ಅಪಾರ ರಂಗ ಒಲವನ್ನು ಹೊಂದಿರುವ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರ ಸಂಪಾದಕತ್ವದ ಪತ್ರಿಕೆ ‘ರಂಗ ನೇಪಥ್ಯ’.
ಕನ್ನಡ ಹಾಗೂ ಇತರ ಭಾಷೆಗಳ ರಂಗಭೂಮಿ ಚಟುವಟಿಕೆಯನ್ನು ಸಮರ್ಥವಾಗಿ ಕಟ್ಟಿಕೊಡುವುದರ ಜೊತೆಗೆ ರಂಗಕರ್ಮಿಗಳ ಸುಧೀರ್ಘ ಸಂದರ್ಶನಗಳ ಮೂಲಕ ಅವರ ಆಲೋಚನೆಗಳನ್ನು ಮುಂಚೂಣಿಗೆ ತರುತ್ತಿದ್ದಾರೆ ಗುಡಿಹಳ್ಳಿ ನಾಗರಾಜ್
ಮುಂಬರುವ ‘ರಂಗ ನೇಪಥ್ಯ’ದಲ್ಲಿ ‘ಅವಧಿ’ಯ ಓದುಗರೂ, ಬರಹಗಾರರೂ ಆದ ಅಹಲ್ಯಾ ಬಲ್ಲಾಳ್ ಅವರನ್ನು ಖ್ಯಾತ ರಂಗ ಹಾಗೂ ದೃಶ್ಯ ಮಾಧ್ಯಮದ ಕಲಾವಿದರಾದ ಜಯಲಕ್ಷ್ಮಿ ಪಾಟೀಲ್ ಅವರು ಸಂದರ್ಶಿಸಿದ್ದಾರೆ
ಅವರ ಆಪ್ತ ಸಂದರ್ಶನವನ್ನು ‘ಅವಧಿ’ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ-
ಕನ್ನಡ ರಂಗಭೂಮಿಗೆ ಹೊರನಾಡಿನ ಕೊಡುಗೆ ಕಮ್ಮಿಯೇನಿಲ್ಲ. ಕನ್ನಡಿಗರು ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕೂಡ ತಮ್ಮ ರಂಗಭೂಮಿಯ ನಂಟನ್ನು ಪ್ರೀತಿಯಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಮಗಿರುವ ಸಮಯ ಹಾಗು ಸೌಲಭ್ಯಗಳ ಮಿತಿಯಲ್ಲೇ ನಾಟಕಗಳನ್ನಾಡುತ್ತಾರೆ. ಒಳನಾಡಿನಿಂದ ತಂಡಗಳನ್ನು ಕರೆಸಿಕೊಂಡು ಉತ್ತಮ ನಾಟಕಗಳನ್ನು ನೋಡಿ ಖುಷಿ ಪಡುವುದಲ್ಲದೇ, ಕನ್ನಡ ರಂಗಭೂಮಿಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಕೂಡ.
ನಾನು ಗಮನಿಸಿರುವ ಹಾಗೆ ಹೊರ ರಾಜ್ಯಗಳನ್ನು ಹೋಲಿಸಿ ನೋಡಿದಲ್ಲಿ ಇತರ ರಾಜ್ಯಗಳಿಗಿಂತ ಮುಂಬಯಿಯ ಕನ್ನಡ ರಂಗಭೂಮಿ ಹೆಚ್ಚು ಚಟುವಟಿಕೆಯಿಂದಿದೆ. ನಮ್ಮ ಸೋದರ ಭಾಷೆಗಳಾದ ತುಳು ಹಾಗೂ ಕೊಂಕಣಿ ರಂಗಭೂಮಿಯೂ ಕನ್ನಡದ ರಂಗಭೂಮಿಯಷ್ಟೇ ಚಟುವಟಿಕೆಯಿಂದಿವೆ ಮುಂಬಯಿಯಲ್ಲಿ. ಆದರೂ ಒಳನಾಡಿನಷ್ಟು ಚಟುವಟಿಕೆಯಿಂದಿರಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಇಲ್ಲಿನವರದು.
ಇಂಥ ಮುಂಬಯಿನ ರಂಗಭೂಮಿಯ ಸೂಕ್ಷ್ಮಮತಿ ಅಹಲ್ಯ ಬಲ್ಲಾಳ್, ಕನ್ನಡ ರಂಗಭೂಮಿಯ ಅಪರೂಪ ಕಲಾವಿದೆಯರಲ್ಲೊಬ್ಬರು.
ಅಹಲ್ಯ ಬಲ್ಲಾಳ್ ಎನ್ನುವ ಹೆಸರು ಕೇಳಿದರೆ ಸಾಕು, ಮುಂಬಯಿಯ ಕನ್ನಡಿಗರ ಮುಖದಲ್ಲಿ ಗೌರವ ಮಿಶ್ರಿತ ಮೆಚ್ಚುಗೆಯ ನಗು ಮೂಡುತ್ತದೆ.
ಅಹಲ್ಯಾರ ವ್ಯಕ್ತಿತ್ವದಲ್ಲೇ ಒಂದು ಚರಿಶ್ಮಾ ಇದೆ. ವೃತ್ತಿಯಲ್ಲಿ ಜಾಹಿರಾತು ಲೋಕದಲ್ಲಿ ಕಂಠದಾನ ಕಲಾವಿದೆ ಮತ್ತು ಬರಹಗಾರರಾಗಿರುವ ಇವರು, ಮುಂಬಯಿ ಕನ್ನಡ ರಂಗಭೂಮಿಯ ಅದ್ಭುತ ನಟಿ, ಮಕ್ಕಳ ರಂಗಭೂಮಿಯ ನಿರ್ದೇಶಕಿ. ಮಕ್ಕಳ ನಾಟಕಗಳನ್ನಲ್ಲದೇ ‘ಮಾಯಾವಿ ಸರೋವರ’ವನ್ನೂ ನಿರ್ದೇಶಿಸಿ ಸೈ ಅನಿಸಿಕೊಂಡವರು. ಭರತನಾಟ್ಯ ಪ್ರವೀಣೆ. ಅನೇಕ ಜಾಹಿರಾತುಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ, ಹೆಸರಾಂತ ಹಿಂದಿಯ ವೆಬ್ ಸರಣಿಯಲ್ಲಿ ಅಭಿನಯಿಸಿಯಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು ಅಹಲ್ಯ ಬಲ್ಲಾಳ್. ಸಾಹಿತ್ಯದೊಲವಿನ ಇವರು ವೈದೇಹಿಯವರ ಕೆಲವು ಕವನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಕನ್ನಡ ಕಲಾ ಕೇಂದ್ರ ಮುಂಬಯಿ ಇವರು ನೀಡುವ ‘ಸುವರ್ಣಶ್ರೀ’ ಪ್ರಶಸ್ತಿ, ಚಾರ್ಕೋಪ್ ಕನ್ನಡಿಗರ ಬಳಗದವರ ‘ಭಾರತಿ ಕೊಡ್ಲೀಕೆರೆ ಪ್ರಶಸ್ತಿ’, ಮಾಟುಂಗಾ ಕರ್ನಾಟಕ ಸಂಘದ ‘ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಮೂರು ಬಾರಿ ಅತ್ತ್ಯುತ್ತಮ ನಟಿ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ ಅಹಲ್ಯ.
ಅಹಲ್ಯ ಬಲ್ಲಾಳರೊಡನೆ ಅವರ ಹಾಗು ರಂಗಭೂಮಿಯ ಕುರಿತು
ನಡೆಸಿದ ಒಂದು ದೀರ್ಘ ಮಾತುಕತೆ ಇಲ್ಲಿದೆ-
ಜಯಲಕ್ಷ್ಮಿ ಪಾಟೀಲ್
ಇಂದಿಗೂ ನಿಮಗಾಗಿ ಏನು ಕೇಳಲೂ ನೀವು ಹಿಂಜರಿಯುತ್ತೀರಿ ಎಂದು ಅನುಭವದಿಂದ ಬಲ್ಲೆ ನಾನು ಅಹಲ್ಯ. ಅಂಥದರಲ್ಲಿ ನಿಮ್ಮಲ್ಲಿ ರಂಗಭೂಮಿಯ ಬಗ್ಗೆ ಹುಟ್ಟಿಕೊಂಡ ಆಸಕ್ತಿ ಮತ್ತು ನೀವು ಮುಂಬೈ ಕನ್ನಡ ರಂಗಭೂಮಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡ ಬಗೆಯ ಬಗ್ಗೆ ಕುತೂಹಲ. ಅಲ್ಲಿಂದಲೇ ನಮ್ಮ ಮಾತು ಶುರು ಮಾಡೋಣ. ಹೇಳಿ.
ಅಹಲ್ಯ ಬಲ್ಲಾಳ್
ರಂಗಭೂಮಿಯ ಬಗೆಗಿನ ಆಸಕ್ತಿ ಮೊದಲಿಂದಲೂ ಇತ್ತು ಅನ್ನಲಾರೆ ಜಯಲಕ್ಷ್ಮಿ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕಲೀತಿದ್ದಾಗ ನಮ್ಮ ಮನೇಲಿ ನನ್ನ ತಮ್ಮ (ಪಿ. ಎನ್. ರಾಮಚಂದ್ರ, ಈಗ ಚಲನಚಿತ್ರ ನಿರ್ದೇಶಕ) ನಾಟ್ಕ ನಾಟ್ಕ ಅಂತ ಓಡಾಡಿಕೊಂಡು ಉಡುಪಿಯ ನಾಟಕ ವಲಯಗಳಲ್ಲಿ ಸಾಕಷ್ಟು ತೊಡಗಿಕೊಂಡಿದ್ದ. ಆಗೆಲ್ಲ ನನ್ನ ಪೂರ್ಣ ಗಮನ ಭರತನಾಟ್ಯದತ್ತಲೇ. ನೃತ್ಯ ಕಲಿಸುತ್ತಿದ್ದ ಗುರು ಮಿನಲ್ ಅಕ್ಕ ಮದುವೆಯಾಗಿ ಉಡುಪಿಯಿಂದ ಹೊರಟುಹೋದರೆಂಬ ಕಾರಣಕ್ಕೆ ನಾನು ಪದವಿ ಮುಗಿಸಿ ಬೆಂಗಳೂರಿಗೆ ಬಂದೆ ಭರತನಾಟ್ಯವನ್ನು ಮುಂದುವರೆಸಲು.
ಅಲ್ಲಿ ಗುರು ವಸಂತಲಕ್ಷ್ಮಿಯವರ ಮಾರ್ಗದರ್ಶನದಲ್ಲಿ ರಂಗಪ್ರವೇಶವಾಯಿತು. ಕರ್ನಾಟಕ ಸರ್ಕಾರದ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ; ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನವೂ ದೊರೆಯಿತು. ಸಮಯ ಸಿಕ್ಕಾಗೆಲ್ಲ ನೃತ್ಯ ಕಾರ್ಯಕ್ರಮಗಳಿಗೆ, ಕಾರ್ಯಾಗಾರಗಳಿಗೆ ಹೋಗ್ತಾ ಇದ್ದೆ.
ಮದುವೆಯಾಗಿ ಮುಂಬಯಿಗೆ ಬಂದ ನಂತರ ಕೆಲ ಕಾಲ ಗುರು ಇಂದೂ ರಾಮನ್ ಅವರಲ್ಲಿ ನೃತ್ಯಾಭ್ಯಾಸ; ಪ್ರಸಿದ್ಧ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಇಲ್ಲಿ ಅಭಿನಯ ಸರಸ್ವತಿ ಕಲಾನಿಧಿ ನಾರಾಯಣನ್ ಅವರ ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ಭರತನಾಟ್ಯದ ವಿದ್ವತ್ ಪರೀಕ್ಷೆಯೂ ಆಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದೆ. ಅಭಿನಯದ ಬಗೆಗಿನ ಆಸಕ್ತಿ ಹೀಗೆ.
ಮುಂಬಯಿಯಲ್ಲಿ ನಾಟಕರಂಗದಲ್ಲೇ ತೊಡಗಿಕೊಂಡಿದ್ದ ಬಲ್ಲಾಳ್ ಕುಟುಂಬದ ಭಾಗವಾದೆ. ಇಲ್ಲಿ ಹಿಂದೆ ನಡೆಯುತ್ತಿದ್ದ ಕನ್ನಡ ನಾಟಕೋತ್ಸವಗಳಿಗೆ ಬಂದ ಪ್ರೇಕ್ಷಕರು ಟಿಕೇಟು ಸಿಗದೇ ಮರಳಿ ಹೋದದ್ದಿದ್ದೆ; ಇಲ್ಲಿಯ ಇಂಗ್ಲಿಷ್ ಪತ್ರಿಕೆಗಳಲ್ಲೂ ನಾಟಕ ವಿಮರ್ಶೆಗಳು ಬರುತ್ತಿದ್ದವು; ಬೆಂಗಳೂರಿನಿಂದ ಬಂದ ರಂಗತಂಡಗಳ ನಿರ್ದೇಶಕ ನಟರಿಗೆ ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಸತ್ಕಾರ – ಮುಂತಾದ ವಿವರಗಳು ಮನೆಯಲ್ಲಿ ಕಿವಿಗೆ ಬೀಳುತ್ತಲೇ ಇದ್ದವು.
ಸುತ್ತಮುತ್ತ ಅದೇ ವಾತಾವರಣ. ಹೀಗಾಗಿ ಸಹಜವಾಗಿಯೇ ನಾಟಕಗಳಲ್ಲಿ ಪಾತ್ರ ವಹಿಸುವುದಾಯಿತು. ದಿನಗಟ್ಟಲೆ ನಾಟಕ ವಾಚನ, ಆಮೇಲಾಮೇಲೆ ನಿಂತುಕೊಂಡು ಮೂವ್ಮೆಂಟ್ಸ್. ನೃತ್ಯದಲ್ಲಿ ಸಂಭಾಷಣೆ ಇಲ್ಲವಷ್ಟೇ. ಈ ವಾಚಿಕಪ್ರಧಾನ ರೀತಿಯ ಅಭ್ಯಾಸವೇ ಇರಲಿಲ್ಲ. ಏನೋ ಮುಜುಗರ, ಕಲಿಯಲು ಸ್ವಲ್ಪ ಕಷ್ಟವೇ ಆಯಿತು. ಅಂತೂ ಹೇಳಿಕೊಟ್ಟ ರೀತಿಯಲ್ಲಿ ಕಲಿತೆ. ಮನೆಯವರೇ ಮಾಡಿಸುತ್ತಿದ್ದ ನಾಟಕಗಳಲ್ಲಿ ಭಾಗವಹಿಸಿದೆ. ಆಗ ಬೇರೆ ತಂಡಗಳಲ್ಲಿ ಪಾತ್ರ ವಹಿಸಿರಲಿಲ್ಲ.
ಜೊತೆಗೆ ಬಾನುಲಿ ಕಾರ್ಯಕ್ರಮಗಳಲ್ಲಿ ಧ್ವನಿ ನೀಡಲು ಅವಕಾಶಗಳು ಒದಗಿ ಬಂದವು. ಕಾಲಕ್ರಮೇಣ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಅವಕಾಶಗಳು ಕಡಿಮೆಯಾಗುತ್ತ ಹೋದವು. ಎಷ್ಟೇ ಮನಸ್ಸಿದ್ದರೂ ಇಲ್ಲಿ ವ್ಯಾವಹಾರಿಕ ಕಾರಣಗಳಿಗಾಗಿ ನಾಟಕಗಳನ್ನು ಮಾಡುವುದೇ ಹರಸಾಹಸ ಎನಿಸತೊಡಗಿತು. ಎರಡು ಮೂರಕ್ಕಿಂತ ಹೆಚ್ಚು ಪ್ರದರ್ಶನಗಳಾದರೆ ಅದೇ ಪವಾಡ ಎಂಬಂತಹ ಪರಿಸ್ಥಿತಿ. ಈಗಂತೂ ಇದು ಇನ್ನೂ ಹೆಚ್ಚು ಬಿಡಿ.
ಸಂಸಾರ ಬೆಳೆಯಿತು; ನಾನು ಜಾಹೀರಾತು ಪ್ರಪಂಚದಲ್ಲಿ ದುಡಿಯತೊಡಗಿದೆ. ಈ ನಡುವೆ ಅಷ್ಟಿಷ್ಟು ಮಕ್ಕಳ ನಾಟಕಗಳನ್ನು ಮಾಡಿಸಿದೆ. ನಾನು ಸ್ವೀಕರಿಸಿದ ವೃತ್ತಿ ಹೆಚ್ಚು ಸಮಯ ಮತ್ತು ವ್ಯವಧಾನ ಬೇಡತೊಡಗಿದ ನಂತರ ಮಕ್ಕಳ ನಾಟಕಗಳನ್ನು ಮಾಡಿಸುವುದೂ ನಿಂತುಹೋಯಿತು. ಅವಕಾಶ ಸಿಕ್ಕಾಗ ಬೇರೆ ತಂಡಗಳಲ್ಲಿ ಅಭಿನಯಿಸಿದೆ. ಕರ್ನಾಟಕ ಸಂಘ ನಡೆಸುವ ಕುವೆಂಪು ಏಕಾಂಕ ನಾಟಕ ಸ್ಪರ್ಧೆಯಲ್ಲಿ ಕೆಲವೊಮ್ಮೆ ನಟಿಯಾಗಿ, ಆಗಾಗ ಪ್ರೇಕ್ಷಕಿಯಾಗಿ ಮತ್ತು ಒಮ್ಮೆ ತೀರ್ಪುಗಾರ್ತಿಯಾಗಿಯೂ ಭಾಗವಹಿಸಿದೆ.
ನೀವು ಮಾಡಿಸಿದ ಮಂಥರೆಯಾಗಲೀ ಪುಷ್ಪರಾಣಿಯಾಗಲೀ, ಮೈಸೂರು ಅಸೋಸಿಯೇಷನ್ ನಾಟಕಗಳಾಗಲೀ, ಸಾ ದಯಾ, ರಮೇಶ ಶಿವಪುರ, ಬಾಲಚಂದ್ರ ರಾಯರ ನಿರ್ದೇಶನದಲ್ಲಿ ನಟಿಸಿದ ನಾಟಕಗಳಾಗಲೀ, ಡಾ. ಭರತ್ ಕುಮಾರ್ ಪೊಲಿಪು ನಿರ್ದೇಶಿಸಿದ ಅಂಬೆ ಆಗಲೀ ಒಂದೊಂದೂ ನನ್ನ ಪಾಲಿನ ಮೆಚ್ಚಿನ ಅನುಭವಗಳೇ. ಎಲ್ಲವೂ ನನಗೆ ಸಹೃದಯರ ಪ್ರೀತಿಯನ್ನೂ ಮತ್ತು ಕೆಲವು ನನಗೆ ಬಹುಮಾನಗಳನ್ನೂ ತಂದುಕೊಟ್ಟಿವೆ.
ರಂಗಭೂಮಿ-ಚಲನಚಿತ್ರ ನಿರ್ದೇಶಕ ನಿರ್ಮಾಪಕ ಸದಾನಂದ ಸುವರ್ಣರ ಜೊತೆ ಮತ್ತು ಅವರದೇ ಮಾರ್ಗದರ್ಶನದಲ್ಲಿ ನಾನು ಭಾಗವಹಿಸಿರುವ ಒಂದು ಅಮೂಲ್ಯ ಓದು-ನಾಟಕವೆಂದರೆ ಜಯಂತ್ ಕಾಯ್ಕಿಣಿಯವರು ಅನುವಾದಿಸಿದ ‘ಇತಿ ನಿನ್ನ ಅಮೃತಾ’.
ತುಂಬಾ ಸಮಯದ ನಂತರ ಕೈಗೊಂಡ ಪ್ರಾಜೆಕ್ಟ್ ‘ಮಾಯಾವಿ ಸರೋವರ’. ನಿಮ್ಮ ಔದಾರ್ಯದಿಂದ ಅದು ಬೆಂಗಳೂರಲ್ಲೂ ಪ್ರದರ್ಶನಗೊಂಡಿತು. ಡಾ. ಶ್ರೀಪಾದ್ ಭಟ್ ಸಿರ್ಸಿ ಇವರು ತಯಾರಿಸಿಕೊಟ್ಟ ‘ಅವಳ ಕಾಗದ’ ಇತ್ತೀಚಿಗೆ ನಾನು ಮಾಡಿರುವ ಆಪ್ತ ರಂಗಭೂಮಿ ಮಾದರಿಯ ಪ್ರಸ್ತುತಿ. ಟಾಗೋರರು ನೂರು ವರ್ಷಗಳ ಹಿಂದೆ ಬರೆದ ಕತೆಗಳ ಈ ರಂಗಪ್ರಸ್ತುತಿಯನ್ನು ನಾನು ಅಮೇರಿಕಾದ ಲಾಸ್ ಏಂಜೆಲಿಸ್ ಮತ್ತು ನ್ಯೂ ಜರ್ಸಿಯಲ್ಲಿ ಕನ್ನಡಿಗ ಪ್ರೇಕ್ಷಕರೆದುರು ಅಭಿನಯಿಸಿದ್ದೆ, ಅವರು ತುಂಬಾ ಮೆಚ್ಚಿಕೊಂಡಿದ್ದರು.
ಎಲ್ಲಕ್ಕಿಂತ ಮೊದಲು ನಾನು ನಾಟಕದ ಪ್ರೇಕ್ಷಕಿ ಅಂತಲೇ ಅನಿಸೋದು ನನಗೆ. ಹೀಗೆ ರಸಗ್ರಹಣದತ್ತ ಒಲವು ಹರಿಯಿತು. ಹೆಚ್ಚು ಹೆಚ್ಚು ನಾಟಕಗಳನ್ನು ನೋಡೋದು, ಅದರಲ್ಲಿ ಯಾವ ಅಂಶಗಳು ಉತ್ತಮ, ಎಲ್ಲಿ ಗೊಂದಲ ಸಂದಿಗ್ಧತೆ ಇದೆ, ಪ್ರಯೋಗದ ತಾಂತ್ರಿಕ ಅಂಶಗಳನ್ನು ಅರ್ಥೈಸುವುದು ಹೇಗೆ ಇವೇ ಮೊದಲಾದ ಪ್ರಶ್ನೆಗಳ ಬಗ್ಗೆ ಒಂದಿಷ್ಟು ಚಿಂತಿಸಿ ಉತ್ತರ ಸಿಗಲಾರದೆ ಒದ್ದಾಡೋದು ಇದೆಲ್ಲ ಮಾಮೂಲಾಯಿತು.
ಕಾಕತಾಳೀಯ ಎಂಬಂತೆ ಅದೇ ಸಮಯಕ್ಕೆ ರಸಗ್ರಹಣ ಶಿಬಿರಗಳಿಗೆ ಹೋಗುವ ಸಂದರ್ಭಗಳು ಒದಗಿ ಬಂದವು. ನೀನಾಸಂ ಸಾಂಸ್ಕೃತಿಕ ಶಿಬಿರ, ಅಕಾಡೆಮಿಯವರ ರಂಗಭೂಮಿ ರಸಗ್ರಹಣ ಕಮ್ಮಟ, ಮುಂಬೈ ಪ್ರಿಥ್ವಿ ಥಿಯೇಟರಿನ ನಾಟಕೋತ್ಸವದಲ್ಲಿ ಆರ್ಷಿಯಾ ಸತ್ತರ್ ನಡೆಸಿಕೊಟ್ಟ ಅಲ್ಪಾವಧಿಯ ಕಮ್ಮಟ; ಸಂಜನಾ ಕಪೂರ್ ಮತ್ತು ಸಮೀರಾ ಐಯಂಗಾರ್ ಜಂಟಿಯಾಗಿ ನಡೆಸುವ ‘ಜುನೂನ್’ ಕಾರ್ಯಕ್ರಮದ ಮುಂಬೈ ಲೋಕಲ್ಲಿನಲ್ಲಿ ಹಲವಾರು ಕಲಾವಿದರ ಅನುಭವಗಳನ್ನು ಕೇಳುವ ಅವಕಾಶ, ತನ್ಮೂಲಕ ಅವರು ಸಾಗಿ ಬಂದ ದಾರಿಯತ್ತ ಸಿಕ್ಕ ಒಳನೋಟಗಳು; ನಿರ್ದೇಶಕ ಸುನೀಲ್ ಶಾನಭಾಗ್- ಸಪನ್ ಸರನ್ ಇವರ ತಮಾಷಾ ಥಿಯೇಟರಿನವರು ಶಾಂತಾ ಗೋಖಲೆಯವರ ನೇತೃತ್ವದಲ್ಲಿ ನಡೆಸಿಕೊಟ್ಟ ಆರು ತಿಂಗಳ ಥಿಯೇಟರ್ ಅಪ್ರೀಸಿಯೇಷನ್ ಪ್ರೋಗ್ರಾಮ್ ಎಲ್ಲವೂ ಈ ನಿಟ್ಟಿನಲ್ಲಿ ಸಹಾಯ ಮಾಡಿದವು.
ಈಗ ನಾನು ಕಂಡ ನಾಟಕಗಳ ಬಗ್ಗೆ ಬರೆಯುವ ಸಾಹಸಕ್ಕೆ ಕೈಹಾಕಿದ್ದೇನೆ. ಉದಯವಾಣಿ, ಅವಧಿ , ಪ್ರಜಾವಾಣಿಯ ದೀಪಾವಳಿ ವಿಶೇಷಾಂಕ ಮುಂತಾದೆಡೆ ಇಂತಹ ಲೇಖನಗಳು ಪ್ರಕಟಗೊಂಡಿವೆ.
ಜಯಲಕ್ಷ್ಮಿ ಪಾಟೀಲ್
ಮಕ್ಕಳ ರಂಗಭೂಮಿ ನಿರ್ದೇಶಕಿಯಾಗಿ ನಿಮ್ಮ ಅನುಭವ ಹೇಳಿ.
ಅಹಲ್ಯ ಬಲ್ಲಾಳ್
ಯಾವುದೇ ತರಬೇತಿ ಇಲ್ಲದೆ ಮಕ್ಕಳ ನಾಟಕಗಳನ್ನು ಮಾಡಿಸಿದೆ ಎಂದೆನಷ್ಟೆ. ನಿರ್ದೇಶನ ಎಂತಹ ದೊಡ್ಡ ಜವಾಬ್ದಾರಿ ಎಂಬ ಅರಿವಿದೆ. ಈಗ ನೆನಪಿಸಿಕೊಂಡರೆ ನಗು. ಆಗ ಉಮೇದಿ ಒಂದೇ ಬಂಡವಾಳ. ಅದರ ಜೊತೆಗೆ, ಮಾಡಿದ ಪ್ರಯತ್ನಗಳಿಗೆಲ್ಲ ಶಭಾಷ್ ಎನ್ನುತ್ತಿದ್ದ ಮನೆಯವರು, ಸಹ ನಟನಟಿಯರು, ಸುತ್ತಮುತ್ತಲಿನ ಕನ್ನಡ ಸಂಘ ಸಂಸ್ಥೆಗಳು. ಇಲ್ಲಿ ಕನ್ನಡ-ಕನ್ನಡತನ ಉಳಿಯಬೇಕು ಬೆಳೆಯಬೇಕು ಎಂಬ ಧ್ಯೇಯವಾಕ್ಯ ಹೊಂದಿರುವ ಸಂಘಗಳ ಕಾಳಜಿಯನ್ನು ಮೀರುವುದಾದರೂ ಹೇಗೆ! ಎಲ್ಲಕ್ಕೂ ಮಿಗಿಲಾಗಿ ಫಳಫಳ ಮಿಂಚುವ ಮಕ್ಕಳ ಕಣ್ಣುಗಳು, ಉಲ್ಲಾಸ, ಸಂಭ್ರಮ. ತಾಲೀಮಿನಲ್ಲಿ ತರಲೆ ತುಂಟಾಟ. ಕಲಿಸಿಕೊಡುವಾಗ ಕಿರುಚಿ ಸುಸ್ತಾಗಿದ್ದರೂ ನಗುಮುಖದಿಂದ ಮಕ್ಕಳ ಸೈನ್ಯವನ್ನು ನಿಯಂತ್ರಿಸುತ್ತಿದ್ದ ಶಾಲಾ ಶಿಕ್ಷಕಿಯರು; ಮಕ್ಕಳ ಜೊತೆ ಕುಣಿಯುತ್ತಿದ್ದ ನಾನು.
ಶಾಲಾ ವೇಳೆಯಲ್ಲಿಯೇ ಹೇಗೋ ಸಮಯ ಹೊಂದಿಸಿ ತಾಲೀಮಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದ ಆಡಳಿತ ವರ್ಗ (ಗಂಟೆ ಬಾರಿಸುತ್ತಲೇ ಎಲ್ಲ ಮುಗಿಸಿ ರೈಲೋ ಬಸ್ಸೋ ಹಿಡಿದು ದೂರದೂರದ ಮನೆಗಳಿಗೆ ಹೋಗಬೇಕಷ್ಟೇ- ಹೀಗಾಗಿ ಅಷ್ಟರಲ್ಲೇ ತಾಲೀಮು ಮುಗಿಯಬೇಕೆಂಬ ಶಿಸ್ತು); ತೀರ ಸಪ್ಪೆ ಮುಖದ ಮಕ್ಕಳೂ ಪಾಠಗಳಿಂದ ಬಿಡುಗಡೆ ಪಡೆದು ರಿಹರ್ಸಲ್ ಮಾಡುತ್ತಾ ಮಾಡುತ್ತಾ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದ ಬೆರಗು.
ಪಾಷಾ ಅವರ ‘ನಕ್ಕಳಾ ರಾಜಕುಮಾರಿ’ ನಾನು ಮಾಡಿಸಿದ ಮಕ್ಕಳ ನಾಟಕಗಳಲ್ಲಿ ಮೊದಲಿನದು. ನನಗೆ ತಿಳಿದ ರಂಗವ್ಯಾಯಾಮಗಳನ್ನು ಮಾಡಿಸುವುದರೊಂದಿಗೆ ಶುರು. ಅಲ್ಲಿಯವರಿಗೆ ಅಚ್ಚರಿ ಆಗ. ಇದೆಲ್ಲ ಯಾಕೆ, ನೇರ ನಾಟಕಕ್ಕೆ ಹೋಗಬಾರದೆ, ಎಷ್ಟು ಕಡಿಮೆ ಸಮಯವಿರೋದು, ಮಕ್ಕಳ ಪಾಠಗಳನ್ನೂ ಗಮನಿಸಬೇಕಲ್ವೇ ಎಂಬಂತೆ. ಆದರೆ ನನಗೋ ಮಕ್ಕಳ ಮೈಚಳಿ ಬಿಡಿಸಬೇಕು, ಇಲ್ಲದೇ ಹೋದರೆ ಗಿಳಿಪಾಠ ಒಪ್ಪಿಸೋ ಯಂತ್ರಗಳೇ ಕಾಣಿಸ್ತಾವಲ್ಲ ಎಂಬ ಕಳಕಳಿ. ಅಂತೂ ಸ್ವಲ್ಪ ಗ್ರೂಪ್ ವರ್ಕ್ ಮಾಡಿಸುವಷ್ಟರಲ್ಲಿ ಮಕ್ಕಳ ಕಲ್ಪನೆಯೂ ಗರಿಗೆದರಿತು.
ಒಂದಿಬ್ಬರು ಹುಡುಗರಂತೂ, ಟೀಚರ್, ರಾಜಕುಮಾರಿಯ ಮೆರವಣಿಗೆ ಹೋಗ್ತಿರುವಾಗ ಹಂಗೆ ಮಾಡೋಣ ಹಿಂಗೆ ಮಾಡೋಣ ಅಂತ ಸೃಜನಾತ್ಮಕ ಸಲಹೆಗಳನ್ನೂ ಕೊಟ್ಟರು. ಅವರು ಹೇಳಿದ್ದು ಚೆನ್ನಾಗಿದ್ದರೂ ಒಟ್ಟು ದೃಶ್ಯಕ್ಕೆ ಅದರಿಂದ ಆಗುವ ಪರಿಣಾಮ ವಿವರಿಸಿದ ನಂತರ ಹಾಗಿದ್ರೆ ಬೇಡ ಎಂದು ಅವರೇ ಸುಮ್ಮನಾದರು. ಮಕ್ಕಳು ಅರಳುವುದನ್ನು ನೋಡುವುದೇ ಎಲ್ಲಕ್ಕಿಂತ ದೊಡ್ಡ ಬಹುಮಾನ ಎಂಬ ಅನಿಸಿಕೆ ಬರೋದು ಇಂತಹ ಕ್ಷಣಗಳಲ್ಲಿ.
ತಾಲೀಮಿನಲ್ಲಿ ಮುಖ್ಯ ಪಾತ್ರಗಳ ಸಂಭಾಷಣೆ- ಚಲನವಲನಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಅವರು ತಪ್ಪಿದರೆ ಆ ಲೋಪವನ್ನು ತೋರಿಸಿಕೊಟ್ಟು ತಾವೇ ಅದನ್ನು ಮಾಡಿತೋರಿಸಲು ತಯಾರಾಗಿ ಅಚ್ಚರಿ ಹುಟ್ಟಿಸುತ್ತಿದ್ದವು ಪುಟ್ಟ ಪಾತ್ರಗಳು. ನಾನೇ ಇಂಗ್ಲಿಷಿನಿಂದ ಅನುವಾದಿಸಿದ ‘ಯಾರು ಶ್ರೇಷ್ಠರು’ ತಾಲೀಮಿನಲ್ಲಿ ಇಂತಹ ಅನುಭವ ಮೊದಲ ಸಲ ಆಗಿತ್ತು. ಮುಖದಲ್ಲಿರೋ ಅಂಗಗಳಾದ ಕಣ್ಣು, ಮೂಗು, ಕಿವಿ, ಬಾಯಿ ಪ್ರತಿಯೊಂದೂ ತಾನೇ ಶ್ರೇಷ್ಠ ಅನ್ನುತ್ತಾ ಜಗಳ- ಯುದ್ಧ ಮಾಡುವ ಕತೆ. ಆಶ್ಚರ್ಯವೆಂದರೆ ಮಕ್ಕಳು ಕೊಟ್ಟ ನಿದರ್ಶನಗಳು. ನನ್ನ ಪಾಲಿಗೆ ಅದು ಅನಿರೀಕ್ಷಿತವೇ ಆಗಿತ್ತು.
ಅತ್ಯಂತ ಸೀಮಿತ ಬಜೆಟಿನಲ್ಲಿ ವಸ್ತ್ರಾಭರಣಗಳನ್ನೂ ರಂಗಪರಿಕರಗಳನ್ನೂ ಹೇಗೋ ಏನೋ ಜುಗಾಡ್ ಮಾಡಿ ಹೊಂದಿಸುತ್ತಿದ್ದ ಪರಿಯನ್ನು ಮರೆಯಲಾಗದು. ವೈದೇಹಿಯವರ ‘ಸೂರ್ಯ ಬಂದ’ ನೋಡಿ ಪ್ರೇಕ್ಷಕರಲ್ಲಿದ್ದ ನನ್ನ ಪರಿಚಯದವರ ಮಗ (ಇಂಗ್ಲಿಷ್ ಮಾಧ್ಯಮದಲ್ಲಿ ಕಲೀತಿದ್ದ ಪೋರ) ‘ಸೂರ್ಯ ಬಂದ….ಅಜ್ಜ ಮಾತ್ರ ಬರಲೇ ಇಲ್ಲ’ ಹಾಡಿನ ಸನ್ನಿವೇಶದಲ್ಲಿ ಅತ್ತು ಅತ್ತು ತನ್ನ ಅಮ್ಮನನ್ನು ಅದರ ಬಗ್ಗೆ ಪ್ರಶ್ನಿಸಿದ ಅಂತ ಆಮೇಲೆ ತಿಳಿಯಿತು.
ಆ ಕ್ಷಣದಲ್ಲಿ ನನಗೆ ವಾಚನದ ಸಂದರ್ಭದಲ್ಲಿ ಹಿರಿಯ ನಾಟಕಕಾರ ಡಾ.ಬಿ.ಆರ್. ಮಂಜುನಾಥ್ ಅವರು ಆ ನಾಟಕವನ್ನು ಗಾಂಧೀಜಿ ಮತ್ತು ಭಾರತದ ಸ್ವಾತಂತ್ರ್ಯದ ಸಂದರ್ಭಕ್ಕೆ ತಳುಕಿ ಹಾಕಿದ್ದು ನೆನಪಾಯ್ತು. ಗಾಂಧೀಜಿಯ ಹತ್ಯೆಯಾದಾಗ ಭಾರತೀಯರಿಗೆ ಆಗಿರಬಹುದಾದ ಅನುಭವ, ಮುಂಬಯಿಯಲ್ಲೇ ಹುಟ್ಟಿ ಬೆಳೆದ ಏಳೋ ಎಂಟೋ ವರ್ಷದ ಇಂಗ್ಲಿಷ್ ಮಾಧ್ಯಮದ ಹುಡುಗನಿಗೂ ಆಗಿರಬಹುದೆ! ಹಿರಿಯರು ಆ ಅರ್ಥೈಸುವಿಕೆಯನ್ನು ಮಾಡಿರದಿದ್ದರೆ ನನ್ನಷ್ಟಕ್ಕೇ ನನಗೆ ಅದು ತೋಚುತ್ತಿತ್ತೋ ಇಲ್ವೋ. ಏಕೆಂದರೆ ನನ್ನ ಪೀಳಿಗೆಯವರಿಗೆ ಸ್ವಾತಂತ್ರ್ಯ ಅನಾಯಾಸವಾಗಿ ಸಿಕ್ಕಿತ್ತು. ಆ ಹೋರಾಟದ ಪ್ರತ್ಯಕ್ಷ ಅನುಭವ ನಮಗಿಲ್ಲ ತಾನೇ.
ವೈದೇಹಿಯವರ ‘ಹಕ್ಕಿ ಹಾಡು’ ಸಂದರ್ಭ. ಅಷ್ಟೂ ದಿನ ಇನ್ನಿಲ್ಲದ ತಾಪತ್ರಯ ಕೊಟ್ಟು, ಪ್ರಯೋಗದ ದಿನ ಮಾತ್ರ ರಂಗಪೂಜೆಯಲ್ಲಿ ಇದ್ದಕ್ಕಿದ್ದಂತೆ ಗಾಂಭೀರ್ಯದ ಮೂರ್ತಿಗಳಾಗುತ್ತಿದ್ದ ಪುಟಾಣಿ ದೇವತೆಗಳು. ದೀಪಗಳೆಲ್ಲ ಆರಿಹೋದ ನಂತರ, ನಾಟಕ ಇನ್ನೇನು ಶುರುವಾಗಬೇಕು, ಪರದೆ ಸರಿಯಬೇಕೆನ್ನುವಾಗ ಪ್ರತಿಯೊಂದು ಮಗುವಿನ ಕೈಕುಲುಕಿ ಶುಭಾಶಯ ಹೇಳುತ್ತಿದ್ದೆ; ಕತ್ತಲಲ್ಲಿ ಮಿಂಚುತ್ತಿದ್ದ ಆ ಕಣ್ಣುಗಳ ಹೊಳಪು ನನ್ನೊಂದಿಗೆ ಬಹುಕಾಲ ಉಳಿಯುವಂಥದ್ದು. ಒಂದೊಂದೂ ಪುಟಗಳ ನಡುವಿನ ನವಿಲುಗರಿ.
ಜಯಲಕ್ಷ್ಮಿ ಪಾಟೀಲ್
ಮುಂಬೈಯಂಥ ಬಹುಸಾಂಸ್ಕೃತಿಕ ನಗರದಲ್ಲಿ ಮಕ್ಕಳಿಗೆ ಭಾಷಾ ಗೊಂದಲ ಸಹಜ. ಮಾತೃಭಾಷೆಯನ್ನು ಮೀರಿ ಅಲ್ಲಿಯ ಹಿಂದಿ ಆವರಿಸಿಕೊಂಡು ಬಿಡುತ್ತದೆ. ಅಂಥದರಲ್ಲಿ ನೀವು ಕನ್ನಡ ಮಕ್ಕಳ ರಂಗಭೂಮಿಯಲ್ಲಿ ತೊಡಗಿ ನಾಟಕಗಳನ್ನು ಮಾಡಿಸುವುದು ಎಂದರೆ ಸುಮ್ಮನೆ ಮಾತಲ್ಲ. ಮಕ್ಕಳ ಭಾಷಾ ಸಮಸ್ಯೆಗೆ ನೀವು ಕಂಡುಕೊಂಡ ದಾರಿ ಏನು? ರಂಗಭೂಮಿ ಕುರಿತು ಮಕ್ಕಳ ಆಸಕ್ತಿ ಎಷ್ಟರ ಮಟ್ಟಿಗಿದೆ? ಅದರ ಭವಿಷ್ಯವೇನು?
ಅಹಲ್ಯ ಬಲ್ಲಾಳ್
ಸಮೀಪದಲ್ಲಿಯೇ ಇರುವ ವಡಾಲಾದ ಕನ್ನಡ ಶಾಲೆಯ ಆಡಳಿತ ವರ್ಗ ಮತ್ತು ಶಿಕ್ಷಕ ಸಮುದಾಯದ ಸಹಾಯವೂ ಇತ್ತು ಆಗ. ಆ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ಮಕ್ಕಳೇ ಇದ್ದರೆನ್ನಿ. ಬೇರೆ ಬೇರೆ ಆರ್ಥಿಕ- ಸಾಮಾಜಿಕ ಹಿನ್ನೆಲೆಗಳಿಂದ ಬರುತ್ತಿದ್ದ ಮಕ್ಕಳು. ಎಷ್ಟೋ ಸಂದರ್ಭಗಳಲ್ಲಿ ಪಾಲಕರು ಅಷ್ಟೊಂದು ಶಿಕ್ಷಣ ಪಡೆದವರಲ್ಲ. ಮನೆಯಲ್ಲಿ ಬಂಬೈಯಾ ಹಿಂದಿಯದೋ ಮರಾಠಿಯದೋ ಸಾಮ್ರಾಜ್ಯ. ಹಲವು ಮಕ್ಕಳು ಮನೆಯಲ್ಲಿ ಕನ್ನಡ ಮಾತಾಡುತ್ತೇವೆ ಎಂದು ಹೇಳಿದರೂ ಸಂಭಾಷಣೆ ಒಪ್ಪಿಸುವಾಗ ‘ಓಹ್, ಇದ್ಯಾವ ಭಾಷೆ?’ ಎನಿಸುವಷ್ಟು ತಿದ್ದಲು ಅವಕಾಶವಿರುತ್ತಿತ್ತು.
ಲ-ಳ, ಸ-ಶ -ಷ ಮೊದಲಾದ ಉಚ್ಚಾರಗಳ ಗೊಂದಲ. ಅಕ್ಷರಗಳನ್ನಷ್ಟೇ ಅಲ್ಲ, ಇಡಿ ಪದಗಳನ್ನೇ ನುಂಗಿ ಸ್ವಾಹಾ ಅನ್ನುತ್ತಿದ್ದರು ಕೆಲವರು. ಏನು ಹೇಳ್ತಿದ್ದಾರೆ ಎಂದು ದೇವರಾಣೆಗೂ ಅರ್ಥವೇ ಆಗದ ಎಷ್ಟೋ ಕೇಸುಗಳು. ಯಾರನ್ನು ದೂಷಿಸೋದು ಹೇಳಿ. ದೂಷಿಸಿ ಏನುಪಯೋಗ? ಆಗೆಲ್ಲ ಮಾವ ಶ್ರೀಪತಿ ಬಲ್ಲಾಳ್ ನನಗೆ ಸಂಭಾಷಣೆ ಒಪ್ಪಿಸುವ ರೀತಿಯನ್ನು ಹೇಳಿಕೊಟ್ಟಿದ್ದು ಸಹಾಯಕ್ಕೆ ಬರುತ್ತಿತ್ತು. ಏಕಕಾಲಕ್ಕೆ ಅಮಾಯಕರೂ ಘಾಟಿ ಸೈತಾನರೂ ಆದ ಮಕ್ಕಳನ್ನು ತಿದ್ದುತ್ತಾ ತಿದ್ದುತ್ತಾ ತಲೆ ಚಿಟ್ ಹಿಡಿಯುತ್ತಿದ್ದರೂ ನನಗೂ ಒಂದಿಷ್ಟು ಭಾಷಾ ಶುದ್ಧಿ ಬಂತು ಅನ್ಸುತ್ತೆ.
ರಂಗಭೂಮಿಯ ಕುರಿತು ಮಕ್ಕಳಿಗಿರುವ ಆಸಕ್ತಿ ಅವರ ಪರಿಸರ, ಅಲ್ಲಿ ಯಾವ ರೀತಿಯ ರಂಗ ಚಟುವಟಿಕೆಗಳು ಈಗಾಗಲೇ ಇವೆ; ಶಾಲೆ -ಕಾಲೇಜು -ಮನೆ-ಸ್ನೇಹವಲಯದಲ್ಲಿ ಯಾವುದಕ್ಕೆ ಹೆಚ್ಚು ಪ್ರೋತ್ಸಾಹವಿದೆ ಇಂತಹ ಹಲವು ಅಂಶಗಳನ್ನು ಅವಲಂಬಿಸಿದೆಯಲ್ವೇ. ಸುಲಭದ ಟಿವಿ ಮೊಬೈಲ್ ಆಕರ್ಷಣೆಯನ್ನು ಮೀರುವುದು ಹೇಗೆ? ರಂಗಭೂಮಿಯನ್ನು ಶಿಕ್ಷಣಕ್ರಮದ ಭಾಗವಾಗಿಯೇ ಅಳವಡಿಸುವುದು ಹೇಗೆ? ಇಂತಹ ಹಲವಾರು ಸವಾಲುಗಳು ಶೈಕ್ಷಣಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಆದ್ಯತೆ ಗಳಿಸಿದರಷ್ಟೇ ಏನಾದರೂ ಸಾಧ್ಯ.
ಮುಂಬಯಿಯಲ್ಲಂತೂ ಕನ್ನಡ ರಂಗಭೂಮಿಯ ಪರಿಸ್ಥಿತಿ ಸಂಕೀರ್ಣವಾದುದು, ಅದರಲ್ಲೂ ವಿಶೇಷವಾಗಿ ಮಕ್ಕಳ ರಂಗಭೂಮಿ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಮಕ್ಕಳು ಕಲಿಯುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಮನೆ ಮಾತು ಕನ್ನಡ, ತುಳು, ಕೊಂಕಣಿಯಾಗಿದ್ದರೂ ಹೊರ ಪ್ರಪಂಚದ ಭಾಷೆಗಳು ಬೇರೆಯೇ. ಹೀಗಾಗಿ ಕನ್ನಡ ನಾಟಕಗಳು ನಡೆಯುವುದೇ ಆದರೆ ಅತಿ ಕಡಿಮೆ ಸಂಖ್ಯೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ.
ಇದನ್ನು ಬಿಟ್ಟರೆ ನಾಟಕಪ್ರೇಮವಿರುವ ಸಂಘಸಂಸ್ಥೆಗಳು ಉತ್ತೇಜನಕ್ಕಾಗಿಯೇ ನಡೆಸುವ ಮಕ್ಕಳ ನಾಟಕೋತ್ಸವಗಳಲ್ಲಿ ಅಥವಾ ಆಯಾ ಸಂಸ್ಥೆಯ ಸದಸ್ಯರು ಸೇರಿದಾಗ ನಡೆಯುವ ಕಾರ್ಯಕ್ರಮಗಳಲ್ಲಿ. ವರ್ಷವರ್ಷವೂ ನಡೆಯುತ್ತವೆ ಎಂದೇನಲ್ಲ. ಹೀಗಿದ್ದೂ ಮುಂಬಯಿ ನಿರ್ದೇಶಕರಿಂದಲೋ ಕರ್ನಾಟಕದ ನಿರ್ದೇಶಕರನ್ನು ಕರೆಸಿಯೋ ಮಕ್ಕಳ ನಾಟಕಗಳು ನಡೆದಿವೆ. ರಜಾ ಶಿಬಿರಗಳಾಗಿವೆ. ಯೋಜನೆಗಳನ್ನು ಹಾಕುವವರಲ್ಲಿ, ಅವುಗಳನ್ನು ಕಾರ್ಯಗತಗೊಳಿಸುವವರಲ್ಲಿ ದೂರದೃಷ್ಟಿ ಇದ್ದಾಗ ಬಹಳಷ್ಟು ಸಂಭವವಾಗುತ್ತದೆ.
ಜಯಲಕ್ಷ್ಮಿ ಪಾಟೀಲ್
ಮುಂಬಯಿಯಲ್ಲಿರುವವರ ಲಾಭ ಏನೆಂದರೆ ಆಸಕ್ತಿ ಇದ್ದವರಿಗೆ ಅಲ್ಲಿ ಎಲ್ಲ ಭಾಷೆಗಳ ರಂಗಭೂಮಿಯ ಪರಿಚಯವೂ ಅಲ್ಪಸ್ವಲ್ಪ ಇದ್ದೇ ಇರುತ್ತೆ. ಅಲ್ಲಿಯ ರಂಗಭೂಮಿಯನ್ನು ನಮ್ಮ ಕನ್ನಡಕ್ಕೆ ಹೋಲಿಸಿ ನೋಡಿದರೆ ಕಾಣಿಸುವ ವ್ಯತ್ಯಾಸಗಳೇನು?
ಅಹಲ್ಯ ಬಲ್ಲಾಳ್
ಬಹುಭಾಷಾ ಸಂಸ್ಕೃತಿಯ ನಗರದಲ್ಲಿ ನಾಟಕಪ್ರಿಯರಿಗೆ ಸಾಕಷ್ಟು ಆಯ್ಕೆಗಳು ಇರುತ್ತವೆ, ನಿಜ. ನಾನು ಕನ್ನಡದವಳು, ಹೀಗಾಗಿ ಕನ್ನಡ ನಾಟಕಗಳನ್ನು ಮಾತ್ರ ನೋಡೋದು ಅಂತ ಕೂತರೆ ಅದು ಸೀಮಿತವಾಗುತ್ತದೆ. ಭಾಷೆಯನ್ನು ಮೀರಿ, ನಾಟಕ ನೋಡುತ್ತೇನೆ ಎಂದರೆ ಮುಖ್ಯವಾಗಿ ಮರಾಠಿ, ಹಿಂದಿ, ಇಂಗ್ಲಿಶ್, ಗುಜರಾತಿ; ಜೊತೆಗೆ ಬಂಗಾಳಿ, ತಮಿಳು ಮೊದಲಾದ ಭಾಷೆಯ ಪ್ರಯೋಗಗಳು ಯಥೇಚ್ಛ.
ಅಂತಾರಾಷ್ಟ್ರೀಯ ಪ್ರಯೋಗಗಳನ್ನೂ ನೋಡಬಹುದು. ನಿಃಶುಲ್ಕ ಪ್ರದರ್ಶನಗಳಿಂದ ಹಿಡಿದು ದುಬಾರಿಯೇ ಅನಿಸುವ ಬೆಲೆಯ ಶೋಗಳು. ತೀರ ಪ್ರಾಯೋಗಿಕದಿಂದ ಹಿಡಿದು ಪಕ್ಕಾ ಕಮರ್ಶಿಯಲ್ ವರೆಗಿನ ಬೃಹತ್ ಭಂಡಾರ. ನೀವು ಮನಸ್ಸು ಮಾಡಬೇಕು, ಜೇಬು ಜೈ ಅನ್ನಬೇಕು, ಅಷ್ಟೇ.
ಒಮ್ಮೆ ದೂರದ ಬಯಲು ರಂಗಭೂಮಿಯಲ್ಲಿ ನಡೆದ ಮಳಯಾಳಿ ನಾಟಕ ‘ಕಸಾಕ್ಕಿಂಟೇ ಇತಿಹಾಸಂ’ ನೋಡಿ ಅಬ್ಬಾ ಅನಿಸಿ ಮರುದಿನ ಮತ್ತೆ 30 ಕಿಮೀ ದೂರ ಕ್ರಮಿಸಿ ಸ್ವಲ್ಪ ಹೆಚ್ಚೇ ಬೆಲೆಯ ಟಿಕೆಟ್ ಕೊಂಡು ಇನ್ನೊಮ್ಮೆ ನೋಡಿದ್ದೆ. ಈಗ ಕೆಲವು ತಿಂಗಳ ಹಿಂದೆ NCPAಯಲ್ಲಿ ಇಂಗ್ಲೆಂಡಿನಿಂದ ಬಂದ ‘Foreign Body’ ಎಂಬ ಏಕವ್ಯಕ್ತಿ ಪ್ರಯೋಗ ನೋಡಿ, ಎಂಥೆಂಥಾ ವಿಚಾರಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ತರಬಹುದು ಎಂದು ತಲೆದೂಗಿದ್ದೆ.
ಕನ್ನಡ ನಾಟಕಗಳು ಇಲ್ಲಿ ಬರೋದೇ ಆಗೊಮ್ಮೆ ಈಗೊಮ್ಮೆ. ಎಷ್ಟೋ ಸಲ ಉತ್ತಮ ಪ್ರಯೋಗಗಳ ಬಗ್ಗೆ ಪತ್ರಿಕೆಗಳಲ್ಲೋ ಫೇಸ್ ಬುಕ್ ನಲ್ಲೋ ಓದಿದರೂ ಊರಿಗೆ ಹೋದಾಗ ಆ ಪ್ರಯೋಗಗಳು ನಮಗೆ ಸಿಗೋದು ಕಷ್ಟ. ಹೀಗಿರುವಾಗ ಹೋಲಿಕೆ ಪ್ರಸ್ತುತ ಅನಿಸೋದಿಲ್ಲ. ಭಾಷೆ ಯಾವುದಾದರೇನು, ಒಳ್ಳೆಯ ನಾಟಕಾನುಭವ ಸಿಕ್ಕರೆ ಅದೇ ಖುಷಿ.
ಜಯಲಕ್ಷ್ಮಿ ಪಾಟೀಲ್
ಕನ್ನಡ-ಮರಾಠಿ ನಾಟಕಗಳ ಕೊಡುಕೊಳ್ಳುವಿಕೆ ಇಂದು ನಿನ್ನೆಯದಲ್ಲ. ಹಾಗೇ ಹಿಂದಿಯಿಂದಲೂ ಅನೇಕ ನಾಟಕಗಳು ಕನ್ನಡಕ್ಕೆ ಬಂದಿವೆ. ನನಗೆ ತಿಳಿದ ಮಟ್ಟಿಗೆ ಕನ್ನಡದ ನಾಟಕಗಳು ಬೇರೆ ಭಾಷೆಗೆ ಹೆಚ್ಚಾಗಿ ತರ್ಜುಮೆಯಾಗಿವೆ ಎಂದರೆ ಅವು ಗಿರೀಶ್ ಕಾರ್ನಾಡರ ನಾಟಕಗಳು. ನೀವು ಕೆಲವಾದರೂ ಇಂಥ ಕೊಡುಕೊಂಡ ನಾಟಕಗಳನ್ನು ನೋಡಿರುತ್ತೀರಿ. ಹೋಲಿಸಿ ನೋಡಿದಾಗ ನಿಮಗೇನನಿಸುತ್ತೆ?
ಅಹಲ್ಯ ಬಲ್ಲಾಳ್
ಹೋಲಿಕೆ ಮಾಡಿ ತೀರ್ಪು ನೀಡುವಷ್ಟು ಸ್ಟತಂತ್ರ ನಾಟಕಗಳನ್ನಾಗಲೀ ಅನುವಾದಿತ ನಾಟಕಗಳನ್ನಾಗಲೀ ನಾನು ನೋಡಿಲ್ಲ. ಇಷ್ಟು ಹೇಳಿದ ಮೇಲೆಯೂ ಮೊದಲು ನೆನಪಿಗೆ ಬರುವ ಉದಾಹರಣೆ ಎಂದರೆ ಕಾರ್ನಾಡರ ‘ಹಯವದನ’. ಎಷ್ಟೋ ವರ್ಷಗಳ ಹಿಂದೆ ಇಲ್ಲಿಯ ಸಭಾಗೃಹದಲ್ಲಿ ಅನನ್ಯ ಕಾಸರವಳ್ಳಿ ಪದ್ಮಿನಿಯ ಪಾತ್ರ ವಹಿಸಿದ್ದ, ‘ಬೆನಕ’ದವರ ಪ್ರಯೋಗ ನೋಡಿ ಮೆಚ್ಚಿಕೊಂಡಿದ್ದೆ.
ಆಮೇಲೆ ವಿದ್ಯಾ ವೆಂಕಟ್ರಾಮ್ ಅದೇ ಪಾತ್ರ ನಿರ್ವಹಿಸಿದ್ದು ನೋಡಿದೆ. ಹೆಚ್ಚು ಕಮ್ಮಿ ಒಂದೇ ಅನುಭವ. ಕೊನೆಗೊಮ್ಮೆ NCPAಯ ಹುಲ್ಲುಹಾಸಿನಲ್ಲಿ ಭಿನ್ನ ಶೈಲಿಯ ಇಂಗ್ಲಿಷ್ ಹಯವದನ ನೋಡಿದೆ. ಬೇರೆ ಭಾಷೆ, ಬೇರೆ ವಿನ್ಯಾಸ, ಬೇರೆಯದೇ ಅನುಭವ. ಮುಸ್ಸಂಜೆಯ ಬೆಳಕಿನಲ್ಲಿ ಬಿಳಿಯ ಉಡುಪು ಧರಿಸಿದ್ದ ಪದ್ಮಿನಿ ದೇವದತ್ತನನ್ನು ಅಣಕಿಸುತ್ತಾ ಓಡಾಡಿಕೊಂಡು ನಗುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹೀಗೂ ಮಾಡಬಹುದಲ್ವೆ, ಅನಿಸಿತ್ತು. ಹಾಗೆಯೇ ಬಿ. ಜಯಶ್ರೀಯವರ ನಾಗಮಂಡಲ ಮತ್ತು ಸತೀಶ್ ಆಲೇಕರ್ ನಿರ್ದೇಶನದ ಮರಾಠಿ ನಾಗಮಂಡಲ ನೋಡಿ ಎರಡನ್ನೂ ಇಷ್ಟಪಟ್ಟಿದ್ದೇನೆ.
ಜಯಲಕ್ಷ್ಮಿ ಪಾಟೀಲ್
ಒಳನಾಡಿನಲ್ಲಾದರೆ ನಮಗೆ ಇಲ್ಲಿ ರಂಗಶಿಕ್ಷಣ ಪಡೆದ ನಿರ್ದೇಶಕರು ಸಿಗುತ್ತಾರೆ. ನಿಮ್ಮನ್ನೂ ಒಳಗೊಂಡು ಮುಂಬಯಿ ಕನ್ನಡ ರಂಗಭೂಮಿಯ ನಿರ್ದೇಶಕರೆಲ್ಲ ಹವ್ಯಾಸಿ ನಿರ್ದೇಶಕರೇ. ಹಾಗಂತ ಹೇಳಿ ಮುಂಬಯಿ ನಿರ್ದೇಶಕರ ನಾಟಕಗಳು ಒಳನಾಡಿನ ನಾಟಕಗಳ ಸಮಸಮಕ್ಕೆ ನಿಲ್ಲಲಾರವು ಅಂತ ಯಾರಾದ್ರು ಅಂದುಕೊಂಡಿದ್ದಲ್ಲಿ ಅದು ಅವರ ತಪ್ಪು ಕಲ್ಪನೆ ಅಷ್ಟೇ ಅನ್ನೋದನ್ನ ನೀವೇ ‘ಮಾಯಾವಿ ಸರೋವರ’ ನಾಟಕವನ್ನ ನಿರ್ದೇಶಿಸುವ ಮೂಲಕ ನಿರೂಪಿಸಿದ್ದೀರಿ. ಇಷ್ಟಾಗಿಯೂ ನಿಮಗೆ ಮುಂಬಯಿ ಕನ್ನಡ ರಂಗಭೂಮಿಗೆ ರಂಗಶಿಕ್ಷಣದ ಅಗತ್ಯ ಇದೆ ಅನಿಸುತ್ತಾ?
ಅಹಲ್ಯ ಬಲ್ಲಾಳ್
ಒಳ್ಳೆಯ ಪ್ರಶ್ನೆ. ಇದು ನಾಟಕಕ್ಕೆ ಮಾತ್ರ ಅಲ್ಲ, ಯಾವುದೇ ಕಲಾ ಪ್ರಕಾರಕ್ಕೆ ಅನ್ವಯಿಸಬಹುದು ಅನಿಸುತ್ತೆ. ನನ್ನ ತರಬೇತಿಯ ಹಿನ್ನೆಲೆ ನೃತ್ಯ; ಹೀಗಾಗಿ ನಾಟಕಗಳನ್ನು ಮಾಡಿಸಲು ಬೇಕಾಗುವ ಕೌಶಲಗಳು ನನ್ನಲ್ಲಿಲ್ಲ ಎಂದೇ ನನಗನಿಸುವುದು. ‘ಮಾಯಾವಿ ಸರೋವರ’ ಮಾಡಿಸಿದಾಗಲೂ ಗೆಳೆಯಗೆಳತಿಯರ ಒತ್ತಾಸೆ, ಬೆಂಬಲವೇ ಹಿನ್ನೆಲೆಯಲ್ಲಿತ್ತು.
ಕಲೆಗಳ ವಿಷಯದಲ್ಲಿ ಶಿಕ್ಷಣ ಅಗತ್ಯವೇ ಎಂಬ ಪ್ರಶ್ನೆಗೆ ಬೇರೆಬೇರೆ ಜನ ಬೇರೆಬೇರೆ ಉತ್ತರಗಳನ್ನು ಕೊಡಬಹುದೇನೋ. ನಾಟಕದಂತಹ ಸಂಕೀರ್ಣ ಕಲೆಯ ವಿಚಾರದಲ್ಲಿ ಎಷ್ಟೊಂದು ಆಯಾಮಗಳಿವೆ; ಹವ್ಯಾಸಿ ಕಲಾವಿದರಿಗೆ, ಅದರಲ್ಲೂ ಯಾವ್ಯಾವುದೋ ವೃತ್ತಿಗಳನ್ನು ನಡೆಸುವ, ‘ನಾಟಕ್ ಕಾ ಕೀಡಾ’ ಇರುವ ಜನರಿಗೆ ಎಲ್ಲ ಆಯಾಮಗಳ ಪರಿಚಯ, ರಂಗಭೂಮಿಯಲ್ಲಿ ಇತ್ತೀಚೆಗೆ ಏನೇನು ನಡೆಯುತ್ತಿದೆ ಎಂಬುದರ ಅರಿವು ಇರೋದು ಕಡಿಮೆ.
ಅದಿದೆ ಎಂದು ನಿರೀಕ್ಷೆ ಮಾಡುವುದೂ ಯಾವ ನ್ಯಾಯ? ಅದೇ ಸಮಯಕ್ಕೆ ಇಲ್ಲಿಯ ಪ್ರಜ್ಞಾವಂತ ಪ್ರೇಕ್ಷಕರು ಬೇರೆ ಭಾಷೆಗಳ ಉತ್ತಮ ಪ್ರಯೋಗಗಳನ್ನೂ ನೋಡಿರುತ್ತಾರೆ. ಯಾವುದೋ ಒಂದು ನಿರೀಕ್ಷೆಯಿಂದ ಬರುವ ಕಲಾಸಕ್ತರ ಮನ ತಣಿಸುವ ನಿಟ್ಟಿನಲ್ಲಿಯಾದರೂ ಅಷ್ಟೋ ಇಷ್ಟೋ ರಂಗಶಿಕ್ಷಣ ಇದ್ದರೆ ಅದರಿಂದ ಪ್ರಯೋಜನವಿದೆ ಅನ್ನುವವರ ಗುಂಪಿಗೆ ಸೇರುವವಳು ನಾನು.
ಜಯಲಕ್ಷ್ಮಿ ಪಾಟೀಲ್
ಹೊರನಾಡು ರಂಗಭೂಮಿ ಒಳನಾಡಿನ ರಂಗಭೂಮಿಗಿಂತ ಭಿನ್ನ ಹೇಗೆ ಮತ್ತು ಎದುರಿಸುತ್ತಿರೊ ಸಮಸ್ಯೆಗಳ್ಯಾವವು?
ಅಹಲ್ಯ ಬಲ್ಲಾಳ್
ಹೊರನೋಟಕ್ಕೆ ನೋಡಿದರೆ ಒಳನಾಡಿನಲ್ಲಿ ಎಷ್ಟೊಂದು ಅವಕಾಶಗಳಿವೆ! ಎಷ್ಟೊಂದು ರಂಗಶಾಲೆಗಳು, ತರಬೇತಿ ಪಡೆದ ರಂಗ ಶಿಕ್ಷಕರು, ರೆಪರ್ಟರಿಗಳು, ನಾಟಕ ಅಕಾಡೆಮಿ ಮೊದಲಾಗಿ ರಂಗಭೂಮಿಗೇ ಮೀಸಲಾದ ಸಂಸ್ಥೆಗಳು. ಆ ಸೌಲಭ್ಯ ಇಲ್ಲಿಲ್ಲ. ಮಹಾನಗರದಲ್ಲಿ ಸ್ಥಳದ ಅಭಾವದಿಂದ ಹಿಡಿದು ಎಲ್ಲವೂ ಸವಾಲುಗಳೇ. ಮೊದಲೇ ಹೇಳಿದಂತೆ ಇಲ್ಲಿ ಉಮೇದಿಯೇ ಬಂಡವಾಳ.
ಸರಿ. ವಾಸ್ತವವನ್ನು ಒಪ್ಪಿಕೊಳ್ಳೋಣ. ಇರುವುದರಲ್ಲಿಯೇ ಸೃಷ್ಟಿಸುವುದು ನಾಟಕದವರ ಕೈಚಳಕ ತಾನೇ. ಹೀಗಾಗಿ ಇಲ್ಲಿಯ ಸಂಸ್ಥೆಗಳು ವರ್ಷಕ್ಕೆ ಒಂದಾದರೂ ಹೊಸ ನಾಟಕವನ್ನು ರಂಗಕ್ಕೇರಿಸುವುದು, ಏಕಾಂಕ ನಾಟಕ ಸ್ಪರ್ಧೆ ನಡೆಸುವುದು, ಆಗಾಗ ಒಳನಾಡಿನ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸುವುದು ಇಂತಹ ಚಟುವಟಿಕೆಗಳನ್ನು ಹೊಮ್ಮಿಕೊಳ್ಳುತ್ತಲೇ ಇರುತ್ತವೆ.
ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ, ಸಹೃದಯರಿಗೆ ಬೇಕಾಗಿರುವುದು ಒಳ್ಳೆಯ ಕಲಾನುಭವ. ಒಳನಾಡಿನವರಾಗಲೀ ಹೊರನಾಡಿನವರಾಗಲೀ ನಿಜವಾದ ಕಲಾವಿದರ ಹುಡುಕಾಟ ಒಂದೇ ಅಲ್ವೇ? ನಾನು ಏನು ಹೇಳಬೇಕೆಂದಿದ್ದೇನೆ, ಯಾವ ರೂಪದಲ್ಲಿ ಹೇಳಬೇಕು, ಯಾರಿಗೆ ಹೇಳಬೇಕು, ಅದನ್ನು ತಲುಪಿಸುವ ಪರಿ ಯಾವುದು ಎಂಬುದರ ನಿರಂತರ ಶೋಧವೇ ಕಲಾವಿದರ ಅಸಲಿ ಕಸುಬು ಅನ್ಸುತ್ತೆ. ನೀವೇನಂತೀರಿ?
ಜಯಲಕ್ಷ್ಮಿ ಪಾಟೀಲ್
ನಿರಂತರ ಶೋಧವೇ ಕಲಾವಿದರ ಅಸಲಿ ಕಸುಬು. ಹೂಂ ನೀವನ್ನೋದು ನಿಜ. ಅದೇ ರಂಗಭೂಮಿಯನ್ನು ಉಳಿಸಿಕೊಂಡು ಬೆಳೆಸುತ್ತಾ ಹೋಗುವ ಇಂಧನ ಕೂಡಾ. ಮುಂಬಯಿ ಕನ್ನಡ ರಂಗಭೂಮಿಯ ಹರಹು ಹೆಚ್ಚಾಗಬೇಕು ಎಂದಾದಲ್ಲಿ ಅಲ್ಲಿ ತುರ್ತಾಗಿ ಅಗತ್ಯವಾಗಿ ಆಗಬೇಕಾದ ಕೆಲಸಗಳೇನು?
ಅಹಲ್ಯ ಬಲ್ಲಾಳ್
ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ, ಪ್ರೇಕ್ಷಕರ ಅಭಿರುಚಿಯನ್ನು ರೂಪಿಸಲು ಅವಕಾಶಗಳನ್ನು ಸೃಷ್ಟಿಸಬಹುದು. ಒಮ್ಮೆಗೇ ದಿಢೀರ್ ಅಂತ ನಾಟಕ ಮಾಡಲಾಗದಿದ್ದರೂ ಅಥವಾ ಕಡಿಮೆ ಸಂಖ್ಯೆಯ ನಾಟಕಗಳೇ ರಂಗವೇರಿದರೂ ವರ್ಷದ ಉಳಿದ ಸಮಯದಲ್ಲಿ ಚಿಕ್ಕ ಪುಟ್ಟ ರಂಗ ಚಟುವಟಿಕೆಗಳನ್ನೂ ಸತತವಾಗಿ ಏರ್ಪಡಿಸಬಹುದು.
ಉದಾಹರಣೆಗೆ ನಾಟಕ ವಾಚನ, ಇಲ್ಲಿಯ ಜೀವನಶೈಲಿಗೆ ಹೊಂದುವಂತಹ ಕಾರ್ಯಾಗಾರಗಳು. ಈ ಹಿಂದೆ ಪೃಥ್ವಿ ಥಿಯೇಟರನ್ನು ನಡೆಸುತ್ತಿದ್ದ ಸಂಜನಾ ಕಪೂರ್ ಈಗ ಕೆಲವು ವರ್ಷಗಳಿಂದ ನಡೆಸುತ್ತಿರುವ ‘ಜುನೂನ್’ ಕಾರ್ಯಕ್ರಮ ನನಗೆ ತುಂಬ ಇಷ್ಟ. ಮಹಾನಗರದ 3 ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿ ತಿಂಗಳ ನಿರ್ದಿಷ್ಟ ದಿನ ಒಬ್ಬ ಕಲಾವಿದರಿಂದ ಅಥವಾ ವಿಜ್ಞಾನಿಯಿಂದ ಅವರ ಪಯಣವನ್ನು ಕುರಿತು ಮಾತುಕತೆಯ ಕಾರ್ಯಕ್ರಮ ಇರುತ್ತದೆ. ಇದರ ನಂತರ ಪ್ರಶ್ನೋತ್ತರ. ಆಸಕ್ತರಿಗೆ ಪ್ರತಿ ತಿಂಗಳೂ ಮಿಂಚಂಚೆ ಹೋಗುತ್ತದೆ- ನಿಮ್ಮ ಆಸನವನ್ನು ಕಾಯ್ದಿರಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ ಅಂತ.
ಒಂದು ಪುಸ್ತಕದ ಅಂಗಡಿ, ಒಂದು ವಾಚನಾಲಯ, ವಸ್ತುಸಂಗ್ರಹಾಲಯ ಸಮುಚ್ಚಯದ ಒಂದು ಕೊಠಡಿ-ಹೀಗೆ, ಸಭಾಗೃಹಗಳಲ್ಲದ ಮೂರು ಪರ್ಯಾಯ ಸ್ಥಳಗಳು. ಅವರ ಗುರಿಯೆಂದರೆ ಮಹಾನಗರದಲ್ಲಿ ಕಲಾನುಭವ ಹತ್ತಿರದಲ್ಲೇ, ಸುಲಭದಲ್ಲಿಯೇ ಸಿಗುವಂತಿರಬೇಕು. ಸರಿತಾ ಜೋಶಿ, ಮನೋಜ್ ಜೋಶಿ, ಮಕರಂದ ದೇಶ್ಪಾಂಡೆ, ಸೋನಾಲಿ ಕುಲಕರ್ಣಿ, ಸುನೀಲ್ ಶಾನ್ಭಾಗ್, ಮಹೇಶ್ ಎಳ್ಕುಂಚವಾರ್, ಎಮ್.ಎಸ್. ಸತ್ಯು, ಸ್ವಾನಂದ ಕಿರ್ಕಿರೆ, ಸತೀಶ್ ಆಲೇಕರ್, ಅನಾಮಿಕಾ ಹಸ್ಕರ್, ಶರ್ನಾಜ್ ಪಟೇಲ್, ದಿಲೀಪ್ ಪ್ರಭಾವಳ್ಕರ್, ರಾಮು ರಾಮನಾಥನ್, ಮೋಹನ್ ಅಗಾಶೆ, ಶುಭಾ ಮುದ್ಗಲ್, ಅನೀಶ್ ಪ್ರಧಾನ್ ಮೊದಲಾದ ಅನೇಕರ ಅನುಭವಗಳನ್ನು ಕೇಳುವ ಅತ್ಯುತ್ತಮ ಅವಕಾಶ ದೊರೆತ ಖುಶಿ ನನಗೆ.
ಇತರ ಭಾಷೆಯವರಿಗೂ ಈ ನಗರದಲ್ಲಿ ಹೆಚ್ಚುಕಮ್ಮಿ ನಮ್ಮದೇ ಸಮಸ್ಯೆಗಳು ಇರುವಾಗ ಅವರು ಏನು ಮಾಡುತ್ತಾರೆ? ಅತ್ತ ಕಣ್ಣು ಹಾಯಿಸಿ ಅವರಿಂದ ಪಡೆದುಕೊಳ್ಳೋದು..ಹೀಗೆ.
ಸಮಗ್ರ ನೋಟ ಇರುವವರ ಬಳಿ ಬಹಳಷ್ಟು ಪರಿಹಾರಗಳು ಇರಬಹುದೇನೋ. ಅಲ್ಲಿಯವರೆಗೆ ನನಗಿಷ್ಟ ಬಂದ ನಾಟಕಗಳನ್ನು ನೋಡಿಕೊಂಡು, ಅವಕಾಶ ಸಿಕ್ಕಾಗ ಅಭಿನಯಿಸಿ, ನನಗೆ ತಿಳಿದ ಒಳ್ಳೆಯ ಪ್ರಯೋಗಗಳ ಬಗ್ಗೆ ಇತರರಿಗೂ ತಿಳಿಸುವ ಇರಾದೆಯಂತೂ ಇದೆ.
ವೈದೇಹಿಯವರ ಸಾಲುಗಳು ಹೇಳುವಂತೆ:
“ಕದಳೀ ಸಸಿಗಳ ನಾಲ್ಕು ಸಾಕಿಕೊಂಡಿದ್ದೇನೆ
ಮನೆಯ ಹಿಂದಿನ ಹಿತ್ತಿಲಲ್ಲಿ
ನಿನ್ನ ನೆನಪಿಗೆ ನನ್ನ ಯಥಾನುಶಕ್ತಿ.”
ಜಯಲಕ್ಷ್ಮಿ ಪಾಟೀಲ್
ನಾಲ್ಕು ನಾನ್ನೂರಾಗಲಿ, ಅಕ್ಕನ ಧ್ಯಾನ ನಿಮ್ಮದಾಗಲಿ ಅಂತ ಹಾರೈಸ್ತಾ, ಅಂಥಾ ಒತ್ತಡಗಳ ನಡುವೆಯೂ ಬಿಡುವು ಮಾಡಿಕೊಂಡು ವಿವರವಾಗಿ ಮಾತಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಹಲ್ಯ ನಿಮಗೆ.
ರಂಗ ನೇಪಥ್ಯಕ್ಕೆ ಚಂದಾದಾರರಾಗಲು-







ಸಂದರ್ಶನ ಚೆನ್ನಾಗಿದೆ. ಅಹಲ್ಯಾ ಮತ್ತು ಜಯಲಕ್ಷ್ಮಿ ಇಬ್ಬರಿಗೂ ಅಭಿನಂದನೆಗಳು. ಅಹಲ್ಯಾ ಅವರು ಆಮ್ಚಿ ಮುಂಬೈನ ರಂಗಭೂಮಿಯ ಪ್ರತಿಭಾವಂತ ನಟಿ. ಅವರ ಪ್ರತಿಭೆಯನ್ನು ತಿಳಿಯಬೇಕಾದರೆ ಡಾ. ಭರತಕುಮಾರ್ ಪೊಲಿಪು ಅವರು ನಿರ್ದೇಶಿಸಿದ “ಅಂಬೆ” ನಾಟಕದ ಅಂಬೆ ಪಾತ್ರವನ್ನು ನೋಡಬೇಕು. ನಾಟಕದ ಕೊನೆಯ ದೃಶ್ಯದಲ್ಲಿ ಅವರದು ಅದೆಂಥ ಅದ್ಭುತ ಅಭಿನಯ! ಮನಸ್ಸನ್ನು ಗೆದ್ದ ಸಾಲ್ವ ಮತ್ತು ಸ್ವಯಂವರವನ್ನು ಗೆದ್ದ ಭೀಷ್ಮ- ಇಬ್ಬರಿಂದಲೂ ತಿರಸ್ಕೃತಗೊಳ್ಳುವ ಅಂಬೆ ತಿರಸ್ಕಾರ, ಅವಮಾನ, ಹತಾಶೆ, ನಿರಾಸೆ, ಸಿಟ್ಟು,ಛಲ- ಇವೆಲ್ಲವನ್ನೂ ಅಭಿನಯದಲ್ಲಿ ಹದಗೊಳಿಸುವ ರೀತಿ ಇಡೀ ನಾಟಕವನ್ನು ಎತ್ತಿ ಹಿಡಿಯುತ್ತದೆ. ಧ್ವನಿಯ ಏರಿಳಿತ ಮತ್ತು ಆಂಗಿಕ ಚಲನೆಗಳನ್ನು ಒಳಗುದಿಯ ಆಭಿವ್ಯಕ್ತಿಗೆ ದುಡಿಸಿಕೊಳ್ಳುವ ಪರಿ ಅನನ್ಯ. ಇಂಥ ಅಹಲ್ಯಾ ಅವರ ಜೊತೆಗೆ ಹಲವಾರು ಪ್ರದರ್ಶನಗಳಲ್ಲಿ ನಾನೂ ಅಭಿನಯಿಸಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ.
ಓಹ್! ಅಚಾನಕ್ಕಾಗಿ ಓದಲು ಸಿಕ್ಕಿತು. I want to hug u Ahalya….
Thanks Avadhi.
Avadhi, Gudihalli Nagraj Sir, JP, Rajiv, Sudhaamayi……..ನನ್ನಿ!