ಒಂದು 'ಅಪೂರ್ಣ ಕಥೆ'

ಸುನೀಲದತ್ತ ಜೋಶಿ
“ಗೋಪ್ಯಾ… ನಾಕು ಮಾವಿನ ಕಾಯಿ ತೊಗೊಂಡು ಬಾರಪಾ ತ್ವಾಟಕ್ಕ ಹೋಗಿ. ನಿಮ್ಮ ಮಾಮಾ ಮತ್ತ್ಯಾರನೋ ಕರಕೊಂಡು ಬಂದಾರ ನೋಡು ಮನೀಗ, ಪಾನಕಾ ಬೇಡ್ತಾರೀಗ. ಹಂಗ ಒಂಚೂರು ಎಲ್ಲಾ ಕಡೆ ಕಣ್ಣ ಹಾಯಿಸಿ, ತ್ವಾಟ ಕಾಯವ್ರಿದ್ದಾರೋ ಇಲ್ಲೋ ನೋಡಿಕೊಂಡು ಬಾ,” ಅಂತ ಹಿತ್ತಲಿನ ಕಡೆಗೆ ತಿರುಗಿ ಒಂದೇ ಉಸುರಿನಲ್ಲಿ ವದರಿಕೊಂಡಳು ಅನಸೂಬಾಯಿ.
ಅವಳು ಮಾತು ಮುಗಿಸೋ ಮೊದಲೇ ಗೋಪಾಲ ಬಾವಿ ಕಟ್ಟೆ ಹಾರಿ, ವಾಡೆಯ ಹಿಂದಿನ ಅಗಸಿಯಿಂದ ತೋಟದ ಕಡೆ ಓಡಿದ್ದ. “ಎಷ್ಟ ಸಲ ಹೇಳೇನಿ ಈ ಹುಡುಗ್ಗ ಭಾವಿಕಟ್ಟಿ ಮ್ಯಾಲೆ ಕೂಡಬ್ಯಾಡ ಅಂತ…” ಜಿಗಿದು ಹೋದ ಗೋಪಾಲನನ್ನು ನೋಡಿದ ಅನಸೂಬಾಯಿ ಗೊಣಗಹತ್ತಿದಳು. ಎಂದಿನಂತೆ ಹುಡುಗನ ಮೇಲಿನ ಅವಳ ಈ ಹುಸಿ ಕೋಪ ಅನುಕಂಪಕ್ಕೆ ತಿರುಗಿ, ಕೊನೆಗೆ ಅವನೀ ದುಸ್ಥಿತಿಯ ನೆನೆದು ಮರುಗಿ ಎರಡು ಕಣ್ಣೀರು ಹನಿಸಿ… “ಪಾಪ ಸಣ್ಣದದ. ಈಗ ಮಾಡ್ಲಾರ್ದ ಇನ್ಯಾವಾಗ ಮಾಡೀತು ಹುಡುಗ ತುಂಟ ಚ್ಯಾಷ್ಟಿ. ಅವರವ್ವ ಇದ್ರ ಇವನ್ನ ಹೊರಗರ ಬಿಡ್ತಿದ್ಲ ಇಲ್ಲಾ ಸದಾ ಮುಂದ ಕೂಡಿಸಿಗೊಂಡು ಮುದ್ದು ಮಾಡ್ತಿದ್ಲ. ನಾ ಎಷ್ಟ ಮಾಡೇನಂದ್ರೂ ಸ್ವಾದರತ್ತೀನ ಖರೆ. ತಾಯಾಗ್ಲಿಕ್ಹೆಂಗಾಕ್ತದ…”
ಎಂದೆಲ್ಲಾ ಗತ ಸಂಗತಿಗಳಲ್ಲಿ ಕಳೆದು ಹೋಗುವಷ್ಟರಲ್ಲೇ ರಾಮರಾಯರ ದನಿ ಅನಸೂಯಾಳನ್ನು ಪಾನಕಕ್ಕಾಗಿ ಎಚ್ಚರಿಸಿತ್ತು. ಆಗಲೇ ಗೋಪಾಲನೂ ಬಂದು, “ನಾನ ಎಲ್ಲಾರಿಗೂ ಪಾನಕಾ ಮಾಡ್ತೇನತ್ಯಾ,” ಅಂತ ಹುರುಪಿನಿಂದ ಮಾವಿನಕಾಯಿಯ ಪಾನಕ ಮಾಡಿ, ಎಲ್ಲರಿಗೂ ಕೊಟ್ಟು, ತಾನೂ ಕುಡಿಯುತ್ತ, ಪಾನಕದ ಬಗೆಗಿನ ಪ್ರಶಂಸೆಗಾಗಿ ಪಿಳಿ ಪಿಳಿ ಕಣ್ಣು ಬಿಡುತ್ತ ಎಲ್ಲರ ಮುಖವನ್ನೂ ನೋಡತೊಡಗಿದ. ಅವನ ಮುಖ ನೋಡಿ, ವಾಡೆಗೆ ಬಂದ ಜೋಯಿಸರ ಶ್ಯಾಮಣ್ಣನವರು ಎಲ್ಲಾ ತಿಳಿದವರಂತೆ, “ಪಾನಕ ಭಾರೀ ಆಗೇದಲ್ಲೋ ಗೋಪಾಲ, ನಿಂದ ಏನು ಕೈಚಳಕ?”  “ಹೂನ್ರೀ ಕಾಕಾ” ಅಂದ ಹಿಗ್ಗಿ ಹೀರೇಕಾಯಿಯಾಗಿ ಗುಟುಕು ಪಾನಕ ಹೀರಿದ ಗೋಪಾಲ. “ಅಂವ ಆಮ್ರ ಪಾನಕದ ಎಕ್ಸ್ಪರ್ಟ ಇದ್ದಾನ್ರೀ ಜೋಯಿಸರ. ಅವರ ತಂದೀಯವರಿದ್ದಾಗ ಎಷ್ಟ ಸಲ ರುಚಿ ನೊಡಿಲ್ಲ ಹೇಳ್ರಿ ಇವನ ಕೈಯಾಗಿನ ಪಾನಕದ್ದು ನಾವು.”
“ಹೌದ್ಹೌದು…” ಅನ್ನುವಂತೆ ನಗುತ್ತಾ ತಲೆಯಾಡಿಸಿ ದನಿಗೂಡಿಸಿದ್ದರು ರಾಮರಾಯರು.
ಅಷ್ಟೊತ್ತಿಗಾಗಲೇ ಗೋಪಾಲ ಅಲ್ಲಿಂದ ಜಾಗ ಖಾಲಿ ಮಾಡಿದ್ದ.
ವಾಡೆಯ ಪಡಸಾಲೆಯಲ್ಲಿ ಕುಳಿತ ಮೂವರೂ ಹಿರಿಯರು ಪಾನಕೋತ್ತರ ತಾಂಬೂಲದ ಸಂಭಾಷಣೆಗೆ ಅಣಿಯಿಟ್ಟರು.
“ವಾಸಪ್ಪನವರು ಹೋಗಿ ಎರಡು ವರ್ಷ ಆಗ್ಲಿಕ್ಕೆ ಬಂತು. ಯಾಕ್ರೀ ರಾಮರಾಯರ..?” ಅಂತ ಮಾತಿಗಿಳಿದರು ದೇಸಾಯಿಯವರು. “ಆಗಿನ್ನ ಗೋಪಾಲ ಭಾಳ ಸಣ್ಣಾಂವಿದ್ದ ಬಿಡ್ರಿ. ಪಾಪ ಎಂಟ ವರ್ಷದ ಹುಡುಗ ತನ್ನ ತಂದೀ ಕರ್ಮ ಮಾಡಬೇಕಾತು! ಏನ ಅಂದ್ರೂ…ಭಾರೀ ತಿಳುವಳಿಕಿ ಅದರೀ ಹುಡುಗ್ಗ.” ಅಂತ ಜೋಯಿಸರೂ ದನಿಗೂಡಿಸಿದರು. “ನೀವು ಮಾತ್ರ ಅಗ್ದೀ ಛೊಲೋ ಕೆಲಸ ಮಾಡಿದ್ರಿ ನೋಡ್ರಿ ರಾಮರಾಯರ ಧಾರವಾಡ ಬಿಟ್ಟು ಕ್ಯಾರಕೊಪ್ಪಕ್ಕ ಬಂದು. ಇಂಥಾ ವೇಳ್ಯಾದಾಗನ ಬೇಕ್ರೀ ಸಂಬಂಧಿಕರನಿಸಿಗೊಂಡವ್ರು. ನೀವು ನಿಮ್ಮ ಬೀಗರ ಕಡೆ ಬಳಗ ಅಂತ ಅಲಕ್ಷ ಮಾಡ್ಲಿಲ್ಲಾ ಅಂತ ಆ ಹುಡುಗನ ಬದುಕಿಗೊಂದು ಆಸರಾತು.”
“ನಮ್ದರ ಏನಿತ್ರೀ ಧಾರವಾಡದಾಗಿನ್ನ? ನಾ ರಿಟಾಯರ್ ಆಗ್ಯ ಆಗಲೇ ನಾಕು ವರ್ಷ ಆಗಿದ್ವು. ಇದ್ದ ಒಬ್ಬ ಮಗನೂ ಅಮೇರಿಕ ಸೇರಿಬಿಟ್ಟ. ನಮ್ ಕಡೆ ಹೇಳ್ಕೊಳ್ಳಂಥ ಸಂಬಂಧಗಳೂ ಯಾವೂ ಉಳಿಲಿಲ್ಲ. ಇನ್ನ ಇದ್ದೊಂದು ಸ್ವಂತ ಮನೀನೂ ಮಾರಿ, ಇಬ್ಬರೂ ಗಂಡ ಹೆಂಡ್ತಿ ಈ ವಾಡೆ ಸೇರಿಬಿಟ್ವಿ ನೋಡ್ರಿಪಾ. ಇಬ್ಬರ ಜೋಡಿ ಅದು ಒಂದ ಹುಡುಗ…ನಮಗೂ ಒಂದು ರೀತಿ ಆಸರನ ಅನ್ರಿ. ಮತ್ತ….ಹಿಂಗರ ಒಂಚೂರು ನಮ್ಮ ಮ್ಯಾಲಿರೋ ವಾಸಪ್ಪನೋರ ಋಣ ತೀರ್ಲಿ.” ಅಂದರು ರಾಮರಾಯರು ನಿರಂಬಳ ಭಾವದಿಂದ.
“ಏನ ಅನ್ರೀ ರಾಯರ, ನಿಮ್ಮಷ್ಟ ದೊಡ್ಡ ಗುಣ ಬ್ಯಾರೆಯವರಿಗೆ ಬರೂದು ಸಾಧ್ಯ ಇಲ್ಲ. ನೀವೂ ತಿರುಗಿ ನೋಡಿದ್ದಿಲ್ಲಂದ್ರ ವಾಡೆ ಪಾಳು ಬಿದ್ದು ಹೋಕ್ತಿತ್ತು. ಗುಡಿ, ತ್ವಾಟ ಎಲ್ಲಾದಕ್ಕೂ ಯಾರೂ ದಿಕ್ಕ ಇರತಿರಲಿಲ್ಲ.”
“ಬರೋಬ್ಬರಿ ಹೇಳಿದ್ರಿ ನೋಡ್ರಿ ಜೋಯಿಸರ. ಇಲ್ಲೆ ನಮ್ಮ ಕಣ್ಣ ಮುಂದ ಆಡಿ ಬೆಳೆದಾಂವ, ಸ್ವತಃ ವಾಸಪ್ಪನೋರು ತಮ್ಮ ಮಗನಿಗಿಂತ ಹೆಚ್ಚಿಗಿ ಅಂತಃಕರಣದ್ಲೆ ಬೆಳೆಸಿದ ಆ ಸತೀಶ ಎಲಿದ್ದಾನ್ರೀ ಈಗ? ಅವರು ಸತ್ತು ಇನ್ನೂ ಆರು ತಿಂಗಳಾಗಿದ್ದಿಲ್ಲ, ಊರು ಬಿಟ್ಟು ಹೋದಾಂವ ಮತ್ತ ಈ ಕಡೆ ತಿರುಗಿನೂ ನೋಡಿಲ್ಲ. ಅಂವ ಸಣ್ಣಂವಿದ್ದಾಗ ಅವಂದು ನಮ್ಮ ಗೋಪಾಲನ ಪರಿಸ್ಥಿತಿನ ಆಗಿತ್ತ ರೀ. ಪದ್ದಕ್ಕ ಒಬ್ಬನ ತಮ್ಮ, ತಂದಿ-ತಾಯಿ ಬ್ಯಾರೆ ಇಲ್ಲಾ ಅಂತ ಕರಕೊಂಡು ಬಂದು, ಇಟ್ಗೊಂಡು ಸ್ವಂತ ಮಗನ್ಹಂಗ ಬೆಳೆಸಿದ್ಲು. ಎರಡನೇ ಹೆರಿಗಿಯೊಳಗ ಕೂಸಿನ ಜೋಡಿ ಆಕಿನೂ ಹೋದ ಮ್ಯಾಲನೂ ವಾಸಪ್ಪನೋರು ಸತೀಶಗ ಏನೂ ಕಡಿಮಿ ಮಾಡ್ಲಿಲ್ಲ. ಸಾಲೀಗೆ ಕಳಿಸೀದ್ರು, ಧಾರವಾಡದಾಗ ಕಾಲೇಜಿಗೆ ಸೇರಿಸಿ ಬಿ.ಕಾಂ.ನೂ ಮಾಡಿಸೀದ್ರು. ಯಾರ್ಯಾರ್ದೋ ಶಿಫಾರಸ್ಸಿನ ಮ್ಯಾಲೆ ಇಲ್ಲೆ ಮಾವಿನಕೊಪ್ಪದ ಬ್ಯಾಂಕಿನ್ಯಾಗ ನೌಕರೀನೂ ಹಚ್ಚಿಸಿ ಕೊಟ್ರು. ಗೋಪಾಲ ಹುಟ್ಟೋದು ತಡ ಆಗಿದ್ದಕ್ಕ, ತಮಗ ಮಕ್ಕಳಾಗ್ತಾವೋ ಇಲ್ಲೋ ಅಂತ ತಿಳದು, ಅವನ ಹೆಸರ್ಲೇನ ಎಷ್ಟೋ ಆಸ್ತಿ ಮಾಡಿದ್ರರೀ ವಾಸಪ್ಪನೋರು ಅವಾಗ. ಕಡೀಗೆ ತಮ್ಮ ಜವಾಬ್ದಾರಿ ಅಂತನ ತಿಳ್ಕೊಂಡು, ಲಗ್ನಾನೂ ಮಾಡಿ, ಧಾರವಾಡದ ಸಪ್ತಾಪುರದಾಗ ಒಂದು ಮನೀನೂ ಮಾಡಿ ಕೊಟ್ರು ಆ ನಾಲಾಯಕಗ,” ತಮ್ಮ ಬಾಲ್ಯ ಸ್ನೇಹಿತರಾದ ವಸಂತರಾಯರ ಮೇಲಿನ ಹೆಮ್ಮೆ-ಅನುಕಂಪಗಳು, ಸತೀಶ ಅವರಿಗೆ ಮಾಡಿದ ಅಪಕಾರಗಳ ನೆನಪುಗಳೆಲ್ಲ ಸೇರಿ ದೇಸಾಯಿಯವರನ್ನು ಸಿಟ್ಟಿಗೆಬ್ಬಿಸಿಬಿಟಿದ್ದವು. ಇವರ ಕೂಗಾಟ ಕೇಳಿ, ಅನಸಕ್ಕನೂ ಯಾವಾಗಲೋ ಪಡಸಾಲೆಗೆ ಬಂದು ಕಂಬಕ್ಕೆ ಆತು ಕೂತಿದ್ದಳು. ತನ್ನ ಅಣ್ಣನಿಗೆ ದ್ರೋಹ ಬಗೆದ ಆ ಸತೀಶನಿಗೆ ನಾಲ್ಕು ಮಾತು ಬಯ್ದುಬಿಡಬೇಕೆಂದು ಕಾದು ಕುಳಿತವಳಂತಿದ್ದಳು.
“ಅಲ್ರೀ… ಆ ಭಾಡ್ಯಾ ತನಗ ಕೊಟ್ಟದ್ದನ್ನ ತಿರುಗಿ ಕೊಡೂದು ಹಾಳಾಗಿ ಹೋಗಲಿ, ಛಂದಾಗಿ ಇಟ್ಗೊಳ್ಳೂ ಇಲ್ಲ. ದೆವ್ವನಂಥ ಆಸ್ತಿರ್ಯಪಾ. ಕೂತು ಉಂಡ್ರೂ ನಾಕು ತಲಿಮಾರಿಗಾಗೋ ಅಷ್ಟಿತ್ತು. ಗುಡ್ಡದ ಮ್ಯಾಲಿನ ಗುಡಿ, ಊರ ಹೊರಗಿನ ಕೆರಿ, ಕ್ಯಾರಕೊಪ್ಪಾ, ಸಲಕಿನಕೊಪ್ಪಾ, ಮಾವಿನಕೊಪ್ಪಾ, ಧಾರವಾಡದ ತನಕನೂ ಇರೂ ತ್ವಾಟದ ಪಟ್ಟಿ ಎಲ್ಲಾ ಅವನ ಹೆಸರ್ಲೇನ ಇತ್ರಿ. ಹೇಂಡ್ತಿ ಮಾತು ಕೇಳಿಕೊಂಡು ಎಲ್ಲಾನೂ ಮಾರಿಕೊಂಡು, ರೊಕ್ಕಾನೂ ಕಳಕೊಂಡು ಕೂತದ ಖೋಡಿ. ನಮ್ಮನಿಯವ್ರು ನಡುವ ಬಂದ್ರು ಅಂತ ಈ ವಾಡೆ, ಆ ಗುಡ್ಡದ ಗುಡಿ ಇವೆರಡರ ಉಳದ್ವು. ಮನಷ್ಯ ಅಷ್ಟ ಆಶ್ಯಾಕ್ ಬೀಳೂದು ಛೊಲೋ ಅಲ್ಲ ಬಿಡ್ರಿ. ಅಂವ ಏನೂ ಉದ್ಧಾರಾಗೂದಿಲ್ರಿ…..” ಅನಸಕ್ಕ ಸತೀಶನಿಗೆ ಮತ್ತಷ್ಟು ಶಾಪ ಹಾಕುವ ಮೊದಲು ರಾಮರಾಯರು ಮಾತು ಬದಲಿಸಿ ಅವಳನ್ನು ತಡೆದರೂ ಅವಳ ಕೋಪದ ಧಗೆಯೇನೂ ಆರಿರಲಿಲ್ಲ.
“ಆಗಿ ಹೋಗಿದ್ದನ್ನ ಎಷ್ಟ ಮಾತಾಡಿದ್ರ ಏನಾಗ್ಬೇಕಾಗೇದ? ನಡಿ ಊಟಕ್ಹಾಕು” ಎಂದು ರಾಮರಾಯರು ರಾಮಬಾಣವನ್ನು ಬಿಟ್ಟು ಎಲ್ಲರ ಕೋಪ ಶಮನಗೊಳಿಸಿ ಊಟಕ್ಕೆಂದು ಅಡುಗೆ ಮನೆಗೆ ಕರೆದೊಯ್ದರು.

***
ಮಲೆನಾಡಿನ ಒಂದು ಸುಂದರ ಹಳ್ಳಿ. ಪಶ್ಚಿಮ ಘಟ್ಟಗಳ ಸಾಲುಗಳು ನಾ ಮುಂದು ತಾ ಮುಂದು ಎಂದು ಓಡುತ್ತ, ಮೊದಮೊದಲು ಸಣ್ಣ ದಿಬ್ಬಗಳಾಗಿ, ಮತ್ತೆ ಹುರುಪೆದ್ದು ಸ್ಪರ್ಧಿಸಿ, ಏರುತೇರುತ ಗುಡ್ಡ-ಪರ್ವತಗಳಾಗುವ ನಯನಮನೋಹರ ದೃಶ್ಯ ಕಾಣಸಿಗುವುದು ಇಲ್ಲಿಯೇ. ಊರಿನ ಸುತ್ತೆಲ್ಲಾ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರಾದ ಮಾವಿನ ತೋಪುಗಳೇ. ತನ್ನ ರಮಣೀಯ ಸೌಂದರ್ಯವನ್ನು ಸವಿಯಲೆಂದೇ ಸ್ವತಃ ಪ್ರಕೃತಿದೇವಿಯೇ ಹಾಕಿಕೊಟ್ಟ ವೀಕ್ಷಣಾ ವೇದಿಕೆಯಂತಿದ್ದ ಊರ ನಟ್ಟನಡುವಿನ ಗುಡ್ಡ, ಅದರ ಮೇಲೆ ತಾನೇ ಈ ಜಗದಧಿಪತಿ, ಜಗದ್ರಕ್ಷಕನೆಂಬಂತೆ ಘನ-ಗಾಂಭೀರ್ಯದಿಂದ ಕುಳಿತಿದ್ದ ಪಶುಪತಿ-ಸೋಮೇಶ್ವರ ಮತ್ತು ಅವನಿಗೊಂದು ಚೆಂದದ ಗುಡಿ. ಗುಡಿಯ ಹಿಂದೆ, ಗುಡ್ಡದ ಕೆಳಗೆ, ಸಂಜೆ ಹೊತ್ತು ಸೂರ್ಯನಿಗೆ ಮುಳುಗಲಿಕ್ಕೆಂದೇ ಇದ್ದಂತಿದ್ದ ನಿಸರ್ಗ ನಿರ್ಮಿತ ಊರ ಕೆರೆ. ಕೆರೆಯ ಮಡುವಿನಲ್ಲೇ ಪುಟ್ಟ ಕಾಲುದಾರಿಯೊಂದು ತೋಟಗಳ ಕಡೆ ಸಾಗಿತ್ತು. ಗಡಿಯ ಗುಡ್ಡವನ್ನು ಬಲಗಡೆಯಿಂದಿಳಿದರೆ ಕೆಂಪು ಬಸ್ಸು ಬರುವ ಸ್ಟಾಂಡು, ಎಡದಿಂದಿಳಿದರೆ ಊರ ಗೌಡರ ವಾಡೆಯ ಅಗಸಿ ಬಾಗಿಲು. ಬಾಗಿಲು ತೆರೆದು ವಾಡೆಯ ಒಳ ಹೊಕ್ಕರೆ, ಎಲ್ಲೆಲ್ಲೂ ನಲಿವು, ಕಣ್ಣಿಗೆ ಕಾಣುವಷ್ಟು, ಕಿವಿಗೆ ಕೇಳುವಷ್ಟು ಪ್ರಸನ್ನತೆ, ಮಂಗಳತೆಗಳಿಂದ ಕೂಡಿದಂತಹ ವಾತಾವರಣ. ದಾನ-ಧರ್ಮಗಳು ಧಾರಾಳವಾಗಿ ನಡೆಯುವ ಶುಭ ಸ್ಥಳವದೆಂದು ಯಾರು ಬೇಕಾದರೂ ಒಪ್ಪಿಬಿಡುವಂತಹ ಜಾಗವದು. ಗುಡಿಯ ವಿಗ್ರಹದಂತೆ, ಗೋಪುರದ ಕಳಶದಂತಿದ್ದ ವಾಡೆಯ ಯಜಮಾನ-ವಸಂತರಾಯರು.
ಇಡೀ ವಾಡೆಯ ಆನಂದದ ರೂವಾರಿಗಳಂತಿದ್ದ ವಾಡೆಯ ಇಬ್ಬರೇ ಇಬ್ಬರು ಪುಟಾಣಿಗಳು-ಮುದ್ದು ಅಕ್ಷಿ ಮತ್ತು ಅವಳ ಪ್ರೀತಿಯ ಮುಗ್ಧ ಗೋಪು. ಗೋಪಾಲ ವಾಡೆಯ ರಾಜಕುಮಾರ. ಅಂದರೆ, ವಸಂತರಾಯರ ಏಕಮಾತ್ರ ಪುತ್ರ. ಅಕ್ಷತಾಳೇ ವಾಡೆಯ ಭಾವಿ ರಾಣಿ ಅಂದರೂ ತಪ್ಪಾಗಲಿಕ್ಕಿಲ್ಲ, ಯಾಕೆಂದರೆ ಅಕ್ಷಿ ಗೋಪುವಿನ ಸೋದರ ಮಾವನ ಮಗಳು. ದೊಡ್ಡವರೆಲ್ಲಾ ಈ ವಿಷಯವಾಗಿ ತಮಾಷೆ ಮಾಡಿದಾಗ, “ಬಾರೋ ಗಂಡ ಆಡ್ಲಿಕ್ಕೆ ಹೋಗೋಣ” ಅಂತೆಲ್ಲ ಮಕ್ಕಳು ಮಾತಾಡುವ ಮುಗ್ಧ ರೀತಿಯು ವಾಡೆಯಲ್ಲಿ ನಗೆಯ ಗುಲ್ಲೆಬ್ಬಿಸುತ್ತಿತ್ತು. ಗೋಪಾಲ ಅಕ್ಷಿಗಿಂತ ಎರಡು ವರ್ಷ ದೊಡ್ಡವನು. ಇವಳು ಬಾಲವಾಡಿಯಲ್ಲಿದ್ದಾಗ ಅವನು ಎರಡನೇ ಇಯತ್ತೆಯಲ್ಲಿದ್ದ. ಆದರೆ ಇಬ್ಬರೂ ಹೋಗಬೇಕಾಗಿದ್ದು ಒಂದೇ ಶಾಲೆಗೆ, ಒಂದೇ ತರಗತಿಗೆ. ಏಕೆಂದರೆ ಊರಿನಲ್ಲಿರುವುದೇ ಒಂದು ಶಾಲೆ, ಅದು ಗುಡ್ಡದ ಗುಡಿಯ ಶಾಲೆ. ಬಾಲವಾಡಿಯಿಂದ ನಾಲ್ಕರ ವರೆಗಿನ ತರಗತಿಗಳು ನಡೆಯಬೇಕಾದ್ದು ಗುಡಿಯ ಆ ಎರಡು ಅಂಕಣಗಳಲ್ಲಿಯೇ. ಶಿಕ್ಷಕರೂ ಒಬ್ಬರೇ. ಹೀಗಾಗಿ, ಗೋಪಾಲ ಹಾಗೂ ಅಕ್ಷತಾ ಶಾಲೆಯಲ್ಲಿಯೂ ಒಟ್ಟಿಗೇ ಇರುತ್ತಿದ್ದರು. ವಾಡೆಯ ಮಕ್ಕಳಾಗಿದ್ದಕ್ಕೆ ಶಾಲೆಯಲ್ಲಿ ಇವರಿಬ್ಬರೂ ಸ್ವಲ್ಪ ಸ್ಪೆಶಲ್.
ಏಕೆಂದರೆ, ಗುಡಿಯೂ ವಾಡೆಗೇ ಸೇರಿದ್ದಲ್ಲವೇ. ಅಲ್ಲದೇ ವಸಂತರಾಯರೇ ಬಹಳಷ್ಟು ಓಡಾಡಿ ಊರಿಗೊಂದು ಸರ್ಕಾರಿ ಶಾಲೆ ಆಗುವಂತೆ ಮಾಡಿ ಮಕ್ಕಳಿಗೆ ಕಲಿಯುವ ಭಾಗ್ಯ ಕಲ್ಪಿಸಿಕೊಟ್ಟಿದ್ದರು. ಮಾಸ್ತರರು ಹತ್ತಿರದ ಧಾರವಾಡದವರೇ ಆಗಿದ್ದರೂ ವಾರವೆಲ್ಲಾ ವಾಡೆಯಲ್ಲಿಯೇ ತಂಗಿ, ವಾಡೆಯ ಖಾಯಂ ಅತಿಥಿಯಾಗಿದ್ದರಿಂದ ಸಂಕೋಚಕ್ಕೋ ಅಥವಾ ವಿಶೇಷಕಾಳಜಿಗೋ ವಾಡೆಯ ಮಕ್ಕಳೆಂದರೆ ವಿಶೇಷ ಪ್ರೀತಿ ತೋರುತ್ತಿದ್ದರು. ಇದನ್ನೇ ಒಂದೊಳ್ಳೆಯ ಅವಕಾಶವನ್ನಾಗಿ ಮಾಡಿಕೊಂಡಿದ್ದ ಅಕ್ಷಿ, ದಿನವೂ ಹೊಟ್ಟೆ ನೋವೆಂದೋ, ತಲೆ ನೋವೆಂದೋ ನೆಪ ಹೇಳಿ ಶಾಲೆಗೆ ಚಕ್ಕರ್ ಹೊಡೆಯುವುದರಲ್ಲಿ ಯಶಸ್ವಿಯಾಗಿರುತ್ತಿದ್ದಳು. ಜೊತೆಗೆ ಗೋಪಾಲನೂ ಶಾಲೆ ಬಿಡದೇ ಹೋದರೆ ಅತ್ತು ರಂಪ ಮಾಡಿಬಿಡುತ್ತಿದ್ದಳು. ಮಾಸ್ತರರು ಹೇಗೂ ಇವರಿಗೆ ಮನೆಯಲ್ಲಿಯೂ ಪಾಠ ಹೇಳಿಕೊಡುತ್ತಿದ್ದರಿಂದ ಹಿರಿಯರೂ ಇದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಶಾಲೆ ಬಿಟ್ಟು ಮನೆಯಲ್ಲಿ ಗಲಾಟೆ ಮಾಡುತ್ತೀರೆಂದು ಗದರಿದರೆ, ಇವರ ಕಿತ್ತ ಕಾಲುಗಳು ಊರುತ್ತಿದ್ದುದು ಮಾವಿನ ತೋಟದಲ್ಲಿ ಬಿಟ್ಟರೆ, ಕೆರೆಯ ದಂಡೆಯ ಹೊಂಗೆಯ ತಂಪು ನೆರಳಲ್ಲಿ.
ಇಲ್ಲಿ ಒಮ್ಮೆ ಬಂದು ಸೇರಿದರೆ, ಮಧ್ಯಾಹ್ನ ಮಲ್ಲಪ್ಪನೋ, ಮಹದೇವನೋ ಬಂದು ಹುಡುಕಾಡಿ ವಾಡೆಗೆ ಕರೆದೊಯ್ಯುವವರೆಗೂ ತಮ್ಮದೇ ಆಟದ ಲೋಕದಲ್ಲಿ ಮುಳುಗಿಬಿಟ್ಟಿರುತ್ತಿದ್ದರು. ಬೇಸಿಗೆಯಲ್ಲಂತೂ ಇವರನ್ನು ಹುಡುಕಿ, ಕರೆದು ತರಲು ಹೋದವನು ಹರಸಾಹಸವನ್ನೇ ಪಡಬೇಕಿತ್ತು. ಮಾವಿನ ತೋಟದಲ್ಲಿ ಇವರ ಹಬ್ಬವೇ ನಡೆದಿರುತ್ತಿತ್ತು. ಕೆಮ್ಮು ಬರುವಷ್ಟು ಮಾವಿನಕಾಯಿ ತಿಂದು ಮನೆಯಲ್ಲಿ ಬೈಯಿಸಿಕೊಂಡರೂ ಅಕ್ಷಿ ಮಾತ್ರ ತೋಟದಿಂದ ಮತ್ತೆರಡು ಕಾಯಿಗಳನ್ನು ಪಾನಕಕ್ಕೆಂದು ದಿನವೂ ತಂದೇ ತರುತಿದ್ದಳು. ಅದೂ ಆ ಪಾನಕ ಗೋಪಾಲನೇ ಮಾಡಿದ್ದಾಗಿರಬೇಕು. ಇಲ್ಲವಾದರೆ ಹಠ. ಸ್ವಲ್ಪ ರುಚಿ ಬದಲಾದರೂ ಅದು ಗೋಪು ಮಾಡಿದ್ದಲ್ಲ ಅಂತ ರಾದ್ಧಾಂತ ಮಾಡಿಬಿಡುತ್ತಿದ್ದಳು. ಪಾಪ ಗೋಪು ಬಹಳ ಸಮಾಧಾನದವ, ದಿನವೂ ಪಾನಕ ಮಾಡಿ ಕೊಡುತ್ತಿದ್ದ. ಅವನಿಗೂ ಅದರಲ್ಲಿ ಒಂದು ರೀತಿಯ ಕುತೂಹಲ. ಮಾಡಿದ ಪಾನಕದಲ್ಲಿ ವಸಂತರಾಯರದ್ದೂ ಒಂದು ಪಾಲು ಇದ್ದೇ ಇರುತ್ತಿತ್ತು. ಪಾನಕ ಕುಡಿದು ಅವರು ಕೊಡುವ “ಆಮ್ರ ಪಾನಕದ ಎಕ್ಸ್ಪರ್ಟ ಇದ್ದಿ ನೋಡು ಗೋಪ್ಯಾ ನೀನು,” ಅನ್ನುವ ಸರ್ಟಿಫಿಕೇಟೇ ಸಾಕು ಅವನಿಗೆ. “ಪಾನಕ ಮಸ್ತ್ ಆಗಿತ್ತೋ ಗೋಪಾಲ ಮಾಮಾ,” ಅಂತ ಅಕ್ಷಿ ಹೇಳಿದರಂತೂ, “ನಾ ಅದರಾಗ ಎಕ್ಸ್ಪರ್ಟ್ ಇದ್ದೇನಿಲೇ ಅಕ್ಷಿ,” ಎಂದು ಕಾಲರ್ ಹಾರಿಸಿ ಅವಳನ್ನು ಛೇಡಿಸುತ್ತಿದ್ದ.
ಈ ಇಬ್ಬರೂ ಪುಟ್ಟ ಮಕ್ಕಳ ಒಡನಾಟ, ತುಂಟಾಟ ಹೀಗೇ ಮತ್ತೆರಡು ವರ್ಷ ಮುಂದುವರೆಯಿತು. ಒಂದು ಮುಂಜಾವಿನ ಕೆಟ್ಟ ಘಳಿಗೆ ನೋಡನೋಡುತ್ತಿದ್ದಂತೆಯೇ ಎಲ್ಲವನ್ನೂ ಬದಲಿಸುವವರೆಗೆ! ವಾಡೆಯ ಮಂದಿಯ ಮನಸ್ಸುಗಳಿಂದ ಹಿಡಿದು, ಅಲ್ಲಿನ ಪಂಚಭೂತಗಳೆಲ್ಲವೂ ನಿಶ್ಚಲವಾಗಿ ನಿಂತೇ ಹೋದಂತಿತ್ತು. ವಾಡೆಯ ಕಳಶವೇ ಕಳಚಿತ್ತು. ವಾಡೆಯ ದೇವರೆನಿಸಿಕೊಂಡ ವಸಂತರಾಯರೇ ವಿಧಿವಶರಾದ ಮೇಲೆ, ಕಳಶವಾದರೂ ಹೇಗೆ ನಿಂತೀತು? ಅದನ್ನಿನ್ನು ಗುಡಿಯೆಂದು ಕರೆಯುವುದಾದರೂ ಹೇಗೆ? ಅದ್ಯಾವುದೋ ದಿಕ್ಕಿನಿಂದ ಬೀಸಿದ ಆ ಕೆಟ್ಟ ಗಾಳಿಗೆ ಏನೆಲ್ಲಾ ಅನಾಹುತಗಳು ನಡೆದುಹೋದವು. ವಾಡೆಯ ಸಂಬಂಧದ ಕೊಂಡಿಯೇ ಕಳಚಿತ್ತು. ಅವರ ಸಾವಿನ ದುರ್ಘಟನೆಯ ದುಃಖ ಮಾಸುವ ಮುನ್ನವೇ ಅಕ್ಷತಾಳ ತಂದೆ ತಾನು ತೊಟ್ಟಿದ್ದ ಗೋಮುಖವಾಡ ಕಳಚಿ, ವ್ಯಾಘ್ರನಾಗಿ ನಿಂತಿದ್ದ. ಹೆಂಡತಿಯ ತಮ್ಮನನ್ನು ಮಗನಂತೆ ಕಂಡು, ವಸಂತರಾಯರು ಅವನ ಹೆಸರಲ್ಲಿ ಮಾಡಿಟ್ಟ ಆಸ್ತಿಯ ಒಂದು ಬಿಡಿಗಾಸನ್ನೂ ವಾಡೆಗೆ ಕೊಡದೇ, ತನ್ನ ಸಂಸಾರದೊಂದಿಗೆ ಬೆಂಗಳೂರಿಗೆ ಹೊರಟು ಹೋದ. ಸ್ವಾರ್ಥ ಮನಸ್ಸುಗಳ ಈ ಬಿರುಗಾಳಿಗೆ ಸಿಲುಕಿ ದಿಕ್ಕಾಪಾಲಾಗಿ ಹೋದವು ಆ ಎರಡು ಪುಟ್ಟ ಜೀವಗಳು.
***
“ಅಕ್ಷತಾ…ವಾಟ್ ಆರ್ ಯು ಡುಯಿಂಗ್? ಇನ್ನೂ ಮಲಗ್ಲಿಲ್ವೇನಮ್ಮಾ?” ಅಂತ ರೂಮಿನ ಬಾಗಿಲನ್ನು ಕೊಂಚವೇ ತೆರೆದು ಮೆಲು ಧ್ವನಿಯಲ್ಲಿ, ನಯವಾಗಿ ಕೇಳಿದಳು ಅಕ್ಷಿಯ ತಾಯಿ ನಂದಾ.
“ಇಲ್ಲಮ್ಮಾ, ಓದ್ತಾ ಇದ್ದೆ. ನೀನ್ ಮಲಗ್ಲಿಲ್ಲ್ವಾ? ಇಟ್ಸ್ ಟೂ ಲೇಟ್,” ಅಂದಳು ಅಕ್ಷಿ ಕನ್ನಡಕವನೇರಿಸುತ್ತಾ ಗಡಿಯಾರವನ್ನೊಮ್ಮೆ ನೋಡಿ.
ಮಗಳ ಹತ್ತಿರ ಕೂರುತ್ತ ನಂದಾ, “ಇಲ್ಲವಾ, ಯಾಕೋ ನಿದ್ದೀನ ಬರ್ತಾ ಇಲ್ಲ,” ಅಂತ ಅಂದರು ಈ ಕಡೆ ಧಾರವಾಡದ್ದೂ ಅಲ್ಲದ, ಆ ಕಡೆ ಬೆಂಗಳೂರಿನದ್ದೂ ಅಲ್ಲದ, ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಹೋಗಿರುವವರು ಮಾತನಾಡುವ ಟಿಪಿಕಲ್ ತ್ರಿಶಂಕು ಕನ್ನಡದಲ್ಲಿ.
ಓದಿ ಸಾಕಾದವಳಂತೆ ಮೈ ಮುರಿಯುತ್ತಾ ಪುಸ್ತಕ ಮುಚ್ಚಿ, “ಅಮ್ಮಾ, ನಾ ಸಣ್ಣಕಿದ್ದಾಗ ವಾಡೆದಾಗ ವಾಸಪ್ಪಜ್ಜಾ ಎಷ್ಟ ಛೊಲೋ ಛೊಲೋ ಕಥಿ ಹೇಳ್ತಿದ್ರು ನಂಗ. ಎಷ್ಟ್ ಶಾಣ್ಯಾ ಇದ್ರು ನೋಡು ಹಿಂದ್ಕಿನ ಮಂದಿ. ಏನೂ ಓದದ ಇದ್ರೂನೂ ಕಥಿ, ಕವನ, ಹಾಡಿನಿಂದನ ಜೀವನಾ ಎಷ್ಟ್ ಛಂದ ತಿಳ್ಕೊಂಡಿದ್ರು,” ಅಂದಳು ಅಕ್ಷಿ ತಾಯಿಯನ್ನು ವಾಡೆಯ ನೆನಪಿನಂಗಳಕ್ಕೆ ಎಳೆಯಲೆತ್ನಿಸುತ್ತಾ. ಇಂತಹ ಪ್ರಯತ್ನಗಳನ್ನು ಅಕ್ಷಿ ಆಗಾಗ ಮಾಡುತ್ತಿರುತ್ತಿದ್ದಳು.
“ಹೌದ್ ಬಿಡವಾ. ನೀ ವಾಡೇದ ಮಗಳೇ ನಿಜ. ಅಲ್ಲಾ ನಾವು ಊರು ಬಿಟ್ಟು ಬೆಂಗಳೂರಿಗೆ ಬಂದು ಆಗಲೇ ಹದ್ನೈದು ವರ್ಷ ಆಕ್ತಾ ಬಂತು. ಅಲ್ಲೇ ಹುಟ್ಟಿ, ಬೆಳೆದ ನಾನು, ನಿಮ್ಮಪ್ಪನೇ ಆ ಭಾಷಾ ಮರೀತಾ ಇದ್ದೀವಿ. ಭಾಷೆನೇ ಏನೂ ಎಲ್ಲಾ ಮರ್ತು ಇಲ್ಲಿಯವ್ರೇ ಆಕ್ತಾ ಇದೀವಿ. ಇಲ್ಲಿಗ್ ಬಂದಾಗ ನೀನಿನ್ನೂ ಭಾಳ ಚಿಕ್ಕೋಳಿದ್ದಿ. ನಿನಗ್ಯಾಕೆ ಆ ಕೊಂಪೆ ಮೇಲೆ ಇಲ್ಲದ್ ಪ್ರೀತಿ? ಏನೋ ಒಂದು ಮಾತಾಡಿ ಹಿಂದಿನದೆಲ್ಲಾ ನೆನಪಿಸಿಬಿಡ್ತೀ ನೀನು. ಸಾಕು ಮಲಗು ಲೇಟಾಯ್ತು,” ಎನ್ನುತ್ತ ತನ್ನ ಬೆಡ್‍ರೂಮಿನ ಹೊರಟಳು ನಂದಾ.
“ಹ್ಹಾ… ಹ್ಹಾ… ನಾ ಅದ್ರೊಳಗ ಎಕ್ಸ್ಪರ್ಟ್ ಇದ್ದೇನಿ,” ಅಂತ ತನ್ನ ಕಾಲರ್ ಇಲ್ಲದ ಟೀ ಶರ್ಟ ಹಿಡಿದು ಹಾರಿಸುವಂತೆ ಅಣಕು ಮಾಡಿ ತನ್ನ ಅಮ್ಮನಿಗೆ ಹೇಳಿದಳು. ಹೇಳುವುದಕ್ಕಿಂತ ಅಕ್ಷತಾ ಅದನ್ನು ತನಗೆ ತಾನೇ ಹೇಳಿಕೊಂಡಂತಿತ್ತು, ಗೋಪುವನ್ನು ನೆನೆಯುತ್ತ.
***
“ಗೋಪಾಲ ಮಾವಿನಕಾಯಿ ತಗೊಂಡು ಬಾರಪಾ ತ್ವಾಟದಿಂದ ಬರೂಮುಂದ. ಉಪ್ಪಿನಕಾಯಿ ಹಾಕಬೇಕು, ಗುಳಂಬ ಮಾಡಬೇಕು, ಖೋಲ್ಯಾಗಿಷ್ಟು ವೈದು ಅಡಿ ಹಾಕಬೇಕು… ಎಷ್ಟ ಕೆಲಸ! ಬರಬರ್ತಾ ನಾ ಮುದಕಿ ಆದೆ ನೋಡಪಾ, ಇತ್ತಿತ್ಲಾಗ ನನಗೂ ನೀಗವಲ್ತು. ನಿಮ್ ಮಾಮಾ ಎರಡ ದಿವಸ ಆರಾಮ ಇದ್ರ ನಾಕ ದಿವಸ ಮಲ್ಕೊಂಡಿರ್ತಾರ. ಅವ್ರೂ ಹಣ್ಣಾಗ್ಯಾರ ಈ ವರ್ಷ. ನಾವಿಬ್ಬರೂ ಇರೂದ್ರಾಗ ನಿಂದೊಂದು ಲಗ್ನಾ ಮಾಡಬೇಕಾಗೇದೋ. ಇರೂ ತನ ಮುಪ್ಪಿನ ಕಾಲಕ್ಕ ನಮಗೂ ಒಂದ ಆಸರ ಆಕ್ತದ, ನಿನ್ ಜೀವಕ್ಕೂ ಒಂದ್ ಸಾಥ್ ಸಿಕ್ಹಂಗಾಕ್ತದ,” ಅನ್ನೋದು ಅನಸೂಬಾಯಿಯ ಇತ್ತೀಚಿನ ನಿತ್ಯ ಗೊಣಗು ಪ್ರವರವಾಗಿತ್ತು.
“ಆತ್ ಆತ್… ನೋಡೋಣಂತ. ಈಗಂತೂ ನಾ ಇದ್ದೇನಲ್ಲಾ ಅತ್ಯಾ ನಿಮ್ಮಿಬ್ಬರ ಸೇವಾ ಮಾಡ್ಲಿಕ್ಕ. ನನ್ ಲಗ್ನದ್ದೇನಷ್ಟ ಅವಸರದ?” ಅಂತೇನೋ ಖಿನ್ನ ಮನಸ್ಕನಾಗಿ ಹೇಳುತ್ತ, ಏನೇನನ್ನೋ ಯೋಚಿಸುತ್ತಾ ಗೋಣಿಚೀಲ ಹಿಡಿದು ತೋಟಕ್ಕೆಂದು ಹೊರಟ. ಗೋಪಾಲ ತನ್ನ ಮದುವೆಯ ವಿಷಯದ ಪ್ರಸ್ತಾಪದ ಮಾತು ಕೇಳಿದೊಡನೆ ವಿಷಣ್ಣನಾಗಿಬಿಡುತ್ತಿದ್ದ. ಯಾರಿಗೂ ಹೇಳಲಾಗದ, ಆದರೆ ಹೇಳಲೇಬೇಕಾದಂತಹದೊಂದನ್ನು ತನ್ನಲ್ಲೇ ಇಟ್ಟುಕೊಂಡು ತನ್ನ ಮನಸ್ಸಿನ ಜೊತೆಗೇ ಒಂದು ಭೀಕರ ಶೀತಲ ಸಮರದಲ್ಲಿ ತೊಡಗಿದ್ದ. ಅತ್ತೆ, ಮಾವರ ಜೊತೆ ಈ ವಿಷಯವಾಗಿ ಮಾತಿಗಿಳಿಯುವುದು ಹೇಗೆ ಎಂಬುದೇ ಅವನಿಗೆ ತಿಳಿಯದಾಗುತ್ತಿತ್ತು. ಇದನ್ನೇ ಯೋಚಿಸುತ್ತ ಕೆರೆಯ ದಂಡೆಯ ಮೇಲೆ ನಡೆದು ತೋಟದ ಕಡೆಗೆ ಸಾಗುತ್ತಿದ್ದಾಗ, ಗುಡ್ಡದ ಗುಡಿಯ ಕಡೆ ಅವನ ದೃಷ್ಟಿ ಹಾಯಿತು.
ಗುಡಿಯನ್ನು ಎಂದೂ ನೋಡದವನಂತೆ ಬೆರಗಾಗಿ ನೋಡುವಂತೆ ದಿಟ್ಟಿಸುತ್ತ ನಿಂತ. ಅವನಲ್ಲಿ ಆ ಕ್ಷಣಕ್ಕೆ ನಡೆಯುತ್ತಿದ್ದ ಯೋಚನೆಗಳ ತಿಕ್ಕಾಟಕ್ಕೂ, ಅವನ ಅಕ್ಷಿಪಟಲದ ಮೇಲೆ ಬಿದ್ದ ಆ ಗುಡಿ, ಕೆರೆಗಳ ದೃಶ್ಯಕ್ಕೂ ಒಂದು ರೀತಿಯ ಸಾಮ್ಯ ಸಾಧಿಸಿಬಿಟ್ಟಿತ್ತು. ಈ ಸಾಮ್ಯದ ಆಧಿಪತ್ಯ ಅವನನ್ನು ದೈಹಿಕ, ಮಾನಸಿಕವಾಗಿ ಕಟ್ಟಿ ಹಾಕಿಬಿಟ್ಟವು. ಮಾನಸಿಕವಾಗಿಯೂ, ದೈಹಿಕವಾಗಿಯೂ ತಾನಿದ್ದಲ್ಲಿಯೇ, ಇದ್ದ ಹಾಗೆಯೇ ಸುಖವನ್ನನುಭವಿಸುತ್ತಿರುವೆನೆಂಬೊಂದು ಭ್ರಮೆಯೊಂದು ಅವನನ್ನು ಆವರಿಸಿಬಿಟ್ಟಿತು. ನಿಂತಲ್ಲಿಯೇ ಕುಸಿದವರಂತೆ ಕೆರೆಯ ದಡದಲ್ಲಿಯೇ ಕುಳಿತ. ಕೆರೆಯ ಕಡೆಗೇ ಹಾಯ್ದಿದ್ದ ಅವನ ದೃಷ್ಟಿಯು ಕೆರೆಯನ್ನು ತಲುಪದೇ ಅಲ್ಲೆಲ್ಲೋ ಗಾಳಿಯ ಯಾವುದೋ ಒಂದು ಅಗೋಚರ ಬಿಂದುವಿನಲ್ಲಿ ವಿಲೀನವಾದಂತೆ ನೆಟ್ಟು ನಿಂತಿತ್ತು.
ಅಗೋಚರ ಗಾಳಿಯ ಅಸ್ತಿತ್ವವೇ ಇಲ್ಲದ ಆ ಬಿಂದುವಿನಿಂದಲೇ ತನ್ನ ಗತ ಜೀವನದ ದೃಶ್ಯಗಳು ಸಿನಿಮಾ ರೀಲಿನಂತೆ ಒಂದೊಂದೇ ಬಿಚ್ಚಿಕೊಳ್ಳುವುದನ್ನು ಅವನು ಕಾಣತೊಡಗಿದ. ರೀಲುಗಳ ತುಂಬೆಲ್ಲಾ ಅವನು ಅಕ್ಷಿಯ ಜೊತೆ ಕಳೆದ ಬಾಲ್ಯದ ದಿನಗಳು! ಕೆರೆಯ ದಂಡೆಯಲ್ಲಿ, ಮಾವಿನ ತೋಪುಗಳಲ್ಲಿ, ಗುಡ್ಡದ ಗುಡಿಯಲ್ಲಿ, ವಾಡೆಯ ಅಗಸಿ, ವರಾಂಡ, ಪಡಸಾಲೆ, ಹಿತ್ತಿಲುಗಳಲ್ಲೆಲ್ಲ ಅವಳ ಸಂಗಡ ಆಡಿದ, ಅವಳಿಗೆಂದೇ ದಿನವೂ ಮಾಡುತ್ತಿದ್ದ ಆಮ್ರ ಪಾನಕದ, ಕಾಲರು ಹಾರಿಸಿ ಅವಳನ್ನು ಛೇಡಿಸಿದ, ಅವಳಿಗೆ ಕೊನೆಯ ಬಾರಿಗೆ ತಾನು ಟಾಟಾ ಮಾಡಿದುದೆಲ್ಲವುಗಳ ನೆನಪುಗಳ ಸರಮಾಲೆಯದು. ಅದರ ಹಿಂದೆಯೇ ಅವಳು ಈಗ ಹೇಗಿರಬಹುದು? ತನ್ನನ್ನು ನೆನಪಿನಲ್ಲಿಟ್ಟುಕೊಂಡಿರಬಹುದೇ? ತನ್ನಂತೆ ಅವಳಿಗೂ ಇವನನ್ನು ನೋಡುವ ಹಂಬಲವಿರಬಹುದೇ? ಅವಳಲ್ಲಿಯೂ ತನ್ನ ಬಗ್ಗೆ ಪ್ರೀತಿ ಚಿಗುರಿರಬಹುದೇ? ಎಂಬೆಲ್ಲ ಹದಿಹರೆಯದ ಹುಚ್ಚು ಮನಸಿನ ಹಂಬಲಗಳೊಂದೆಡೆಯಾದರೆ, ಅವಳು ತುಂಬಾ ಓದಿದವಳು, ತಾನು ಬರಿಯ ಹತ್ತನೇ ತರಗತಿ ಪಾಸಾದವನು, ಅವಳು ತನ್ನನ್ನು ಪೂರ್ತಿಯಾಗಿ ಮರೆತು ಬೇರೆ ಯಾರನ್ನೋ ಮದುವೆಯಾಗಲು ಸಿದ್ಧವಾಗಿರಬಹುದೇ? ಅವರಪ್ಪ ಕಡಿದಕೊಂಡ ವಾಡೆಯೊಂದಿಗಿನ ಸಂಬಂಧ ಮತ್ತೆ ಕೂಡಲು ಸಾಧ್ಯವೇ? ಈಗಿನ ಅವರ ಅಂತಸ್ತಿಗೂ ತಮ್ಮ ಸ್ಥಿತಿಗೂ ಸರಿ ಹೊಂದುವ ಸಾಧ್ಯತೆಗಳುಂಟೇ? ಎಂದೆಲ್ಲ ಬೆದರಿಸಿ ಹಿಂದೇಟು ಹಾಕಿಸುವಂತಹ ಯೋಚನೆಗಳು ಮತ್ತೊಂದೆಡೆ.
ಯೋಚಸಿ, ತಲೆ ಕೆಡಿಸಿಕೊಂಡು, ಕೊನೆಗೆ ಎರಡೂ ಪಂಕ್ತಿಯ ಲಹರಿಗಳೂ ಬಿಟ್ಟುಕೊಡದಾದಾಗ ತಾನೇ ಸೋತು, ಸೋಲಿನ ದುಃಖ ತಾಳಲಾಗದೇ ಕಣ್ಣೀರು ಸುರಿಸಿ… ಅಷ್ಟರಲ್ಲಿ, “ಗೋಪಾಲಪ್ಪಾ ಅವ್ನೋರು ನಿನಗ ಕಾಯಕ್ಹತ್ಯಾರ ವಾಡೇದಾಗ. ಇಷ್ಟೊತ್ತಾ ಮಾಡೋದ? ಅಯ್… ನೀ ಮಾವಿನಕಾಯಿನೂ ತಂದಿಲ್ಲಾ ಇನ್ನೂ? ಆತ್ ನಡಿ, ಇವತ್ತ ನನಗ ನಿನಗ ಕೂಡೇ ಐತಿ ಮಂಗಳಾರತಿ ವಾಡೇದಾಗ,” ಅಂತ ಗೋಪಾಲನನ್ನು ಹುಡುಕಿಕೊಂಡು ಬಂದ ಮುದಿ ಮಹದೇವ ಒಬ್ಬನೇ ಒದರುತ್ತಾ, ಗೋಪಾಲನ ಕೈಯಲ್ಲಿದ್ದ ಖಾಲೀ ಗೋಣೀ ಚೀಲ ಹಿಡಿದು ವಾಡೆಯ ಕಡೆಗೆ ನಡೆಯತೊಡಗಿದ. ಗೋಪಾಲ ಇನ್ನೂ ಕುಳಿತೇ ಇದ್ದ.
***
ದಿನಗಳುರುಳಿದವು. ಎಷ್ಟೋ ಮಳೆ ಹನಿಗಳು ಮೈ-ಮನಗಳನ್ನು ತೋಯಿಸಿ ತೊಳೆದವು. ಅದೆಷ್ಟೋ ಬೇಸಿಗೆಗಳು ಧಗಧಗಿಸಿ ಉರಿದವು. ವಿಧ ವಿಧದ ಮಾವುಗಳು ಮಾರುಕಟ್ಟೆಯನ್ನಾಳಿದವು. ಆದರೆ ಅಕ್ಷಿಗೆ ಮಾತ್ರ ಯಾವ ಮಾವಿನ ಹಣ್ಣೂ ರುಚಿಸಲಿಲ್ಲ. ಯಾವ ಅಮೃತ ಸಮಾನ ಪಾನಕವೂ ಗೋಪಾಲನ ಆ ಆಮ್ರ ಪಾನಕದ ಮುಂದೆ ಕಲಗಚ್ಚೆನಿಸಿದವು. ಇಷ್ಟು ಕಾಲ ದೂರವಿದ್ದರೂ ಎಲೆ ಚಿಗುರಿನ ಮೇಲಿನ ಮುಂಜಾವಿನ ಮಂಜಿನ ಹನಿಯಂತೆ, ಮಾಸದಂತಿತ್ತು ಅವರ ಸ್ನೇಹ. ಪ್ರಾಯದ ಮೋಹಕ ಸುಂದರಿಯಾಗಿ ಅಕ್ಷಿಯು ಬೆಳೆದಂತೆ, ಅವಳ ಮನದಲ್ಲಿ ಗೋಪುವಿನ ಬಗೆಗಿನ ಸ್ನೇಹವೂ ಬೆಳೆದು, ಕಾಯಿ ಸಿಹಿಯಾದ ಹಣ್ಣಾಗುವಂತೆ ಯೌವನ ಸಹಜವಾಗಿ ಮಧುರ ಪ್ರೇಮವಾಗಿ ಮಾಗಿತ್ತು. ನೂರೊಂದು ಹುಚ್ಚು ಕನಸುಗಳನ್ನು ಕಾಣುತ್ತ, ಯಾರ ಮುಂದೂ ಹೇಳಿಕೊಳ್ಳಲಾಗದ ಭಾವನೆಗಳನ್ನು ಹೇಗೋ ಹೊರಹಾಕುವುದು ಅನಿವಾರ್ಯವಾಗಿ ಕೊನೆಗೆ ಪೆನ್ನು ಕಾಗದಗಳ ಸಂಭಾಷಣೆ, ಸಂವಾದಗಳನ್ನು ಏರ್ಪಡಿಸಿ ಕವಯಿತ್ರಿಯಾಗುವ ಕನಸು ಕಂಡು, ಅದರಲ್ಲಿಯೇ ಗೋಪುವಿನ ಪ್ರೇಮದ ಆಲಂಗನದ ಅನುಭವ ಕಂಡಳು.
ಬಾಲ್ಯದಲ್ಲಿ ಗೋಪುವಿನೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ನೆನೆ-ನೆನೆದು, ಕಾಗದದ ಮೇಲೆ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಳು. ಹಾಗೆಯೇ ಕಾಗದದ ಮೇಲೆ ಬರೆಯಲಾಗದ, ತನ್ನ ಊಹೆಗೂ ಬೇಡವಾದ ಕೆಲ ಸಂಗತಿಗಳು. ನಡೆದುದೆಲ್ಲ ಮರೆಯಲು ಗೋಪುವಿಗಂತೂ ಸಾಧ್ಯವಿಲ್ಲ, ಸಂಭವಿಸಿದ ಪ್ರತಿ ಘಟನೆಯ ಬಾಣವು ನೇರವಾಗಿ ನೆಟ್ಟದ್ದು ಅವನಿಗೇ ಅಲ್ಲವೇ. ಬಾಣ ಬಿಟ್ಟದ್ದು ವಾಡೆಯ ಉಪ್ಪು ತಿಂದ ತಮ್ಮಪ್ಪನೇ ಅಲ್ಲವೇ. ಗೋಪಿಯು ಅಪ್ಪನಂತೆಯೇ ಮಗಳೆಂದೆಣಿಸುವುದು ಸಹಜವೇ ಆದದ್ದು. ಅವನು ತನ್ನನ್ನು ಮರೆಯುವುದಿರಲಿ, ನೆನಪಿಟ್ಟುಕೊಳ್ಳುವುದಕ್ಕೂ ಅಸಹ್ಯಪಡುವನೆಂಬಂತಹ ಅವಳದೇ ಆದ ಕಟು ಸತ್ಯವಾದ ಅಪ್ಪಟ ಪ್ರಾಕ್ಟಿಕಲ್ ಆಲೋಚನೆಗಳು ಅವಳನ್ನು ದುಃಖದ ಕೂಪಕ್ಕೆ ತಳ್ಳಿಬಿಡುತ್ತಿದ್ದವು. ಬಹುಶಃ ಇವೆಲ್ಲವುಗಳಿಂದ ಹೊರಬರದಿರುವುದೇ ಅವಳಿಗೆ ಕಾಲೇಜಿನ ಜೀವನದಲ್ಲಿಯೂ ವಯೋಸಹಜವಾದ ಪ್ರೀತಿ-ಪ್ರೇಮಗಳಲ್ಲೆಲ್ಲ ತೊಡಗುವುದು ಅಸಾಧ್ಯವೆನಿಸಿತ್ತು.
ಇತ್ತೀಚೆಗೊಂದು ಭಾನುವಾರದ ದಿನ ಡಿನ್ನರ್‍ಗೆಂದು ಮೂವರೂ ಹೋಟೇಲಿಗೆ ಹೋದಾಗ ಸತೀಶನ ಸ್ನೇಹಿತನೊಬ್ಬನ ಸಂಸಾರ ಸಿಕ್ಕು, ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಷ್ಟೇ ಅಲ್ಲದೇ, ಒಬ್ಬರಿಗೊಬ್ಬರು ಬೀಗರಾಗುವ ಆಸ್ಥೆಯನ್ನೂ ವ್ಯಕ್ತಪಡಿಸಿಕೊಂಡಿದ್ದರು. ಅಕ್ಷಿಗಂತೂ ಸುತಾರಾಂ ಇಷ್ಟವಿರಲಿಲ್ಲವಾದರೂ, ಇಬ್ಬರದ್ದೂ ಒಂದೇ ವೃತ್ತಿ, ಒಂದೇ ಊರಿನಲ್ಲಿರುವವರು, ಅಂತಸ್ತು, ಮನಸ್ಥಿತಿಗಳೆಲ್ಲ ಸರಿಹೊಂದುತ್ತವೆ ಎಂಬ ಕಾರಣಕ್ಕೆ ತಂದೆ-ತಾಯಿಗಳು ಒತ್ತಾಯಪೂರ್ವಕವಾಗಿಯೇ ಅವಳ ಮನವೊಲಿಸುವ ಪ್ರಯತ್ನದಲ್ಲಿದ್ದರು. ಇವಳಿಗೆ ಇದೊಂದು ಸಂದಿಗ್ಧ ಪರಿಸ್ಥಿತಿಯಾಗಿ ಯಾವಾಗಲೂ ಅನ್ಯಮನಸ್ಕಳಾಗಿರಹತ್ತಿದಳು. ಆರೋಗ್ಯವೂ ಕೊಂಚ ಏರುಪೇರಾಯಿತು. ಇದೆಲ್ಲ ಸತೀಶ, ನಂದಾರನ್ನು ಚಿಂತೆಗೀಡು ಮಾಡದಿರಲಿಲ್ಲ. ಹಾಗೆಂದೇ ಅವರು ಯೋಚಿಸಿ, ತಮಗೆ ಕಷ್ಟವಾದರೂ ಊರಿಗೊಮ್ಮೆ ಹೋಗಿ, ವಾಡೆಯ ಪರಿಸರದಲ್ಲಿ ಮಗಳನ್ನು ಸ್ವಲ್ಪ ಗುಣವಾಗಿಸಿಕೊಂಡು ಬರುವುದೆಂದು ನಿರ್ಣಯಿಸಿದರು. ಈ ಸುದ್ದಿಯೇ ಅಕ್ಷಿಗೊಂದು ನವಚೈತನ್ಯವನ್ನು ತುಂಬಿತು. ಅತ್ಯುತ್ಸುಕತೆಯಿಂದ ಹೊರಡುವ ತಯಾರಿಯಲ್ಲಿ ಅವಳು ತೊಡಗಿದ್ದನ್ನು ನೋಡಿ, ತಮ್ಮ ನಿರ್ಧಾರ ಸರಿಯಾಗಿಯೇ ಇದೆಯೆಂದು ಸ್ವಲ್ಪ ಸಮಾಧಾನಗೊಂಡರು ಸತೀಶ-ನಂದಾ.

***
“ಎಂಥಾ ಭಂಗಾರದಂಥಾ ಹುಡುಗಿ ಇತ್ತೋ ಗೋಪಾಲ ನಿನ್ನೆ ಬಂದದ್ದು. ಎಷ್ಟು ಛಲೋ ಮಂದಿ ಅವರು. ನಿನ್ನೆ ನೀನು ಒಂದು ಮಾತು ಹುಂ ಅಂದಿದ್ಯಂದ್ರ, ಲಗ್ನದ ಮಾತು ಕತೀನ ಮುಗದ್ಹೋಕ್ತಿತ್ತು. ನಿಂದ ನೀ ನಡಸ್ತೀಯಪಾ. ಹೇಳಿದ ಮಾತು ಕೇಳೂದೇ ಇಲ್ಲ ಅಂತೀನಿ…” ಅಂತ ಅನಸೂಬಾಯಿ ವಾಡೆಯ ನಡುಮನೆಯಲ್ಲಿ ಕುಳಿತು ಬೆಳಗಿನ ಜಾವದ ಚಹಾ ಹೀರುತ್ತ, ಹಿಂದಿನ ದಿನ ನಡೆದುದರ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದಳು.
“ಮತ್ತ ಚಾಲೂ ಮಾಡಿದ್ಯಾ ಅತ್ಯಾ ನಿನ್ನ ಪುರಾಣಾನ. ಏನ್ಹಚ್ಚೀಯವಾ ಮುಂಜ-ಮುಂಜಾನೆದ್ದ ಕೂಡಲೇ. ಅದಕ ಇತ್ತಿತ್ಲಾಗ ನಾ ನಿನ್ ಮುಂದ ಕೂಡೂದ ಕಡಿಮಿ ಮಾಡೇನಿ. ತಪ್ಪಿ ಇವತ್ತ ನಿಂಗ ಸಿಕ್ಕಬಿಟ್ಟೆ ನೋಡು,” ಅಂತ ಗೊಣಗುತ್ತ ಗೋಪಾಲ ಎದ್ದು ಹೊರನಡೆಯಬೇಕೆನ್ನುವಷ್ಟರಲ್ಲಿ, ಪಡಸಾಲೆಯಲ್ಲಿ ಚಹಾ ಕುಡಿಯತ್ತ ಇದನ್ನೆಲ್ಲಾ ಕೇಳುತ್ತಿದ್ದ ರಾಮರಾಯರರು ನಡುಮನೆಗೆ ಬಂದು, “ಹಂಗ್ಯಾಕಂತೀಯೋ ಗೋಪಾಲ? ಅಲ್ಲಾ ನೀನ ನೋಡು, ನೋಡಿದ ನಾಕು ಕನ್ಯಾನೂ ವಲ್ಲೆ ಅಂತನ ಅಂದಿ. ನಿನ್ನೀದಂತೂ ಅಗ್ದಿ ಹೇಳಿ ಮಾಡಿಸಿದ್ ಜೋಡಿ ಆಗ್ತಿತ್ತು. ಮತ್ತ…. ಹಂಗೇನರ ನಿನ್ನ ಮನಸ್ಸನ್ಯಾಗ ಯಾರರ ಇದ್ರ ಹೇಳಿಬಿಡು. ಕಡೀಗೆ ಹಂಗರ ಆಗ್ಲಿ. ತಪ್ಪೇನದ..?” ಅಂತ ರಾಮರಾಯರು ಗೋಪಾಲನ ಮುಖವನ್ನೇ ನೋಡುತ್ತ, ಅವನ ಉತ್ತರವನ್ನು ನಿರೀಕ್ಷಿಸುತ್ತ ನಿಂತರು. ಗೋಪಾಲ ಇನ್ನೇನು ಬಾಯಿ ತೆರೆದು ಏನೋ ಉಸುರಬೇಕೆನ್ನುವಷ್ಟರಲ್ಲಿ, ಹೊರಗಿನಿಂದ ಮಹದೇವ, “ಧಣೇರ….” ಅಂತ ಕೂಗಿಕೊಂಡದ್ದು ಕೇಳಿಸಿ, ರಾಮರಾಯರು ಮತ್ತೆ ಪಡಸಾಲೆಗೆ ನಡೆದರು. “ಪುಣ್ಯ ಬರ್ಲ್ಯಪಾ ಮಹದೇವ ನಿನಗ,” ಅಂತ ಗೋಪಾಲ ಅಲ್ಲಿಂದ ಜಾಗ ಖಾಲಿ ಮಾಡಿ, ತಂಬಿಗೆ ಹಿಡಿದು ಬಹಿರ್ದೇಸೆಗೆಂದು ಹೊರಟ.
“ಧಣೇರ… ಈಗ ಬಸ್ಟ್ಯಾಂಡಿನ್ಯಾಗ ಯಾರೋ ಮೂರು ಮಂದಿ ಬಂದಿಳದ್ರು, ಆ ಗಣಮಗ ನೋಡಾಕ ನಿಮ್ಮ ಸತೀಶಪ್ಪನಂಗ ಇದ್ದ ರೀ ಪಾ. ಹೌದ ಅಲ್ಲ ನನಗೂ ಖಾತ್ರೀ ಆಗಲಿಲ್ರೀ ಭಾಳ ದಿನ ಆತು ನೋಡಿ. ಅದಕ ಅವರ್ನೇನು ಮಾತಾಡಸ್ಲಾರ್ದ ನಿಮ್ ಕಡೆ ಓಡಿ ಬಂದೆ ರೀ,” ಅಂತ ಮಹದೇವ ಏದುಸಿರುತ್ತ ಹೇಳಿದ. ಈ ಮಾತು ತಂಬಿಗೆ ಹಿಡಿದು ಅಗಸಿಯ ಕಡೆ ಹೊರಟಿದ್ದ ಗೋಪಾಲನ ಕಿವಿಗೆ ಬಿದ್ದು, ಒಂದು ಕ್ಷಣ ಅವನಲ್ಲಿ ಮಿಂಚಿನ ಸಂಚಾರವಾದಂತಾಗಿ, ಕಣ್ಣುಗಳು ಹೊಳೆದವು. ಅವನು ಮನಸ್ಸು ಅರಳಿ ಉಲ್ಲಸಿತವಾಯಿತು. ಮುಖದ ಮೇಲೆ ಏನೂ ತೋರ್ಗೊಡದೇ ಹೊರಗೆ ಹೋಗದೇ ತಿರುಗಿ ವಾಡೆಯ ಒಳಕ್ಕೇ ಬಂದ. ಇದನ್ನೆಲ್ಲ ಅತೀ ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಮರಾಯರು, “ಯಾಕೋ ತಿರುಗಿ ಬಂದ್ಯಲ್ಲಾ,” ಅಂತ ಏನೂ ತಿಳಿಯದವರ ಹಾಗೆ ಕೇಳಿದರು. “ನಾ ಇಲ್ಲೇ ಪಾಯಖಾನಿಗೆ ಹೋಕ್ತೇನಿ,” ಅಂತ ಅವರ ಮುಖವನ್ನೂ ನೋಡದೆ, ಗೋಪಾಲ ವಾಡೆಯ ಒಳಗೆ ನಡೆದ. ಏನೋ ಅರ್ಥ ಮಾಡಿಕೊಂಡವರಂತೆ ರಾಮರಾಯರು ಒಮ್ಮೆ ಜೋರಾಗಿ ಉಸಿರು ಬಿಟ್ಟು, ಮಹದೇವನ ಕಡೆ ತಿರುಗಿ, “ಸತೀಶ ಬಂದ್ನಾ..? ಏ… ಅಂವ ಇರ್ಲಿಕ್ಕಿಲ್ಲ ಬಿಡು. ನೀ ಬ್ಯಾರೆ ಯಾರ್ನೋ ನೋಡಿರಬೇಕ,” ಅಂತ ನಂಬಲಾಗದ ಮನಸ್ಥಿತಿಯಿಂದ ಹೇಳುತ್ತಿರುವಾಗಲೇ, ಒಳಗಿನಿಂದ ಬಂದ ಅನಸೂಬಾಯಿ, “ಆ ಭಾಡ್ಯಾ ಇಲ್ಲಿಗ್ಯಾಕ ಬರ್ತಾನ..? ಇಷ್ಟು ದಿನ ನಾವು ಇದ್ದೀವೋ ಇಲ್ಲೋ ಅಂತನೂ ತಿರುಗಿ ನೋಡ್ಲಾರ್ದಾಂವ ಅಂವ!” ಅಂತ ಅನಸೂಬಾಯಿ ಮಾತು ಮುಗಿಸೋ ಮುನ್ನವೇ ಸತೀಶನ ಸಂಸಾರ ವಾಡೆಯ ಅಗಸಿಯಲ್ಲಿ ಪ್ರತ್ಯಕ್ಷವಾಗಿತ್ತು.
“ಇಲ್ನೋಡು… ಈಗ ಹೇಳ್ತೇನಿ, ಅವರ ಮುಂದ ನೀ ಏನೂ ಮಾತಾಡ್ತಕ್ಕದ್ದಲ್ಲ ಮತ್ತ…” ಅಂತ ತಮ್ಮ ಹೆಂಡತಿಗೆ ಮಾತ್ರ ಕೇಳಿಸುವ ಹಾಗೆ ರಾಮರಾಯರು ತಾಕೀತು ಮಾಡಿ, ಬಂದವರು ಯಾರೆಂದು ನೋಡುವವರ ಹಾಗೆ ಸತೀಶನ ಕಡೆಗೇ ನೋಡುತ್ತ ನಿಂತರು. ಅವರೆಲ್ಲಾ ತುಸು ಮುಂದೆ ಬಂದ ಮೇಲೆ, ರಾಮರಾಯರು, “ಓಹೋ ಸತೀಶ… ಬರ್ರಿ ಬರ್ರಿ. ಎಷ್ಟು ದಿವಸ ಆಗಿತ್ತು ನಿಮ್ಮನ್ನೆಲ್ಲಾ ನೋಡಿ. ಭಾಳ ಛಲೋ ಮಾಡಿದ್ರಿ ಬಂದು. ಎಲ್ಲಾರು ಅರಾಮಾ..?” ಅಂತೆಲ್ಲ ಇಲ್ಲದ ಭಾವನೆಗಳನ್ನು ಪ್ರಯತ್ನಪೂರ್ವಕವಾಗಿ ತುಂಬಿಕೊಳ್ಳುತ್ತ, ರಾಮರಾಯರು ಅವರನ್ನು ಸ್ವಾಗತಿಸಿ, ಉಭಯಕುಶಲೋಪರಿಯನ್ನು ಮುಗಿಸಿದರು. ಬೆಂಗಳೂರಿನಿಂದ ಬಂದವರಿಗೆ ರಾಮರಾಯರ ಈ ಆದರಕ್ಕೆ ಪ್ರತ್ಯಾದರ ತೋರುವ ಮುಗುಳುನಗೆಯನ್ನು ತಮ್ಮ ಮೋರೆಗಳ ತಂದುಕೊಳ್ಳಲಿಕ್ಕೇನೂ ಅಷ್ಟು ಕಷ್ಟವಾದ ಹಾಗೆ ಕಾಣಲಿಲ್ಲ.
“ಅಯ್ಯ… ಸತೀಶನೂ…? ಬಾರಪಾ ಸತೀಶ. ಅಂತೂ ಇವತ್ತರ ಈ ವಾಡೆ ನೆನಪಾತಲ್ಲ ನಿನಗ.” ಅಂತ ಅನಸೂಬಾಯಿ ಅನ್ನುವಷ್ಟರಲ್ಲಿ ರಾಮರಾಯರ ವಕ್ರ ದೃಷ್ಟಿ ಅವಳ ಆ ಮಾತನ್ನು ಅಲ್ಲಿಗೇ ನಿಲ್ಲಿಸಿತ್ತು. “ಹಾಂ…ನಿಮ್ಮನ್ನೆಲ್ಲಾ ಭೆಟ್ಟಿ ಆಗಬೇಕನ್ನಸ್ತು. ಅದಕ್ಕ ಬಂದು ಬಿಟ್ವಿ,” ಅಂತೇನೋ ಭಾವನೆಗಳೇ ಇಲ್ಲದ ನಾಟಕೀಯ ಮಾತುಗಳನ್ನಾಡುತ್ತ ಸತೀಶ ಬ್ಯಾಗುಗಳನ್ನು ಹಿಡಿದು ಕೋಣೆ ಸೇರಿದ. “ಬರ್ರ್ಯವಾ ಒಳಗ. ಕೈ ಕಾಲು ತೊಳಕೊಳ್ಳೀಕಂತ್ರಿ,” ಅಂತ ಅನಸೂಬಾಯಿ ಮನೆಗೆ ಬಂದ ತಾಯಿ ಮಗಳನ್ನು ಒಳಗೆ ಕರೆಯುವಾಗ, ಅಕ್ಷತಾಳನ್ನು ಕಂಡು, ರಾಮರಾಯರ ಕಡೆ ತಿರುಗಿ ನೋಡಿದರು. ರಾಮರಾಯರು ತಮ್ಮ ಪತ್ನಿಯ ದೃಷ್ಟಿ ಸಂದೇಶವನ್ನು ತಿಳಿದುಕೊಂಡು ಸೂಕ್ಷ್ಮವಾಗೊಮ್ಮೆ ತಲೆಯಾಡಿಸಿದರು.
ಬಹಿರ್ದೇಸೆಗೆ ಹೋಗಿದ್ದ ಗೋಪಾಲ ಕೈ ಕಾಲು ತೊಳೆದು ಬಚ್ಚಲದಿಂದ ಹೊರಗೆ ಕಾಲಿಡುತ್ತಲೇ ಅಕ್ಷತಾಳನ್ನು ಎದುರುಗೊಂಡ. ಇಬ್ಬರ ದೃಷ್ಟಿಗಳೂ ಬೆರೆತು, ಇಬ್ಬರೂ ತಮ್ಮ ಅಸ್ತಿತ್ವವನ್ನೇ ಮರೆತ ನಿರ್ಜೀವ ಗೊಂಬೆಗಳಂತೆ ನಿಂತುಬಿಟ್ಟರು. ಎಷ್ಟೋ ವರ್ಷಗಳ ನಂತರ ಭೇಟಿಯಾದರೂ ದಿನವೂ ನೋಡುವ ಆಪ್ತ ಮುಖಗಳಂತೆ ಕಂಡವು ಪರಸ್ಪರರ ಮುಖಗಳವರಿಗೆ. ಇವರಿಬ್ಬರೂ ಬೆಳೆದಂತೆ, ಅವರ ನೆನಪುಗಳೂ ಬೆಳೆದಿದ್ದವು. ಅವರು ತಮ್ಮ ನೆನಪುಗಳಲ್ಲಿಯೂ ಬೆಳೆದಿದ್ದರು. ಯಾವುದೋ ಗತ ಕಾಲದ ಇವರ ಹುಡುಗಾಟ, ಒಡನಾಟಗಳಿಗೆ ಸಾಕ್ಷಿಯಾಗಿದ್ದ ವಾಡೆಯ ಹಿತ್ತಲೇ ಇಂದು ಇವರೀರ್ವರ ಅಪೂರ್ವ ಮಿಲನದ ಸಾಕ್ಷಿಯೂ ಆಗಿತ್ತು. ಹಿತ್ತಲಿನ ಗಿಡ, ಮರ, ಬಳ್ಳಿ, ಪ್ರತಿಯೊಂದು ಮಣ್ಣಿನ ಕಣವೂ ಕೂಡ ಹಿಂದಿನ ಆ ದಿನಗಳ ನೆನಪಿನಲ್ಲಿ ಮಿಂದು ಉಸಿರುಗಟ್ಟಿ ನಿಂತಂತಾಗಿದ್ದವು. ಅಂದು ಇಲ್ಲಿಂದ ಬೀಸಿ ಹೋದ ಆ ಗಾಳಿಯೂ ಸಹ ಎಲ್ಲಿಂದಲೋ ಬಂದು ಇಲ್ಲಿ ಮತ್ತೊಮ್ಮೆ ಬೀಸಿ ಜೀವ ತುಂಬಿತ್ತು. ಅದೇ ಗಾಳಿಯಲ್ಲಿ ತೇಲಿ, ಇವರಿಬ್ಬರೂ ತಮ್ಮ ಬಾಲ್ಯಕ್ಕೆ ಮರಳಿ, ಮತ್ತೆ ಬೆಳೆದು ಪರಸ್ಪರ ಪ್ರೇಮಿಗಳಾಗಿ ನಿಂತಿದ್ದರು!
ಯಾವಾಗಲೋ ಕರಿಬೇವಿಗಾಗಿ ಹಿತ್ತಲಿಗೆ ಬಂದ ಅನಸೂಬಾಯಿ, ಇಬ್ಬರೂ ನಿಂತಿದ್ದನ್ನು ನೋಡಿದಾಗ ಎಲ್ಲದರ ಅರಿವೂ ಅವಳಿಗಾಗಿತ್ತು. ನಿಟ್ಟುಸುರಿ, ಮನಸಾರೆ ಮುಗುಳ್ನಕ್ಕು, ಕೂಡಲೆ ಎಚ್ಚೆತ್ತು ನಗು ತೋರ್ಗೊಡದೆ, “ಏ ಗೋಪ್ಯಾ ಲಗು ನಡಿ. ಸ್ನಾನ, ಪೂಜಿ ಮಾಡಿಟ್ಟು ತ್ವಾಟಕ್ಕ ಹೋಗೋದಿಲ್ಲೇನು?” ಅಂತಂದು ಅಲ್ಲಿ ಸೃಷ್ಠಿಯಾಗಿದ್ದ ನೀರವತೆಯನ್ನು ಭೇದಿಸಿದ್ದಳು.
ಗೋಪಾಲನೂ ತಕ್ಷಣವೇ ವಾಸ್ತವಕ್ಕೆ ಮರಳಿ, ಅತ್ತೆಗೆ ಅನುಮಾನ ಬರಬಾರದೆಂದು, “ಅಕ್ಷತಾ ಅಲ್ಲಾ ನೀ… ಯಾವಾಗ ಬಂದೀ? ಅರಾಮಾ?” ಅಂತ ಏನೂ ಗೊತ್ತೇ ಇರದವನಂತೆ ಕೇಳುತ್ತಾ ಅವಳ ಉತ್ತರಕ್ಕೂ ಕಾಯದೇ ಹೊರಟು ಹೋಗಿದ್ದ. ಹೂಂ ಎಂಬಂತೆ ತಲೆಯಾಡಿಸುತ್ತ ಅಕ್ಷಿಯೂ ಬಚ್ಚಲದ ಕಡೆ ನಡೆದಿದ್ದಳು. ಸ್ನಾನ, ಪೂಜೆಗಳನ್ನು ಮಾಡುವಾಗಲೆಲ್ಲ ಗೋಪಾಲನ ಮನಸ್ಸು ಅಕ್ಷಿಯ ಸುತ್ತಲೇ ಸುತ್ತುತ್ತಿತ್ತು. ಇಂದು ತೋಟಕ್ಕೆ ಹೋಗುವಾಗ ಅವಳೂ ಬರಬಹುದೇ, ತಾನು ಕರೆದೊಯ್ಯಬಹುದೇ ಎಂಬ ಯೋಚನೆಗಳೇ ಅವನ ತಲೆ ತುಂಬಿದ್ದವು. ಅಂತೂ ಹೇಗೋ ಪೂಜೆ ಮುಗಿಸಿ ಮೇಲೆದ್ದ.
“ಲೇ ಗೋಪ್ಯಾ… ದೇವರಿಗೆ ಮಂಗಳಾರತಿನ ಮಾಡ್ಲಾರದ ಎದ್ದುಬಿಟ್ಯಲ್ಲೋ? ಎಲ್ಲ್ಯದ ನಿನ್ನ ಲಕ್ಷ ಇವತ್ತ,” ಅಂತ ಇವನನ್ನೇ ಗಮನಿಸುತ್ತಿದ್ದ ಅನಸೂಬಾಯಿ ವದರಿಕೊಂಡಳು. ಅವಳ ಮಾತನ್ನು ಕಿವಿಗೂ ಹಾಕಿಕೊಳ್ಳದೇ, ಉಟ್ಟ ಧೋತಿಯ ಮೇಲೆಯೇ ದೀಪಾವಳಿಯ ಹೊಸ ಅಂಗಿ ತೊಟ್ಟು, ಅವಳಿದ್ದ ಕೋಣೆಯಲ್ಲೊಮ್ಮೆ ಇಣುಕಿ, “ನಾ ತ್ವಾಟಕ್ ಹೊಂಟೇನೀ…” ಅಂತ ಎಲ್ಲರಿಗೂ ಕೇಳೋ ಹಾಗೆ ಒಮ್ಮೆ ಕೂಗಿ ಹೋಗಿಯೇಬಿಟ್ಟ. “ಉಪ್ಪಿಟ್ಟು ತಿಂದು ಹೋಗೋ,” ಅಂತ ಅನಸೂಬಾಯಿ ಕೂಗಿದ್ದು ಅವನಿಗೆ ಕೇಳಿಸಲೇ ಇಲ್ಲ. ತೋಟವೆಲ್ಲಾ ತಿರುಗಿ, ಕೆರೆಯ ದಂಡೆಯಲ್ಲಿ ಕಾದು ಕಾದು, ಕೊನೆಗೂ ಅವಳು ಬರದೇ ಇದ್ದಾಗ ಹತಾಶನಾಗಿ, ಸಪ್ಪೆ ಮೋರೆ ಹಾಕಿಕೊಂಡು ವಾಡೆಗೆ ಬಂದಾಗ, ರಾಮರಾಯರು ಅವನ ಮುಖ ನೋಡಿ ಬಹಳ ಸಂಕಟಪಟ್ಟರು. ಬಾಗಿಲ ಸಂದಿನ ಮರೆಯಲ್ಲಿ ಇವನನ್ನು ನೋಡಿದ ಅಕ್ಷಿ ಅತ್ತಳು. ಅನಸೂಬಾಯಿ ಅಕ್ಷಿಯನ್ನು, ಗೋಪಾಲ-ಅಕ್ಷಿಯರ ಮದುವೆಗೆ ಅವಳ ತಾಯಿಯಿಂದ ಒಗಟು ಮಾತುಗಳಲ್ಲಿಯೇ ಸೂಕ್ಷ್ಮವಾಗಿ ಕೇಳಿ ಪಡೆದ ಖಡಾಖಂಡಿತ ತಿರಸ್ಕಾರವನ್ನು ನೆನೆದು ಮರಗುತ್ತ ಒರಗಿದ್ದಳು. ಮನೆಯಲ್ಲಿ ಎಲ್ಲರದ್ದೂ ಊಟವಾಗಿ, ಊರಿಂದ ಬಂದವರು ಆಯಾಸದ ನೆಪದಿಂದ ನಿದ್ರೆ ಬಾರದಿದ್ದರೂ, ಮಾತನಾಡಲು ಇಷ್ಟವಿಲ್ಲದೇ ಮಲಗಿ ಹೊರಳಾಡಿದರು.
***
“ಮತ್ತ…ತ್ವಾಟದ ಕೆಲಸಗಳು ಹೆಂಗ ನಡದಾವು? ಪಾಪ ನೀವು ಒಬ್ಬರ ಆಗಿಬಿಡ್ತೀರಿ ಈಗ,” ಅಂತ ಸತೀಶ ಸಾಯಂಕಾಲ ಚಹದ ಲೋಟ ಕೈಯಲ್ಲಿ ಹಿಡಿದು, ಸಹಜವಾಗಿ ರಾಮರಾಯರೊಡನೆ ಮಾತಿಗಿಳಿದ.
“ಹಂಗೇನೂ ತ್ರಾಸಂತಿಲ್ಲ. ಗೋಪಾಲ ಇದ್ದಾನ. ಅವನ ಎಲ್ಲಾ ನೋಡೋದು, ಮಾಡೋದು. ನಾ ತ್ವಾಟದ ಕಡೆ ಹೋಗಿ ಎಷ್ಟೋ ತಿಂಗಳ ಆದ್ವು. ಆಗ್ವಲ್ತು ಇತ್ತಿತ್ಲಾಗ. ವಯಸ್ಸಾತು…” ಅಂತ ಲೋಕಾರೂಢಿ ನಕ್ಕರು ರಾಮರಾಯರು.
“ಹುಂ… ಈಗ ಹ್ಯಾಂಗ ಕೇಳ್ತಾನ ನೋಡಿದ್ಯಾ ಗೋಪಾಲ ಇಂವಾ. ಮತ್ಯದರಾಗ ಪಾಲು ಕೇಳ್ಳಿಕ್ಕೆ ಬಂದಾನೋ ಏನ ಈಗ. ಉಳಸ್ಯಾನರ ಏನು? ಎಲ್ಲಾ ತಾನ ಕೂತು ಹಾಳ ಮಾಡ್ಯಾನ,” ಅಂತ ನಡುಮನೆಯಲ್ಲಿ ಅನಸೂಬಾಯಿ ಗೋಪಾಲನ ಮುಂದೆ ಪಿಸುಗುಟ್ಟಿದಳು. ಅವನು ಮಾತ್ರ ತನ್ನದೇ ಲೋಕದಲ್ಲಿದ್ದ. ಅತ್ತ ಅಕ್ಷಿ ಮತ್ತು ಅವಳ ತಾಯಿ ಚಹ ಬೇಡವೆಂದು ಹಿತ್ತಿಲಲ್ಲಿ ಹೋಗಿ ಕುಳಿತಿದ್ದರು. ಅನಸೂಬಾಯಿಯ ಕಿವಿಗಳು ಮಾತ್ರ ಪಡಸಾಲೆಯಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನೇ ಕದ್ದಾಲಿಸುತ್ತಿದ್ದವು.
“ಹೌದು ಬಿಡ್ರಿ. ಗೋಪಾಲ ಎಲ್ಲಾ ದೇಖರಿಕಿ ಮಾಡ್ತಾನ.” ಅಂದ ಸತೀಶ. ರಾಮರಾಯರು ಸುಮ್ಮನೆ ತಲೆಯಾಡಿಸುತ್ತ ಕೂತರು. ಕೆಲನಿಮಿಷಗಳ ಕಾಲ ಯಾರೂ ಮಾತಾನಾಡಲಿಲ್ಲ. ಮತ್ತೆ ಸತೀಶನೇ ಮೌನ ಮುರಿದು,” ನನಗ ಸಿಕ್ಕ ಆಸ್ತಿ ಎಲ್ಲ ಅವಸರ ಮಾಡಿ ಮಾರಿಕೊಂಡು ತಪ್ಪು ಮಾಡಿದೆ ನಾನು. ಈಗ ಮಗಳ ಮದುವೆಗೆ ಅಂತ ಸ್ವಲ್ಪ ಏನಾದ್ರೂ ಇದ್ದಿದ್ರ ಸಹಾಯ ಆಕ್ತಿತ್ತು.”
ಸತೀಶನ ಮಾತುಗಳನ್ನು ಬಹಳ ಗಂಭೀರವೆನ್ನುವಂತೆ ಕೇಳುತ್ತಿದ್ದ ರಾಮರಾಯರಿಗೆ, ಧಿಡೀರನೆ ಇವು ಸಹಜ ಹಿತಚಿಂತಕ ಮಾತುಗಳೆನಿಸದೆ, ಹಳೆಯ ಆಸ್ತಿಯನ್ನು ಕಬಳಿಸಿದ್ದಲ್ಲದೇ ಈಗ ಅಳಿದುಳಿದ ಸ್ವಲ್ಪದರಲ್ಲೂ ಪಾಲು ಕೇಳುವ ಅಥವಾ ಜಗಳವಾಡಿ ಇದ್ದಷ್ಟನ್ನೂ ಪೂರ್ತಿ ಲಪಟಾಯಿಸಿಬಿಡುವ ಸತೀಶನ ಪೂರ್ವನಿಯೋಜಿತ ಪಿತೂರಿಯ ಪೀಠಿಕೆ ಇರಬಹುದೆಂದೆನಿಸತೊಡಗಿತು. ಕ್ಷಣಕಾಲ ತೀವ್ರವಾಗಿ ಯೋಚಿಸುವವವರಂತೆ ಕುಳಿತವರು, ಏನೋ ಉಪಾಯ ಹೊಳೆದವರಂತೆ, ಬಹಳ ಸ್ಥಿತಿಪ್ರಜ್ಞರಾಗಿ ಸತೀಶನ ಕಡೆ ತಿರುಗಿ, “ನೋಡು ಸತೀಶ, ವಾಸಪ್ಪನೋರ ಋಣ ನನ್ನ ಮ್ಯಾಲೆ ಭಾಳ ಅದ ಅನ್ನೋ ಕಾರಣಕ್ಕ ನಾನು, ನಮ್ಮಾಕಿ ಈ ವಾಡೇಕ್ಕ ಬಂದ್ವಿ ಹೊರತು ಆಸ್ತಿ ಆಶಾದಿಂದ ಅಂತೂ ಅಲ್ಲ. ದೇವರು ನಮಗ ಏನೂ ಕಡಿಮಿನೂ ಮಾಡಿಲ್ಲ ಬಿಡು. ಈಗೇನದ ಅಂದ್ರ ಗೋಪಾಲಗೂ ಜವಾಬ್ದಾರಿ ಬಂದದ, ವಾಡೇದ ಖರೇ ವಾರಸ್ದಾರನೂ ಅವನ ಅಲ್ಲೇನು ಮತ್ತ. ಅವಂಗೂ ಒಂದು ಲಗ್ನ ಅಂತ ಆದಮ್ಯಾಲ ಎಲ್ಲಾ ಅವಂಗ ಒಪ್ಪಿಸಿ ನಮ್ಮ ಭಾರ ಕಳಕೊಳ್ಳೋ ವಿಚಾರದಾಗಿದ್ದೀವಿ,” ಹಿತ್ತಲಿನಿಂದ ಪಡಸಾಲೆಗೆ ಬಂದ ನಂದಾ ಹಾಗೂ ಅಕ್ಷಿ, ರಾಮರಾಯರ ಮಾತು ಕೇಳುತ್ತ ಅವರ ಮಾತಿನ ತಲೆ-ಬುಡಗಳೇ ಅರ್ಥವಾಗದವನಂತೆ ಮೋರೆ ಹಾಕಿಕೊಂಡು ಕುಳಿತ ಸತೀಶನನ್ನು ನೋಡಿ, ಅಂಥದ್ದೇನಾಯಿತೆಂಬಂತೆ ರಾಮರಾಯರ ಕಡೆ ನೋಡುತ್ತ ನಿಂತರು.
ನಂದಾಳಿಗೇ ಎನ್ನುವಂತೆ ರಾಮರಾಯರು ಅವಳತ್ತ ನೋಡುತ್ತ, “ಇನ್ನ…..ವಾಸಪ್ಪನೋರು ನಿಮಗೂ ಏನು ಸ್ವಲ್ಪ ಮಾಡಿಲ್ಲ ಅನ್ನೋದನ್ನ ಮರೀಬಾರದು ನೀವು. ನನ್ನ ಹಂಗ ನೀವೂ ಅವರ ಋಣದಾಗ ಇದ್ದೀರಿ. ಆ ಋಣ ಸ್ವಲ್ಪ ಕಳಕೊಳ್ಳಿಕ್ಕೆ ಈಗ ಸಮಯ ಬಂದದ. ಗೋಪಾಲಗ ನಿಮ್ಮ ಮಗಳನ್ನ ಕೊಟ್ಟು ಲಗ್ನ ಮಾಡಿದ್ರ, ಋಣನೂ ತೀರಿದಂಗಾಕ್ತದ, ಗೋಪಾಲಗೂ ಒಂದು ಜೀವದಾಸರ ಸಿಕ್ತದ, ಮತ್ತ….ನಿನ್ನ ಅಪೇಕ್ಷದ ಹಂಗ ಆಸ್ತಿನೂ ನಿನ್ನ ಮಗಳಿಗೇ ದಕ್ಕತದ. ಏನಂತೀ ಸತೀಶ?” ಅಂತ ಭಾರವಿಳಿಸಿದವರಂತೆ ನಿಟ್ಟುಸಿರು ಬಿಟ್ಟು ಲೋಟದ ತಳದಲ್ಲಿದ್ದ ಕೊನೆಯ ಗುಟುಕು ಚಹ ಗುಟುಕರಿಸಿದರು. ಎಲ್ಲ ಮಾತುಗಳನ್ನೂ ಗಮನವಿಟ್ಟು ಕೇಳುತ್ತಿದ್ದ ಅನಸೂಬಾಯಿ ರಾಮರಾಯರ ಸಮಯ ಸಾಧಿಸುವ ಕಲೆ, ಮಾತಿನ ಚಾತುರ್ಯಕ್ಕೆ ಮನದಲ್ಲೇ ಪ್ರಶಂಸಿಸಿದಳು. ಗೋಪಾಲನ ಅರಳಿದ ಕಂಗಳನ್ನು, ಪ್ರಯತ್ನಪೂರ್ವಕವಾಗಿ ಹಿಡಿದಿಟ್ಟುಕೊಂಡ ಮಂದಹಾಸವನ್ನು ಅವಳು ಗಮನಿಸಿದಾಗ, ಏನೋ ನೆನಪಾದಂತೆ ತಲೆ ಕೆರೆಯುತ್ತ ಗೋಪಾಲ ಹಿತ್ತಲಿಗೆ ನಡೆದ. ಅನಸೂಬಾಯಿ ತಲೆಯಾಡಿಸಿ ನಕ್ಕಳು.
ರಾಮರಾಯರ ಮಾತು ಈಗ ಮುಗಿದಿದ್ದರೂ, ಅವರ ಮಾತಿನ ಉದ್ದೇಶ ಈಗ ತಿಳಿದಿದ್ದರೂ ಸತೀಶನ ಮುಖದ ಗಂಟು ಮಾತ್ರ ಸಡಿಲಗೊಳ್ಳಲಿಲ್ಲ. ಬದಲಾಗಿ, ಸಮ ಅಂತಸ್ತಿನ ಸ್ನೇಹಿತನಿಗೆ ಬೀಗನಾಗುವೆನೆಂದು ಕೊಟ್ಟ ಭಾಷೆ, ನಡೆಯುತ್ತಿರುವ ಅದರ ಸಿದ್ಧತೆಗಳು, ಮಾತು ತಪ್ಪಿದರೆ ಆಗುವ ಅನಾಹುತಗಳು, ನಂದಾ ತಾಳಬಹುದಾದ ರೌದ್ರಾವತಾರಗಳೆಲ್ಲ ಒಂದು ಕಡೆಯಾಗಿ, ಈಗಷ್ಟೇ ರಾಮರಾಯರು ಸರಿಯಾಗಿ ತಿವಿದು ಮನವರಿಕೆ ಮಾಡಿ ಎಚ್ಚರಿಸಿದ ಋಣ, ಕರ್ತವ್ಯ, ಕೊಟ್ಟ ಮಾತುಗಳು ಮತ್ತೊಂದು ಕಡೆ, ಅಕ್ಷಿ-ಗೋಪಾಲರ ಸರಿಹೊಂದದಿರಬಹುದಾದ ಓದು, ಬೆಳೆದ ಪರಿಸರ, ಜೀವನ ಶೈಲಿ….ಇವುಗಳೆಲ್ಲ ಮಗದೊಂದು ಕಡೆಯಾಗಿ ಅವನನ್ನು ಮತ್ತಷ್ಟು ಮಂಕಾಗಿಸಿದ್ದವು. ಅವನೇನೂ ಮಾತನಾಡದ ಸ್ಥಿತಿಯಲ್ಲಿದ್ದುದನ್ನು ಗಮನಿಸಿದ ನಂದಾ ತಾನೇ ಮಾತಿಗಿಳಿದು, ಇದ್ದ ಸಂಗತಿಗಳನ್ನೆಲ್ಲಾ ಮುಲಾಜಿಲ್ಲದೆ ನೇರವಾಗಿ ಹೇಳಿ, “ನಾವು ಇಲ್ಲಿಗೆ ಬಂದದ್ದು ಅಕ್ಷಿಗೊಂದು ಚೇಂಜ್ ಬೇಕಿತ್ತು ಅಂತಷ್ಟೇ. ಈ ನಿಮ್ಮ ಬಿಡಿಗಾಸಿಗಾಗಲೀ, ಡಾಕ್ಟರ್ ಆಕ್ತಾ ಇರೋ ನನ್ ಮಗಳನ್ನ ಈ ಹಳ್ಳಿ ಕೊರ್ಮನಿಗೆ ಕೊಟ್ಟು ಮದ್ವೆ ಮಾಡೋದಕ್ಕಾಗಲೀ ಅಲ್ಲ,” ಅಂದು ದುಃಖಿತಳಾಗಿ ನಿಂತ ಅಕ್ಷಿಯ ಕೈ ಹಿಡಿದೆಳೆದು, “ಬಾರೆ, ಬ್ಯಾಗ್ ತಗೋ ಇನ್ನು,” ಎಂದು ಗದರಿಸಿ, ಅಸಹಾಯಕನಾಗಿ ಕುಳಿತ ಸತೀಶನನೊಮ್ಮೆ ಕೆಕ್ಕರಿಸಿ ನೋಡಿ ಮಗಳೊಡನೆ ಕೋಣೆ ಹೊಕ್ಕಳು.
ನಂದಾಳ ಜೋರು ದನಿಯ ಮಾತು, ಅಕ್ಷಿಯ ಅಳುವಿನ ಬಿಕ್ಕು ಹಿತ್ತಲಿನಲ್ಲಿದ್ದ ಗೋಪಿಗೆ ಕೇಳದಿರಲಿಲ್ಲ. ಮತ್ತೆ ಒಬ್ಬಂಟಿಯಾಗಿದ್ದ ಅವನೀಗ ಇಷ್ಟು ದಿನ ಅವಳಿಲ್ಲದ ಬರಿಯ ನೆನಪುಗಳ ಗೂಡಾಗಿದ್ದ ಹಿತ್ತಲಿನಲ್ಲಿ. ಅಂದೆಂದೋ ಅದೇ ಅಂಗಳದಲ್ಲಿ ಈ ಎರಡು ಹೃದಯಗಳನ್ನು ಬೇರ್ಪಡಿಸಿದ ಆ ಬಿರುಗಾಳಿ ಮತ್ತೆ ಬಂದು ಅವುಗಳನ್ನು ಬೆಸೆಯಬಹುದೇನೋ ಎಂಬ ಚಮತ್ಕಾರದ ನಿರೀಕ್ಷೆಯಲ್ಲಿ ಅವಳು ಅಂಗಳದಲ್ಲಿ.
 

‍ಲೇಖಕರು avadhi

May 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: