ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕ್ರಿಸ್ಮಸ್ ಗೀತೆ…

ಇಂಗ್ಲಿಷ್‌ನಲ್ಲಿ : ಥಾಮಸ್ ಜೆ. ಬರ್ನ್ಸ್

ಕನ್ನಡಕ್ಕೆ : ಜೆ.ವಿ.‍ಕಾರ್ಲೊ

(ವಿಕ್ಟೋರಿಯನ್ ಕಾಲದ ಶ್ರೇಷ್ಟ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡೀಕನ್ಸ್ ನ (1812-1870) ‘A Christmas Carol’ ಪ್ರಥಮ ಮುದ್ರಣದಿಂದಲೇ ಸಾವಿರಾರು ಓದುಗರನ್ನು ಪ್ರಭಾವಿಸಿದ ಪುಟ್ಟ ಪುಸ್ತಕ. ಯಥೇಚ್ಚ ಮುದ್ರಣಗಳು, ಅನುವಾದಗಳು, ನಾಟಕ, ಟಿ.ವಿ., ಮತ್ತು ಸಿನೆಮಾಗಳಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.) 

****

1843 ರ ಅಕ್ಟೋಬರ್ ತಿಂಗಳ ಇಳಿ ಸಂಜೆ, ಸುಪ್ರಸಿದ್ಧ ಕಾದಂಬರಿಕಾರ ಚಾರ್ಲ್ಸ್ ಡೀಕನ್ಸ್ ಎಂದಿನಂತೆ ತನ್ನ ಲಂಡನಿನ ರೀಜೆಂಟ್ ಪಾರ್ಕಿನ ಮನೆಯಿಂದ ಹೊರಬಿದ್ದು, ತಾನೇ ನಗರದ ‘ಕತ್ತಲ ಗಲ್ಲಿಗಳು’ ಎಂದು ಹೆಸರಿಸಿದ್ದ ಬೀದಿಯ ಮೇಲೆ ನಡೆಯತೊಡಗಿದ. ಹೊರಗೆ ಬೀಸುತ್ತಿದ್ದ ತಂಗಾಳಿಯಿಂದ ಅವನಿಗೆ ಸ್ವಲ್ಪ ಮಟ್ಟಿಗೆ ಹಾಯೆನಿಸಿತು.

ತಲೆ ತುಂಬಾ ಕೆಂಗೂದಲು ಮತ್ತು ಹೊಳೆವ ಕಣ್ಣುಗಳ ಮುವ್ವತ್ತೊಂದು ವರ್ಷದ ಸ್ಪುರದ್ರೂಪಿ ತರುಣ ಡೀಕನ್ಸ್ ಇಂದು ಮ್ಲಾನವದನನಾಗಿ ಹೆಜ್ಜೆ ಹಾಕುತ್ತಿದ್ದ. ತನ್ನ ವೃತ್ತಿಯ ಉತ್ತುಂಗದಲ್ಲಿದ್ದೇನೆಂದು ಭಾವಿಸಿದ್ದವನಿಗೆ ಇತ್ತೀಚಿನ ‍ಆರ್ಥಿಕ ಸಂಕಟಗಳು ಘಾಸಿಗೊಳಿಸಿದ್ದವು. ಅವನ ‘ಪಿಕ್ವಿಕ್ ಪೇಪರ್ಸ್,’ ‘ಒಲಿವರ್ ಟ್ವಿಸ್ಟ್’, ಮತ್ತು ‘ನಿಕೊಲಸ್ ನಿಕಲ್‌ಬಿ’ ಕಾದಂಬರಿಗಳು ಅವನಿಗೆ ಎಲ್ಲಿಲ್ಲದ ಜನಪ್ರಿಯತೆ ಗಳಿಸಿ ಕೊಟ್ಟಿದ್ದು, ಇತ್ತೀಚಿನ, ತಾನೇ ಅತ್ಯುತ್ತಮವೆಂದು ಭಾವಿಸಿದ್ದ ‘ಮಾರ್ಟಿನ್ ಚುಝಲ್ವಿಟ್’ ಕಾದಂಬರಿ ತಿಂಗಳ ಕಂತುಗಳಲ್ಲಿ ಪ್ರಕಟವಾಗುತ್ತಿತ್ತು. ಆದರೆ, ಈ ಜನಪ್ರಿಯ ಕಾದಂಬರಿಕಾರ ಕೆಲ ತಿಂಗಳುಗಳಿಂದ ಗಂಭೀರ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿದ್ದ.

ಅವನ ಹೊಸ ಕಾದಂಬರಿಯ ವಿಕ್ರಯ ಹೇಳುವಷ್ಟಿಲ್ಲ, ಮುಂಗಡವಾಗಿ ಕೊಡುತ್ತಿರುವ ಹಣವನ್ನು ಕಡಿತ ಮಾಡಬೇಕಾಗಬಹುದೆಂದು ಅವನ ಪ್ರಕಾಶಕರು ಈಗಾಗಲೇ ಸೂಚನೆ ಕೊಟ್ಟಿದ್ದರು.

ಈ ವಿಚಾರ ಡೀಕನ್ಸನ ತಲೆ ಕೆಡಿಸಿತ್ತು. ಲೇಖಕನಾಗಿ ತನ್ನ ಸಾಮರ್ಥ್ಯದ  ಮೇಲೆ ಅವನಿಗೆ ಅನುಮಾನಗಳು ಮೂಡತೊಡಗಿದ್ದವು. ಅವನದು ನಾಲ್ಕು ಮಕ್ಕಳ ಸಂಸಾರ. ಮಡದಿ ಕೇಟ್ ಐದನೇ ಮಗುವನ್ನು ಹೆರಲು ತಯಾರಿ ನಡೆಸುತ್ತಿದ್ದಳಷ್ಟೇ ಅಲ್ಲ, ಅವನ ತಂದೆ ಮತ್ತು ಸಹೋದರರು  ಅವನನ್ನೇ ಅವಲಂಬಿಸಿದ್ದರು. ಅವನಿಗೆ ತನ್ನ ಬಾಲ್ಯದ ಬಡತನದ ದಿನಗಳು ನೆನಪಾಗಿ ಕಾಡತೊಡಗಿದವು. ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗತೊಡಗಿದ್ದವು. ಮನೆಯ ಮೇಲಿನ ದೊಡ್ಡ ಸಾಲದ ಕಂತುಗಳು ಅವನನ್ನು ಇನ್ನಿಲ್ಲದಂತೆ ಧೃತಿಗೆಡಿಸಿದ್ದವು. ನಿದ್ದೆ ಬಾರದೆ, ಹುಚ್ಚನಂತೆ ಸಮುದ್ರ ದಂಡೆಯ ಮೇಲೆ ಗಂಟೆಗಟ್ಟಳೆ ನಡೆಯುತ್ತಾ, ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿಯುತ್ತಾ, ದುಡ್ಡು ಮಾಡಲು, ಅದೂ ಕ್ಷಿಪ್ರವಾಗಿ, ಹೊಸ ಯೋಜನೆಯನ್ನು ಹುಡುಕತೊಡಗಿದ. ಮಾನಸಿಕ ಖಿನ್ನತೆಯಿಂದಾಗಿ ಹೊಸದಾಗಿ ಬರೆಯುವುದೂ ಸಾಧ್ಯವಾಗುತ್ತಿರಲಿಲ್ಲ. ಏನಾದರೂ ಹೊಸ ವಿಚಾರ ಹೊಳೆಯಬಹುದೇ ಎಂದು ಗಂಟೆಗಟ್ಟಳೆ ನಡೆಯುತ್ತಾ ಮಂಥಿಸುತ್ತಿದ್ದ.

ಉಳ್ಳವರ ಮನೆಗಳ ಬೀದಿಗಳಲ್ಲಿ ಮಂದವಾಗಿ ಹಳದಿ ಬೆಳಕು ಚೆಲ್ಲುತ್ತಿದ್ದ ಗ್ಯಾಸ್ ಲೈಟುಗಳು, ಅವನು, ನಿರ್ಗತಿಕರೇ ವಾಸಿಸುತ್ತಿದ್ದ ಥೇಮ್ಸ್ ನದಿಯ ಸನಿಹಕ್ಕೆ ತಲುಪಿದಾಗ ಕಾಣೆಯಾಗಿ ಅವರು ಉರಿಸುತ್ತಿದ್ದ ಮೋಂಬತ್ತಿಗಳು ಬೆಳಕನ್ನು ಕಿಟಕಿಗಳಿಂದ ಹೊರಚೆಲ್ಲಿ ಕಸ ತುಂಬಿದ ಬೀದಿ ಮತ್ತು ತೆರೆದ ಚರಂಡಿಗಳ ಮೇಲೆ  ಅಸ್ಪಷ್ಟ ಬೆಳಕನ್ನು ಚೆಲ್ಲುತ್ತಿದ್ದವು. ಡೀಕನ್ಸ್ ವಾಸಿಸುತ್ತಿದ್ದ, ಗಣ್ಯ ನೆರೆಹೊರೆಯ ಮಹನೀಯರು ಮತ್ತು ಮಹಿಳೆಯರು ಹಟಾತ್ತನೆ ಮರೆಯಾಗಿ ಇಲ್ಲಿ  ಪುಂಡಪೋಕರಿಗಳು, ಬೀದಿ ಸೂಳೆಯರು, ಬಿಕ್ಷುಕರು ಮತ್ತು ಪಿಕ್ ಪಾಕೇಟರುಗಳೇ  ಕಾಣಿಸುತ್ತಿದ್ದರು.

ಈ ದೃಶ್ಯ ಯಾವಾಗಲೂ ಅವನ ನಿದ್ರೆಯನ್ನು ಕೆಡಿಸುತ್ತಿತ್ತು: ಹನ್ನೆರಡು ವರ್ಷದ ಹುಡುಗನೊಬ್ಬ ತನ್ನ ಮುಂದೆ, ದಿನಕ್ಕೆ ಹನ್ನೆರಡು ಗಂಟೆ, ವಾರಕ್ಕೆ ಆರು ದಿನ ಬೂಟ್ ಪಾಲಿಶ್ ತುಂಬಿದ ಹರಿವಾಣಗಳ ಮೇಲೆ ಲೇಬಲ್ಲನ್ನು ಹಚ್ಚುತ್ತಿರುವುದು. ಇದಕ್ಕೆ ಅವನಿಗೆ ಆರು ಶಿಲ್ಲಿಂಗುಗಳು ದೊರೆಯುತ್ತಿದ್ದವು. ಇದು, ಅವನು ಆ ವಾರ ಬದುಕಲು ಸಾಕಾಗುತ್ತಿತ್ತು.

ಅವನ ಕನಸಿನಲ್ಲಿ, ಹಾಳು ಬಿದ್ದ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಆ ಬಾಲಕ ಅಡಿಗಡಿಗೆ ತನ್ನ ಕೆಲಸದ ಮಧ್ಯ ಕೆಳಗಿನ ನೆಲಮಾಳಿಗೆಯಲ್ಲಿ  ನಿರ್ಭೀತಿಯಿಂದ ಸ್ವಚ್ಛಂದವಾಗಿ ಓಡಾಡುತ್ತಿದ್ದ  ದಡಿಯ ಇಲಿಗಳನ್ನೇ ಗಮನಿಸುತ್ತಿರುವುದನ್ನು   ಬಿಟ್ಟರೆ ದೂಳು ತುಂಬಿದ ಮುಚ್ಚಿದ ಕಿಟಕಿಗಳಿಂದ ಬಾಷ್ಪ ಇಳಿಯುತ್ತಿರುವುದನ್ನು ತದೇಕಚಿತ್ತದಿಂದ ನೋಡುತ್ತಿದ್ದ. ಗೋದಾಮಿನೊಳಗೆ ಬೆಳಕು ಮರೆಯಾಗುತ್ತಿದ್ದಂತೆ ಅವನ ಭರವಸೆಯೂ ಕುಗ್ಗುತ್ತಿತ್ತು. ಅವನ ತಂದೆ ಸಾಲ ತೀರಿಸಲಾಗದೆ ಜೈಲು ಪಾಲಾಗಿದ್ದ. ಹುಡುಗನಿಗೋ, ವiಧ್ಯಾಹ್ನದ ಊಟದ ಬಿಡುವಿನಲ್ಲಷ್ಟೇ ಒಂದು ತಾಸಿನ ಕಲಿಕೆ. ಹುಡುಗ ಅಸಹಾಯಕತೆ  ಮತ್ತು  ಆಲಕ್ಷ್ಯದಿಂದ ಕಂಗೆಟ್ಟು ಹೋಗಿದ್ದ. ಅವನ ಬಾಳಿನಲ್ಲಿ ಎದುರುನೋಡುವ ಯಾವುದೇ ಸಂತಸ ಕ್ಷಣಗಳು ಕಾಣಿಸುತ್ತಿರಲಿಲ್ಲ.

ಇದು ಡೀಕನ್ಸನ ಕಾಲ್ಪನಿಕ ಮೂಸೆಯಲ್ಲಿ ಅರಳಿದ ಕತೆಯಾಗಿರಲಿಲ್ಲ. ಅವನು ಹಾದು ಬಂದ ಬಾಲ್ಯದ ಕತೆಯಾಗಿತ್ತು. ಅದೃಷ್ಟವಶಾತ್ ಡೀಕನ್ಸನ  ತಂದೆಗೆ ಯಾವುದೋ ಮೂಲದಿಂದ ಹಣ ಸೇರಿ, ಅವನು ಸಾಲವನ್ನು ತೀರಿಸಿದ ಮತ್ತು ಬಾಲಕ ಡೀಕನ್ಸ್ ಗೋದಾಮಿನಿಂದ ಹೊರಬರಲು ಸಾಧ್ಯವಾಯಿತು.

ಈಗ, ತಾನು ಮಾಡಿರುವ ಸಾಲಗಳನ್ನು ತೀರಿಸಲು ತಿಣುಕಾಡುತ್ತಿರುವ ಅವನಿಗೆ ನೆಮ್ಮದಿ ಕಾಣದಾಯಿತು. ಎಷ್ಟು ಹೊತ್ತು ನಡೆದರೂ ಅವನಿಗೆ ತನ್ನ ಆರ್ಥಿಕ ಸಂಕಷ್ಟಗಳಿಂದ ಹೊರಬರುವುದು ಹೇಗೆ ಎಂದು ಗೊತ್ತಾಗಲಿಲ್ಲ. ಸಪ್ಪೆ ಮೋರೆ ಹಾಕಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದ.

ಮನೆಗೆ ಹತ್ತಿರವಾಗುತ್ತಿದ್ದಂತೆ ಅವನಿಗೆ ಯಾವುದೋ ಒಂದು ವಿಚಾರ ಹೊಳೆದು ಮನಸ್ಸು ಪ್ರಫುಲ್ಲವಾಯಿತು. ಒಂದು ಕ್ರಿಸ್ಮಸ್ ಕತೆ ಬರೆದರೆ ಹೇಗೆ?! ಅದೂ, ತನ್ನಂತೆ ಬಡತನದಲ್ಲಿ ಬೆಂದು ಹೊರಬರಲು ದಾರಿ ಕಾಣದೆ ಅಂಜಿಕೆಯಿಂದ   ಈ ಕತ್ತಲಗಲ್ಲಿಗಳಲ್ಲಿ ವಾಸಿಸುತ್ತಿರುವವರ ಜೀವನದಲ್ಲಿ ಸಣ್ಣ ಭರವಸೆ ಮತ್ತು ಕೊಂಚ ಬೆಳಕು ಹುಟ್ಟಿಸುವಂತ ಕತೆಯಾದರೆ?

ಆದರೆ ಕ್ರಿಸ್ಮಸ್‌ಗೆ ಇನ್ನೂ ಮೂರು ತಿಂಗಳುಗಳಿದ್ದವು! ಇಷ್ಟು ಕಡಿಮೆ ಅವಧಿಯಲ್ಲಿ ಅದನ್ನು ಕಾರ್ಯರೂಪಕ್ಕಿಳಿಸುವುದು ಹೇಗೆ ಸಾಧ್ಯ? ಅದೊಂದು ಕಾದಂಬರಿಯಾಗಿರಲು ಖಂಡಿತ ಸಾಧ್ಯವಿರಲಿಲ್ಲ. ಹೆಚ್ಚೆಂದರೆ ಒಂದು ನೀಳ್ಗತೆಯ ಗಾತ್ರದ್ದು. ನವೆಂಬರ್ ತಿಂಗಳೊಳಗೆ ಮುಗಿಸಿ ಕ್ರಿಸ್ಮಸ್ ಹೊತ್ತಿಗೆ ಅಚ್ಚಾಗಿ ಪುಸ್ತಕದಂಗಡಿಗಳಲ್ಲಿ ಇರಬೇಕು. ಅವನ ‘ಪಿಕ್ವಿಕ್ ಪೇಪರ್ಸ್’ ಕಾದಂಬರಿಯ  ಒಂದು ಆಧ್ಯಾಯದಲ್ಲಿ ಬರುವ ಕ್ರಿಸ್ಮಸ್ Goblin ( ಜರ್ಮನಿ ಮತ್ತು ಇಂಗ್ಲೆಂಡ್ ಜಾನಪದ ಕತೆಗಳಲ್ಲಿ ಬರುವ ಕುಬ್ಜ ತಂಟೆಕೋರ ವಿಕೃತ ರಾಕ್ಷಸರು) ನನ್ನು ಹೊಸ ಕತೆಯಲ್ಲಿ ತರುವುದೆಂದು ಅವನು ತೀರ್ಮಾನಿಸಿದ.

ಕತೆಯಲ್ಲಿ ತನ್ನ ಓದುಗರು ಬಯಸುವ ಎಲ್ಲಾ ಅಂಶಗಳನ್ನು ಸೇರಿಸಿಕೊಳ್ಳುವುದೆಂದು ಡೀಕನ್ಸ್ ತೀರ್ಮಾನಿಸಿದ. ಅವನ ಮನಸ್ಸಿನೊಳಗೆ ಒಂದು ಒಂದು ರೋಗಿಷ್ಟ ಮಗು, ಪ್ರಾಮಾಣಿಕನಾದರೂ ಕೈಯಲ್ಲಿ ಏನೂ ಆಗದ ಅಪ್ಪ, ಇದರ ನಡುವೆ ಒಬ್ಬ ಸ್ವಾರ್ಥಿ ಖಳನಾಯಕ, ಮತ್ತು  ಬತ್ತಿದ ಕೆನ್ನೆಗಳ ಚೂಪು ಮೂಗಿನ ಮುದುಕ ಪಾತ್ರಧಾರಿಗಳು ರೂಪುಗೊಂಡವು.

ಸೌಮ್ಯ ಅಕ್ಟೋಬರ್ ತಿಂಗಳು ಸರಿದು ತಣ್ಣನೆಯ ನವೆಂಬರ್ ಮಾಸ ಉದಯಿಸಿತು. ಡೀಕನ್ಸನ ಕತೆ ಬೆಳೆಯುತ್ತಾ ರೆಕ್ಕೆ ಪುಕ್ಕ ಕಟ್ಟಿಕೊಂಡಿತು. ಕತೆಯ ಮೂಲ ಚೌಕಟ್ಟು ಮಕ್ಕಳಿಗೆ ಅರ್ಥವಾಗುವಂತಿತ್ತಾದರೂ ಹಿರಿಯರ ಹೃದಯಗಳಲ್ಲೂ ಬೆಚ್ಚನೆಯ ನೆನಪುಗಳು, ಭಾವಗಳೂ ಬಡಿದೆಬ್ಬಿಸುವಂತಿದ್ದವು.

ಕ್ರಿಸ್ಮಸ್ ಇಳಿ ಸಂಜೆಯ ವೇಳೆ ತನ್ನ ಪಾಳುಬಿದ್ದ ಬರಡು ಮನೆಯೊಳಗೆ ಒಬ್ಬಂಟಿಯಾಗಿ ವಿಶ್ರಮಿಸುತ್ತಿದ್ದ ಲಂಡನ್ನಿನ ಜಿಪುಣ ವ್ಯಾಪಾರಿ ಎಬೆನೆಜರ್ ಸ್ಕ್ರೂಜ್ ನನ್ನು ಕಾಣಲು ಅವನ ದಿವಂಗತ ಪಾಲುಗಾರ ಜೇಕಬ್ ಮಾರ್ಲಿಯ ದೆವ್ವ ಭೇಟಿ ಕೊಟ್ಟಿತು. ಬದುಕಿರುವಾಗ, ಮಿತಿಮೀರಿದ ದುರಾಸೆ ಮತ್ತು ನೆರೆಹೊರೆಯವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸಂವೇದನಾರಹಿತ ನಡವಳಿಕೆಯಿಂದ ಅವನ ದೆವ್ವ ಪರಲೋಕದಲ್ಲಿ ಸರಪಳಿಗಳಿಂದ ಬಿಗಿಸಿಕೊಂಡು ಜಗತ್ತೆಲ್ಲಾ ಕಷ್ಟಪಟ್ಟು ವಿಹರಿಸುತ್ತಿತ್ತು. ಅದು  ಸ್ಕ್ರೂಜ್ ಗೆ, ನೀನು ಬದಲಾಗದಿದ್ದರೆ ನಿನಗೆ ನನ್ನದೆ ಗತಿ ಕಾದಿದೆ ಎಂದು ಎಚ್ಚರಿಸುತ್ತದೆ. ಅವನ ಮುಂದೆ ಹಿಂದಿನ, ಈಗಿನ ಮತ್ತು ಮುಂದಿನ ಕ್ರಿಸ್ಮಸ್ ದೆವ್ವಗಳು ಹಾಜರಾಗಿ ಅವನು ನಡೆದು ಬಂದ ಜೀವನದ ಕೆಲ ತುಣುಕುಗಳನ್ನು ತೋರಿಸಿ, ಅವನು ಈಗಲಾದರೂ ಬದಲಾಗದಿದ್ದರೆ ಏನಾಗಬಹುದೆಂದು ತೋರಿಸುತ್ತವೆ. ಗಾಬರಿಗೊಂಡ ಸ್ಕ್ರೂಜ್ ಮನಪರಿವರ್ತನೆಗೊಂಡು ತನ್ನ ಹಳೆಯ ಚಾಳಿಗಳನ್ನೆಲ್ಲಾ ಬಿಟ್ಟು ಸಂವೇದನಾಶೀಲ, ದಯಾಳು ಮತ್ತು ವಾತ್ಸಲ್ಯಮಯಿಯಾಗಿ ಕ್ರಿಸ್ಮಸಿನ ನೈಜ ಭಾವರ್ಥಕ್ಕನುಗುಣವಾಗಿ ಜೀವಿಸುತ್ತಾನೆ.

ಈ ಕ್ರಿಸ್ಮಸ್ ಕತೆಯನ್ನು ಬರೆಯುತ್ತಿರುವ ಸಮಯದಲ್ಲಿ ಡೀಕನ್ಸನ ಜೀವನದಲ್ಲಿ ಮಹತ್ತರವಾದ ಘಟನೆಯೊಂದು ಜರಗುತ್ತದೆ. ಸಾಲದ ಸುಳಿಯಿಂದ ಹೊರಬರಲು ತಾನು ಕಂಡುಕೊಂಡ ದಾರಿಯ ಮಧ್ಯದಲ್ಲಿ ಅವನಿಗೆ ಜ್ಞಾನೋದಯವಾಗುತ್ತದೆ.

ಅವನು ಬರೆಯಲು ಆರಂಭಿಸಿದ ‘A Christmas Carol ’ (ಒಂದು ಕ್ರಿಸ್ಮಸ್ ಗೀತೆ) ಅವನನ್ನು ಸಂಪೂರ್ಣವಾಗಿ  ಅದರೊಳಗೆ  ತೊಡಗಿಸಿಕೊಳ್ಳುತ್ತದೆ. ಅವನು ಲೇಖನಿಯನ್ನು ಶಾಯಿಯೊಳಗೆ ಅದ್ದಿ ಬರೆಯಲುಪಕ್ರಮಿಸುವಾಗ ಅವನ 

ಪಾತ್ರಗಳು ಅಚ್ಚರಿಯೆಂಬಂತೆ ಜೀವತಳೆಯುತ್ತಿದ್ದವು. ಊರುಗೋಲಿಂದ ನಡೆಯುವ ಪುಟ್ಟ ಟಿಮ್, ದೆವ್ವಗಳನ್ನು ಎದುರಿಸಲು ಹೆಣಗುವ ಸ್ಕ್ರೂಜ್, ಬಡತನದ ಬೇಗೆಯಲ್ಲೂ ‘ಚಿಯರ್ಸ್’ ಎತ್ತುತ್ತಿರುವ  ಪಾತ್ರಧಾರಿ ಬಾಬ್ ಕ್ರ್ಯಾಚಿಟ್.

‘ಕ್ರಿಸ್ಮಸ್ ಕ್ಯಾರಲ್’ ಡೀಕನ್ಸನ ತನು ಮನವನ್ನೆಲ್ಲಾ ಸಂಪೂರ್ಣವಾಗಿ  ತೊಡಗಿಸಿಕೊಂಡಿತು. ಧನಕ್ಕಾಗಿ ಆರಂಭವಾದ ಕಾಯಕ ಅವನ ಮನವನ್ನು ತೊಡಗಿಸಿತು.

ಯಾವಾಗ ಬೆಳಗಾದೀತು ಎಂದು ಕಾತರಿಸಿ ಡೀಕನ್ಸ್ ನಿದ್ದೆ ಮಾಡಲು ಹೊರಡುತ್ತಿದ್ದ. “ಈ ಪುಟ್ಟ ಪುಸ್ತಕ ನನ್ನ ತನು ಮನವನ್ನೆಲ್ಲಾ ಆಕ್ರಮಿಸಿಕೊಂಡಿತ್ತು”. ಹೀಗಂತ ಅವನು ಮುಂದೆ ಒಬ್ಬ ಪತ್ರಕರ್ತನಿಗೆ ಹೇಳಿದ್ದ. “ಒಂದರೆಗಳಿಗೆಯೂ ನಾನು ಇದನ್ನು ಬಿಟ್ಟುಕೊಡಲು ತಯಾರಿರಲಿಲ್ಲ!

“ಈ ಕತೆಯೊಳಗೆ ನಾನು ಎಷ್ಟೊಂದು ತೊಡಗಿಸಿಕೊಂಡಿದ್ದೆನೆಂದರೆ, ಎಷ್ಟು ಭಾರಿ ಅತ್ತೆ, ನಕ್ಕೆ, ಮತ್ತೆ ನಕ್ಕೆ..” ಎನ್ನುತ್ತಾ ಡೀಕನ್ಸ್ “ನಾನೇ ಈ ಪುಸ್ತಕದ ವಿನ್ಶಾಸದ ಹೊಣೆಯನ್ನೂ ಹೊತ್ತೆ.” ಎನ್ನುತ್ತಾನೆ. ಈ ಕಿರು ಹೊತ್ತಿಗೆ ಎಲ್ಲರಿಗೂ ತಲುಪಲಿ ಎನ್ನುವ ಉದ್ದೇಶದಿಂದ ಇದರ ಬೆಲೆಯನ್ನು ಕೇವಲ ಐದು ಶಿಲ್ಲಿಂಗುಗಳಿಗೆ ಇಡಲಾಯಿತು.

ಅಂತೂ, ಡಿಸೆಂಬರ್ ಎರಡರಂದು ಡೀಕನ್ಸನ ಹಸ್ತಪ್ರತಿ ಸಿದ್ಧವಾಗಿ ಮುದ್ರಣಕ್ಕೆ ಹೋಯಿತು. ಡಿಸೆಂಬರ್ 17 ಕ್ಕೆ ಲೇಖಕರ ಪ್ರತಿಗಳು ಅವನ ಕೈ ಸೇರಿದವು. ಡೀಕನ್ಸನ ಆನಂದ ಹೇಳತೀರದು. ‘A Christmas Carol’ (ಒಂದು ಕ್ರಿಸ್ಮಸ್ ಗೀತೆ) ಯಶಸ್ಸಿನ ಬಗ್ಗೆ ಅವನಿಗೆ ಯಾವುದೇ ಅವುಮಾನವಿರಲಿಲ್ಲ. ಆದರೂ, ಅವನಾಗಲಿ ಅವನ ಪ್ರಕಾಶಕರಾಗಲಿ ‘ಕ್ರಿಸ್ಮಸ್ ಕ್ಯಾರಲ್’ ಓದುಗರಲ್ಲಿ ಈ ಮಟ್ಟದ ಸಂಚಲನವನ್ನುಂಟುಮಾಡುತ್ತದೆ ಎಂದು ನಂಬಿರಲಿಲ್ಲ. ಮೊದಲನೆ ಅಚ್ಚಿನ ಆರು ಸಾವಿರ ಪ್ರತಿಗಳು ಕ್ರಿಸ್ಮಸ್ ಸಂಜೆಯ ಒಳಗೇ ಮಾರಾಟವಾದವು. ಡೀಕನ್ಸ್ ಈ ಮೊದಲೆಂದೂ ಕೇಳರಿಯದ ಜನರಿಂದ, ಅವನ ಪುಸ್ತಕದ ಬಗ್ಗೆ, ಅದು ಅವರ ಜೀವನದಲ್ಲಿ ಉಂಟು ಮಾಡಿದ ಪ್ರಭಾವದ ಬಗ್ಗೆ ರಾಶಿ ರಾಶಿ ಪತ್ರಗಳು ಬರತೊಡಗಿದವು.

ಪುಸ್ತಕ ತಯಾರಿಕೆಯಲ್ಲಿ ಅವನು ಬಯಸಿದ್ದ ಗುಣಮಟ್ಟ, ವಿನ್ಯಾಸ ಮತ್ತು ಕಡಿಮೆ ಬೆಲೆಯಿಂದಾಗಿ ‘ಕ್ರಿಸ್ಮಸ್ ಕ್ಯಾರಲ್’ ನ ಅಭೂತಪೂರ್ವ  ಮಾರಾಟದ ಹೊರತಾಗಿಯೂ ಡೀಕನ್ಸನ ಆರ್ಥಿಕ ಸಂಕಷ್ಟಗಳೇನೂ ತಕ್ಷಣಕ್ಕೆ ಪರಿಹಾರವಾಗಲಿಲ್ಲ. ಅಂತೂ ಅವನಿಗೆ ಒಂದು ಹೊಸ ಓದುಗ ವರ್ಗವೊಂದು ಸೃಷ್ಠಿಯಾಗಿ ಅವನ ಹಿಂದಿನ ಮತ್ತು ಮುಂದಿನ ಪುಸ್ತಕಗಳಿಗೆ ಅನುಕೂಲವಾಗಿ ಕ್ರಮೇಣ ಸಾಲದ ಹೊರೆಯಿಂದ ಹೊರಬರುವಂತಾಯಿತು. ‘ಕ್ರಿಸ್ಮಸ್ ಕ್ಯಾರಲ್’ ಅವನಲ್ಲಿ ಹೊಸ ಹುರುಪು, ಎಲ್ಲಿಲ್ಲದ ಜೀವನೋತ್ಸಾಹ ಮೂಡಿಸಿತು. ಅವನ ಮುಂದಿನ ಕಾದಂಬರಿಗಳಾದ ‘David Copperfield’ ‘A Tale of Two Cities’ ‘Great Expectations’ ಆರ್ಥಿಕವಾಗಿ ಯಶಸ್ಸುಗಳಿಸಿದವಾದರೂ ಡೀಕನ್ಸನಿಗೆ ಅವನ ಪುಟ್ಟ ಪುಸ್ತಕ ‘ಕ್ರಿಸ್ಮಸ್ ಕ್ಯಾರಲ್’ ನ  ಆತ್ಮ ತೃಪ್ತಿಯನ್ನು ಕೊಡಲಿಲ್ಲ. ಓದುಗರೂ ಕೂಡ ಅವನನ್ನು ಕ್ರಿಸ್ಮಸ್ ಕ್ಯಾರಲ್ ನೊಂದಿಗೇ ಗುರುತಿಸುತ್ತಿದ್ದರು. 1870 ರಲ್ಲಿ ಡೀಕನ್ಸ್ ಕೊನೆಯುಸಿರೆಳೆದಾಗ ಒಬ್ಬ ಪುಟ್ಟ ಬಾಲಕ ನೊಂದು ಕೇಳಿದನಂತೆ: ‘ಅಮ್ಮಾ, ಕ್ರಿಸ್ಮಸ್ ಫಾದರ್ ತೀರಿಕೊಂಡರೆ?’

ಕ್ರಿಸ್ಮಸ್ ಹಬ್ಬದ ಬಹಳಷ್ಟು ಆಚರಣೆಗಳಾದ ಕೌಟುಂಬಿಕ ಪಾಲ್ಗೊಳ್ಳುವಿಕೆ, ಕಾಣಿಕೆಗಳ ವಿನಿಮಯ, ವಿಶೇಷ ತಿಂಡಿ ತಿನಿಸುಗಳು ತೀರ್ಥಗಳು ಡೀಕನ್ಸನಿಂದಾಗಿ ರೂಢಿಗೆ ಬಂದಿರುವಂತವು. ಇಂಗ್ಲಿಷ್ ಭಾಷೆಯು ಕೂಡ ಶ್ರೀಮಂತಗೊಂಡಿದೆ. ‘ಕ್ರಿಸ್ಮಸ್ ಕ್ಯಾರಲ್’ ಓದಿದವರು ಓದದವರೂ ಕೂಡ ‘Scrooge’ ‘Bah, Humbug’ ಪದಗಳನ್ನು ಉಪಯೋಗಿಸುತ್ತಾರೆ! ಕ್ರಿಸ್ಮಸ್ ಕ್ಯಾರಲ್ ಪ್ರಕಟವಾದ ನಂತರವೇ ‘Merry Christmas!’ ಎಂಬ ಶುಭಾಶಯವು ಹೆಚ್ಚಿನ ಮನ್ನಣೆಯನ್ನು ಪಡೆಯಿತು.

ಹಲವು ಭಾರಿ ಆತ್ಮ ವಿಶ್ವಾಸದ ಕೊರತೆ ಮತ್ತು ಮಾನಸಿಕ ಗೊಂದಲದಿಂದ ಬಳಲುತ್ತಿರುವಾಗಲೇ ಮನುಷ್ಯ ಮಹತ್ತರದನ್ನು ಸಾಧಿಸುತ್ತಾನೆ. ಕ್ರಿಸ್ಮಸ್ ಕ್ಯಾರಲ್ ಎಂಬ ಒಂದು ಪುಟ್ಟ ಪುಸ್ತಕ ಚಾರ್ಲ್ಸ್ ಡೀಕನ್ಸ್ ನಲ್ಲಿ ಹೊಸದಾಗಿ ಆತ್ಮವಿಶ್ವಾಸ ಮೂಡಿಸಿ ಅವನ ಬಾಳು ಬೆಳಗಿಸಿತು.

‍ಲೇಖಕರು Admin

24 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading