ಪುಸ್ತಕ ಉಡುಗೊರೆ
ಮೂಕನಹಳ್ಳಿ ರಂಗಸ್ವಾಮಿ
ಬಾರ್ಸಿಲೋನ
ಸ್ವಾಮಿ ಜಗದಾತ್ಮಾನಂದ ರವರು ಬರೆದಿರುವ “ಬದುಕಲು ಕಲಿಯಿರಿ” , ನಾನು ಮೆಚ್ಚಿದ ಪುಸ್ತಕಗಳಲ್ಲಿ ಸ್ಥಾನ ಪಡೆಯುತ್ತದೆ, ಸರಿ ಸುಮಾರು ೧೩೦ ಕಿಲೋ ತೊಗುತಿದ್ದ ನನ್ನ ಬದಲಾಯಿಸಿದ ಪುಸ್ತಕ ಅದು, ಜಗದಾತ್ಮ ನಂದರು ಹೇಳಿ ಕೊಟ್ಟ ಮಂತ್ರ ನನ್ನ ಬಾಳಿನ ಉಸಿರೇ ಆಗಿ ಬಿಟ್ಟಿದೆ, ಆ ಮಂತ್ರ ನಿಮಗೂ ಹೇಳುತ್ತೇನೆ ಪಾಲಿಸುವುದು ನಿಮಗೆ ಬಿಟ್ಟದ್ದು
ಮೆಲ್ಲ ಮೆಲ್ಲನೆ ಬೇಗ ಬೇಗನೇ ..,ಎನ್ನುವುದು ಆ ಮಂತ್ರ . ಅರ್ಥ ಯಾವುದೇ ಕೆಲಸ ಬೇಗ ಮಾಡಬೇಕಿದ್ದರೆ, ಅದನ್ನು ನಿಧಾನವಾಗಿ, ಸಮಚಿತ್ತ ದಿಂದ ಮಾಡಿದರೆ ತಪ್ಪು ಇರದು, ಹಾಗಾಗಿ ಮೊದಲು ಮಾಡಲು ಹೆಚ್ಚು ಸಮಯ ಹಿಡಿಸಿತು ಅನ್ನಿಸಿದರೂ, ತಪ್ಪು ತಿದ್ದುವ, ಹುಡುಕುವ ಸಮಯ ನಿಜಕ್ಕೂ ಉಳಿತಾಯವಾಗುತ್ತದೆ. ಇನ್ನೊಂದು ಅರ್ಥವೂ ಉಂಟು, ಅಗಸನ ಕಥೆ ಆಗಬಾರದು ಎನ್ನುವುದೇ ಅದು.

ಅದು `ದಿಯಾ ದೇ ಸಂತ ಜೊರ್ದ್ ವಿಶೇಷ ಹಬ್ಬ. ನಾನಿರುವ ರಾಜ್ಯ ಕಾತಲುನ್ಯದಲ್ಲಿ ಇದು ಪ್ರಸಿದ್ಧ ಹಬ್ಬಗಳಲ್ಲೊಂದು. ಈ ಹಬ್ಬದಲ್ಲಿ ಪುರುಷರು ಮಹಿಳೆಯರಿಗೆ ಗುಲಾಬಿ ಉಡುಗೊರೆ ನೀಡುತ್ತಾರೆ. ಮಹಿಳೆಯರು ಪುರುಷರಿಗೆ ಪುಸ್ತಕ ಉಡುಗೊರೆ ನೀಡುತ್ತಾರೆ. ಬಗೆಬಗೆಯ ಬಣ್ಣದ ಗುಲಾಬಿಗಳು ಕೈ ಬದಲಾಯಿಸುವುದನ್ನು ನೋಡುವುದೇ ಚಂದ. ಸ್ನೇಹ, ಪ್ರೀತಿ, ಗೌರವ ವಿನಿಮಯವಾಗಲು ಇದೆಂಥ ಅವಕಾಶ. ಮಹಿಳೆಯರು ಪುಸ್ತಕ ಉಡುಗೊರೆಯಾಗಿ ನೀಡುವಾಗ ಗಂಡನಾಗಿರಬಹುದು, ಸ್ನೇಹಿತನಾಗಿರಬಹುದು, ದೂರದ ಸಂಬಂಧಿಯಾಗಿರಬಹುದು ಎಲ್ಲರಿಗೂ ಒಂದೇ – ಎಲ್ಲರಿಗೂ ಪುಸ್ತಕವೇ.
ಹಾಗೆ ನೋಡಿದರೆ ಪುಸ್ತಕ ಉಡುಗೊರೆ ನೀಡುವುದು ಪಾರಂಪರಿಕ ಸಂಪ್ರದಾಯವೇನೂ ಅಲ್ಲ. ತೀರ ಈಚಿನದು. 1923ರಿಂದ ಇದು ರೂಢಿಗೆ ಬಂತು. ಅದನ್ನು ಹುಟ್ಟುಹಾಕಿದ್ದು ಕೂಡ ಕಾತಲುನ್ಯ ರಾಜ್ಯವೇ. `ಗುಲಾಬಿ ಪ್ರೀತಿಗೆ – ಪುಸ್ತಕ ನೆನಪಿಗೆ’ ಎಂಬ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಈ ಪ್ರೀತಿಯ ಕೊಡುಗೆ ಸತತವಾಗಿ ಸಾಗಿದೆ. ಯುನೆಸ್ಕೋ 1995ರಿಂದ ಪ್ರತಿವರ್ಷ ಏಪ್ರಿಲ್ 23 ದಿನಾಂಕವನ್ನು `ವಿಶ್ವ ಪುಸ್ತಕ ದಿನ’ವನ್ನಾಗಿ ಆಚರಿಸುತ್ತಿದೆ.
ಬಾರ್ಸಿಲೋನ, ಕಾತಲುನ್ಯ ರಾಜ್ಯದ ರಾಜಧಾನಿ. ಕತಲಾನ್ ಹಾಗೂ ಸ್ಪಾನಿಷ್ ಭಾಷೆಗಳ ಸಾಂಸ್ಕೃತಿಕ ಕೇಂದ್ರ. ಸ್ಪಾನಿಷ್ನ ಹೆಸರಾಂತ ಲೇಖಕ, ಕವಿ ಮ್ಯುಗೆನ್ ಸರ್ವಂತೆಸ್ 1616 ಏಪ್ರಿಲ್ 22ರಂದು ನಿಧನನಾಗಿದ್ದ. ಕವಿಯ ಗೌರವಾರ್ಥ ಗುಲಾಬಿ ವಿನಿಮಯ ಶುರುವಾಯಿತು. ಇಂಗ್ಲಿಷ್ನ ಹೆಸರಾಂತ ನಾಟಕಕಾರ ಷೇಕ್ಸ್ಪಿಯರ್ ಸತ್ತದ್ದು 1616ರಲ್ಲೇ. ಇದೂ ಕೂಡ ಈ ಆಚರಣೆಗೆ ಮಹತ್ವ ತಂದುಕೊಟ್ಟಿತು. ಕಾತಲುನ್ಯ ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯ ಜೊತೆ ಸಾಹಿತ್ಯವನ್ನು ಬೆಸೆಯಿತು. `ಲವ್ ಅಂಡ್ ಲಿಟರೇಚರ್’ ಹಾಲು ಜೇನು ಸೇರಿದಂತೆ ಜನರ ಮನದಲ್ಲಿ ತಂಪೆರೆಯಿತು. ಅದನ್ನು ಪೋಷಿಸಿಕೊಳ್ಳುತ್ತಲೇ ಬಂದರು. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಪುಸ್ತಕ, ಗುಲಾಬಿಯ ಮಾರಾಟದ ಭರಾಟೆ ನೋಡಿಯೇ ಸವಿಯಬೇಕು.
ಗಂಟೆಗಟ್ಟಳೆ ಸಾಲಿನಲ್ಲಿ ನಿಂತು ಸರದಿ ಬಂದಾಗ ವಿನಮ್ರತೆಯಿಂದ ತಮ್ಮ ನೆಚ್ಚಿನ ಲೇಖಕನ ಹಸ್ತಕ್ಷಾರವನ್ನು ಪುಸ್ತಕದ ಮೇಲೆ ಪಡೆದು ತಮ್ಮವರಿಗೆ ಉಡುಗೊರೆ ನೀಡಲು ಧಾವಿಸುವ ಜನರ ಹಿಂಡು ಒಮ್ಮೊಮ್ಮೆ ನನಗೆ ಪುಲಕದ ಪರಾಕಾಷ್ಠೆಗೆ ಒಯ್ಯುತ್ತದೆ. ಲೇಖಕರೂ ಅಷ್ಟೇ. ಯಾವುದೇ ಹಮ್ಮು ಬಿಮ್ಮು ತೋರದೆ ಓದುಗರೊಂದಿಗೆ ಸಲೀಸಾಗಿ ಬೆರೆತು ನಲಿಯುತ್ತಾರೆ. ಅಷ್ಟೇ ಏಕೆ, ಯಾವುದೇ ದಿನ ಮೆಟ್ರೋ ರೈಲು ಹೊಕ್ಕರು ನಮಗೆ ಕಾಣುವುದು ಪುಸ್ತಕದಲ್ಲಿ ಮುಖ ಹುದುಗಿಸಿರುವವರ ದೃಶ್ಯ. ಕಾಡುಹರಟೆ ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ. ಅದರಲ್ಲೂ ತರುಣ ತರುಣಿಯರು ಮೊಬೈಲ್, ಐ-ಪ್ಯಾಡ್ ದಿನಗಳಲ್ಲೂ ಪುಸ್ತಕದಲ್ಲಿ ತಲ್ಲೀನರಾಗಿರುತ್ತಾರೆಂದರೆ ನೀವು ನಂಬಲೇಬೇಕು. ಸ್ಪೇನ್ ಮಾತ್ರವಲ್ಲ, ಪೋರ್ಚುಗಲ್, ಇಂಗ್ಲೆಂಡ್, ಜೆಕ್ ರಿಪಬ್ಲಿಕ್, ಹಂಗೇರಿ, ಕೊಸಾವೋ, ಬಲ್ಗೇರಿಯ, ರಷ್ಯ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಇದರ ಆಚರಣೆ ಉಂಟು. ಸ್ಪೇನ್ನಲ್ಲಂತೂ ವರ್ಷದ ಅರ್ಧ ಪುಸ್ತಕ ಮಾರಾಟ ಒಂದೇ ದಿನದಲ್ಲಿ ಆಗುತ್ತದೆ. 75 ಲಕ್ಷ ಜನ ಇರುವ ಕಾತಲುನ್ಯ ರಾಜ್ಯದಲ್ಲಿ ಈ ಒಂದು ದಿನವೇ 15ರಿಂದ 20 ಲಕ್ಷ ಪುಸ್ತಕಗಳು ಮಾರಾಟವಾಗುತ್ತವೆ. ಅಷ್ಟೇ ಪ್ರಮಾಣದ ಗುಲಾಬಿ ಕೂಡ ಕೈ ಕೈ ಬದಲಾಯಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಒಂದು ಸಾಧಾರಣ ಪುಸ್ತಕದ ದರ ಎಂದರೆ 15 ರಿಂದ 30 ಯೂರೋ.
ಸ್ವತಃ `ದಿಯಾ ದೇ ಸಂತ ಜೊರ್ದೆ’ಯಲ್ಲಿ ಪಾಲ್ಗೊಂಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದಿಂದ ಉಬ್ಬಿದ್ದ ಮನಸ್ಸು ಒಂದೆಡೆ, ಐ.ಪಿ.ಎಲ್. ಅಟ್ಟಹಾಸ, ಟಿಕೆಟ್ಗೆ ಕಾಳಸಂತೆ, ಸ್ಪಾಟ್ ಫಿಕ್ಸಿಂಗ್ ಅಬ್ಬರದ ಆ ನೋವು ಇನ್ನೊಂದೆಡೆ. ನಮ್ಮ ಜನರ ಅಭಿರುಚಿ ಬದಲಾಗುವುದೇ ಅಯ್ಯಾ, ಸಾವಿರ ಪುಸ್ತಕ ಮುದ್ರಿಸಿ ಖರೀದಿಸಲು ಗ್ರಂಥಾಲಯದ ಖರೀದಿಗೆ ಕಾಯುತ್ತಾರಲ್ಲಯ್ಯ, `ಎತ್ತಣಿಂದೆತ್ತಣ ಸಂಬಂಧವಯ್ಯಾ!’
ನಮ್ಮಲ್ಲೂ ಪುಸ್ತಕ ಪ್ರೀತಿ ಹೆಚ್ಚಲಿ, ಎಲ್ಲರೂ ವರ್ಷಕ್ಕೆ ಕನಿಷ್ಠ ೧೨ ಪುಸ್ತಕ ಕೊಳ್ಳೋಣ.






Nammallu kooda EGA pustaka prema hechhide. Kannada sahitya sammelanadalli kannada pustaka galu bisi doseyante Kali aadavu. Chenagi barediddiya.