ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು (ತಲೆ)ಹರಟೆ -ಚೋರ ಪುರಾಣ

ಟಿ. ಎಸ್.‌ ಶ್ರವಣ ಕುಮಾರಿ

ಪೀಠಿಕೆ

ಕಳ್ಳತನವೇನು ಇಂದು ನಿನ್ನೆಯದೆ?! ಕೃತಯುಗದಲ್ಲೇ ಆರಂಭವಾಗಿದೆ ನೋಡಿ… ಕದ್ದಿದ್ದಾದರೂ ಅಂತಿಂಥದನ್ನೇ? ಭೂಮಿಯನ್ನೇ ಕದ್ದು ಅಡಗಿಸಿಟ್ಟಿದ್ದನ್ನು ವರಾಹಸ್ವಾಮಿಯು ಮರಳಿ ತರಲಿಲ್ಲವೆ? ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಕದ್ದೊಯ್ದ. ಕದ್ದೊಯ್ದ ಹೆಂಡತಿಯನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನದಲ್ಲಿ ಎಷ್ಟೊಂದು ಪಾತ್ರಗಳು, ಉಪಕತೆಗಳು, ಸಾಹಸಗಳು, ಯುದ್ಧಗಳು ಎಲ್ಲವೂ ಸೇರಿಕೊಂಡು ರಾಮಾಯಣವನ್ನು ಒಂದು ಮಹಾಕಾವ್ಯವಾಗಿಸಿದೆಯಲ್ಲ!

ಇನ್ನು ದ್ವಾಪರ ಯುಗದ ಕೃಷ್ಣನೋ ತಾನೇ ಹಾಲು, ಮೊಸರು, ಬೆಣ್ಣೆಗಳ ಕಳ್ಳ, ಗೋಪಿಯರ ಸೀರೆಯ ಕಳ್ಳ, ರಾಧೆಯ ಹೃದಯ ಚೋರ, ಮಾನಿನಿಯರ ಚಿತ್ತ ಚೋರ.. ಈ ಜಗದಲ್ಲಿ ತುಡುಗು ಮಾಡಿಯೂ ಪರಮಾನಂದವನ್ನು ಕೊಟ್ಟವನು ಅವನೊಬ್ಬನೇ!! ಹೀಗೆ ಯುಗಾಂತರಗಳಿಂದ ನಡೆದು ಬಂದ ಚೋರವಿದ್ಯೆ ಕಲಿಯುಗದಲ್ಲಿ ಮಾಯವಾಗಲು ಸಾಧ್ಯವೇ? ವಿಧಾನಗಳು ಅನಂತವಾಗಿವೆ ಅಷ್ಟೇ.

ಬೃಹತ್‌ ಕಥಾ ಸರಿತ್ಸಾಗರದಂತ ಸಹಸ್ರ ಸಹಸ್ರ ಕತೆಗಳು, ಜಾನಪದ ಕತೆಗಳು, ಬೋಧಿಸತ್ವನ ಕತೆಗಳು, ಪಂಚತಂತ್ರದ ಕತೆಗಳು, ಬೇತಾಳನ ಕತೆಗಳು.. ನಮ್ಮ ದೇಶದ ಕತೆಗಳಷ್ಟೇ ಏಕೆ, ಅರೇಬಿಯನ್‌ ನೈಟ್ಸ್‌, ಈಸೋಪನ ನೀತಿ ಕತೆಗಳು.. ಇಂತಹ ಯಾವುದೇ ದೇಶದ, ಅದರಲ್ಲೂ ಮಕ್ಕಳ ಕತೆಗಳನ್ನು ಜಾಲಾಡಿದರೆ, ಕಳ್ಳರಿಲ್ಲದೇ ಇರುವಂತ ಕಥಾಮಂಜರಿಗಳು ಇಲ್ಲವೇ ಇಲ್ಲ.

ನೋಡಿ, ಮಕ್ಕಳ ಮನರಂಜಿಸುವಲ್ಲಿ, ಅವರ ಜ್ಞಾನ ವಿಕಸನದಲ್ಲಿ ಎಂತಹ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಕಳ್ಳರು! ಚಲನಚಿತ್ರಗಳಂತೂ ಬಿಡಿ ಪ್ರಪಂಚದ ಎಲ್ಲ ಭಾಷೆಗಳಲ್ಲೂ ಕಳ್ಳರು ತಮ್ಮ ಸಾಹಸಗಳನ್ನು ಮೆರೆದು ಹತ್ತು ಹಲವು ಹೆಸರು ಮಾಡಿದ ಚಿತ್ರಗಳಿಗೆ ನಾಯಕರಾಗಿಯೂ, ಖಳನಾಯಕರಾಗಿಯೂ ಸರಕಾಗಿದ್ದಾರೆ.

ಕಳ್ಳರು ಇಂತಲ್ಲಿಯೇ ಇರುತ್ತಾರೆ ಎಂದೇನಾದರೂ ನಿಯಮವಿದೆಯೇ. ಅವರು ಜಗದ್ವ್ಯಾಪಿಗಳು, ಭಗವಂತನಂತೆ!! ಎಲ್ಲೆಲ್ಲೂ ಇರುತ್ತಾರೆ. ಚಲನಚಿತ್ರದಲ್ಲೋ, ಕತೆಯಲ್ಲೋ ತೋರುವಂತೆ ಬೋಡು ತಲೆ, ದಪ್ಪ ಮೀಸೆ. ಹಣೆಯ ಮೇಲೆ ಹೆದರಿಸುವಂತ ರಾರಾಜಿಸುವ ತಿಲಕ, ಕೈಯ್ಯಲ್ಲೊಂದು ಆಯುಧ ಇವೆಲ್ಲಾ ಮಕ್ಕಳಿಗೆ ಹೇಳುವ ಕತೆಯಷ್ಟೆ. ಅತ್ಯಂತ ಸುಸಂಸ್ಕೃತ ಸಜ್ಜನರ, ಅಮಾಯಕರ ವೇಷದಲ್ಲಿ ಕೊಳ್ಳೆ ಹೊಡೆದು ದೋಚುವವರ ಸಂತತಿ ಹೆಚ್ಚಾಗುತ್ತಿದೆ.

ಬಸ್ಸು, ರೈಲು, ಮಾರ್ಕೆಟ್ಟು, ಮಾಲುಗಳು, ಸಿನಿಮಾ ಥೇಟರು, ಮದುವೆ ಛತ್ರ ಮುಂತಾದವಿರಲಿ, ದೇಗುಲಗಳೂ ಸಹ ಚೋರರ ಆಡೊಂಬೊಲವಾಗಿದೆ! ಒಟ್ಟಿನಲ್ಲಿ ಎಲ್ಲೆಲ್ಲಿ ಜನಜಂಗುಳಿಯಿದ್ದರೆ ಅಲ್ಲೆಲ್ಲಾ ನಮ್ಮ ಅಣ್ಣತಮ್ಮಂದಿರಂತೆಯೇ ಓಡಾಡುತ್ತಾ ತಮ್ಮ ಚಳಕ ತೋರುತ್ತಿರುತ್ತಾರೆ. ಅವರೇನು ರಿಜಿಸ್ಟರ್ಡ್‌ ಪ್ರಾಕ್ಟೀಷನರ್ಸೇ? ಇಂತಹದೇ ಜಾಗದಲ್ಲಿದ್ದು ವ್ಯವಹಾರ ನಡೆಸುವುದಕ್ಕೆ?! ಜಗವೆಲ್ಲಾ ಅವರದೇ. ಅದಕ್ಕೇ ಆಯಾ ಜಾಗದ ಮಾಲೀಕರು ʻನಿಮ್ಮ ಸ್ವತ್ತುಗಳಿಗೆ ನೀವೇ ಜವಾಬ್ದಾರರುʼ ಎನ್ನುವ ಬೋರ್ಡನ್ನು ತಗಲುಹಾಕಿ ತಾವು ಸುರಕ್ಷಿತರಾಗಿರುತ್ತಾರೆ!

ʻಕಳ್ಳತನ ಒಂದು ಕೆಟ್ಟ ಕೆಲಸʼ ಎನ್ನುವುದನ್ನು ಜಗತ್ತೇ ಒಪ್ಪಿಕೊಂಡಿದೆ. ʻಕಳಬೇಡ ಕೊಲಬೇಡ….ʼ ಎಂಬ ಅನರ್ಘ್ಯ, ಅಮೂಲ್ಯ ವಚನವನ್ನು ಜಗತ್ತಿಗೆ ನೀಡಿದ ಮಹಾತ್ಮ ಬಸವಣ್ಣನವರ ಮನೆಯಲ್ಲೇ ಕಳುವಾಯಿತಂತೆ! ಇನ್ನು ಪರರ ಪಾಡೇನು?? ಆಗ ʻನಿನ್ನ ಮೈಮೇಲೆ ಬಂಗಾರವಿಟ್ಟುಕೊಂಡಿದ್ದೇ ತಪ್ಪು; ತಪ್ಪು ಕಳ್ಳನದಲ್ಲʼ ಎಂದು ಹೆಂಡತಿಯನ್ನು ಆರೋಪಿಸಿ, ಕಳ್ಳನನ್ನೇ ವಹಿಸಿಕೊಂಡ ಮಹಾನುಭಾವರು ಅವರು.

ಹುಲುಮಾನವರಾದ ನಾವು ಈ ಧೋರಣೆ ತಳೆಯುವುದು ಸಾಧ್ಯವೇ?! ಕಷ್ಟಪಟ್ಟು ಗಳಿಸಿದ ಒಂದಿಷ್ಟರಲ್ಲಿ ಅಷ್ಟೋ, ಇಷ್ಟೋ ಹಣವನ್ನು ಎಷ್ಟೋ ಕಾಲ ಉಳಿಸಿ ಒಂದಿಷ್ಟು ಇಟ್ಟುಕೊಂಡಿದ್ದೇ ಕಳ್ಳರ ಪಾಲಾದರೆ ದುಃಖ ಪಡದಂತ ಸ್ಥಿತಪ್ರಜ್ಞರು ನಾವಲ್ಲ. ತಕ್ಷಣ ಪೊಲೀಸ್‌ ಸ್ಟೇಷನ್ನಿಗೆ ಓಡಿ ಹೋಗಿ ದೂರು ನೀಡಿದರೆ, ನಮ್ಮ ದೂರಿಗೆ ಸಾಂತ್ವನವನ್ನು ನೀಡದೆ ನಮ್ಮ ಬೇಜವಾಬ್ದಾರಿತನವನ್ನೇ ಹೈಲೈಟ್‌ ಮಾಡಿ ತಮ್ಮ ಹುಡುಕುವ ಜವಾಬ್ದಾರಿಯನ್ನು ಆ ಕ್ಷಣದಲ್ಲೇ ಸ್ವಲ್ಪ ಕಡಿಮೆ ಮಾಡಿಕೊಳ್ಳುವ ಜಾಣತನವನ್ನು ತೋರಿ, ಅಲ್ಲಿಗೆ ತುಡುಗಾದ ನಮ್ಮ ಒಡವೆಯ ಆಸೆಯನ್ನು ಠಾಣೆಯ ಮೆಟ್ಟಿಲಲ್ಲೇ ಬಿಟ್ಟುಬರುವ ಮನಸ್ಥಿತಿಗೆ ನಮ್ಮನ್ನು ದೂಡದಿದ್ದರೆ ಅವರ್ಯಾಕೆ ಆರಕ್ಷಕರಾದಾರು?.

ಅರವತ್ನಾಲ್ಕು ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದಂತೆ. ಮಿಕ್ಕೆಲ್ಲಾ ವಿದ್ಯೆಗಳಲ್ಲಿ ಪರಿಣಿತರಾಗಿ ಉನ್ನತಿಯನ್ನು ಸಾಧಿಸಿದರೆ ಬಂಗಾರದ, ಬೆಳ್ಳಿಯ ಪದಕಗಳು ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳು ಪಾರಿತೋಷಕವಾಗಿ ಲಭಿಸುವುದಾದರೆ, ಚೋರವಿದ್ಯೆಯಲ್ಲಿ ನಿಪುಣನಾದವನಿಗೆ ಒಂದಲ್ಲಾ ಒಂದು ದಿನ ಕಬ್ಬಿಣದ ಕಡಗ ಕೈಗೇರುವುದು ಗ್ಯಾರಂಟಿ. ಪುರಾಣಕಾಲದಿಂದಲೂ ಚೋರರು ಸಮಾಜದ ಒಂದು ಅವಿಭಾಜ್ಯ ಅಂಗವಾಗಿಯೇ ಬಂದಿದ್ದಾರೆ. ʻಕಳ್ಳನ ಹೆಂಡತಿ ಎಂದಿದ್ದರೂ ಮುಂಡೆಯೇʼ ಎನ್ನುವ ಗಾದೆಯೇ ಇದ್ದರೂ, ಈ ಕರ್ಮಕ್ಕೆ ಒಂದಲ್ಲಾ ಒಂದು ದಿನ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಗ್ಯಾರಂಟಿ ಕಳ್ಳನಿಗೂ ಇದ್ದರೂ, ಏಕೆ, ಹೇಗೆ ಇದರ ಬಲೆಯಲ್ಲಿ ಬೀಳುತ್ತಾರೆ ಎಂದು ವಿಶ್ಲೇಷಿಸಹೊರಡುವುದು ಸಮಾಜಶಾಸ್ತ್ರಜ್ಞರ ಕೆಲಸ ಬಿಡಿ. ನನ್ನ ಈ ಪುರಾಣಕ್ಕೂ, ಅಂತ ಗಹನವಾದ ಚರ್ಚೆಗಳಿಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ನಾನು ಹೇಳಹೊರಟಿರುವುದು, ಕಳ್ಳತನವಾದ ಮೇಲೆ ಕಳೆದುಕೊಂಡವರ ಪರಿಪಾಟಲು, ಮನಸ್ಥಿತಿ.

ಅಧ್ಯಾಯ ೧

ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲೊಮ್ಮೆ ಕಳ್ಳತನವಾಯಿತು. ನೈಟ್‌ ಷೋ ಪಿಕ್ಚರ್‌ ಮುಗಿಸಿಕೊಂಡು ಬಂದು ಮಲಗುವಾಗ ಸರಿರಾತ್ರಿಯಾಗಿತ್ತು. ಬೆಳಗ್ಗೆ ನಾಲ್ಕು ಗಂಟೆಗೇ ನಮ್ಮ ತಂದೆ ಎದ್ದಿದ್ದರು. ನಡುವಿನ ಮೂರು ಗಂಟೆಗಳಲ್ಲಿ ಒಂದು ಹಲ್ಲಿಯ ಲೊಚ್‌ ಲೊಚ್ ಸದ್ದಿಗೂ ಎಚ್ಚರವಾಗುವ ಅಮ್ಮನ ಸೂಕ್ಷ್ಮ ನಿದ್ರೆಯ ಕಾವಲಿನಲ್ಲಿ ಅದ್ಯಾವ ಮಾಯದಲ್ಲಿ ಕಳ್ಳರು ಮನೆ ಹೊಕ್ಕಿದ್ದರೋ,, ಅವರ ಹಾಸಿಗೆಯ ಪಕ್ಕದಲ್ಲೇ ಇದ್ದ ಸ್ಟ್ಯಾಂಡಿನ ಮೇಲಿಟ್ಟಿದ್ದ ಕೈಗಡಿಯಾರವನ್ನು ಹೇಗೆ ಎತ್ತಿದರೋ, ಯಾವಾಗ ಟ್ರಂಕುಗಳನ್ನು ಹಿತ್ತಲಿಗೆ ಒಯ್ದರೋ, ಯಾವುದೋ ಮೂಲೆಯಲ್ಲಿ ಬಚ್ಚಿಡುತ್ತಿದ್ದ ಕಬ್ಬಿಣದ ಬೀರುವಿನ ಕೀಲಿಕೈಯನ್ನು ಹೇಗೆ ಹುಡುಕಿದರೋ.. ಅಂತೂ ಹೀಗೆ ಅವರು ಮನೆಯೆಲ್ಲಾ ಓಡಾಡಿದರೂ.. ನಮಗೇನೋ ಸಾವಿನಂತ ನಿದ್ರೆ ಬಿಡಿ, ನಮ್ಮಮ್ಮನಿಗೆ ಎಚ್ಚರವಾಗದಿದ್ದದ್ದು ಹೇಗೆ ಎನ್ನುವುದೇ ನಮಗೊಂದು ಸೋಜಿಗ.

ಕಳ್ಳತನವಾಗಿದ್ದು ತಿಳಿಸಲು ಕರೆಯೋಲೆ ಬೇಕೆ? ನಮ್ಮೆಲ್ಲರ ಹಾಹಾಕಾರಗಳಿಗೆ ಅಕ್ಕಪಕ್ಕದ ಮನೆಯವರೆಲ್ಲರೂ ಗುಂಪು ಗುಂಪಾಗಿ ಸೇರಿ, ತಲೆಗೊಂದರಂತೆ ಸಲಹೆಗಳನ್ನು ನೀಡುತ್ತಾ, ಇನ್ನೂ ಮನೆಯಲ್ಲೇ ಅಡಗಿದ್ದಿರಬಹುದಾದ ಕಳ್ಳರನ್ನು ಹುಡುಕುತ್ತಾ, ಮನೆಯನ್ನು ಮತ್ತಷ್ಟು ಕಿತ್ತುಹಾಕಿ ತಮ್ಮದೇ ರೀತಿಯಲ್ಲಿ ಸಹಕರಿಸುತ್ತಾ ನಮ್ಮ ಮನೆಯ ಎಲ್ಲ ಭಾಗವನ್ನೂ ಆಕ್ರಮಿಸಿಕೊಂಡು ತಮ್ಮ ಅಮೋಘ ಕಲ್ಪನೆಗಳನ್ನೂ, ಸಿದ್ಧಾಂತಗಳನ್ನೂ ಇತರರೊಂದಿಗೆ ಹಂಚಿಕೊಳ್ಳುತ್ತಾ ರೋಚಕವಾಗಿ ಕಾಲಕಳೆಯುತ್ತಿರುವಂತ ಇಂತಹ ಅಪೂರ್ವ ಸನ್ನಿವೇಶದಲ್ಲಿ ಅದ್ಯಾರು ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದರೋ, ಅಂತೂ ಅವರೂ ಬಂದು ತನಿಖೆಯೂ ಆರಂಭವಾಯಿತು.

 

ಅವರ ಪ್ರಶ್ನೆಗಳು ನಮಗೆ ಮುಟ್ಟುವುದಕ್ಕಿಂತಲೂ ಮುಂಚಿತವಾಗಿ ಇತರರ  ಕಿವಿಹೊಕ್ಕು, ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಿದ್ದರೆ, ಪೊಲೀಸರಿಗೆ ಯಾರು ಮನೆಯವರು, ಯಾರು ಪರರು ಒಂದೂ ಅರಿವಾಗದೇ ಒಂದು ʻಆವಾಜ಼್ʼ ಹಾಕಿ ಸನ್ನಿವೇಶವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾಯಿತು.

ಅಷ್ಟೆಲ್ಲಾ ತನಿಖೆಯ ನಂತರ ಷರಾ ಏನೆಂದರೆ ಅಮ್ಮನ ವಾಚೊಂದನ್ನು ಬಿಟ್ಟರೆ ಬೇರೇನೂ ಕಳುವಾಗಿರಲಿಲ್ಲ. ಹಿತ್ತಲಿನಲ್ಲಿಟ್ಟುಕೊಂಡಿದ್ದ ಎರಡೂ ನವರಾತ್ರಿಯ ಬೊಂಬೆಯ ಪೆಟ್ಟಿಗೆಗಳು. ಅವರ ಕೈಸೇರಿದ್ದ ಕಬ್ಬಿಣದ ಬೀರುವಿನ ಕೀಲಿಕೈಯನ್ನೂ ಹಿತ್ತಲಲ್ಲೇ ಬಿಸುಟಿ ಹೋಗಿದ್ದರು. ಹಿತ್ತಲಿನ ಕಾಂಪೌಂಡನ್ನು ಹಾರುವಾಗ ಬಿಳಿಯ ಗೋಡೆಯ ಮೇಲೆ ತಮ್ಮೆರಡು ಪಾದದ ಕ್ಸೆರಾಕ್ಸ್‌ ಪ್ರತಿಯನ್ನು (ಅವರು ಹೋಗಿದ್ದು ಹೇಗೆ ಎಂಬುದರ ಬಗ್ಗೆ ನಮಗೆ ಅನುಮಾನ ಬೇಡ ಎಂದು) ಒತ್ತಿ ಹಿಂದಿನ ಕನ್ಸರ್‌ವೆನ್ಸಿ ರಸ್ತೆಗೆ ಹಾರಿದ್ದರು.

ಅವನು ಹೀಗೆ ಬಂದ, ಹಾಗೆ ಹೋದ ಎಂದು ನಾವು ಮರೆತರೂ, ಮರೆಯಲು ಬಿಡದೆ ನಮ್ಮ ಮನೆ ಕಳ್ಳಹೊಕ್ಕ ಮನೆಯೆಂದು ಪ್ರಸಿದ್ಧವಾಗಿ ಆ ಬೀದಿಯ ಲ್ಯಾಂಡ್‌ಮಾರ್ಕ್‌ ಆಯಿತು. ನಾವು ಹೋದಲ್ಲಿ, ಬಂದಲ್ಲಿ ಗುರುತಿದ್ದವರು, ಇಲ್ಲದವರು ಗುರುತು ಮಾಡಿಕೊಂಡು ಕಳ್ಳತನದ ಡೀಟೇಲ್ಸ್‌ ಕೇಳಿ, ಕೇಳಿ ಸಂತಾಪ(?) ಪಟ್ಟರು. ತಮ್ಮ ಬತ್ತಳಿಕೆಯಲ್ಲಿದ್ದ ಸುರಕ್ಷತೆಯ ಅಮೂಲ್ಯ ಉಪದೇಶಗಳ ಬಾಣಗಳನ್ನು ನಮ್ಮ ತಲೆಗೆ ನಾಟುವಂತೆ ನೆಟ್ಟರು.

ಹಲವರು ನಮ್ಮ ಮನೆಗೂ ಬಂದು ಕಳ್ಳನ ಪಾದದ ಪ್ರತಿಯನ್ನು ಬಿಳಿಯ ಗೋಡೆಯ ಮೇಲೆ ತಮ್ಮ ಕಣ್ಣಾರೆ ನೋಡಿ ಕಳ್ಳತನವಾಗಿದ್ದನ್ನು ದೃಢಪಡಿಸಿಕೊಂಡು ʻಒಂದ್ಸಲ ನೋಡ್ಕೊಂಡು ಹೋಗಿದಾನೆ ಯಾವುದಕ್ಕೂ ಹುಷಾರಾಗಿರಿʼ ಎನ್ನುವ ಅವರ ಕಕ್ಕುಲತೆಯ ಭಯವನ್ನೂ ವ್ಯಕ್ತಪಡಿಸಿ ನಮ್ಮ ತಲೆಗೆ ಹುಳಬಿಟ್ಟು ಹೋದರು.

ಕೈಗೆ ಸಿಕ್ಕಿದ್ದ ಬೀರುವಿನ ಬೀಗದ ಕೈಯನ್ನೂ ʻಇದು ಪ್ರಯೋಜನವಿಲ್ಲದ ಕೇಸುʼ ಎಂದು ವಾಪಸ್ಸು ಎಸೆದು ಹೋದವನು ಇನ್ನೊಮ್ಮೆ ಬರುವ ಸಾಹಸವನ್ನು ಯಾಕಾದರೂ ಮಾಡಿಯಾನು?! ಒಟ್ಟಿನಲ್ಲಿ ಊರಿನಲ್ಲಿ ಇನ್ನೊಂದು ಮನೆಯಲ್ಲಿ ಕಳ್ಳತನವಾಗುವ ತನಕ ನಮ್ಮ ಮನೆಯ ಕಳ್ಳತನ ಊರಿನೆಲ್ಲರ ನಾಲಿಗೆಯ ಮೇಲೆ ಆಡಿಕೊಂಡಿತ್ತು ಎಂದು ಹೇಳುತ್ತಾ ಚೋರಪುರಾಣದ ಪ್ರಥಮೋಧ್ಯಾಯವು ಸಂಪನ್ನವಾಯಿತು.

ಅಧ್ಯಾಯ ೨

ಹೀಗೇ ಎಷ್ಟೋ ವರ್ಷಗಳು ಕಳೆದು ನಾವು ಮಕ್ಕಳೆಲ್ಲರ ಮದುವೆಯಾಗಿ ನಮ್ಮ ನಮ್ಮ ಸಂಸಾರ ಹೂಡಿದ ಮೇಲೆ, ಒಂದು ಬೇಸಿಗೆಯ ರಜೆಯಲ್ಲಿ ನನ್ನ ತಂಗಿ ಸಂಸಾರ ಸಮೇತ ಭುವನೇಶ್ವರದಿಂದ ಬೆಂಗಳೂರಿಗೆ ಬಂದಿದ್ದಳು. ಇಬ್ಬರೂ ವರ್ಷದ ಮಾತನ್ನೆಲ್ಲಾ ಪೂರೈಸಿ ಮಲಗುವ ವೇಳೆಗೆ ಬೆಳಗಿನ ಜಾವ.

ಏಳು ಗಂಟೆಗೇ ಅವರ ಕುಟುಂಬ ಸ್ನೇಹಿತರಿಂದ ಎಸ್.ಟಿ.ಡಿ. ಕರೆ. ʻನಿನ್ನೆ ರಾತ್ರಿ ನಿಮ್ಮ ಮನೆಗೆ ಕಳ್ಳರು ನುಗ್ಗಿ ಪಾತ್ರೆ, ಬಟ್ಟೆಗಳನ್ನು ಬಿಟ್ಟು ಟಿವಿ, ಫ್ರಿಡ್ಜ್‍ನಿಂದ ಹಿಡಿದು ಇಡೀ ಮನೆಯನ್ನು ಗುಡಿಸಿಕೊಂಡು ಹೋಗಿದ್ದಾರೆ. ನಗನಾಣ್ಯವೇನಾದರೂ ಮನೆಯಲ್ಲಿತ್ತಾ?ʼ ಎಂದರು. ʻಇರೋ ಅಲ್ಪ ಸ್ವಲ್ಪ ನಗ ಲಾಕರಿನಲ್ಲಿಟ್ಟಿದ್ದೇವೆ. ನಾಣ್ಯ ನಮ್ಮ ಜೊತೆಯಲ್ಲೇ ಇದೆʼ ಅಂದಾಗ ʻಸರಿ ಹಾಗಾದ್ರೆ. ವಾಪಸ್ಸು ಬರೋ ಅವಶ್ಯಕತೆ ಏನೂ ಇಲ್ಲ ಬಿಡಿ. ನಾನು ಕಂಪ್ಲೇಟ್‌ ಕೊಟ್ಟಿರ್ತೀನಿ. ಹೇಗೂ ಸಿಗೋ ಕೇಸಲ್ಲ. ಎಲ್ಲಾ ವಸ್ತುಗಳ ಸಾಲದ ಕಂತು ತೀರಿತ್ತು ತಾನೆ? ಬಂದ್ಮೇಲೆ ಮತ್ತೆ ಎಲ್ಲಾನೂ ಹೊಸದಾಗಿ ಕಂತಿನಲ್ಲಿ ಕೊಂಡು ಪಾರ್ಟಿ ಕೊಡಿಸುವಿರಂತೆ. ಎಂಜಾಯ್‌ ಯುವರ್‌ ಹಾಲಿಡೇಸ್‌ʼ ಎಂದು ಶುಭ ಹಾರೈಸಿದರು!

ʻನಾವಿಲ್ಲಿ ಹರಟೆ ಕೊಚ್ಚುತ್ತಾ ಎಚ್ಚರವಾಗಿದ್ದ ಸಮಯದಲ್ಲೇ ಅಲ್ಲಿ ಲಾರಿಯನ್ನು ತಂದಿಟ್ಟುಕೊಂಡು ಮನೆಯನ್ನೇ ಸಾಗಿಸಿದ್ದಾನಲ್ಲʼ ಎಂದು ಖೇದವಾದರೂ, ರಿಸರ್ವೇಷನ್‌ ಇಲ್ಲದೇ ಟ್ರೇನಿನಲ್ಲಿ ಇಬ್ಬರು ಪುಟ್ಟ ಮಕ್ಕಳನ್ನೂ ಕಟ್ಟಿಕೊಂಡು ಕಷ್ಟಪಟ್ಟುಕೊಂಡು, ಸಿಗದಿರುವ ಮಾಲಿಗಾಗಿ ವಾಪಸ್ಸು ಹೋಗುವುದರಲ್ಲಿ ಅರ್ಥವಿಲ್ಲ, ಕಂಪ್ಲೇಂಟಿನ ಕತೆಯನ್ನು ಹೇಗೂ ಸ್ನೇಹಿತರು ನೋಡಿಕೊಳ್ಳುತ್ತಾರೆ ಎಂದು ಮನಗಂಡ ದಂಪತಿ ನಿಗದಿಯಾಗಿದ್ದ ಸಮಯದ ತನಕ ಇದ್ದು, ನಂತರ ಊರಿಗೆ ಹೋದ ಮೇಲೆ ಒಂದೊಂದನ್ನೇ ಮತ್ತೆ ಕೊಂಡರು ಅನ್ನುವಲ್ಲಿಗೆ ಈ ಚೋರ ಪುರಾಣದ ದ್ವಿತೀಯ ಅಧ್ಯಾಯವು ಮುಗಿದುದು.

ಅಧ್ಯಾಯ ೩

ನಾವು ಮೈಸೂರಿನಲ್ಲಿದ್ದಾಗ ಏನೋ ಕೆಲಸದ ಮೇಲೆ ಮನೆಯವರೆಲ್ಲರೂ ನಾಲ್ಕು ದಿನದ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದೆವು. ಮಾರನೆಯ ಸಾಯಂಕಾಲ ನಮ್ಮ ಆತ್ಮೀಯ ಸ್ನೇಹಿತರಿಂದ ಬಂದ ಕರೆಯಿಂದ ಚೋರ ಪುರಾಣದ ಮೂರನೆಯ ಅಧ್ಯಾಯದ ಶುಭಾರಂಭವಾಯಿತು.

ನಾವಿಲ್ಲಿ ಬಂದ ರಾತ್ರಿಯೇ ಡೋರ್‌ಲಾಕನ್ನು ಮುರಿದು, ಮನೆಗೆ ನುಗ್ಗಿದ್ದ ಕಳ್ಳ ಮನೆಯಲ್ಲಿಟ್ಟುಕೊಂಡಿದ್ದ ಅಲ್ಪ ಸ್ವಲ್ಪ ಬಂಗಾರ, ಹೊಸ ಹೊಸ ನೋಟೆಂದು ಆಸೆ ಪಟ್ಟು ಶೇಖರಿಸಿಟ್ಟುಕೊಂಡಿದ್ದ ಒಂದು ಹತ್ತು ಸಾವಿರದಷ್ಟು ನಗದನ್ನು ದೋಚಿದ್ದ. ತಕ್ಷಣವೇ ವಾಪಸ್ಸು ಹೊರಟು ಮನೆಗೆ ಹೋದಾಗಲೇ ʻಕಳ್ಳ ದೋಚಿದ ಮನೆʼ ಎನ್ನುವ ನುಡಿಗಟ್ಟಿನ ಅರ್ಥ ನನಗೆ ಸಂಪೂರ್ಣವಾಗಿ ತಿಳಿದಿದ್ದು!

ಮನೆಯ ಮೂರು ಬೀರುಗಳ ಬಾಗಿಲನ್ನೂ ನಿರ್ದಾಕ್ಷಿಣ್ಯವಾಗಿ ಒಡೆದು ಅವನ್ನು ನೆಲಕ್ಕೆ ಬಗ್ಗಿಸಿ ಅದರಲ್ಲಿದ್ದ ಸಕಲ ಸಾಮಗ್ರಿಗಳನ್ನೂ ಸೀದಾ ನೆಲದ ಮೇಲೆ ಸುರಿದಿದ್ದ. ಅವನಿಗೆ ಬೇಕಿದ್ದಿದ್ದು ಬರೀ ನಗ ಮತ್ತು ನಾಣ್ಯ ಮಾತ್ರ; ಏಕೆಂದರೆ ಕೈಗೆ ಸಿಕ್ಕಿದ್ದ ಹೊಸದಾಗಿ ಮಾಡಿಸಿದ್ದ ಮುಕ್ಕಾಲು ಕೇಜಿ ತೂಕದ ಬೆಳ್ಳಿಯ ತಟ್ಟೆ ಚೊಂಬನ್ನೂ ಹಾಲಿನ ಸೋಫಾದ ಮೇಲೆ ಎಸೆದು ಹೋಗಿದ್ದ!

ಅಂಥವನು ನಮಗೆ ಎತ್ತಿಡುವ ಕೆಲಸ ಹೆಚ್ಚುಮಾಡಲು ಹಳೆಯ ಪೇಪರ್ರು, ಪುಸ್ತಕ, ಬೊಂಬೆಗಳನ್ನು ಸಹಾ ಏಕೆ ನೆಲದ ಮೇಲೆ ಈಡಾಡಿದ್ದ ಎನ್ನುವುದು ಗೊತ್ತಾಗಲಿಲ್ಲ. ಅವುಗಳ ಹಿಂದೆಮುಂದೆಲ್ಲಾ ಅಡಗಿಸಿಡುವುದಕ್ಕೆ ನಾವೇನು ರಾಜಕಾರಣಿಗಳೇ, ಕಳ್ಳಸಂತೆ ವ್ಯಾಪಾರಿಗಳೇ! ಬಂಗಲೆಯಂತ ಮನೆ ನೋಡಿ ಬೇಸ್ತು ಬಿದ್ದಿದ್ದ.

ತಕ್ಷಣವೇ ಸ್ನೇಹಿತರೊಂದಿಗೆ ಪೊಲೀಸ್‌ ಸ್ಟೇಷನ್ನಿಗೆ ಹೋಗಿ ಕಂಪ್ಲೇಂಟ್‌ ಕೊಟ್ಟು ಬಂದಿದ್ದಾಯಿತು. ಹಿಂದೆಯೇ ಬಂದ ಪೊಲೀಸರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಯೋಚನೆಯನ್ನು ಮಾಡುವುದನ್ನೇ ನಿಲ್ಲಿಸಿದ್ದ ನಮ್ಮ ತಲೆಯನ್ನೊಂದಿಷ್ಟು ಡ್ರಿಲ್‌ ಮಾಡಿ, ʻಮನೆಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡದೇ ಹೋಗಿದ್ದ ನಿಮ್ಮದೇ ತಪ್ಪುʼ ಎನ್ನುವ ಪ್ರಮಾಣ ಪತ್ರವನ್ನು ದಯಪಾಲಿಸಿ, ಮರುದಿನ ದೊಡ್ಡ ಸಾಹೇಬರು ಬಂದ ಮೇಲೆ ಬಂದು ಕಾಣಬೇಕೆಂದು ಫರ್ಮಾನು ಹೊರಡಿಸಿ ಹೋದರು.

ʻಎಲ್ಲರೂ ಅವರವರ ಮನೆಗೆ ಸೂಕ್ತ ಕಾವಲು ಹಾಕಿ ಹೋಗುವುದಾದರೆ ರಾತ್ರಿ ಹೊತ್ತು ಗಸ್ತು ತಿರುಗುವ ಪೊಲೀಸರಿಗೇನು ಕೆಲಸ?ʼ ಎಂಬ ಪ್ರಶ್ನೆ ತಲೆಗೆ ಬಂದರೂ ಕೇಳುವ ಧೈರ್ಯವಿಲ್ಲದೆ ಬಾಯಿಮುಚ್ಚಿಕೊಂಡೆವು. ಶುರುವಾಯಿತು ನೋಡಿ,‌ ಆ ಕ್ಷಣದಿಂದಲೇ ಪೊಲೀಸ್‌ ದಿರಿಸಿನಲ್ಲಿದ್ದ ಯಾರ್ಯಾರೋ ಮಧ್ಯರಾತ್ರಿಯವರೆಗೂ ಆಕ್ರಮಿತ ಪ್ರದೇಶದಲ್ಲಿ ಯೋಧರು ಓಡಾಡುವ ಹಾಗೆ ಹಕ್ಕಿನಿಂದ ಮನೆಯ ಮೂಲೆ ಮೂಲೆಯಲ್ಲೂ ಠಳಾಯಿಸುತ್ತಾ, ನಾವೇ ಕಳ್ಳರೇನೋ ಎನ್ನುವ ಭಾವ ಬರುವಂತೆ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾ, ನಮ್ಮ ಮನೆಯ, ನಮಗೇ ಗೊತ್ತಿಲ್ಲದ ಎಲ್ಲ ರಹಸ್ಯಗಳನ್ನೂ ಬಯಲು ಮಾಡುತ್ತಾ, ನಮ್ಮ ಮನೆಯೇ ನಮಗೆ ಅಪರಿಚಿತವೆನ್ನಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

ಅವರಲ್ಲಿ ಕಳ್ಳರೂ ಪೊಲೀಸ್‌ ದಿರಿಸಿನಲ್ಲಿ ಬಂದು ಅಡ್ಡಾಡುತ್ತಿದ್ದಾರೆಯೇ ಎಂದು ಕೂಡ ಒಮ್ಮೆ ನನಗೆ ಅನ್ನಿಸಿದ್ದುಂಟು. ಪೊಲೀಸ್ ನಾಯಿಗಳು ಮನೆಯಲ್ಲೆಲ್ಲಾ ಮಾರ್ಚ್‌ಫಾಸ್ಟ್‌ ಮಾಡಲಾರಂಭಿಸಿದವು. ಮರುದಿನ ಪೊಲೀಸ್‌ ಸ್ಟೇಷನ್ನಿಗೆ ಹೋದಾಗ ಲೋಕಲ್‌ ಪೇಪರಿನವರು, ಟಿವಿಯವರು ಸಂದರ್ಶನ ತೆಗೆದುಕೊಳ್ಳಲು ಮೈಕು, ಕ್ಯಾಮರಾ ಹಿಡಿದು ಬಂದಾಗ ಮೊದಲೇ ತಲೆ ಕೆಟ್ಟಿತ್ತು; ಕೈಮುಗಿದು ವಾಪಸ್ಸು ಕಳಿಸಿದ್ದಾಯಿತು.

ಹೊಳೆನರಸೀಪುರದಲ್ಲಿದ್ದ ಮನೆಯ ಮಾಲೀಕರು ಮಾರನೆಯ ಬೆಳಗ್ಗೆಯೇ ಓಡಿ ಬಂದಿದ್ದರು. ತುಂಬಾ ಮೆದು ಸ್ವಭಾವದವರು; ʻಮನೆಗೆ ಗ್ರಿಲ್‌ ಬಾಗಿಲನ್ನೂ, ಇನ್ನೊಂದು ಬೀಗವನ್ನೂ ಹಾಕದೇ ಇದ್ದ ಭದ್ರತಾ ಲೋಪದಿಂದ ಕಳ್ಳತನವಾಗಿದೆʼ ಎಂದು ತಮ್ಮ ಮೇಲೆ ತಾವೇ ಆರೋಪ ಹೊರಿಸಿಕೊಂಡು ಪೆಚ್ಚಾದವರನ್ನು ʻಇದು ನಮ್ಮ ಗ್ರಹಚಾರ ಅಷ್ಟೇ; ಇದಕ್ಕೆ ನೀವೂ ಎಳ್ಳಷ್ಟೂ ಕಾರಣರಲ್ಲʼ ಎಂದು ನಾವೇ ಸಮಾಧಾನ ಪಡಿಸಬೇಕಾಯಿತು. ಆದರೂ ಪಾಪ ಮನಸ್ಸು ತಡೆಯದೆ ಎರಡೂ ಭದ್ರತಾ ಲೋಪಗಳನ್ನೂ ಸರಿಪಡಿಸಿಯೇ ಹೋದರು.

ಇಲ್ಲಿಯ ತನಕ ಒಂದು ಹಂತವಾದರೆ ಗುರುತು, ಪರಿಚಯದವರ ಅನುಕಂಪದ ಹೊಳೆಯೇ ಮನೆಯೆಡೆಗೆ ಹರಿಯತೊಡಗಿತು. ಸಂಜೆಗೆ ನನ್ನನ್ನು ಕಾಣಲು ಬಂದ ಆತ್ಮೀಯ ಗೆಳತಿ “ಎಷ್ಟು ಡಲ್ಲಾಗಿ ಕಾಣಿಸ್ತಿದೀಯ. ತುಂಬಾ ಹಚ್ಚಿಕೋಬೇಡ… ಇತ್ಯಾದಿ… ಇತ್ಯಾದಿ…” ಸಮಾಧಾನ ಪಡಿಸಿದಾಗ “ಹೂಂ. ಕೂದಲಿಗೆ ಬಣ್ಣ ಹಚ್ಚಿಲ್ವಲ್ಲ… ಊರಿಗೆ ಹೋಗೋ ಅವಸರದಲ್ಲಿ ಬ್ಯುಟಿಷಿಯನ್‌ ಹತ್ರ ಹೋಗಕ್ಕಾಗಲಿಲ್ಲ. ಅದಕ್ಕೇ ಡಲ್ಲಾಗಿ ಕಾಣಿಸ್ತಿದೀನಿ. ಈಗ ಕಾಫಿ ಕುಡೀತೀಯೋ, ಟೀನೋ” ಎಂದು ಎಂದಿನಂತೆ ಕೇಳಿದರೆ “ನಾನೇನೋ ನಿನ್ನನ್ನ ಸಮಾಧಾನ ಮಾಡಿ ಹೋಗೋಣ ಅಂತ ಬಂದ್ರೆ ನೀನು ತಮಾಶೆ ಮಾಡ್ಕೊಂಡು ನಂಗೆ ಉಪಚಾರ ಮಾಡ್ತಿದೀಯಲ್ಲ” ಎಂದು ನಾನ್ಯಾವುದೋ ವಿಚಿತ್ರ ಪ್ರಾಣಿ ಎನ್ನುವಂತೆ ಅಚ್ಚರಿಯಿಂದ ನೋಡಿದಳು.

ಅದೇ ಹೊತ್ತಿಗೆ ನನ್ನವರ ಬ್ಯಾಂಕಿನಿಂದ ಬಂದ ಅವರ ಸಹೋದ್ಯೋಗಿಗಳಿಗೂ ನಮ್ಮಿಬ್ಬರನ್ನು ನೋಡಿ ಆಶ್ಚರ್ಯ. “ಸರ್‌, ನೀವೇನೋ ಗಂಡಸರು, ತೋರಿಸಿಕೊಳ್ಳಲ್ಲ ಅಂದುಕೊಂಡರೆ ನಿಮ್ಮ ಮನೆಯವರೂ ಆರಾಮಾಗೇ ಇದಾರಲ್ಲ” ಎಂದಾಗ, ʻಹಾಗಾದರೆ ನಿರಾಳವಾಗಿರುವುದೂ ತಪ್ಪೇ. ನಾನು ಅತ್ತರೆ, ಆತಂಕ ಪಟ್ಟುಕೊಂಡರೆ ಕಳ್ಳನೇನಾದರೂ ಕದ್ದ ಮಾಲನ್ನು ವಾಪಸ್ಸು ತಂದುಕೊಡುತ್ತಾನೆಯೇ?ʼ ಎನ್ನಿಸಿತ್ತು. ಬಂದವರಲ್ಲಿದ್ದ ಒಬ್ಬ ಸರ್ವಜ್ಞಮೂರ್ತಿ “ನಾವು ಊರಿಗೆ ಹೋಗೋವಾಗ ಏನು ಮಾಡ್ತೀವಿ ಗೊತ್ತಾ…” ಎನ್ನುತ್ತಾ ಬೆಲೆಬಾಳುವ ವಸ್ತುಗಳನ್ನು ಅಡಗಿಸಿಡುವ ಚತುರೋಪಾಯಗಳನ್ನು ನಮ್ಮಲ್ಲಿ ಹಂಚಿಕೊಂಡರು.

ಹೇಳಿದ್ದನ್ನು ಕೇಳಿಸಿಕೊಂಡು ನಾನು ಸುಮ್ಮನಿರಬಾರದೆ… “ನೀವು ಅಷ್ಟೆಲ್ಲಾ ಮುಂಜಾಗ್ರತೆ ತೆಗೆದುಕೊಂಡು ಹೋಗಿರುವ ಸಮಯದಲ್ಲಿ ಯಾವಾಗಲಾದರೂ ಕಳ್ಳ ಮನೆ ಹೊಕ್ಕಿದ್ದನೇ” ಎಂದು ಕೇಳಿದೆ. “ಇಲ್ಲವಲ್ಲ” ಎಂದರು ಹೆಮ್ಮೆಯಿಂದ. “ಹಾಗಾದ್ರೆ ನಿಮ್ಮ ಉಪಾಯಗಳು ಸರಿ ಅಂತ ಹೇಗೆ ನಂಬೋದು. ಕಳ್ಳ ಮನೆಹೊಕ್ಕು, ಆಗಲೂ ಅವನಿಗೆ ನಿಮ್ಮ ಒಡವೆಗಳು ಸಿಕ್ಕಿಲ್ಲದಿದ್ದರೆ ಈ ಉಪಾಯಗಳು ಸರಿ ಎಂದುಕೊಳ್ಳಬಹುದಿತ್ತು” ಎಂದೆ. ಅವರು ಪೆಚ್ಚಾದರು. ಅಂತೂ ನಮ್ಮನ್ನು ನೋಡಿ ಸಂತಾಪ ವ್ಯಕ್ತಪಡಿಸಲು ಬಂದವರಿಗೆಲ್ಲಾ ನಾವೇ ಸಮಾಧಾನ ಮಾಡಿ, ಕಾಫಿ, ಟೀ ಕೊಟ್ಟು ಅವರನ್ನು ನಗಿಸಿ ಕಳುಹಿಸುವಲ್ಲಿ ಇಬ್ಬರೂ ಯಶಸ್ವಿಯಾದೆವು.

ಮರುದಿನ ಬ್ಯಾಂಕಿಗೆ ಹೋದಾಗ ನಮ್ಮ ಎಜಿಎಂ ಚೋರಪುರಾಣದ ಈ ಅಧ್ಯಾಯವನ್ನು ಕೇಳಿ, ಇನ್ನೆರಡು ದಿನದಲ್ಲಿ ಆರಂಭವಾಗಲಿದ್ದ ನಮ್ಮ ಹೊಸತೊಂದು ಎಟಿಎಂ ನ ಉದ್ಘಾಟನೆಗೆ ಬರಲಿದ್ದ ಡಿಸಿಪಿ ಶ್ರೀ ಭಾಸ್ಕರ ರಾವ್‌ ಅವರಲ್ಲಿ ಒಂದು ಮನವಿಯನ್ನು ಮಾಡೋಣ ಎಂದು ಸೂಚಿಸಿ ಆ ದಿನದ ಸಮಾರಂಭಕ್ಕೆ ನನ್ನನ್ನೂ ಕರೆದುಕೊಂಡು ಹೋದರು.

ಡಿಸಿಪಿಯವರು ಮನವಿಯನ್ನು ಮುಟ್ಟಲೂ ಇಲ್ಲ; ಕಂಪ್ಲೇಂಟ್ ನಂಬರನ್ನು ನೋಡಿಕೊಂಡರಷ್ಟೆ. ಅದರ ಮರುದಿನವೇ ಕೃಷ್ಣಮೂರ್ತಿಪುರಂನ ಪೊಲೀಸ್‌ ಸ್ಟೇಷನ್ನಿನಿಂದ ನನ್ನವರಿಗೆ ಕರೆ ಬಂದಿತು. ʻಏನ್ಸಾರ್‌, ನೀವು ಡಿಸಿಪಿಯವರ ಬಳಿಯೇ ಹೋಗಿಬಿಟ್ಟಿದೀರಿ. ನಾವೇ ಮಾಡ್ಕೊಡ್ತಿದ್ವಲ್ವʼ ಎನ್ನುತ್ತಾ ʻಈಗ ನಿಮ್ಮ ತಾಕತ್ತು ನಮ್ಮ ಅರಿವಿಗೆ ಬಂತುʼ ಅನ್ನುವ ಹಾಗೆ ಆದಷ್ಟು ಬೇಗನೆ ಹುಡುಕಿಸಿಕೊಡುವ ಭರವಸೆ ಕೊಟ್ಟರು.

ನಮ್ಮ ಸಮೀಪದ ಬಂಧುಗಳೊಬ್ಬರು ʻಕಾರ್ತಿವೀರ್ಯಾರ್ಜುನ ಮಂತ್ರʼವನ್ನು ಬರೆದುಕೊಟ್ಟು ಅದನ್ನು ದೇವರ ಮುಂದಿಟ್ಟು ವಾರಕಾಲ ಪಠಿಸುವಂತೆ ಹೇಳಿಹೋದರು. ಪೊಲೀಸರನ್ನೇ ನಂಬುವುದಾದರೆ ದೇವರನ್ನೇಕೆ ನಂಬಬಾರದು ಎಂದುಕೊಂಡು ಅದನ್ನೂ ಮಾಡಿದ್ದಾಯಿತು.

ನಮ್ಮ ಪುಣ್ಯವೋ, ಮಂತ್ರದ ಮಹಿಮೆಯೋ ಅಥವಾ ಡಿಸಿಪಿ ಯವರ ಮಾತಿನ ಶಕ್ತಿಯೋ ನಾಲ್ಕೈದು ದಿನಗಳಲ್ಲೇ ಪೊಲೀಸ್‌ ಸ್ಟೇಷನ್ನಿಗೆ ನಮ್ಮವರನ್ನು ಕರೆಸಿಕೊಂಡು, ʻಚಿನ್ನವನ್ನೆಲ್ಲಾ ಕರಗಿಸಿ ಉಂಡೆ ಮಾಡಿಬಿಟ್ಟಿದಾನೆ ಸರ್‌, ಅದನ್ನೇ ಕೊಡ್ತೀವಿ. ದುಡ್ಡಿನ ಆಸೆ ಬಿಟ್ಬಿಡಿ.ʼ ಎಂದು ಸರಿಸುಮಾರು ಕಳೆದುಕೊಂಡಷ್ಟು ತೂಕದ ಉಂಡೆಯನ್ನು ನೀಡಿ ನಿಮ್ಮ ಆಭರಣಗಳನ್ನು ಮತ್ತೆ ಮಾಡಿಸಿ ತಂದುಕೊಡಿ. ಅದನ್ನು ಕೋರ್ಟಲ್ಲಿ ಹಾಜರು ಪಡಿಸಬೇಕು ಎಂದು ಹೇಳಿದರು. ಅದರ ಆಸೆಯನ್ನೇ ಬಿಟ್ಟಿದ್ದವರು ʻಸಿಕ್ಕಿದಷ್ಟೇ ಲಾಭʼ ಎಂದುಕೊಂಡು ಮತ್ತೆ ಮಜೂರಿಯನ್ನು ಕೊಟ್ಟು ಮಾಡಿಸಿ ತಂದುಕೊಟ್ಟೆವು. ಅಂತೂ ತಿಂಗಳೊಳಗೆ ಕಳೆದಿದ್ದರಲ್ಲಿ ಒಂದು ಅರವತ್ತರಿಂದ ಎಪ್ಪತ್ತರಷ್ಟು ಭಾಗ ಮರಳಿ ಸಿಕ್ಕಿತು ಎನ್ನುವಲ್ಲಿ ತೃತೀಯೋಧ್ಯಾಯವೂ ಪುನೀತವಾಯಿತು.

ಉಪಸಂಹಾರ

ಇಷ್ಟು ಹೊತ್ತು ಕೊರೆಸಿಕೊಂಡ ನಿಮ್ಮ ಹೆಚ್ಚು ಸಮಯವನ್ನು ಇನ್ನು ತೆಗೆದುಕೊಳ್ಳುವುದಿಲ್ಲ. ಈ ಚೋರ ಪುರಾಣದ ಶ್ರವಣದಿಂದಾಗಲೀ, ಪಠಣದಿಂದಾಗಲೀ ನಿಮ್ಮ ಮನೆಯಲ್ಲಿ ಕಳ್ಳತನವಾಗುವುದಿಲ್ಲ ಎನ್ನುವ ಭರವಸೆಯನ್ನೂ ಕೊಡುವುದಿಲ್ಲ. ಕಳುವಾದ ತಕ್ಷಣ ಮನೆಗೆ ಬರಹೋಗುವವರ ಮೇಲೆಲ್ಲಾ ಅನುಮಾನ ಬರುವುದು ಸಹಜ.

ಆದರೆ ನೆಮ್ಮದಿಯಿಂದ ಇರಬೇಕೆಂದರೆ ಅವರೆಲ್ಲರ ಸದ್ಗುಣಗಳನ್ನೂ ನೆನಪಿಸಿಕೊಂಡು ಅಂತಹ ಸಂಶಯಗಳನ್ನು ಮನಸ್ಸಿನಿಂದ ದೂರ ತಳ್ಳುವುದೊಂದೇ ಉಪಾಯ! ದಿನವೂ ಬಂದು ಹೋಗುವವರಿಗೆ ನಾವಿಲ್ಲದ ಸಮಯವೇ ಏಕೆ ಬೇಕು? ಇರುವಾಗಲೇ ಸಾಕಷ್ಟು ಅವಕಾಶಗಳು ಸಿಗುವುದಿಲ್ಲವೇ?! ಕಳ್ಳತನ ಏಕಾಗುತ್ತದೆ ಎನ್ನುವುದಕ್ಕೆ ಯಾವುದೇ ನಿಯಮವಿಲ್ಲ. ʻಏಕಾಗಿಲ್ಲ?ʼ ಎನ್ನುವುದಕ್ಕೆ ಗೆಳತಿ ಲೀಲಾ ಹೇಳುವ ಮಾತಿದು “ನಮ್ಮ ಮನೆಯಲ್ಲಿ ಕಳ್ಳತನವಾಗಿಲ್ಲ ಎಂದರೆ ಅವರ ಕಣ್ಣು ನಮ್ಮ ಮೇಲೆ ಇನ್ನೂ ಬಿದ್ದಿಲ್ಲ ಅಂತಷ್ಟೆ.” ನಿಜವಲ್ಲವೇ?!

‍ಲೇಖಕರು avadhi

6 September, 2019

2 Comments

  1. premalatha B

    Hilarious and very nice write up. The attitude towards thieves and theft after even being the subjects is really appreciable.

    • ರಂಗನಾಥ

      ಶ್ರೀ ಮತಿ ಶ್ರವಣ ಕುಮಾರಿಯವರ ಚೋರ ಪುರಾಣ ಶ್ರವಣದ ನಂತರ ನಾವು ಬೇಡುವ ಫಲ ಶ್ರುತಿ ಕಳ್ಳ ಕಾಕರ ದೃಷ್ಟಿ ನಮ್ಮ ಮನೆಯ ಮೇಲೆ ಬೀಳದಿರಲಿ, ದುರಾದೃಷ್ಟ ವಶಾತ್ ಬೀಳುವುದಾದರೆ ಅವರಿಗಿದ್ದಂತೆ ಹಿರಿಯ ಪೋಲಿಸ್ ಅಧಿಕಾರಿಗಳ ನಂಟು ನಮಗಿರಲಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading