ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಓದು ಜನಮೇಜಯ’ – ಇದು ಓದು ಪುರಾಣ

ಓದಿನ ಪಯಣದಲ್ಲಿ ಪ್ರತಿ ಹೆಜ್ಜೆಯೂ ಆಸಕ್ತಿದಾಯಕವೇ. ತುಂಬಾ ಆಳವಾಗಿ ಹಾಗು ವೈವಿಧ್ಯಮಯವಾಗಿ ಓದಿಕೊಂಡ ಹಾಗು ಅದನ್ನು ಹಾಗೆಯೇ ವಿಶ್ಲೇಷಿಸುವ ಜಿ ಎನ್ ನಾಗರಾಜ್ ಅವರ ಓದಿನ ಪಯಣ ಅವಧಿ ಓದುಗರಿಗಾಗಿ :

***

ಕುಮಾರವ್ಯಾಸನ ಜೊತೆಗೇ ಕೋಕೊಕ್ಕನ ರತಿ ರಹಸ್ಯವೇ

ನಿನ್ನೆ ಶುರುವಾದ ಪುಸ್ತಕ ಪಟ್ಟಿಯ ಆಟದಲ್ಲಿ ಅದರಲ್ಲಿ ಪಾಲಿಸುತ್ತಿದ್ದ ಸಾಮಾನ್ಯ ನಿಯಮಗಳನ್ನು-ಟಾಪ್ ಟೆನ್ ರ್ಯಾಂಕಿಂಗ್ ರೀತಿಯ ಮಾರುಕಟ್ಟೆ ಮನಸ್ಸನ್ನು ಅನುಸರಿಸಲಾಗದೇ ನನ್ನ ಓದಿನ ಚರಿತ್ರೆಯೊಳ ಹೊಕ್ಕ ಪರಿಣಾಮವನ್ನು ನೀವೆಲ್ಲಾ ನೋಡಿದ್ದೀರಿ. ಮೂರು ಬಾರಿ ಎಡಿಟ್ ಮಾಡಿದೆ ಮತ್ತೆ ಇನ್ನು ಎಷ್ಟು ಬಾರಿ ಎಡಿಟ್ ಮಾಡಬೇಕಾಗಿ ಬರುತ್ತದೆಯೋ ತಿಳಿಯದು. ನೀವು ಯಾವ ಅವೃತ್ತಿ ನೋಡಿದ್ದೀರೋ . ನೋಡಿದ , ಮೆಚ್ಚಿಗೆ ವ್ಯಕ್ತಪಡಿಸಿದ ಎಲ್ಲರಿಗೂ ವಂದನೆಗಳು. ಇದು ಪಟ್ಟಿ ಮಾಡಿದರೆ, ಕೊಕ್ ನೀಡಿದರೆ ನಿಲ್ಲುವ ಆಟ. ಆದರೆ ನನ್ನಲ್ಲಿ ಅದು ನಿಂತಿಲ್ಲ. ನಿಲ್ಲಿಸಲಾಗುತ್ತಿಲ್ಲ.
ಈ ಆಟ ನನಗೆ ನನ್ನ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು , ಅದಕ್ಕೆ ನೆರವಾದವರನ್ನು ನೆನೆಯುವ , ಶೋಧಿಸುವ ಅನುಸಂಧಾನವಾಗಿ ಕಾಣುತ್ತಿದೆ. ಒಬ್ಬನ ವ್ಯಕ್ತಿತ್ವದ ಒಳಗನ್ನು ರೂಪಿಸುವ ಹೊರಗು ಅವುಗಳ ನಡುವಣ ಸಾವಯವ ಸಂಬಂಧ ಇವುಗಳ ಶೋಧಕ್ಕಾಗಿ ನನ್ನ ಮನಸ್ಸು ತುಡಿಯುತ್ತಿದೆ. ” ಏಕೆ ಹೀಗಾಯ್ತೋ ನಾನು ಕಾಣೆನು ” ಎನ್ನುವ ಮಿಸ್ಟರಿಗೆ ಬದಲಾಗಿ ಅದನ್ನು ಕಂಡುಕೊಳ್ಳುವ ಕಾತರ , ನನ್ನ ಜೊತೆಯವರನೇಕರಿಗೆ ಇಂತಹ ಮಣ್ಣು, ನೀರು, ಬೆಳಕು, ಗಾಳಿ ದೊರೆಯಲಿಲ್ಲವೇಕೆ ಎಂಬ ಕೊರಗೂ ಕೂಡ ನನಗೆ ಈ ಶೋಧದಲ್ಲಿ ತೊಡಗಲು ಒತ್ತಾಯಿಸಿದೆ. ನನ್ನಂತಹ ಅನೇಕರಿಗೆ ಅವರ ಸ್ವಂತ ಎಷ್ಟು ಸ್ವಂತದ್ದು ಎಂಬ ನಿಜವನ್ನರಸುವರೆ ಇದು ಅನುವಾಗಬಹುದೇ ಎಂಬ ಆಶಯವೂ ಈ ಶೋಧದಲ್ಲಡಗಿದೆ.
ಮೊದಲ ಹೆಜ್ಜೆ
ಒಂಬತ್ತನೆ ವಯಸ್ಸು . ನಾನು ಐದನೇ ತರಗತಿಯಲ್ಲಿದ್ದ ಕಾಲ .1959 ಇರಬೇಕು. ಒಂದು ವಠಾರದ ಮನೆಯಲ್ಲಿದ್ದೆವು. ಆಗ ನಮ್ಮಎದುರಿನ ಮನೆಯಲ್ಲಿದ್ದ ಕುಟುಂಬ ಮಿತ್ರರ ಮನೆಗೆ ಪ್ರಜಾವಾಣಿ ಪತ್ರಿಕೆ ಬರುತ್ತಿತ್ತು. .ಆ ನಮ್ಮ ತಂದೆಯವರ ಮಿತ್ರರು ಹಾಗೂ ನಮ್ಮ ತಂದೆ ಅದನ್ನು ಆಸ್ಥೆಯಿಂದ ಓದುತ್ತಿದ್ದರು. ಆ ವೇಳೆಗೆ ಅದರಲ್ಲಿರುವುದನ್ನು ಓದುವಷ್ಟು ಶಕ್ತಿ ಪಡೆದಿದ್ದ ನಾನು ಅದನ್ನು ಗಮನಿಸಿದೆ. ಅದನ್ನು ದಿನವೂ ಓದಲಾರಂಭಿಸಿದೆ. ಶಾಲೆಯ ಪಠ್ಯವನ್ನು ಬಿಟ್ಟು ಇದೇ ನನ್ನ ಮೊದಲ ಓದು. 5ನೆಯ ತರಗತಿಯ ವೇಳೆಗಾಗಲೇ ನಾನು ನಾಲ್ಕು ಬೇರೇ ಗ್ರಾಮಗಳ ನಾಲ್ಕುಶಾಲೆಯಲ್ಲಿ ಓದಿ ಐದನೆಯ ಶಾಲೆಗೆ ಸೇರಿದ್ದೆ. ಆ ಎಲ್ಲ ಶಾಲೆಗಳಲ್ಲಿ ನನ್ನ ಜೊತೆ ಓದುತ್ತಿದ್ದವರಿಗೆ ೋದು ಇನ್ನೂ ದಕ್ಕಿರಲಿಲ್ಲ. ಇದಕ್ಕೊಂದು ಫ್ಲ್ಯಾಶ್ ಬ್ಯಾಕ್ . ” ನಾನು ಹಸಿವಾಗುತ್ತಿದೆ. ಊಟ ಮಾಡಬೇಕು ” ಎಂದು ಅಳುತ್ತಾ ನನ್ನ ಅಮ್ಮನಲ್ಲಿ ಕೇಳುತ್ತಿದ್ದೇನೆ . ಅಡಿಗೆ ಸಿದ್ಧವಾಗಿದೆ. ಅದರ ವಾಸನೆ ಮೂಗಿಗೆ ಬಡಿಯುತ್ತಿದೆ.ಆದರೆ ನನ್ನ ತಾಯಿ ಊಟ ಬಡಿಸಲೊಲ್ಲಳು.ಅದು ನನ್ನ ತಂದೆಯ ಕಟ್ಟಪ್ಪಣೆ. ನನ್ನ ತಂದೆ ಅಲ್ಲಿಯೇ ಇದ್ದವರು ” ನೋಡು ನಿನ್ನ ಸ್ಲೇಟು ಕೂಡ ಹಸಿದಿದೆ . ಅದರ ಹೊಟ್ಟೆ ತುಂಬಿಸು . ಆ ಮೇಲೆ ನಿನ್ನ ಹೊಟ್ಟೆ ಕೂಡ ತುಂಬುತ್ತದೆ. ಎನ್ನುತ್ತಾರೆ. ನಾನು ಅಳುತ್ತಾ ಸ್ಲೇಟಿನ ಕೊನೆಯವರೆಗೆ ಕಾಪಿ ಬರೆಯಲಾರಂಭಿಸುತ್ತೇನೆ . ಸ್ಲೇಟು ತಂಬಿದ ಮೇಲೆ ಎಲ್ಲರೂ ಜೊತೆ ಕುಳಿತು ಊಟ ಮಾಡುತ್ತೇವೆ.ಈ ಒತ್ತಾಯ ನನ್ನ ಜೊತೆಯ ಸಹಪಾಠಿಗಳಿಗೆ ದಕ್ಕಿತ್ತೇ ಇದು ಇಂದು ನನ್ನನ್ನು ಕಾಡುತ್ತಿದೆ. ನನ್ನ ತಂದ ಆಗಿನ ಕಾಲದ ಇಂಗ್ಲಿಷ್ ಎಲ್ ಎಸ್ ಓದಿ ಸರ್ಕಾರದ ಒಂದು ಕಟ್ಟಕಡೆಯ ಹುದ್ದೆಯಾದ ಕೃಷಿ ಇಲಾಖೆಯ ಫೀಲ್ಡ್ ಮನ್ ಆಗಿದ್ದವರು.ಒಬ್ಬರು ಆಗಿನ ಕಾಲಕ್ಕೆ ಸ್ವಲ್ಪ ವಿದ್ಯಾಭ್ಯಾಸ ಇದ್ದ ಒಬ್ಬ ರೈತನ ಮಗ . ನನ್ನ ತಾಯಿ ಏಳನೇ ತರಗತಿ ಓದಿದ್ದವರು. ಒಬ್ಬ ಪ್ರಾಥಮಿಕ ಶಾಲೆಯ ಮೇಷ್ಟರ ಮಗಳು. ಹೀಗೆ ನನ್ನ ತಂದೆ , ತಾಯಿ ಶಾಲೆಯ ಮೆಟ್ಟಲು ತುಳಿದಿದ್ದವರು ಮತ್ತು ತಂದೆ ಸರ್ಕಾರೀ ನೌಕರ ಎಂಬುದು ನನ್ನನ್ನು 5 ನೆಯ ತರಗತಿಯ ವೇಳೆಗೆ ಪತ್ರಿಕೆ ಓದಬಲ್ಲ ಅಕ್ಷರವಂತನನ್ನಾಗಿ ಮಾಡಿತ್ತು. ನನ್ನ ಸಹಪಾಠಿಗಳಿಗಿಂತ ಹಲವು ಹೆಜ್ಜೆ ಮುಂದಾಗಿರುವಂತೆ ಮಾಡಿತ್ತು.

ಹೀಗೆ ನಾನು ಪೇಪರ್ ಓದಲು ಪ್ರಯತ್ನಿಸುತ್ತಿರುವಾಗ ನನ್ನ ತಂದೆ ಒಂದು ದಿನ ಒಂದು ನಾಲ್ಕು ನೂರು ಪುಟದ ಒಂದು ನೋಟ್ ಬುಕ್ ತಂದುಕೊಟ್ಟರು. ಆ ಭಾರೀ ಗಾತ್ರದ ಪುಸ್ತಕವನ್ನು ನೋಡಿ ಒಂದು ಕಡೆ ಇಂತಹದು ನನ್ನ ಬಳಿ ಮಾತ್ರ ಇದೆ ಎಂದು ಖುಷಿಯಾದರೂ.ಏನೋ ಗ್ರಹಚಾರ ಬಂತಲ್ಲಪ್ಪ ಇದರ ಹೊಟ್ಟೆ ತಂಬಿಸಿದರೆ ಮಾತ್ರ ಊಟ ಎಂದು ಹೇಳುವರೋ ಎಂಬ ಭಯ ಕಾಡತೊಡಗಿತು. ನಮ್ಮ ತಂದೆ ಆ ಪುಸ್ತಕ ಕೊಟ್ಟ ಉದ್ದೇಶವನ್ನು ಹೇಳಿದಾಗ ಐ ಇಷ್ಟೇ ತಾನೆ ಎನಿಸಿತು. ಅವರು ಹೇಳಿದ್ದು : ನೀನು ಪೇಪರ್ ಓದಿದಾಗ ಅದರಲ್ಲಿ ವಿವಿಧ ರಾಜ್ಯಗಳ ರಾಜಧಾನಿ, ಮುಖ್ಯ ಮಂತ್ರಿ , ಬೇರೇ ಬೇರೇ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಇವುಗಳನ್ನು ಇದರಲ್ಲಿ ಬರೆದಿಡುತ್ತಾ ಹೋಗು . ನಾನು ಅನೇಕ ದಿನಗಳ ಕಾಲ ಅದನ್ನು ತುಂಬಿದೆ. ನಾನು ದಿನವೂ ತಪ್ಪದೆ ಪೇಪರ್ ಓದಲು ಅದು ಒಂದು ಕಾರಣವನ್ನೊದಗಿಸಿತ್ತು .
ಮುಂದೊಂದು ದಿನ ನಮ್ಮ ಮನೆಗೆ ಒಂದು ದೊಡ್ಡ ಪುಸ್ತಕ ಬಂದಿತು. ಕಷ್ಟ ಪಟ್ಟು ಅದರ ಹೆಸರನ್ನು ಓದಿದೆ. ಕರ್ಣಾಟ ಭಾರತ ಕಥಾ ಮಂಜರಿ . ಎರಡು ರೂಪಾಯಿಗೆ ಕೆಂಗಲ್ ಹನುಮಂತಯ್ಯನವರ ಸರ್ಕಾರ ಪ್ರಕಟಿಸಿದ್ದ ಪುಸ್ತಕ ಅದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಕೆ.ವಿ.ಪುಟ್ಟಪ್ಪನವರ ಸಂಪಾದಕತ್ವದಲ್ಲಿ ಹೊರಬಂದ ಕುಮಾರವ್ಯಾಸನ ಭಾರತ. ಅದುಬಂದ ಕೆಲ ತಿಂಗಳ ನಂತರ ನಮ್ಮ ಪರಿಚಯದವರೇ ಆದ ಒಬ್ಬ ಕುರುಡರನ್ನು ನಮ್ಮ ತಂದೆ ಮನೆಗೆ ಕರೆತಂದರು.ಅವರ ಹೆಸರು ರಾಮಣ್ಣ. ನಮಗೆಲ್ಲಾ ಪರಿಚಿತರೇ.
ಅವರು ನಮ್ಮ ತಂದೆಯ ಊರಿನವರೇ ಆದ ಬ್ರಾಹ್ಮಣರು. ಚೆನ್ನಾಗಿ ಓದಿಕೊಂಡಿದ್ದವರು. ವಯಸ್ಸಿಗೆ ಬಂದ ಮೇಲೆ ಸಿಡುಬಿ ಬೇಗೆಯಲ್ಲಿ ಅವರ ಎರಡೂ ಕಣ್ಣುಗಳೂ ಬೆಂದು ಹೋಗಿದ್ದವು. ಮುಖದಲ್ಲಿ ಅಲ್ಲಲ್ಲಿ ಸಿಡುಬಿನ ಕಲೆಗಳು. ಅವರನ್ನು ಮನೆಯಲ್ಲಿ ಒಂದು ಮನೆಯ ಮೇಲೆ ಕುಳ್ಳಿರಿಸಿ ಮಹಾಭಾರತದ ಪುಸ್ತಕ ತಂದು ಪೂಜೆ ಮಾಡಿದರು. ನಂತರ ನಮ್ಮ ತಂದೆ ಓದುವುದು . ರಾಮಣ್ಣನವರು ಅರ್ಥ ಹೇಳುವುದು ಹೀಗೆ ಸಾಗಿತು. ಇದು ಹಲವು ತಿಂಗಳುಗಳ ಕಾಲ ಸಾಗಿತು. ಕೇಳುವವರು ಬೇರೆ ಯಾರೂ ಅಲ್ಲ ನಮ್ಮ ತಾಯಿ, ಏಳನೆಯ ತರಗತಿಯಲ್ಲಿ ಓದುತ್ತಿದ್ದ ನಾನು , ಆ ಸಮಯಕ್ಕೆ ಹುಟ್ಟಿದ್ದ ನನ್ನ ತಂಗಿ ಸುಗುಣ , ಇನ್ನೂ ಎಳೆಯವನಾದ ತಮ್ಮ ಸ್ವಾಮಿ ಅಥವಾ ಎಸ್ ಎಲ್ ಎನ್ .
ಭಾರತದ ಈ ಓದು ನನ್ನ ಓದಿನ ತುಡಿತವನ್ನು ಹೆಚ್ಚಿಸಿತು. ಅದರ ಸುಂದರವಾದ ತೋರಣನಾಂದಿ ಎಂಬ ಹೆಸರಿನ ಪ್ರಸ್ತಾವನೆಯನ್ನು ಎಷ್ಟು ಬಾರಿ ಓದಿದ್ದೇನೋ ಲೆಕ್ಕವಿಲ್ಲ. ಆದರೆ ನಮ್ಮ ಮನೆಯಲ್ಲಿ ಕಾಣುತ್ತಿದ್ದುದು ಅದೊಂದೇ ಪುಸ್ತಕ. ಸರಿ ಒಮ್ಮೆ ಮನೆಯನ್ನೆಲ್ಲಾ ಹುಡುಕಾಡುತ್ತಿದ್ದಾಗ ಮತ್ತೆ ಎರಡು ಪುಸ್ತಕಗಳು ಕಣ್ಣಿಗೆ ಬಿದ್ದವು. ಅವು ನಮ್ಮ ಕೈಗೆ ಸಿಗದ ಎತ್ತರದ ಜಾಗದಲ್ಲಿ ಒಂದು ಹಳೆಯ ಕಬ್ಬಿಣದ ತಗಡಿನ ಟ್ರಂಕಿನಲ್ಲಿ ಮುಚ್ಚಿಡಲಾಗಿತ್ತು. ಅದನ್ನು ತೆಗೆದುಕೊಂಡವನೆ ಆ ಪುಸ್ತಕಗಳು ಯಾವೂ ಎಂದೂ ನೋಡದೆ ನನ್ನ ಶಾಲೆಯ ಚೀಲದಲ್ಲಿ ತುರುಕಿ ಶಾಲೆಗೆ ಹೋದೆ.ಅಲ್ಲಿ ಬಿಡುವಿನ ವೇಳೆಯಲ್ಲಿ ತೆರೆದು ನೋಡುತ್ತೇನೆ ಅದರಲ್ಲಿ ಮೊದಲು ಕಣ್ಣಿಗೆ ಬಿದ್ದದ್ದೇ ಏನೇನೋ ಚಿತ್ರಗಳು. ಗಂಡು ಹೆಣ್ಣು ಬತ್ತಲೆಯಾಗಿ ವಿವಿಧ ಭಂಗಿಗಳಲ್ಲಿ ತಬ್ಬಿಕೊಂಡಿರುವ ರೇಖಾ ಚಿತ್ರಗಳು . ನೋಡಿ ಗಾಬರಿಯಾಗಿ ಬೇರೆ ಯಾರಾದರೂ ನೋಡಿ ಬಿಟ್ಟಾರೆಂದು ತಕ್ಷಣ ಮುಚ್ಚಿದೆ. ಆ ವೇಳೆಗಾಗಲೇ ಕೆಲ ಸ್ನೇಹಿತರ ಕಣ್ಣಿಗೆ ಬಿದ್ದೇ ಬಿಟ್ಟಿತು. ಅವರೆಲ್ಲಾ ಅದನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ನಾನು ಏನೋ ಕಥೆ ಪುಸ್ತಕ ಎಂದು ತಂದೆ ಇದೇನೋ ಬೇರೆ ಎಂದು ಹೇಳುತ್ತಾ ಅವರ ಕೈಗೆ ಸಿಕ್ಕದಂತೆ ಬಿದ್ದಂಬೀಳ ಓಡಿ ಮನೆಗೆ ಬಂದೆ. ನಮ್ಮ ತಾಯಿಗೆ ಕಾಣದಂತೆ ಮತ್ತೆ ಆ ಟ್ರಂಕಿಗೆ ಸೇರಿಸಿದೆ. ಆ ಪುಸ್ತಕದ ಹೆಸರು ಕೋಕೋಕ್ಕನ ರತಿ ರಹಸ್ಯ . ಮತ್ತೊಂದು ಪುಸ್ತಕ ಜಲಶಿಲ್ಪಿ ಹಲ್ಲಿ ಶಕುನ. ಕುಮಾರವ್ಯಾಸನ ಮಹಾಭಾರತ ಕಾವ್ಯದ ನಂತರ ನಾನು ಓದಿದ ಪುಸ್ತಕಗಳೆಂದರೆ ಇವೆರಡು. ಆ ಸಮಯದಲ್ಲಿ ಮತ್ತೆ ಯಾವ ಪುಸ್ತಕಗಳೂ ನನ್ನ ಬಳಿ ಸುಳಿಯಲಿಲ್ಲ.
(ಮತ್ತೆ ನಾಳೆಗೆ…)

‍ಲೇಖಕರು G

7 September, 2014

3 Comments

  1. lalithasiddabasavaiah

    ಆಹ್ಹಹ್ಹಾ , ನಾಗರಾಜ್ ಅವರೆ ಬಹುಶಹ ಹಳೆಮೈಸೂರಿನ ಕಡೆಯವರಾದ, ಐವತ್ತನೆ ದಶಕದ ಸುತ್ತಮುತ್ತ ಹುಟ್ಟಿದವರಾದ, ವಿದ್ಯಾವಂತ ಅಪ್ಪಾಮ್ಮನ ಮಕ್ಕಳಾದ ಮತ್ತು ಸರ್ಕಾರಿ ನೌಕರಿಯಲ್ಲಿದ್ದವರ ಮಕ್ಕಳಾದವರಿಗೆಲ್ಲ ಇದೊಂದು ಕಾಮನ್ ಫ್ಯಾಕ್ಟರ್ ಅಂತ ಕಾಣುತ್ತೆ, ಒಂದು ಪ್ರಜಾವಾಣಿಯ ಓದು ಮತ್ತು ಕೆಂಗಲ್ ಅವರು ಅದೆಷ್ಟು ದೂರಾಲೋಚನೆಯಿಂದ ತಂದ ಎರಡು ರೂಪಾಯಿನ ಗದುಗಿನ ಭಾರತದ ಓದು. ನಮ್ಮನೆಯಲ್ಲೂ ಇದೇ.ನಮ್ಮಪ್ಪನೆ ಓದುತ್ತಿದ್ದರು. ಹಲ್ಲಿಶಕುನ- ಈಗಲೂ ಅದೇ ಪುಸ್ತಕವನ್ನು ಜೋಪಾನವಾಗಿಟ್ಟುಕೊಂಡಿದ್ದೇನೆ. ಆದರೆ ನಮ್ಮಮ್ಮ್ಮನ ಭಾಷೆಯಲ್ಲಿ ‘ಏಡಿ ಹೆಚ್ಚಿದ ಕೆರೆ ಹೆಣ್ಣು ಹೆಚ್ಚಿದ ಮನೆ ಉಳಿಯೋದುಂಟಾ’ಎಂದು ಆಗಾಗ್ಗೆ ನಿಡಿಸುಯ್ಯುಗಳನ್ನು ಕೇಳುತ್ತಿದ್ದ ಹೆಣ್ಣುಮಕ್ಕಳೆ ಜಾಸ್ತಿಯಿದ್ದ ಮನೆಯೆಂಬ ಕಾರಣದಿಂದಲೋ ಏನೋ ಕ್ಕೊಕ್ಕೊಕ್ಕೂಕ್ಕೊ ಇರಲಿಲ್ಲ.ಇದ್ದಿದ್ದರೆ ಹಲ್ಲಿಶಕುನವನ್ನೆ ಬಾಯಾರ್ಟುವಾಗುವ ಹಾಗೆ ಓದಿದ್ದ ನಾನು ಇದನ್ನೂ ನಿಮ್ಮ ಹಾಗೆ ಸ್ಕೂಲಿಗೆ ತಗೊಂಡು ಹೋಗುತ್ತಿದ್ದೆನೋ ಏನೋ ಅಂದನ್ನಿಸಿ ನಗು ಬಂತು. ನಮ್ಮದೋ ಹೆಣ್ಣುಮಕ್ಕಳಶಾಲೆ, ಹೆಚ್ಚಿನವರು ಹೆಂಗಸು ಟೀಚರ್ ಗಳು. ಮಹಾ ಕಠಿಣರು,ಶಿಸ್ತಿನ ಮಹಿಳೆಯರು, ನಮ್ಮ ಏಳಿಗೆಯಲ್ಲಿ ಆಸ್ಥೆಯುಳ್ಳವರು. ಒಂದು ವೇಳೆ ಹಾಗಾಗಿದ್ದರೆ ಅಂತ ನೆನಸಿಕೊಂಡೇ ನನಗೆ ನಗು ಬಂತು.

  2. ಲಿಂಗರಾಜು ಬಿ.ಎಸ್.

    interesting…

  3. ಕೃಷ್ಣೇಗೌಡ ಟಿ.ಎಲ್.

    ಆಸಕ್ತದಾಯಕವಾಗಿದೆ. ಇದು ಮುಂದುವರೆಯಲಿ,ಓದಿನ ಆಸಕ್ತಿ ಬೆಳೆಸಿಕೊಳ್ಳಬೇಕೆನ್ನುವವರಿಗೂ ಅನುಕೂಲವಾಗಬಹುದು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading