ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದು ಜನಮೇಜಯ : ಕೋಳೀ ಸಾರು ಎಂಬ ಕನ್ನಡ ಉಪಾಧ್ಯಾಯರೂ ಅವರ ಕೀಳರಿಮೆಯೂ

(ಇಲ್ಲಿಯವರೆಗೆ…)

ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಓದುಗರು , ಸಾಹಿತಿಗಳು ತಮಗೆ ಶಾಲಾ ದಿನಗಳಲ್ಲಿ ಉಪಾಧ್ಯಾಯರುಗಳು ಪ್ರಮುಖವಾಗಿ ಕನ್ನಡ ಉಪಾಧ್ಯಾಯರುಗಳಿಂದ ತಮಗಾದ ಪ್ರಭಾವದ ಬಗ್ಗೆ ಹೇಳುವಾಗೆಲ್ಲಾ ನನಗೆ ಹೊಟ್ಟೆಕಿಚ್ಚಾಗುತ್ತದೆ. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಅನೇಕ ಉಪಾಧ್ಯಯರುಗಳು ನನ್ನನ್ನು ಮೆಚ್ಚಿದ್ದಾರೆ , ಕಾಳಜಿ ತೋರಿದ್ದಾರೆ , ತಮ್ಮ ಪ್ರೀತಿಯನ್ನೂ ನೀಡಿದ್ದಾರೆ. ಆದರೆ ಪಠ್ಯ ಪುಸ್ತಕಗಳಲ್ಲಿ ಇದ್ದ ಪಾಠಗಳನ್ನು ಮಾಡುತ್ತಿದ್ದರು ಅದರ ಹೊರತಾಗದ ಸಾಹಿತ್ಯದ ಬಗ್ಗೆ ಹೆಚ್ಚೇನು ಹೇಳುತ್ತಿರಲಿಲ್ಲ. ನನ್ನ ನೆನಪಿನ ಪ್ರಕಾರ ಅವರೇ ಅವನ್ನೆಲ್ಲಾ ಓದಿಕೊಂಡಿರಲಿಲ್ಲ. ಕುವೆಂಪುರವರ ವಿವಿಧ ಕೃತಿಗಳ ಬಗ್ಗೆ , ಇತರ ಸಾಹಿತಿಗಳ ಬಗ್ಗೆ ಅವರ ಕೃತಿಗಳ ಬಗ್ಗೆ ಪಠ್ಯಪುಸ್ತಕಗಳಲ್ಲಿ ಬಂದಿರುವುದು ಬಿಟ್ಟರೆ , ಹೆಚ್ಚೆಂದರೆ ಪತ್ರಿಕೆಗಳ ಸುದ್ದಿಯ ಮೂಲಕ ತಿಳಿದದ್ದು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿದ್ದಂತಿರಲಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ಸಾಹಿತ್ಯದ ರುಚಿ ಹತ್ತಿಸುವ , ಅವರಿಗೆ ಪಠ್ಯವನ್ನು ಬಿಟ್ಟು ಬೇರೇನನ್ನಾದರೂ ಓದಬೇಕೆಂದು ಸಲಹೆ ನೀಡುವ ಆಸಕ್ತಿ , ಉತ್ಸಾಹ ಇದ್ದವರಾಗಿರಲಿಲ್ಲ. ಅದಕ್ಕೆ ಅವರ ಗ್ರಾಮೀಣ ಹಿನ್ನೆಲೆ , ವಿದ್ಯಾಭ್ಯಾಸ ಇಂತಹವೆಲ್ಲಾ ಕಾರಣವಾಗಿರಬಹುದು. ಇದರಲ್ಲಿ ಜಾತಿ ವ್ಯತ್ಯಾಸವೇನೂ ಇರಲಿಲ್ಲ.
ನನ್ನಲ್ಲಿ ಓದುವುದಕ್ಕೆ ಬೇಕಾದ ಅಕ್ಷರ ಕಲಿಕೆಯನ್ನು ನೀಡಿದ್ದು ಶಾಲಾ ವಿದ್ಯಾಭ್ಯಾಸ. ಅಂದಿನ ಪಠ್ಯಗಳಲ್ಲಿದ್ದ ಅನೇಕ ಮಕ್ಕಳ ಹಾಡುಗಳು ನನ್ನಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಕ್ಕೆ ಕಾರಣವಾಗಿವೆ. ಈಗಲೂ ನನಗೆ ಶಾಲಾ ದಿನಗಳ ಅನೇಕ ಹಾಡುಗಳು ಬಾಯಿಗೆ ಬರುತ್ತವೆ. ‘ ಬಂದಾ ಬಂದಾ ಸಂತಮ್ಮಣ್ಣ ‘ ತಿರುಕನೋರ್ವನೂರ ಮುಂದೆ ಒರಗಿರುತ್ತಲೊಂದ ಕನಸ ಕಂಡನೆಂತೆನೆ ‘ ’ ಬಂತೈ ಬಂತೈ ಇದೆ ಇದೆ ಬಂತೈ ತೆಂಕಣ ಗಾಳಿ ಕೊಂಕಣ ಸೀಮೆಗೆ ‘ ನಾಗರಹಾವೇ ಹಾವೊಳು ಹೂವೆ ಇಂತಹ ಅನೇಕ ಗೀತೆಗಳು ನನ್ನನ್ನು ಸೆಳೆದವು. ಇವು ಕೇವಲ ನಮ್ಮ ತರಗತಿಯ ಪಠ್ಯ ಪುಸ್ತಕಗಳಲ್ಲಲ್ಲದೇ ನನ್ನ ಹಿಂದಿನ ಪಠ್ಯ ಪುಸ್ತಕಗಳು , ನಂತರದ ಪಠ್ಯ ಪುಸ್ತಕಗಳಲ್ಲಿದ್ದ ಹಾಡುಗಳನ್ನೂ ಆಸಕ್ತಿಯಿಂದ ಓದುತ್ತಿದ್ದೆ . ಅವುಗಳಲ್ಲಿ ಕೆಲವೂ ನನ್ನ ನೆನಪಿನಲ್ಲಿ ಉಳಿದು ನನ್ನ ಸಾಂಸ್ಕೃತಿಕ ಜೀವನಕ್ಕೆ ತಂಪನೆನರೆದಿವೆ.
ಅದರಲ್ಲಿಯೂ ನಮ್ಮ ತಾಯಿಯವರ ಪಠ್ಯಗಳಲ್ಲಿದ್ದ , ‘ ತೆಂಗಿನ ಮರಗಳು ಕುಳ್ಳಾಗಿದ್ದು ಕಾಯ್ಗಳು ಕೈಗೆ ಸಿಗುವಂತಿದ್ದು ಎಳೆನೀರಿನ ಮುಚ್ಚಳ ತೆಗೆದಿರಲು ಇನ್ನೂ ಚೆನ್ನಾಗಿರುತ್ತಿತ್ತು ಮತ್ತೂ ಚೆನ್ನಾಗಿರುತ್ತಿತ್ತು ‘ ಎಂಬ ಪದ್ಯ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಮಾನವನ ಆಸೆಗೆ ಮತ್ತು ಆಸೆಬುರುಕತನಕ್ಕೆ ಸಂಕೇತವಾಗಿ ನನ್ನ ನೆನಪಿನಲ್ಲುಳಿದಿದೆ. ( ಇದನ್ನು ಬರೆದವರು ಯಾರು ಮತ್ತು ಈ ಪದ್ಯದ ಪೂರ್ಣಪಾಠವೇನು ತಿಳಿದವರು ದಯವಿಟ್ಟು ತಿಳಿಸಿ )
ನಮ್ಮ ಕನ್ನಡ ಉಪಾಧ್ಯಾಯರು ಇನ್ನೂ ಒಂದು ಉಪಕಾರ ಮಾಡಿದ್ದಾರೆ . ಪಠ್ಯಗಳಲ್ಲಿದ್ದ ನಡುಗನ್ನಡ , ಹಳಗನ್ನಡದ ಕಾವ್ಯದ ತುಣುಕುಗಳಿಗೆ ಪ್ರತಿಪಾದಾರ್ಥ ಮೊದಲಾದ ಕ್ರಮಗಳ ಮೂಲಕ ಅವುಗಳನ್ನು ಅರ್ಥ ಮಾಡಿಕೊಳ್ಳುವ,ವಿಧಾನವನ್ನು ಕಲಿಸಿದರು. ಆದರೆ ಕಾವ್ಯವನ್ನು ಆಸ್ವಾದಿಸುವುದನ್ನು ಕಲಿಸಿದ್ದು ಮಾತ್ರ ಹಿಂದೆಯೆ ವಿವರಿಸಿದಂತೆ ಮನೆಯಲ್ಲಿ ನಡೆಯುತ್ತಿದ್ದ ಕುಮಾರವ್ಯಾಸ ಕಾವ್ಯದ ವಾಚನ .
ನ್ಯಾಷನಲ್ ಹೈಸ್ಕೂಲಿನ ಚರಿತ್ರೆಯನ್ನು ಬಲ್ಲವರಿಗೆ ಈ ಪರಿಸ್ಥಿತಿ ಗಣನೀಯವಾಗಿ ಬದಲಾಗಿರಬಹುದೆಂದು ಕಲ್ಪಿಸಿಕೊಳ್ಳಬಹದು. ಆದರೆ ನಡೆದದ್ದು ಅದರ ವಿರುದ್ಧವಾಗಿಯೇ . ನಮ್ಮ ಹೈಸ್ಕೂಲಿನಲ್ಲಿ ಬೇರೆ ತರಗತಿಗಳಿಗೆ ಹೇಗೋ ಏನೋ ನಮಗೆ ಸಿಕ್ಕ ಕನ್ನಡ ಉಪಾಧ್ಯಾಯರು ಮಾತ್ರ ನಮಗೆ ಕನ್ನಡ ಸಾಹಿತ್ಯದಲ್ಲಿ ಉತ್ಸಾಹವನ್ನೇನೂ ಮೂಡಿಸಲಿಲ್ಲ. ಇಂಗ್ಲಿಷ್ ಉಪಾಧ್ಯಾಯರೂ ಕೂಡ. ಈ ಸಂಗತಿ ಎಷ್ಟು ಪ್ರಾಮುಖ್ಯವುಳ್ಳದ್ದು ಎಂಬುದನ್ನು ಒಳ್ಳೆಯ ಶಿಕ್ಷಕರು ದೊರೆತ ಬಹಳ ಜನ ಗ್ರಹಿಸಬಹುದು . ಇದನ್ನು ಒಂದು ಎದುರು ಉದಾಹರಣೆಯ ಮೂಲಕ ವಿವರಿಸ ಬಯಸುತ್ತೇನೆ .
ನಮ್ಮ ಇಂಗ್ಲಿಷ್ ಉಪಾಧ್ಯಾಯರು ಬಂದಿರಲಿಲ್ಲವೆಂದು ಬೇರೆ ತರಗತಿಯ ಒಬ್ಬ ಉಪಾಧ್ಯಾಯರನ್ನು ಒಂದು ಪೀರಿಯಡ್ ಗಾಗಿ ಕಳುಹಿಸಿದ್ದರು. ಅವರು “ ಕರ್ಫ್ಯೂ ಮಸ್ಟ್ ನಾಟ್ ರಿಂಗ್ ಟುನೈಟ್ “ ಎಂಬ ಕವನದ ವಾಚನ ಇಂದೂ ನನ್ನ ಕಿವಿಗಳಲ್ಲಿ ರಿಂಗಣಗುಣಿಯುತ್ತಿದೆ. ಬ್ರಿಟನ್ನಿನಲ್ಲಿ ರಾಜ ಪ್ರಭುತ್ವ ನಾಶವಾಗಿ ಪ್ರಜಾಪ್ರಭುತ್ವದ ಸೈನ್ಯ ವಿಜಯವಾಗಿ ಪ್ಯೂರಿಟನ್ನರ ನಾಯಕನಾದ ಕ್ರೋಮ್ ವೆಲ್ ಎಂಬ ಸರ್ವಾಧೀಕಾರಿಯ ಹನ್ನೆರಡು ವರ್ಷಗಳ ಆಡಳಿತದಲ್ಲಿ ನಡೆದ ಘಟನೆ. ಒಂದು ಪ್ರೇಮ ಪ್ರಸಂಗ . ರೋಸ್ ಥೋರ್ಪ್ ಎಂಬ ಕವಯತ್ರಿ ತನ್ನ ಹದಿನಾರರ ವಯಸ್ಸಿನಲ್ಲಿ ಬರೆದ ಕವನ. ಬೆಸ್ಸೀ ಎಂಬ ಯುವತಿ ತಾನು ಪ್ರೇಮಿಸಿದ ಬೇಸಿಲ್ ಎಂಬ ಯುವಕನನ್ನು – ಪ್ಯೂರಿಟನ್ ಸರ್ಕಾರ ಜೈಲಿಗೆ ಹಾಕಿದ್ದವನನ್ನು ಉಳಿಸಿಕೊಳ್ಳಲು ಮಾಡಿದ ಸಾಹಸ. ಈ ಎಲ್ಲ ವಿವರಗಳ ಜೊತೆ ಆ ಕವನದ ವಾಚನ ನಮಗೆ ಬೇರೊಂದು ಲೋಕವನ್ನೇ ಪರಿಚಯಿಸಿತು. ಆದರೆ ನಮ್ಮ ಅಧ್ಯಾಪಕರು ?
ಇನ್ನು ನಮ್ಮ ಕನ್ನಡ ಅಧ್ಯಾಪಕರ ವಿಷಯಕ್ಕೆ ಬರೋಣ . ಅವರು ಶಾಲೆಯಲ್ಲಿ ಕೆಎಸ್ ಎಂದು ಕರೆಸಿಕೊಳ್ಳುತ್ತಿದ್ದರು. ಮೇಷ್ಟರುಗಳಿಗೆಲ್ಲಾ ಒಂದಲ್ಲಾ ಒಂದು ಅಡ್ಡ ಹೆಸರಿಡುವುದು ಎಲ್ಲಾ ಶಾಲೆಗಳಲ್ಲಿಯೂ ಇರುವ ವಿದ್ಯಾರ್ಥಿಗಳ ಹಕ್ಕು . ಇವರಿಗೆ ವಿದ್ಯಾರ್ಥಿಗಳು ಇಟ್ಟ ಹೆಸರು ಕೆ. ಎಸ್ ಅಂದ್ರೆ ಕೋಳಿ ಸಾರು ಅಂತ ಏಕೋ ಎನೋ . ನನಗಂತೂ ಗೊತ್ತಿಲ್ಲ. ಅವರಂತೂ ಶುದ್ಧ ಬ್ರಾಹ್ಮಣರು .ಹಾಗೆಯೇ ಕೆಲ ಅಡ್ಡ ಹೆಸರುಗಳು ಹೀಗಿದ್ದವು. ಕೆ ಎನ್ –ಕಚ್ಚೋ ನಾಯಿ ( ಇವರ್ಯಾರು ಗೊತ್ತೆ ? ಪ್ರಸಿದ್ಧ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆಯವರ ತಾತ , ಬಹಳ ಒಳ್ಳೆಯ ವಿಜ್ಞಾನದ ಅಧ್ಯಾಪಕರು . ) ಎಚ್ ಎನ್ ಕೆ – ಹುಚ್ಚು ನಾಯಿ ಕಚ್ಚಿದರೆ ಹೆಚ್ಚು ನಂಬರ್ ಕೊಡ್ತಾನೆ , ಎಸ,ಎನ್ ಎಮ್ ಸುಂದರಿಯರನ್ನು ನೋಡಿ ಮೋಹಿಸ್ತಾನೆ , ಹೀಗೆ ಕೆಲವು ಸಚಿತ್ರ , ಕೆಲವು ವಿಚಿತ್ರ.
ಈ ಕೆ.ಎಸ್ ರವರು ಪಾಟ ಮಾಡುತ್ತಿದ್ದ ರೀತಿಯೆಂದರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಬ್ಬರಾದ ಮೇಲೊಬ್ಬರು ನಾನ್ ಡೀಟೇಲ್ಡ್ ಪುಸ್ತಕವಾದರೆ ಸರಣಿಯಾಗಿ ಓದುವುದು . ಅಷ್ಟೇ . ಮತ್ತು ಡೀಟೇಲ್ಡ್ ಆದರೆ ಅವರು ಏನಾದರು ಸ್ವಲ್ಪ ಅರ್ಥ ಹೇಳುತ್ತಿದ್ದರು. ಕೆಲವೊಮ್ಮೆ ಅಪಾರ್ಥವೂ. ಕಡೆಂಗೋಡ್ಲು ಶಂಕರ ಭಟ್ಟರ ‘ ಕಾರ್ಗಾಲದ ವೈಭವ ‘ ದಲ್ಲಿ ಕನ್ನಡ ನಾಡಿನ ಕಾರ್ಗಾಲದ ವೈಭವವೇನು , ಚೆಲ್ಲದರೆನಿತೂ ತೀರದ ನೀರಿನ ಜಡ ದೇಹದ ಕಾರ್ಮುಗಿಲೇನು , ಕುದುರೆ ಮುಖದ ಕಡಿವಾಣದ ತೆರದಲಿ ಮಿಚಿಗಳವು ಥಳ ಥಳಿಪುವುವು ಎಂಬ ಸಾಲಿಗೆ ಅವರ ವಿವರಣೆ ಕುದುರೆಗಳ ಮುಖದಲ್ಲಿ ಹಿತ್ತಾಳೆಯ ಬಳೆಯೊಂದರಲ್ಲಿ ಕಡಿವಾಣವನ್ನು ಕಟ್ಟಲಾಗಿರುತ್ತದೆ . ಆ ಹಿತ್ತಾಳೆಯ ಬಳೆಯ ಥಳ ಥಳ ಹೊಳಪು ಈಸಾಲುಗಳಲ್ಲಿ ವರ್ಣಿತವಾಗಿದೆ ಎಂದು ಅವರ ಅರ್ಥೈಕೆ. ಕವಿಯ ರೂಪಕ ಆಗಸಕ್ಕೆ ಮುಖ ಚಾಚಿದ ಕುದುರೆ ಮುಖ ಶಿಖರಕ್ಕೆ ಮಿಂಚುಗಳೇ ಕಡಿವಾಣಗಳು ಎಂಬ ಕಣ್ಣು ತುಂಬುವ , ಮನ ತುಂಬುವ ಆ ನೋಟ.! ನಮ್ಮ ಉಪಾಧ್ಯಾಯರದು !
ನಾನು ಎಂಟನೆಯ ತರಗತಿಯಲ್ಲಿರುವಾಗಲೇ ಅವರಿಗೆ ನಾನು ತರಗತಿಗಳಲ್ಲಿ ಕೊಡುವ ಉತ್ತರಗಳು ಮತ್ತು ಪರೀಕ್ಷೆಯಲ್ಲಿ ಬರೆಯುತ್ತಿದ್ದ ಉತ್ತರಗಳಿಂದ ಇವನಿಗೆ ಸಾಹಿತ್ಯದ ಬಗ್ಗೆ ನನಗಿಂತಲೂ ಹೆಚ್ಚು ಗೊತ್ತಿದೆ ಎಂದೆನಿಸಿ ಬಿಟ್ಟಿತ್ತು . ಇದರಿಂದ ಅವರಿಗೆ ಒಂದು ಕೀಳರಿಮೆ ಭಾಧಿಸತೊಡಗಿತ್ತು. ನನಗೆ ಮೊದ ಮೊದಲು ಗೊತ್ತಾಗಿರಲಿಲ್ಲ. ಅವರು ಪಾಠ ಮಾಡುವಾಗ ನನ್ನನ್ನೆ ಗಮನಿಸಲಾರಂಭಿಸಿದ್ದರು. ನಾನು ನಕ್ಕರೊಂದು ಅರ್ಥ , ಸುಮ್ಮನಿದ್ದರೆ ಮತ್ತೊಂದು ಅರ್ಥ , ಪಕ್ಕದಲ್ಲಿ ಕುಳಿತ ವಿದ್ಯಾರ್ಥಿಯ ಜೊತೆಯಲ್ಲಿ ಮಾತನಾಡಿದರೆ ಮತ್ತೊಂದು ಅರ್ಥ. ಹೀಗೆ ಏನೇನೋ ಕಲ್ಪಿಸಿಕೊಂಡು ಪದೇ ಪದೇ ನನ್ನನ್ನು ಎದ್ದು ನಿಲ್ಲಿಸಿ ಏನು ಮಾಡುತ್ತಿದ್ದೀಯ ಎಂದು ಕೇಳುತ್ತಿದ್ದರು. ಇಲ್ಲದ ಪ್ರಶ್ನೆಗಳನ್ನು ಹಾಕಿ ಪರೀಕ್ಷಿಸುತ್ತಿದ್ದರು . ನನಗೆ ಇವರ ತರಗತಿಯಲ್ಲಿ ಇರುವುದೆ ಹಿಂಸೆಯಾಗತೊಡಗಿತ್ತು. ಪಾಠ ಮುಂದಕ್ಕೆ ಹೋದಂತೆ ಸಂಧಿ , ಸಮಾಸ , ಅಲಂಕಾರಗಳ ವಿಷಯ ಬಂದರಂತು ತಡವರಿಸುತ್ತಿದ್ದರು. ನನ್ನ ಮುಖ ನೋಡುತ್ತಿದ್ದರು. ಒದ್ದಾಡುತ್ತಿದ್ದರು. ನಾನು ಈ ಸಮಾಸಗಳ ಬಾಧೆ ತೊಲಗಿಸುವುದಕ್ಕೆ ಗಣಿತದಂತೆ ಸಮೀಕರಣ ರಚಿಸಿ ಸುಲಭವಾಗಿ ಅವುಗಳನ್ನು ಗುರುತಿಸುವ ಸೂತ್ರಗಳನ್ನು ನನ್ನ ಸಹಪಾಠಿಗಳಿಗೆ ಹೇಳಿಕೊಟ್ಟಿದ್ದೆ. ಆದ್ದರಿಂದ ಅವರಿಗೂ ಗೊತ್ತಾಗುತ್ತಿತ್ತು. ಅವರೂ ನನ್ನ ಮುಖ ನೋಡಿ ನಗುತ್ತಿದ್ದರು. ನನಗೆ ಇದೊಂದು ಕಿರಿಯಾಗಿ ಬಿಟ್ಟಿತ್ತು .
ಹತ್ತನೆಯ ತರಗತಿಯಲ್ಲಿ ಒಂದು ದಿನ ಇದು ಅವರಿಗೆ ಸಂಧಿಯೊಂದನ್ನು ಅವರಿಗೆ ಸರಿಯಾಗಿ ವಿವರಿಸಲಾಗಲಿಲ್ಲ. ಅದನ್ನು ಹಿಂದಿನ ದಿನವಾದ ಭಾನುವಾರ ನಾನು ನನ್ನ ಗೆಳೆಯರಿಗೆ ಕಂಬೈನ್ಡ್ ಸ್ಟಡಿಯಲ್ಲಿ ಹೇಳಿಕೊಟ್ಟಿದ್ದೆ. ಅವರಲ್ಲೊಬ್ಬ ನನ್ನನ್ನೂ ಇತರ ಗೆಳೆಯರನ್ನೂ ನೋಡಿ ಹುಸಿನಗೆ ನಗುತ್ತಿದ್ದ . ಸರಿ ನಮ್ಮ ಪ್ರಿಯ ಅಧ್ಯಾಪಕರ ಸಿಟ್ಟು ನೆತ್ತಿಗೇರಿತು . ನನ್ನನ್ನು ಎದ್ದು ನಿಲ್ಲಿಸಿದರು.” ನನ್ನನ್ನು ನೋಡಿ ಅಪಹಾಸ್ಯ ಮಾಡಿ ನಗುತ್ತಿದ್ದೀಯ. ನಿನ್ನ ಮಿತ್ರರಿಗೂ ಅದನ್ನು ಕಲಿಸಿಬಿಟ್ಟಿದ್ದೀಯ. ಗೆಟ್ ಔಟ್ “ ಎಂದರು. ನನಗೂ ಇದು ಸಾಕಾಗಿ ಹೋಗಿತ್ತು. ಅಂದಿನವರೆಗೂ ಯಾವೊಂದು ಕ್ಲಾಸಿಗೂ ಚಕ್ಕರ್ ಹೊಡೆಯದ ನಾನು ಕ್ಲಾಸಿನಿಂದ ಹೊರಗೆ ನಡೆದೇ ಬಿಟ್ಟೆ. ನನ್ನ ಸ್ನೆಹಿತರು ಬೇಡ ತಪ್ಪಾಯ್ತು ಎಂದು ಕ್ಷಮೆ ಕೇಳಿಬಿಡು ಎಂದು ಒತ್ತಾಯಿಸಿದರೂ ಕೇಳದೆ ಹೊರಟು ಬಿಟ್ಟೆ. ಈ ರೀತಿಯ ತರಗತಿಯಲ್ಲಿ ಕಲಿಯುವುದಕ್ಕಿಂತ ಹೊರಗೇ ಹೆಚ್ಚು ಕಲಿಯಬಹುದು. ಒಂದು ಗಂಟೆ ನನಗೆ ವಿಶೇಷವಾಗಿ ಸಿಕ್ಕಿತು ಎಂದು ಅನಿಸಿತು. ಯಾವಾಗಲೂ ಕ್ಲಾಸಿನಲ್ಲಿರುತ್ತಿದ್ದ ನಾನು ಅವರ ಪೀರಿಯೆಡ್ ಬಂತೆಂದರೆ ಹೊರಗೆ ಹೊರಟು ಬಿಡುತ್ತಿದ್ದೆ. ಕೆಲವೊಮ್ಮೆ ಅವರು ತರಗತಿಯೊಳಕ್ಕೆ ಬರುವುದಕ್ಕೂ ನಾನು ಹೊರಗೆ ಹೋಗುವುದಕ್ಕೂ ಒಂದೇ ಆಗುತ್ತಿತ್ತು.
ಹೀಗೆ ಮೂರು ತಿಂಗಳು ಕಳೆಯಿತು. ನಾನು ಆ ಪೀರಿಯಡ್ ನಲ್ಲಿ ಹೋಗಿ ಶಾಲಾ ಲೈಬ್ರರಿಯಲ್ಲಿ ಕುಳಿತು ಪತ್ರಿಕೆ ಪುಸ್ತಕಗಳನ್ನು ಓದುತ್ತಿದ್ದೆ . ಮತ್ತೆ ಮುಂದಿನ ಪೀರಿಯಡ್ ಗೆ ಬರುತ್ತಿದ್ದೆ. ನಮ್ಮ ಕೆಎಸ್ ರವರೂ ಕಾದು ನೋಡಿದರು . ನಾನು ಕ್ಷಮೆ ಮತ್ತೇನಾದರೂ ಕೇಳುವನೆಂದು . ಅಂತಹ ಲಕ್ಷಣವೇನೂ ಕಾಣದಿರಲು ಒಂದು ದಿನ ನನ್ನನ್ನು ಕರೆದುಕೊಂಡು ಬರಲು ನನ್ನ ಮಿತ್ರರನ್ನಟ್ಟಿದರು. ನಾನು ಮೇ ಐ ಗೆಟ್ ಇನ್ ಸಾರ್ ಎಂದು ಯಾವ ತರಗತಿಯಲ್ಲಾದರೂ ಕೇಳುವಂತೆ ಕೇಳಿ ಒಳ ಹೋದೆ.
ಈ ನಮ್ಮ ಅಧ್ಯಾಪಕರಿಗೆ ನನ್ನ ಬಗ್ಗೆ ಎಂತಹ ದುರಭಿಪ್ರಾಯವಿತ್ತು ಮತ್ತು ನನ್ನ ಬಗ್ಗೆ ಏನೂ ಗೊತ್ತಿರಲಿಲ್ಲ ಎಂಬುದು ಮುಂದೊಂದು ದಿನ ಗೊತ್ತಾಯಿತು. ಒಂದು ದಿನ ಎಸ್ ಎಸ್ ಎಲ್ ಸಿ ಪಾಸಾಗಿ ಶಾಲೆ ಬಿಟ್ಟು ಹೋಗಿ ಪಿಯುಸಿ ಸೇರಿದ ಮೇಲೆ ನನ್ನ ಪರವೂರ ಮಿತ್ರನಿಗೊಬ್ಬನಿಗೆ ನಾನು ಓದಿದ ಶಾಲೆಯನ್ನು ತೋರಿಸಲು ನ್ಯಾಷನಲ್ ಹೈಸ್ಕೂಲ್ ಒಳಗೆ ಹೋದಾಗ ಅವರ ಭೇಟಿಯಾಯಿತು. ಅಷ್ಟೊತ್ತಿಗೆ ಪಿಯುಸಿ ತರಗತಿಗಳು ಆರಂಭವಾಗಿ ಕೆಲವು ತಿಂಗಳುಗಳೇ ಕಳೆದಿದ್ದವು. ನನ್ನನ್ನು ನೋಡಿದವರೆ ಅವರ ಮೊದಲ ಪ್ರಶ್ನೆಯೆಂದರೆ ನೀನು ಪಾಸಾದೆಯಾ ಅಥವಾ ಸಪ್ಲಿಮೆಂಟರಿ ಪರೀಖ್ಷೆ ಏನಾದರೂ ತೆಗೆದುಕೊಳ್ಳಲು ಬಂದಿದ್ದೀಯಾ ಎಂದು. ನಾನು ನಮ್ಮತರಗತಿಯ ಉತ್ತಮ ವಿದ್ಯಾರ್ಥಿಗಳಲ್ಲೊಬ್ಬ ಎಂದು ಹೆಸರಾಗಿದ್ದವನು . ರಾಜ್ಯ ಮಟ್ಟದ ರ್ಯಾಂಕ್ ಪಡೆಯದಿದ್ದರೂ ತರಗತಿಗೆ ಒಳ್ಳೆಯ ಅಂಕಗಳನ್ನು ಪಡೆದು ಪಾಸಾದವನು. ಇಂತಹ ಹಿನ್ನೆಲೆಯಿರುವಾಗ ಅವರಿಗೆ ನಾನು ಪಾಸಾಗುತ್ತೇನೆಂಬುದೂ ಅನುಮಾನವಾಗಿ ಕಂಡಿತ್ತು. ಅವರ ತರ್ಕ ಏನೆಂದರೆ ಬರಿ ಉಳಿದೆಲ್ಲರೂ ವಿಜ್ಞಾನ , ಗಣಿತ ಕ್ಕೆ ತಮ್ಮ ಎಲ್ಲಾ ಸಮಯ ಮೀಸಲಿಡುವಾಗ ಕನ್ನಡಕ್ಕೆ , ಸಾಹಿತ್ಯದ ಓದಿಗೇ ಅಷ್ಟೊಂದು ಸಮಯ ನೀಡುತ್ತಿದ್ದವನು ಹೇಗೆ ಪಾಸಾಗಬಲ್ಲ. ಎಂದು . ನಾನು ನಸುನಕ್ಕು ಏನೋ ನನ್ನನ್ನೂ ಪಾಸು ಮಾಡಿಯೇ ಬಿಟ್ಟಿದ್ದಾರೆ ಸಾರ್ ಎಂದು ನುಡಿದು ನನ್ನ ಮಿತ್ರನ ಕಡೆಗೆ ಹೊರಳಿದೆ. ನನ್ನ ಮಿತ್ರನಿಗೋ ಆಶ್ಚರ್ಯ ಈ ಹುಡುಗ ಉತ್ತಮ ವಿದ್ಯಾರ್ಥಿ ಎಂದು ಮೂರು ವರ್ಷ ಪಾಠ ಹೇಳಿದ ಒಬ್ಬ ಅಧ್ಯಾಪಕರಿಗೆ ಗೊತ್ತಾಗಲಿಲ್ಲವೇ ಎಂದು . ಹೀಗೆ ಇಂತಹ ಉತ್ತಮ ಹೈಸ್ಕೂಲಿನಲ್ಲಿಯೂ ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದನ್ನು ಪ್ರೋತ್ಸಾಹಿಸುವ  ಅಧ್ಯಾಪಕರು ಸಿಗಲಿಲ್ಲವೆಂದರೆ ಸಾಹಿತ್ಯದ ಓದಿನ ಅಭಿರುಚಿ ಬೆಳೆದೀತು ಹೇಗೆ ? ಹೀಗಾಗಿಯೇ ನನ್ನ ಜೊತೆಗಾರರು ನನ್ನಂತೆ ಓದಿನ ಹುಚ್ಚು ಅಂತಿರಲಿ ಸ್ವಲ್ಪವಾದರೂ ಸಾಹಿತ್ಯದ ಗಂಧ ಗಾಳಿ ತೀಡಿದವರು ಬಹಳ ಬಹಳ ಕಡಿಮೆಯೇ ?
(ಮುಂದುವರಿಯುವುದು…)

‍ಲೇಖಕರು G

13 September, 2014

4 Comments

  1. ಮಂಜಿನ ಹನಿ

    ‘ಓದು ಜನಮೇಜಯ’ ಎಂಬ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ನಿಮ್ಮ ಇಲ್ಲಿಯವರೆಗಿನ ಬರಹಗಳನ್ನು ಓದಿ ಮುಗಿಸಿದೆ ಸರ್. ಬಹಳ ರಸವತ್ತಾಗಿ ನಿಮ್ಮ ಓದು ಮತ್ತು ಸಾಹಿತ್ಯದೊಂದಿಗಿನ ಸಾಂಗತ್ಯವನ್ನು ಕಟ್ಟಿಕೊಡುತ್ತಿದ್ದೀರಿ. ಪುಸ್ತಕ ಮತ್ತು ನಿಮ್ಮ ನಡುವಿನ ಸಂಬಂಧವನ್ನು ಹರೆಯದ ಹುಡುಗ-ಹುಡುಗಿಯ ನಡುವಿನ ಪ್ರೀತಿಗೆ ಹೋಲಿಸಿದ್ದು ಮಜ ಕೊಡ್ತು. ಮುಂದಿನ ಕಂತುಗಳಿಗೆ ಕಾಯುತ್ತೇನೆ, ಮುಂದುವರೆಸಿ…
    – ಪ್ರಸಾದ್.ಡಿ.ವಿ.
    ಮೈಸೂರು.

  2. -ಎಚ್. ಸುಂದರ ರಾವ್

    ನಾಗರಾಜರು ತಮ್ಮ ಅಧ್ಯಾಪಕರ ಬಗ್ಗೆ ಬರೆದಿದ್ದಾರೆ. ನನಗೂ ನನ್ನ ಒಬ್ಬ ಅಧ್ಯಾಪಕರ ಬಗ್ಗೆ ಬರೆಯಬೇಕು ಅನಿಸುತ್ತಿದೆ.
    ಸುಮಾರು ಐವತ್ತು ವರ್ಷದ ಹಿಂದೆ ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಆಗ ನಮಗೆ ಕನ್ನಡಕ್ಕೆ ಸೀತಾರಾಮ ಭಟ್ಟರು. ಅವರು ಕ್ಲಾಸಿನೊಳಗೆ ಚೆನ್ನಾಗಿಯೇ ಪಾಠ ಮಾಡುತ್ತಿದ್ದರು. ಆದರೆ ನನಗೆ ಹೇಳಬೇಕಾಗಿರುವುದು ಅದನ್ನಲ್ಲ.
    ನಮ್ಮ ಸ್ಕೂಲಿನ ಆಫೀಸಿನ ಒಂದು ಸಣ್ಣ ಭಾಗದಲ್ಲಿ ಸ್ಕೂಲ್ ಹುಡುಗರಿಗಾಗಿ ಒಂದು ಸೊಸೈಟಿ ಇತ್ತು. ಅಲ್ಲಿ ಪೆನ್ನು, ಎಕ್ಸರ್ ಸೈಜು ಇತ್ಯಾದಿ ವಸ್ತುಗಳು ದೊರೆಯುತ್ತಿದ್ದವು. ಅದನ್ನು ನಡೆಸುತ್ತಿದ್ದವರು ನನ್ನ ಈ ಕನ್ನಡ ಅಧ್ಯಾಪಕರು. ಆ ಸೊಸೈಟಿಯಲ್ಲಿ ಎಷ್ಟು ವ್ಯಾಪಾರ ನಡೆಯುತ್ತಿತ್ತೋ, ಅದರಿಂದ ಎಷ್ಟು ಲಾಭ ಬರುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ವರ್ಷದಲ್ಲಿ ಒಂದು ದಿನ ಸೀತಾರಾಮ ಭಟ್ಟರು ನಮಗೆಲ್ಲ ಹೇಳುತ್ತಿದ್ದರು: “ಏಯ್, ನಾಳೆ ಸ್ಕೂಲಿಗೆ ಬರೂ ಹೊತ್ತಿಗೆ ಎಲ್ಲಾರೂ ಲೋಟ ತಟ್ಟೆ ತನ್ನಿ”. ಮರುದಿನ ಸಾಯಂಕಾಲ ಸ್ಕೂಲು ಬಿಡುವ ಹೊತ್ತಿಗೆ ಎಲ್ಲ ಹುಡುಗರಿಗೂ ಉಪ್ಪಿಟ್ಟು ಕಾಫಿಯ ಸಮಾರಾಧನೆ! (ಹುಡುಗರು ಅಂದಾಗ ಹುಡುಗಿಯರೂ ಸೇರಿ ಬಂತು. ನಮ್ಮಲ್ಲಿ “ಹೆಣ್ಣು ಹುಡುಗರು” ಎಂಬ ಪ್ರಯೋಗವೂ ಇದೆ!) ಅದು ಸೊಸೈಟಿಗೆ ಆ ವರ್ಷ ಬಂದ ಲಾಭದ ವಿನಿಯೋಗ! ಹಸಿವಿನ ಹೊತ್ತಿನಲ್ಲಿ ಸಿಕ್ಕುತ್ತಿದ್ದ ಆ ಉಪ್ಪಿಟ್ಟು ಕಾಫಿಯ ರುಚಿಯನ್ನು ಹೇಗೆ ತಾನೇ ಮರೆಯಲಿ?
    ಈಗ ಯೋಚನೆ ಮಾಡಿದರೆ, ಸೀತಾರಾಮ ಭಟ್ಟರಿಗೆ “ಸೊಸೈಟಿಯಿಂದ ಬಂದ ಲಾಭ” ಎಂಬುದು ಕೇವಲ ಒಂದು ನೆಪವಾಗಿತ್ತು, ಕಡಿಮೆ ಬಿದ್ದದ್ದನ್ನು ಕೈಯಿಂದ ಹಾಕುವುದರಲ್ಲಿ ಅವರಿಗೊಂದು ಧನ್ಯತೆ ಇತ್ತು ಅನ್ನಿಸುತ್ತದೆ. ವರ್ಷಕ್ಕೊಮ್ಮೆ ಸ್ಕೂಲಿನ ಹುಡುಗರೆಲ್ಲ ಉಪ್ಪಿಟ್ಟು ಕಾಫಿಯಿಂದ ಪಡೆಯುತ್ತಿದ್ದ ಸಂತೋಷವೇ ಅವರ ಮುಖ್ಯ ಗುರಿಯಾಗಿದ್ದಿರಬೇಕು. ಅವರು ಕಲಿಸದೇ ಕಲಿಸಿದ ಈ ಪಾಠ ಅನುಭವಕ್ಕೇನೋ ಬಂತು, ಆದರೆ ಅರ್ಥವಾಗಲು ವರ್ಷಗಳೇ ಬೇಕಾಯಿತು.
    ಒಂದು ಸಲ ಸ್ಕೂಲಿನಲ್ಲಿ ದೊಡ್ಡ ಒಂದು ಮೀಟಿಂಗ್ ಆಯಿತು. ಆ ಮೀಟಿಂಗಿನಲ್ಲಿ ಸೊಸೈಟಿಯ ಕಾರ್ಯದರ್ಶಿಯನ್ನು ಬದಲಾಯಿಸುವ ಪ್ರಸ್ತಾವ ಬಂತು. ಎಲ್ಲಾ ವಿದ್ಯಾರ್ಥಿಗಳೂ ಅದನ್ನು ಪ್ರಬಲವಾಗಿ ವಿರೋಧಿಸಿದರೆಂದು ನನ್ನ ನೆನಪು. ಮುಂದಿನ ವರ್ಷವೂ ಸೀತಾರಾಮ ಭಟ್ಟರೇ ಕಾರ್ಯದರ್ಶಿಯಾಗಿ ಮುಂದುವರಿದರು.

  3. yamuna

    ಓದಿ ಸಂಗ್ರಹಿಸ್ತೇನೆ.

  4. ತ. ನಂ. ಜ್ಞಾನೇಶ್ವರ

    ಇಂದಿಗೂ ಕೂಡ ಅನೇಕ ಶಿಕ್ಷಕರಿಗೆ ಗಾಂಧೀಜಿ ಬಗ್ಗೆ ಕೂಡ ಶಾಲಾ ಪಠ್ಯಪುಸ್ತಕಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ವಿಚಾರ ಗೊತ್ತಿಲ್ಲ.

Trackbacks/Pingbacks

  1. ಓದು ಜನಮೇಜಯ : ಪುಸ್ತಕಗಳೊಡನೆ ಕಳ್ಳ ಪ್ರಣಯ « ಅವಧಿ / Avadhi - [...] ಓದು ಜನಮೇಜಯ : ಪುಸ್ತಕಗಳೊಡನೆ ಕಳ್ಳ ಪ್ರಣಯ September 14, 2014 (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading