ಒಮ್ಮೆ ಏನಾಯಿತೆಂದರೆ..

ಇವರ ವ್ಯಕ್ತಿತ್ವದ ವಿಶೇಷವೇ ವಿನಯ ಮತ್ತು ಸಂಕೋಚ. ತನಗೇನೂ ಗೊತ್ತಿಲ್ಲ, ತನಗೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬಂತೆ ಇರುತ್ತಾರೆ. ಒಮ್ಮೆ ಏನಾಯಿತೆಂದರೆ ಯಾವನೋ ಒಬ್ಬ ದಾಂಡಿಗ ಕಾರಿನಲ್ಲಿ ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಡಾ. ಸುನಿಲ್‌ ಚಂದ್ರರಿಗೆ ಗುದ್ದಿದ. ತೆಳ್ಳಗೆ ಉದ್ದುದ್ದ ಕಾಲುಗಳ ಒಂಟೆಯಂತಿದ್ದ ಸುನಿಲ್‌ ಚಂದ್ರರು ಹಾರಿ ಬಿದ್ದರು. ಕೈ ಕಾಲಿಗೆಲ್ಲ ಏಟಾಯಿತು. ಮೊಣಕಾಲು ಊದಿಕೊಂಡಿತು. ಸುನಿಲ್‌ಚಂದ್ರ ಕಾರಿನವನ ಬಳಿ ಜಗಳಕ್ಕಿಳಿಯಲಿಲ್ಲ. ಬದಲಾಗಿ ಕಾರಿನವನೇ ಇವರೊಡನೆ ಜಗಳವಾಡಿ ಬೈದು ಹೋದ!ಇಂಥವರು ಸುನಿಲ್ ಚಂದ್ರ!

ದೊಡ್ಡ ಹುದ್ದೆಯಲ್ಲಿದ್ದರೂ ದರ್ಪ ಇಲ್ಲ. ಸಿಬ್ಬಂದಿಯಿರಲಿ, ಆಸ್ಪತ್ರೆಗೆ ಬರುವ ರೈತರಿರಲಿ ಯಾರೊಂದಿಗೂ ಏಕವಚನದ ಬಳಕೆ ಇಲ್ಲ. ಇಲಾಖೆಯ ಯಾವುದೇ ಕಾರ್ಯಕ್ರಮಗಳಲ್ಲಿ, ಸಭೆ ಸಮಾರಂಭಗಳಲ್ಲಿ ‘ಡಿ’ ಗ್ರೂಪ್ ನೌಕರರು ತುದಿಗಾಲ ಮೇಲೆ ನಿಂತು ಕೆಲಸ ಮಾಡುತ್ತಾರೆ. ಆಗ ಅಧಿಕಾರಿಗಳು ಒಂದೋ ಅವರನ್ನು ಬೈಯ್ಯುತ್ತಿರುತ್ತಾರೆ ಇಲ್ಲವೇ ಭೇಷ್ ಕಣ್ರಯ್ಯ ಎಂದು ಹೊಗಳುತ್ತಿರುತ್ತಾರೆ. ಆದರೆ ಸುನಿಲ್‌ ಚಂದ್ರರು ಅವರಿಗೆಲ್ಲ ದುಡ್ಡು ಕೊಟ್ಟು ತಿಂಡಿ ತಿನ್ನಿಸುತ್ತಿದ್ದರು. ಪಶು ಔಷಧ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಹೇಳಿಕೊಳ್ಳುತ್ತಿರಲಿಲ್ಲ. ೨೦೦೩ ರಿಂದ ೨೦೦೬ ರವರೆಗೆ ನಾನು ಧರ್ಮಸ್ಥಳ ಪಶು ಆಸ್ಪತ್ರೆಯಲ್ಲಿರುವಾಗ ಸುನಿಲ್‌ ಚಂದ್ರರು ಬೆಳ್ತಂಗಡಿ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿಗಳಾಗಿದ್ದರು. ಆಗ ಅವರ ಪರಿಚಯ ಮತ್ತು ಸ್ನೇಹವಾದದ್ದು. ೨೦೦೫ ರಲ್ಲಿ ಸುನಿಲ್‌ ಚಂದ್ರರು ಮದುವೆಯಾದರು. ಅವರ ಪತ್ನಿ ಪವಿತ್ರರ ಆಗಮನದ ನಂತರ ನಮ್ಮ ಎರಡೂ ಕುಟುಂಬದ ಸ್ನೇಹ ಇನ್ನೂ ಗಟ್ಟಿಯಾಯಿತು.

ನಮ್ಮನೆಗೆ ಅವರು ಯಾವಾಗ ಬಂದರೂ ಐಸ್‌ಕ್ರೀಂ ತರುತ್ತಿದ್ದುದರಿಂದ ನನ್ನ ಮಕ್ಕಳಿಗೆ ಸುನಿಲ್‌ಚಂದ್ರರೆಂದರೆ ಅಚ್ಚುಮೆಚ್ಚು. ಅದೇ ಸಮಯದಲ್ಲಿ ನೀನಾಸಂ ತಿರುಗಾಟದ ನಾಟಕಗಳು ಉಜಿರೆಗೆ ಬಂದವು. ಈ ದಂಪತಿಗಳು ಎಂದೂ ನಾಟಕ ನೋಡದವರು. ನಾನು ಜುಲುಮೆ ಮಾಡಿಕೊಂಡು ನಾಟಕಕ್ಕೆ ಕುಟುಂಬ ಸಮೇತ ಕರೆದುಕೊಂಡು ಹೋದೆ. ಮೊದಲ ದಿನ ‘ಪಾತರಗಿತ್ತಿ ಪಕ್ಕ’ ಎಂಬ ನಾಟಕ. ಅವರಿಬ್ಬರು ಎಷ್ಟು ಪ್ರಭಾವಿತರಾದರೆಂದರೆ ಎರಡನೆಯ ದಿನದ ‘ರೋಮಿಯೋ ಜ್ಯೂಲಿಯಟ್’ ನಾಟಕಕ್ಕೆ ನಮಗಿಂತ ಮುಂಚೆ ಅವರೇ ಹೊರಟು ನಿಂತಿದ್ದರು!

ಸುನಿಲ್‌ ಚಂದ್ರರು ಬೇರೆಯವರ ಸಹಾಯಕ್ಕೆ ನಿಲ್ಲುತ್ತಿದ್ದ ಸ್ವಭಾವ ಬಹಳ ಅಪರೂಪವಾದದ್ದು. ಒಮ್ಮೆ ಹತ್ತಿರದ ಹಳ್ಳಿಯೊಂದರಲ್ಲಿ ಎಂಟು ಗಂಡು ಹಂದಿ ಮರಿಗಳ ವೃಷಣಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಲು ಒಪ್ಪಿಕೊಂಡಿದ್ದೆ (Castration). ಆದರೆ ಅದೇ ದಿನ ಬೇರೆ ಕೆಲಸ ವಕ್ಕರಿಸಿದ ಪ್ರಯುಕ್ತ ನಾನು ಆಪರೇಷನ್ ಮಾಡಲು ಆಗದೇ ಹೋಯಿತು. ವಿಷಯ ತಿಳಿಸಿದ ಕೂಡಲೇ ಸುನಿಲ್‌ ಚಂದ್ರರು ಬಿಡುವು ಮಾಡಿಕೊಂಡು ಅಷ್ಟೂ ಕೆಲಸವನ್ನು ತಾವೊಬ್ಬರೇ ಮಾಡಿ ಮುಗಿಸಿಕೊಟ್ಟರು.

ಇನ್ನೊಂದು ಸಲ ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಜರ್ಸಿ ಮಣಕವೊಂದು ಮೇವು ತಿನ್ನುವುದನ್ನು ಕಡಿಮೆ ಮಾಡಿ ದಿನ ದಿನಕ್ಕೆ ದುರ್ಬಲವಾಗತೊಡಗಿತು. ಅದು ಬೇರೆ ಯಾವ ರೋಗಲಕ್ಷಣವನ್ನೂ ತೋರಿಸುತ್ತಿರಲಿಲ್ಲ. ಅದಕ್ಕೆ ಜಂತು ನಿವಾರಣಾ ಔಷಧ, ಹೊಟ್ಟೆ ಹಸಿವು ಹೆಚ್ಚಿಸಲು ಔಷಧ, ವಿಟಮಿನ್ ಮಿನರಲ್ಲುಗಳ ಪ್ರಯೋಗ ಮುಂತಾಗಿ ಏನು ಮಾಡಿದರೂ ಪ್ರಯೋಜನವಾಗಲಿಲ್ಲ. ಪಡ್ಡೆ ಸವೆಯುತ್ತ ಹೋಯಿತು. ಅಲ್ಲಿ ದನಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹುಡುಗರಿಂದ ಕೊನೆಗೆ ಒಂದು ಸುಳಿವು ಸಿಕ್ಕಿತು. ಆ ಪಡ್ಡೆ ಇತ್ತೀಚೆಗಷ್ಟೇ ದೇವಸ್ಥಾನದ ದನಗಳ ಮಂದೆ ಸೇರಿದೆ ಮತ್ತು ತನ್ನ ಪೂರ್ವಾಶ್ರಮದಲ್ಲಿ ಪ್ಲಾಸ್ಟಿಕ್ಕನ್ನು ಕಬಳಿಸುತ್ತಿತ್ತು ಎಂಬುದು ಆ ಸುಳಿವಾಗಿತ್ತು. ಮುಂದಿನ ನಮ್ಮ ಹಾದಿ ಸುಗಮವಾಯಿತು.

ಸದರಿ ಪಡ್ಡೆಯ ‘ರೂಮಿನಾಟಮಿ’ ಶಸ್ತ್ರಚಿಕಿತ್ಸೆಗೆ ದಿನಾಂಕ, ಸಮಯ ನಿಗಧಿಪಡಿಸಿಕೊಂಡೆ. ದನದ ಮೊದಲ ಹೊಟ್ಟೆಯಾದ ರೂಮೆನ್ನನ್ನು ಶಸ್ತ್ರಚಿಕಿತ್ಸೆ ಮಾಡಿ ಅದರೊಳಗಿರಬಹುದಾದ ಪ್ಲಾಸ್ಟಿಕ್ಕನ್ನು ತೆಗೆದು ಹಾಕುವುದು ನನ್ನ ಯೋಜನೆಯಾಗಿತ್ತು. ಮೆಲುಕು ಹಾಕುವ ಪ್ರಾಣಿಗಳಲ್ಲಿ ಜನರಲ್ ಅನಸ್ತೀಶಿಯ ಬಳಸುವುದಿಲ್ಲ. ಅವುಗಳಿಗೇನಿದ್ದರೂ ಲೋಕಲ್ ಅನಸ್ತೀಶಿಯವೇ ಗತಿ. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ. ಹೇಗೂ ಇರಲಿ ಎಂದು ಸುನಿಲರಿಗೆ ತಿಳಿಸಿದ್ದೆ. ಅವರು ತಮ್ಮ ಎಲ್ಲಾ ಕೆಲಸವನ್ನೂ ಮುಂದೂಡಿ ಸರಿಯಾದ ಸಮಯಕ್ಕೆ ಧರ್ಮಸ್ಥಳಕ್ಕೆ ಆಗಮಿಸಿಯೇ ಬಿಟ್ಟರು.

ಶಸ್ತ್ರಚಿಕಿತ್ಸೆಯ ವಿವರವನ್ನು ನಾನಿಲ್ಲಿ ಹೇಳುವುದಿಲ್ಲ. ಅದು ಬರೆದು ವರ್ಣಿಸುವುದು ಕಷ್ಟ. ಎದುರು ನಿಂತು ನೋಡಿದರೆ ಸುಲಭವಾಗಿ ಅರ್ಥವಾಗುತ್ತದೆ. ಆದರೆ ನೋಡಲು ಹೆಂಗರುಳಿನವರಿಗೆ ಕಷ್ಟವಾಗಬಹುದು. ಮುಟ್ಟಿದರೆ ಕುಯ್ದು ಹೋಗುವಷ್ಟು ಚೂಪಾಗಿರುವ ಚಾಕು, ಕತ್ತರಿ, ಸ್ಕಾಲ್ಪೆಲ್ ಮುಂತಾದವುಗಳನ್ನು ಝಳಪಿಸುತ್ತ ಆಪರೇಷನ್ ಮಾಡುವ ವೈದ್ಯರು ಕಟುಕರ ಥರ ಕಾಣಬಹುದು.

ಇರಲಿ. ಸುನಿಲ್‌ಚಂದ್ರರು ಬಂದ ಮೇಲೆ ನನಗೆ ಯಾವುದೇ ಒತ್ತಡವಿಲ್ಲದಂತಾಯಿತು. ಶಸ್ತ್ರಚಿಕಿತ್ಸೆಗೊಳಪಟ್ಟ ಜರ್ಸಿ ಮಣಕ ಬಹಳ ಸಾಧು ಸ್ವಭಾವದ್ದಾಗಿತ್ತು. ಬಲ ಮಗ್ಗುಲಿಗೆ ಮಲಗಿಸಿ ಕಾಲುಗಳನ್ನು ಕಟ್ಟಿದ ನಂತರ ಆಪರೇಷನ್ ಪ್ರಾರಂಭವಾಯಿತು. ಮಣಕವನ್ನು ಹಿಡಿಯಲು ಸಾಕಷ್ಟು ಜನರಿದ್ದರು. ಸುನಿಲ್‌ ಚಂದ್ರರೇ ಮಣಕದ ಹೊಟ್ಟೆಯ ಎಡಭಾಗದಲ್ಲಿ ಜಾಗ ಸಿದ್ಧಪಡಿಸಿಕೊಂಡು ಚಕಚಕನೆ ಆಪರೇಷನ್ ಮಾಡತೊಡಗಿದರು. ರೂಮೆನ್‌ನಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ಕನ್ನು ತೆಗೆದು ಒಂದೆಡೆ ಒಟ್ಟು ಮಾಡಿದೆವು. ರೂಮೆನ್ ಚಲನಕ್ಕೆ ಪ್ಲಾಸ್ಟಿಕ್ಕೆಲ್ಲ ಕೆಲವು ಕಡೆ ಹಗ್ಗದಂತೆ ಹೊಸೆದುಕೊಂಡಿತ್ತು. ಸಾಧಾರಣ ಗಾತ್ರದ ಮಣಕದ ಹೊಟ್ಟೆಯಲ್ಲಿ ಅಷ್ಟೊಂದು ಪ್ಲಾಸ್ಟಿಕ್ ತುಂಬಿಕೊಂಡರೆ ಅದಕ್ಕೆ ಹಸಿವು ಹೇಗೆ ಆಗುತ್ತದೆ? ಮೇವು ತಿನ್ನಲು ಹೊಟ್ಟೆಯಲ್ಲಿ ಜಾಗವೆಲ್ಲಿದೆ? ಮನುಷ್ಯರಿಗೆ ಪ್ಲಾಸ್ಟಿಕ್ ತಟ್ಟೆ, ಕಪ್ಪುಗಳನ್ನು ಬಳಸಿದರೇ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಹೊಟ್ಟೆಯಲ್ಲಿ ಮಣಗಟ್ಟಲೆ ಪ್ಲಾಸ್ಟಿಕ್ ತುಂಬಿಕೊಂಡ ಹಸುಗಳಿಗೆ ಮುಂದೆ ಎಂಥ ವಿಕಾರದ ಕಾಯಿಲೆಗಳು ಕಾದುಕೊಂಡಿವೆಯೋ?

ರೂಮೆನ್ನಿಗೆ ಮತ್ತು ಹೊರ ಚರ್ಮಕ್ಕೆ ಹೊಲಿಗೆ ಹಾಕಿ, ಆಪರೇಷನ್ ಗಾಯಗಳಿಗೆ ಔಷಧ ಹಾಕಿ ಅಗತ್ಯವಿರುವ ಇಂಜೆಕ್ಷನ್‌ಗಳನ್ನು ಮಾಡಿದೆವು. ಪಾಲಿಸಬೇಕಾದ ಸಲಹೆ ಸೂಚನೆಗಳನ್ನು ತಿಳಿಸಿದೆವು. ಕೈತೊಳೆದುಕೊಂಡು ದೇವಸ್ಥಾನದಲ್ಲಿಯೇ ಊಟ ಮಾಡಿ ಹಿಂತಿರುಗಿದೆವು.

ಇದೆಲ್ಲಕ್ಕಿಂತ ವಿಶೇಷವಾದ ಪ್ರಸಂಗವನ್ನು ನೀವು ಕೇಳಬೇಕು. ಅದು ೨೦೦೫ ರ ಮಳೆಗಾಲದ ಮಧ್ಯಭಾಗ. ಜುಲೈ ಅಥವಾ ಆಗಸ್ಟ್ ತಿಂಗಳಿರಬಹುದು. ಅಂದು ಮಳೆ ಬಿಡದೆ ಸುರಿಯುತ್ತಿತ್ತು. ಆ ದಿನ ಮಧ್ಯರಾತ್ನಿ ಹನ್ನೆರಡರ ಸುಮಾರಿಗೆ ಇಬ್ಬರು ರೈತರು ಬಂದು ನನ್ನ ಮನೆಯ ಬಾಗಿಲು ಬಡಿಯತೊಡಗಿದರು. ಎದ್ದು ಬಾಗಿಲು ತೆಗೆಯಲಾಗಿ ಅವರ ಮನೆಯ ನಾಟಿ ಹಸುವೊಂದು ಸಾಯಂಕಾಲದಿಂದ ಹೆರಿಗೆ ನೋವು ತೋರಿಸುತ್ತಿದೆ. ಆದರೆ ಕರು ಮಾತ್ರ ಹೊರಬಂದಿಲ್ಲವೆಂದು ತಿಳಿಸಿದರು. “ಸಾಯಂಕಾಲವೇ ಬರಬಹುದಿತ್ತು. ಮಧ್ಯರಾತ್ರಿ ಬಂದಿದ್ದೀರಲ್ಲ?” ಎಂದೆ. “ಊರಲ್ಲಿರಲಿಲ್ಲ” ಎಂದರು. “ಮಲ್ನಾಡು ಗಿಡ್ಡ ತಳಿಯ ಹಸುವೇ?” ಎಂದೆ. “ಅಲ್ಲ ಸಾರ್, ಘಟ್ಟದ ಮೇಲಿನ ದೊಡ್ಡ ನಾಟಿ ಹಸು” ಎಂದರು. “ನೆತ್ತಿ ಚೀಲ ಒಡೆದಿದೆಯಾ? (Rupture of Amniotic sac)” ಎಂದೆ. ಅವರಾರೂ ನೋಡಿರಲಿಲ್ಲ. “ಗೊತ್ತಿಲ್ಲ” ಎಂದರು. “ಕರುವಿನ ತಲೆಯಾಗಲೀ ಕಾಲುಗಳಾಗಲೀ ಕಾಣಿಸುತ್ತಿವೆಯೇ?” ಎಂದೆ. “ಇಲ್ಲ” ಎಂದರು. “ನಿಮ್ಮನೆ ಎಲ್ಲಿ” ಎಂದೆ. “ಅದು ಚಾರ್ಮಾಡಿ ರೋಡಲ್ಲಿ ಸೋಮನ ತಡ್ಕ ದಾಟಿ ಹೋಗಬೇಕು. ಅಲ್ಲಿ ಒಂದು ಸ್ಕೂಲ್ ಉಂಟು. ಆ ಸ್ಕೂಲು ದಾಟಿದ ಮೇಲೆ ಬಲಗಡೆಗೆ ಒಂದು ರಸ್ತೆ ಇದೆ. ಅದು ನೇರ ನಮ್ಮನೆಗೆ ಹೋಗುತ್ತದೆ” ಎಂದು ಹೇಳಿದರು. ಅಂದರೆ ಸುಮಾರು ೧೦-೧೨ ಕಿಮೀ ದೂರ.

ಹಿಂದು ಮುಂದು ನೋಡದೆ ಹೊರಟೆ. ಮೆಡಿಸಿನ್ ಬ್ಯಾಗಿನಲ್ಲಿ ಔಷಧಗಳ ಮೇಲೆ ಕಣ್ಣಾಡಿಸಿದೆ. ಬೇಕಾದ ಎಲ್ಲ ಔಷಧಗಳೂ ಇದ್ದವು. ಒಂದು ಮಾರು ಉದ್ದನೆಯ ನೂಲಿನ ಹಗ್ಗ ಸಹ ನನ್ನ ಬೈಕಿನ ಡಿಕ್ಕಿಯಲ್ಲಿತ್ತು. ಹೆರಿಗೆಯಲ್ಲಿ ಕರು ಹೊರಬರುವುದು ತೊಂದರೆಯಾದರೆ ಕರುವಿನ ಕಾಲುಗಳಿಗೆ ಅಥವಾ ತಲೆ, ಕತ್ತು, ದವಡೆಗೆ ಕಟ್ಟಿ ಕರುವನ್ನು ಹೊರಗೆಳೆಯಲು ಬಳಸುತ್ತಿದ್ದ ಹಗ್ಗ ಅದು.

ಬಂದಿದ್ದ ಇಬ್ಬರಲ್ಲಿ ಒಬ್ಬರನ್ನು ನನ್ನ ಬೈಕಿನಲ್ಲಿ ಕೂರಿಸಿಕೊಂಡೆ. ಇಬ್ಬರೂ ರೈನ್ ಕೋಟ್ ಧರಿಸಿದ್ದರು. ನಾನೂ ರೈನ್ ಕೋಟು ಮತ್ತು ಪ್ಲಾಸ್ಟಿಕ್ ಚಪ್ಪಲಿ ಧರಿಸಿ ಹೊರಟೆ. ನಾನು ಧರ್ಮಸ್ಥಳದಲ್ಲಿರುವ ತನಕ ಪ್ಲಾಸ್ಟಿಕ್ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಿದ್ದೆ. ಚರ್ಮದ ಚಪ್ಪಲಿ ಹಾಕಿದರೆ ಒಂದು ತಿಂಗಳೊಳಗೆ ಹಾಳಾಗುತ್ತಿದ್ದವು. ಬೂಟು ಹಾಕಿಕೊಂಡರೆ ಮಳೆ ನೀರು ಬೂಟಿನೊಳಗೆ ನುಗ್ಗಿಬಿಡುತ್ತಿದ್ದವು. ಬಹಳ ಹೊತ್ತು ಪಾದಗಳು ಹಸಿಯಿದ್ದರೆ, ಕಾಲ್ಬೆರಳುಗಳ ಮಧ್ಯೆ ಕೂಡಲೇ ಬೂಸ್ಟ್ (ಫಂಗಸ್) ಹಿಡಿಯುತ್ತಿತ್ತು. ಬೂಸ್ಟ್ ವಾಸಿ ಮಾಡಿಕೊಳ್ಳಲು ಪಾದಗಳನ್ನು ಯಾವಾಗಲೂ ಒಣಗಿದಂತಿಟ್ಟುಕೊಳ್ಳಬೇಕು. ಆದರೆ ಮಳೆಯಿಂದಾಗಿ ನನ್ನ ಪಾದಗಳು ಸದಾ ನೀರಿನಲ್ಲಿ ಆಡುತ್ತಿದ್ದುದರಿಂದ ಬೂಸ್ಟ್ ವಾಸಿಯಾಗುತ್ತಲೇ ಇರಲಿಲ್ಲ. ೨೦೦೫ ರ ಸುಮಾರಿಗೆ ನನಗೆ ತಗಲಿಕೊಂಡ ಬೂಸ್ಟು ಬಹಳ ವರ್ಷಗಳವರೆಗೆ ವಾಸಿಯಾಗಲಿಲ್ಲ. ಬೇಸಿಗೆಯಲ್ಲಿ ಏನೂ ಇರದ ಕಾಟ ಮಳೆಗಾಲ ಪ್ರಾರಂಭವಾದ ಕೂಡಲೇ ಹಾಜರಾಗುತ್ತಿತ್ತು. ಇರಲಿ ಬಿಡಿ. ಇದು ನಮ್ಮ ಗೋಳು.

ಉಜಿರೆಯನ್ನು ಹಿಂದೆ ಬಿಟ್ಟು ಚಾರ್ಮಾಡಿ ಕಡೆ ಹೊರಟೆವು. ನಾವು ಮೂವರು ಎರಡು ಬೈಕುಗಳಲ್ಲಿ ಹೋಗುತ್ತಿದ್ದೆವು. ಅವರ ಬೈಕು ಮುಂದೆ ಹೋಗುತ್ತಿತ್ತು. ಹಿಂದೆ ನಾನಿದ್ದೆ. ಉಜಿರೆ ಮತ್ತು ಚಾರ್ಮಾಡಿ ಮಧ್ಯೆ ನೂರಾರು ಸಲ ಓಡಾಡಿದ್ದೆ. ಹಗಲಿನ ಬೈಕ್ ಸವಾರಿಗಿನ್ನ ರಾತ್ರಿ ಸವಾರಿ ರೋಮಾಂಚಕವಾಗಿರುತ್ತಿತ್ತು. ಅಕಸ್ಮಾತ್ ಕಾಡುಪ್ರಾಣಿ ಅಡ್ಡ ಬಂದರೆ! ಭಯಾನಕವಾದ ಹಾವು ಅಡ್ಡ ಹಾದರೆ! ಅಥವಾ ಬೈಕ್ ಕೆಟ್ಟು ಹೋದರೆ! ಎನ್ನುವ ಭಯದ ಅಂಶ ಸಹ ಈ ರೋಮಾಂಚನದಲ್ಲಿ ಸೇರಿರುತ್ತಿತ್ತು ಎನಿಸುತ್ತದೆ. ಇಷ್ಟಲ್ಲದೆ ನನ್ನ ಹೀರೋಯಿಸಮ್‌ನ ಪ್ರದರ್ಶನವೂ ಸಹ ಸೇರಿತ್ತೇನೋ!

ಸೋಮನತಡ್ಕ ದಾಟಿ ಮೈನ್ ರೋಡಿಂದ ಬಲಕ್ಕೆ ತಿರುಗಿದ ಮೇಲೆ ೨-೩ ಕಿಮೀ ದೂರವಿತ್ತು ಅವರ ಮನೆ. ಮನೆ ಹಿತ್ತಲಲ್ಲಿದ್ದ ದನದ ಹಟ್ಟಿ ಪ್ರವೇಶಿಸಿ ಹಸುವಿನ ಗರ್ಭಚೀಲದೊಳಗೆ ಕೈ ಹಾಕಿದಾಗ ನನ್ನ ಎದೆ ಧಸಕ್ಕೆಂದಿತು!

ಹಸುವಿಗೆ ಹೆರಿಗೆ ನೋವು ಸಾಯಂಕಾಲ ಐದು ಗಂಟೆಯ ಸುಮಾರಿಗೇ ಪ್ರಾರಂಭವಾಗಿದೆ. ಆಗಲೇ ನೆತ್ತಿ ಚೀಲ (ಉಚ್ಚೆ ಬುಡ್ಡೆ) (Amniotic Sac) ಒಡೆದಿದೆ. ಈ ಆಮ್ನಿಯಾಟಿಕ್ ದ್ರವವೇ ಕರು ಬರುವ ಮಾರ್ಗವನ್ನು ಹಸಿಯಿರುವಂತೆ ಮತ್ತು ಲೋಳೆ ಲೋಳೆಯಾಗಿ ಜಾರುವಂತೆ ಮಾಡುತ್ತದೆ. ಆದರೆ ಕರುವಿನ ತಲೆ ಅದರ ಎರಡು ಮುಂಗಾಲುಗಳ ಕೆಳಗೆ ಜಾರಿ ಹೋಗಿತ್ತು. ಹೀಗಾಗಿ ಕರು ಹೊರಬರಲಾಗಿಲ್ಲ. ಆಗಲೇ ತಿಳಿದ ಯಾರಾದರೂ ಕರುವಿನ ತಲೆಯನ್ನು ಸರಿಸ್ಥಿತಿಗೆ ತಂದು ಸರಿಪಡಿಸಿದ್ದರೆ ಸುಲಭವಾಗಿ ಹೆರಿಗೆಯಾಗುತ್ತಿತ್ತು. ಆದರೆ ಸರಿಪಡಿಸಲು ಯಾರೂ ಇರಲಿಲ್ಲವಲ್ಲ? ಎಂಟು ಗಂಟೆ ತಡವಾಗಿದೆ. ನೆತ್ತಿ ಚೀಲ ಒಡೆದು ಆಮ್ನಿಯಾಟಿಕ್ ದ್ರವವೆಲ್ಲ ವ್ಯರ್ಥವಾಗಿ ಸುರಿದು ಹೋಗಿದೆ. ನಾನು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಪರೀಕ್ಷಿಸಿದಾಗ ಗರ್ಭಚೀಲ ಮತ್ತು ಕರು ಬರುವ ಮಾರ್ಗ (Birth canal) ಒಣಗಿ ಹೋಗಿತ್ತು. ಮೈಮೇಲೆ ಕೂದಲು ಸಮೃದ್ಧವಾಗಿ ಬೆಳೆದ ಕರುವನ್ನು ಮುಟ್ಟಿದರೆ ಒಣ ಟರ್ಕಿ ಟವಲ್ಲು ಮುಟ್ಟಿದಂತಾಯಿತು!

ಕರು ದೊಡ್ಡದಾಗಿ ಬೆಳೆದಿದ್ದರಿಂದ ಗರ್ಭಚೀಲದ ತುಂಬ ಕರು ತುಂಬಿಕೊಂಡಿತ್ತು. ಸ್ವಲ್ಪವಾದರೂ ಜಾಗ ಇರಲಿಲ್ಲ. ಅಲ್ಲಿ ನಮ್ಮ ಕೈಗಳನ್ನು ಹಾಕಿ ಎರಡು ಮುಂಗಾಲುಗಳ ಕೆಳಗೆ ಜಾರಿದ್ದ ತಲೆಯನ್ನು ಮೇಲಕ್ಕೆ ಎತ್ತಿ ಅದರ ಸಹಜ ಸ್ಥಾನಕ್ಕೆ ತರಬೇಕಾಗಿತ್ತು. ಗರ್ಭಚೀಲದ ಒಳಗೆ ದ್ರವವಿದ್ದರೆ ಅಷ್ಟು ಕಷ್ಟವಾಗುವುದಿಲ್ಲ. ಆದರೆ ಪ್ರಸ್ತುತ ಪ್ರಕರಣದಲ್ಲಿ ಗರ್ಭಚೀಲದಲ್ಲಿ ಪಸೆಯೇ ಇಲ್ಲವಲ್ಲ!  ಮತ್ತೂ ಒಂದು ಯಡವಟ್ಟಾಗಿತ್ತು. ಅದೇನೆಂದರೆ ಗರ್ಭಚೀಲ ನಿಷ್ಕ್ರಿಯವಾಗಿತ್ತು (Uterine Inertia). ಅಂದರೆ ಗರ್ಭಚೀಲವು ತನ್ನ ಸಂಕುಚನಗಳ ಮೂಲಕ ಕರುವನ್ನು ಹೊರಹಾಕುವ ಕ್ರಿಯೆಯನ್ನು (Uterine Contractions) ಸ್ಥಗಿತಗೊಳಿಸಿತ್ತು. ಹಸುವು ತಿಣುಕಿ ಕರುವನ್ನು ಹೊರತಳ್ಳುತ್ತಿರಲಿಲ್ಲ.

ನನಗೊಂದೆರಡು ಕ್ಷಣ ಕಕ್ಕಾಬಿಕ್ಕಿಯಾಯಿತು. ನಾನು ಎಂದೂ ಗರ್ಭಚೀಲದ ನಿಷ್ಕ್ರಿಯತೆಯ ಪ್ರಕರಣಗಳನ್ನು ನೋಡಿರಲಿಲ್ಲ. ಅರ್ಧ ಗಂಟೆಯ ಕೆಳಗೆ ಆರಾಮವಾಗಿ ಮನೆಯಲ್ಲಿ ನಿದ್ದೆ ಹೊಡೆಯುತ್ತ ಬಿದ್ದುಕೊಂಡಿದ್ದವನು ಇದ್ದಕ್ಕಿದ್ದಂತೆ ಕಷ್ಟಕೋಟಲೆಯಲ್ಲಿ ಸಿಗಿಬಿದ್ದಿದ್ದೆ. ನನ್ನ ಸಹಾಯಕ್ಕೆ ಯಾರೂ ಇರಲಿಲ್ಲ. ಜೊತೆಗಿದ್ದ ಇಬ್ಬರು ಗಂಡಸರು ಮತ್ತು ಮನೆಯ ಮೂವರು ಹೆಣ್ಣುಮಕ್ಕಳು ಅತಿ ವಿನಯದಿಂದ ನನ್ನ ಮತ್ತು ಹಸುವಿನ ಸುತ್ತ ನಿಂತಿದ್ದರು.

ನಿಧಾನಕ್ಕೆ ಒಂದೊಂದೇ ಸಿಕ್ಕುಗಳನ್ನು ಬಿಡಿಸಿಕೊಳ್ಳಬೇಕೆಂದು ಮನಸ್ಸಿನಲ್ಲಿಯೇ ನಿರ್ಧರಿಸಿದೆ. ಮೊದಲು ಗರ್ಭಚೀಲದಲ್ಲಿರುವ ಕರುವಿನ ತಲೆಯನ್ನು ನೇರಗೊಳಿಸಿಕೊಳ್ಳತೊಡಗಿದೆ. ಅದು ನಾಟಿ ಹಸುವಾದುದರಿಂದ ಎಷ್ಟೇ ದೊಡ್ಡದಾದರೂ ಕರುವಿನ ತಲೆ, ಕುತ್ತಿಗೆಗಳು ನನ್ನ ಕೈಗೆ ಎಟುಕುತ್ತಿದ್ದವು. ಆದರೆ ತಲೆಯನ್ನು ಅತ್ತಿತ್ತ ಸರಿಸುವುದಕ್ಕೆ ಒಂದರ್ಧ ಅಂಗುಲದಷ್ಟು ಸಹ ಜಾಗವಿರಲಿಲ್ಲ. ಮತ್ತು ಎಲ್ಲ ಚಲನೆಗಳಿಗೂ ನಾನೇ ಪೂರ್ತಿ ಶಕ್ತಿಯನ್ನು ವ್ಯಯಿಸಬೇಕಾಗಿತ್ತು. ಗರ್ಭಚೀಲ ನಿಷ್ಕ್ರಿಯಗೊಂಡಿದ್ದರಿಂದ ಹಸುವಿನ ವತಿಯಿಂದ ತಿಣುಕುವ ಯಾವುದೇ ಸಹಾಯ ಸಹಕಾರವಿರಲಿಲ್ಲ. ತೀರಾ ಇಕ್ಕಟ್ಟಾದ ಜಾಗದಲ್ಲಿ ಬಹಳ ಹೊತ್ತಿನಿಂದ ಇದ್ದ ಕರುವು ಶಕ್ತಿಗುಂದಿದಂತಾಗಿತ್ತು. ಕರುವಿನ ಚಟುವಟಿಕೆಗಳು ಕಮ್ಮಿಯಾಗಿದ್ದವು. ಕರುವಿನ ಉದ್ದುದ್ದನೆಯ ಕಾಲುಗಳ ಮೂಳೆಗಳು, ತಲೆಯ ಮೂಳೆಗಳು, ದವಡೆ ಮೂಳೆಗಳು, ಹಸುವಿನ ಸೊಂಟದ ಮೂಳೆಗಳು ನನ್ನ ಕೈಗಳಿಗೆ ಯಾವ ರೀತಿಯಲ್ಲಿ ಒತ್ತುತ್ತಿದ್ದವೆಂದರೆ ಇಕ್ಕಳದಲ್ಲಿ ಹಿಚುಕಿದಂತಾಗುತ್ತಿತ್ತು. ಎಷ್ಟು ತಿಣುಕಾಡಿದರೂ ತಲೆಯನ್ನು ಹಿಡಿದೆತ್ತಲು ಸಾಧ್ಯವಾಗಲಿಲ್ಲ. ಆಗ ನನ್ನ ಬಳಿಯಿದ್ದ ತೆಳ್ಳನೆಯ ನೂಲಿನ ಹಗ್ಗವನ್ನು ನಿಧಾನಕ್ಕೆ ಗರ್ಭಚೀಲದಲ್ಲಿ ಹಾಯಿಸಿಕೊಂಡು ಒಳಗೇ ಕರುವಿನ ಉದ್ದನೆಯ ಮುಸುಡಿಗೆ ಸುತ್ತಿ ಗಂಟು ಹಾಕಿದೆ. ಇದೆಲ್ಲ ಕೆಲಸ ಆಗುವುದು ಗರ್ಭಚೀಲದೊಳಗಿನ ಕತ್ತಲೆಯಲ್ಲಿ. ಇದಕ್ಕೆ ಅನುಭವವೇ ಗುರು.

ಪಶುವೈದ್ಯ ವೃತ್ತಿ ಎಲ್ಲವನ್ನೂ ಕಲಿಸುತ್ತದೆ. ಈಗ ಗಂಟು ಹಾಕಿದ ಹಗ್ಗದ ಇನ್ನೊಂದು ತುದಿಯನ್ನು ನನ್ನ ಪಕ್ಕದಲ್ಲಿ ಕುಳಿತಿದ್ದ ಗಂಡಸರಿಗೆ ಕೊಟ್ಟು ಸೂಚಿಸಿದ ನಂತರ ಒಮ್ಮೆಲೇ ಜಗ್ಗಲು ತಿಳಿಸಿದೆ. ಮುಗ್ಧರಾದ ಅವರಿಬ್ಬರು ಒಂದು ಸೆಕೆಂಡನ್ನೂ ವ್ಯರ್ಥ ಮಾಡಬಾರದೆಂದು ಶಕ್ತಿಯೆಲ್ಲ ಬಿಟ್ಟು ಒಮ್ಮೆಲೆ ಎಳೆದುಬಿಟ್ಟರು. ತಲೆಯೇನೋ ಕಟಕಟ ಶಬ್ಧದೊಂದಿಗೆ ಸರಿಯಾದ ಜಾಗಕ್ಕೆ ಬಂದಿತು. ಆದರೆ ಕರುವಿನ ಕಾಲು ಮತ್ತು ತಲೆಯ ಮೂಳೆಗಳ ಮಧ್ಯೆ ಸಿಗಿ ಹಾಕಿಕೊಂಡ ನನ್ನ ಎಡಗೈ ಹಸ್ತದ ಅಷ್ಟೂ ಮೂಳೆಗಳು ಕಬ್ಬಿಣದ ರಾಡುಗಳಿಂದ ನರುಕಿದಂತಾಯಿತು. ಕೈ ಹೊರಗೆಳೆದುಕೊಂಡು ನೋಡಿದರೆ ಹಸ್ತಕ್ಕೆ ಹಸ್ತವೇ ಕಂಪಿಸುತ್ತಿದೆ. ಹೌದೋ ಅಲ್ಲವೋ ಎಂಬಂತೆ ನಿಧಾನಕ್ಕೆ ಊದಿಕೊಳ್ಳತೊಡಗಿತು.

ನನ್ನ ಕೈಗಾದ ಗತಿ ಕಂಡು ಆ ಮನೆಯವರ ಸಂಕಟಕ್ಕೆ ಕೊನೆಯಿಲ್ಲದಾಯಿತು. ಹೆಣ್ಣು ಮಕ್ಕಳು ಹಗ್ಗ ಹಿಡಿದೆಳೆದ ಗಂಡಸರನ್ನು ಬೈಯ್ಯತೊಡಗಿದರು. ಗಂಡಸರು “ಕ್ಷಮಿಸಿ, ಬೇಕಂತಲೇ ಹಾಗೆ ಮಾಡಿದ್ದಲ್ಲ” ಎನ್ನುವುದು ನಡೆದೇ ಇತ್ತು. ನಾನು ಒಂದು ಪಾತ್ರೆಯಲ್ಲಿ ತಣ್ಣೀರು ತರಿಸಿ ಅದರಲ್ಲಿ ಎಡಹಸ್ತವನ್ನು ಮುಳುಗಿಸಿಕೊಂಡು ಕೂತೆ. ಇನ್ನು ನಾನು ನಿಷ್ಪ್ರಯೋಜಕನಾಗಿದ್ದೆ. ಇದಾವುದರ ಪರಿವೆ ಇಲ್ಲದೆ ಮಳೆ ಸುರಿಯುತ್ತಲೇ ಇತ್ತು.

ಹಸುವಿನ ಗರ್ಭಚೀಲ ನಿಷ್ಕ್ರಿಯವಾಗಿದ್ದುದರಿಂದ ಮತ್ತು ಕರು ಹಾಗೂ ಕರು ಬರುವ ಮಾರ್ಗ ಒಣಗಿದ್ದುದರಿಂದ ಕರು ಹೊರಬರುವುದು ಸುಲಭವಿರಲಿಲ್ಲ. ಯಾರಾದರೂ ಬಲ್ಲವರೇ ಒಬ್ಬರು ಮುಂದಿನ ಕೆಲಸ ಮಾಡಬೇಕಿತ್ತು. ಹಸುವಿಗೆ ಇಂಜೆಕ್ಷನ್ ಮಾಡಬೇಕಿತ್ತು. ಗರ್ಭಚೀಲಕ್ಕೆ ಔಷಧ ಹಾಕಬೇಕಿತ್ತು.

ನಾನು ಅರ್ಧ ಗಂಟೆ ಸುಧಾರಿಸಿಕೊಂಡೆ. ಊತ ಹೆಚ್ಚಾಗದಿದ್ದರೂ ನೋವು ಕಡಿಮೆಯಾಗಲಿಲ್ಲ. ನಾನೇ ಒಂದು ನಿರ್ಣಯಕ್ಕೆ ಬರಬೇಕಾಗಿತ್ತು. ನನ್ನ ಆಪತ್ಬಾಂಧವ ಡಾ|| ಸುನಿಲ್ ‌ಚಂದ್ರರಿಗೆ ಫೋನ್ ಮಾಡಿದೆ. ಆಗ ರಾತ್ರಿ ಎರಡು ಗಂಟೆಯ ಮೇಲಾಗಿತ್ತು. ಮಳೆ ಸುರಿಯುತ್ತಿತ್ತು. ಬೆಳ್ತಂಗಡಿಯಿಂದ ನಾನಿದ್ದ ಜಾಗ ಹತ್ತಿರತ್ತಿರ ಇಪ್ಪತ್ತು ಕಿಮೀ ಇತ್ತು. ಫೋನ್ ಎತ್ತಿಕೊಂಡ ಸುನಿಲರು ಮನೆಯ ವಿಳಾಸ ಕೇಳಿದರಷ್ಟೆ.

ಸುನಿಲರು ಬರಲಿಕ್ಕೆ ಅರ್ಧ ಗಂಟೆಯಾಗಬಹುದಾದ್ದರಿಂದ ಹಸುವಿಗೆ ಒಂದೆರಡು ಗ್ಲೂಕೋಸ್ ಬಾಟಲಿಗಳನ್ನು ಹಾಕಿದೆ. ಇಂಜೆಕ್ಷನ್ ಕೊಡಲು ಬಲಗೈ ಸಾಕಿತ್ತು. ನೋವಿಗೆ, ಸೋಂಕಿಗೆ ಇಂಜೆಕ್ಷನ್ ಮಾಡಿ ಸುನಿಲರಿಗೆ ಕಾಯುತ್ತಾ ಕುಳಿತೆ. ನಿರೀಕ್ಷೆಗಿಂತ ಮೊದಲೇ ಬಂದ ಸುನಿಲರು ಒಂದು ಕ್ಷಣವೂ ವ್ಯರ್ಥ ಮಾಡದೆ ಕೆಲಸ ಶುರು ಮಾಡಿದರು.

ಅದು ಸಂಕೀರ್ಣವಾದ ಪ್ರಕರಣವಾಗಿತ್ತು. ಸುನಿಲರೂ ಅರ್ಧ ಮುಕ್ಕಾಲು ಗಂಟೆ ಕಷ್ಟಪಡಬೇಕಾಯಿತು. ಕರು ಹೊರತೆಗೆದರು. ಮನೆಯವರೆಲ್ಲರ ಖುಷಿಗೆ ಪಾರವೇ ಇರಲಿಲ್ಲ. ಅಂಥ ಹಸುಗಳಲ್ಲಿ ಕಸ (placenta) ತನ್ನಷ್ಟಕ್ಕೆ ತಾನು ಬೀಳುವುದಿಲ್ಲವಾದ್ದರಿಂದ ಕಸವನ್ನು ಹೊರತೆಗೆದು ಗರ್ಭಚೀಲಕ್ಕೆ ಔಷಧ ಹಾಕಿದರು. ಆ ಮನೆಯಿಂದ ನಾವು ಹೊರಟಾಗ ಹತ್ತಿರತ್ತಿರ ನಾಲ್ಕು ಗಂಟೆಯಾಗಿತ್ತು.

ಇದಾದ ಕೆಲವು ದಿನಗಳ ನಂತರ ಸುನಿಲರ ಮದುವೆಯಾಯಿತು. ಅದು ಪುತ್ತೂರಿನ ಪೋಳ್ಯ ವೆಂಕಟರಮಣ ದೇವಸ್ಥಾನದಲ್ಲಿ ಆದ ಸರಳ ಮದುವೆ.

ಔಷಧಶಾಸ್ತ್ರದಲ್ಲಿ (Pharmacology) ಅತಿ ಹೆಚ್ಚಿನ ಪರಿಶ್ರಮ ಇರುವ ಸುನಿಲರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಇಷ್ಟೆಲ್ಲ ವಿದ್ವತ್ತಿದ್ದ ಸುನಿಲರಿಗೆ ಪಶುವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿ ಎಂದು ನಾನು ಒತ್ತಡ ಹೇರುತ್ತಿದ್ದೆ. ಅದರಂತೆ ಅರ್ಜಿ ಹಾಕಿದ ಅವರಿಗೆ ಬೀದರ್ ಪಶುವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ೨೦೦೭ ರಲ್ಲಿ ನೇಮಕವಾಯಿತು. ನಂತರ ಅವರು ಪಿಎಚ್‌ಡಿ ಪದವಿ ಸಹ ಪಡೆದು ಸದ್ಯಕ್ಕೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿದ್ದಾರೆ.

‍ಲೇಖಕರು Avadhi

December 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sudhakara Battia

    Life is beautiful if we appreciate our flaws and seek help from others❤️ Thanks for this beautiful story

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: