ್ತು. ಕೊನೆಗೆ ಅವನ ಊರಿಗೆ ಹೋದೆ ಎಂದು ಬೇರೆ ಹೇಳಬೇಕಾಗಿಲ್ಲ.
ಅಲ್ಲಿ ಹೋಗುತ್ತೇನೆ ಯಾವ ಪಂಚಾಯತಿಯೂ ಇಲ್ಲ . ಲೈಬ್ರರಿಯೂ ಕಾಣಲಿಲ್ಲ. ಅದಕ್ಕಾಗಿ ನಾನೇ ಹುಡುಕಾಡಿದೆ. ಅವನಿಗೆ ಅದು ಗೊತ್ತಿದ್ದರೂ ತೋರಿಸಲಿಲ್ಲ. ಈ ಕಾರಣಕ್ಕಾದರೂ ನಾನು ಅವನನ್ನು ಮಾತಾನಾಡಿಸಬೇಕಾದ ಅನಿವಾರ್ಯತೆ ಸೃಷ್ಠಿಸುವುದು ಅವನ ಹುನ್ನಾರ. ಕೊನೆಗೆ ನಾನು ಎಲ್ಲರ ಮುಂದೆಯೂ ಸಿಟ್ಟಾದಾಗ ಅವನು ಪುಸ್ತಕಗಳ ದಾರಿ ತೋರಿಸಿದ..ಈ ಪಂಚಾಯತಿ ಲೈಬ್ರರಿಯೆಂಬುದು ಅವನ ಮನೆಯಲ್ಲಿ ಇದ್ದ ಒಂದು ದೊಡ್ಡ ಕರಿಮರದ ಪೆಟ್ಟಿಗೆಯಲ್ಲಿ ಹುದುಗಿತ್ತು. ರತ್ನಗಳ ಕಣಜದ ಬಾಗಿಲೇ ತೆರೆಯಿತೆನ್ನುವಂತೆ ನಾನು ಅದನ್ನು ಬಾಚಿಕೊಳ್ಳಲು ಕೈ ಹಾಕಿದೆ. ಅದರಲ್ಲಿಯೇ ನನಗೆ ಸಿಕ್ಕಿದ್ದು ಶ್ರೀನಿವಾಸ ರಾವ್ ಕೊರಟಿಯವರ ಐತಿಹಾಸಿಕ ಕಾದಂಬರಿಗಳು , ಅನಕೃರವರ ಕಾದಂಬರಿಗಳು ಇತ್ಯಾದಿ.
ಇಂದು ಇವನ್ನೆಲ್ಲಾ ನೆನಪಿಸಿಕೊಂಡರೆ ನನ್ನ ಜೊತೆಯಲ್ಲಿ ಓದುತ್ತಿದ್ದ ಗೆಳೆಯರು ಏನಾದರು ? ಅವರಲ್ಲಿ ಎಷ್ಟು ಜನ ಹೈಸ್ಕೂಲ್ ತಲುಪಿದರು ? ಹೈಸ್ಕೂಲ್ ತಲುಪಿದವರಲ್ಲಿಯೂ ನನ್ನಂತೆ ಓದಿನ ಬಯಕೆ ಮೂಡಲಿಲ್ಲ . ಪಠ್ಯ ಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ಏಕೆ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ . ನನಗೆ ಓದಿನ ಹುಚ್ಚು ಹತ್ತಿದ ಮೇಲೆ ಪುಸ್ತಕಗಳಿಗಾಗಿ ಪರದಾಡಿದ ಪರಿ ನೆನಪಿಸಿಕೊಂಡರೆ ?
ಮಾಸ್ತಿಯವರು ಓದಿದ ಶಾಲೆಯಲ್ಲಿ ಮುಖ್ಯ ಮಂತ್ರಿಯಾದದ್ದು . ತಾಳೀಕೋಟೆ ನಾಟಕದ ಪುಸ್ತಕ ಚಿಂದಿಯಾದದ್ದು.
ಗೆಳೆಯನ ಊರಿನಿಂದ ಮತ್ತೆ ಬೆಂಗಳೂರಿನಲ್ಲಿದ್ದ ನಮ್ಮ ಮನೆಗೆ ಬಂದೆ . ಮಾಗಡಿ ಹಳ್ಳಿಯ ಕುಗ್ರಾಮದಲ್ಲಿ ಓದಲು ಸಿಕ್ಕ ಕೆಲ ಪುಸ್ತಕಗಳಾದರೂ ಬೆಂಗಳೂರಿನಲ್ಲಿ ನನಗೆ ಲಭ್ಯವಾಗಲಿಲ್ಲ. ನನ್ನ ೋದು ಮತ್ತೆ ಪಠ್ಯಗಳಿಗಷ್ಟೇ ಸೀಮಿತವಾಯಿತು. ಮುಂದೆ ಕೆಲವೇ ತಿಂಗಳುಗಳಲ್ಲಿ ನನಗೆ ಇನ್ನೂ ಏಳನೆಯ ತರಗತಿಗಳ ಪರೀಕ್ಷೆ ಕೆಲ ವಾರಗಳಿರುವಾಗಲೇ ನಮ್ಮ ತಂದೆಯವರಿಗೆ ಕೋಲಾರ ಜಿಲ್ಲೆಯ ಹೊಂಗೇನಹಳ್ಳಿಗೆ ವರ್ಗಾವಣೆಯಾಯಿತು. ನಮ್ಮ ಕುಟುಂಬವೂ ಜೊತೆಯಲ್ಲಿಯೇ ಅಲ್ಲಿಗೆ ಸಾಗಿತು. ಏಳನೆಯ ತರಗತಿಗಳ ಪರೀಕ್ಷೆ ಮುಗಿಸಿ ನಾನು ಹೊಂಗೇನಹಳ್ಳಿಗೆ ವಾಸಕ್ಕೆ ಹೋದೆ.ಹೊಂಗೆನಹಳ್ಳಿಯಲ್ಲಿ ಇದ್ದದ್ದು ಬರಿಯ ಎರಡೇ ಕೊಟಡಿಯ ಕಿರಿಯ ಪ್ರಾಥಮಿಕ ಶಾಲೆ. ಹೀಗಾಗಿ ನಾನು ಎಂಟನೆಯ ತರಗತಿಗೆ ಅಲ್ಲಿಂದ ಮೂರು ಮೈಲಿ ದೂರವಿದ್ದ ಶಿವಾರ ಪಟ್ಟಣ ಎಂಬ ನೆರೆಯ ಊರಿನ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ.

ಶಾಲೆಗೆ ಸೇರಿದ ಕೆಲ ದಿನಗಳ ನಂತರ ಗೊತ್ತಾಯಿತು ಆ ಶಾಲೆಯ ಕಿರೀಟಕ್ಕೆ ಹಲವು ಗರಿಗಳಿದ್ದುವೆಂದು .ಒಂದು ಆ ವೇಳೆಗಾಗಲೇ ( 1962 ನಾನು ಆ ಶಾಲೆಗೆ ಸೇರಿದ್ದು. ) ಶತಮಾನ ಪೂರೈಸಿದ ಶಾಲೆಯಾಗಿತ್ತು. ಸ್ವತಃ ಭಾರತದ ಪ್ರಧಾನಿ ನೆಹರೂರವರು ಆ ಶಾಲೆಯ ಶತಮಾನೋತ್ಸವಕ್ಕೆ ಬಂದಿದ್ದರು. ಹೀಗೆ ಆ ಭಾಗದ ಅತ್ಯಂತ ಹಳೆಯ ಶಾಲೆಯಾಗಿದ್ದುದರಿಂದ ಅಲ್ಲಿಯೇ ಕನ್ನಡದ ಪ್ರಸಿದ್ಧ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರೂ ಓದಿದ್ದರೆಂದು . ಅವರೂ ಕೂಡ ನನ್ನಂತೆಯೇ ಹೊಂಗೇನಹಳ್ಳಿಯಲ್ಲಿಯೇ ವಾಸ ಮಾಡುತ್ತಿದ್ದು ಅಲ್ಲಿಂದ ಶಿವಾರ ಪಟ್ಟಣಕ್ಕೆ ನಡೆದು ಹೋಗುತ್ತಿದ್ದರೆಂದು ತಿಳಿಯಿತು.ಹೊಂಗೇನ ಹಳ್ಳಿಯಲ್ಲಿ ಅವರ ತಾಯ ತವರು ಮನೆಯಲ್ಲಿದ್ದು ಓದುತ್ತಿದ್ದರು.
ಇಂತಹ ಕೀರ್ತಿಯಿರುವ ಈ ಶಾಲೆಯಲ್ಲಿ ವಿದ್ಯಾರ್ಥಿ ಸಚಿವ ಸಂಪುಟವನ್ನು ರಚಿಸುವ ಉತ್ತಮ ಪದ್ಧತಿಯೊಂದನ್ನು ಯಾರೋ ಒಬ್ಬ ಹಿಂದಿನ ಮುಖ್ಯೋಪಾಧ್ಯಾಯರು ಆರಂಭಿಸಿದ್ದರು. ಈ ಶಾಲೆಗೆ ನಾನು ಸೇರಿದ ಕೆಲವೇ ದಿನಗಳಲ್ಲಿ ಒಂದು ದಿನ ಕೊನೆಯ ಪೀರಿಯಡ್ ಮುಗಿದ ಮೇಲೆ ಶಾಲೆಯ ಎಲ್ಲ ತರಗತಿಯ ಹುಡುಗರನ್ನೂ ನನ್ನ ತರಗತಿ ನಡೆಯುತ್ತದ್ದ ಕೊಟಡಿಗೆ ಸೇರಿಸಿದರು. ಅಲ್ಲಿ ಸಚಿವ ಸಂಪುಟದ ಮೂಲಕ ವಿದ್ಯಾರ್ಥಿ ಚಟುವಟಿಕೆ ನಡೆಸುವ ಬಗ್ಗೆ ವಿವರಿಸಿದರು. ಮತ್ತು ಸಚಿವ ಸಂಪುಟದ ಆಯ್ಕೆ ಆರಂಭವಾಯಿತು. ಮೊದಲೇ ಮುಖ್ಯ ಮಂತ್ರಿಯ ಆಯ್ಕೆ . ಅದಕ್ಕೆ ಅಭ್ಯರ್ಥಿಗಳು ತಾವಾಗಿಯೇ ಎದ್ದು ನಿಂತು ಸೂಚಿಸಿಕೊಳ್ಳ ಬಹುದು ಅಥವಾ ಯಾರಾದರೂ ಸೂಚಿಸಬಹುದೆಂದು ತಿಳಿಸಿದರು. ಇದೆಲ್ಲ ನನಗೆ ಪೂರ್ತಿ ಹೊಸತು. ಆಶಾಲೆಯಲ್ಲಿಯೇ ಓದಿದ್ದ ವಿದ್ಯಾರ್ಥಿಗಳು ಯಾರಾದರೂ ಮುಂದೆ ಬರುತ್ತಾರೆಂದು ನಾನು ನಿರೀಕ್ಷೆ ಮಾಡುತ್ತಾ ನೋಡುತ್ತಿದ್ದೆ. ಯಾರೂ ಮುಂದೆ ಬರಲೇ ಇಲ್ಲ. ಕಾದು ಕಾದು ಸಾಕಾಯಿತು. ನನಗೋ ಮನೆಗೆ ಇನ್ನೂ ಮೂರು ಮೈಲಿ ನಡೆದು ಹೋಗಬೇಕಲ್ಲ. ರಾತ್ರಿಯಾಗಿ ಬಿಡುತ್ತದೆಂಬ ಆತಂಕ. ಕೊನೆಗೆ ನಾನೇ ಎದ್ದು ನಿಂತೆ. ನಿಂತ ಕೂಡಲೆ ನನ್ನಂತೆಯೆ ಕಾದು ಸುಸ್ತಾಗಿದ್ದ ವಿದ್ಯಾರ್ಥಿಗಳು ಚಪ್ಪಾಳೆ ಹಾಕಿದರು. ನಾನು ಸರ್ವಾನುಮತದಿಂದ ಮುಖ್ಯ ಮಂತ್ರಿಯಾಗಿ ಆಯ್ಕೆಯಾದೆನೆಂದು ಘೋಷಿಸಲಾಯಿತು
ನಾನು ಆ ಹುದ್ದೆಯನ್ನು ಹೇಗೆ ನಿರ್ವಸಿದೆನೆಂಬುದು ಇಲ್ಲಿಯ ವಿಷಯಕ್ಕೆ ಅಪ್ರಸ್ತುತ. ನನ್ನ ಓದು ಪುರಾಣದಲ್ಲಿ ಈ ಉಪಕಥೆ ಏಕೆ ಬೇಕಾಯಿತೆಂದರೆ ನನ್ನ ಈ ಹುದ್ದೆ ನನಗೆ ಶಾಲಾ ಲೈಬ್ರರಿಯ ಪುಸ್ತಕ ಭಂಡಾರಕ್ಕೆ ಕೀಲಿ ಒದಗಿಸಿತು. ಯಾವ ಪುಸ್ತಕವನ್ನಾದರು ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಕಲ್ಪಿಸಿತು. ಇದರಿಂದ ನನಗೆ ಮಹದಾನಂದವಾಯಿತು. ಒಂದು ದಿನ ನಾನು ಮಾಸ್ತಿಯವರ ಸಣ್ಣ ಕಥೆಗಳನ್ನೂ ಮತ್ತು ಅವರ ತಾಳೀಕೋಟೆ ನಾಟಕವನ್ನೂ ತೆಗೆದುಕೊಂಡು ಹೋದೆ. ಅದನ್ನು ಆತುರದಿಂದ ಮನೆಯ ಮುಂದೆ ಇದ್ದ ಜಗುಲಿಯಲ್ಲಿ ಕುಳಿತು ಓದುತ್ತಿದ್ದೆ.
ಅಳಿಯ ರಾಮರಾಯ ಅವನ ಮುಸ್ಲಿಂ ಸೈನಿಕರು ಬಹಮನಿಯವರ ಸಂಗಡ ಸೆಣಸುತ್ತಿದ್ದ ಭಾಗದ ಸಂಭಾಷಣೆಯನ್ನು ಬೇರೆ ಯಾವುದರ ಪರಿವೆ ಇಲ್ಲದೆ ಓದುತ್ತಿದ್ದೇನೆ. ಧಡಾರನೆ ಒಂದು ಜೋರಾದ ಏಟು ಬೆನ್ನ ಮೇಲೆ ಬಿತ್ತು. ನಾನು ಗಾಬರಿ ಹಾಗೂ ನೋವಿನಿಂದ ತಲೆಯೆತ್ತಿ ನೋಡುವಷ್ಟರಲ್ಲಿ ನಮ್ಮ ತಂದೆ ಕೋಪದಿಂದ ಕೆಂಡಾ ಮಂಡಲವಾಗಿ ” ಏನು ಎಷ್ಟೊತ್ತಿನಿಂದ ಕೂಗುವುದು ? ಏನು ಓದುತ್ತಿದ್ದೀಯ” ಎಂದು ತಾಳೀಕೋಟೆ ನಾಟಕವನ್ನು ಸೆಳೆದುಕೊಂಡು ನೋಡಿದರು.” ಓಹೋ ಇದೋ ! ಶಾಲೆಯ ಪುಸ್ತಕ ಓದಬೇಕಂದರೆ ಆಗುವುದಿಲ್ಲ ಆದರೆ ಕಥೆ ಪುಸ್ತಕ ನೋಡು ಎಷ್ಟು ಆಸಕ್ತಿಯಿಂದ ಓದುತ್ತದ್ದೀಯ.ಮೈ ಮೇಲೆ ಎಚ್ಚರವೇ ಇಲ್ಲದೆ . ಕಥೆ , ಕಾದಂಬರಿ ಓದಿ ಉದ್ದಾರವಾದವರುಂಟೇ ” ಎಂದು ಅದೇ ಕೋಪದಲ್ಲಿಯೇ ನಾನು ” ಬೇಡ ಅದು ಶಾಲೆಯ ಪುಸ್ತಕ ವಾಪಸ್ ಕೊಡಬೇಕು ಮತ್ತೆಂದೂ ನಾನು ಕಥೆ ಪುಸ್ತಕ ತರುವುದಿಲ್ಲ” ಎಂದು ಒರಲುತ್ತಿದ್ದರೂ ಲೆಕ್ಕಿಸದೆ ಆ ಪುಸ್ತಕವನ್ನು ಎರಡು ತುಂಡಾಗಿ ಹರಿದು ಹಾಕಿಯೇ ಬಿಟ್ಟರು . ನಾನು ಮುಖ್ಯ ಮಂತ್ರಿಯಾದ ಸಂತೋಷ ಮತ್ತು ಪುಸ್ತಕ ಭಂಡಾರದ ಕೀಲಿ ಕೈ ದೊರೆತ ಹರ್ಷ ಅಲ್ಲಿಯೇ ಕಣ್ಣೀರಾಗಿ ಕರಗಿ ಹೋಯಿತು.
(ಮುಂದುವರಿಯುವುದು…)
ಓದು ಜನಮೇಜಯ : ಮಾಸ್ತಿಯವರು ಓದಿದ ಶಾಲೆಯಲ್ಲಿ ಮುಖ್ಯಮಂತ್ರಿಯಾದದ್ದು!
ನಿಮಗೆ ಇವೂ ಇಷ್ಟವಾಗಬಹುದು…





0 Comments
Trackbacks/Pingbacks