ಒಂದು ಅಡಲಸೆಂಟ್ ಆತ್ಮಚರಿತ್ರೆ

ನನ್ನ ಎರಡನೇ ಪುಸ್ತಕ ಬಿಡುಗಡೆಯಾಯಿತು. ಸದ್ದು ಇರಲಿಲ್ಲ, ಸಡಗರವಿತ್ತು. ನಮ್ಮ ಆಫೀಸಿನಲ್ಲೇ ನಡೆಯಿತು. ಬಿಡುಗಡೆಗೊಳಿಸಿದವರು ಜೋಗಿ ಅವರು.

ನಮ್ಮ ವಿಭಾಗದ ಚೇತನ್ ನಾಡಿಗೇರ್, ಕಟ್ಟೆ ಗುರುರಾಜ್‌, ರಾಜೇಶ್ ಶೆಟ್ಟಿ, ರವಿಪ್ರಕಾಶ್ ರೈ, ವಿಜಯ ಭರಮಸಾಗರ, ಪ್ರಿಯಾ ಕೆರ್ವಾಶೆ ಹಾಜರಿದ್ದರು.

ಪುಸ್ತಕದ ಹೆಸರು- ರಥಬೀದಿ ಎಕ್ಸ್ ಪ್ರೆಸ್.

ಇದು ನನ್ನ ಬಾಲ್ಯ ಯೌವನದ ಮಧ್ಯೆಯ ಜರ್ನಿಯ ಆತ್ಮಚರಿತ್ರೆ.

ಜೋಗಿ ಅವರು ಮುನ್ನುಡಿಯಲ್ಲಿ ಹೇಳಿದಂತೆ ಕನ್ನಡದ ಮೊದಲ ಅಡಲಸೆಂಟ್ ಆತ್ಮಚರಿತ್ರೆ

vikas negiloni

ಇದು ಕಿರಣ್ ಡಿಸ್ಟ್ರಿಬ್ಯೂಟರ್ಸ್ ಪ್ರಕಾಶನ ಹೊರತಂದ ಪುಸ್ತಕದ ಹೆಸರು-ರಥಬೀದಿ ಎಕ್ಸ್ ಪ್ರೆಸ್: ಬಾಲ್ಯ ಟು ಯೌವನ.

ಲೇಖಕ ವಿಕಾಸ ನೇಗಿಲೋಣಿ.

ಇದು ಮಲೆನಾಡಿನಿಂದ ಉಡುಪಿಗೆ ಬಂದು, ಹಾಸ್ಟೇಲ್ನಲ್ಲಿದ್ದು, ಮಠಗಳಲ್ಲಿ ಜೀವಿಸಿ, ಉಡುಪಿ ಕೃಷ್ಣಮಠದಲ್ಲಿ ಉಂಡು, ರಥಬೀದಿ ತಿರುಗುವಾಗ ಸಾಕ್ಷಾತ್ಕಾರ ಕೊಟ್ಟ ವಿಚಾರಗಳ ಬರಹ ರೂಪ ಇದು.

ಅದರ ಒಂದು ಚಾಪ್ಟರ್ ಇಲ್ಲಿದೆ:

rb

ಗ್ರೇಟ್ ಎಸ್ಕೇಪ್

ಒಂದು ಮಠ. ಅದಕ್ಕೆ ನಾಲ್ಕಾರು ಕಡೆ ಗಟ್ಟಿಮುಟ್ಟಾದ ಮರದ ಬಾಗಿಲಿಗಳು. ರಾತ್ರಿ ಅದರ ಅಗಳಿ ಹಾಕಿ, ಬೀಗ ಜಡಿದರೆ ಮುಗಿಯಿತು ಏಳು ಸುತ್ತಿನ ಕೋಟೆಯ ಒಳಹೊರ ಸಂಚಾರ ಸಂಪೂರ್ಣಂ. ಆಮೇಲೆ ಒಳಗೆ ಕಚಪಿಚ ಅಂತ ಮಕ್ಕಳ ಮಾತುಕತೆ, ಆಮೇಲೆ ನಿದ್ದೆಯ ಸುದೀರ್ಘ ಉಸಿರಾಟ, ಕೆಲವೊಮ್ಮೆ ಗೊರಕೆ. ಹನ್ನೊಂದು ಕಳೆದರೆ ಸೊಳ್ಳೆಯ ಕಾರ್ಯಭಾರ.

‘ರಾತ್ರಿ ಇಲ್ಲಿಂದ ಹೊರ ಹೋಗೋದಕ್ಕೆ ದಾರಿ ಇದ್ಯೇನೋ?’ ಬುದ್ಧಿವಂತ ಸ್ನೇಹಿತನೊಬ್ಬ ಮೊತ್ತಮೊದಲ ಬಾರಿಗೆ ಈ ಕೋಟೆ ದಾಟುವುದಕ್ಕೆ ಏನಾದರೂ ಮಾರ್ಗಗಳಿವೆಯಾ ಅಂತ ಕೇಳುವ ಮೂಲಕ ನಮ್ಮಳಗೊಂದು ಪರಾರಿಪ್ರಜ್ಞೆಯನ್ನು ಜಾಗೃತಗೊಳಿಸಿಬಿಟ್ಟ. ಮಹಾ ಪತ್ತೆದಾರಿಕೆ ಕೆಲಸದಂತೇ ಅವನ ಪ್ರಶ್ನೆ ಅವರೆದುರು ಭೂತಾಕಾರವಾಗಿ ಕುಳಿತಿತ್ತು. ಅದು ಕೃಷ್ಣಾಷ್ಟಮಿಯ ಆಸುಪಾಸಿನ ದಿನಗಳು. ಕೊಂಚ ಮಳೆ, ಕೊಂಚ ಸೆಕೆ, ಇನ್ನೇನು ಮಳೆ, ಇನ್ನೇನು ಹೊಳವು ಎನ್ನುವ ತಾಪಮಾನ ಸ್ಥಿತಿ. ಆ ಕೋಟೆಯ ಮಾಡಿನ ಹೆಂಚನ್ನು ಎತ್ತುವುದನ್ನು ಬಿಟ್ಟರೆ ಅಂಥ ಇನ್ನೊಂದು ದಾರಿ ಇರುವುದಕ್ಕೆ ಸಾಧ್ಯವಿಲ್ಲ ಅಂತ ಅನ್ನಿಸಿ ‘ಏಹೇ, ಯಾವ ದಾರಿನೂ ಇಲ್ಲ ಮಾರಾಯ’ ಅಂದುಬಿಟ್ಟ ಒಬ್ಬ. ಒಂದು ಪ್ರಶ್ನೆಗೆ ಉತ್ತರ ಅಷ್ಟು ಸುಲಭದ್ದಾಗಿದ್ದರೆ ಹೇಗೆ, ಛೇ ಯೋಚನೆಯನ್ನಾದರೂ ಮಾಡಬೇಕಲ್ಲಾ? ಹುಡುಗರು ಹಾಳಾಗಿ ಹೋಗಿದ್ದಾರೆ ಅಂದುಕೊಂಡ ಅವನು ಮತ್ತೆ ಆಚೀಚೆ  ಶತಪಥ ಹಾಕಿ, ಕೆಲ ಸಮಯ ಬಿಟ್ಟು ಮತ್ತೆ ಅದೇ ಪ್ರಶ್ನೆ.

