ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಭಿನ್ನ ನಾಟಕ: ನೀರಿನ ನಿಲುತಾಣ

-ಹರೀಶ್ ಕೇರ

ಕೃಪೆ: ಬೆಟ್ಟದಡಿ

ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ ಅನಾವರಣಗೊಳ್ಳುತ್ತವೆ- ಪ್ರೇಮ, ಸ್ನೇಹ, ಕಚ್ಚಾಟ, ದರ್ಪ, ಸಾವು, ಬಾಲ್ಯ…

ನೀನಾಸಂ ಮರುತಿರುಗಾಟ- ೨೦೧೧ ಪ್ರದರ್ಶಿಸುತ್ತಿರುವ ‘ನೀರಿನ ನಿಲುತಾಣ’ ನಾಟಕದ ಬಗ್ಗೆ ಇಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಅದೊಂದು ನಾಟಕ ಎಂದರೆ ಅರ್ಧ ಸತ್ಯ; ಏಕೆಂದರೆ ಅಲ್ಲಿ ನಾಟಕೀಯ ಘಟನೆಗಳಾಗಲೀ, ಶೀಘ್ರಗತಿಯಾಗಲೀ ಇಲ್ಲ. ಅದೊಂದು ಕಾವ್ಯದಂತಿದೆ ಎಂದರೆ ಕ್ಲೀಷೆ. ಇಲ್ಲಿ ಮಾತೇ ಇಲ್ಲ.

ನಾಟಕ ಎಷ್ಟು ನಿಧಾನ ಗತಿಯಲ್ಲಿದೆ ಎಂದರೆ, ರಂಗ ಪ್ರವೇಶಿಸುವ ಒಂದು ಪಾತ್ರ ರಂಗದ ಮಧ್ಯಕ್ಕೆ ಬರಲು ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ಇದನ್ನು ‘ಅತಿ ವಿಲಂಬಿತ ಲಯ’ ಎಂದು ನಿರ್ದೇಶಕರು ಕರೆದಿದ್ದಾರೆ. ಎಲ್ಲೋ ಒಂದೆರಡು ಕಡೆ ಬಿಟ್ಟರೆ, ನಿಜ ಜೀವನಕ್ಕೆ ಸಹಜವಾದ ಗತಿಯ ಚಲನೆಗಳು ಈ ನಾಟಕದಲ್ಲಿ ಇಲ್ಲ. ನಾಟಕದಲ್ಲೆಲ್ಲೂ ಮಾತುಗಳೂ ಇಲ್ಲ. ಆರಂಭದ ಅರ್ಧ ಗಂಟೆಯಲ್ಲೇ ಪ್ರೇಕ್ಷಕ ತಾಳ್ಮೆ ಕಳೆದುಕೊಂಡಿರುತ್ತಾನೆ; ನಾಟಕದ ಒಳಗೆ ರಭಸಗತಿಯಿಂದ ನುಗ್ಗಿಬಿಡೋಣವೆಂದೂ ಆತನಿಗೆ ಅನ್ನಿಸಿದರೆ ಆಶ್ಚರ್‍ಯವಿಲ್ಲ. ಈ ನಾಟಕ ಅಷ್ಟರ ಮಟ್ಟಿಗೆ ಬೇರೆ ರೀತಿಯ ಮನೋ ತಯಾರಿಯನ್ನು ನೋಡುಗನಿಂದ ಅಪೇಕ್ಷಿಸುತ್ತದೆ.

ನಾಟಕದಲ್ಲಿ ದಟ್ಟವಾಗಿ ಹಬ್ಬಿರುವುದು ಪ್ರಯಾಣದ ಪ್ರತಿಮೆ; ಎಲ್ಲರೂ ಎಲ್ಲಿಗೋ ಹೋಗುತ್ತಿದ್ದಾರೆ, ಎಲ್ಲಿಗೆ ಎಂಬುದು ಸ್ಪಷ್ಟವಿಲ್ಲ. ಬಳಲಿರುವ ಅವರ ಮುಖಗಳು ಹಾಗೂ ಎಲ್ಲವನ್ನೂ ಅವರು ಗಂಟು ಕಟ್ಟಿಕೊಂಡು ಹೋಗುತ್ತಿರುವುದು ನೋಡಿದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಂಡು ಹೋಗುವುದೇ ಅವರ ಪರಮ ಉದ್ದೇಶವಾಗಿರುವಂತಿದೆ; ಅದು ಈ ಜಗತ್ತಿನ ದಾರುಣ ವಾಸ್ತವದಿಂದ ಇರಬಹುದು. ಈ ನಾಟಕ ಮೂಲ ಜಪಾನಿನ ಓಟೋ ಶೋಗೋ ಅವರದು. ಜಪಾನಿನ ಇತಿಹಾಸ ಅರಿತವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ; ಮಹಾಯುದ್ಧಗಳ ಭೀಕರ ಅನುಭವಗಳು ಅವರನ್ನು ಸದಾ ದುರಂತದ ಬಗ್ಗೆ ಚಿಂತಿಸುತ್ತಿರುವಂತೆ ರೂಪಿಸಿದೆ. ಅಲ್ಲಿನ ಪ್ರಜ್ಞಾವಂತ ಮನಸ್ಸುಗಳು ಯಾವತ್ತೂ ಮನುಷ್ಯ ಚೇತನದ ಅವನತಿ, ಮನುಷ್ಯಕುಲದ ದುರಂತಗಳ ಬಗ್ಗೆ ನುಡಿಯುತ್ತಲೇ ಇರುತ್ತವೆ. ಈ ನಾಟಕ ಕೂಡ ಅದನ್ನೇ ಹೇಳುವಂತಿದೆ.

ಇಂಥ ವಸ್ತುವಿಗೆ ಕೃತಿಕಾರರು ಈ ಮಂದಗತಿಯನ್ನು ಆರಿಸಿಕೊಳ್ಳಲು ಏನು ಕಾರಣ ? ಅದಕ್ಕೆ ನನಗನ್ನಿಸುವಂತೆ ಕಾರಣಗಳು ಎರಡು. ಒಂದು- ಮನುಷ್ಯನ ತೀವ್ರಗತಿಯ ಬದುಕಿನ ಅಂಚಿನಲ್ಲಿ ನಿಂತು, ಅದಕ್ಕೆ ಅಣಕವಾಗಿ ಈ ನಿಧಾನಗತಿಯನ್ನು ತರಲಾಗಿದೆ. ಎರಡು- ನಾಟಕವನ್ನು ನೋಡುತ್ತ ನೋಡುತ್ತ ನಾವು ನಮ್ಮ ಒಳಗೂ ನೋಡಿಕೊಳ್ಳಲು ಕೃತಿಕಾರ ಪ್ರೇರೇಪಿಸುತ್ತಿದ್ದಾನೆ. ನಾಟಕದ ವಿಲಂಬಿತ ಲಯಕ್ಕೆ ಒಗ್ಗಿಕೊಳ್ಳಲಾಗದೆ ಹೊರಬಿದ್ದರೆ ಅದು ನೋಡುಗನ ಸೋಲು, ನಾಟಕದ್ದಲ್ಲ.

ಹಾಗೆಂದು ಇದರಲ್ಲಿ ಕೆಲ ದಂಗುಬಡಿಸುವ ಚಲನೆಗಳೂ ಇವೆ. ಕುಳಿತಲ್ಲೇ ಸತ್ತುಹೋಗುವ ಮುದುಕಿ, ಆಕೆಯನ್ನು ಕಸದ ರಾಶಿಗೆಸೆಯುವ ಕ್ರಿಯೆ ಇಂಥ ಚಲನೆಗಳಲ್ಲೊಂದು. ಚೈತನ್ಯ ಇಲ್ಲದೆ ಹೋದರೆ ಮನುಷ್ಯ ಕೂಡ ಒಂದು ಕಸ ಅಷ್ಟೇ; ಆತ ಸೃಷ್ಟಿಸಿದ ಕಸದ ರಾಶಿಗೆ ಕೊನೆಗೆ ಆತನೂ ಸೇರುತ್ತಾನೆ ಎಂಬುದು ಹಲವಾರು ಅರ್ಥ ಪರಂಪರೆಯನ್ನೇ ನಮ್ಮ ಮನದಲ್ಲಿ ನಿಲ್ಲಿಸುವ ಒಂದು ಕ್ರಿಯೆ.

ಸದಾ ಸುರಿಯುತ್ತಲೇ ಇರುವ ನೀರು, ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾದ ಪ್ರಾಕೃತಿಕ ಚೈತನ್ಯದ ಪ್ರತೀಕವೋ ? ಆ ಕಸದ ರಾಶಿ, ನಮ್ಮಿಂದ ಹಿಂದೆ ಸರಿದ ಜೀವನದ ತುಣುಕುಗಳೋ ? ಕಸದ ರಾಶಿಯ ಮೇಲೆ ಉಲ್ಟಾ ಬಿದ್ದಿರುವ ಹಾಳು ಸೈಕಲ್ಲು, ನಮ್ಮ ವೇಗದ ಗತಿಗೆ ವ್ಯಂಗ್ಯವೋ ? ಇಷ್ಟೆಲ್ಲ ಪ್ರಯಾಣಗಳು ಈ ನಾಟಕದಲ್ಲಿ ಇದ್ದರೂ, ಯಾರೂ ಯಾಕೆ ಪರಸ್ಪರ ಸಂಸುವುದೇ ಇಲ್ಲ ? ಹೀಗೆ ಹಲವಾರು ಪ್ರಶ್ನೆಗಳನ್ನು ನಾಟಕ ಮನದಲ್ಲಿ ಬಿತ್ತುತ್ತದೆ.

ಇಂಥ ಅಪರೂಪದ ಪ್ರಾಯೋಗಿಕ ನಾಟಕವನ್ನು ಅಷ್ಟೇ ಸಮರ್ಥವಾಗಿ ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ. ನೀನಾಸಂನ ನಟರು ಅದಕ್ಕೆ ಜೀವ ತುಂಬಿದ್ದಾರೆ. ರಂಗದ ಮೇಲೆ ಅವರ ಚಲನೆಗಳ ಸಂಯಮವನ್ನು ನೋಡಿದರೆ, ನಾಟಕ ಮುಗಿದ ನಂತರ ಅವರು ಕಿರುಚಿ ಕುಣಿದಾಡಿ ತಮ್ಮ ಬಿಗಿಹಿಡಿದ ನರಗಳನ್ನು ಸಡಿಲ ಮಾಡಿಕೊಂಡಿರಬಹುದು ಎಂಬುದು ನನ್ನ ಊಹೆ !

 

‍ಲೇಖಕರು G

8 May, 2011

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. ಅಶೋಕವರ್ಧನ ಜಿ.ಎನ್

    ನನ್ನಲ್ಲಿ ಈ ನಾಟಕದ ನಿರೀಕ್ಷೆ ಹುಟ್ಟಿಸಿದವರು ಮಹಾಲಿಂಗ ಭಟ್ಟರು. ಕುತೂಹಲದ ಕಟ್ಟೆಗೆ ಹೆಚ್ಚಿನ ಮಹಾಪೂರಗಳನ್ನು ಹರಿಸಿದವರು ಪರೋಕ್ಷವಾಗಿ ಕೆವಿ ಅಕ್ಷರ, ಪ್ರತ್ಯಕ್ಷವಾಗಿ ಅಭಯ ಸಿಂಹ ಮತ್ತು ಈಗ ಹರೀಶ ಕೇರ. ನಾಡಿದ್ದು ಮಂಗಳವಾರ ಉಡುಪಿಯಲ್ಲಿ ನಾಟಕ ನೋಡಲಿದ್ದೇನೆ! ಆದರೂ ವಿಶ್ವದ ಕಾಲಗತಿಯಲ್ಲಿ ನಮ್ಮ ಎಷ್ಟು ದೊಡ್ಡ ಧಾವಂತವಿದ್ದರೂ ನಿಧಾನವೇ ಎನ್ನುವ ಸೂಚನೆ `ಅತಿ ವಿಲಂಬಿತ ಲಯ’ದ ಸೂಚನೆ ಇರಬಹುದೇ ಎಂದು ಅನ್ನಿಸಿತು.
    ಅಶೋಕವರ್ಧನ

  2. ಎಚ್. ಸುಂದರ ರಾವ್

    “ನಾಟಕಕ್ಕೆ ಬರುತ್ತೇನೆ” ಎಂದು ಅಶೋಕರಿಗೆ ಹೇಳಿಬಿಟ್ಟಿದ್ದೇನೆ. ನಾಟಕದ ವಿವರಣೆ ಓದಿದರೆ ಯಾಕೋ ಹೆದರಿಕೆಯಾಗುತ್ತಿದೆ: ಇದನ್ನೆಲ್ಲ ನೋಡಲು ಭಯಂಕರ ಬುದ್ಧಿಜೀವಿ ಆಗಿರಬೇಕೋ ಅಂತ!

  3. ಅಶೋಕವರ್ಧನ ಜಿ.ಎನ್

    ನಿನ್ನೆ ಸಂಜೆ ಉಡುಪಿಯಲ್ಲಿ (ಸುಂದರರಾಯರೂ ಸೇರಿದಂತೆ)ಕಣ್ಣೆವೆ ಬಡಿಯದೆ ಎರಡು ಗಂಟೆಯುದ್ದಕ್ಕೆ ನಾಟಕ ನೋಡಿದೆ. ನನ್ನ ಮನೋಭೂಮಿಕೆಯಲ್ಲಿ ಸುಬ್ರಹ್ಮಣ್ಯದ ಅಡ್ಡಹೊಳೆಯ ಚೊಳಚೊಳ ಒಂದೇ ಸದ್ದು. ಬೆತ್ತ ಕೀಸುತ್ತ, ಬೇಟೆಯಾಡಿ ದಣಿದು, ತೀರ್ಥಯಾತ್ರೆಗಿಳಿದು, ದಾರಿಹೋಕರ ಹೊಡೆದು, ಜಾನುವಾರು ನಡೆಸಿ, ಜಲಕ್ರೀಡೆಗಾಗಿ, ವನವಿಹಾರಕ್ಕಾಗಿ, ಅಸ್ಥಿ ಸಂಚಯನಕ್ಕೆ, ಪಿಂಡಪ್ರದಾನಕ್ಕೆ, ಪ್ರಾಣ ನೀಗುವುದಕ್ಕೆ, ಕ್ಷಣಿಕ ರತಿಗೆ, ಮೀನಿಗೆ, ತೇಲು ದಿಮ್ಮಿಗೆ ಹೀಗೇ ಕಾಲದ ಅಖಂಡ ಪ್ರವಾಹದಲ್ಲಿ ಮುಗಿಯದ ಮನುಷ್ಯ ಯಾತ್ರೆ ನಿಧಾಆಆಆಅನಕ್ಕೆ ಸಾಗಿಯೇ ಇತ್ತು. ಮುಗಿಯದ ಮಾತು, ನಿಲ್ಲದ ಅಳು, ಹೊಡೆದ ಬೊಬ್ಬೆ, ಉಕ್ಕಿದ ಕೇಕೆ, ಸ್ಫುರಿಸಿದ ಹಾಡು ಹೀಗೇ ಎಲ್ಲವೂ ಹಿಂಜಿ ಹಿಂಜಿ ಮೌನವಾದವೇ? ಇಲ್ಲ, ಅಡ್ಡಹೊಳೆಯ ಚೊಳಚೊಳ ಒಂದೇ ನಿರಂತರ. ದಾರಿ ಕಡಿಯುವ, ಸೇತುಬಲಿಯುವ, ಅಣೆಕಟ್ಟುವ, ವಿದ್ಯುತ್ ಬಸಿಯುವ, ಬಾಟಲಿ ತುಂಬುವ, ಮೂಲಕ್ಕೇ ಬಾಯಿಯಿಕ್ಕುವ, ಮೇಲಿನಿಂದ ಲೆಕ್ಕಿಸುವವ, ತಳದಲ್ಲಿ ನುಸುಳುವ, ಕಸಕುಪ್ಪೆ ಬೆಳೆಸುವ ಎಲ್ಲವೂ ಪಿಸಿಪಿಸಿದು ಗುಡ್ಡೆಬಿದ್ದರೂ ಅಡ್ಡಹೊಳೆಯ ಚೊಳಚೊಳ ನಿರಂತರ?

    ಈ ವಲಯಕ್ಕೆ ನಾಟಕದ ಒಂದೇ ಪ್ರದರ್ಶನ ಲಭ್ಯ ಎನ್ನುವ ಒತ್ತಡದಲ್ಲಿ ನನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಒತ್ತಾಯಿಸಿ, ಕಾರು ತುಂಬಿಕೊಂಡು ಧಾವಿಸಿದ್ದೆ. ಕೊನೆಯಲ್ಲಿ ಜೊತೆಗೊಟ್ಟಿದ್ದ, ನೇತ್ರಾವತಿ ತಿರುಗಿಸುವ ಹುನ್ನಾರದವರ ವಿರುದ್ಧ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ ಹಿಡಿದು ಹೋರುವ, ಸುಂದರರಾಯರಿಗೆ ಇದು ಕೇವಲ ನಿಮ್ಹಾನ್ಸ್ ಗಿರಾಕಿಗಳ ಪ್ರಯೋಗವಾಗಿ ಕಂಡದ್ದು ನನಗೆ ಪರಮಾಶ್ಚರ್ಯ.

    ಚಕ್ರದ ಮರುಶೋಧವಾದರೂ ಸರಿ, ವರ್ತಮಾನಕ್ಕಷ್ಟೇ ತೀವ್ರವಾಗಿ ಸ್ಪಂದಿಸುವ, ಕುತೂಹಲದ ಕುದುರೆಯ ನಿರಂತರ ಕಾಸ್ತಾರ/ಸವಾರ ವೆಂಕಟ್ರಮಣ ಉಪಾಧ್ಯ “ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ” ಎಂದದ್ದು ನನಗೆ ವಿಪರೀತವಾಗಿ ಕಾಣಿಸಲಿಲ್ಲ.

    ಅಂತರ್ಜಾಲದ ಸಿಕ್ಕು ಬಿಡಿಸಿ ಜಪಾನೀ ಟಿಪ್ಪಣಿಗಳನ್ನೆಲ್ಲಾ ಸಂಗ್ರಹಿಸಿ ತಂದ ಯುವ ಅಧ್ಯಾಪಕ ಅರವಿಂದ ನಮ್ಮ ಕಾರುಯಾನದ ಉದ್ದಕ್ಕೆ (ಮಂಗಳೂರಿನಿಂದ ಉಡುಪಿಗೆ)ಸರೇಂದ್ರ ಪೈಯವರಿಗೆ ಓದಿಸಿ ಮತ್ತಷ್ಟು ಜಟಿಲ ಬಂಧಕ್ಕೆ ಬಿದ್ದಿರುವುದು ಇನ್ಯಾವ ರೂಪದಲ್ಲಿ ಪ್ರಕಟವಾಗುತ್ತದೋ ಗೊತ್ತಿಲ್ಲ.
    ಅಶೋಕವರ್ಧನ

  4. ರಾಜಾರಾಂ ತಲ್ಲೂರು

    ನಾಟಕದ ಬಗ್ಗೆ ನನಗನ್ನಿಸಿದ ಎರಡು ಮೂರು ಅಂಶಗಳು:
    ೧. ನೀರಿನ ಎಡೆ ಬಿಡದ ಹರಿವಿಗೆ ನಾಟಕದ ಅತಿ ವಿಲಂಬಿತ ಗತಿ ಜಕ್ಸ್ಟಾಪೋಸ್ ಆದದ್ದು ಬಹಳ ಕುತೂಹಲಕರವಾಗಿತ್ತು; ಆದರೆ ಅಷ್ಟೊಂದು ದೀರ್ಘ ಅವಧಿ – ಅಸಹ್ಯ.
    ೨. ಇಂತಹ ಸೂಕ್ಷ್ಮವಾಗಿ ಗೃಹಿಸಬೇಕಾದ ನಾಟಕಗಳ “ತಿರುಗಾಟದ” ಬಗ್ಗೆ ಎಚ್ಚರ ಅಗತ್ಯ. ರಂಗ ಸಜ್ಜಿಕೆ ಮತ್ತು ಬೆಳಕಿನ ಬಗ್ಗೆ ಹೇಳುತ್ತಿದ್ದೇನೆ. ಕರಾವಳಿಯ ಹ್ಯುಮಿಡ್ ವಾತಾವರಣದಲ್ಲಿ ಫ್ಯಾನ್ ಗಾಳಿ ಇಲ್ಲದೆ ನಾಟಕ ನೋಡಿ ಎಂದು ನಮ್ಮನ್ನು ಕೂಡಿ ಹಾಕಿ (ಹೆಚ್ಚಿನಂಶ ನೀರಿನ ಸದ್ದು ಫ್ಯಾನುಗಳ ಅಬ್ಬರಕ್ಕೆ ಕೇಳಿಸಲಾರದು ಎಂದು) ನೀರಿಳಿಸಿದ ಬಳಿಕ ಅಂತಹದೇ ಸೂಕ್ಷ್ಮಜ್ಞತೆಯನ್ನು ನಾವು ಅವರಿಂದಲೂ ನಿರೀಕ್ಷಿಸುವುದು ಸಹಜ ತಾನೇ? ಕ್ಯಾನ್ವಾಸ್ ಮೇಲೆ ಆ ನಿಧಾನದ ಚಲನೆಗಳನ್ನು ಆನಂದಿಸಲು ಮೇಲೆ ಎಲ್ಲೆಂದರಲ್ಲಿ ತೂಗಾಡುತ್ತಿರುವ ಸ್ಪಾಟ್ ಲೈಟ್ ಗಳ ಅಡ್ಡಿ. ಒಟ್ಟು ಚಿತ್ರದ ಬ್ಯಾಲೆನ್ಸ್ ಎಲ್ಲೆಲ್ಲೋ ಕಳೆದುಹೋಗುತ್ತಿತ್ತು. ಸಂಗೀತ ಒಂದೆರಡು ಕ್ಷಣಗಳಲ್ಲಿ ಬಿಟ್ಟರೆ ಅಂತಹ ಪರಿಣಾಮಕಾರಿಯಾಗಿ ಮುಳುಗಿಸಿಕೊಂಡು ಕರೆದೊಯ್ಯುವಂತಿರಲಿಲ್ಲ. ಹಾಗಾಗಿ ಎರಡು ಗಂಟೆಗಳ ಕಾಲ ಹಿಡಿದಿಡುವಂತಹದು ಅಲ್ಲಿ ಏನೂ ಇರಲಿಲ್ಲ. ಇದ್ದದ್ದಿದ್ದರೆ, ಅವರಿಗೆ ಬೇಸರ ಆಗುವುದು ಬೇಡ ಎಂಬ ಪ್ರೇಕ್ಷಕನ ಸಭ್ಯತೆ ಮಾತ್ರ.
    ೩. ಯಾವುದೇ ಒಂದು ಅಭಿವ್ಯಕ್ತಿಯನ್ನು ಒಂದು ಮಾಧ್ಯಮದಲ್ಲಿ ಪ್ರಸ್ತುತ ಪಡಿಸುವಾಗ ಆ ಮಾಧ್ಯಮದ ಆಯ್ಕೆಯನ್ನು ಜಸ್ಟಿಫೈ ಮಾಡಿಕೊಳ್ಳುವುದು ನಿರ್ದೇಶಕನ ಹೊಣೆ. ಅದು ಈ ನಾಟಕದಲ್ಲಿ ಸಾಧ್ಯವಾಗಿಲ್ಲ. ಹಾಗಾಗಿ ವಿಲಂಬಿತ ಲಯದಲ್ಲೇ ಸುಮಾರು ೩೦% ಪ್ರೇಕ್ಷಕರು ನಾಟಕದ ನಡುವಿನಲ್ಲಿ (ಇದು ಉಡುಪಿ ಪ್ರದರ್ಶನದ ಬಗ್ಗೆ) ಹೊರತೆರಳಿದರು (ಅವರು ಕೊನೆತನಕ ನೋಡಿದ ನಮ್ಮೆಲ್ಲರಿಗಿಂತ ಹೆಚ್ಚು ಸಹೃದಯರು!)
    ೪. ಕೊನೆಯದಾಗಿ ನಟರಿಗೆ “ಅಭಿನಂದನೆಗಳು!”. ನಿಧಾನ ಗತಿಯಲ್ಲಿ ಚಲನೆ ನಿಜಕ್ಕೂ ಕಷ್ಟ. ಅದನ್ನ ಬಹುತೇಕ ಸಂತುಲಿತವಾಗಿ ಸಾಧಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ.

  5. ಕೃಷ್ಣ ಮೋಹನ

    ನೀನಾಸಂ ಯಾವಾಗಲೂ ಅತ್ಯಂತ ಉತ್ಸಾಹಭರಿತವಾಗಿ ತಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೇ ಆಸೆಯಿಂದ ಬಂದ ನನ್ನ 10 ವರ್ಷದ ಮಗಳು ನಾಟಕದ ಕೊನೆಯವರೆಗೂ ಬೆವರಿಳಿಸಿಕೊಳ್ಳುತ್ತಾ ನೋಡಿ ಉಡುಪಿಯಿಂದ ಮನೆಯವರೆಗೆ ಬರುವ ದಾರಿಯಲ್ಲಿ ಅದರ ಬಗ್ಗೆ ವಿಶ್ಲೇಷಣೆಯಲ್ಲಿ ತೊಡಗಿದ್ದು ನನಗೆ ವಿಶೇಷವಾಗಿ ಕುತೂಹಲ ಹುಟ್ಟಿಸಿತು. ಇದುವರೆಗೆ ಆಕೆ ನೋಡಿದ ಯಾವುದೇ ನಾಟಕವನ್ನು ಅಷ್ಟು ವಿಶ್ಲೇಶಿಸಿದ್ದು ನಾನು ನೋಡಿರಲಿಲ್ಲ.

    ಪ್ರತಿಯೊಂದು ಮಾಧ್ಯಮದ ಪ್ರೇಕ್ಷಕರು ಅದರದ್ದೇ ಆದ ಪೂರ್ವಗ್ರಹ ಪೀಡಿತರಾಗಿ ಆ ಮಾಧ್ಯಮವನ್ನು ನೋಡಬಯಸುತ್ತಾರೆ. ಚಲನಚಿತ್ರಕ್ಕೆ ಅದರದೇ ಆದ ಮಸಾಲೆ ಇದ್ದರೆ, ಯಕ್ಷಗಾನಕ್ಕೆ ಬೇರೆಯದೇ ಒಂದು. ಒಂದು ಮಾಧ್ಯಮ ಅದರ ಎಲ್ಲೆ ಮೀರಿ ಇನ್ನೊಂದರ ಹಾಗೆ ಆಗಲು ಹೋದಾಗ ಪ್ರೇಕ್ಷಕ ಚಡಪಡಿಸುತ್ತಾನೆ ಎಂಬುವುದಕ್ಕೆ ನೀರಿನ ನಿಲುತಾಣ ಒಳ್ಳೆಯ ಉದಾಹರಣೆ. ಶಾಸ್ಟ್ರೀಯ ಸಂಗೀತದಲ್ಲಿ ಅತಿ ವಿಲಂಬಿತ ಲಯ ಆಸ್ವಾದಿಸುವ ನಾವು ನಾಟಕದಲ್ಲಿ ಅದನ್ನು ಯಾಕೆ ಇಷ್ಟ ಪಡುವುದಿಲ್ಲ? ಛಾಯಾಚಿತ್ರವನ್ನು ಆಸ್ವಾದಿಸುವಾಗ ಅದರಲ್ಲಿ ಇಲ್ಲದ ಚಲನೆಯನ್ನು ನಾವು ಹೇಗೆ ಕಂಡುಕೊಳ್ಳುತ್ತೇವೆ?

    ಫ್ಯಾನಿನ ತಂಪು ಗಾಳಿಯಿದ್ದಿದ್ದರೆ ನೀರಿನ ಚೊಳಚೊಳ ಸದ್ದಿನ ಜೊತೆಗೆ ಪ್ರೇಕ್ಷಕರ ಗೊರಕೆಯ ಸದ್ದೂ ಮಿಶ್ರಿತವಾಗುವುದೆಂಬ ಭಯದಿಂದ ನಮ್ಮನ್ನೆಲ್ಲಾ ಬೆವರಿನ ನಿಲುತಾಣ ಮಾಡಿದ್ದು ಹಲವರಿಗೆ ತೊಂದರೆ ಕೊಟ್ಟಿರಬೇಕು. ನಾಟಕದ ನಡುವಿನಲ್ಲಿ ಕೈಕೊಟ್ಟ ವಿದ್ಯುತ್ ಹಲವಾರು ಪ್ರೇಕ್ಷಕರನ್ನು ಕತ್ತಲಲ್ಲೇ ನಾಟಕ ಬಿಟ್ಟು ಹೊರಗೊಡುವಂತೆ ಸಹಾಯ ಮಾಡಿತ್ತು.

    ಜೀವನದ ಉದ್ದಕ್ಕೂ ನಡೆಯುವ ಎಲ್ಲಾ ಘಟನೆಗಳನ್ನು ನಿದಾನದಲ್ಲಿ ತೆರೆದಿಡುವ ಈ ನಾಟಕ ಕತೆಯ ಹಂದರ ಇಲ್ಲದಿದ್ದರೂ, ನಾವು ಎಲ್ಲಾ ನಾಟಕಗಳಲ್ಲಿ ನಿರೀಕ್ಷಿಸುವ ಅಭಿವ್ಯಕ್ತಿಯನ್ನು ಕೊಟ್ಟದ್ದು,ವಿಭಿನ್ನ ಪ್ರೇಕ್ಷಕರಿಗೆ ತಮ್ಮದೇ ಆದ ರೀತಿಯಲ್ಲಿ ಅದರ ಅರ್ಥವನ್ನು interpret ಮಾಡಲು ಪ್ರೇರಿಪಿಸಿದ್ದು ಕುತೂಹಲಕರವಾಗಿತ್ತು. ಒಂದು ವಿಶಿಷ್ಟ ಅನುಭವವನ್ನು ಕೊಟ್ಟ ಈ ನಾಟಕದ ಇಲ್ಲರಿಗೂ ಅಭಿನಂದನೆಗಳು.

  6. Aravinda

    ಮಾನ್ಯರೆ ತಮ್ಮೆಲ್ಲೆರ ಅಭಿಪ್ರಾಯವನ್ನ ನೋಡಿ, ನನಗೆ ನಾಟಕ ಅನಿಸಿದ ಬಗೆಯನ್ನ ನಾನು ನನ್ನ ಬ್ಲಾಗಿನಲ್ಲಿ ನೀಡಿರುತ್ತೇನೆ. ಆಸಕ್ತಿಯಿರುವವರು ನೊಡಬೊಹುದು…..http://sakshiprajne.blogspot.com/2011/05/blog-post_12.html

  7. H. Sundara Rao

    ನೀರ ನಿಲುತಾಣ:ಅತಿಬುದ್ಧಿವಂತಿಕೆಯ ವಿಕಾರ
    ಈ ವಿವಾದದಲ್ಲಿ ತೊಡಗಿಕೊಳ್ಳುವುದು ಅಗತ್ಯವೆ ಎಂಬ ಗೊಂದಲದಿಂದ ನಾನಿನ್ನೂ ಹೊರಗೆ ಬಂದಿಲ್ಲ. ಏನಾದರಾಗಲಿ ಬರೆದು ಬಿಡುತ್ತೇನೆ. ಸಾಹಿತ್ಯದ ವಿಷಯದಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಅಷ್ಟಾಗಿ ಇಲ್ಲ. ಒಂದು ಒಳ್ಳೆಯ ಪುಸ್ತಕ ಎಲ್ಲಿಯಾದರೂ ಸಿಕ್ಕಿದರೆ ಓದುವುದು, ನಾಟಕ, ಆಟ ಒಳ್ಳೆಯದಿದೆ ಎಂದು ಯಾರಾದರೂ ಹೇಳಿದರೆ ನೋಡುವುದು, ತೀರ ಆಪ್ತವಲಯದಲ್ಲಿ ಅದು ಚೆನ್ನಾಗಿದೆ ಅಥವಾ ಇಲ್ಲ ಎಂದು ಒಟ್ರಾಶಿ ನನ್ನ ಅಭಿಪ್ರಾಯದ ವಿನಿಮಯ, ಇಷ್ಟಕ್ಕೆ ನನ್ನ ಸಾಹಿತ್ಯಾಸಕ್ತಿ ಸೀಮಿತ.
    ಮೊನ್ನೆ ಗೆಳೆಯ ಅಶೋಕರು ಉಡುಪಿಗೆ ಹೋಗೋಣ ಎಂದು ಫೋನ್ ಮಾಡಿದಾಗ ಉದಯ ಭವಾಲ್ಕರರ ಸಂಗೀತ ಕಛೇರಿಗೆ ಎಂದುಕೊಂಡು, ಹಿಂದೆ ಮುಂದೆ ನೋಡದೆ, “ಖಂಡಿತ ಬರುತ್ತೇನೆ” ಎಂದೆ. ನಂತರ ಗೊತ್ತಾಯಿತು, ಅವರು ಹೇಳುತ್ತಿರುವುದು ನೀನಾಸಂನ ಮರುತಿರುಗಾಟದ ನಾಟಕಕ್ಕೆ ಎಂದು. ಅದೂ ಆಗಬಹುದು ಎಂದು ಮನಸ್ಸಿಗೆ ಅನ್ನಿಸಿದ್ದರಿಂದ ಹೊರಡಲು ತಯಾರಾದೆ. ಯಾವ ನಾಟಕ ಏನು ಕತೆ ಎಂಬುದನ್ನೂ ಕೇಳಲು ಹೋಗಲಿಲ್ಲ. ಮರುತಿರುಗಾಟ ಎಂದ ಕೂಡಲೇ ಕೆಲವು ವರ್ಷಗಳ ಕೆಳಗೆ ಮಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಸಭಾಂಗಣದಲ್ಲಿ ಇದೇ ನೀನಾಸಂನವರು ಆಡಿದ್ದ, ಕುಮಾರವ್ಯಾಸ ಭಾರತದ ಒಂದು ಭಾಗವನ್ನು ಆಧಾರವಾಗಿಟ್ಟುಕೊಂಡ, ಒಂದು ಪ್ರಸಂಗವನ್ನು ನೋಡಿದ್ದೆ. ಭಾರಿ ಖುಷಿಯಾಗಿತ್ತು. ಹಾಗಾಗಿ ಈ ಸಲವೂ ಒಪ್ಪಿಬಿಟ್ಟೆ.
    ಈ ನಡುವೆ “ಅವಧಿ”ಯಲ್ಲಿ ಹರೀಶ ಕೇರರ ವಿಮರ್ಶೆ ಪ್ರಕಟವಾದಾಗ “ಈ ನಾಟಕ ನೋಡುವ ಕೆಲಸ ನನಗೆ ಬೇಡ” ಅನ್ನಿಸಿತು. ಆದರೂ, ಹೇಗೂ ಒಪ್ಪಿಯಾಗಿದೆ, ಏನಿಲ್ಲದಿದ್ದರೂ ಹೋಗುವಾಗ ಬರುವಾಗ ಕೆಲವು ಸಜ್ಜನರ ಒಡನಾಟ ಸಿಗುತ್ತದೆ ಎಂಬುದರಿಂದ ಧೈರ್ಯ ಮಾಡಿದೆ.
    *****
    ನಾನು ನನ್ನ ಅಭಿಪ್ರಾಯಗಳನ್ನು ಹೇಳುತ್ತಿರುವುದು ಒಬ್ಬ ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಿಂದ. ನಾಟಕ ಮಾಡುವವರು-ಬರೆಯುವವ, ನಾಟಕ ಆಯ್ಕೆ ಮಾಡುವವ, ನಾಟಕವನ್ನು ನಿರ್ದೇಶಿಸುವವ-ಇಂಥವರನ್ನು ನಾನು ದೃಷ್ಟಿಯಲ್ಲಿಟ್ಟುಕೊಂಡಿಲ್ಲ. ಆದರೆ ಇವರೆಲ್ಲ ನಾಟಕ ತಯಾರಿಸುವಾಗ, ನಾಟಕವನ್ನು ನೋಡುವ ಪ್ರೇಕ್ಷಕನನ್ನೂ ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು ಎಂಬುದು ನನ್ನ ಆಗ್ರಹ.
    ನಾಟಕ ಎಂದರೆ ಅದರಲ್ಲಿ ನಟರು, ಘಟನೆಗಳು ಅಥವಾ ಕಥೆ, ಮಾತು, ಸಂಗೀತ, ವೇಷಭೂಷಣ, ಪ್ರಸಾಧನ, ಬೆಳಕು, ರಂಗವಿನ್ಯಾಸ ಇತ್ಯಾದಿಗಳೆಲ್ಲ ಇರುತ್ತವೆ ತಾನೆ? ಇವೆಲ್ಲ ನಾಟಕದ ಪರಿಕರಗಳು. ಇವೆಲ್ಲ ಇರುವುದು ನಾಟಕವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದುರಿಗೆ ಪ್ರದರ್ಶಿಸಲಿಕ್ಕೆ. “ವಿಭಿನ್ನ”ವಾಗಿರಬೇಕು ಎಂಬ ಕಾರಣಕ್ಕೋ, ತನ್ನ ನಾಟಕದ ವಸ್ತುವಿಗೆ ಇದು ಅಗತ್ಯವಿಲ್ಲ ಎಂಬುದರಿಂದಲೋ, ಕೆಲವು ನಿರ್ದೇಶಕರು ಇವುಗಳಲ್ಲಿ ಕೆಲವನ್ನು ಪೂರ್ತಿಯಾಗಿ ಕೈಬಿಡಬಹುದು. ರಂಗ ವಿನ್ಯಾಸವನ್ನೇ ಮಾಡದೆ ಖಾಲಿ ರಂಗಸ್ಥಳದಲ್ಲಿ ನಾಟಕ ಮಾಡಬಹುದು; ರಂಗಸ್ಥಳ ಕಾಣಲು ಬೇಕಾದಷ್ಟು ಮಾತ್ರ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬಹುದು, ಹೀಗೆ. ಆದರೆ, ಕೆಲವು ಮುಖ್ಯ ಪರಿಕರಗಳನ್ನು ನಾಟಕದಿಂದ ತೆಗೆದುಬಿಟ್ಟರೆ, ಉದಾಹರಣೆಗೆ “ನನ್ನ ನಾಟಕಕ್ಕೆ ನಟರೇ ಬೇಡ”, “ನನ್ನ ನಾಟಕಕ್ಕೆ ಮಾತೇ ಬೇಡ” ಎಂದು ಹೇಳಿದರೆ, ಅಂಥ ನಾಟಕ ಒಂದು ಪ್ರಯೋಗವಾಗಿ ಉಳಿಯುತ್ತದೆ ಹೊರತು, ಸಾರ್ವತ್ರಿಕವಾಗಿ ನೋಡಬಹುದಾದ ನಾಟಕ ಆಗುವುದಿಲ್ಲ.
    ಈಗ ನಮ್ಮ “ನೀರ ನಿಲುತಾಣ”ದಲ್ಲಿ “ಮಾತ”ನ್ನು ತೆಗೆದುಬಿಟ್ಟಿದ್ದಾರೆ. ಮಾತನ್ನೇ ತೆಗೆದುಬಿಟ್ಟ ಮೇಲೆ, ನಟರಿಗೇನು ಕೆಲಸ? ಅವರನ್ನೂ ತೆಗೆದುಬಿಡಬಹುದಿತ್ತಲ್ಲ ಎಂದರೆ, ಹಾಗಿಲ್ಲ, ನಟರನ್ನು ಉಳಿಸಿಕೊಂಡಿದ್ದಾರೆ. ಈ ನಟರು ಮಾತಾಡುವುದಿಲ್ಲ. ಬರೀ ಚಲನೆ, ನಟನೆ ಮಾಡುತ್ತಾರೆ. ಇವರ ಚಲನೆ, ನಟನೆಗಳು ನಡೆಯುವಾಗ ಕೆಲವೊಮ್ಮೆ ಹಿನ್ನೆಲೆಯಲ್ಲಿ ಸಂಗೀತ ಕೇಳುತ್ತದೆ. ಕೆಲವೊಮ್ಮೆ ಬೆಳಕು ನಿರ್ದಿಷ್ಟ ನಟನ ಮೇಲೆ ಕೇಂದ್ರೀಕರಿಸುತ್ತದೆ. ಎಂದರೆ ಒಟ್ಟು ಅರ್ಥ, ನಾಟಕದ ದೃಶ್ಯಗಳು ಏನನ್ನೋ ಹೇಳಲು ಪ್ರಯತ್ನಿಸುತ್ತಿವೆ. ಹೇಳುವ ಆ ಪ್ರಯತ್ನಕ್ಕೆ ನಾಟಕದ ಬಾಕಿ ಪರಿಕರಗಳನ್ನು ನಾಟಕಕಾರ/ನಿರ್ದೇಶಕ ಬಳಸಿಕೊಳ್ಳುತ್ತಾನೆ. ಆದರೆ ಮಾತನ್ನು ಬಳಸಿಕೊಳ್ಳಲು ಮಾತ್ರ ಅವನು ನಿರಾಕರಿಸುತ್ತಿದ್ದಾನೆ. ಇದು ನನಗೆ ಅರ್ಥವಾಗುವುದಿಲ್ಲ. ನಾಟಕಕಾರನಿಗೆ ಏನನ್ನೋ ಹೇಳಲಿಕ್ಕಿದೆ ಎಂಬುದು ಸ್ಪಷ್ಟ. ಹಾಗಿಲ್ಲದಿದ್ದರೆ ನಾಟಕ ಸೃಷ್ಟಿಯಾಗುತ್ತಲೇ ಇರಲಿಲ್ಲ. ಹೇಳಬೇಕಾದ್ದನ್ನು ಹೇಳಲು ಮಾತನ್ನು ಉಪಯೋಗಿಸಿಕೊಂಡಿದ್ದರೆ ಏನು ಸಮಸ್ಯೆಯಾಗುತ್ತಿತ್ತು? ಮಾತನ್ನು ಕೈಬಿಟ್ಟದ್ದರಿಂದ ನಾಟಕದ ಅನುಭವ ಪ್ರೇಕ್ಷಕನಿಗೆ ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ದಾಟಿತು?
    {“ನಿಮಗೆ ನಾಟಕದ ಹಿನ್ನೆಲೆ ಗೊತ್ತಿಲ್ಲ. ನಾಟಕಕಾರನ ಹಿನ್ನೆಲೆ ಗೊತ್ತಿಲ್ಲ. ನಾಟಕ ಏನು ಹೇಳುತ್ತಿದೆ ಎನ್ನುವುದು ನಿಮಗೇ ಅರ್ಥವೇ ಆಗಿಲ್ಲ. ಹಾಗಾಗಿ ನೀವು ಹೀಗೆ ಮಾತಾಡುತ್ತಿದ್ದೀರಿ. ನೀವು ನಾಟಕದ ಹಿನ್ನೆಲೆಯನ್ನು ಕೊಂಚ ಓದಿಕೊಂಡು ಮತ್ತೆ ಮಾತಾಡಿ” ಎಂದು ನನಗೆ ಹೇಳುವವರು ಇರಬಹುದು. ನಾನು ನಾಟಕಕ್ಕೆ ಹೋಗುವುದು ಯಾವ ಪೂರ್ವತಯಾರಿಯೂ ಇಲ್ಲದೆ. ಕಾಕತಾಳೀಯವಾಗಿ ಕೆಲವು ನಾಟಕದ ಬಗ್ಗೆ ಮೊದಲೇ ಗೊತ್ತಿರಬಾರದೆಂದಿಲ್ಲ. ಹಾಗೆ ಗೊತ್ತಿದ್ದಾಗ ನಾಟಕ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಸುಲಭವಾಗಿರಬಹುದು.ನಾನು ಮೃಚ್ಛಕಟಿಕವನ್ನು ಓದಿರಲಿಲ್ಲ. ಕೆಲವು ವರ್ಷಗಳ ಹಿಂದೆ ಆಡಿದ ಚಿರೇಬಂಡಿವಾಡೆ (ನಾನು ಹೆಸರು ತಪ್ಪು ಹೇಳಿದೆನೆ?)ಯನ್ನು ಓದಿರಲಿಲ್ಲ. ಶೂದ್ರ ತಪಸ್ವಿಯನ್ನೂ ಓದಿರಲಿಲ್ಲ. ಆದರೂ ಈ ನಾಟಕಗಳನ್ನು ನಾನು ನೋಡಿ ಆನಂದಿಸಿದ್ದೇನೆ. ಹಾಗಾದರೆ ಈ ನೀರ ನಿಲುತಾಣ ಯಾವ ದೊಡ್ಡ ಕುಂಬಳಕಾಯಿ ಅಂತ ನನಗೆ ಅರ್ಥವಾಗದೆ ಹೋಗುತ್ತದೆ?}
    ನನಗೆ ಇದು ನೇರವಾಗಿ ಉಣ್ಣುವುದು ಬಿಟ್ಟು, ಕೈಯನ್ನು ಕುತ್ತಿಗೆಯ ಹಿಂಭಾಗದಿಂದ ತೆಗೆದುಕೊಂಡು ಹೋಗಿ ಬಾಯಿಗೆ ತುತ್ತು ಹಾಕಿಕೊಳ್ಳುವ ಹಾಗೆ ಕಾಣುತ್ತದೆ.
    ಅದು ಹಾಗೆ ಹಾಕಿಕೊಳ್ಳುವವರ ಕರ್ಮ ನಮಗೇನು ಎಂದು ಸುಮ್ಮನಿರುವಂತಿಲ್ಲ. ಯಾಕೆಂದರೆ, ನಾಟಕದಿಂದ ತಮಗೆ ಏನೋ ಆನಂದ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಪ್ರೇಕ್ಷಕರು ಕೂತು ಆ ನಾಟಕವನ್ನು ನೋಡುತ್ತಿದ್ದಾರೆ. ಆ ಆನಂದವನ್ನು ಕೊಡಬೇಕಾದವ ಮಾತೆಂಬ ಪರಿಕರದ ಸಹಾಯವನ್ನು ತಿರಸ್ಕರಿಸಿರುವುದರಿಂದ, ಮತ್ತು ಅದಕ್ಕೆ ಬದಲಿಯಾಗಿ ಪರಿಣಾಮಕಾರಿಯಾದ ಬೇರೊಂದು ಪರಿಕರವನ್ನು ಕಂಡುಕೊಳ್ಳದೆ ಇರುವುದರಿಂದ. ಹೇಳಲು ತಿಣುಕುವುದು ಅವನಿಗೆ ಅನಿವಾರ್ಯವಾಗುತ್ತದೆ. ಅವನ ಈ ತಿಣುಕಾಟ ಪ್ರೇಕ್ಷಕನಿಗೆ ಒಂದು ಹಿಂಸೆಯಾಗಿ ಪರಿಣಮಿಸುತ್ತದೆ. (ಭಾಷಣಕಾರನೊಬ್ಬ ಭಾಷಣ ಮಾಡುತ್ತಿರುವಾಗ ಅವನಿಗೆ ಸರಿಯಾದ ಒಂದು ಶಬ್ದ ಸಿಗದೆ ತಡಕಾಡತೊಡಗಿದರೆ, ಕೇಳುಗರು ಅವನ ಸಹಾಯಕ್ಕೆ ಧಾವಿಸುವುದನ್ನು ನೀವು ಕಂಡಿರಬಹುದು. ಕೇಳುಗರು ಯಾಕೆ ಹಾಗೆ ಮಾಡುತ್ತಾರೆ? ಯಾಕೆಂದರೆ ಭಾಷಣಕಾರನ ತಿಣುಕಾಟ ನೋದುವುದು ಅವರಿಗೆ ಒಂದು ಹಿಂಸೆ. ಅದರಿಂದ.) ಹೀಗಾಗಿ “ನೀರ ನಿಲುತಾಣ” ನೋಡುವುದೆಂದರೆ ಎರಡು ಗಂಟೆಗಳು ನಿರಂತರವಾಗಿ ನಾಟಕಕಾರ/ನಿರ್ದೇಶಕನ ತಿಣುಕಾಟವನ್ನು ಅಸಹಾಯಕರಾಗಿ ನೋಡುವ ಹಿಂಸೆಯೇ ಹೊರತು ಬೇರೇನೂ ಅಲ್ಲ.

    ಈಗ ಚಲನೆಗೆ ಬರೋಣ. ಸಾಮಾನ್ಯವಾಗಿ ನಾಟಕದಲ್ಲಿ ಪಾತ್ರಗಳ ಚಲನೆಯ ವೇಗ ಎನ್ನುವುದು ನಿಜಜೀವನದಲ್ಲಿ ನಾವು ನೋಡುವಂತೆಯೇ ಇರುತ್ತದೆ. ಯಾವುದಾದರೂ ಒಂದು ನಿರ್ದಿಷ್ಟ ಉದ್ದೇಶವಿದ್ದರೆ, ಅ ಸಂದರ್ಭಕ್ಕೆ ಮಾತ್ರ ಚಲನೆಯ ವೇಗವನ್ನು ಕಡಿಮೆ ಅಥವಾ ಹೆಚ್ಚು ಮಾಡಬಹುದು. ಆದರೆ ಈ ನಾಟಕದಲ್ಲಿ ಉದ್ದಕ್ಕೂ ಚಲನೆ ಅತಿ ನಿಧಾನ. (ಅತಿ ವಿಲಂಬಿತ ಲಯವಂತೆ). ಸಂಗೀತದಲ್ಲಿ ಉದ್ದಕ್ಕೂ ವಿಲಂಬಿತ ಲಯ ಇರುವುದಿಲ್ಲ. ಮರುದಿನ ನಾನು ಭವಾಲ್ಕರರ ಕಚೇರಿಗೆ ಹೋಗಿದ್ದೆ. ವಿಲಂಬಿತ್ ನಲ್ಲಿ ಪ್ರಾರಂಭ ಮಾಡಿ ಅಲ್ಲೇ ನಿಂತು ಬಿಡುವುದಿಲ್ಲ ಅವರು. ಮಧ್ಯಲಯ, ದ್ರುತ್ ಗಳಿಗೆ ಹೋಗಿ, ಲಯದಲ್ಲಿ ಹಿಂದೆ ಮುಂದೆ, ಸ್ಥಾಯಿಯಲ್ಲಿ ಮೇಲೆ ಕೆಳಗೆ, ಆಟವಾಡಿ, ಹೇಗೆ ಹೇಗೆ ಸಾಧ್ಯವೋ ಹಾಗೆಲ್ಲ ಅವರ ಸ್ವರ ಸಂಚರಿಸುತ್ತದೆ. ಮತ್ತು ಹಾಗೆ ಅವರು ಸ್ವರಗಳೊಂದಿಗೆ ಆಡುವುದರಿಂದಲೇ ಆ ದೈವೀಸಂಗೀತದ ಸೃಷ್ಟಿ ಅವರಿಗೆ ಸಾಧ್ಯವಾಗುತ್ತದೆ. ಈ ನಾಟಕದಲ್ಲಿ ರಂಗದ ಎಡಭಾಗದಿಂದ ಒಂದು ಪಾತ್ರ ರಂಗವನ್ನು ಪ್ರವೇಶಿಸಿದರೆ, ಅದು ರಂಗದ ಮಧ್ಯಭಾಗದವರೆಗೂ ಬಂದು, ನಂತರ ರಂಗದ ಮುಂಭಾಗವನ್ನು ತಲುಪಲು ಕಡಿಮೆ ಎಂದರೆ ಎಂಟರಿಂದ ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ರಂಗದ ಮೂಲೆಯಲ್ಲಿ ಒಂದು ನಲ್ಲಿಯಲ್ಲಿ ನೀರು ನಿರಂತರವಾಗಿ ಬೀಳುತ್ತಿದೆ. ಅದರ ಶಬ್ದ ಕೇಳುತ್ತಿದೆ. (ಹಾಗೆ ಶಬ್ದ ಕೇಳಬೇಕೆಂದೇ ಫ್ಯಾನ್ ಆಫ್ ಮಾಡಿದ್ದರೆಂದು ನನಗೆ ಮತ್ತೆ ತಿಳಿಯಿತು.). ಪಾತ್ರಗಳು ಒಂದೊಂದಾಗಿ ರಂಗ ಪ್ರವೇಶ ಮಾಡುತ್ತವೆ. ಮಾತಿಲ್ಲ. ಕೆಲವೊಮ್ಮೆ ನಿಧಾನವಾಗಿ, ಕೆಲವೊಮ್ಮೆ ಜೋರಾಗಿ ಹಿನ್ನೆಲೆಯಲ್ಲಿ ವಾದ್ಯ ಸಂಗೀತ ಕೇಳುವುದೂ ಇದೆ. ಬಂದ ಪಾತ್ರಗಳು ಕೆಲವರು ತಾವು ನೀರು ಕುಡಿಯುತ್ತಾರೆ. ಕೆಲವರು ತಾವು ಕುಡಿದು ಇನ್ನೊಬ್ಬರಿಗೆ ಕೊಡುತ್ತಾರೆ. ಕೆಲವರು ತಾವು ಮಾತ್ರ ಕುಡಿಯಬೇಕು, ಬಾಕಿಯವರು ಕುಡಿಯಬಾರದು ಎಂಬ ಹಾವಭಾವ ತೋರಿಸುತ್ತಾರೆ, ಕೆಲವರು ನೀರಲ್ಲಿ ಆಟವಾಡುತ್ತಾರೆ. ಆದರೆ ಎಲ್ಲವೂ ನಿಧಾನ. ಅತಿ ನಿಧಾನ. ಸ್ವಲ್ಪ ಹೊತ್ತು ಇದನ್ನೆಲ್ಲ ನೋಡಿಯಾದ ಮೇಲೆ ನಾನು, ಪ್ರತಿಸಲ ರಂಗದ ಹಿಂಭಾಗದ ಮೂಲೆಯಿಂದ ಒಂದು ಹೊಸಪಾತ್ರ ಪ್ರವೇಶಿಸಿದಾಗಲೂ, “ಈ ಪಾತ್ರವೇ ಕೊನೆಯದಿರಬಹುದು” ಎಂದು ಆಸೆಯಿಂದ ನೋಡುತ್ತಿದ್ದೆ. ಆದರೆ ಅದು ಪಕ್ಕನೆ ಮುಗಿಯಲಿಲ್ಲ. ನಿಧಾನವಾಗಿ ಮತ್ತೊಂದು ಹೊಸಪಾತ್ರ ಪ್ರವೇಶಿಸುತ್ತಿತ್ತು. ಹೀಗೆ ಒಂದರ ಹಿಂದೆ ಒಂದು ಅನಂತವಾಗಿ ಬರುತ್ತಲೇ ಇದ್ದವು. ಕೊನೆಗೆ, ಮೊದಾಲು ಪ್ರವೇಶಿಸಿದ ಪಾತ್ರವೇ ಪುನಃ ಪ್ರವೇಶಿಸಿದಾಗ “ಈಗ ನಾಟಕ ಮುಗಿದಿದ್ದು ಗ್ಯಾರಂಟಿ” ಎಂದು ಮನಸ್ಸಿಗೆ ಖಚಿತವಾಯಿತು. ಓ ದೇವರೇ, ಬಚಾವ್!
    ಎಂತದು ಈ ಅತಿವಿಲಂಬಿತ ಲಯ? ರಂಗದ ಒಂದು ಮೂಲೆಯಿಂದ ಇನ್ನೊಂದು ಜಾಗಕ್ಕೆ ಬರಲು ಪಾತ್ರವೊಂದು ನಿಧಾನವಾಗಿ ಹೆಜ್ಜೆ ಇಡುತ್ತ ಎಂಟು ಹತ್ತು ಮಿನಿಟುಗಳನ್ನು ತೆಗೆದುಕೊಳ್ಳುವುದನ್ನು ನೋಡುತ್ತ ಖಾಲಿ ಕೂರುವುದಕ್ಕೆ ಪ್ರೇಕ್ಷಕನಿಗೇನು ಗ್ರಹಚಾರವೆ? ಒದ್ದು (ಕುರ್ಚಿಗೆ) ಎದ್ದು ಹೋಗಿಬಿಡೋಣ ಎಂದು ಉರಿಯುತ್ತಿತ್ತು. “ನಿಮಗೆ ಈ ನಾಟಕ ಇಷ್ಟವಾಗದಿದ್ದರೆ ಬೇರೆಯವರಿಗೆ ತೊಂದರೆಯಾಗದಂತೆ ಎದ್ದು ಹೋಗಿ” ಎಂಬ ಸೂಚನೆಯನ್ನೂ ಯಾರೋ ಮೊದಲಿಗೆ ಕೊಟ್ಟಿದ್ದರು. ಟಿಕೆಟ್ಟಿಗೆ ಇಪ್ಪತ್ತೈದು ರೂಪಾಯಿ ಕೊಟ್ಟಿದ್ದೆ. ಅದರ ವಿಲೇವಾರಿ ಏನೆಂದು ಅವರು ಹೇಳಲಿಲ್ಲ!

    ಈ ನಾಟಕ ನಿರ್ದೇಶಿಸಿದವರು ಇನ್ನೂ ತರುಣ. (ನನಗೀಗ ಅರವತ್ತು ಕಳೆಯಿತು). ಅವರ ಉತ್ಸಾಹವನ್ನು ನಾನು ಖಂಡಿತ ಮೆಚ್ಚುತ್ತೇನೆ. ನನ್ನ ಮಾತುಗಳಿಂದ ಅವರು ಉತ್ಸಾಹ ಕಳೆದುಕೊಳ್ಳಬಾರದು. ಈ ನಾಟಕ ಸಹವಾಸ ದೋಷದ ಫಲ ಇದ್ದರೂ ಇದ್ದೀತು. ಒಬ್ಬರೇ ಕೂತು ನಿಧಾನವಾಗಿ ಆಲೋಚನೆ ಮಾಡಿದರೆ, ಒಳ್ಳೆಯ ನಾಟಕಗಳನ್ನು ಆಯ್ಕೆ ಮಾಡುವುದು, ನಿರ್ದೇಶಿಸುವುದು ನಿಮಗೆ ಖಂಡಿತ ಸಾಧ್ಯ. ಸ್ವಲ್ಪ ದೂರ ಪ್ರೇಕ್ಷಕನ ಜೊತೆ ನೀವು ಪ್ರಯಾಣಿಸಿ ಅವನ ನಂಬಿಕೆಯನ್ನು ಸಂಪಾದಿಸಿಕೊಂಡರೆ, ನಂತರ ಅವನನ್ನು ನಿಮ್ಮ ಜೊತೆ ಒಯ್ಯುವುದು ನಿಮಗೆ ಕಷ್ಟವಾಗಲಾರದು. ನಿಮಗೆ ಶುಭವಾಗಲಿ.

  8. Abhaya Simha

    ನಾಟಕ ನನ್ನ ಮಾಧ್ಯಮವಲ್ಲ. ಆದರೂ ಅವಧಿಯಲ್ಲಿ ನಡೆಯುತ್ತಿರುವ ಚರ್ಚೆಗೆ ನನ್ನ ಅಭಿಪ್ರಾಯ ಸೇರಿಸಲೇ ಬೇಕು ಅನಿಸುತ್ತಿದೆ. ಹಾಗಾಗಿ ನಾಲ್ಕು ಮಾತು ನಾನು ನೀರಿನ ನಿಲುತಾಣ ಅರ್ಥೈಸಿದಂತೆ.

    ನಾಟಕದ ಹಿನ್ನೆಲೆ ಗೊತ್ತಿಲ್ಲದೆಯೂ ನಾಟಕ ನನ್ನನ್ನು ತಟ್ಟಬೇಕು, ನಾನು ಒಬ್ಬ ಸಾಮಾನ್ಯ ಪ್ರೇಕ್ಷಕ ಎಂಬ ಮಾತು ಓದಿದೆ. ಹೌದು, ಆ ಮಾತು ಸತ್ಯ. ಆದರೆ, ‘ನೀರಿನ ನಿಲುತಾಣ’ ನಾಟಕ ನನ್ನನ್ನು ಸ್ವತಂತ್ರವಾಗಿಯೇ ತಟ್ಟಿತು. ಆದರೆ ನನ್ನಲ್ಲಿ ಅದು ಹುಟ್ಟಿಸಿದ ಅರ್ಥ ನಾಟಕಕಾರ ಉದ್ದೇಶಿಸಿದ ಅರ್ಥವಾಗಲೇ ಬೇಕೆಂದಿಲ್ಲ ಎಂದು ನನ್ನ ನಂಬಿಕೆ. ಯಾವುದೇ ಕೃತಿಯಾದರೂ, ಅದು ನಮ್ಮ ಪೂರ್ವಾಗ್ರಹಗಳ, ನಮ್ಮ ಮನೋವಿಕಾರಗಳ ಉಳಿಪೆಟ್ಟಿಗೆ ಸಿಕ್ಕಿ ಹೊಸ ರೂಪಪಡೆದು ಸ್ಮೃತಿಯಲ್ಲಿ ಉಳಿಯುತ್ತದೆಯಷ್ಟೇ? ಕೃತಿ ಇಂಥಾ ಅವಕಾಶವನ್ನು ಹೆಚ್ಚು ಕಲ್ಪಿಸಿದಷ್ಟೂ ಕೃತಿಯ ಸಾರ್ಥಕತೆ ಅಲ್ಲಿದೆ ಎಂದು ನನ್ನ ಭಾವನೆ. ಅಂದು ಅಕಸ್ಮತ್ತಾಗಿ ನನ್ನ ಮನೆಗೆ ಬಂದಿದ್ದ ನೇಪಾಲೀ ಚಿತ್ರನಿರ್ದೇಶಕನನ್ನೂ ಅವನ ಮಡದಿಯನ್ನೂ ನಾನು ನೀನಾಸಂ ಮೇಲಿನ ಪ್ರೀತಿಗೆ ನಾಟಕ ತೋರಿಸಲು ಕರೆದೊಯ್ದಿದ್ದೆ. “ಅಯ್ಯೋ! ಕನ್ನಡ ಬರೋದಿಲ್ಲ!” ಎಂದರೂ ನಾಟಕಕ್ಕೆ ನನ್ನೊತ್ತಾಯಕ್ಕೆ ಅವರು ಬಂದರು. ಅದೃಷ್ಟಕ್ಕೆ ನಾಟಕದಲ್ಲಿ ಮಾತೇ ಇರಲಿಲ್ಲ. ಇಡೀ ನಾಟಕವನ್ನು ಗಾಢವಾಗಿ ನೋಡಿದ ಅವರಿಗೆ ಇಡೀ ನಾಟಕ ನೇಪಾಲದ ಸಮಸ್ಯೆಗಳನ್ನೇ ಕುರಿತಾಗಿ ಮಾತಾಡಿದಂತಾಯಿತಂತೆ! ರಾಜಸ್ಥಾನದವನೊಬ್ಬನಿಗೆ ಇದು ಕೇವಲ ಅವನೂರಿನ ನೀರಿನ ಸಮಸ್ಯೆಯಂತೆ ಕಂಡರೂ, ವಿಜ್ಞಾನಿಯೊಬ್ಬನಿಗೆ ಇದು ೨೦೨೦ನೇ ಇಸವಿಯಲ್ಲಿ ಗ್ಲೋಬಲ್ ವಾರ್ಮಿಂಗಿನಿಂದಾಗಿ ಉಧ್ಭವಿಸಬಹುದಾಗ ಸಂದರ್ಭದಂತೆ ಕಂಡರೂ, ಎಲ್ಲವೂ ಕೃತಿಯ ಗೆಲುವೆಂದೇ ನಾನು ನಂಬುವವನು.

    ಇನ್ನು ನಾಟಕದಲ್ಲಿ ಸಂಗೀತವನ್ನು ಬಿಟ್ಟು ಸದ್ದನ್ನು ಸಮರ್ಥವಾಗಿ ಬಳಸಿಕೊಂಡದ್ದನ್ನು ನಾನು ಬಹಳ ಸಂತೋಷಪಟ್ಟೆ. ಉಡುಪಿಯ ಸೆಖೆಯಲ್ಲಿ ಬೆವರಿಳಿಸಿದವರ ಬಗ್ಗೆ ಖಂಡಿತಾ ಕರುಣೆಯಿದ್ದರೂ, ನಾಟಕದಲ್ಲಿನ ಶಬ್ದದ ಕುರಿತಾಗಿನ ಜಾಗರೂಕತೆ ನನಗೆ ಬಹಳ ಮೆಚ್ಚಿಗೆಯುಂಟು ಮಾಡಿತು. ಇಂದು ನಮ್ಮ ಮುಖ್ಯವಾಹಿನಿ ಸಿನೆಮಾ ಬಿಡಿ, ಬಹುತೇಕ ಸದಭಿರುಚಿಯ ಸಿನೆಮಾಗಳಲ್ಲೂ ಧ್ವನಿಸಂಯೋಜನೆ ಎಂಬ ಮಾತೇ ಇಲ್ಲ! ಧ್ವನಿ ಕಟ್ಟಿಕೊಡುವ ಪ್ರಪಂಚದ ಬಗ್ಗೆ ದೊಡ್ಡ ಉಪೇಕ್ಷೆಯೇ ಇರುವ ಇಂಥಾ ಸಂದರ್ಭದಲ್ಲಿ, ನೀರಿನ ಹರಿಯುವಿಕೆಯ ಧ್ವನಿ, ಅದು, ನಾಟಕದ, ನಟರ ಚಲನೆಯೊಡನೆ ಸ್ಪಂದಿಸುವ ರೀತಿ, ಸಂಗೀತ ಬಂದಾಗ ಅದರ ಲಯದೊಡನೆ ಬೆರೆಯುವ ಪರಿ, ಹೀಗೆ ಬಹಳ ಆನಂದ ನೀಡಿತು. ಒಂದು ಬಣ್ಣವನ್ನು ತನ್ನ ಕುಂಚದಲ್ಲಿ ಹಿಡಿದು, ಬೇರೆ ಬೇರೆ ಬಣ್ಣಗಳೊಡನೆ ಭಿನ್ನ ಪ್ರಮಾಣಗಳಲ್ಲಿ ಅದನ್ನು ಸೇರಿಸುತ್ತಾ ಮಾಯೆಯನ್ನು ರೂಪಿಸುವ ಚತುರ ಕಲಾವಿದನಂತೆ ನಾಟಕಕಾರ ನನಗಿಲ್ಲಿ ಕಂಡರು. ಇದಕ್ಕಾಗಿ ಅವರಿಗೆ ನನ್ನ ಮೊದಲ ಅಭಿನಂದನೆ.

    ನಾಟಕದ ಒಂದು ಪ್ರಮುಖ ಅಂಗ ಅದರ ಅತಿವಿಲಂಬಿತ ಲಯ. ಇದು ನನಗೆ ಬಹಳ ಕುತೂಹಲ ಕೆರಳಿಸಿದ ಇನ್ನೊಂದು ಅನುಭವ. ಸಾಧಾರಣವಾಗಿ ನಾಟಕದಲ್ಲಿನ ತಿರುವುಗಳನ್ನು ನಾವು ಕಥೆಯಲ್ಲಿನ ತಿರುವುಗಳ ಮೂಲಕ ಗ್ರಹಿಸುತ್ತೇವೆ. ಇದು ನಾಟಕದ ಓಟದ ವೇಗವನ್ನೂ ನಿರ್ಧರಿಸುತ್ತದೆ. ಆದರೆ ಇಲ್ಲಿ ಅದು ಇನ್ನೂ ಮೂಲಕ್ಕೆ ಹೋಗಿ ನಟನೊಬ್ಬನ ಒಂದೊಂದು ಸಣ್ಣ ಚಲನೆಯಿಂದಲೇ ನಿರ್ಧಾರವಾಗುತ್ತಿರುತ್ತದೆ. ಇದು ಚಲನೆಯ ಕುರಿತಾದ ಹೊಸ ಆವಿಷ್ಕರಣ ಎಂದು ನನಗನಿಸಿತು. ನಾಟಕದ ಮೊದಲಲ್ಲಿ ಬರುವ ಹೆಣ್ಣು ಒಮ್ಮೆ ಬಾಯಿಗಡ್ಡ ಕೈಯಿಟ್ಟು ಹಿಂದೆ ತಿರುಗಿ ನೋಡುತ್ತಾಳೆ. ಇದು ಯಾಕೆಂದು ಆ ವೇಳೆಗೆ ಅರ್ಥವಾಗದಿದ್ದರೂ, ಅಲ್ಲೇ ಒಂದು ಕಥೆ ಆರಂಭವಾಗುತ್ತದೆ. ನಾಟಕದ ಅಡಿಪಾಯ ಅಲ್ಲೇ ಆರಂಭವಾಗುತ್ತಾ ಹೋಗಿ, ನಾಟಕ ಒಂದು ವೃತ್ತವಾಗಿ, ದಿನ ರಾತ್ರಿಯಾಗಿ ಮರುಮುಂಜಾನೆಯಾದಾಗ ಮತ್ತೆ ಅದೇ ಹುಡುಗಿ ಅಂತೆಯೇ ಬಂದು ಮತ್ತೆ ಬಾಯಿಗಡ್ಡ ಕೈಹಿಡಿದು ಹಿಂದೆ ನೋಡಿದಾಗ ಅವಳು ಆರಂಭ ಮಾಡಿದ್ದ ಕಥೆಯ ಹೊಸ ಹೊಳೆಯಲಾರಂಭಿಸುತ್ತದೆ. ಇನ್ನು ಅತಿವಿಲಂಬಿತ ಲಯ ಮಾತ್ರ ಇತ್ತು, ಅದು ಏಕತಾನತೆಯನ್ನು ತಂದಿತು ಎನ್ನುವ ಮಾತಿಗೆ ಬಂದರೆ, ಇಲ್ಲ! ನಾಟಕದಲ್ಲಿನ ಲಯ ಏಕತಾನತೆಯದ್ದಾಗಿರಲಿಲ್ಲ. ಅತಿವಿಲಂಬಿತ ಲಯವನ್ನು ತುಂಡರಿಸುವ, ಗಡಿಯಾರದ ಚಲನೆಯನ್ನು ಮೀರಿಸುವ, ಏಕತಾನತೆಯನ್ನು ತುಂಡರಿಸುವ ಹಲವು ಸ್ಪೋಟಗಳು ನಾಟಕದಲ್ಲಿದ್ದವು. ಮೊದಲಿಗೆ ಬರುವ ಹುಡುಗಿಯೇ, ನೀರನ್ನು ಕುಡಿಯಲು ತನ್ನ ಕೆಂಪು ಗ್ಲಾಸನ್ನು ಮುಂದೆ ಚಾಚುವಾಗ, ರಂಗಭೂಮಿಗೆ ಬಂದ ಮೊದಲಿಬ್ಬರು ಪ್ರಯಾಣಿಕರು ಫಕ್ಕನೆ ತಿರುಗಿ ವೇದಿಕೆಯ ಮೂಲೆಯಲ್ಲಿರುವ ಹುಡುಗಿಯನ್ನು ನೋಡುವಾಗ, ಶೂ ಬದಲಿಸಿ ನೋಡುವ ಪ್ರಯಾಣಿಕ ಶೂ ಬಿಸಾಡಿ ಸಂಗೀತ ಆರಂಭವಾದಾಗ, ಹೀಗೆ ನಾಟಕ ಅನೇಕ ಬಾರಿ ತನ್ನ ಲಯವನ್ನು ಬದಲಿಸಿ, ಅತಿವಿಲಂಬಿತ ಲಯಕ್ಕೆ ಹೊಸ ವೇಗವನ್ನು ಕೊಡುತ್ತಿರುತ್ತದೆ. ಹೀಗಾಗಿ “ನಾಟಕ ಗಡಿಯಾರದ ಚಲನೆಯಂತೆ ಅತಿವಿಲಂಬಿಲ ಲಯದಲ್ಲಿದೆ” ಎಂದು ಮೊದಲೇ ಘೋಷಿಸುವ ನಾಟಕಕಾರರ ಮಾತೇನಿದ್ದರೂ, ಇಡೀ ನಾಟಕ ಒಂದು ಸಂಗೀತ ಕಛೇರಿಯಂತೆಯೇ ಅತಿವಿಲಂಬಿತ ಆಲಾಪದೊಡನೆ ಸಣ್ಣಪುಟ್ಟ ಇತರ ವೇಗಗಳನ್ನೂ ಬಳಸಿಕೊಳ್ಳುತ್ತಾ, ಲಯ ಕಂಡುಕೊಳ್ಳುತ್ತದೆ.

    ಬುದ್ಧಿಹರಿದಾಗಿನಿಂದಲೂ ನೀನಾಸಂ ನಾಟಕಗಳನ್ನು ನೋಡಿ ಬೆಳೆದವನು ನಾನು. ನೀನಾಸಂ ಛಾಪಿನ ನಾಟಕಗಳು ಎಂದು ಹೇಳಿಕೊಳ್ಳುವಷ್ಟು ವೃತ್ತಿಪರತೆ, ಒಂದು ಮಟ್ಟಿನ ಅತಿಗುಣಮಟ್ಟದ ಏಕತಾನತೆ ಇರುತ್ತಿತ್ತು ತಿರುಗಾಟದ ನಾಟಕಗಳಲ್ಲಿ. ಒಂಥರಾ ಕಮರ್ಷಿಯಲ್ ಸಿನೆಮಾ ನೋಡಿದಷ್ಟೇ ಗಮ್ಮತಲ್ಲಿ ನಾನು ನೀನಾಸಂ ನಾಟಕಗಳನ್ನು ನೋಡುತ್ತಿದ್ದೆ. ಮರುತಿರುಗಾಟದೊಡನೆ ಆರಂಭಿಸಿದ ಪ್ರಯೋಗಾತ್ಮಕ ಪ್ರದರ್ಶನಗಳಿಂದ ನೀನಾಸಂ ತನ್ನ ಹೊಸಮುಖದ ತಿರುಗಾಟದ ಒಂದು ಅಧ್ಬುತ ಕೃತಿ, ‘ನೀರಿನ ನಿಲುತಾಣ’ ಎಂದು ನನ್ನ ಅನಿಸಿಕೆ. ನಿರ್ದೇಶಕರಿಗೆ, ಕಠಿಣ ಪರಿಶ್ರಮ ಹಾಕಿ ನಟಿಸಿದ ನಟರಿಗೆ, ಇಂಥಾ ಅನುಭವವೊಂದನ್ನು ನೀಡಿದ್ದಕ್ಕಾಗಿ ನಾನು ಆಭಾರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading