ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು ಜನಮೇಜಯ : “ದನವಂ ಕಡಿ ಕಡಿದು (ಜೈನ)ಬಸದಿಗೆಳೆಯುತ್ತಿರ್ಪರ್“

(ಇಲ್ಲಿಯವರೆಗೆ…)

ನಾನು ಭಾಸನ ಬೆನ್ನು ಹತ್ತಿ ಸಂಸ್ಖತ ನಾಟಕ ವಾರಿಧಿಯಲ್ಲೀಸಾಡಲು ಪ್ರಯತ್ನಿಸಿದ್ದು ನಿಮಗೆ ತಿಳಿದೇ ಇದೆ.. ಆನಂತರ ರಾಮನನ್ನು , ರಾಮಾಯಣವನ್ನು ವಿವಿಧ ರೀತಿಗಳಲ್ಲಿ ತಮಗೆ ಮನಬಂದಂತೆ ಮಾರ್ಪಾಟು ಮಾಡಿ ಚಿತ್ರಿಸಿದ ಪರಿ ನನ್ನನ್ನು ಸೆಳೆಯಿತು ರಾಮಾಯಣ ದರ್ಶನವನ್ನು ಅಧ್ಯಯನ ಮಾಡುತ್ತಲೇ ಕನ್ನಡದಲ್ಲಿ ಬಂದ ಬೇರೇ ರಾಮಾಯಣಗಳನ್ನು ಹುಡುಕಾಡಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಕನ್ನಡದಲ್ಲಿ ಸಿಕ್ಕ ಮೊದಲ ರಾಮಾಯಣವೆಂಬ ಕೀರ್ತಿಗೆ ಪಾತ್ರವಾಗಿರುವ ಪಂಪ ರಾಮಾಯಣ.
ಅಭಿನವಪಂಪನೆಂದು ತನ್ನನ್ನು ತಾನೇ ಕರೆದುಕೊಂಡ ನಾಗಚಂದ್ರ , ನಾಗಚಂದ್ರ –ಕಂತಿಯರ ಪ್ರಸಂಗದ ಮೂಲಕ ಹೆಚ್ಚು ಪರಿಚಿತನಾದ ನಾಗಚಂದ್ರನ ಪಂಪ ರಾಮಾಯಣ ಸಂಪೂರ್ಣವಾಗಿ ಬೇರೇಯೆ ಚಿತ್ರ ನೀಡಿತು. ಕಾವ್ಯವಾಗಿ ನನ್ನ ಮೇಲೆ ಅದೇನೂ ಪರಿಣಾಮ ಬೀರದಿದ್ದರೂ ಅದು ನನ್ನ ಮನಸ್ಸಿನಲ್ಲಿ ಇನ್ನೂ ಮಾಸದೆ ಉಳಿದಿದೆ. ಆ ಬಗ್ಗೆ ನಿಮಗೆ ಹೇಳಲೇ ಬೇಕು.
ರಾಮಾಯಣದ ಬಗ್ಗೆ ಪ್ರಸಂಗಿಸುವಾಗ ಉಪಕಥೆಗಳಿಲ್ಲದಿದ್ದರೆ ಹೇಗೆ ? ನಾಗಚಂದ್ರ-ಕಂತಿಯರ ಪ್ರಸಂಗ ಒಂದು ಆಸಕ್ತಿಕರ ಪ್ರಸಂಗ ಒಂದೇ ರಾಜನ ಆಸ್ಥಾನದಲ್ಲಿದ್ದ ನಾಗಚಂದ್ರ ಕಂತಿಯರ ಮಧ್ಯೆ ಸದಾ ಪೋಟಿ. ಕಾವ್ಯ ರೂಪದ ಸಮಸ್ಯೆಗಳನ್ನು ಕಂತಿ ಒಡ್ಡುವುದು ಅದನ್ನು ಜಾಣ್ಮೆಯಿಂದ ನಾಗಚಂದ್ರ ಬಗೆಹರಿಸುವುದು ಇದು ದಿನ ದಿನದ ರಂಜನೆ . ಒಂದು ಉದಾಹರಣೆಯೆಂದರೆ “ ದನವಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್ “ ಎಂಬ ಪದ್ಯವನ್ನು ಪೂರ್ಣಗೊಳಿಸಬೆಕೆಂಬ ಸವಾಲನ್ನು ಕಂತಿ ಎಸೆಯುತ್ತಾಳೆ. ಅಹಿಂಸೆಯನ್ನು ಒಂದು ಗೀಳಾಗಿಸಿಕೊಂಡ ಜೈನ ಧರ್ಮದ ಬಸದಿಗೆ ದನವನ್ನು ಕಡಿದುಕೊಂಡು ಹೋಗುವುದೇ ! ಶಾಂತಂ , ಪಾಪಂ ಎಂದು ಎಲ್ಲರೂ ಕಿವಿ ಮುಚ್ಚಿಕೊಂಡಾಗ ನಾಗಚಂದ್ರ ಅದನ್ನು “ ಸಚ್ಚಂದನವಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್ “ ಎಂದು ಪೂರ್ಣಗೊಳಿಸುತ್ತಾನೆ . ಸಭಾಸದರೆಲ್ಲಾ ಅಹಾ ! ಎನ್ನುತ್ತಾರೆ .
ಹೀಗೆ ಪರಸ್ಪರ ಪೋಟಿಯಿಂದ ನಡೆಯುತ್ತಲಿರಲು ನಾಗಚಂದ್ರನಿಗೆ ಕಂತಿಯ ಪ್ರತಿಭೆಯ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಆದರೆ ಅದೆ ಸಮಯದಲ್ಲಿ ಆಕೆಗೆ ತನ್ನ ಬಗ್ಗೆ ಏನು ಅಭಿಪ್ರಾಯವಿದೆ ಎಂದು ತಿಳಿಯದಾಗುತ್ತದೆ.. ಪ್ರತಿಸ್ಫರ್ಧಿಯಾಗಿ ನೋಡುತ್ತಾಳೋ ಅಥವಾ ತನ್ನ ಬಗ್ಗೆ ಅವಳಿಗೂ ಅಭಿಮಾನವಿದೆಯೋ ಎಂದು . ಅದನ್ನು ತಿಳಿದುಕೊಳ್ಳಲು ಅವನು ಒಂದು ತಂತ್ರ ಹೂಡುತ್ತಾನೆ. ನಾಗಚಂದ್ರ ಮರಣ ಹೊಂದಿರುವುದಾಗಿ ಸುದ್ದಿ ಕಳಿಸುತ್ತಾನೆ . ಅದನ್ನು ಕೇಳಿದ ಕಂತಿ ಮುಖವನ್ನೂ ಮುಚ್ಚಿ ಹೆಣದಂತೆ ಮಲಗಿರುವ ನಾಗಚಂದ್ರನನ್ನು ನೋಡಿ ಅಯ್ಯೋ ಕವಿಕುಲತಿಲಕನೇ ಅಪ್ರತಿಮ ಪ್ರತಿಭಾವಂತನೇ ನಾನು ಇನ್ನು ಯಾರ ಬಳಿ ಕಾವ್ಯದ ಸವಾಲುಗಳನ್ನು ಎಸೆಯಲಿ .ಎಂದು ರೋದಿಸುತ್ತಾಳೆ . ತನ್ನ ಮನಃಪೂರ್ತಿಯಾಗಿ ಈ ಹೊಗಳಿಕೆಯನ್ನೂ ಕೇಳಿ ನಂತರ ಎದ್ದು ಕುಳಿತುಕೊಳ್ಳುತ್ತಾನೆ. ಈ ಪ್ರಸಂಗಕ್ಕೆ ಯಾವ ಆಧಾರಗಳೂ ಇಲ್ಲವೆಂದು ಸಂಶೋಧಕರು ಭಾವಿಸಿದ್ದಾರೆ ಆದರೆ ಕಂತಿ ಹಂಪನ ಸಮಸ್ಯೆಗಳು ಹಾಗೂ ಈ ಐತಿಹ್ಯ ಬಹಳ ಯುವಜನರಿಗೆ ಬಹಳ ಆಸಕ್ತಿಕರವಾಗಿದೆ .
ಇನ್ನು ನಾಗಚಂದ್ರನ ರಾಮಚಂದ್ರ ಚರಿತ ಪುರಾಣವೆಂಬ ಪಂಪ ರಾಮಾಯಣಕ್ಕೆ ಬರೋಣ . ಇದು ನಾವು ಕೇಳುವ ವಾಲ್ಮೀಕಿಯದೆಂದು ಹೇಳಲಾದ ರಾಮಾಯಣ ಪರಂಪರೆಯ ಕಥಾನಕಕ್ಕೆ ಪೂರ್ಣ ಭಿನ್ನವಾದ ಜೈನ ಪರಂಪರೆಗೆ ಸೇರಿದ್ದು. ಅದರಲ್ಲಿ ರಾಮ , ಲಕ್ಷ್ಮಣರು ಮಾತ್ರವಲ್ಲ ತ್ರಿಷಷ್ಠಿಶಲಾಕ ಪುರುಷರೆಂದು ಪ್ರಸಿದ್ಧರಾದ ಗುಂಪಿಗೆ ಸೇರಿದವರು ಇಲ್ಲಿ ರಾವಣ ಪ್ರತಿವಾಸುದೇವ. ರಾಕ್ಷಸನಲ್ಲ ಖೇಚರ (ಗಂಧರ್ವ) ರಾಜನೇ ಹೊರತು ರಾಕ್ಸನಲ್ಲ. ರಾವಣನನ್ನು ಕೊಲ್ಲುವವನು ಲಕ್ಷ್ಮಣನೇ ಹೊರತು ರಾಮನಲ್ಲ. ಸೀತೆ ಜನಕನೇ ಸ್ವಂತ ಮಗಳೇ. ಸುಗ್ರೀವ , ಹನುಮಂತರು ಕಪಿಧ್ವಜರಷ್ಟೇ ಹೊರತು ಕಪಿಗಳಲ್ಲ.ಈ ಕಪಿಧ್ವಜರು ರಾವಣನ ಬಂಧುಗಳು . ಹನುಮಂತ ರಾವಣನ ತಂಗಿಯ ಅಳಿಯ. ಮತ್ತು ಸಂಸಾರಿ .

ಇನ್ನು ಕಥೆಗೆ ಬಂದರೆ ಇಲ್ಲಿ ಪುತ್ರ ಕಾಮೇಷ್ಠಿ ಯಾಗವಾಗಲೀ , ಮಂಥರೆಯಾಗಲೀ , ಮಾಯಾ ಜಿಂಕೆಯ ಪ್ರಸಂಗವಾಗಲೀ ಇಲ್ಲ. ರಾವಣನೋ ಒಬ್ಬ ಖೇಚರ ಪುರುಷ. ‘ ಪರಾಂಗನಾ ವಿರತಿ’ ವ್ರತವನ್ನು ಆಚರಿಸುತ್ತಿದ್ದವನು. ಉಪರಂಭೆಯೆಂಬ ಸುಂದರಿ ರಾವನನ ಮೇಲೆ ಮೋಹಿತಳಾಗಿ ಒಲಿದು ಬಂದರೂ ಅವಳಿಗೆ ಬುದ್ಧಿ ಹೇಳಿ ಕಳಿಸಿದವನು. ಇಂತಹವನು ಒಂದು ಪ್ರಸಂಗದಲ್ಲಿ ಸೀತೆಯನ್ನು ಕಂಡಾಗ ಅವಳಲ್ಲಿ ಮೋಹಗೊಳ್ಳುತ್ತಾನೆ.
‘ ತಳತಳಿಸಿ ಪೊಳೆಯೆ ಸೀತೆಯ ಚಳನಯನಂ , ಖಚರ ಚಕ್ರವರ್ತಿಯ ಚಿತ್ತಂ ಕಲಂಕಿ ಕದಡಿತ್ತಾಗಳ್ ‘
ಅವನು ತನ್ನ ಸಮುದಾಯಕ್ಕೆ ಕರಗತವಾದ ಖೇಚರ ವಿದ್ಯೆಯಿಂದ ಬಂದು ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕೊಂಡೊಯ್ಯುತ್ತಾನೆ. ಮಂಡೋದರಿಯನ್ನೇ ಸೀತೆಯನ್ನು ತನಗೊಲಿಯುವಂತೆ ಮಾಡಬೇಕೆಂದು ದೂತಿಯಾಗಿ ಕಳಿಸುತ್ತಾನೆ. ಅವಳು ಧೃಡವಾಗಿರುತ್ತಾಳೆ. ರಾವಣನ ಎಲ್ಲ ವೈಭವವೂ ಅವಳನ್ನು ಸೆಳೆಯುವುದಿಲ್ಲ. ಕೊನೆಗೆ ರಾವಣ ಪಸ್ಚಾತ್ತಾಪ ಪಡುತ್ತಾನೆ. ಸೀತೆಗೆ ದಃಖವನ್ನು ಕೊಟ್ಟೆ ಮತ್ತು ತನ್ನ ಕುಲಕ್ಕೇ ಕಳಂಕ ತಂದುಕೊಂಡೆ. ಎಂದು ಮರುಗುತ್ತಾನೆ. ಈ ರಾವಣ ನಾವು ನೋಡುವ ರಾಮಾಯಣಗಳ ರಾವಣರಿಗಿಂತ ಬಹಳ ಭಿನ್ನನಾದವನು. ಕೊನೆಗೆ ಯುದ್ಧದಲ್ಲಿ ರಾಮನ ಸೈನ್ಯವನ್ನು ಗೆದ್ದು ನಂತರ ರಣರಂಗದಲ್ಲಿಯೇ ರಾಮನಿಗೆ ಸೀತೆಯನ್ನು ಒಪ್ಪಿಸಬೇಕೆಂದು ನಿರ್ಣಯಿಸುತ್ತಾನೆ. ಆದರೆ ಅದೇ ಯುದ್ಧದಲ್ಲಿ ಲಕ್ಷ್ಮಣನ ಆಯುಧಕ್ಕೆ ಬಲಿಯಾಗುತ್ತಾನೆ.
ಇಲ್ಲಿ ರಾಮನು ಹಿಂಸೆಯನ್ನು ಮಾಡಲಾರದವನು . ಆದರೆ ಲಕ್ಷ್ಮಣ ಅನೇಕ ಸುಂದರಿಯರನ್ನು ಮದುವೆಯಾಗುತ್ತಾನೆ. ರಾವಣನ್ನು ಕೊಂದು ನರಕಕ್ಕೆ ಹೋಗುತ್ತಾನೆ. ಆದರೆ ರಾಮನಿಗೆ ಈ ಜನ್ಮವೇ ಕೊನೆಯದಾಗುತ್ತದೆ. ಅವನು ನೇರವಾಗಿ ಮುಕ್ತಿ ಹೊಂದುತ್ತಾನೆ.
ರಾಮಾಯಣಂಗಳ ಅಧ್ಯಯನ –ರಾಮಾಯಣದ ಮೂಲದ ಅನ್ವೇಷಣೆ
ಈ ಚಿತ್ರಣ ಅದರಲ್ಲಿಯೂ ರಾವಣನ ಚಿತ್ರಣ ನನಗೆ ಬಹಳ ಸೋಜಿಗವನ್ನುಂಟು ಮಾಡಿತು. ಈ ರೀತಿಯ ಅನೇಕ ಮಾರ್ಪಾಡುಗಳನ್ನು ಕುವೆಂಪುರವರೂ ಮಾಡಿಕೊಳ್ಳುವುದರಲ್ಲಿ ಇಂತಹ ಕಾವ್ಯಗಳ ಪ್ರಭಾವವನ್ನು ಕಾಣಬಹುದು. ಮುಂದೆ ನಾನು ಕನ್ನಡದಲ್ಲಿ ಸಿಕ್ಕ ರಾಮಾಯಣಗಳೆಲ್ಲವನ್ನೂ ಹುಡುಕಾಡಿದೆ. . ಕುವೆಂಪುರವರ ರಾಮಾಯಣ ದರ್ಶನಂ , ತಮಿಳಿನ ಕಂಬ ರಾಮಾಯಣ , ಹಿಂದಿಯ ತುಳಸೀ ದಾಸರ ರಾಮಚರಿತ ಮಾನಸ , ಮಲೆಯಾಳಂ ನ ಎಳುತ್ತಚ್ಚನ್ ರವರ ರಾಮಾಯಣ ಕಾವ್ಯ ವಾಲ್ಮೀಕಿಯ ಕಾವ್ಯದ ಕನ್ನಡ ಸಂಗ್ರಹಾನುವಾದಗಳು, ಕುವೆಂಪುರವರೇ ವಯಸ್ಕರ ಶಿಕ್ಷಣ ಸಂಸ್ಥೆಗಾಗಿ ಸಂಗ್ರಹಿಸಿದ ಜನಪ್ರಿಯ ವಾಲ್ಮೀಕಿ ರಾಮಾಯಣ . ಇನ್ನೂ ಕೆಲವು ಆನಂದ ರಾಮಾಯಣ ಎಂಬಂತಹ ಕೆಲವು ಕೃತಿಗಳು. ಇವುಗಳಿಗೂ ಪಂಪ ರಾಮಾಯಣಕ್ಕೂ ಇದ್ದ ಮುಖ್ಯ ವ್ಯತ್ಯಾಸವೆಂದರೆ. ಈ ಅನೇಕ ಕೃತಿಗಳು ವಾಲ್ಮೀಕಿಯದೆಂದು ಪ್ರಚಲಿತವಾಗಿರುವ ರಾಮಾಯಣದಿಂದ ಜನಿತವಾದವುಗಳು ಅದರ ಮಾರ್ಪಾಟುಗಳು.. ಆಯಾ ಕವಿಗಳು ತಮ್ಮ ಕಾಲ , ದೇಶ ಹಾಗೂ ಅವರ ಪ್ರತಿಭೆ , ಚಿಂತನೆಯ ಪ್ರಕಾಶಕ್ಕೆ ಅನುಗುಣವಾಗಿ ಮಾಡಿದ ಪುನಸೃಷ್ಠಿಗಳು .
ಆದರೆ ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ ಇವೆಲ್ಲವುಗಳಿಗಿಂತ ಪೂರ್ಣ ಭಿನ್ನ. ಅಂದ ಮಾತ್ರಕ್ಕೆ ಈ ಕಥೆ ಅವನ ಸೃಷ್ಠಿಯೇನಲ್ಲ. ಅದು ಅನೇಕ ವಿಮಲ ಸೂರಿಯಂತಹ ಜೈನ ಕವಿಗಳು ಪ್ರಾಕೃತ ಭಾಷೆಯಲ್ಲಿ ಬರೆದ ಪುರಾಣಗಳ ಪರಂಪರೆಯ ಮುಂದುವರಿಕೆಯಷ್ಟೇ . ಆದರೆ ನನಗೆ ಈ ಕಥೆ ವಾಲ್ಮೀಕಿಯದೆಂದು ನಮಗೆ ಗೊತ್ತಿರುವ ರಾಮಾಯಣದ ಮಾರ್ಪಾಟು ಎಂದೆನಿಸಲಿಲ್ಲ. ಇದು ಬೇರೆ ನಮ್ಮ ದೇಶದಲ್ಲಿ ವಿವಿಧ ರೂಪದಲ್ಲಿ ಪ್ರಚಲಿತವಾದ ಕಥೆಯೊಂದನ್ನು ಅನೇಕ ರೀತಿಯಲ್ಲಿ ಉಪಯೋಗಿಸಿಕೊಳ್ಳಲಾಗಿದೆ . ವಾಲ್ಮೀಕಿಯದೆಂಬ ರಾಮಾಯಣದ್ದು ಒಂದು ರೀತಿಯ ಬಳಕೆಯಾದರೆ , ಜೈನ ಧರ್ಮದ್ದು ಮತ್ತೊಂದು ರೀತಿ ಎಂಬ ಭಾವನೆ ಮೂಡಿತು. ಹೀಗೆ ಪ್ರತಿಯೊಂದು ಪರಂಪರೆಯೂ ತಂತಮ್ಮ ಉದ್ದೇಶಗಳಿಗಾಗಿ ಈ ಕಥೆಯನ್ನು ದುಡಿಸಿಕೊಂಡಿದ್ದಾರೆ ಎಂದರೆ ಇದಕ್ಕೆ ಇರುವ ದೈವ ಸಂಬಂಧೀ ಪರಿವೇಶ ತಾವೇ ಸೃಷ್ಠಿಸಿಕೊಂಡದ್ದೇ ಹೊರತು ಮೂಲದಲ್ಲಿ ಇದ್ದದ್ದಲ್ಲ . ಮೂಲದಲ್ಲಿ ಇದು ಕೇವಲ ನಮ್ಮ ನಿಮ್ಮಂತಹ ನರ ಮಾನವರ ಕಥೆ. ಆದರೆ ಬಹಳ ಪ್ರಚಲಿತವಾದ ಕಥೆ. ಆದ್ದರಿಂದಲೇ ಎಲ್ಲರೂ ಅದರ ಪ್ರಯೋಜನ ತೆಗೆದುಕೊಳ್ಳಲು ಕಾತರ ತೋರಿಸಿದ ಕಥೆ. ಅಂದರೆ ಈ ಕಥೆ ಅಂದಿನೊಂದು ಕಾಲದಲ್ಲಿ ಜನರಲ್ಲಿ ಜನಜನಿತವಾದ ಕಥೆಯಾಗಿತ್ತು . ಮುಂದೆ ಅದಕ್ಕೆ ದೇವರ ಅವತಾರದ ಜೋಡಣೆಯಿಂದ ಒಂದು ವರ್ಷನ್ ಮಾತ್ರ ಪ್ರಚಲಿತವಾಯಿತು ಮಾತ್ರವಲ್ಲ ಅದೊಂದೇ ಅಧಿಕೃತ ಎಂಬ ಅಧಿಕಾರವನ್ನು ಪಡೆದುಕೊಂಡಿತು. ಎಂದೆನ್ನಿಸಿತು .
ಕನ್ನಡ ಜಾನಪದದಲ್ಲಿ ರಾಮಾಯಣದ ಕಥಾನಕಗಳನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸಿಕೊಂಡಿರುವ ಕಾವ್ಯದ ತುಣುಕಗಳು ಇನ್ನೂ ಹೆಚ್ಚಿನ ಬೆರಗನ್ನು ಮೂಡಿಸಿದುವು. ಈ ಬೆರಗು ನನ್ನ ಇಡೀ ಜೀವನದಲ್ಲಿ ಬೆನ್ನಟ್ಟಿಕೊಂಡೇ ಬಂದಿದೆ. ಕರ್ನಾಟಕದ ಯಾವ ಊರಿಗೆ ಹೋದರೂ , ಯಾವುದೇ ಲೈಬ್ರರಿಗೆ ಯಾವ ಅಧ್ಯಯನಕ್ಕಾಗಿ ಹೋಗಿದ್ದರೂ ಕೂಡ ರಾಮಾಯಣದ ಬಗ್ಗೆ ನನ್ನ ಕಣ್ಣೊಂದು ಹುಡುಕುತ್ತಲೇ ಇರುತ್ತದೆ. ಈ ಹುಡುಕಾಟದ ಫಲವಾಗಿ ರಾಮಾಯಣದ ಮೂಲ ಕಥೇಯ ಬಗ್ಗೆ ನಾನು ಸಂಶೋಧನೆ ಕೈಗೊಂಡು ಕೆಲ ಮುಖ್ಯ ತೀರ್ಮಾನಗಳಿಗೆ ಬಂದಿದ್ದೇನೆ. ಅದಕ್ಕೆ ಒಂದು ವ್ಯವಸ್ಥಿತ ರೂಪ ಕೊಟ್ಟು ಬರೆಯುವುದು ಬಾಕಿ ಇದೆ. ಇಲ್ಲಿಯವರೆಗೆ ನಾನು ಮಾಡಿರುವ ಲಿಟರೇಚರ್ ರಿವ್ಯೂ ಪ್ರಕಾರ ನನ್ನ ಈ ಶೋಧ ರಾಮಾಯಣಕ್ಕೆ ಸಂಬಂಧಿಸಿ ಮಾತ್ರವಲ್ಲ ಭಾರತದ ಜನ ಜೀವನದ ಇತಿಹಾಸಕ್ಕೆ ಹೊಸತೇನನ್ನೋ ನೀಡುತ್ತದೆ ಎಂದೆನ್ನಿಸಿದೆ.
(ಮುಂದುವರೆಯುತ್ತದೆ…)

‍ಲೇಖಕರು G

18 September, 2014

3 Comments

  1. ಕೃಷ್ಣೇಗೌಡ ಟಿ.ಎಲ್.

    ಒಂದು ವ್ಯವಸ್ಥಿತ ರೂಪಕೊಟ್ಟು ಬರೆಯುವುದು ಮಾತ್ರ ಬಾಕಿ ಉಳಿಯದಿರಲಿ…

  2. Anil Talikoti

    ನಿಮ್ಮ ಮುಖ್ಯ ತೀರ್ಮಾನಗಳ ಪರ್ಮಾನು ಏನೆಂದು ಕಾತುರದಿಂದ ಕಾಯುತ್ತಿದ್ದೇನೆ.
    -Anil

  3. mmshaik

    well done sir….!! indu jagattige aa patragaLu mukkyavalla..avu pratippadisuva moulyagaLu prastutvaagabeku..!!!agatyavaagabeku..!!!ee nittinalli adu moulika kruti..!!!

Trackbacks/Pingbacks

  1. ಓದು ಜನಮೇಜಯ : ರಾವಣನೇ ಗರ್ಭ ಧರಿಸಿ ಸೀತೆಯನ್ನು ಹೆತ್ತ ಕಥೆ ಕೇಳಿದ್ದೀರಾ! « ಅವಧಿ / Avadhi - [...] ಓದು ಜನಮೇಜಯ : ರಾವಣನೇ ಗರ್ಭ ಧರಿಸಿ ಸೀತೆಯನ್ನು ಹೆತ್ತ ಕಥೆ ಕೇಳಿದ್ದೀರಾ! September 19, 2014 (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading