ಕಂ ಕ ಮೂರ್ತಿ ಅವರ ಕೃತಿ ‘ಬೆಳಗಿನ ಮೌನ ನಿತ್ಯದ ಧ್ಯಾನ’
ಈ ಕೃತಿಯ ಆಯ್ದ ಭಾಗ ಇಲ್ಲಿದೆ.
-ಕಂ ಕ ಮೂರ್ತಿ
(ಬೆಳಗಿನ ಮೌನ, ನಿತ್ಯದ ಧ್ಯಾನ ಕೃತಿಗೆ ಲೇಖಕ ಕಂ.ಕ.ಮೂರ್ತಿ ಬರೆದ ಟಿಪ್ಪಣಿಯಿಂದ ಆಯ್ದಭಾಗ)
ಮುಸ್ಸಂಜೆ ಅಮ್ಮ ದೇವರ ಕೋಣೆಯಲ್ಲಿ ಹಚ್ಚಿಟ್ಟ ತುಪ್ಪದ ದೀಪ ಅತ್ತ ಕೃಷ್ಷನ ಪಾದಗಳನ್ನು ಬೆಳಗುವ ಜತೆಗೇ ಇತ್ತ ಇಡೀ ನಡುಮನೆಯನ್ನು ಬೆಳಕಿನಲ್ಲಿ ಮೀಯಿಸುತ್ತ ಧನ್ಯವಾಗುತಿತ್ತು.
ಬೆಳಕೆಂದರೆ ಹಾಗೆ, ಅದು ಧನಾತ್ಮಕ. ದೀಪಾವಳಿ ಹಬ್ಬದಲ್ಲಿ ನಾವು ಎಷ್ಟು ಸಂಭ್ರಮದಿಂದ ಬೆಳಕಿನ ಕೋಲುಗಳನ್ನು ಹಚ್ಚಿಡುತ್ತಿದ್ದೆವು. ಅಡಿಕೆ ದಬ್ಬೆಗೆ ಬಟ್ಟೆಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿ ದೀಪದ ಕೋಲು ತಯಾರಿಸುತ್ತಿದ್ದೆವು. ಕತ್ತಲಾದ ಕೂಡಲೆ ಅವುಗಳನ್ನು ಹೊತ್ತಿಸಿ ಗದ್ದೆ, ತೋಟದ ಅಂಚಿನಲ್ಲಿ ನೆಟ್ಟು ಬರುತ್ತಿದ್ದೆವು. ‘ದೀಪ್ ದೀಪ್ ಹೋಳ್ಗೆ’ ಎಂದು ಆ ನೀರವ ರಾತ್ರಿ ಕೂಗು ಹಾಕಿದರೆ ಅದು ಆಕಾಶಕ್ಕೆ ಬಡಿದು ಮರಳಿ ಭೂಮಿಗೆ ಬಂದಂತಾಗಿ ನಮ್ಮ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ಹಾಗೆ ಹಚ್ಚಿಟ್ಟ ಕೋಲುಗಳನ್ನು ಮತ್ತೆಮತ್ತೆ ಹಿಂದಿರುಗಿ ನೋಡುತ್ತ ಮನೆಯ ಹಾದಿ ಹಿಡಿಯುತ್ತಿದ್ದೆವು.
ಬಟ್ಟೆಗೆ ಮೆತ್ತಿದ ಎಣ್ಣೆ ಹೀರಿಕೊಂಡು ದಿಗ್ಗನೆ ಉರಿಯುತ್ತಿದ್ದ ಅವು ಕತ್ತಲೆಯ ಎದೆಗೆ ಚುಚ್ಚಿದ ದೊಂದಿಗಳಂತೆ ಕಾಣುತ್ತಿದ್ದವು. ದುಷ್ಟ ಶಕ್ತಿಗಳನ್ನು ಎದುರಿಸಿ ಊರವ ಕಾವಲಿಗೆ ನಿಂತ ಭಟರ ಕೈಯಲ್ಲಿನ ಪಂಜುಗಳಂತೆ ಜ್ವಾಲೆಜ್ವಾಲೆಯಾಗಿ ಭುಸುಗುಡುತ್ತಿದ್ದವು. ಕತ್ತಲೆಂದರೆ ಕೆಡುಕು ಎಂದುವ ನಂಬಿದ್ದ ನಮಗೆ ಆ ಕಡುಗತ್ತಲಲ್ಲಿ ಹಾರಾಡುತ್ತಿದ್ದ ಮಿಂಚು ಹುಳಗಳು ನಮ್ಮ ದೀಪಾವಳಿ ನೋಡಲು ದೇವಲೋಕದಿಂದ ಬಂದ ಅಪ್ಸರೆಯಂತೆ ತೋರುತ್ತಿದ್ದವು.
ಬೆಳಕು ಎಂದರೆ ಹಾಗೆ ಒಂದೇ ಒಂದು ಹಣತೆ ಹಚ್ಚಿಟ್ಟರೆ ಸಾಕು, ಕತ್ತಲೆ ಓಡುತ್ತದೆ. ಬೆಳಕು ಎಂದರೆ ಜ್ಞಾನ. ಜೀವನವನದಲ್ಲಿ ಯಾವುದು ಕೆಡುಕು ಯಾವುದು ಒಳಿತು. ಯಾವುದನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎನ್ನುವುದನ್ನು ತಿಳಿಯುವ ವಿವೇಕ. ಅಂತಹ ವಿವೇಕವೇವ ನಮ್ಮ ಬದುಕನ್ನು ಮುನ್ನಡೆಸುತ್ತಿರುವುದು. ಬದುಕಿನಲ್ಲಿ ಕೇಡು ಇದೆ, ಕಡುಕಷ್ಟವಿದೆ. ನಾವು ನಿರೀಕ್ಷಿಸದೇ ಇರುವ ಕೌರ್ಯವ ಬದುಕಿನ ಯಾವುದೋ ಒಂದು ತಿರುವಿನಲ್ಲಿ, ಯಾವುದೋ ಒಂದು ರೂಪದಲ್ಲಿ ಧುತ್ತನೆ ಎದುರಾದಾಗ ನಾವು ದಿಕ್ಕುಕಾಣದೇ ನಲುಗುತ್ತೇವೆ. ಅಂತಹ ಘಳಿಗೆಯಲ್ಲಿ ಯಾವುದೋ ಒಂದು ರೂಪದಲ್ಲಿ ಕಾಣುವ ಬೆಳಕು ಅಂದರೆ ಸಕಾರಾತ್ಮಕ ಭಾವನೆ ನಮ್ಮನ್ನು ಕೈ ಹಿಡಿದು ಬೆಚ್ಚಗೆ ಮಾಡುತ್ತದೆ. ನಾನಿದ್ದೇನೆ ಎಂದು ಪಿಸುಗುಡುತ್ತದೆ.
ಸಂತೈಸಿ ಮುನ್ನೆಡೆಸುತ್ತದೆ. ಅಂತಹ ಬೆಳಕೊಂದು ಇಲ್ಲದೇ ಹೋದರೆ ನಾವು ಬದುಕಿನ ಕೊನೆ ತಿರುವಿಗೆ ಬಿದ್ದವರಂತೆ ದಿಕ್ಕುಕಾಣದೆ ಒದ್ದಾಡುತ್ತೇವೆ. ಒಂದು ಪ್ರೀತಿ, ಒಂದು ಕಾರುಣ್ಯದ ನುಡಿ, ಒಂದು ಸ್ನೇಹ ಇವೆಲ್ಲ ನಾವು ಬದುಕಿನಲ್ಲಿ ಬಯಸಿಯೂ ಬಯಸದೆಯೂ ಸಿಗುವ ಬೆಳಕಿನ ಕಿಡಿಗಳು. ಕಷ್ಟಗಳು ಎದುರಾದಾಲೇ ಫಳ್ಳನೆ ಹೊಳೆಯುವ ಈ ಕಿಡಿಗಳು ಕಂಗೆಟ್ಟ ನಮ್ಮ ಬದುಕಿನ ಬಂಡಿಯನ್ನು ಮುನ್ನೆಡೆಸುತ್ತವೆ.
ನಾವು ಬದುಕಿನಲ್ಲಿ ಎದುರಿಸಿದ ಅನುಭವಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಾಗ ಮುನ್ನೆಡೆಯ ಬಲ್ಲೆವು. ನೊಂದವರ ಒಡಗೂಡಿ ಪರಸ್ಪರ ಕೈ ಹಿಡಿದು ಮುನ್ನೆಡೆದಾಗ ಅದು ಒಂದು ಚಳವಳಿಯೇ ಆಗುತ್ತದೆ. ಅಂತಹ ಚಳವಳಿಯ ಅನುಭವ ಛಳಕೊಂದು ನನ್ನ ಎದೆಯೊಳಗೆ ಇನ್ನೂ ಬೆಳಕಾಗಿದೆ.






0 Comments