ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು..

ಓದುಗನಾಗುವುದು ಹೇಗೆ?

ವಿಶ್ವಾಸ್ ಸೊಲಗಿ, ಮುಂಡರಗಿ  

ಪುಸ್ತಕವನ್ನು ಒಂದೇ ಮಾತಿನಲ್ಲಿ ವ್ಯಾಖ್ಯಾನಿಸುವುದು ಸುಲಭವಲ್ಲ. ಅದು ಜ್ಞಾನದ ಭಂಡಾರವೂ, ಭಾವದ ನಿಧಿಯೂ, ಕಲ್ಪನಾ ಲೋಕದ ಹೆಬ್ಬಾಗಿಲೂ, ನೈಜ ಬದುಕಿಗೊಂದು ದುರ್ಬೀನೂ ಆಗಿರುತ್ತದೆ. ಪುಸ್ತಕಗಳಿಗಿರುವ ಈ ಮಹತ್ವಗಳನ್ನರಿತೇ ಯುನೆಸ್ಕೊ, ಪುಸ್ತಕಗಳ ಓದು ಹಾಗೂ ಪ್ರಕಟಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ ೨೩ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತದೆ.

ಒಬ್ಬ ಓದುಗನಿಗೆ, ಓದುಗರಲ್ಲದವರಿಂದ ಎದುರಾಗುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ, “ಪುಸ್ತಕಗಳನ್ನೇಕೆ ಓದಬೇಕು?” ಈ ಪ್ರಶ್ನೆಗೆ ಲೇಖಕ ಜಾರ್ಜ್ ಮಾರ್ಟಿನ್ ಅವರ ಈ ಮಾತು ಉತ್ತರವಾಗಬಹುದು- “ಓದುಗನಲ್ಲದವನು ಅವನ ಜೀವಿತಾವಧಿಯಲ್ಲಿ ಒಂದೇ ಬದುಕನ್ನು ಬದುಕುತ್ತಾನೆ. ಓದುಗನಾದವನು ಸಾವಿರ ಬದುಕುಗಳನ್ನು ಬದುಕುತ್ತಾನೆ.” ಒಂದು ಒಳ್ಳೆಯ ಕಾದಂಬರಿ, ತನ್ನ ಪಾತ್ರಗಳ ಮೂಲಕ ನಮಗೆ ಜೀವನವನ್ನು ಕಲಿಸಿಕೊಡುತ್ತದೆ. ಒಂದು ಜೀವನ ಚರಿತ್ರೆ ನಮ್ಮಲ್ಲಿ ಸ್ಫೂರ್ತಿ ತುಂಬುತ್ತದೆ. ಒಂದು ಕವನ ಸಂಕಲನ ನಮ್ಮನ್ನು ಭಾವಜೀವಿಯಾಗಿಸುತ್ತದೆ. ಒಂದು ಇತಿಹಾಸದ ಪುಸ್ತಕ ನಮ್ಮ ಭವಿಷ್ಯತ್ತಿಗೆ ದಾರಿ ದೀಪವಾಗುತ್ತದೆ. ಪುಸ್ತಕದ ಓದಿನಿಂದ ನಮ್ಮ ಜೀವನದ ತೋರು ದಾರಿಯ ವೈಶಾಲ್ಯ ನಮಗೆ ಕಾಣುತ್ತದೆ. ಮುಖ್ಯವಾಗಿ ಓದುಗನಿಗೆ ಸಮಯ ಹೇಗೆ ಕಳೆಯಬೇಕು ಎಂಬ ಚಿಂತೆ ಇರುವುದಿಲ್ಲ, ಜೊತೆಗೆ ಅವನ ಸಮಯ ಸದುಪಯೋಗವಾಗುತ್ತದೆ ಕೂಡ.

ಪುಸ್ತಕಗಳ ಮಹತ್ವ ಹಲವರಿಗೆ ಅರಿವಿದ್ದರೂ, ಹಲವು ಬಾರಿ ಆ ಅರಿವು ಅವರನ್ನು ಓದುಗನನ್ನಾಗಿ ಮಾಡುವಲ್ಲಿ ವಿಫಲವಾಗುತ್ತದೆ. ಅಂದರೆ ಪುಸ್ತಕಗಳನ್ನು ಓದುವ ಹವ್ಯಾಸದ ಮಹತ್ವದ ಅರಿವಿದ್ದರೂ ಆ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗದು. ಆದರೆ ಓದುಗನಾಗುವುದು ಕಷ್ಟಸಾಧ್ಯವೇನಲ್ಲ. ಒಂದಿಷ್ಟು ಸರಿಯಾದ ಅಭ್ಯಾಸಗಳನ್ನು ರೂಢಿಸಿಕೊಂಡರೆ ಖಂಡಿತ ಪುಸ್ತಕಗಳು ನಮ್ಮನ್ನು ಸೆಳೆಯುತ್ತವೆ. ಪುಸ್ತಕಗಳ ಓದಿನ ಕುರಿತಾದ ನನ್ನ ಸೀಮಿತ ಜ್ಞಾನದಿಂದ ಹೆಕ್ಕಿ ತೆಗೆದ ಒಂದಿಷ್ಟು ಸಲಹೆಗಳು ಹೀಗಿವೆ. ಮುಂದಿನ ವರ್ಷದ ಪುಸ್ತಕ ದಿನದೊಳಗೆ ನೀವೂ ಕೂಡ ಓದುಗರಾಗಿರುತ್ತೀರಿ ಎಂಬ ಹಂಬಲದೊಂದಿಗೆ,

ಸಲಹೆಗಳು:

ಪುಸ್ತಕಗಳ ಓದಿನ ಕುರಿತಾಗಿ ನಿಮಗೆ ನೀವೇ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಡಿ. ‘ಒಂದು ದಿನಕ್ಕೆ ೫೦ ಪುಟಗಳನ್ನು ಓದುತ್ತೇನೆ’ ಎಂಬುದರ ಬದಲಾಗಿ, ‘ದಿನವೂ ಓದಲು ಪ್ರಯತ್ನಿಸುತ್ತೇನೆ’ ಎಂಬ ಗುರಿ ನಿಮ್ಮದಾಗಲಿ. ಏಕೆಂದರೆ ಪ್ರತಿದಿನ ೫೦ ಪುಟಗಳನ್ನು ಓದಲೇಬೇಕು ಎಂಬ ಗುರಿ ನಿಮಗೆ ದೊಡ್ಡದಾಗಿ ಕಾಣುತ್ತದೆ. ಅಷ್ಟು ಓದಲಿಕ್ಕೆ ತುಂಬಾ ಸಮಯ ಬೇಕು ಎಂದು ಅರಿವಾಗುತ್ತಿದ್ದಂತೆ, ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನೂ ಬೇರೆ ಚಟುವಟಿಕೆಗಳಲ್ಲಿ ಕಳೆದುಬಿಡುತ್ತೀರಿ. ಓದುವುದು ಮರೆತೇ ಹೋಗುತ್ತದೆ!

ನಿಮ್ಮ ಓದಿನ ಪ್ರಯಾಣದ ಆರಂಭಕ್ಕೆ ಸರಿಯಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಿ. ಸುಮಾರು ವರ್ಷಗಳಿಂದ ಓದುತ್ತಿರುವವರ ಓದಿನ ಆಯ್ಕೆಗಳು ಬೇರೆ; ಇಂದು ಶುರು ಮಾಡುವವರ ಆಯ್ಕೆಗಳು ಬೇರೆ. ಓದಬೇಕು ಎಂಬ ಹಂಬಲದಿಂದ ಒಮ್ಮೆಲೇ ಪ್ರಶಸ್ತಿ ಪಡೆದಂತಹ ಕೃತಿಗಳೆಂದು ಕಾಠಿಣ್ಯಯುತ ಪುಸ್ತಕಗಳನ್ನು ಕೈಗೆತ್ತಿಕೊಂಡರೆ, ಬಿಸಿ ಹಾಲಿನಿಂದ ನಾಲಿಗೆ ಸುಟ್ಟುಕೊಂಡ ತೆನಾಲಿರಾಮನ ಬೆಕ್ಕಿನಂತಾಗಬಹದು. ಓದಲು ಸುಲಭವಾದ ಕೃತಿಗಳಿಂದ ಆರಂಭಿಸಿ ಹಂತ ಹಂತವಾಗಿ ಕಠಿಣ ಪುಸ್ತಕಗಳತ್ತ ನಡೆಯಿರಿ. ಕನ್ನಡದ ಸಮಕಾಲೀನ ಬರಹಗಾರರಲ್ಲಿ ವಸುಧೇಂದ್ರ ಅವರ ಸುಲಲಿತ ಪ್ರಬಂಧಗಳ ಸಂಕಲನಗಳಾದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಮತ್ತು ‘ಕೋತಿಗಳು’, ಜೋಗಿ ಅವರ ‘ಲೈಫ್ ಇಸ್ ಬ್ಯೂಟಿಫುಲ್’, ಎ. ಆರ್. ಮಣಿಕಾಂತ್ ಅವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಓದನ್ನು ಆರಂಭಿಸಲಿಕ್ಕೆ ಒಳ್ಳೆಯ ಆಯ್ಕೆಗಳು. ಕರ್ವಾಲೋ, ಪರಿಸರದ ಕತೆ, ಜುಗಾರಿ ಕ್ರಾಸ್ ಸೇರಿದಂತೆ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳು ಈಗಾಗಲೇ ಹಲವರಿಗೆ ಓದಿನ ರುಚಿಯನ್ನು ಹಚ್ಚುವಲ್ಲಿ ಯಶಸ್ವಿಯಾಗವೆ. ಇವುಗಳನ್ನೂ ಓದಿ.

ನಿಮಗೆ ಓದಲು ಕಷ್ಟವಾಗುತ್ತಿರುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಓದಬೇಡಿ. ಪುಸ್ತಕ ಇಷ್ಟವಾಗದಿದ್ದರೇ, ಅರ್ಧಕ್ಕೇ ನಿಲ್ಲಿಸಿ; ಇನ್ನೊಂದು ಪುಸ್ತಕ ಕೈಗೆತ್ತಿಕೊಳ್ಳಿ. ಇಷ್ಟವಾಗದ ಪುಸ್ತಕ ಓದಿನ ಮೇಲಿನ ಮೋಹ ಕಡಿಮೆಯಾಗುವಂತೆ ಮಾಡಬಾರದು.

ಒಂದು ಪುಸ್ತಕವನ್ನು ಓದಿದ ನಂತರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಸ್ನೇಹಿತರೊಂದಿಗೆ ಇಷ್ಟವಾದ ಪುಸ್ತಕಗಳ ಬಗ್ಗೆ ಮಾತನಾಡಿ. ಅವರಿಗೂ ಆ ಪುಸ್ತಕವನ್ನು ಓದುವಂತೆ ಸಲಹೆ ನೀಡಿ. ಆ ಪುಸ್ತಕದ ಕುರಿತು ಅವರ ಅಭಿಪ್ರಾಯಗಳನ್ನೂ ಕೇಳಿ. ಭಿನ್ನ ದೃಷ್ಟಿಕೋನಗಳು ಮುಂದಿನ ಪುಸ್ತಕವನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತವೆ.

ಸಾಮಾಜಿಕ ಜಾಲತಾಣಗಳು ಓದಿಗೆ ಭಂಗ ತರುತ್ತಿವೆ ಎನ್ನುವವರ ನಡುವೆ, ನೀವು ಅವುಗಳನ್ನೇ ಬಳಸಿಕೊಂಡು ಓದಿನ ಖುಷಿ ಹೆಚ್ಚಿಸಿಕೊಳ್ಳಿ. ‘ಗುಡ್ ರೀಡ್ಸ್’ ಎಂಬ ಜಾಲತಾಣದಲ್ಲಿ ಓದುಗರ ದೊಡ್ಡ ಸಮುದಾಯವೇ ಇದೆ; ನೀವು ಅದರ ಭಾಗವಾಗಿ. ಅಷ್ಟೇ ಅಲ್ಲದೇ ಹಲವು ಲೇಖಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಪುಸ್ತಕಗಳನ್ನು ಓದಿ ಅವರಿಗೆ ನಿಮ್ಮ ಅಭಿಪ್ರಾಯಗಳನ್ನು ಕಳುಹಿಸಿ. ಅವರು ಪ್ರತಿಕ್ರಿಯಿಸಿದಾಗ ಸಿಗುವ ಖುಷಿಯೇ ಬೇರೆ!

‘ನನ್ನ ಬಳಿ ಈಗ ಪುಸ್ತಕಗಳಿಲ್ಲ, ಹೇಗೆ ಓದಲಿ?’ ಎಂದು ಪ್ರಶ್ನಿಸುವವರಿಗೆ ಉತ್ತರಿಸಲೆಂದೇ ಈಗ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯತ್ನಗಳಾಗುತ್ತಿವೆ. ‘ಮೈ ಲ್ಯಾಂಗ್’ ಎಂಬ ಒಂದು ಆಪ್ ಮೂಲಕ ನೀವು ಕನ್ನಡದ ಹಲವು ಇ-ಬುಕ್‌ಗಳನ್ನು ಕೊಂಡು ಓದುಬಹುದು. ಗೂಗಲ್ ಪ್ಲೇ ಬುಕ್ಸ್ ನಲ್ಲಿಯೂ ಸಹ ಹಲವು ಇ-ಬುಕ್‌ಗಳು ಲಭ್ಯವಿವೆ. ಇಂಗ್ಲೀಷ್ ಪುಸ್ತಕಗಳ ಓದುಗರಿಗೆ ಕಿಂಡಲ್ ಆಪ್ ಸೇರಿದಂತೆ, ಈ ಕೂಡಲೇ ನೀವು ಓದಲು ಆರಂಭಿಸಲು ಹಲವು ಅವಕಾಶಗಳಿವೆ. ಇವುಗಳನ್ನೂ ಬಳಸಿಕೊಳ್ಳಬಹುದು.

ಕೊನೆಯದಾಗಿ, ‘ಒಳ್ಳೆಯ ಓದುಗ’ ಎಂದೆನಿಸಿಕೊಳ್ಳಲು, ಓದಲು ಇನ್ನೊಬ್ಬರ ಬಳಿ ಎರವಲು ಪಡೆದ ಪುಸ್ತಕಗಳನ್ನು ಸಾಧ್ಯವಾದಷ್ಟು ಬೇಗ ಓದಿ ಮರಳಿಸಿ!

ವಿಶ್ವ ಪುಸ್ತಕ ದಿನದ ಶುಭಾಶಯಗಳು!

 

‍ಲೇಖಕರು avadhi

23 April, 2020

1 Comment

  1. Vasundhara k m

    ಚುಟುಕಾಗಿಯೂ ಚೆನ್ನಾಗಿಯೂ ಇರುವ ಅಚ್ಚುಕಟ್ಟಿನ ಬರಹ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading