ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಹಗ್ ಬೇಕಿತ್ತು..

ಜಿ ಎನ್‌ ಮೋಹನ್

ಒಂದು ಹಗ್ ಬೇಕಿತ್ತು
-ಗೆಳೆಯ ಮಂಸೋರೆ ಇದನ್ನು ಹೇಳುವ ವೇಳೆಗಾಗಲೇ ಹನಿಗಣ್ಣಾಗಿದ್ದರು.
ನಾನು ಕೇಳಿದ್ದು ಇಷ್ಟೇ. ‘ಹರಿವು’ನಲ್ಲಿ ಇರುವುದು ಅಪ್ಪ ಮಗನ ಸಂಬಂಧ. ನಿಮ್ಮ ಮತ್ತು ಅಪ್ಪನ ಸಂಬಂಧ ಹೇಗಿತ್ತು? ಅಂತ.
ಮಂಸೋರೆಗೆ ಸುಧಾರಿಸಿಕೊಳ್ಳಲು ತುಂಬಾ ತುಂಬಾ ಸಮಯವೇ ಹಿಡಿಯಿತು. ನಾನೂ ಇದನ್ನು ನಿರೀಕ್ಷಿಸಿರಲಿಲ್ಲ.

ಅಪ್ಪ ತೆಲುಗು ಚಿತ್ರಗಳ ಹಿನ್ನೆಲೆಯುಳ್ಳವರು. ‘ಸೂರ್ಯವಂಶ’ ಸಿನೆಮಾವನ್ನು ೨೦೦ ಬಾರಿ ನೋಡಿದವರು. ಅವರಿಗೆ ‘ನೋಡಪ್ಪಾ ನಾನೂ ಸಿನೆಮಾ ಮಾಡ್ತೇನೆ. ಸಿನೆಮಾ ಅಂದ್ರೆ ಹೀಗಿರಬೇಕು ಅಂತ ತೋರಿಸ್ತೇನೆ ಅಂದಿದ್ದೆ. ಆದರೆ ಕಥೆ ಆರಿಸಿ ಸಿನೆಮಾ ಮಾಡಿ ಅಪ್ಪನ ಕೈಗಿಡುವ ವೇಳೆಗೆ ಅವರೇ ಇರಲಿಲ್ಲ’ ಎಂದು ಮಾತು ನಿಲ್ಲಿಸಿದರು.

‘ಒಂದು ವಿಷಯ ಗೊತ್ತಾ.. ನನಗೆ ಈಗಲೂ ಅಚ್ಚರಿ ಅಪ್ಪ ಪ್ರತೀ ಬಾರಿ ಸೂರ್ಯವಂಶ ನೋಡುವಾಗಲೂ ಅಪ್ಪ ಕಣ್ಣೀರಿಡುತ್ತಿದ್ದರು. ಒಂದು ಸಿನೆಮಾದಲ್ಲಿ ಏನಾಗುತ್ತೆ ಎನ್ನುವುದು ಎರಡನೇ ಬಾರಿ ಸಿನೆಮಾ ನೋಡುವ ವೇಳೆಗೆ ಗೊತ್ತಾಗಿ ಹೋಗಿರುತ್ತದೆ. ಆದರೆ ೨೦೦ನೇ ಸಲ ಅದೇ ಸಿನೆಮಾ ನೋಡುವಾಗಲೂ ಅಪ್ಪ ಅದಕ್ಕೆ ಎಮೋಷನಲ್ ಆಗಿ ಕನೆಕ್ಟ್ ಆಗ್ತಾ ಇದ್ದರು. ಎಂತಹ ಮ್ಯಾಜಿಕ್ ಇದು. ಬಹುಶಃ ಇಂತಹ ಉತ್ತರ ಸಿಗದ ಯಕ್ಷಿಣಿಯೇ ನನ್ನನ್ನು ಸಿನೆಮಾ ಲೋಕಕ್ಕೆ ಎಳೆದುಕೊಂಡು ಬಂತು’ ಎಂದರು.

‘ಆಕ್ಟ್ ೧೯೭೮’ ಮಂಸೋರೆ ಅವರ ಮೂರನೆಯ ಚಿತ್ರ ಹೊಸ್ತಿಲು ದಾಟಲು ಸಿದ್ಧವಾಗಿತ್ತು. ಆ ಸಮಯದಲ್ಲಿಯೇ ನಾನು ಮಂಸೋರೆ ಅವರನ್ನು ಅಕ್ಷರಶಃ ಎದುರಿಗೆ ನಿಲ್ಲಿಸಿಕೊಂಡಿದ್ದೆ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಪಿಯುಸಿಯಲ್ಲಿ ಡುಮ್ಕಿ ಹೊಡೆದ ಅಷ್ಟೂ ಪೇಪರ್ ಗಳಿಗೆ ಬಂದ ಮಾರ್ಕ್ಸ್ ಗಳನ್ನು ಕೂಡಿದರೂ ೧೦ ಅಂಕ ದಾಟದ ಹುಡುಗ ಇವನೇನಾ ಎನ್ನುವಂತಾಗಿತ್ತು.

‘ನನಗೆ ಕಥೆ ಹೇಳೋದು ಅಂದರೆ ತುಂಬಾ ಇಷ್ಟ. ಇದಕ್ಕೂ ಅಪ್ಪನೇ ಕಾರಣ. ಅಪ್ಪ ವಯಸ್ಕರ ಶಿಕ್ಷಣ ಇಲಾಖೆಯಲ್ಲಿದ್ದರು. ಹಾಗಾಗಿ ಆ ಇಲಾಖೆ ಪ್ರಕಟಿಸಿದ ಪುಸ್ತಕ ಎಲ್ಲಾ ನನ್ನ ಕೈನಲ್ಲಿರುತ್ತಿತ್ತು. ಓದಿಯೇ ಓದಿದೆ. ಕಥೆ, ಕಥನ ಕಲೆ ಎರಡೂ ನನ್ನೊಳಗೆ ಇಳಿದು ಹೋಯ್ತು’ ಎಂದರು.

ಊರಲ್ಲಿ ಸೈನ್ ಬೋರ್ಡ್ ಮಾಡುತ್ತಿದ್ದ ನೆಂಟರಿದ್ದರು. ಅವರ ಜೊತೆ ಸೇರಿ ಬ್ಯಾನರ್ ಗೆ ಬಣ್ಣ ತುಂಬುತ್ತಾ, ಇಲ್ಲವೇ ಅವರು ಪೇಂಟ್ ಮಾಡುವಾಗ ಬಣ್ಣದ ಡಬ್ಬ ಹಿಡಿದುಕೊಂಡು ನಿಂತಿರುತ್ತಿದ್ದೆ. ಅಮ್ಮ ಒಡವೆ ಮಾರಿ ನನ್ನನ್ನ ಚಿತ್ರಕಲಾ ಪರಿಷತ್ ಮೆಟ್ಟಿಲು ಹತ್ತಿಸದೇ ಇದ್ದಿದ್ದರೆ ಬಹುಶಃ ಈಗಲೂ ಬ್ಯಾನರ್ ಬರೆದುಕೊಂಡು ಇರುತ್ತಿದ್ದೆನೇನೋ..’ ಎಂದು ಗತಕಾಲಕ್ಕೆ ಜಾರಿದರು.

ಚಿತ್ರಕಲಾ ಪರಿಷತ್ ನಲ್ಲಿ ನನಗೆ ಎಚ್ ಎ ಅನಿಲ್ ಕುಮಾರ್ ಸಿಕ್ಕಿದ್ದು ನನ್ನ ಮುಂದಿನ ದಾರಿ ಬೇರೆಯದೇ ದಿಕ್ಕಿಗೆ ಹೊರಳಲು ಕಾರಣವಾಯಿತು. ಇದಕ್ಕೆ ಕ್ಲೈಮಾಕ್ಸ್ ಎನ್ನುವಂತೆ ಸಿಕ್ಕಿದ್ದು ೨೦೧೧ರಲ್ಲಿ ಪ್ರಕಟವಾದ ಆಶಾ ಬೆನಕಪ್ಪ ಅವರ ‘ಪ್ರಜಾವಾಣಿ’ ಅಂಕಣ ಎಂದು ಮಾತು ನಿಲ್ಲಿಸಿದರು.

ಅಲ್ಲಿಂದ ಅವರು ಉಸಿರುತೆಗೆದುಕೊಳ್ಳಲು ಒಂದಷ್ಟು ಸಮಯ ಬೇಕಾಯಿತು. ‘ಮಗನ ಚಿಕಿತ್ಸೆಗೆ ಹಣವಿಲ್ಲದ ಅಪ್ಪನೊಬ್ಬ ಮಗ ಇಲ್ಲವಾದಾಗ ಊರಿಗೆ ದೇಹವನ್ನು ಸಾಗಿಸಲು ಪಡುವ ಯಾತನೆಯ ಕಥೆ ಅದು. ಒಂದು ಟ್ರಂಕ್ ಖರೀದಿಸಿ ಅದರಲ್ಲಿ ಮಗನ ಶವ ಇಟ್ಟುಕೊಂಡು ಊರು ಸೇರುವ ಮನ ಕಲಕುವ ಕಥೆ ಅದು. ಆಶಾ ಬೆನಕಪ್ಪ ಅವರ ಕಣ್ಣೆದುರು ನಡೆದದ್ದು. ಅದೇ ಮಂಸೋರೆ ಕಣ್ಣಲ್ಲಿ ಹರಿವು ಆಯಿತು.

‘ಬಡವರ ಬದುಕು ತುಟ್ಟಿ, ಸಾವು ಇನ್ನೂ ತುಟ್ಟಿ’ ಎನ್ನುವ ಕಥನ ಅದು. ಅಪ್ಪ ಮಗನ ದೇಹ ಸಾಗಿಸಿದ ಪಯಣ ಇದೆಯಲ್ಲಾ ಅದು ಇನ್ನೊಂದು ರೀತಿಯಲ್ಲಿ ನನ್ನ ಬದುಕಿನಲ್ಲಿ ಆಗಿತ್ತು. ನಾನು ಪ್ರಜ್ಞೆ ಇಲ್ಲದ, ಇನ್ನು ಕೆಲವೇ ದಿನಗಳ ಕಾಲ ಬದುಕುತ್ತಾರೆ ಎನ್ನುವ ಅಪ್ಪನನ್ನು ಇದೆ ರೀತಿ ಊರಿಗೆ ಕರೆದುಕೊಂಡು ಹೋದ ನೆನಪು ಅದರೊಳಗಿತ್ತು ಹಾಗಾಗಿ ಬಹುಷಃ ಆ ಸಿನೆಮಾ ಅಷ್ಟು ಇಂಟೆನ್ಸ್ ಆಗಿ ಬಂದುಹೋಯಿತು’ ಎಂದರು.

ಆಗಲೇ ನಾನು ಅವರಿಗೆ ಈ ‌ʼಮಂಸೋರೆ’ ಎಂದರೆ ಯಾರು ಎನ್ನುವ ಪ್ರಶ್ನೆ ಕೇಳಿದ್ದು.

‘ಸೋಮಕೇಶವ ರೆಡ್ಡಿಯ ಮಗ ಈ ಮಂಜುನಾಥ. ಮೂರರಿಂದಲೂ ಒಂದು ಅಕ್ಷರ ಆಯ್ದುಕೊಂಡು ಈ ಮಂಸೋರೆ ಹುಟ್ಟಿದ’ ಎಂದು ನಕ್ಕರು.

ನನಗೆ ಜಾತಿ ಸೂಚಕ ಹೆಸರು ಖಂಡಿತಾ ಇಷ್ಟ ಇಲ್ಲ. ಹಾಗಾಗಿ ನಾನು ಮಂಜುನಾಥ ಅಷ್ಟೇ ಆಗಿದ್ದೆ. ಆದರೆ ನನ್ನೊಳಗೆ ಅಪ್ಪನನ್ನು ಸದಾ ಉಳಿಸಿಕೊಳ್ಳಲು ಅವರ ಹೆಸರು ಸೇರಿಸಿಕೊಂಡೆ. ಹಾಗಾಗಿ ಸೋಮಕೇಶವರ ಜೊತೆಗೆ ರೆಡ್ಡಿಯೂ ಬಂದು ಸೇರಿಹೋಯ್ತು’ ಎಂದರು ‘ಮಂ’ಜುನಾಥ ‘ಸೋ’ಮಕೇಶವ ‘ರೆ’ಡ್ಡಿ.

‘ಹರಿವು ಒಂದು ಸಿನೆಮಾ ಅಲ್ಲ ಎರಡು ಗೊತ್ತಾ..’ ಎಂದು ಮಂಸೋರೆ ನನ್ನತ್ತ ನೋಡಿ ಮುಗುಳ್ನಕ್ಕರು. ನನಗೂ ಅದು ಬ್ರೇಕಿಂಗ್ ನ್ಯೂಸೇ. ಹೌದಾ ಎಂದು ಕಣ್ಣರಳಿಸಿದೆ.

‘ಅಕ್ಕನ ಮದುವೆಗೆ ಅಂತ ಇಟ್ಟಿದ್ದ ಲಕ್ಷಾಂತರ ಹಣವನ್ನ ಖರ್ಚು ಮಾಡಿ ಸಿನೆಮಾ ಮಾಡಲು ದಂಡು ಕಟ್ಟಿಕೊಂಡು ಹೋದೆ. ಸಿನೆಮಾ ಹೇಗೆ ನಿರ್ದೇಶಿಸಬೇಕು ಎನ್ನುವುದೇ ಗೊತ್ತಿಲ್ಲದ, ಶೂಟಿಂಗ್ ಸ್ಕ್ರಿಪ್ಟ್ ಮಾಡಲು ಗೊತ್ತಿಲ್ಲದ ನಾನು ಅಷ್ಟೂ ಹಣವನ್ನು ಕಳೆದು ಡಿಪ್ರೆಶನ್ ಗೆ ಜಾರಿ ಹೋದೆ.

ಆದರೆ ಸಿನೆಮಾದಲ್ಲಿ ತಂದೆ ಪಾತ್ರ ಮಾಡುತ್ತಿದ್ದ ಸಂಚಾರಿ ವಿಜಯ್ ಬಿಡಲಿಲ್ಲ. ಎರಡು ವರ್ಷದ ನಂತರ ಮತ್ತೆ ಬಂದು ಈ ಕಥೆ ನನ್ನನ್ನು ಎರಡು ವರ್ಷದಿಂದ ಮಲಗಲು ಬಿಟ್ಟಿಲ್ಲ ಬನ್ನಿ ಇಬ್ಬರೂ ಸೇರಿ ಯಾರಾದರೂ ಪ್ರೊಡ್ಯೂಸರ್ ಹುಡುಕಿಯೇ ಬಿಡೋಣ ಅಂದರು. ಎರಡು ವರ್ಷದ ನಂತರ ಮತ್ತೆ ಡೈರೆಕ್ಷನ್ ಗೆ ನಿಂತಾಗ ಈ ಮಂಸೋರೆ ಸಾಕಷ್ಟು ಪಾಠ ಕಲಿತಿದ್ದ’ ಎಂದರು.

ಇಷ್ಟೆಲ್ಲಾ ಆದ ನಂತರ ನಾನೂ, ಮಂಸೋರೆ ಕನ್ನಡ ಭವನದ ಅಂಗಳದಲ್ಲಿ ನಿಂತಿದ್ದೆವು. ‘ಏನ್ ಗೊತ್ತಾ’ ಎಂದರು. ‘ಏನು’ ಎಂದೆ. ‘ಹೊಸ ಸಿನೆಮಾ ಪ್ಲಾನ್ ಮಾಡ್ತಾ ಇದ್ದೀನಿ’ ಅಂದರು ‘ವಾಹ್!’ ಎಂದವನೇ ಅಲ್ಲಿದ್ದ ಗೆಳೆಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಸಂಜೆ ಸಿಟ್ಟಿಂಗ್ ಮಾಡಿಯೇ ಬಿಟ್ಟೆವು.

ಆಗಲೇ ಅವರು ಹೇಳಿದ್ದು ಹೆಸರು ‘ನಾತಿಚರಾಮಿ’ ಅಂತ. ನನ್ನ ಕಿವಿ ದೊಡ್ಡದಾಯಿತು.

ಮಂಸೋರೆಗೂ ಗೊತ್ತಾಯಿತೇನೋ ಎಂ ಎಸ್ ಆಶಾದೇವಿ ಅವರು ಬರೆಯುತ್ತಿದ್ದ ‘ನಾರಿ ಕೇಳಾ’ ಅಂಕಣ ನನ್ನೊಳಗನ್ನು ಶೋಧಿಸಿಕೊಳ್ಳಲು ಕಾರಣ ಆಯಿತು. ಹೆಣ್ಣಿನ ದೃಷ್ಟಿಯಿಂದ ನೋಡುವುದು ಕಲಿತೆ. ಅಷ್ಟೇ ಅಲ್ಲ ಗಂಡಾಗಿ ನಾನು ಮಾಡುತ್ತಿರುವ ತಪ್ಪನ್ನು ಗೊತ್ತುಮಾಡಿಕೊಳ್ಳುತ್ತಾ ಹೋದೆ. ಅದರ ಪರಿಣಾಮವೇ ‘ನಾತಿಚರಾಮಿ’. ಹೆಣ್ಣಿನ ಒಳತುಮುಲಕ್ಕೆ ಒಂದು ಕನ್ನಡಿ ಎಂದರು.

ನಾವು ಮಾತನಾಡುತ್ತಲೇ ಹೋದೆವು. ಹತ್ತು ಹಲವಾರು ಕಥೆ. ಮಂಸೋರೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದು. ಬೆನ್ನತ್ತಿ ಬಂದ ರಾಷ್ಟ್ರ ಪ್ರಶಸ್ತಿಗಳು ಅವರನ್ನು ಚಿತ್ರರಂಗದಲ್ಲೇ ಉಳಿಯುವಂತೆ ಮಾಡಿದ್ದು, ಅವರ ಪತ್ರಕರ್ತ ರೂಪ ಹೀಗೆ ಏನೆಲ್ಲಾ..

ಇಷ್ಟು ಮಾತಾಡುವಾಗಲೇ ‘ಹೇಳಿ ಈಗ ‘ಆಕ್ಟ್ ೧೯೭೮’ ಸಿನೆಮಾ ರಿಲೀಸ್ ಗೆ ನಿಂತಿದ್ದೀರಿ. ಈ ಕ್ಷಣದಲ್ಲಿ ಅಪ್ಪನಿಗೆ ಏನು ಹೇಳಲು ಬಯಸುತ್ತೀರಾ’ ಎಂದೆ.

ಹನಿಗಣ್ಣಾದ ಮಂಸೋರೆ ‘ಅಪ್ಪನ ಹಗ್’ ಎಂದರು.

ಗೊತ್ತಿಲ್ಲ ಯಾಕೆ ಅಂತ. ನಾನು ಕ್ಯಾಮೆರಾ ರೋಲ್ ಆಗುತ್ತಿರುವುದನ್ನೂ ಮರೆತು ಮಂಸೋರೆಯನ್ನು ಬಾಚಿ ಅಪ್ಪಿಕೊಂಡೆ. ಆದರೆ ಅದು ಆ ಅಪ್ಪನ ಹಗ್ ಗೆ ಸಮನಾದದ್ದಾಗಿರಲಿಲ್ಲ.

‍ಲೇಖಕರು Avadhi

29 November, 2020

2 Comments

  1. ಗೀತಾ ಎನ್ ಸ್ವಾಮಿ

    ನಮಸ್ಕಾರ ಸರ್.
    ಅವತ್ತು ಈ ಕಾರ್ಯಕ್ರಮದ ನೇರ ಪ್ರಸಾರ ನೋಡುವಾಗ ಇನ್ಫಿನಿಟಿ ಪ್ರಜ್ಞೆ ಗೆ ತನ್ನನ್ನು ಅರ್ಪಿಸಿಕೊಂಡ ಅಪ್ಪ ಅಂತದೇ ಪ್ರಜ್ಞೆಯ ದ್ಯಾನದ್ರವ್ಯದಲ್ಲಿ ಮೌನಿಯಾಗುವ ಮಗ ಇಬ್ಬರೂ ಮಹತ್ತೊಂದನ್ನು ಜಗತ್ತಿಗೆ ಕೊಡಲು ಸಿದ್ದಗೊಳ್ಳುತ್ತಿರುವಂತೆ ಕಾಣ್ತಿದ್ರಿ ಸರ್. ಭಾಗಶಃ ಅವಧಿ ಕುಟುಂಬದ ಜೊತೆಗೆ ನನ್ನನ್ನು ಅಂಕಣದ ಮೂಲಕ ನೀವು ಪರಿಚಯಸದೇ ಹೋಗಿದ್ರೆ ಈ ಮನೆಯಲ್ಲಿ ಜಂಗಮಗೊಳ್ಳುವ ಎಲ್ಲಾ ಅಪೂರ್ವಗಳನ್ನು ನಾನು ಕಳೆದುಕೊಳ್ತಿದ್ನಾ ಅಂತ ಶಂಕೆ ಹುಟ್ಟುತ್ತೆ ಮನ್ಸಲ್ಲಿ. ಮಂಸೋರೆ ಸರ್ ಅಂಕಣ ಓದುವಾಗ ನೋಡಿದ ಅವರ ಪೋಟೋ ಹೆಚ್ಚು ಮೌನದಲ್ಲಿ ದುಡಿಯುವ ನಿರ್ದೇಶಕ ಅನ್ಸಿತ್ತು. ನಿಮ್ಮಿಬ್ಬರ ಮಾತುಕತೆಯೊಳಗೆ ಒಂದು ಪಾತ್ರದಂತೆ ನೋಡುಗರನ್ನು ಒಳಗು ಮಾಡಿಕೊಂಡ ಕ್ರಿಯೆ ಅನುಭವದ ತಪಸ್ಸಿನ ನಲ್ಮಾತುಗಳ ಒಳಗೆ ಮೆಲ್ಲಗೆ ಓಡಾಡಿಸಿದ್ದು ಕೂಡ ಒಳಗಣ್ಣಿಗೆ ತಟ್ಟಿಬಿಡ್ತು ಸರ್. ಈ ಕಾರ್ಯಕ್ರಮ ಮುಗಿದ ಮೇಲೆ ಸೀದಾ ಮನೆಗೆ ಬಂದು ಅಗಸನಕಟ್ಟೆಯವರ ಆ ಗಡಿಯಾರ ಕಥೆ ಓದಿದೆ. ಬಡವರ ಬದುಕು ಉಸಿರಾಡಲು ಎಷ್ಟೆಲ್ಲ ಹೋರಾಡಬೇಕು? ಕಾರ್ಯಕ್ರಮದ ಒಟ್ಟು ಭಾಗವನ್ನು ಭಾವದ್ರವ್ಯದೊಳಗೆ ಕಡೆದಂತೆ ಬರೆದಿದ್ದೀರಿ ಸರ್. ಅಪ್ಪ ಸೂರ್ಯವಂಶವನ್ನು ೨೦೦ ಸಲ ನೋಡಿದಾಗಲೂ ಭಾವುಕಗೊಂಡು ಕಣ್ಣೀರಿಟ್ಟದ್ದನ್ನು ಒಂದು ಅದ್ಭುತ ಸಿನಿಮಾ ರೂಪುಗೊಳ್ಳಲು ಕನೆಕ್ಟ್ ಮಾಡಿಕೊಳ್ಳುವ ಮಗನಿಗೆ ಭಾವದ ಬಯಲೊಂದು ತನ್ನೊಳಗೆ ಅಬ್ಧಿಯಾಗಿ ಮೊರೆಯುತ್ತಿರುವುದಕ್ಕೆ ಸಾಧ್ಯವಾಗಿರೋದು ಸರ್. ಮಾತುಗಳು ಆಗಿ ಹೋದ ಅನುಭವಗಳನ್ನು ಹೇಳಿಕೊಂಡ ರೀತಿಯ ಭಾವಸಾಂದ್ರತೆಯ ಹರವು ಕೂಡ ಎಲ್ಲಿಗೋ ಮುಟ್ಟಿಸಿಬಿಡ್ತು ಸರ್. ಹಾಗೆ ನಮ್ಮ ಸುತ್ತ ನಡೆಯುವ ಎಷ್ಟೊಂದು ಅಳಲುಗಳನ್ನು ನಮ್ಮವಾಗಿಸಿಕೊಂಡು ಸ್ಪಂದಿಸಬೇಕಾದ ಎಚ್ಚರವನ್ನು ಕೊಟ್ಬಿಡ್ತು.
    ಉಸಿರು ನಿಲ್ಲುವ ಚಣವನ್ನು ಕಾಯುವ ಸ್ಥಿತಿಯ ಘೋರ ವ್ಯಥೆಯನ್ನು; ಯಪ್ಪಾ ಅಕ್ಷರಗಳು ಸತ್ಬಿಟ್ವು ಸರ್ ಬರೆಯಲು ಕಷ್ಟ ಆಗ್ತಿದೆ. ನನ್ನ ಅಮ್ಮ ನನ್ನ ಅಣ್ಣ ಮತ್ತು ನನ್ನನ್ನು ಎಡಬಲ ಕೂರಿಸಿಕೊಂಡು ಅಮ್ಮ ಉಳಿಯಬೇಕು ಗೋಳಿಡುವ ಹೊತ್ತಲ್ಲಿ ನಮ್ಮ ಕಣ್ಣೊಳಗೆ ಜೀವಬಿಟ್ರು. ಕಳೆದುಕೊಂಡು ತಬ್ಬಲಿಗಳಾಗುವ ನೋವನ್ನು ಹೇಗೆ ಹೇಳೋದು ಸರ್….
    ಎಂದೂ ಬಾರದ ಜವರಾಯ ಇಂದೇಕೆ ಬಂದೆ?
    ಕೊಳ್ಳಯ್ಯ ನೀರ ಕುಡಿನೀರ…. ಎಂದು ಸಾವನ್ನು ಕೂಡ ತನ್ನ ಮನೆಯ ಬಂಧುವಿನಂತೆ ಸ್ವಾಗತಿಸುವ ತ್ರಿಪದಿಯೊಂದು ತಲೆಬಿಟ್ಟು ಅಲುಗಲ್ಲ ಸರ್….
    ಎನ್.ಕೆ.ಹನುಮಂತಯ್ಯನ ಅಪ್ರಕಟಿತ ಕವಿತೆಯೊಂದು ಸ್ಮೃತಿಯನ್ನು ಆಳುತ್ತಿದೆ…

    ಹಿಮಾಲಯದ ಅನಂತ ಮಂಜುಗಡ್ಡೆಗಳ ಬಳಿ ಹೋಗಿ
    ಜೋರಾಗಿ ಅಳಬೇಕೆನಿಸುತ್ತಿದೆ!
    ಸಾಯುವ ಈ ದೇಹವನ್ನು ಹೊತ್ತು ಹುಟ್ಟಿದ್ದಕ್ಕಾಗಿ….
    ಅವತ್ತು ಕಾರ್ಯಕ್ರಮ ಮುಗಿದ ಹೊತ್ತಿಗೆ ಅಸಹಾಯಕರಾದಾಗ, ನೋವುಗಳೆದುರಾದಾಗ ದೃತಿಗೆಡದೆ ಅಚಲವಾಗಿ ನಿಲ್ಲಲು ಕಲಿಸಿದ “ಅಮ್ಮನಂತೆ ನೀವು ಕಂಡ್ರಿ; ಎಲ್ಲಾ ವ್ಯಥೆಗಳನ್ನು ಹೊದ್ದು ಹೊಸದಾಗಿ ಎದ್ದು ಬಂದು ಜೊತೆಯಾದ ಸೋದರನಂತೆ ಮಂಸೋರೆ ಕಂಡ್ರು ಸರ್…..
    ” ಸಾವು ವಿಧಿಯ ಸಾವಕಾಶದ ಗೆಲುವು”….

  2. Shyamala Madhav

    ನಮ್ಮದೂ ಹಗ್ – ಪ್ರೀತಿ, ಮೆಚ್ಚುಗೆಯಿಂದ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading