ಒಂದು ಸೆಲ್ಪಿ ತೆಗಿಸಿಕೊಳ್ಳಬೇಕಿತ್ತು ಅವಳ ಕಿರುಬೆರಳ ಹಿಡಿದು

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಅವರ ನಾಗರಾಜ್ ಹರಪನಹಳ್ಳಿ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ‘ಚರಿತಾ ಮೈಸೂರು’. ಕಾದು ಓದಿ

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ನಾಗರಾಜ್ ಕಾರವಾರ ಸೇರಿಕೊಂಡಿದ್ದಾರೆ. ಬಿಸಿಲೂರಿನ ಹುಡುಗನಿಗೆ ಕಡಲ ಸಾಂಗತ್ಯ. ನಾಗರಾಜ್ ಕವಿತೆ ಒಂದರ್ಥದಲ್ಲಿ ಈ ಎರಡರ ಸಂಗಮವೇ.. ಈತ ಬಿಕ್ಕಬಲ್ಲ ನೋವು ನೋಡಿ.. ಉಕ್ಕಬಲ್ಲ ಪ್ರೇಮದಲ್ಲಿ..

ಈಟಿವಿ ಚಾನಲ್ ನ ವರದಿಗಾರರಾಗಿದ್ದ ನಾಗರಾಜ ಹರಪನಹಳ್ಳಿ ಈಗ ಈಟಿವಿ ಭಾರತ್ ನ ಪ್ರತಿನಿಧಿ.

ಕಂಡ ನೋವುಗಳು ಸಾಕಷ್ಟು. ಬದುಕಿನಲ್ಲೂ.. ವರದಿ ಮಾಡುವಾಗಲೂ..

ಅವಧಿ ಓದುಗರಿಗೆ ಚಿರಪರಿಚಿತರಾದ ನಾಗರಾಜ್ ಬಿಸಿಯುಸಿರಿನ ಕವಿತೆಗಳೊಂದಿಗೆ ಇಲ್ಲಿದ್ದಾರೆ.

ಉಳಿದದ್ದು ದಂಡೆ ವಿರಹ

ಆಕೆ ತಣ್ಣಗೆ ಉಸಿರಿದಳು
ಪ್ರಶಾಂತ ದಂಡೆಯಲಿ ನಡೆಯುತ್ತಾ…

ದೂರವಾಗಲೂ ಕಾರಣ ಹುಡುಕುತ್ತಿದ್ದೇವೆ
ಇಬ್ಬರೂ
ಪ್ರೀತಿ ಕಡಿಮೆಯಾಗಿಲ್ಲ

ಪ್ರೀತಿಯ ಮೂರನೇ ಹಂತದಲ್ಲಿದ್ದೇವೆ
ತಪ್ಪಿಸಿಕೊಳ್ಳಲು
ಸಾಧ್ಯವಾಗುತ್ತಿಲ್ಲ
ಅಸ್ತಿತ್ವದ ಭಯ

ಕ್ಯಾರಿಯರ್ ಮುಂದೆ
ಎಲ್ಲವೂ ನಗಣ್ಯ ಅವಂಗೆ :
ದಂಡೆಯಲ್ಲಿ ಸ್ಥಿತಪ್ರಜ್ಞಳಂತೆ ಕುಳಿತಳು
ಹೆರಳು ಬಿಚ್ಚಿಕಟ್ಟಿದಳು
ತುಸು ಹೆಚ್ಚೇ ಹಾಕಿದ ತೈಲ
ಒಡಲುರಿಯ ತಂಪಾಗಿಸಿತ್ತು
ಉಕ್ಕುವ ಯೌವ್ವನವ ಕಟ್ಟಿಹಾಕುತ್ತಾ
ಕುಳಿತಳು;  ದಂಡೆ  ನಿಟ್ಟುಸಿರುಬಿಟ್ಟಿತ್ತು

ಅಷ್ಟೇನೂ ಉಲ್ಲಾಸಿತಳಾಗಿರಲಿಲ್ಲ
ದುಃಖಿಯೂ ಆಗಿರಲಿಲ್ಲ
ಸಾವಿಗೆ ಉತ್ತರ ಹುಡುಕುತ್ತಿದ್ದ ಗೌತಮ
ಸುಳಿದುಹೋದ
ಅವಳ ಮೊಗದಲ್ಲಿ…

ತನ್ನ ಪಾಡಿಗೆ ತಾನು ಓಡುವ
ಕಾರಲ್ಲಿ ತಣ್ಣಗೆ ಉಸುರಿದಳು
‘ನಾವು ಸತ್ತುಹೋಗುತ್ತೇವಲ್ಲ ಒಂದಿನಾ’

ಹತ್ತಿರವಿದ್ದು ಎಷ್ಟು ಅಂತರ ಕಾಯ್ದುಕೊಂಡಿದ್ದೇವೆ, ನಮಗೆ ನಾವೇ
ಪ್ರಾಮಾಣಿಕರಾಗಿದ್ದೇವೆ
ಆಡುವವರ ನೋಡುವವರ ಕಣ್ಣಿಗೆ ಏನು
ಗೊತ್ತು ; ಒಳಗುಟ್ಟು ??
ಆಡಿಕೊಂಡದ್ದೇ ಬಂತು
ಉಳಿದದ್ದು ದಂಡೆ ವಿರಹ

ಸಿಹಿನದಿಯು ಕಡಲು ಬೆರೆತರು
ಅಲೆಯಲ್ಲಿ ಉಕ್ಕಿದ್ದು ಉಪ್ಪುನೀರು

ದಂಡೆಯ ಜೊತೆ ಮಾತುಬಿಟ್ಟೆ 

ಈ ದಂಡೆಯೇ ಹೀಗೆ

ಒಮ್ಮೊಮ್ಮೆ ನಿಷ್ಕರುಣಿ
ಸಂಬಂಧಗಳ ಹೊಸೆದು
ಕಸಿದುಕೊಳ್ಳುತ್ತದೆ
ಸುಳಿವು ಕೊಡದಂತೆ

ಮೊದಲ ಬಾರಿಗೆ

ಮಾತು ಬಿಟ್ಟಿದ್ದೇನೆ
ದಂಡೆಯ ಜೊತೆ
ಕೊಟ್ಟ ಮಾತು
ತಪ್ಪಿದ್ದಕ್ಕೆ

ಅದೆಷ್ಟು ಸಲ ಸೋತಿದ್ದೇನೆ

ದಂಡೆಯ ಸ್ನೇಹಕ್ಕಾಗಿ
ಶರಣಾಗಿದ್ದೇನೆ ಮುದ್ದಿಸಿದ್ದೇನೆ
ರಮಿಸಿದ್ದೇನೆ
ಆದರೂ
ಒಂಚೂರು ಕರುಣೆಯಿಲ್ಲ
ನಿಷ್ಠುರ ದಂಡೆಗೆ

ದಂಡೆ ಜೊತೆ ಮಾತು ಬಿಟ್ಟು

ಹೆಜ್ಜೆ ಹಾಕಿದೆ
ಒಂದಿಷ್ಟು ಸಡಿಲವಾಗಲಿಲ್ಲ
ಮುಖ ಉಬ್ಬಿಸಿಕೊಂಡಿತ್ತು

ನಾನೇ ಕರಗಿ

ನಗು ಚೆಲ್ಲಿದೆ
ಇಡೀ ದಂಡೆ ಸಂಭ್ರಮದಿ
ನಕ್ಕಿತು
ಸಂಜೆ ರಂಗಿಗೆ ಹೊಳೆದು
ಕುಣಿದು ಕುಪ್ಪಳಿಸಿತು

ಶರಧಿ ಸಾಕ್ಷಿ

ಭೂಮಿ ಮೇಲೆ

ಜಂಗಮನ ಹೆಜ್ಜೆ
ತುಳಿಸಿಕೊಂಡರೂ
ಪಾದಕ್ಕೆ ನೋವಾಯಿತೇ
ಎನ್ನುತ್ತಾಳೆ ಅವ್ವ

ದಡದಲ್ಲಿ ನಿಂತು

ಮಾತಾಡಿದೆ

ಕನಸುಗಳ ಕಳುಹಿಸಿದೆ
ಆಕೆ
ದೂರದಿಂದಲೇ
ಹೂವಾದಳು

ನಿನ್ನ ಶಬ್ದಕ್ಕೆ

ಬದುಕು ಕಟ್ಟುವ ಕಸುವು
ಇದೆ ಎಂದು ತಿಳಿದಾಗ
ನಿಶಬ್ದದ ತಂಗಾಳಿ
ತಾಗಿ ಹೋಯಿತು

ನೀನು ಮರೆಯಾದ

ಮೇಲೆ
ಕತ್ತಲು ಬೆಳಕಿನ
ವ್ಯಾಖ್ಯಾನಕೆ
ತಡವರಿಸಿದೆ

ಸುತ್ತಾಡಿದ ಕುಳಿತ ನೆಲ

ಮತ್ತೆ ಕಾಡುತಿವೆ
ಅಲ್ಲೇ ಅದೇ ಜಾಗದಲ್ಲಿ
ಮತ್ತೆ ಕನಸುಗಳು
ಜೀವತಾಳುತ್ತಿವೆ…

ನೀನು ಕಡಲು ನಾನು ದಂಡೆ

ಯುಗಯುಗಗಳ ಪ್ರೇಮಕ್ಕೆ
ಸಾಕ್ಷಿಯಾಗಿದೆ ಶರಧಿ

ಒಂದು ಸೆಲ್ಫಿಗಾಗಿ

ಒಂದು ಸೆಲ್ಪಿ ತೆಗಿಸಿಕೊಳ್ಳಬೇಕಿತ್ತು
ಅವಳ ಕಿರುಬೆರಳ ಹಿಡಿದು
ಶಾಶ್ವತ ನೆನಪಿಗಾಗಿ
ಎಂದೂ ಮರೆಯದ ಘಳಿಗೆಗಾಗಿ

ಸೆಲ್ಪಿ ತೆಗೆಸಿಕೊಳ್ಳೊದು ಅದಮ್ಯ ಬಯಕೆಯಾಗಿತ್ತು
ಆದರೆ …ಕೇಳಲು ಭಯ

ಅವಳು ಹಾಗೆ
ಕಡು ವ್ಯಾಮೋಹಿ ಅದಮ್ಯ ಚೇತನದ ಹುಡುಗಿ
ಆಕಾಶ ಭೂಮಿ ಒಂದು ಮಾಡಿ ಬೆಳೆದವಳು: ಜೊತೆಯಿದ್ದು ಇರದಂತಿರುವವಳು
ಚಿರ ಚೈತನ್ಯ ನದಿಯಂತಹ ಹುಡುಗಿ

ಒಂದು ಸೆಲ್ಫಿ ತೆಗೆಸಿಕೊಳ್ಳುವ
ಬಯಕೆ ಇತ್ತು ; ಕೇಳಲಾಗಲಿಲ್ಲ
ಬೆಳಕಿನಂತಹ ಹುಡುಗಿ
ಬೆಳಕನ್ನೇ ಮಡಿಲಲ್ಲಿಟ್ಟುಕೊಂಡವಳು
ಸ್ವರ್ಗ ಪಾತಾಳಗಳ ಒಂದು ಮಾಡಿದವಳು
ಭೂಮಿಯಂತಹ ತಾಳ್ಮೆಯುಳ್ಳವಳು
ಜ್ವಾಲೆಯಂತೆ ಸಿಡಿಯುವವಳು
ಕಡಲು ದಂಡೆಯ ಉಡಿಯಲ್ಲಿರಿಸಿ ಕೊಂಡವಳು

