ಎಸ್ ಕಲಾಧರ ಸಂಪಾದನೆಯ ‘ಶಾಮಂತಿ 6’
‘ಸ್ನೇಹ ಪ್ರಕಾಶನ’ ಈ ಪುಸ್ತಕವನ್ನು ಪ್ರಕಟಿಸಿದೆ.
ಈ ಪುಸ್ತಕದಲ್ಲಿ ಮಕ್ಕಳು ಬರೆದ ಚಿತ್ರ ಹಾಗೂ ಬರಹಗಳ ಕುರಿತು ಡಾ ಎಚ್ ಎಸ್ ಅನುಪಮಾ ಅವರ ಬರಹ ಇಲ್ಲಿದೆ.
-ಡಾ ಎಚ್ ಎಸ್ ಅನುಪಮಾ
ಮಕ್ಕಳು ನಮಗಾಗಿ ಬರೆದ ‘ಶಾಮಂತಿ’
ಎಳೆಯರು ಅಕ್ಷರದ ಮೂಲಕ ಬೀರಿದ ನಿಷ್ಕಲ್ಮಶ ಬೆಳಕು ನಮ್ಮ ದಿನವನ್ನು ದೀಪಾವಳಿಯಾಗಿಸಿತು.
ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಮಂಗಲವೆಂಬ ಹಳ್ಳಿಯ ಕನ್ನಡ ಶಾಲೆಯ ಮಕ್ಕಳು ತಾವು ಕಂಡದ್ದನ್ನು, ಕೇಳಿದ್ದನ್ನು, ಅರಗಿಸಿಕೊಂಡದ್ದನ್ನು ಚಿತ್ರಸಮೇತ ಬರೆದು ರೂಪಿಸಿದ ಹೊತ್ತಗೆ ‘ಶಾಮಂತಿ’. ಪ್ರತಿ ಪುಟವನ್ನೂ ಚಂದಗಾಣಿಸಿರುವ ಮಕ್ಕಳು ಬರೆದ ಚಿತ್ರ-ಸಾಲುಗಳನ್ನು ಓದಿ ಪಾರದರ್ಶಕ ನೀರಿನ ತಳ ಕಂಡ ಅನುಭವ ಆಯಿತು.
ಅವು ಕತೆಯಾ, ಕವಿತೆಯಾ, ಅನುಭವವಾ, ವಿವರಣೆಯಾ, ವರದಿಯಾ, ನಿವೇದನೆಯಾ? ಅದೆಲ್ಲವೂ ಓದುವ ನಿಮ್ಮ ತಲೆನೋವೇ ಹೊರತು ನಮ್ಮದಲ್ಲ ಎಂಬಂತೆ ಎಳೆಯ ಜೀವಗಳು ತಮ್ಮನ್ನು ಕಾಡಿದ್ದನ್ನು, ಬಾಧಿಸಿದ್ದನ್ನು, ಸಂತಸಗೊಳಿಸಿದ್ದನ್ನು, ಅಚ್ಚರಿಪಡಿಸಿದ್ದನ್ನು ಅದದು ಇದ್ದ ಹಾಗೆಯೇ ನಮ್ಮೆದುರು ಬಿಚ್ಚಿಟ್ಟು ಓದುವವರನ್ನು ಮಕ್ಕಳಾಗಿಸಿಬಿಟ್ಟಿದ್ದಾರೆ.

ಅದರಲ್ಲಿ ಏನಿದೆ, ಏನಿಲ್ಲ?! ಕೆಲವರದು ಮನೆ ಕಟ್ಟುವ ಕನಸು, ಮತ್ತೆ ಕೆಲವರದು ಅದು ಕಷ್ಟ ಎಂಬ ಅರಿವು. ಒಬ್ಬರದು ಮನೆ ಬಿದ್ದು ಹೋದ ವ್ಯಥೆ, ಇನ್ನೊಬ್ಬರಿಗೆ ನಮ್ಮ ಮನೆ ನಮಗೆ ಚಂದ ಎಂಬ ಅನಿಸಿಕೆ. ಒಬ್ಬರಿಗೆ ಅಪ್ಪನ ಕನಸು ನನಸಾಗಿಸುವ ಆಶಯ, ಮತ್ತೊಬ್ಬರಿಗೆ ಅಪ್ಪ ತೀರಿಕೊಂಡ ದುಃಖ. ಅಮ್ಮನಿಲ್ಲದ ಅಜ್ಜಿ ಮನೆ ಒಬ್ಬರ ನೆಲೆ, ಐಸಿಯುನಲ್ಲಿ ಇಕ್ಕಿದರೂ ಸತ್ತ ಅಕ್ಕನ ಮಗುವಿನ ನೆನಪು ಮತ್ತೊಬ್ಬರಿಗೆ. ಟಾನಾ, ಪ್ರಿನ್ಸಿ ನಾಯಿಗಳು ಜಾಕಿ, ಪಿಂಕಿ ಆದ ಬಗೆಗೆ ಸಾಲುಗಳಿವೆ. ಹಂದಿ-ಮೇಕೆ-ಕುರಿ-ಕೋಳಿ-ನಾಯಿ-ಬೆಕ್ಕು-ಪಿಲಪಿಲ ಅನ್ನುವ ಇಲಿಮರಿ-ಕಾಗೆ-ಕುಂಟೆಯ ನವಿಲು- ಮುಂತಾಗಿ ಪ್ರತಿ ಪುಟದಲ್ಲಿಯೂ ಸದ್ದು ಹೊರಡಿಸುವ ಜೀವಿಲೋಕ ಪುಸ್ತಕವನ್ನು ಜೀವಂತವಾಗಿಟ್ಟಿದ್ದಾರೆ. ‘ಗೋಪಿ ಮಂಜೂರ’ ಕುರಿತ ಕಥಾನಕ ಇಲ್ಲಿದೆ. ಎಂಥದೆಂದು ತಿಳಿಯಲಿಲ್ಲವೇ? ಅದೇ ಗೋಬಿ ಮಂಚೂರಿ. ತುಂಬಾ ಇಷ್ಟದ ತುಂಬಾ ಚೆನ್ನಾಗಿರುವ ತುಂಬಾ ರುಚಿಯೆಂದು ವರ್ಣಿಸಲ್ಪಟ್ಟ ಗೋಪಿ ಮಂಚೂರದ ಕತೆ ಓದಿ ನಿಮ್ಮ ಬಾಯಲ್ಲಿ ನೀರೂರದಿದ್ದರೆ ಪುಸ್ತಕದ ಮೇಲಾಣೆ, ಹಾಗೆ ಚಿತ್ರ ವರ್ಣನೆ ಇದೆ.
ಮಧ್ಯಾಹ್ನ ಶಾಲೆ ಬಿಟ್ಟದ್ದೇ ಸೌದೆ ತರಲು ಕಾಡಿಗೆ ಹೋಗುವ ಮಕ್ಕಳು, ಕುಂಟೆಯ ಬಳಿ ನೀರು ಕುಡಿಯುತ್ತ ನವಿಲು ನೋಡುವ ಮಕ್ಕಳು, ಕಾಗೆ ಹತ್ತಿರ ಒದೆತ ತಿನ್ನುವ ಮಕ್ಕಳು, ಚಿಟ್ಟೆ ರೆಕ್ಕೆ ಪಡೆದು ಹಾರಬಯಸುವ ಮಗು, ತೋಟದಲ್ಲಿ ಅವರೆ ಕಾಯಿ ಕೀಳುವ ಮಗು, ಕೋಳಿಗೆ ರಾಗಿ ಹಾಕುವ ಕೂಸು, ತರಿಮಿಕೊಂಡು ಬಂದ ನಾಗರಹಾವನ್ನು ಒಲೆಗೆ ಬಿದ್ದು ರೆಕ್ಕೆ ಸುಟ್ಟುಕೊಂಡ ಗುಬ್ಬಿಯನ್ನು ವರ್ಣಿಸುವ ಗುಡಿಸಲ ಮಗು, ತಿಪ್ಪೇನಹಳ್ಳಿ ತೋಟದ ಮಾವಿನಮರ ಹತ್ತುವ ಹುಡುಗ, ಗೆಜ್ಜಲಗೆರೆಯ ಅಜ್ಜಿ ಹಿಂದೆ ತಿರುಗುವ ಹುಡುಗಿ – ವಾವ್! ಬಯಲ ರುಚಿ ಕಂಡ ಚಿಣ್ಣರ ಅದ್ಭುತ ನೋಟ ಮನಸೂರೆಗೊಳ್ಳುವಂತಿವೆ. ತಮ್ಮ ಅಸಮಾಧಾನ, ಹಿಗ್ಗು, ಸಂಭ್ರಮ, ಕಾತರ, ಅನುಭವಗಳನ್ನು ವರ್ಣಿಸಲು ಅವರು ಬಳಸಿರುವ ಭಾಷೆ, ಬೈಗುಳ, ನುಡಿಗಟ್ಟು ಚೇತೋಹಾರಿಯಾಗಿವೆ. ‘ನೀವು ನಮಗಾಗಿ ಬರೆದದ್ದು ಸಾಕು. ನಾವು ನಿಮಗಾಗಿ ಬರೆದಿದ್ದೀವಿ, ಇದೋ’ ಎನ್ನುವಂತೆ ಓದುವವರ ಮನಸುಗಳ ಬೆಳಗಿಸುವಂತೆ, ಮುಖ ಅರಳಿಸುವಂತೆ ಮಕ್ಕಳು ಬರೆದಿದ್ದಾರೆ.
ಮುಗ್ಧತೆ, ಸರಳತೆ, ಪಾರದರ್ಶಕತೆಯೇ ಈ ಹೊತ್ತಗೆಯ ಜೀವಮೂಲ. ಚಿಣ್ಣರ ಬರಹಗಳನ್ನು ಓದುತ್ತಿದ್ದಂತೆ ಬಾಲ್ಯದ ದಿನಗಳಲ್ಲಿ ನಮ್ಮ ಮನ ಸೆಳೆಯುತ್ತಿದ್ದ ಅಂಶಗಳು ಥಟ್ಟನೆ ಕಣ್ಣೆದುರು ಬಂದು ನಿಂತವು. ಬೆಳೆದು ದೊಡ್ಡವರಾದಂತೆ ಅದ್ಯಾವಾಗ ಕನ್ನಡಕ ಕಣ್ಣಿಗೇರಿತೋ, ಪೊರೆ ಅಡರಿತೋ, ತೆರೆ ಹಬ್ಬಿತೋ ಎನಿಸಿ ಹೋಯಿತು. ಅಷ್ಟು ಪಾರದರ್ಶಕ ನೋಟದ ಸಾಲುಗಳು ಇವು.
ಇಲ್ಲಿರುವ ಬರಹಗಳನ್ನು, ಚಿತ್ರಗಳನ್ನು ಸಹನೆಯಿಂದ ಮಕ್ಕಳ ಕೈಯಿಂದ ಬರೆಸಿ, ಸಂಪಾದಿಸಿರುವ ಎಸ್. ಕಲಾಧರ ನಿಜಕ್ಕೂ ಅಭಿನಂದನಾರ್ಹರು. ಈ ಪುಸ್ತಕವು ಮಕ್ಕಳ ಇಂತಹ ಆರನೆಯದಂತೆ. ಹೆಚ್ಚೇನಿಲ್ಲ, ಶಾಲೆಗೊಬ್ಬರು ಇವರಂತಹವರಿದ್ದರೆ ಸಾಕೇ ಸಾಕು, ನಮ್ಮ ನಾಳೆಗಳು ದಿವ್ಯವಾಗಿರುತ್ತವೆ. ರಸಗವಳದಂತಹ ಪುಸ್ತಕದ ಜೀವಸತ್ವವಾಗಿರುವ ಎಲ್ಲ ಮಕ್ಕಳಿಗೂ, ಅವರ ಗುರುವೃಂದಕ್ಕೂ, ಪ್ರಕಟಿಸಿದ ಸ್ನೇಹ ಪ್ರಕಾಶನಕ್ಕೂ ಧನ್ಯವಾದ ಹೇಳಬಯಸುವೆ.






0 Comments