ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯ ಕುರಿತಂತೆ ಅಧಿಕಾರವಾಣಿಯಿಂದ ಮಾತಾಡಬಲ್ಲ ಕೆಲವೇ ಜನರಲ್ಲಿ ಒಬ್ಬರಾಗಿದ್ದ ವಸಂತರಾವ್ ಕುಲಕರ್ಣಿ, ಹೆಬ್ಬಳ್ಳಿ ಅವರು ಮೊನ್ನೆ ರಂದು 2016, ಜನವರಿ 24ರಂದು ತಮ್ಮ 87ನೆಯ ವಯಸ್ಸಿನಲ್ಲಿ ನಮ್ಮನ್ನು ಅಗಲಿದರು.ನನ್ನ ಅಜ್ಜನಿಗೆ, ಅವನ ಸ್ವಾಭಿಮಾನಕ್ಕೆ, ಸಾಧನೆಗೆ ನನ್ನದೊಂದು ಸಲಾಮ್!
ಹೋಗಿ ಬಾ ಅಜ್ಜ.. ಶಾಂತಿ ಸಿಗಲಿ ನಿನಗೆ… RIP …
Miss you 😞

ಮೂರು ತಿಂಗಳಿನ ಹಿಂದಿನ ವರೆಗೂ ಅವರು ನನಗೆ ಹದಿನೈದು ದಿನಕ್ಕೊಮ್ಮೆ ಫೋನ್ ಮಾಡುತ್ತಿದ್ದರು; ಹದಿನೈದಿಪ್ಪತ್ತು ನಿಮಿಷಗಳ ಕಾಲ ಸಾಹಿತ್ಯ, ರಂಗಭೂಮಿ ಕುರಿತು ಮಾತಾಡುತ್ತಿದ್ದರು. ಆ ಮಾತಿನಲ್ಲಿ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ಹಾಯ್ದು ಹೋಗುತ್ತಿದ್ದವು.
ಇದು ನನ್ನ ಅನುಭವ ಮಾತ್ರವಲ್ಲ, ಸಾಹಿತ್ಯ, ರಂಗಭೂಮಿಯಲ್ಲಿ ಕನಿಷ್ಠ ಆಸಕ್ತಿ ಇಟ್ಟುಕೊಂಡ, ಹುಬ್ಬಳ್ಳಿ-ಧಾರವಾಡಗಳ ಬಹುತೇಕರ ಅನುಭವ ಕೂಡ. ನನ್ನ ವಯದವರ ಜತೆಗಷ್ಟೇ ಅಲ್ಲ, ಶತಾಯುಷಿಗಳಾದ ಏಣಗಿ ಬಾಳಪ್ಪನವರು, ಕಣ್ಮರೆಯಾಗಿ ಹೋದ ಗರುಡ ಶ್ರೀಪಾದ ರಾಯರು, ಲೇಖಕ ಡಾ. ರಹಮತ್ ತರೀಕೆರೆ, ಪತ್ರಕರ್ತರು, ಕವಿಗಳು ಮತ್ತು ರಂಗಕರ್ಮಿಗಳಿಗೂ ವಸಂತರಾವ್ ಕುಲಕರ್ಣಿ ಬೇಕಾದವರಾಗಿದ್ದರು.
ಅವರೊಂದಿಗೆ ಮಾತಾಡಿ ಮುಗಿಸಿದಾಗೆಲ್ಲ ರಂಗಭೂಮಿ, ರಂಗ ನಟರು, ರಂಗ ಇತಿಹಾಸ ಇತ್ಯಾದಿಗಳ ಕುರಿತು ನನಗೊಂದಷ್ಟು ಅಪೂರ್ವ ಮಾಹಿತಿ ಸಿಗುತ್ತಿತ್ತು. ಅದಕ್ಕೇ ನಾನು, ಅಥವಾ ನನ್ನಂಥದೇ ಆಸಕ್ತಿ ಇರುವ ಎಲ್ಲರೂ ಮತ್ತೆ ಮತ್ತೆ ವಸಂತರಾವ್ ಕುಲಕರ್ಣಿಯವರತ್ತ ಮುಖ ಮಾಡುತ್ತಿದ್ದುದು. ನಾನಂತೂ ಅವರನ್ನು ‘ವೃತ್ತಿ ರಂಗಭೂಮಿಯ ಜೀವಂತ ಮಾಹಿತಿಕೋಶ’ ಎಂದೇ ಕರೆಯುತ್ತಿದ್ದೆ.
ವಸಂತರಾಯರೊಂದಿಗೆ ಮಾತಾಡಿ ಮುಖ ಸಿಂಡರಿಸಿಕೊಂಡು ಬಂದವರನ್ನೆಂದೂ ನಾನು ನೋಡಿಲ್ಲ ; ಮುಖ ಅರಳಿಸಿಕೊಂಡೆ ಬರಬೇಕು. ಯಾಕಂದರೆ ಅವರ ಜೊತೆ ಮಾತನಾಡುವುದೇ ಒಂದು ಸೊಗಸು. ಆ ಮಾತು ಅವರ ಮನೆಯಲ್ಲಿ ಆಗಬಹುದು, ಅವರು ಬಾಂಡ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ ರಿಜಿಸ್ಟ್ರಾರ್ ಕಚೇರಿಯ ಆವರಣವೇ ಆಗಬಹುದು , ನಮ್ಮ ಕಚೇರಿಯ ಕ್ಯಾಂಟೀನೇ ಆಗಬಹುದು ಅಥವಾ ಹುಬ್ಬಳ್ಳಿಯ ಮುನಿಸಿಪಲ್ ಕಾರ್ಪೋರೇಶನ್ ಕಚೇರಿಯ ಆಸುಪಾಸಿನ ಯಾವುದೇ ರಸ್ತೆ ಆಗಬಹುದು. ಅಲ್ಲಿ ಜಾಗ ಮುಖ್ಯವಾಗುತ್ತಿರಲಿಲ್ಲ ; ಚರ್ಚೆ, ಮಾತು-ಕತೆ ಮುಖ್ಯವಾಗುತ್ತಿತ್ತು.
ಆಗೀಗ ಸಂಜೆ ಐದೂವರೆಯ ನಂತರ ಒಮ್ಮೊಮ್ಮೆ ಅವರು ನಮ್ಮ ಪತ್ರಿಕಾಲಯಕ್ಕೆ ಬರುವುದಿತ್ತು. ಯಾವುದೋ ಒಬ್ಬ ಅಭಿಜಾತ ರಂಗ ಕಲಾವಿದನ ಕುರಿತ ಲೇಖನವನ್ನೋ, ಸುಪ್ರಸಿದ್ಧ ಕಂಪನಿಯೊಂದರ ಒಂದು ಮುಖ್ಯ ಪ್ರಸಂಗವನ್ನೋ ಲೇಖನರೂಪಕ್ಕಿಳಿಸಿದ ಹಸ್ತಪ್ರತಿಯನ್ನು ತರುವುದಿತ್ತು. ಅದು ನೆಪ ಮಾತ್ರ. ಅವರಿಗೆ ನಮ್ಮೊಂದಿಗೆ ಹರಟೆ ಹೊಡೆಯಬೇಕಿರುತ್ತಿತ್ತು ; ನಮಗೆ ಅವರೊಂದಿಗೆ ಮಿರ್ಚಿ-ಮಂಡಕ್ಕಿ, ಚಹಾ ಭಕ್ಕರಿಸುವುದಿರುತ್ತಿತ್ತು.
ಹೀಗೆ ಅವರು ಬರುವಾಗ ಒಮ್ಮೊಮ್ಮೆ ಹಿರಿಯರಾದ ಏಣಗಿ ಬಾಳಪ್ಪನವರೂ ಜತೆಗಿರುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ‘ಕಸ್ತೂರಿ’ ಪತ್ರಿಕೆಗೂ ಏಣಗಿ ಬಾಳಪ್ಪನವರಿಗೂ ಬಲು ಹಳೆಯ ಸಂಬಂಧ. 1960ರ ದಶಕದ ಕೊನೆಯ ತನಕ ಪಾವೆಂ ಆಚಾರ್ಯರ ಜತೆಗೆ ‘ಕಸ್ತೂರಿ’ಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ ಹೆಗಡೆ ಎಂಬ ಹಿರಿಯ ಪ್ರತಿಭಾವಂತರೊಬ್ಬರು ವೃತ್ತಿ ರಂಗಭೂಮಿ ನಾಟಕಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಅವರು ಬರೆದ ಸುಮಾರು ಹನ್ನೆರಡು
ನಾಟಕಗಳನ್ನು ತಮ್ಮ ‘ಕಲಾವೈಭವ ನಾಟ್ಯ ಸಂಘ, ಬೆಳಗಾವಿ’ಯ ಮೂಲಕ ಏಣಗಿ ಬಾಳಪ್ಪನವರು ಅಭಿನಯಿಸುತ್ತಿದ್ದರು, ಅವು ನೂರಾರು ಪ್ರದರ್ಶನಗಳನ್ನು ಕಾಣುತ್ತಿದ್ದವು. ಹೀಗಾಗಿ ನಮ್ಮ ಕಚೇರಿಗೆ ಬಂದರೆ ಏಣಗಿ ಬಾಳಪ್ಪನವರಿಗೆ ಎಲ್ಲಿಲ್ಲದ ಸ್ವಾಗತ, ಮರ್ಯಾದೆ. ಇದು 1999ರ ಕೊನೆಯವರೆಗೂ ಅಂದರೆ ನಾನು ಪತ್ರಿಕೋದ್ಯಮದಿಂದ ಹೊರಬೀಳುವವರೆಗೂ ನಡೆದುಕೊಂಡು ಬಂತು.
ಆಗ ಏಣಗಿ ಬಾಳಪ್ಪನವರ ಮಗ ಡಾ. ಬಸವರಾಜ ಏಣಗಿ ಹುಬ್ಬಳ್ಳಿಯಲ್ಲೇ ಇದ್ದರು. ಮಗನ ಮನೆಯಿಂದ ನಗರ ಸಾರಿಗೆಯ ಬಸ್ಸಿನಲ್ಲೇ ಬರುತಿದ್ದ ಈ ಎಂಬತ್ತು ದಾಟಿದ ಹಿರಿಯ ಏಣಗಿ ಬಾಳಪ್ಪನವರಿಗೆ ಮಹಾನಗರ ಸಭೆ ಕಚೇರಿಯ ಬಳಿ ವಸಂತರಾವ್ ಜೊತೆಯಾಗುತ್ತಿದ್ದರು ಆಮೇಲೆ ನಾನು ಜತೆಗೂಡುತ್ತಿದ್ದೆ. ಸಮೀಪದ ‘ಹುಬಳಿ ರೆಸ್ಟೋರಂಟ್’ ಸೇರಿದರೆ ಮುಗಿಯಿತು ; ರಂಗಭೂಮಿ ಇತಿಹಾಸದ ಒಂದೊಂದೇ ಪುಟ ಅನಾವರಣಗೊಳ್ಳುತ್ತಿತ್ತು. ಇದೇ ರೀತಿಯ ಅವರ ಸಖ್ಯ ಹಿರಿಯ ನಟ ಗರುಡ ಶ್ರೀಪಾದರಾಯರೊಂದಿಗೂ ಇತ್ತು;
ಅಂದ ಹಾಗೆ ಯಾರು ಈ ವಸಂತರಾವ್ ಎಂಬುದನ್ನು ಮೊದಲು ನಿಮಗೆಲ್ಲ ಹೇಳಿಯೇ ಮುಂದುವರಿಯುವುದೊಳಿತು.
ಗಂಡಸರೆಲ್ಲ ವಯಸ್ಸಿನ ಒಂದು ಹಂತದಲ್ಲಿ ಸಾಹಿತ್ಯ-ಸಂಗೀತ-ಕಲೆ-ನಾಟಕಾದಿಗಳತ್ತ ಆಸಕ್ತರಾಗುವುದು ಕಳೆದ ಶತಮಾನದ ಆರಂಭ ದಶಕದಿಂದ ಎಪ್ಪತ್ತರ ದಶಕದವರೆಗೂ ಚಾಲ್ತಿಯಲ್ಲಿದ್ದಂಥ ಹವ್ಯಾಸ. ಅದರಲ್ಲೂ ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಸಿನಿಮಾ ಎಲ್ಲರ ಕೈಗೆಟಕುವ ಮನರಂಜನೆ ಆಗಿರಲಿಲ್ಲ. ಶಾಸ್ತ್ರೀಯ ಸಂಗೀತ ಉಳ್ಳವರ ಸ್ವತ್ತಾಗಿತ್ತು. ಅಂಥ ಸಂದರ್ಭದಲ್ಲಿ ಜನಸಾಮಾನ್ಯರನ್ನು ಸೆಳೆಯಲು, ಸಮಾಧಾನಪಡಿಸಲು ಯಶಸ್ವಿಯಾದದ್ದು ವೃತ್ತಿ ರಂಗಭೂಮಿ ನಾಟಕಗಳು ಮಾತ್ರ ಸಾಮಾಜಿಕ ಕಳಕಳಿಯ ನಾಟಕಗಳು, ಭಕ್ತಿಪ್ರಧಾನ ನಾಟಕಗಳು, ದೇಶಭಕ್ತಿಯನ್ನು ಬಿತ್ತುತ್ತಾ ಬ್ರಿಟಿಶರ ವಿರುದ್ಧ ಜನಮನವನ್ನು ರೂಪಿಸುವಂಥ ನಾಟಕಗಳು ಜನಕ್ಕೆ ಇಷ್ಟವಾದವು.
ಎಷ್ಟೋ ಜನ ಅವುಗಳನ್ನು ಬಲು ಗಂಭೀರವಾಗಿ ಪರಿಗಣಿಸಲು ತೊಡಗಿದರು. ಅಂಥವರಲ್ಲಿ ಒಬ್ಬರು ಈ ವಸಂತರಾವ್ ಕುಲಕರ್ಣಿ ಎಂದರೆ ಏನೂ ಹೇಳಿದಂತಾಗುವುದಿಲ್ಲ ; ಅವರು ಆಗಿನ ವೃತ್ತಿ ರಂಗಭೂಮಿ ಮತ್ತು ರಂಗಭೂಮಿ ನಾಟಕಗಳನ್ನು ತಮ್ಮ ಜೀವಕ್ಕಿಂತ ಹೆಚ್ಚು ಹಚ್ಚಿಕೊಂಡರು. ಅದೆಷ್ಟು ಹಚ್ಚಿಕೊಂಡರೆಂದರೆ, ಉಪಜೀವನಕ್ಕೆ ಅಂತ ಹಿಡಿದಿದ್ದ ತಲಾಠಿ (ಶಾನುಭೋಗಿಕೆ) ಹುದ್ದೆಗೆ ರಾಜೀನಾಮೆ ಕೊಟ್ಟು ಅವರು ವೃತ್ತಿ ನಾಟಕ ಕಂಪನಿಯೊಂದರಲ್ಲಿ ನಟರಾಗಿ ಸೇರಿಕೊಂಡರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿಯವರು ಈ ವಸಂತರಾವ್. ಮನೆ ದೇವತೆಯ ಅರ್ಚನೆಯ ಸಂದರ್ಭದಲ್ಲಿ ವೇಷ ತೊಟ್ಟು ದೇವಾಲಯಕ್ಕೆ ಹೋಗುತ್ತಿದ್ದ ವಸಂತರಾಯರಿಗೆ (ಜನನ :1930) ಅಭಿನಯದತ್ತ ಆಕರ್ಷಣೆ ಹುಟ್ಟಿದ್ದು ಆ ಹೊತ್ತಿನಲ್ಲೇ. ಆಗ ಓಣಿಯಲ್ಲಿ ರೈತಾಪಿ ಜನರೆಲ್ಲಾ ಸೇರಿ ವರ್ಷಕ್ಕೊಮ್ಮೆ ದೊಡ್ಡಾಟಗಳನ್ನು ಆಡುವುದು ವಾಡಿಕೆ. ಹಳ್ಳಿಯಲ್ಲಿ ಹುಟ್ಟಿದ ನನ್ನಂಥವರಿಗೇ ಗೊತ್ತು ದೊಡ್ದಾಟದ ಆಕರ್ಷಣೆ. ಹೆಬ್ಬಳ್ಳಿ ಸಮೀಪದ ಬೆಳವಲಕೊಪ್ಪದ ಜನ ದೊಡ್ಡಾಟ ಏರ್ಪಡಿಸಿದಾಗ ವಸಂತರಾಯರಿಗೆ ಇನ್ನೂ ಹದಿನಾಲ್ಕು ವರ್ಷ ವಯಸ್ಸು. ಈ ತೇಜಸ್ವಿ ಬಾಲಕನಿಗೆ ಆಗ ಒಲಿದುಬಂದದ್ದು ‘ವೀರ ಅಭಿಮನ್ಯು’ವಿನ ಪಾತ್ರ. ಮುಂದೆ ಮೂರೇ ವರ್ಷಕ್ಕೆ ಕಂದಗಲ್ ಹನುಮಂತರಾಯರ ‘ಅಕ್ಷಯಾಂಬರ’ ನಾಟಕದಲ್ಲಿ ಕೃಷ್ಣನಾಗಿ ಅಭಿನಯಿಸಿ ಜನಮನ ಸೂರೆಗೊಂಡರು. ಆಗ ವಸಂತರಾಯರಿನ್ನೂ ಹದಿನೇಳರ ಹರಯದ ಹುಮ್ಮಸ್ಸಿನ ಹುಡುಗ.
ಹಾಂ, ಕಂದಗಲ್ ಹನುಮಂತರಾಯರ ‘ಅಕ್ಷಯಾಂಬರ’ ನಾಟಕ ಎಂದೆ. ಗೊತ್ತಿರದ ಜನರ ಸಲುವಾಗಿ ಕಂದಗಲ್ ಹನುಮಂತರಾಯರ ಕುರಿತಾಗಿ ಒಂದಷ್ಟು ಮಾಹಿತಿ ನೀಡಲೇಬೇಕು. ನಮ್ಮ ಪುರಾಣಗಳನ್ನು ಅರೆದುಕುಡಿದಿದ್ದ ಪಂಡಿತ ಈ ಕಂದಗಲ್ ಹನುಮಂತರಾಯರು. ಅವರನ್ನು ‘ಕರ್ನಾಟಕದ ಶೇಕ್ಸ್ ಪಿಯರ್’ ಎಂಬ ಉಪಾಧಿಯಿಂದ ಕರೆಯುವುದಿದೆ. ಅವರ ಭಾಷೆ, ಬಳಸುವ ಪದಗಳು, ಸೃಷ್ಟಿಸುವ ಸನ್ನಿವೇಶಗಳು ಎಲ್ಲವೂ ಆ ಕಾಲಕ್ಕೆ ರಂಗಭೂಮಿಯಲ್ಲಿ ಒಂದು ಸಂಚಲನವನ್ನು ಹುಟ್ಟಿಸಿದವು.
ಅವರ ನಾಟಕಗಳೆಂದರೆ ನವರಸಗಳ ಘಟ್ಟಿ. ಕಬ್ಬಿಣದ ಕಡಲೆಯಂತೆ ತೋರುತ್ತಿದ್ದ ಅವರ ಒಂದೊಂದು ಸಂಭಾಷಣೆಯೂ ನಟನಿಗೆ ಸವಾಲಿನಂತಿರುತ್ತಿತ್ತು. ಒಂದೊಂದು ಪುಟ ವಿಸ್ತಾರದ್ದು ಅವರ ನಾಟಕಗಳ ಸಂಭಾಷಣೆ. ಆ ಎಲ್ಲ ಉಚ್ಹಾರಶುದ್ಧಿ, ಭಾವತೀವ್ರತೆ, ಧ್ವನಿಯ ಏರಿಳಿತ ಮತ್ತು ತಕ್ಕ ಹಾವ-ಭಾವಗಳೊಂದಿಗೆ ಅವನ್ನು ಸಮರ್ಥವಾಗಿ ನುಡಿಯಬಲ್ಲಾತ ರಂಗಭೂಮಿಯ ಮೇಲೆ ಗೆಲ್ಲಬಲ್ಲಾತನೂ ಆಗಿರುತ್ತಿದ್ದ. ಅಂಥವರಲ್ಲೇ ಅಗ್ರಗಣ್ಯರೆನಿಸಿದವರು ಎಲಿವಾಳ ಸಿದ್ಧಯ್ಯ ಸ್ವಾಮಿ, ಸುಭದ್ರಮ್ಮ ಮನ್ಸೂರು ಮುಂತಾದವರು. ‘ರಕ್ತರಾತ್ರಿ’ ಪೌರಾಣಿಕ ನಾಟಕದಲ್ಲಿ ಎಲಿವಾಳ ಸಿದ್ಧಯ್ಯ ಸ್ವಾಮಿ ವಹಿಸುತ್ತಿದ್ದ ಅಶ್ವತ್ಥಾಮನ ಪಾತ್ರವನ್ನು ಅವರಷ್ಟು ಹರಿಣಾಮಕಾರಿಯಾಗಿ ನಿರ್ವಹಿಸಬಲ್ಲ ಮತ್ತೊಬ್ಬ ನಟನನ್ನು ನಾವು ಕಂಡಿಲ್ಲ. (ಎಲಿವಾಳ ಸಿದ್ಧಯ್ಯ ಸ್ವಾಮಿ ನೆನಪಿದೆಯೇ ನಿಮಗೆ ? ಅದೇ, ಐವತ್ತರ ದಶಕದಲ್ಲಿ ತೆರೆಕಂಡ ‘ಶ್ರೀಕೃಷ್ಣ ಗಾರುಡಿ’ ಚಿತ್ರದಲ್ಲಿ ಕೃಷ್ಣನಾಗಿ ಅಮೋಘ ಅಭಿನಯ ನೀಡಿದ ಅದ್ಭುತ ರಂಗ ಕಲಾವಿದ. ನಮ್ಮ ಚಿತ್ರರಂಗ ಪ್ರೊತ್ಸಾಹಿಸಲಿಲ್ಲವಾದ ಕಾರಣ ಎಲಿವಾಳ ಸಿದ್ಧಯ್ಯ ಸ್ವಾಮಿ ರಂಗಭೂಮಿಯಲ್ಲೇ ಮುಂದುವರಿದರು.)
ಹಾಂ, ಹದಿನೇಳನೆಯ ವಯಸ್ಸಿನಲ್ಲಿ ನಮ್ಮ ವಸಂತರಾಯರು ಕಂದಗಲ್ ಹನುಮಂತರಾಯರ ‘ಅಕ್ಷಯಾಂಬರ’ ನಾಟಕದಲ್ಲಿ ಕೃಷ್ಣನಾಗಿ ಅಭಿನಯಿಸಿ ಜನಮನ ಸೂರೆಗೊಂಡರು ಎಂದೆನಲ್ಲ, ಅಲ್ಲಿಂದಾಚೆ ಅವರು ನಾಟಕಗಳ ಹುಚ್ಚು ಹಚ್ಚಿಕೊಂಡುಬಿಟ್ಟರು. ಗ್ರಾಮೀಣ ಜನರ ಒತ್ತಾಯದ ಮೇರೆಗೆ ವೃತ್ತಿ ಕಂಪನಿಯ ಮಾದರಿಯ ನಾಟಕಗಳತ್ತ ಒಲವು ತೋರಿದರು. ಕಂದಗಲ್ಲರ ಸರಳ ರಗಳೆಯ ಭಾಷೆಯ ಮೋಡಿಯಿಂದ ಹೊರಬರಲಾಗದೇ ಆ ಮಹಾ ನಾಟಕಕಾರನ ಸನ್ನಿಧಿಯಲ್ಲಿ ಹೋಗಿ ನಿಂತರು. ಮೊನ್ನೆ ಮೊನ್ನೆಯ ತನಕ ವಸಂತರಾಯರ ಬಾಯಿಂದ ಹೊಮ್ಮುತ್ತಿದ್ದ ಕಂದಗಲ್ಲರ ನುಡಿಗಡಣವನ್ನು ಆಲಿಸಿ ನಾನು ‘ಆs’ ಎಂದು ಬಾಯಿ ತೆರೆದು ಕೂತದ್ದಿದೆ. ನಾನಿಲ್ಲಿ ಬೆಂಗಳೂರಿಗೆ ಬಂದ ಮೇಲೆ, ಸುಭದ್ರಮ್ಮ ಮನ್ಸೂರ್ ಮುಂತಾದವರು ಅಭಿನಯಿಸಿದ ‘ರಕ್ತರಾತ್ರಿ’ ನಾಟಕ ನೋಡುತ್ತಿದ್ದಾಗ ನನಗೆ ಕಣ್ಣೆದುರು ನಿಲ್ಲುತ್ತಿದ್ದುದು ನಮ್ಮ ವಸಂತರಾಯರೇ.
ಕಂದಗಲ್ ಹನುಮಂತರಾಯರ ಸನ್ನಿಧಿಯಲ್ಲಿ ಬರವಣಿಗೆಗೆ ತೊಡಗಿದ ವಸಂತರಾಯರ ರಂಗಪ್ರೇಮ, ಅವರಿಗೆ ತಲಾಠಿ (ಶಾನುಭೋಗಿಕೆ) ಕೆಲಸ ದೊರೆತ ಮೇಲೆಯೂ ಮುಂದುವರಿಯಿತು. ಆಲ್ಲಿಂದ ಶುರುವಾಯಿತು ಅವರ ಗಂಭೀರ ಅಧ್ಯಯನದ ಅಧ್ಯಾಯ. ಆ ಕಾಲದ ಎಲ್ಲ ವೃತ್ತಿ ಕಂಪನಿ ಮಾಲಿಕರ, ನಟ-ನಟಿಯರ ಸಂಪರ್ಕಕ್ಕೆ ಬಂದ ವಸಂತರಾಯರು ಅವರೆಲ್ಲರ ಪಾಲಿಗೆ ಒಂದು ರೀತಿಯಲ್ಲಿ ಆಪದ್ಬಂಧುವಾಗಿ ನಿಂತದ್ದೂ ನಿಜ. ಅಷ್ಟೇ ಅಲ್ಲ, ಸುಳ್ಳದ ದೇಸಾಯರ ‘ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಕಂಪನಿ’, ಗುಡಗೇರಿ ಬಸವರಾಜರ ‘ಶ್ರೀ ಸಂಗಮೇಶ್ವರ ನಾಟ್ಯ ಸಂಘ’ಗಳಲ್ಲಿ ನಟನಾಗಿಯೂ ಅವರು ಪ್ರವೇಶ ಪಡೆದರು. ಇದರಿಂದ ಕಲಾವಿದರೊಂದಿಗಿನ ಆತ್ಮೀಯತೆ ಹೆಚ್ಚಿ, ನಂತರದ ಪೀಳಿಗೆಯ ಕಲಾವಿದರೆಲ್ಲರ ಪ್ರೀತಿಯ ‘ಕಾಕಾ’ ಆಗಿ ನಿಂತರು ವಸಂತರಾಯರು.
ತಮ್ಮ ಸಾಹಿತ್ಯ ಪ್ರೇಮ, ಭಾಷಾ ಪ್ರೌಢಿಮೆಗಳ ಕಾರಣದಿಂದ ವಸಂತರಾಯರು ಮತ್ತೊಬ್ಬ ಹಿರಿಯ ನಾಟಕಕಾರ ನಲವಡಿ ಶ್ರೀಕಂಠಶಾಸ್ತ್ರಿಗಳ ಪ್ರೀತಿಗೆ ಪಾತ್ರರಾದರು. ಅವರ ಪ್ರೇರಣೆಯ ಮೇರೆಗೆ ರಂಗಭೂಮಿಯ ದಿಗ್ಗಜರ ಕುರಿತು ಲೇಖನಗಳನ್ನು ಬರೆಯಲು ಆರಂಭಿಸಿದರು. ಕಂದಗಲ್ಲರ ಭಾಷಾ ಸಂಪತ್ತು, ನಲವಡಿಯವರ ಜ್ಞಾನ ಸಂಪತ್ತುಗಳೆರಡರ ಲಾಭವನ್ನು ಪಡೆದ ವಸಂತರಾಯರ ಬರವಣಿಗೆಯ ಮೆರುಗೇ ವಿಶೇಷವಾದದ್ದು. ಆ ಇಬ್ಬರ ಬಗ್ಗೆಯೂ ವಸಂತರಾಯರಿಗೆ ಇನ್ನೆಲ್ಲಿಲ್ಲದ ಗೌರವ ಭಾವ. ಕಂದಗಲ್ಲರ ಶಿಷ್ಯರನ್ನೆಲ್ಲ ಒಂದೆಡೆ ಸೇರಿಸಿ, ವಸಂತರಾಬ್ ಕುಲಕರ್ಣಿಯವರು ಸಂಘಟಿಸಿದ್ದ ಅದ್ಭುತ ಕಾರ್ಯಕ್ರಮವೊಂದನ್ನು ನೆನಪಿಸಿಕೊಳ್ಳುವ ಜನ ಇನ್ನೂ ಇದ್ದಾರೆ.
ರಂಗಭೂಮಿಗೆ ಸಂಬಂಧಿಸಿದ ಯಾವುದೇ ರೀತಿಯ ನೆರವಿಗೂ ವಸಂತರಾಯರು ಸದಾ ಸಿದ್ಧರಾಗಿರುತ್ತಿದ್ದರು. ನನಗೊಮ್ಮೆ ಕೆಲವೊಂದು ಹಳೆಯ ಕಂಪನಿಗಳ ಕುರಿತ ಮಾಹಿತಿ ಬೇಕಾಯಿತು. ಅವರೆದುರು ಪ್ರಸ್ತಾಪಿಸಿದೆ. ಮುಂದಿನ ವಾರವೇ ಅವರು ಸಂಬಂಧಿಸಿದ ವ್ಯಕ್ತಿಗಳು ಎಲ್ಲಿರುವರೆಂಬುದನ್ನು ಪತ್ತೆ ಹಚ್ಚಿ, ನನ್ನನ್ನು ಅವರ ಬಳಿಗೆ ಕರೆದೊಯ್ದಿದ್ದರು. ಇದೆ ರೀತಿಯ ನೆರವನ್ನು ಅವರು ವೃತ್ತಿ ರಂಗಭೂಮಿ ಕುರಿತ ಪಿಎಚ್.ಡಿ. ವಿದ್ಯಾರ್ಥಿಗಳಿಗೂ ನೀಡಿದ್ದುಂಟು. ಡಾ. ರಹಮತ್ ತರೀಕೆರೆಯವರಂಥ ಲೇಖಕರೂ ಮಾಹಿತಿ ಬಯಸಿ ವಸಂತರಾಯರ ಬರುತ್ತಿದ್ದುದುಂಟು.
ನಾಡಿನ ಹಿರಿಯ ರಂಗ ಕಲಾವಿದರ ಭಾವಚಿತ್ರಗಳನ್ನು ಸಂಗ್ರಹಿಸಿ, ಮಾಹಿತಿ ಸಮೇತ ಒಂದು ಹೊತ್ತಿಗೆಯನ್ನು ಹೊರತರುವ ಉದ್ದೇಶ ಅವರಿಗಿತ್ತು. ಅದು ಕಾರ್ಯರೂಪಕ್ಕೆ ಬಂತೋ ಇಲ್ಲವೋ ತಿಳಿಯದು. ಉಳಿದ ಕಲಾವಿದರಿಗೆ ಪ್ರಶಸ್ತಿ, ಪಿಂಚಣಿ, ವೈದ್ಯಕೀಯ ನೆರವು, ನಿವೇಶನ ಕೊಡಿಸುವುದರತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವರು ವಸಂತರಾಯರು. ತಮ್ಮ ಬಗ್ಗೆ ಎಂದೂ ಯೋಚಿಸಿದವರಲ್ಲ, ಪ್ರಶಸ್ತಿಗಾಗಿ ಯಾಚಿಸಿದವರಲ್ಲ. ಅವರ ಅಪಾರ ರಂಗಭೂಮಿ
ಸೇವೆಯನ್ನು ಗಮನಿಸಿ, ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಜ್ಯೋತ್ಸವ ಗೌರವ ಮತ್ತಿತರ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ವಸಂತರಾಯರನ್ನು ಅರಸಿಕೊಂಡು ಬಂದಿವೆ.
ಎರಡು ದಶಕಗಳ ಹಿಂದೆ ಅವರು ಹೇಳಿದ ಒಂದು ಪ್ರಸಂಗವನ್ನು ಅವರಿಗೆ ಬಾನುಲಿ ನಾಟಕವಾಗಿ ಬರೆದುಕೊಟ್ಟೆ. ಅದು ಧಾರವಾಡ ಆಕಾಶವಾಣಿಯಿಂದ ಪ್ರಸಾರವೂ ಆಯಿತು. ”ಹಂದಿಗನೂರ ಸಿದ್ರಾಮಪ್ಪನ ಬಗ್ಗೆನೂ ಒಂದು ನಾಟಕಾ ಬರಿಯೂಣ್ರೀ ಸಾಹೇಬ್ರs …” ಎಂದು ಮುಂದೊಮ್ಮೆ ಹೇಳಿದ್ದರು. ನಾನು ಹುಬ್ಬಳ್ಳಿ-ಹೈದರಾಬಾದು-ಬೆಂಗಳೂರು ಅಂತ ತಿರುಗಾಡತೊಡಗಿದ್ದರಿಂದ ಅದು ಸಾಧ್ಯವಾಗಲೇ ಇಲ್ಲ.
ಆದರೂ ನಾನು ಭೆಟ್ಟಿಯಾದಾಗೆಲ್ಲ ತಮ್ಮ ಯಾವುದೋ ಒಂದು ಯೋಜನೆಯ ಬಗ್ಗೆ ಹೇಳುತ್ತಿದ್ದರು. ಇಲ್ಲವೇ, ಯಾವುದೋ ಒಬ್ಬ ಕಲಾವಿದನ ಬಗ್ಗೆ ಯಾವುದೋ ಪತ್ರಿಕೆಯಲ್ಲಿ ಬರೆದ ಲೇಖನದ ನಕಲು ನನ್ನತ್ತ ಚಾಚುತ್ತಿದ್ದರು.
”ಇವೆಲ್ಲ ಹೀಗೆ ಬಿಡಿ ಲೇಖನಗಳಾಗಿ ಉಳಿಯಬಾರದು. ಇವೆಲ್ಲ ಒಂದು ಸಂಕಲನದ ರೂಪದಲ್ಲಿ ಪುಸ್ತಕವಾಗಿ ಬರಬೇಕು,” ಅಂತ ನಾನು ಅವರನ್ನು ಒತ್ತಾಯಿಸುತ್ತಲೇ ಇದ್ದೆ. ಆದರೆ, ಅದು ಈಡೇರಲೇ ಇಲ್ಲ. ಅವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೆಂದರೆ ‘ಪ್ರಸಾಧನ ಪಟು ಗಜಾನನ ಮಹಾಲೆ’ ಕುರಿತ ಕಿರು ಪುಸ್ತಕ. ಕರ್ನಾಟಕ ನಾಟಕ ಅಕಾಡೆಮಿಯ ಒತ್ತಾಸೆಯ ಮೇರೆಗೆ ಬರೆದದ್ದು ಅದು. ಅವರ ಮಾಹಿತಿ ಕೇವಲ ಪತ್ರಿಕಾ ಲೇಖನಗಳಿಗೆ ಸೀಮಿತವಾದದ್ದು ನಮಗಾದ ನಷ್ಟವೇ ಸೈ.
ಈಗಲೂ ಕಾಲ ಮೀರಿಲ್ಲ. ಅವರು ಬರೆದ ಲೇಖನಗಳನ್ನು ಸಂಪಾದಿಸಿ ಪುಸ್ತಕರೂಪದಲ್ಲಿ ತಂದರೆ ಅದು ವೃತ್ತಿ ರಂಗಭೂಮಿಯ ಅಧ್ಯಯನ ಮಾಡುವವರಿಗೆ ದೊಡ್ಡ ಆಕರ ಎನಿಸುತ್ತದೆ.
ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ ಒಂದು ಹೃದಯ ಇದ್ದಕ್ಕಿದ್ದಂತೆ ನಿಂತು ಹೋಗಿದೆ. ಆದರೆ, ಆ ಅಂತಃಕರಣದ ಅನುಭವ ಮಾತ್ರ ಸದಾ ಕಾಲಕ್ಕೂ ನನಗಾಗುತ್ತಲೇ ಇರುತ್ತದೆ.
ಆ ಅಂತಃಕರಣಕ್ಕೆ ಒಂದು ಸಲಾಮು.





“ನನ್ನ ಅಜ್ಜನಿಗೆ, ಅವನ ಸ್ವಾಭಿಮಾನಕ್ಕೆ, ಸಾಧನೆಗೆ ನನ್ನದೊಂದು ಸಲಾಮ್! ಹೋಗಿ ಬಾ ಅಜ್ಜ.. ಶಾಂತಿ ಸಿಗಲಿ ನಿನಗೆ…” ಎಂದ ಸಲಾಮಿನಲ್ಲಿ ಕನ್ನಡ ರಂಗ ರಸಿಕರೆಲ್ಲರ ಸಲಾಮುಗಳೂ ಸೇರುತ್ತವೆ. ಕೊನೆಗಾಲದಲ್ಲಿ “ಕರ್ನಾಟಕದ ಶೇಕ್ಸ್ ಪಿಯರ್”-ಕಂದಗಲ್ ಹನುಮಂತ ರಾಯರನ್ನು ಮಗುವಂತೆ ಜೋಪಾನ ಮಾಡಿದ ವಸಂತರಾವ್ ಕುಲಕರ್ಣಿಯವರ “ನಭೋ ಪ್ರಸ್ಥಾನ”ದಿಂದ ಕನ್ನಡ ರಂಗಭೂಮಿಯ ಒಂದು ಮಹತ್ವದ “ಕಲಾ ಚೇತನ ರತ್ನ”ವನ್ನು ನಾವು ಕಳೆದುಕೊಂಡಿದ್ದೇವೆ. ಅವರ ರಂಗ ಪ್ರತಿಭೆ ಅಗಾಧವಾದದ್ದು. “ಗೋವಾ”ರವರ “ನುಡಿ ನಮನ”-ಅನನ್ಯ-ಅನುಪಮ. “ಗೋವಾ”ರವರಲ್ಲಿ ಒಂದು ಕಳಕಳಿಯ ವಿನಂತಿ. ಕಂದಗಲ್ಲು ಹನುಮಂತರಾಯರನ್ನು ಕುರಿತ ಜೀವನ ಚರಿತ್ರೆ ಪುಸ್ತಕ ಯಾರೂ ಬರೆದಂತಿಲ್ಲ. ನಾನಂತೂ ನೋಡಿಲ್ಲ. ಯಾರಾದರೂ ಬರೆದಿದ್ದರೆ ಆ ಕೃತಿ ಲಭ್ಯತೆಯ ಬಗ್ಗೆ ತಿಳಿಸುತ್ತೀರಾ? ಒಂದು ವೇಳೆ ಯಾರೂ ಬರೆಯದಿದ್ದಲ್ಲಿ ತಾವು ಯಾಕೆ ಈ ಕೊರತೆ ನೀಗಿಸಬಾರದು?. ನಾನು ಅಲ್ಲಿಲ್ಲಿ ಸಂಗ್ರಹಿಸಿದ ಅಂಶಗಳಿಂದ ಒಂದು ಲೇಖನ ಬರೆದಿದ್ದೇನೆ. ಅದು ಎಲ್ಲೂ ಪ್ರಕಟವಾಗಿಲ್ಲ. ತಮ್ಮ ವಿಳಾಸ ತಿಳಿಸಿದರೆ ತಮಗೆ ಕಳಿಸುತ್ತೇನೆ. ತಮ್ಮ ಮಿಂಚಂಚೆ ವಿಳಾಸ ತಿಳಿಸಿದರೆ ಮೇಲ್ ಮಾಡುತ್ತೇನೆ. ಅಥವಾ ಅವಧಿಯಲ್ಲಿ ಹಾಕುವ ವಿಧಾನ ತಿಳಿಸಿದರೆ ಅವಧಿಯಲ್ಲಿ ಹಾಕಬಹುದೇ?. ಅಂದಹಾಗೇ ನನ್ನ ಗುರುತು ಸಿಕ್ಕಿತೇ?. 1971-75ರ ಅವಧಿಯಲ್ಲಿ ನಾನು ಭಾನಾಪುರ ಬ್ರ್ಯಾಂಚ್ ಪೋಸ್ಟ್ ಮಾಸ್ತರ್ ಸೇವೆಯಲ್ಲಿದ್ದೆ. ಆಗ ತಾವು ಮಿತ್ರ ಪಿ.ಕೆ.ಕುಲಕರ್ಣಿಯವರೊಂದಿಗೆ ಕೆಲವು ಸಲ ನಮ್ಮ ಪೋಸ್ಟ್ ಆಫೀಸಿಗೆ ಬಂದು ಕೂಡುತ್ತಿದ್ದುದು ಭಾನಾಪುರ ಬಸ್ ಸ್ಟ್ಯಾಂಡ್ ನಲ್ಲಿ ಕಾಲ ಕಳೆಯುತ್ತಿದ್ದುದು ನೆನಪಾಯ್ತೇ? -ನನ್ನ ವಿಳಾಸ : ಟಿ.ಕೆ.ಗಂಗಾಧರ ಪತ್ತಾರ ಕೇರಾಫ್ ನಾಗಚಂದ್ರ ಪತ್ತಾರ, ಶ್ರೀ ಗುರು ಕೊಟ್ಟೂರೇಶ್ವರ ನಿಲಯ, 1ನೇ ಮಹಡಿ, ಎಸ್.ಕೆ.ಜಾಕೀರ್ ವೆಹಿಕಲ್ ಸರ್ವಿಸಿಂಗ್ ಸೆಂಟರಿನ ಎದುರಿಗೆ, ಶಂಕರಗೌಡ್ರ ಕಾಲನಿ, ಎಂ.ಪಿ.ಪ್ರಕಾಶ ನಗರ, ಹೊಸಪೇಟೆ-583201. ಚಲನವಾಣಿ : (1).8152006144, (2).8904612504. ಮಿಂಚಂಚೆ : tkgp4951@gmail.com