ಒಮ್ಮೊಮ್ಮೆ  ಹತ್ತಿರ
ಮಗದೊಮ್ಮೆ ದೂರದೂರ
ಸನಿಹವಿದ್ದೂ ದೂರ
ದೂರವಿದ್ದು ಸನಿಹ ನಿಲ್ಲುವ
ಕೊಲ್ಮಿಂಚಿನಂತಹ , ಕಾಮನಬಿಲ್ಲಿನಂತಹ
ಮಂದಗಮನೆ , ಪದ್ಮಿನಿಯ ಸಹೋದರಿ
ಶಿಲಾಬಾಲಿಕೆಯ ಹೋಲುವವಳು
ಒಂದು ಸೆಲ್ಫಿ ಬೇಕಿತ್ತು ಈಕೆಯ ಜೊತೆ

ಆದರೆ ಆಕೆ ಶಿಲೆಯಲ್ಲ ,
ಜೀವಂತ ಹುಡುಗಿ ; ರಾಗದ್ವೇಷಗಳ ಜೊತೆ ಬೆಳೆದವಳು
ಹಾಗಾಗಿ ಇನ್ನು ಕಾಯುತ್ತಿದ್ದೇನೆ
ಕಾಯುತ್ತೇನೆ ಕೂಡಾ
ಯುಗ ಯುಗಗಳಿಂದ

ನದಿ ಬಾಯರಿಕೆ ಎಂದಿತು

ಸುಡು ಬಿಸಿಲು
ಉರಿಬಿಸಿಲು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
…ದೂರವಾದೆ
ಬಿಸಿಲು ಉಲ್ಬಣಿಸಿದೆ

ಉರಿ ಬಿಸಿಲ ದಾರಿ
ದಾರಿಯಲ್ಲಿ ಕಂಡವರು
ನಕ್ಕರು, ಮಾತಾಡಿದರು
ಆದರೂ
ಸಮಾಧಾನವಾಗಲಿಲ್ಲ

ಉರಿ ಬಿಸಿಲಿನದ್ದೇ ಮಾತು
ಒಂದು ಹನಿ ಪ್ರೀತಿಗಾಗಿ
ಎಲ್ಲರದ್ದೂ ಹುಡುಕಾಟವೇ
ಬಿಸಿಲಿನ ಅರ್ಥ
ಇಮ್ಮಡಿಸಿತು

ಭೂಮಿ ತಲ್ಲಣಿಸಿದೆ
ಕಾವ್ಯ ಕಾಣೆಯಾಗಿದೆ
ನೀನು ಹೋದ ಮೇಲೆ
ಯಾರಿಗೆ ಬೇಕು ಈ ಕಾವ್ಯ
ಅಕ್ಷರಗಳು ಸಹ
ಬಿಸಿನ ದಾಹಕ್ಕೆ
ಬಳಲಿವೆ

ನದಿ ದಂಡೆಗೆ ಬಂದೆ
ನದಿ ಬಾಯರಿಕೆ ಎಂದಿತು
ಕಡಲದಡಕ್ಕೆ ಬಂದೆ
ಅದು ಸಹ ಅಬ್ಬರಿಸಿತು
ಮೋಡ ಕಟ್ಟುವ ಮುಗಿಲಿಗಾಗಿ
ಕಾದಿದ್ದೇನೆ ಎಂದಿತು
ನನ್ನದು
ನಿನ್ನ ಹಸಿವೆಯೇ ಎಂದು
ಮೌನಿಯಾದೆ

‍ಲೇಖಕರು Avadhi GK

January 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. prema

    ನಿಜವಾಗಲೂ ತುಂಬ ಸುಂದರವದ ಕವನಗಳು. ಅದರಲ್ಲೂ ಒಂದು ಸೆಲ್ಪಿಗಾಗಿ ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: