ಸಿದ್ದರಾಮ ತಳವಾರ ಕಥಾ ಸಂಕಲನ ‘ಕೇರಿ ಹುಡುಗನ ಕತೆಗಳು’
ಈ ಕೃತಿಯ ಕುರಿತ ಸುನಂದಾ ಕಡಮೆ ಅವರ ಅನಿಸಿಕೆ ಇಲ್ಲಿದೆ.
-ಸುನಂದಾ ಕಡಮೆ
ಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ ‘ಕೇರಿಯ ಹುಡುಗನ ಕತೆಗಳ’ ಲೋಕವು ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡದ್ದು. ಕತೆ ಹೇಳುವ ಸೂಕ್ಷ್ಮವಾದ ಭಾಷೆ ಅವರಿಗೆ ಒಲಿದಿರುವುದು ಕತೆಗಳ ಒಡಲಲ್ಲಿ ಹುದುಗಿರುವ ಮಾನವೀಯತೆಯನ್ನು ಪ್ರತಿಪಾದಿಸುವ ಹಂತದಲ್ಲೇ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿಯ ಕತೆಗಳು ಸಮಾಜದ ಅನೇಕ ಅಂತರತಮವನ್ನು ಬೆರಳಿಟ್ಟು ಗುರುತಿಸುತ್ತಲೇ ಅವು ಇಡಿಯಾದ ಕೇರಿಯ ಸಮುದಾಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತೆರೆದಿಡುತ್ತ ಸಾಗುತ್ತವೆ. ನಮ್ಮ ಕಿತ್ತೂರು ಕರ್ನಾಟಕದ ಕನ್ನಡದ ಕಂಪನ್ನು ವಿಸ್ತೃತವಾಗಿ ಬಳಸಿಕೊಂಡಿದ್ದಾರೆ ಸಿದ್ದರಾಮ,
ಒಂದು ಸುದೀರ್ಘ ಕಾದಂಬರಿಗೆ ಒದಗಿ ಬರುವ ವಸ್ತು ವಿಷಯವನ್ನು ಒಳಗೊಂಡ ‘ಕತೆಯಾದಳು ಇಂದಿರೆ’ ಯಂತಹ ಕತೆಗಳು ಬರಗಾಲದ ದುರ್ದರ ದಿನಗಳು ಗ್ರಾಮೀಣ ಭಾಗದ ಜನರ ಅಸಹಾಯಕತೆಯನ್ನು ಬಿಚ್ಚಿಡುತ್ತವೆ. ಸಾವು ನೋವುಗಳು ಇಲ್ಲಿಯ ಮನುಷ್ಯ ಸಂಬಂಧಗಳ ತೀವ್ರತೆಯನ್ನು ಹೆಚ್ಚಿಸಿವೆ. ಅನಾಥ ಶಿಶುವನ್ನು ಸಂಬಂಧವೇ ಇಲ್ಲದ ಜೀವವೊಂದು ಜೋಪಾನ ಮಾಡುವ ‘ಪಡ್ಡಲಗಿಯೊಳಗಿನ ಪೆನ್ನು’ ಎಲ್ಲ ಕತೆಗಳಿಗಿಂತಲೂ ಹೆಚ್ಚು ಗಾಢವಾಗಿ ನಮ್ಮನ್ನು ತಟ್ಟುತ್ತದೆ. ಅವ್ವ ಭಾಗೀರತಿ ಮಗಳು ಸಾವಂತ್ರಿಗೆ ‘ಈ ಪಡ್ಡಲಗಿ ಸಾವಾಸ ಸಾಕು, ನನ್ನ ಕೂಡೆ ಇದನ್ನು ಮಣ್ಣು ಮಾಡಿಬಿಡು’ ಅನ್ನುವ ಮಾತು ಬಂಧನದಿಂದ ಹೊರಬರುವ ಕ್ಷಿತಿಜದಂತೆ ಇಡೀ ಸಮುದಾಯಕ್ಕೆ ದಕ್ಕುತ್ತದೆ. ಪಡ್ಡಲಗಿಯೊಳಗಿಟ್ಟ ಪೆನ್ನು ಹೆಣ್ಣುಮಕ್ಕಳ ಶಿಕ್ಷಣದ ಸಂಕೇತವಾಗಿ ಬಿಂಬಿತವಾಗಿದೆ.
ಅಪ್ಪನ ಜೊತೆ ಕೆಲಸಕ್ಕೆ ಹೋದ ಮಗಳು ಪಾರ್ವತಿ ದುರುಳನ ಮೋಸಕ್ಕೆ ಬಲಿಯಾಗುವ ‘ತಲಾಖ್’ ಕತೆ ಹೆಣ್ಣಿನ ಅನುದಿನದ ಬವಣೆಯನ್ನು ಆತ್ಯಂತಿಕವಾಗಿ ತೋರಲು ಹವಣಿಸುತ್ತಿದೆ. ಪಾರ್ವತಿಯನ್ನು ಇಮಾಮ ಸಾಬಿಗೆ ಮದುವೆ ಮಾಡಿ ಕೊಡಲು ಕೇರಿಯ ಜನ ಒಪ್ಪದೇ. ತಲಾಖ್ ಅವಳನ್ನು ನರಕದಿಂದ ಹೊರತಂದು ಸುರಕ್ಷಿತ ಬಾಳಿಗೆ ನಾಂದಿಹಾಡಿದಂತಿದೆ. ಮಾದೇಗೌಡನ ಜಗುಲಿಯಲ್ಲಿ ಬಿಸಾಕಿ ಬಂದ ಮಾಲಿಂಗನ ಹೆಣ ಪುನಃ ಅವನದೇ ದನದ ಹಕ್ಕೆ ಸೇರುವುದು ‘ಮಾಲಿಂಗ’ ಕತೆಯ ಪರವಶಗೊಳ್ಳುವ ಗುಣವನ್ನು ಎತ್ತಿ ಹಿಡಿದಿದೆ.

ರಾಜಕಾರಣಿಗಳನ್ನೆಲ್ಲ ಒಳಗೆ ಹಾಕಿಕೊಂಡು ದೇವಸ್ಥಾನದ ಆಗುಹೋಗುಗಳನ್ನು ಶ್ರೀಮಂತಗೊಳಿಸಿದ ಶಾಮರಾಯರ ವರ್ಚಸ್ಸು ಇಲ್ಲಿ ಅವರಿಗೆ ಬದುಕುವ ಯಾವ ವಿಶ್ವಾಸವನ್ನೂ ತಂದುಕೊಡಲಿಲ್ಲ ಎಂಬುದು ‘ಅಗ್ರಹಾರದ ಹೂ’ ಕತೆಯಲ್ಲಿ ಸ್ಪಷ್ಟವಾಗುತ್ತದೆ. ೨೦ ರ ಹರೆಯದ ಹೂಹುಡುಗಿ ಅಗ್ರಹಾರದ ಐವತ್ತರ ಹರೆಯದ ಅರ್ಚಕ ಶಾಮರಾಯರೂ ಕೇವಲ ಗಂಡು ಮತ್ತು ಹೆಣ್ಣು ಎಂಬ ಕಾರಣಕ್ಕೆ ಪರಸ್ಪರ ಒಂದಾಗುವ ನಿರ್ಧಾರವನ್ನು ಒಪ್ಪದ ಈ ವ್ಯವಸ್ಥೆಯು ಒಂದು ಜೀವವನ್ನು ಬಲಿಪಡೆಯುವ ಮಟ್ಟಕ್ಕೆ ಹೋಗುವ ಸಂದರ್ಭವು ಕತೆಯ ವಿಸ್ತಾರವನ್ನು ಇಂಟೆನ್ಸ್ ಆಗಿ ಹಿಡಿದಿಟ್ಟಿದೆ.
ಬಣ್ಣ ಬಣ್ಣದ ಹರಕು ಸೀರೆಗಳ ಚಿತ್ತಾರವನ್ನು ಹಾಸಿಹೊದ್ದ ಕಲರ್ ಫುಲ್ ಕೌದಿ ಎಂಬ ರೂಪಕವು ‘ಪರಸಂಗದ ಯಮನ್ಯಾ’ ಕತೆಯ ಶಂಕರನ ಬದುಕಿನ ಅವಸ್ಥೆಯನ್ನು ಅಂತಃಕರಣದಿಂದ ಹಿಡಿದಿಡುತ್ತದೆ. ಭೋರ್ಗರೆವ ಮಳೆಗೆ ಶಾಪ ಹಾಕುವ ಗುಡಿಸಲಿನ ಜನರ ಸಂಕಷ್ಟಗಳು ಕಣ್ಣಮುಂದೆ ನಡೆದಂತೆ ಭಾಸವಾಗುತ್ತವೆ. ಊರಗೌಡರನ್ನು ಕಂಡ ಶಂಕರ ತನ್ನ ತಲೆಯ ಮೇಲಿದ್ದ ಟವಲನ್ನು ಕೈಯಲ್ಲಿ ಹಿಡಿದು ಮಾತಿಗಾರಂಭಿಸುವುದು ಅವನ ದಯನೀಯ ಸ್ಥಿತಿಯನ್ನು ನಿರಾಯಾಸ ಹೇಳುವಂತಿದೆ. ‘ಇಷ್ಟ ದಿನಾ ನೀ ನನಗ ಹೇಂತಿ ಆಗಿದ್ದೀ, ಇನ್ ಮ್ಯಾಗ ನೀ ನನಗ ಅವ್ವ ಆಗೀದಿ. ನನ ಹಲ್ಕಟ ಕೆಲಸಕ ಕ್ಷಮಾ ಮಾಡು’ ಅನ್ನುವ ಗೌಡನ ಮಾತು, ಬದಲಾದ ಸಂದರ್ಭದ ಬದಲಾದ ಗುಣ ಸ್ವಭಾವಗಳು ಎಂಥ ಸಹನಶೀಲತೆಯನ್ನು ಕಲಿಸಿಕೊಡುತ್ತವೆ ಎಂಬುದಕ್ಕೆ ಸಾಕ್ಷಿ, ಆದರೆ ಅಷ್ಟು ದಿನಗಳ ಕಾಲ ನೀಲವ್ವ ಅನುಭವಿಸಿದ ದುಃಖ ಸಂಕಟಗಳಿಗೆ ಯಾರು ಹೊಣೆ ಎಂಬ ಪ್ರಶ್ನೆ ನಮ್ಮನ್ನು ಎಚ್ಚರಿಸುವಂತಿದೆ.
ಅಪ್ಪ ಕೊಟ್ಟ ಒಂಟಿತನದ ಉಡುಗೊರೆ ಹೊತ್ತು ಬದುಕಿದ ಲತಾ ತನ್ನ ಅವ್ವನ ಜೊತೆಗೆ ಹಂಚಿಕೊಳ್ಳುವ ಎಷ್ಟೋ ವಿಷಯಗಳನ್ನು ಮನಸ್ಸಿನಲ್ಲಿಟ್ಟೇ ಜೀವಿಸುವ ಸಂದಿಗ್ದಗಳು ‘ಲಯ ತಪ್ಪಿದ ರಾಗ’ ಕತೆಯಲ್ಲಿ ಸಂಯಮದ ವಿಶಿಷ್ಟ ಅನಾವರಣದಂತೆ ನಮ್ಮನ್ನು ಕಾಡುತ್ತದೆ. ‘ಎಲೆಕ್ಷನ್’ ಕತೆಯಂತೂ ಇಂದಿನ ನಮ್ಮ ರಾಜಕೀಯ ವಾಸ್ತವಕ್ಕೆ ಹಿಡಿದ ಕನ್ನಡಿ.
ನಿರೂಪಣೆಯ ಹಂತದಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ವಿಧಾನವನ್ನು ಬಳಸುವ ಸೃಜನಶೀಲ ಅಂಶವನ್ನು ಹೆಚ್ಚಿಸಿಕೊಂಡರೆ ಇನ್ನೂ ಒಳ್ಳೊಳ್ಳೆಯ ಕಥೆಗಳು ಸಿದ್ದರಾಮರ ಕಥಾ ಬತ್ತಳಿಕೆಯಲ್ಲಿವೆ ಎಂಬ ಆತ್ಮವಿಶ್ವಾಸವನ್ನು ಈ ಮೊದಲ ಕಥಾ ಸಂಕಲನದಲ್ಲೇ ಅವರು ನಮಗೆ ಢಾಳಾಗಿಯೇ ಕಾಣಿಸಿದ್ದಾರೆ. ಸಿದ್ದರಾಮ ಒಳ್ಳೆಯ ಮನಸ್ಸಿನ ಕತೆಗಾರ. ಅವರಿಂದ ಹೆಚ್ಚೆಚ್ಚು ಕತೆಗಳು ಹೊರಹೊಮ್ಮಲಿ.






0 Comments