ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಸ್ಟೇಜ್ ವರೆಗೂ ಓಕೆ…

-ಎಚ್ ಗೋಪಾಲಕೃಷ್ಣ 

ಮೊನ್ನೆ ವೈಕುಂಠ ಏಕಾದಶಿ ಆಯ್ತಲ್ಲಾ? ಅದರ ಒಂದು ನೆನಪು ನಿಮ್ಮ ಜತೆ ಹಂಚಿಕೊಳ್ಳಲು ನನಗೆ ದೈವ ಪ್ರೇರಣೆ ಆಗಿದೆ. ಅದರಿಂದ ಅದನ್ನು ನಿಮಗೆ ಹೇಳುತ್ತಾ ಇದ್ದೇನೆ . ಅದಕ್ಕೆ ಮೊದಲು ನನ್ನ ಮನೆಯ ಟೋಪೋಗ್ರಾಪ್ ನಿಮಗೆ ಹೇಳಬೇಕು, ನಂತರದ ಕನ್ಫ್ಯೂಷನ್ ತಪ್ಪಿಸಲು.

ನಮ್ಮ ಏರಿಯಾ ದ ಮುಖ್ಯ ರಸ್ತೆ ಇದೆ ನೋಡಿ ಅದರ ಸಂದಿಯಲ್ಲಿ ನೀವು ಬಂದರೆ ಮೂರನೇ ರಸ್ತೆಯಲ್ಲಿ ನಾಲ್ಕನೇ ಗುಹೆ ನನ್ನದು. ಗುಹೆ ಅಂತ ಯಾಕೆ ಅಂತೀನಿ ಅಂದರೆ ನಾನೂ ಮನೆ ಕಟ್ಟಿದೆನಲ್ಲಾ ಐವತ್ತು ವರ್ಷ ಹಿಂದೆ ಆಗ ನನ್ನ ಹತ್ತಿರ ಕಾಸು ಇರಲಿಲ್ಲ. ಹಾಗೆ ನೋಡಿದರೆ ಕಾಸು ಯಾವಾಗಲೂ ನನ್ನ ಹತ್ತಿರ ಇರೋದಿಲ್ಲ. ಮನೆ ಕಟ್ಟಬೇಕಾದರೆ ಕಾಸು ಬೇಕು, ಅದರಿಂದ ಸಾಲಕ್ಕೆ ಅಂತ ಬ್ಯಾಂಕ್ ನ ಹಿಡಿದೆ ತಾನೇ? ಬ್ಯಾಂಕ್ ಬಡ್ಡಿಮಕ್ಕಳು ನನ್ನ ಸಂಬಳ ಸೇವಿಂಗ್ಸ್ ಅದು ಇದು ಎಲ್ಲಾ ಲೆಕ್ಕ ಹಾಕಿ ಮೂವತ್ತು ಸಾವಿರ ಮಾತ್ರ ಸಾಲಕೊಟ್ಟಿದ್ದು. ಆಗ ನಾನು ನನ್ನ ಅದೃಷ್ಟವನ್ನು ಎಷ್ಟು ಬೈದಿದ್ದೆ ಅಂದರೆ ಯಾರಾದರೂ ಹೆಂಡ ಮಾರೋರ ಮನೇಲಿ ನನ್ನ ಹುಟ್ಟು ಆಗಬಾರದಿತ್ತೇ ಅಂತ ಗೋಳಾಡಿದ್ದೆ. ಇದು ಯಾಕೆ ಅಂತೀರಾ? ಅದ್ಯಾರೋ ಹೆಂಡದ ಅಂಗಡಿ ಓನರ್ ಗೆ ಬ್ಯಾಂಕು ಸಾವಿರ ಕೋಟಿ ಸಾಲ ಕೊಟ್ಟಿತ್ತು! 

ಮೂವತ್ತು ಸಾವಿರದಷ್ಟು ಸಾಲದಲ್ಲಿ ಬೇಕಾದ ಹಾಗೆ ಅದೂ ಹೆಂಡತಿಗೆ ಬೇಕಾದ ಹಾಗೆ ಮನೆ ಕಟ್ಟಿಸುಕ್ಕೆ ಆಗ್ತದಾ? ಪುಟ್ ಪುಟ್ ಪುಟ್ ದಾಗಿ ಹಾಲು ಅಡಿಗೆಮನೆ ರೂಮು ಕಟ್ಟಿಸಿಕೊಂಡು ವಾಸಕ್ಕೆ ಬಂದೇ ಬಿಟ್ಟೆವು. ಎಲ್ಲವೂ ಮಿನಿ ಮಿನಿ ಮಿನಿ ಸೈಜ್ ಆಗಿದ್ದರಿಂದ ಹೆಂಡತಿ ಅದನ್ನು ಗುಹೆ ಅಂದಳು. ಅದೇ ಹೆಸರೇ ಉಳಿದು ಹೋಗಿದೆ.

ಮೂರನೇ ಕ್ರಾಸಿಗೆ ತಿರುಗದೇ ನೀವು ಹಾಗೇ ಉದ್ದಕ್ಕೆ ನಿಮ್ಮ ಮೂಗಿನ ನೇರ (ನಿಮ್ಮ ಮೂಗು ಸೊಟ್ಟ ಪಟ್ಟ ಇಲ್ಲದೆ ಸ್ಟ್ರೈಟ್ ಆಗಿದ್ದರೆ)ಹೋದರೆ ಬಲ ಗಡೆ ಕೊನೆಗೆ ನಮ್ಮ ಏರಿಯಾ ದ ದೇವಸ್ಥಾನ ಸಿಗುತ್ತೆ. ರೋಡಿನ ಕೊನೆಗೆ ದೇವಸ್ಥಾನ.ಅದರ ಪಕ್ಕಕ್ಕೆ ಒಂದು ಗೇಟು. ಗೇಟಿಗೆ ಸರಪಳಿ ಬಿಗಿದು ಒಳಗೆ ಒಬ್ಬರು ನುಸುಳುವ ಹಾಗೆ ಜಾಗ ಇರುತ್ತೆ. ನೀವು ತಲೆ ಬಗ್ಗಿಸಿ ಮೈ ಸಹ ಅಂಕು ಡೊಂಕು ಮಾಡಿ ಇನ್ಸೈಡ್ ಹೋಗ್ತೀರಿ. ಅಲ್ಲೇ ಮುಂದೆ ಕೆರೆ.ಅದೇ ನಮ್ಮ ಏರಿಯಾದ ಫೇಮಸ್ ಕೆರೆ. ಇವಿಷ್ಟೂ ವಿವರಣೆ ನಿಮ್ಮ ಬ್ರೇನ್ ನಲ್ಲಿ ಸರಿಯಾಗಿ ಇಟ್ಟುಕೊಂಡರೆ ಮುಂದೆ ನನ್ನ ಕತೆ ಫಾಲೋ ಮಾಡಲು ನಿಮಗೆ ತಲೆ ಬೇನೆ ಬರೋಲ್ಲ, ಇದಕ್ಕೆ ನಾನು ಗ್ಯಾರಂಟಿ….!

ವೈಕುಂಠ ಏಕಾದಶಿ ಹಿಂದಿನ ದಿವಸವೇ ಗುಡಿ ಮುಂದೆ ಸರ್ವೇ ಕಟ್ಟಿಗೆ ಕಟ್ಟಿ ಭಕ್ತರು ಸುತ್ತಿ ಸುತ್ತಿ ಕ್ಯೂ ನಲ್ಲಿ ನಡೆದು ದೇವಸ್ಥಾನದ ದ್ವಾರ ಪ್ರವೇಶಿಸುವ ವ್ಯವಸ್ಥೆ ಆಗಿತ್ತು. ದೇವಸ್ಥಾನ ಮನೆಗೆ ಇಷ್ಟು ಹತ್ತಿರ ಆದರೂ ಅದರೊಳಗೆ ಸುಮಾರು ವರ್ಷ ನನ್ನ ಎಂಟ್ರಿ ಆಗೇ ಇರಲಿಲ್ಲ. ಎಂಟ್ರಿ ಯಾಕೆ ಆಗಿರಲಿಲ್ಲ ಅಂದರೆ ನಾನು ರೇಷನಲಿಸ್ಟ್, ವಿಚಾರವಾದಿ! ನಮ್ಮ ರೂಲ್ ಬುಕ್ ಪ್ರಕಾರ ದೇವಸ್ಥಾನ ನಮಗೆ ದೂರ..!

ಹೀಗೆ ಸುಮಾರು ವರ್ಷ ದೇವರಿಂದ ದೂರ ಬಹುದೂರ (ಅದ್ಯಾರೋ ಕನ್ನಡದ ಕವಿಯ ಹಾಡು ನೆನಪಿಗೆ ಬರುತ್ತೆ..ದೂರ ಬಹುದೂರ ಹೋಗುವ ಬಾರಾ, ಅಲ್ಲಿಹುದು ಎಮ್ಮಾ ಊರ ತೀರಾ….ಹೀಗೇನೋ ಇದೆ ಹಾಡು)ಇದ್ದುಬಿಟ್ಟೆ ನೋಡಿ, ಇದರಿಂದ ಆ ಪರಮಾತ್ಮನಿಗೆ ಅದೇನು ಲಾಸ್ ಆಯಿತೋ ಗೊತ್ತಿಲ್ಲ. ಆದರೆ ನನಗೆ ಹೆವಿ ಲಾಸ್ ಆಗಿರೋದು ಕೆಲವು ತಿಂಗಳ ಹಿಂದೆ ಗೊತ್ತಾಯಿತು. ಅದೂ ಹೇಗೆ ಅಂತೀರೋ? ಈಗ ಅದೇ ವಿಷಯಕ್ಕೆ ಬಂದೆ ಇವರೇ..

ನಮ್ಮ ಮನೆ ಹತ್ತಿರ ಇರೋ ದೇವಸ್ಥಾನದಲ್ಲಿ ಆಗಾಗ್ಗೆ ಅದೇನೇನೋ ಫಂಕ್ಷನ್ ಗಳು ನಡೀತಾ ಇರ್ತವೆ. ರಸ್ತೆಯಲ್ಲಿ ಜನ ಈ ಫಂಕ್ಷನ್ ಮುಗಿದ ನಂತರ ಗುಂಪು ಗುಂಪಾಗಿ ತುಂಬಾ ಸಂತೋಷದಿಂದ ಮಾತನಾಡುವುದು ನನ್ನ ಮನೆಗೂ ಕೇಳುತ್ತೆ. ರಾತ್ರಿ ಅಥವಾ ಮಧ್ಯಾಹ್ನ ಜನ ಹೀಗೆ ಖುಷಿಯಿಂದ ಹೋಗುತ್ತಾ ಇದ್ದಾರೆ ಅಂದರೆ ನನಗೆ ಅದೇನೋ ಕಿ ಸಿಯುತ್ತಾ ಕೂತಿರುವ ನನಗೆ ತಳಮಳ ಶುರು ಆಗುತ್ತೆ.ಯಾವಾಗಲೂ ಗೋಳಾ ಡ ಬೇಕಾದ ಜನ ಸಂತೋಷವಾಗಿದ್ದಾರೆ ಅಂದರೆ ವ್ಯಾಕುಲ ಹೆಚ್ಚುತ್ತೆ. ಜಗತ್ತು ಅಂಚಿಗೆ ಬಂದಿದೆ ಅನಿಸುತ್ತೆ. ಆಗ ಮನೆಯಿಂದ ಆಚೆ ಬಂದು ಅವಲೋಕಿಸಿದರೆ ನನ್ನ ಕಣ್ಣಿಗೆ ಏನು ಬೀಳಬೇಕು?

ರೇಷ್ಮೆ ಪಂಚೆ, ಶಾಲು ಹೊದ್ದ ಗಂಡಸರ ಕೈಯಲ್ಲಿ ದೊಡ್ಡ ಅಡಿಕೆ ಪಟ್ಟೆ ತಟ್ಟೆ. ಅವರ ಪಕ್ಕದಲ್ಲಿ ಜರತಾರಿ ಸೀರೆ ಉಟ್ಟು ಕುತ್ತಿಗೆಗೆ ನೆಕ್ಲೇಸ್ ಸೊಂಟಕ್ಕೆ ಡಾಬು ಕಿವಿಗೆ ಲೋಲಾಕ್, ಕೈತುಂಬ ಬಂಗಾರದ ಬಳೆ ತೊಟ್ಟ ಚಿನ್ನದ ಫ್ರೇಮ್ ಕನ್ನಡಕ ತೊಟ್ಟ ಹೆಂಗಸರು, ಅವರ ಕೈಯಲ್ಲಿಯೂ ದೊಡ್ಡ ಅಡಿಕೆ ಪಟ್ಟೆ ತಟ್ಟೆ. ತಟ್ಟೆಯಲ್ಲಿ ಏನಿದೆ ಎಂದು ನೋಡಲು ಮನೆಯಿಂದ ಸ್ವಲ್ಪ ಮುಂದೆ ಬಂದು ರಸ್ತೆಯ ಅಂಚಿಗೆ ಬಂದರೆ ತಟ್ಟೆ ಪೂರ್ತಿ ಕಾಣುತ್ತೆ. ಕೊಂಚ ಕತ್ತು ಉದ್ದ ಮಾಡಿದರೆ ತಟ್ಟೆಯಲ್ಲಿರುವುದು ಕಾಣಲೇ ಬೇಕು. ಹಾಗೆ ನೋಡಿದೆ ತಾನೇ? ಏನಿತ್ತು ತಟ್ಟೆಯಲ್ಲಿ?

ಸೀ ಹುಗ್ಗಿ, ಖಾರಾ ಹುಗ್ಗಿ, ಅಕ್ಕಿ ಕಡಲೇ ಬೇಳೆ ಪಾಯಸ, ಉಪ್ಪಿಟ್ಟು, ಕೇಸರಿ ಬಾತ್, ಬಿಸಿಬೇಳೆ ಬಾತ್, ಮೊಸರನ್ನ…. ಎಲ್ಲವೂ ಒಂದರ ಪಕ್ಕ ಮತ್ತೊಂದು…!

ಮನೆಗೆ ಬಂದೆ. ಏನು ದೇವಸ್ಥಾನದಲ್ಲಿ… ಅಂತ ನನ್ನಾಕೆಯನ್ನ ಕೇಳಿದೆ.

ಅದೇನೋ ಗೋದಾ ಪೂಜೆ ಅಂತೆ. ಸಾವಿರ ಜನದ ಮೇಲಿದ್ದರು. ಅವರಿಗೆ ಅಲ್ಲೇ ಪ್ರಸಾದ ಕೊಟ್ಟರು… ಅಂದಳು.

ನೀನ್ಯಾಕೆ ಹೋಗಲಿಲ್ಲ ಅಂತ ಕೇಳಲಿಲ್ಲ. ಕೇಳಿದ್ದರೆ ನೀನೇ ಬೇಡ ಅಂತ ಹೇಳಿದ್ದೆಯಲ್ಲಾ ಅಂತ ಒಂದು ರಾಮಾಯಣ ನಡೀತಾ ಇತ್ತು.

ಮಾರನೇ ದಿವಸ, ಅದರ ಮಾರನೇ ದಿವಸ, ಅದರ ಮಾರನೇ ದಿವಸ…. ಹೀಗೆ ಏಳು ದಿವಸವೂ ಈ ಪ್ರಸಂಗ ರಿಪೀಟ್ ಆಯ್ತಾ? ಪ್ರತಿ ದಿವಸ ಬೇರೆ ಬೇರೆ ಐಟಂ ಗಳು ತಟ್ಟೆಯಲ್ಲಿ! ಇಡೀ ಪ್ರಪಂಚ ಇಂತಹ ಪೊಗದಸ್ತಾದ ಪ್ರಸಾದ ಹೊಡೀತಿರಬೇಕಾದರೆ ನನ್ನ ಪಾಡು ನೆನೆದು ಕಣ್ಣಲ್ಲಿ ನೀರು ಊಹೂಂ ನೀರಲ್ಲ ರಕ್ತ ಹರೀ ತು ಇವರೇ..

ಅವತ್ತಿಂದ ದಿವಸಾ ಬೆಳಿಗ್ಗೆ ವಾಕಿಂಗ್ ಹೋಗಬೇಕಾದರೆ ದೇವಸ್ಥಾನದ ಬಾಗಿಲ ಮೂಲಕ ಒಳಗಿರೋ ದೇವರನ್ನ ನೋಡೋದು.ಏನು ಸಾರ್ ನನ್ನ ಪಾಡು ಹೀಗಾಯ್ತು….. ಅಂತ ಮನಸಿನಲ್ಲೇ ಹೇಳಿಕೊಂಡು ವಾಕಿಂಗ್ ಹೋಗೋದು, ವಾಪಸ್ ಬರ್ತಾ ಮತ್ತೆ ದೇವರನ್ನು ಸಂದಿಯಿಂದ ನೋಡೋದು 

ಏನು ಸಾರ್ ನನ್ನ ಪಾಡು ಹೀಗಾಯ್ತು….. ಅಂತ ಹೇಳಿಕೊಂಡು ಮನೆ ಸೇರೋದು ಮಾಡ್ತಾ ಇದ್ದೇ ತಾನೇ…?

ದೇವಸ್ಥಾನದ ಪೂಜಾ ರರು ಪ್ರತಿದಿವಸ ನನ್ನನ್ನು ನನ್ನ ಗೋಳಿನ ದೈನ್ಯದ ಮುಖ ನೋಡ್ತಾ ಇದ್ದರಾ?

“ದೇವರ ಹತ್ರ ಕಷ್ಟ ಹೇಳ್ಕೊಳ್ಳಿ ನಿಮಗೆ ಪರಿಹಾರ ಆಂಡವ ಕೊಡ್ತಾನೆ…..”ಅಂದರು, ಹೋಟೆಲಲ್ಲಿ ನಾನು ಕಾಫಿ ಕುಡಿತಿದ್ದೆ. ಅವರು ಸಾಂಬಾರ್ ಕೊಳ್ಳಲು ಬಂದಿದ್ದರು.

“ಯಾಕೆ ಇಲ್ಲಿಂದ ಸಾಂಬಾರು? ಇವತ್ತೇನು ಇಲ್ವೇ ದೇವಸ್ಥಾನದಲ್ಲಿ….?”ಅಂದೆ.

“ಇದೆ ಸಾರ್. ಪ್ರತಿದಿವಸ ಅದೇ ತಿಂದು ಬೇಜಾರು ಹತ್ತಿ ಹೋಗಿದೆ. ಹೋಟೆಲ್ ನಿಂದ ಸಂಬಾರ ತನ್ನಿ ಅಂದಳು ಹೆಂಡ್ತಿ…..”ಅಂದರು.

ಬರ್ತೀನಿ ಅಂತ ಅವರು ಹೊರಟರು.

ಹೋ ಒಂದೇ ತರಹ ತಿಂದರೆ ಅದೂ ಬೇಜಾರಾಗುತ್ತೆ… ಅಂತ ಅರ್ಥ ಆಯ್ತಾ? ಆದರೇನು ನನಗೆ ಒಂದೇ ತರಹದ್ದು ಅದೇ ದೇವರ ಪ್ರಸಾದ ಇಲ್ಲವೇ ಅನಿಸ್ತಾ?

“ಮನೆ ಹತ್ತಿರ ತಾನೇ ನಾನು ಇರೋದು?”

“ಹೌದು ಸರ….”

“ಮನೆ ಹತ್ತಿರವೇ ಇದ್ದರೂ ಯಾಕೆ ನನ್ನನ್ನು ನೋಡೋಕ್ಕೆ ಬರಲ್ಲ…?”

“ಸಾರೂ ನಾನು ರೇಷನಲಿಸ್ಟ್.. ಹೆಂಗೆ ಬರಲಿ ಸಾರೂ…”

“ನೀನು ಆಗ ಕಣಯ್ಯ ರೇಷನಲಿಸ್ಟ್. ಈಗ ಯಾರು ಇದಾರೆ ಹಾಗೆ….?”

“ಯಾಕೋ ಹಿಂಜರಿಕೆ ಸಾರೂ…”

“ಅದೇನೂ ಬೇಡ. ನಾಳೆ ಬಾ…”

“ಅಯ್ಯೋ ಸಾರೂ ನಾಳೆ ಏಕಾದಶಿ….”

“ಏಕಾದಶಿ ಆದರೇನು? ಉಪಾಸ ಮಾಡ್ತೀಯಾ..?”

“ಉಪವಾಸ ಇಲ್ಲ ದೇವರೇ ಮಾಡೋದಿಲ್ಲ. ಏಕಾದಶಿ ದಿವಸ ನಿನ್ನಲ್ಲೂ ಪ್ರಸಾದ ಇರೊಲ್ಲವೇ…..!”

“ನಾಳೆ ಬಾ….!”ಅಂತ ದೇವರು ಕನಸಲ್ಲಿ ಬಂದು ಹೇಳಬೇಕೇ?

ಇದು ಏಕಾದಶಿ ಹಿಂದಿನ ದಿನ ಆಗಿದ್ದು. ಏಕಾದಶಿ ದಿವಸ ಎಂದಿನ ಹಾಗೇ ವಾಕಿಂಗ್ ಹೋದೆ. ದೇವರ ಮಾತು ಮರೆತಿದ್ದೆ. ವಾಕಿಂಗ್ ಹೋಗಬೇಕಾದರೂ ಕ್ಯೂನಲ್ಲಿ ಸಾವಿರ ಜನ, ವಾಪಸ್ ಬಂದಾಗಲೂ ಎರಡು ಸಾವಿರ ಜನ. ಸಂದಿಯಿಂದ ದೇವರನ್ನು ನೋಡಲು ಆಗಲಿಲ್ಲ. ಮನೆಗೆ ಬಂದೆ ಅವಲಕ್ಕಿ ಬಿಸಿಬೇಳೆ ಬಾತ್, ಗೊಜ್ಜು ಅವಲಕ್ಕಿ ತಿಂದೆ. ಮನೆಗೆ ನಂಟರು ಬಂದರು.ದೇವಸ್ಥಾನಕ್ಕೆ ಹೋಗೋಣ ಏನೂ ತಿನ್ನದೇ ದೇವರನ್ನು ದರ್ಶನ ಮಾಡಿದರೆ ಸಾವಿರ ಜನ್ಮದ ಪುಣ್ಯ ಅಂತೆ ಬಾ ಅಂತ ಬಲವಂತ ಮಾಡಿದರಾ..

ನೀವು ಹೋಗಿದ್ದು ಬನ್ನಿ ನಂದು ಆಗಲೇ ಉಂಡಾಯಿತು ಅಂದರೂ ಬಿಡದೆ ಕರೆದುಕೊಂಡು ಹೋದರಾ? ಕ್ಯೂ ನಲ್ಲಿ ಮೂರು ಗಂಟೆ ನಿಂತು ದೇವರೆದುರು ಬಂದೆ.

“ಏನಪ್ಪಾ ಬೆಳಿಗ್ಗೆ ಬರ್ತೀಯಾ ಅಂತಿದ್ದೆ. ಈಗ ಬಂದೇ….”

“ಬೆಳಿಗ್ಗೆ ಮರೆತೆ ಸಾರೂ. ಈಗ ನಂಟರು ಬಂದ್ರು. ಅವರೇ ಎಳಕೊಂಡು ಬಂದ್ರು…”ಅಂದೆ.

ದೇವರು ನಕ್ತು. “ಹೋಗು ಪ್ರಸಾದ ಇಸ್ಕೋ…” ಅಂತ ಹೇಳಿ ತನ್ನ ಪೋಸಿಶನ್ ಗೆ ಹೋಯ್ತು.

ಆಚೆ ಬಂದರೆ ಒಂದು ದೊಡ್ಡ ತಟ್ಟೆಲಿ ಕೇಸರಿ ಬಾತು, ಉಪ್ಪಿಟ್ಟು, ಬಾಳೆಹಣ್ಣು ರಸಾಯನ ಪ್ರಸಾದ ಸಿಗಬೇಕೇ….!

ಒಂದು ತಟ್ಟೆ ಖಾಲಿ ಮಾಡಿ ದೇವರಿಗೆ” ಥ್ಯಾಂಕ್ಸ್ ಸಾರೂ….”ಅಂದೆ .

“ಬರ್ತಾ ಇರಯ್ಯಾ ಒಳ್ಳೊಳ್ಳೆ ಪ್ರಸಾದ ತಟ್ಟೆ ತುಂಬಾ ಸಿಗ್ತದೆ….”ಅಂತ ದೇವರು ಆಶೀರ್ವಾದ ಮಾಡಿತು.

ಇನ್ಮೇಲೆ ದಿವಸಾ ಬಂದು ಪ್ರಸಾದ ಇಸ್ಕೋಬೇಕು ಅಂತ ಡಿಸೈಡ್ ಮಾಡಿದ್ದೀನಿ. ಒಂದು ಹಂತದವರೆಗೆ ರೇಷನಲಿಸ್ಟ್ ಸರಿ, ಆ ಹಂತ ಮುಗಿದಮೇಲೂ ಅದೇ ಆಗಿದ್ರೆ ಅದೇನು ಚೆನ್ನ ಅಲ್ವೇ…

ಏನೇ ಆದರೂ ಒಂದು  ಸ್ಟೇಜ್ ವರೆಗೂ ಒಕೆ….. ಅಷ್ಟೇ…!

‍ಲೇಖಕರು Admin

11 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading