ಎಂಟನೆಯ ತರಗತಿಯಲ್ಲಿದ್ದಾಗ ಒಂದು ವರ್ಷ ಪೂರ್ತಿ ನಮ್ಮ ಬಂಧುಗಳ ಮನೆಯಲ್ಲಿ ಕಳೆದ ಮೇಲೆ ನಮ್ಮ ತಂದೆ ಬೆಂಗಳೂರಿಗೆ ವರ್ಗಾಯಿಸಿಕೊಂಡು ಬಂದರು. ಸಿದ್ಧಾಪುರ ವೆಂಬ ನಗರದೊಳಗಿನ ಹಳ್ಳಿಯಿಂದ ಮತ್ತೊಂದು ಅಂತಹದೇ ಹಳ್ಳಿಯಲ್ಲದ ಹಳ್ಳಿ ಕನಕನಪಾಳ್ಯದಲ್ಲಿ ನೆಲಸಿದೆವು. ಕೇವಲ ಅಡಿಗೆ ಮನೆ ಮತ್ತು ಹಾಲ್ ಮಾತ್ರ ಇದ್ದ ಜಿಂಕ್ ಶೀಟ್ , ಕಲ್ಲು ನೆಲದ ವಠಾರದ ಮನೆಯೊಂದರಲ್ಲಿ ನಮ್ಮ ಕುಟುಂಬದ ಏಳು ಜನ ವಾಸ ಮಾಡಲಾರಂಭಿಸಿದೆವು. ಸರಿ ನನ್ನ ಓದಿನ ಮೇಲೆ ತಂದೆಯವರ ಉಸ್ತುವಾರಿ ಆರಂಭವಾಯಿತು. ನನ್ನ ಚಲನ ವಲನದ ಮೇಲೂ . ನನಗೆ ಮನೆಯಲ್ಲಿ ಪಠ್ಯೇತರ ಪುಸ್ತಕಗಳನ್ನು ಓದಲು ಕಷ್ಠವಾಯಿತು. ಶಾಲಾ ನಂತರ ಲೈಬ್ರರಿಗೆ ಹೋಗಲೂ ಕೂಡ . ತಂದೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಓದಲೂ ಕಷ್ಠವೇ . ನಮ್ಮ ತಾಯಿ , ತಮ್ಮ ತಂಗಿಯರು ಯಾರಾದರೂ ನನ್ನ ಪ್ರಿಯ ಓದಿನ ಬಗ್ಗೆ ತಂದೆಗೆ ದೂರು ಒಯ್ಯ ಬಹುದಿತ್ತು. ಮುಂದೆ ಹಲವು ವರ್ಷಗಳ ನಂತರ ನಮ್ಮ ತಾಯಿಯೂ ಸೇರಿದಂತೆ ಇಡೀ ಕುಟುಂಬ ಓದಿನ ಸುಖವನ್ನು ಕಂಡುಕೊಂಡರೂ ಕೂಡ ಆಗ ಅವರೆಲ್ಲರ ಭಾವನೆ ತಂದೆಯ ಅಭಿಪ್ರಾಯವನ್ನೇ ಅನುರಣಿಸುತ್ತಿತ್ತು . ಹೀಗೆ ನಾನು ವಿರಹ ವೇದನೆಯಿಂದ ಬಳಲುತ್ತಲಿರಲು ನಮ್ಮ ತಂದೆಯವರೇ ತಮಗೇ ಗೊತ್ತಿಲ್ಲದಂತೆ ಮಾರ್ಗ ತೋರಿಸಿದರು.
ಏಳು ಜನರ ಕುಟುಂಬದಲ್ಲಿ ಯಾವಾಗಲೂ ಅದರಲ್ಲಯೂ ತಂದೆ ಇಲ್ಲದ ಸಮಯದಲ್ಲಿ ಗಲಗಲವೆನ್ನುತ್ತಾ ಇರುತ್ತಿದ್ದುದರಿಂದ ಆ ಗದ್ದಲದಲ್ಲಿ ಮಗ ಚೆನ್ನಾಗಿ ಓದಲಾಗುವುದಿಲ್ಲವೆಂದುಕೊಂಡರು ನಮ್ಮ ತಂದೆ . ನಾನು ಚೆನ್ನಾಗಿ ಓದಬೇಕೆಂಬ ಮಹತ್ವಾಕಾಂಕ್ಷೆಯಿಂದ ನನ್ನನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಿ ಓದಲು ಕುಳ್ಳಿರಿಸಿ ತಾವು ಮತ್ತೆ ಮಲಗಿ ಬಿಡುತ್ತಿದ್ದರು. ನನಗೋ ಪಠ್ಯಗಳಲ್ಲಿ ಓದುವುದೇನೂ ಇರುತ್ತಿರಲಿಲ್ಲ. ಎಂದೂ ಕ್ಲಾಸಿಗೆ ಚಕ್ಕರ್ ಹೊಡೆದ ಆಸಾಮಿಯಲ್ಲ. ಮತ್ತು ತರಗತಿಗಳಲ್ಲಿ ಗಮನವಿಟ್ಟು ಕೇಳಿಸಿಕೊಳ್ಳುವ ಮಾದರಿ ವಿದ್ಯಾರ್ಥಿಯಾದ್ದರಿಂದ ಅಲ್ಲಿಯೇ ಬಹು ಮಟ್ಟಿಗೆ ಅರ್ಥವಾಗಿಬಿಟ್ಟಿರುತ್ತಿತ್ತು . ಆದ್ದರಿಂದ ಚೆನ್ನಾಗಿ ಗೊತ್ತಿರುವುದನ್ನೇ ಮತ್ತೆ ಮತ್ತೆ ಏನು ಓದುವುದಿದೆ , ಒಳ್ಳೆ ಸಮಯದಲ್ಲಿ ಸಕ್ಕರೆ ನಿದ್ದೆಯನ್ನು ಕೆಡಿಸುತ್ತಾರಲ್ಲಾ ಎಂಬ ಸಿಟ್ಟು ಬರುತ್ತಿತ್ತು. ಆದರೆ ಅದು ಕೆಲ ದಿನ ಮಾತ್ರ. ಜೀವನ ನಿಮಗೆ ನಿಂಬೆ ಹುಳಿಯನ್ನು ನೀಡಿದರೆ ಅದನ್ನು ನಿಂಬೆ ಪಾನಕ ವಾಗಿ ಪರಿವರ್ತಿಸಿಕೊಳ್ಳುವ ಕಲೆ ತಿಳಿದಿದ್ದರೆ ಅದೇ ಸವಿಯಾದ ಬದುಕಾಗುತ್ತದೆ. ಅಲ್ಲವೇ .
ನಾನು ಪಠ್ಯ ಪುಸ್ತಕಗಳ ಕವರ್ ನ ಒಳಗೆ ಕಾದಂಬರಿಗಳನ್ನಿಟ್ಟು ಓದುವ ಒಳ ಮಾರ್ಗ ಹುಡುಕಿಕೊಂಡು ಮತ್ತಷ್ಟು ಹೆಚ್ಚಿನ ಮಾದರಿ ವಿದ್ಯಾರ್ಥಿಯಾದೆ . ಇದು ನನಗೆ ನನ್ನ ಪ್ರೀತಿಯ ಬೆಡಗಿಯರೊಡನೆ ಏಕಾಂತಕ್ಕೆ ತಳ್ಳಿ ಬಿಟ್ಟಂತಾಯಿತು. ಬೆಳಗ್ಗೆ 5 ಗಂಟೆಯಿಂದ ಆರು ಗಂಟೆಯವರೆಗೆ ನಿರ್ಭಯವಾಗಿ , ನಂತರ ಸ್ವಲ್ಪ ಆತಂಕದಲ್ಲಿಯೇ ನನ್ನ ಕಳ್ಳ ಪ್ರಣಯ ಸಾಗಿತು. ಆಗಾಗ ವಿಚಾರಿಸುತ್ತಿದ್ದರೂ ಕೂಡ ತಮ್ಮ ಪುತ್ರ ರತ್ನನ ಒಳ್ಳೆಯತನದ ಮೇಲಿನ ಅಪಾರ ನಂಬುಗೆಯಿಂದ ತಂದೆಯವರು ನೇರವಾಗಿ ಚೆಕ್ ಮಾಡಹೋಗಲಿಲ್ಲ. ಹೀಗೆ ಸರಿಸುಮಾರು ಒಂದು ವರ್ಷ ಪೂರ್ತಿ ಸಾಗಿತು . ಆಗ ಎಷ್ಟೊಂದು ಕಥೆ, ಕಾದಂಬರಿಗಳನ್ನು ಓದಿರಬಹುದು ನೀವೇ ಊಹಿಸಿಕೊಳ್ಳಿ. ಈ ಮಧ್ಯೆ ನಮ್ಮ ಕುಟುಂಬಕ್ಕೆ ಮತ್ತೊಬ್ಬ ಹೊಸ ಸದಸ್ಯನ ( ಎಂಟನೆಯವನಾಗಿ ) ಆಗಮನ . ಕನಕನ ಪಾಳ್ಯದ ಬಳಿಯ ಕಾರ್ಪೋರೇಷ್ನ್ ಹೆರಿಗೆ ಆಸ್ಪತ್ರೆಯಲ್ಲಿ .ಅವನೇ ಕನ್ನಡಿಗರಿಗೆ ಕವಿಯಾಗಿ , ಮಾಧ್ಯಮ ಮುಖ್ಯಸ್ಥನಾಗಿ ಪರಿಚಯವಾಗಿರುವ ಜಿ.ಎನ್. ಮೋಹನ್ . ಆಗ ನಮ್ಮ ತಾಯಿಯ ಬಾಣಂತನದ ಹೊಣೆ ನಮ್ಮ ತಂದೆ ಮತ್ತು ನನ್ನ ಪಾಲಿಗೆ.
ಮುಂದೆ ನನ್ನ ಶಾಲೆ ಬದಲಾಗದಿದ್ದರೂ ಮತ್ತೆ ಮನೆ ಬದಲಾಯಿತು. ಮೈಸೂರು ರಸ್ತೆಯ ಬ್ಯಾಟರಾಯನಪುರದ ಹತ್ತಿರಕ್ಕೆ ವರ್ಗಾವಣೆ. ಅಲ್ಲಿನ ಮನೆಯಲ್ಲಿ ಒಂದು ಕೊಠಡಿಯೂ ಇತ್ತು. ಇದು ನನ್ನ ಓದಿಗೆ ಮತ್ತಷ್ಠು ಏಕಾಂತವನ್ನು ಒದಗಿಸಿತು. ಈ ಮನೆಯಿಂದ ಹೈಸ್ಕೂಲಿಗೆ ನಡೆದೇ ಹೋಗುತ್ತಿದ್ದೆ . ಸುಮಾರು ಆರು ಕಿ.ಮೀ . ಬ್ಯಾಟರಾಯನಪುರ , ಆವಲ ಹಳ್ಳಿ ಎಂಬ ಎರಡು ಹಳ್ಳಿಗಳನ್ನು , ಅವುಗಳ ಹೊಲಗಳನ್ನು ದಾಟಿ ಒಂದು ಹಳ್ಳ ಇಳಿದು ಈಗ ಶ್ರೀನಗರವೆಂದು ಕರೆಯಲಾಗುತ್ತಿರುವ ದಾಸರಹಳ್ಳಿಯ ಗುಡ್ಡ ಏರಿ ಗುಡ್ಡದ ಮೇಲಿನ ಒಂದು ಕಿರು ದೇವಸ್ಥಾನಕ್ಕೆ ಬಲವಂದು ಹನುಮಂತನಗರ , ಗಾಂಧಿಬಜಾರ್ ಹಾದು ಶಾಲೆಯನ್ನು ತಲುಪುತ್ತಿದ್ದೆ. ಇಷ್ಟುದ್ದದ ದಾರಿಯನ್ನು ಸವೆಸುವುದು ಹೇಗೆ ? ದಾರಿಯುದ್ದಕ್ಕೂ ಒಂದಲ್ಲಾ ಒಂದು ಪುಸ್ತಕ ನನ್ನ ಕೈಲಿ. ಹಳ್ಳಿಗಳ ಹಾದಿ ಮಾತ್ರವಲ್ಲ ನಗರದ ಒಳಗೆ ಕೂಡ ರಸ್ತೆಗಳಲ್ಲಿ ಪುಸ್ತಕ ಓದುತ್ತಲೇ ಸಾಗುತ್ತಿದ್ದೆ. ಜನರು ತಾವೇ ನನಗೆ ಅನುಕೂಲ ಮಾಡಿಕೊಟ್ಟು ಪಕ್ಕಕ್ಕೆ ಸರಿದು ಹೋಗುತ್ತಿದ್ದರು . ಅನೇಕ ವೇಳೆ ವಾಹನಗಳೂ ಕೂಡ. ಆದರೆ ಆಗಿನ ಬೆಂಗಳೂರೇ ಬೇರೆ ಬಿಡಿ. . ಈ ವೇಳೆಯಲ್ಲಿಯೇ ಆಗ ನಾನು ಓದುತ್ತಿದ್ದ ಅನಕೃ , ತರಾಸು ಗಳ ಜೊತೆಗೆ ನನಗೆ ಪತ್ತೇದಾರ ಪುರುಷೋತ್ತಮ , ಅರಿಂದಮ ಮೊದಲಾದವರ ನೈಪುಣ್ಯತೆಯ ಪರಿಚಯವಾಗಿದ್ದು ಮತ್ತು ಕಾದಂಬರಿಗಳಲ್ಲಿ ಕಾಮುಕತೆಯ ಪ್ರವೇಶವಾಗಿದ್ದು .

ನಾಟಕಗಳು ಮತ್ತು ಸಾಹಿತ್ಯದ ಓದು
ನ್ಯಾಷನಲ್ ಹೈಸ್ಕೂಲಿನಲ್ಲಿ ಸಾಹಿತ್ಯದ ಓದಿಗೆ ಸಿಕ್ಕ ಒಂದು ಮುಖ್ಯ ಪ್ರಚೋದನೆ ನಾನು ಈ ಮೊದಲೇ ಹೇಳಿದಂತೆ ನಾಟಕಗಳು .ಇಂತದ್ದೊಂದು ಪ್ರಸಿದ್ಧ ಶಾಲೆ ನಾನು ಅಲ್ಲಿ ಓದಿದ ಮೂರು ವರ್ಷವೂ ಪ್ರಮುಖ ಸಾಹಿತಿಗಳನ್ನು ಕರೆಸಿ ಕಾರ್ಯಕ್ರಮಗಳಾವನ್ನೂ ನಡೆಸಲಿಲ್ಲ. ಶಾಲೆಯಲ್ಲಿ ಕ್ರಾಫ್ಟ್ ಎಂಬ ಒಂದು ವಿಷಯ. ಅದರಲ್ಲಿ ಎರಡು ಐಚ್ಚಿಕಗಳು . ಒಂದು ಹೊಲಿಗೆ, ಮತ್ತೊಂದು ಡ್ರಮಾಟಿಕ್ಸ್ ಹಳ್ಳಿಯಿಂದ ಬಂದಿದ್ದ ನನಗೆ ಈ ಡ್ರಮಾಟಿಕ್ಸ್ ಎಂದರೇನೇಂದು ಪ್ರವೇಶ ಪಡೆದ ದಿನಗಳಲ್ಲಿ ಅರ್ಥವಾಗಲಿಲ್ಲ.. ನಮ್ಮ ತಂದೆ ಈ ಡ್ರಮಾಟಿಕ್ಸ್ ಏನೂ ಪ್ರಯೋಜನಕ್ಕೆ ಬಾರದು ನೀನು ಟೈಲರಿಂಗ್ ತೆಗೆದುಕೋ ಎಂದರು . ನಾನು ಶಿರಸಾ ವಹಿಸಿದೆ. ಡ್ರಮಾಟಿಕ್ಸ್ ಆರಿಸಿಕೊಂಡ ನನ್ನ ಕೆಲ ಗೆಳೆಯರ ಮೂಲಕ ಅದೇನೆಂದು ಗೊತ್ತಾದ ಮೇಲೆ ನನಗೆ ಹೊಟ್ಟೆ ಉರಿಯಿತು. ಈಗಲೂ ನನಗೆ ಇದ್ಯಾವ ಸೀಮೆ ಆಯ್ಕೆ . ಡ್ರಮಾಟಿಕ್ಸ್ ಗೆ ಬದಲು ಟೈಲರಿಂಗ್ . ಎಂತಹ ಅರಸಿಕ ಮನಸ್ಸು ಎಂದೆನ್ನಿಸುತ್ತದೆ. ಆದರೆ ತಂದೆಯವರಲ್ಲಿ ಅದನ್ನು ಹೇಳಿ ವಿಷಯ ಬದಲಾಯಿಸಿಕೊಳ್ಳುವಷ್ಟು ಧೈರ್ಯವಿರಲಿಲ್ಲ. ನನಗೆ ಟೈಲರಿಂಗ್ ಏನೂ ಬರಲಿಲ್ಲ. ಡ್ರಮಾಟಿಕ್ಸ್ ನಿಂದ ಆಗಬಹುದಾಗಿದ್ದ ಮನೋವಿಕಾಸ ದಕ್ಕಲಿಲ್ಲ.
ಆದರೆ ನನಗೆ ಅದರ ಪ್ರಯೋಜನ ದಕ್ಕಿದ್ದು ನಾಟಕಗಳ ನೋಡುಗನಾಗಿ. ಆಗ ಡ್ರಮಾಟಿಕ್ಸ್ ನ ಅಧ್ಯಾಪಕರು ಬಿ ಎಸ್ ಎನ್ ( ಬಿ.ಎಸ್ ಸತ್ಯನಾರಾಯಣ ರಾವ್ ) ಎಂಬುವರು. ಅಂದು ಬೆಂಗಳೂರಿನಲ್ಲಿದ್ದ ಕೇವಲ ಕೆಲವೇ ರಂಗ ತಂಡಗಳಲ್ಲಿ ಒಂದಾಗಿದ್ದ ಉದಯರವಿ ಕಲಾವಿದರು ತಂಡದ ಮುಖ್ಯ ಕಲಾವಿದರು. ಕೈಲಾಸಂ ರವರಿಗೆ ಬಹಳ ಹತ್ತಿರದವರಾಗಿದ್ದ ಬಿ.ಎಸ್ ರಾಮರಾಯರ ತಮ್ಮ. ಇದರಿಂದಾಗಿ ಅಲ್ಲಿ ಶಾಲಾ ರಂಗಭೂಮಿ ಬಹಳ ಕ್ರಿಯಾಶೀಲವಾಗಿತ್ತು ಜೊತೆಗೆ ಆ ಶಾಲೆಗೆ ಅಂಟಿಕೊಂಡ ಕೈಲಾಸಂರವರ ಬಗೆಗಿನ ಅನೇಕ ಐತಿಹ್ಯಗಳು. ಈ ಹಾಲಿನಲ್ಲಿಯೇ ಅವರ ಕೆಲ ನಾಟಕಗಳ ಮೊದಲ ರಿಹರ್ಸಲ್ ನಡೆದದ್ದು , ಅವರು ಇಲ್ಲಿಯೇ ನಿಂತು ಅದನ್ನು ನೋಡುತ್ತಿದ್ದರು , ಹೀಗೆ ಅಭಿನಯಿಸಿ ತಿದ್ದುತ್ತಿದ್ದರು. ಹೀಗೆ.
ಇಲ್ಲಿಯೇ ಮೊತ್ತ ಮೊದಲಿಗೆ ನನಗೆ ರಂಗಭೂಮಿಯ ಪರಿಚಯವಾಯಿತು . ಈ ಮೊದಲು ನನಗೆ ಯಾವ ನಾಟಕವನ್ನೂ ರಂಗಭೂಮಿಯ ಮೇಲೆ ನೋಡುವ ಅವಕಾಶ ದೊರೆತೇ ಇರಲಿಲ್ಲ . ಇಲ್ಲಿನ ಅಂತರ ತರಗತಿ ನಾಟಕ ಸ್ಪರ್ಧೆಗಳಲ್ಲಿ , ಶಾಲಾ ವಾರ್ಷಿಕೋತ್ಸವಗಳಲ್ಲಿ ನನಗೆ ಕೈಲಾಸಂರವರ ಪೋಲಿ ಕಿಟ್ಟಿ , ಟೊಳ್ಳು ಗಟ್ಟಿ, ಎ.ಎನ್ ಮೂರ್ತಿರಾಯರ ಆಷಾಡಭೂತಿ , ಪರ್ವತವಾಣಿಯವರ ಉಂಡಾಡಿ ಗುಂಡ , ಹಣ ಹದ್ದು ಇತ್ಯಾದಿ ನಾಟಕಗಳನ್ನು ನೋಡಲು ಸಾಧ್ಯವಾಯಿತು. ಈಗಲೂ ನನಗೆ ಆ ನಾಟಕಗಳ ಅನೇಕ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. ನಂತರ ನಾನು ಕೈಲಾಸಂರವರ ಅನೇಕ ನಾಟಕಗಳನ್ನು ಓದಿದೆ .ಹಾಗೂ ಕೈಲಾಸಂರವರ ಅಭಿಮಾನಿಯಾದೆ. ಪೋಲಿ ಕಿಟ್ಟಿ, ತಾಳಿ ಕಟ್ಟೋಕ್ಕೂಲಿನೇ , ಅಮ್ಮಾವ್ರ ಗಂಡ ಮೊದಲಾದ ನಾಟಕಗಳ ಜೀವನ ದೃಷ್ಠಿ ನನ್ನನ್ನ್ನು ದಟ್ಟವಾಗಿ ಪ್ರಭಾವಿಸಿದೆ. ಅವರ ಇಂಗ್ಲಿಷ್ ನಾಟಕಗಳಾದ ಕರ್ಸ್ , ಪರ್ಪಸ್ , ಲಿಟ್ಲ್ ಲೇಸ್ ಅಂಡ್ ಪ್ಲೇಸ್ ಇವುಗಳನ್ನು ನಂತರ ಓದಿದೆ. ಅವರ ಒಂದು ಪದ್ಯವಂತೂ ಎಂದೂ ನೆನಪಿರಬೇಕಾದ್ದು.
ಕಿರಿಯಾಳದ ನಗೆ ನೀರಿನ ಮೇಲೆ ತಿರುಗುತ ಬಹು ವೇಳೆ
ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು
ಇವು ಕವಿ ಗೋಪಾಲ ಕೃಷ್ಣ ಅಡಿಗರ ‘ ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ‘ ಎಂಬ ಸಾಲುಗಳನ್ನು ನೆನಪಿಗೆ ತರುತ್ತವೆ. ಇವುಗಳ ಪರಸ್ಪರ ಪೂರಕವಾದ ಆದರೆ ವಿರುದ್ಧಾರ್ಥಕವಾದ ಜೀವನ ತತ್ವವನ್ನು ಪ್ರತಿನಿಧಿಸುತ್ತವೆ.
ಆಗ ಹುಟ್ಟಿದ ರಂಗಭೂಮಿಯ ಆಸಕ್ತಿ ಇಲ್ಲಿಯವರೆಗೂ ಉಳಿದುಕೊಂಡಿದೆ. ನನ್ನ ಜೀವನವನ್ನು ಸಮೃದ್ಧಗೊಳಿಸಿದೆ. ಮುಂದೆ ಒಂದು ವರ್ಷ ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ ಅಲ್ಲಿನ ವಾರ್ಷಿಕ ನಾಟಕ ಸ್ಫರ್ಧೆಗಳು ಮಾತ್ರವೇ ಅಲ್ಲದೆ ಎಚ್ಚೆನ್ ರವರ ಪ್ರೋತ್ಸಾಹದಿಂದ ಅಲ್ಲಿ ಆರಂಭವಾಗಿದ್ದ ಹಿಸ್ಟ್ರಿಯಾನಿಕ್ಸ್ ಕ್ಲಬ್ ಎಂಬ ರಂಗ ತಂಡದ ನಾಟಕಗಳು ನನ್ನ ರಂಗಾಭಿರುಚಿಯನ್ನು ಮಾತ್ರವೇ ಅಲ್ಲದೆ ಸಾಹಿತ್ಯಾಭಿರುಚಿಯನ್ನೂ ಮತ್ತಷ್ಟು ಬೆಳೆಸಿದುವು.ಮುಂದೆ ಕನ್ನಡ ರಂಗಭೂಮಿಯನ್ನು ಬೆಳಗಿದ ಅತಿರಥ , ಮಹಾರಥರು ಈ ಕ್ಲಬ್ ನ ಭಾಗವಾಗಿದ್ದರು. ಈ ಕ್ಲಬ್ಬೇ ಮುಂದೆ ನಟರಂಗವೆಂಬ ಪ್ರಸಿದ್ಧ ರಂಗ ತಂಡವಾಗಿ ಪರಿವರ್ತನೆಗೊಂಡಿತೆನ್ನಬಹುದು. ಮೇಕಪ್ ನಾಣಿಯವರ ಮೊದಲ ಪರಿಚಯ ಅಲ್ಲಿಯೇ ಆಗಿದ್ದು. ಸಿ.ಆರ್ ಸಿಂಹ ಎಂಬ ಅದ್ಭುತ ನಟ, ವೆಂಕಟರಾವ್ ಮತ್ತು ಇನ್ನೂ ಅನೇಕ ಪೋಷಕ ನಟರು , ಕಪ್ಪಣ್ಣ ಎಂಬ ಶ್ರೀನಿವಾಸ್ ಇವರೆಲ್ಲರ ಪ್ರತಿಭೆಯ ಪರಿಚಯವೂ ಅಲ್ಲಿಯೇ ಆಯಿತು. ( ಅವರ ಪರಿಚಯವಾಗುವ ಮೊದಲು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಪ್ಪಣ್ಣನವರನ್ನು ಸೋಲಿಸಲು ಅವರ ವಿರುದ್ಧ ಸ್ಪರ್ಧಿಸಿದ್ದ ಎಮ್ ಕೆ ಅನಂತಸ್ವಾಮಿ ಎಂಬುವರನ್ನು ಗೆಲ್ಲಿಸಲು ದುಡಿದ ನೆನಪು . ನನಗೆ ಆಗ ಎಂ ಕೆ ಎ ಪರವಾಗಿ ಕೆಲಸ ಮಾಡಲು ಒಂದೇ ಕಾರಣ ಅವರ ಪ್ರಚಾರ ಬಹಳ ಆಕರ್ಷಣೀಯವಾಗಿತ್ತು ದೊಡ್ಡ ದೊಡ್ಡ ಕಾರ್ಟೂನುಗಳು ಕಾಲೇಜಿನಲ್ಲೆಲ್ಲಾ ವಿರಾಜಿಸುತ್ತಾ ಇಟ್ ಈಸ್ ಎ ಮ್ಯಾಡ್ ಮ್ಯಾಡ್ ಮ್ಯಾಡ್ ವರ್ಲ್ಡ್ ಎಂಬ ಸಿನೆಮಾದ ಪೋಸ್ಟರುಗಳನ್ನು ಅನುಕರಿಸಿ ಇಟ್ ಈಸ್ ಎ ಎಂಕೆಎ ಎಮಕೆಎ ವರ್ಲ್ಡ್ ಎಂದು ಅಬ್ಬರಿಸುತ್ತಿದ್ದವು ಎಂಬುದು. )
ಈಮೂಲಕ ರಂಗಭೂಮಿಯ ರುಚಿ ಹತ್ತಿಸಿದ ನ್ಯಾಷನಲ್ ಹೈಸ್ಕೂಲು ಹಾಗೂ ಕಾಲೇಜಿಗೆ ನಾನು ಋಣಿಯಾಗಿದ್ದೇನೆ . ಆ ಪರಿಸರದಿಂದ ನನ್ನ ವ್ಯಕ್ತಿತ್ವ ವಿಕಸನವಾದದ್ದು ನನಗೆ ಜೀವನ ಪೂರ್ತಿ ಪರಿಣಾಮ ಬೀರಿದೆ.
(ಮುಂದುವರಿಯುತ್ತದೆ…)
ಓದು ಜನಮೇಜಯ : ಪುಸ್ತಕಗಳೊಡನೆ ಕಳ್ಳ ಪ್ರಣಯ
ನಿಮಗೆ ಇವೂ ಇಷ್ಟವಾಗಬಹುದು…
5 Comments
Trackbacks/Pingbacks
- ಓದು ಜನಮೇಜಯ : ಶಿಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಜೀವನದಲ್ಲಿ rank ಪಡೆಯಲು ಸಾಹಿತ್ಯ ಓದಿ « ಅವಧಿ / Avadhi - [...] ಓದು ಜನಮೇಜಯ : ಶಿಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಜೀವನದಲ್ಲಿ rank ಪಡೆಯಲು ಸಾಹಿತ್ಯ ಓದಿ September 15, 2014 (ಇಲ್ಲಿಯವರೆಗೆ…) [...]





ನಿಮ್ಮ `ಓದು ಜನಮೇಜಯ’ ಓದಲು ತುಂಬಾ ಇಷ್ಟವೆನಿಸುತ್ತದೆ. ಸರಳವಾಗಿ, ನೇರವಾಗಿ ನಿರೂಪಿಸುತ್ತಿದ್ದೀರಿ. ಈ ಸರಣಿಯನ್ನು ಓದುವವರು ತಂತಮ್ಮ ಓದಿನ ಇತಿಹಾಸವನ್ನು ಸ್ಮರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿ ತಾನಾಗಿ ಯಾವಾಗ ಓದಲು ಸುರುಮಾಡಿದನೋ ಆಮೇಲೆ ಆತನ್ನ ತಡೆದು ನಿಲ್ಲಿಸುವವರು ಇರುವುದಿಲ್ಲ. (`ವಿದ್ಯಾರ್ಥಿ’ ಪದ ವಿದ್ಯಾರ್ಥಿನಿಯರನ್ನೂ ಒಳಗೊಳ್ಳುತ್ತದೆ.) Beg, borrow or steal ಎಂಬ ಮಾತನ್ನು ಅನುಸರಿಸಿ ಓದಿದ ಎಷ್ಟೊಂದು ಜನ ಮುಂದೆ ಬಂದಿದ್ದಾರೆ ಅಲ್ಲವೇ? ನಿಮ್ಮ ಓದಿನ ಪ್ಯಾಶನ್ ಒಂದು ಮಾದರಿಯಾಗಲಿ! (ಒಳ್ಳೇ ಪಾಠ ನಡೆಯುತ್ತಿರುವಾಗ ಕದ್ದು ಕಾದಂಬರಿ ಓದಬೇಕು ಎಂದಲ್ಲ! ನೀವನ್ನುತ್ತಿರುವುದು ಕೆಟ್ಟ ಪಾಠಗಳ ಬಗ್ಗೆ.) ಅಧ್ಯಾಪಕರೂ ಕೂಡಾ ನಿಮ್ಮ ಈ ಸರಣಿಯನ್ನು ಓದಬೇಕು. ಈಗೆಲ್ಲಾ ಬದಲಾಗಿದೆ ಸಾರ್ ಎಂದು ಕೆಲವರು ಹೇಳುವುದಿದೆ; ಆದರೆ ಕೆಲವೊಂದು ಸಂಗತಿಗಳು ಬದಲಾಗಿಲ್ಲ, ಕೆಲವು ಬದಲಾಗಬೇಕು, ಇನ್ನು ಕೆಲವು ಬದಲಾಗಬಾರದು. ಅವು ಏನೇನು ಎಂಬುದು ಇಂಥ ಅನುಭವಕಥನಗಳಿಂದ ಗೊತ್ತಾಗುತ್ತದೆ.
ಕೆ. ವಿ. ತಿರುಮಲೇಶ್
ಇದನ್ನೊಂದು ಸಣ್ಣ ಪುಸ್ತಕಮಾಡಿದರೆ ಒಳ್ಳೆಯದು…
ಚೆನ್ನಾಗಿದೆ, ಇಷ್ಟ ಆಯ್ತು.. ಮುಂದುವರೆಸಿ..:-)
– ಪ್ರಸಾದ್.ಡಿ.ವಿ.
ಮೈಸೂರು
ಓದಿನ ಸುಖ ಹತ್ತಿದ ಮೇಲೆ,, ಅಮಲು ಏರಿದ ಹಾಗೆ ಅದು, ಬಿಟ್ಟೇನೆಂದರೂ ಬಿಡದ ನಂಟು.
ನಿಮ್ಮ ಓದಿನ ಹುಚ್ಚಿನ ಬಗ್ಗೆ ಓದಿದಾಗ ನನ್ನ ಒಂಬತ್ತು ವರುಷದ ಮಗನ ಅದೇ ಹವ್ಯಾಸದ ಬಗ್ಗೆ ಹೇಳಬೇಕೆನಿಸಿತು. ಹೋದ ಸಾರಿ ಬೆಂಗಳೂರಿಗೆ ಬಂದಾಗ ಮಂತ್ರಿ ಮಾಲನಲ್ಲಿ ಓಡಾಡುತ್ತಿದ್ದಾಗ ಯಾವದೋ ಪುಸ್ತಕದ ಅಂಗಡಿ ಕಣ್ಣಿಗೆ ಬಿತ್ತು ಅವನಿಗೆ. ಅಮೆರಿಕಾದಲ್ಲಿ $೬.೯೫ರ ಬುಕ್ಕು ಅಲ್ಲಿ ಸರಿಯಾಗಿ ೧೦೦ ರೂ.ಗೆ ಇಟ್ಟಿದ್ದರು. ಒಂದು ಬುಕ್ಕು ಕೊಂಡುಕೊಂಡು ನಮ್ಮ ಜೊತೆ ತಿರುಗುತ್ತಲೆ ಓದಿ ಮುಗಿಸಿದ. ನಾವು ಮೂರು ಘಂಟೆಯ ಕನ್ನಡ ಸಿನೆಮಾ ನೋಡಿ ಬರುವದರಲ್ಲಿ ಸಾವಿರ ರೂಪಾಯಿ ಉಡಾಯಿಸಿ ಆ ಸೀರಿಸನ ಹತ್ತು ಪುಸ್ತಿಕೆ ಕೊಂಡು ಓದಿ ಮುಗಿಸಿದ್ದ. ‘ಅಲ್ಲೋ ರಾಜಾ ನಮ್ಮೂರಲ್ಲಾಗಿದ್ದರೆ ಅಲ್ಲೆ ಅಂಗಡಿಯಲ್ಲೇ ಕೂತು ಓದಬಹುದಿತ್ತು , ಅಥವಾ ವಾಪಸ್ಸು ಕೊಟ್ಟು ಮತ್ತೇನಾದರೂ ತೆಗೆದುಕೊಳ್ಳಬಹುದಾಗಿತ್ತು’ ಎಂದು ಚೇಷ್ಟೆ ಮಾಡಿದೆ. ಅದಕ್ಕೆ ಅವನು ಹೇಳಿದ್ದು -ಆಕ್ಚುವಲ್ಲಿ ನಾನು ಓದಿದ್ದು ಹನ್ನೆರಡು ಪುಸ್ತಿಕೆಗಳು , ಆ ಸಿರಿಸಿನ ಹನ್ನೆರಡು ಪುಸ್ತಿಕೆಗಳಿದ್ದವು ಅಲ್ಲಿ, ಹತ್ತು ಸಾರಿ ಹೋಗಿ , ಪ್ರತಿ ಸಾರಿ next ಪುಸ್ತಿಕೆ ಕೊಂಡು ಸಾವಿರ ರೂಪಾಯಿ ಕೊಟ್ಟಿದ್ದಕ್ಕೆ ಆ ಅಂಗಡಿಯ ಮಾಲಿಕ ಅವನಿಗೆ ಎರಡು ಪುಸ್ತಕಗಳನ್ನು exchange ಮಾಡಲು ಒಪ್ಪಿದನಂತೆ.
~ಅನೀಲ