ನಾಲ್ಕೈದು ಸಲ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತಲ್ಲವಾ? ಈ ಸಲ ಮತ್ತೆ ಅದನ್ನೇ ಕೇಳಿದಾಗ ಉಳಿದವರು ಕನಿಷ್ಠ ಯೋಚನೆಯನ್ನಾದರೂ ಮಾಡತೊಡಗಿದರು. old doorಕಣ್ಣು ಮುಚ್ಚಿ ಯೋಚಿಸೋಣ. ಒಂದು ಮುಖ್ಯಧ್ವಾರ, ಆ ದೈತ್ಯ ಕದಗಳಿಗೆ ಭೂತಾಕಾರದ ಬೀಗ ಹಾಕಿದ ಮೇಲೆ ತೆರೆಯುವುದಕ್ಕೆ ಸಾಧ್ಯವಿಲ್ಲ. ಇನ್ನೊಂದು ಮೇಲ್ಮಹಡಿಯಿಂದ ಕೆಳ ಬರಲು ಇರುವ ಬಾಗಿಲು, ಅದು ತೆರೆದಿದ್ದರೂ ಅದರಿಂದ ಹೊರಹೋಗುವುದಕ್ಕೆ ಸಾಧ್ಯವಿಲ್ಲ. ಇನ್ನೊಂದು ಮೊದಲ ಮಹಡಿಯ ಸಿಟ್ಔಟ್ನ ಬಾಗಿಲು. ಅದರ ಬಾಗಿಲನ್ನಾದರೂ ಹೇಗಾದರೂ ತೆಗೆಯಬಹುದಾದರೂ ಹೊರ ಹೋಗಿ, ಹಾರಿ, ಕೈಕಾಲು ಮುರಿದುಕೊಳ್ಳುವ ಉತ್ಸಾಹ ಯಾವ ಹುಡುಗರಿಗೂ ಇಲ್ಲ.

ಇನ್ನು ಇರುವುದು ಬಾತ್ರೂಂ, ಟಾಯ್ಲೆಟ್ ಕಡೆ ಇರುವ ಬಾಗಿಲು. ಅದರಿಂದಲೂ ಹೊರಹೋದರೆ ಸುತ್ತ ಇಟ್ಟಿಗೆಯ ದೊಡ್ಡ ಕಾಂಪೌಂಡ್. ಅದರ ಮೇಲೆ ಯಾವ ಕಳ್ಳರೂ ಹತ್ತಿ ಒಳ ಬರದಂತೆ ಗ್ಲಾಸ್ ಪೀಸ್ಗಳು. ಹೊರಗಿನ ಕಳ್ಳರು ಒಳಗೆ ಕಾಲಿಟ್ಟರೂ, ಒಳಗಿನ ಕಳ್ಳರು ಹೊರಗೆ ಕಾಲಿಟ್ಟರೂ ಸುರಿವುದೊಂದೇ ರಕ್ತ.

ಹಾಗಿದ್ದರೆ ಇನ್ನಾವುದೂ ದಾರಿಗಳೇ ಇಲ್ಲವೇ?

ಇದೆ, ಅದು ಬಾವಿ ಕಟ್ಟೆಗೆ ಹೋಗುವುದಕ್ಕಿರುವ ಬಾಗಿಲು. ಆ ಬಾಗಿಲನ್ನು ಸ್ವಲ್ಪ ಓರೆ ಮಾಡಿಟ್ಟಿರುತ್ತಾರೆ ಹೊರತೂ ಬೀಗ ಹಾಕಿರುವುದಿಲ್ಲ. ರಾತ್ರಿ ಒಂಬತ್ತರವರೆಗೆಲ್ಲಾ ಜನಸಂಚಾರ ಇದ್ದೇ ಇರುತ್ತದೆ ಮತ್ತು ಬೆಳಿಗ್ಗೆ ಐದಕ್ಕೇ ಹುಡುಗರೆಲ್ಲಾ ಎದ್ದು ಸ್ನಾನ ಮಾಡಬೇಕು ಮತ್ತು ಮಠಕ್ಕೆ ಹೋಗುವ ಗಿಂಡಿಮಾಣಿಗಳೂ ಬೇಗ ಸ್ನಾನ ಮುಗಿಸಬೇಕು. ಹಾಗಾಗಿ ಅದನ್ನು ಹೀಗೇ ಚಿಲಕವನ್ನಷ್ಟೇ ಹಾಕಿ ಇಟ್ಟಿರುತ್ತಾರೆ. ಎಲ್ಲರ ಮುಖದಲ್ಲೂ ಸಂತೋಷ ಬೆಳಗಿತು. ಆದರೆ ಅದನ್ನು ತೆರೆಯುವ ಬಗೆ ಹೇಗೆ? ಸ್ವಲ್ಪ ಸದ್ದಾದರೂ ಯಾರೋ ಕಳ್ಳರು ಅಂತ ಹತ್ತಿರವೆಲ್ಲೋ ಇರಬಹುದಾದ ಗಂಡಸರು ಓಡಿ ಬಂದು ಹಿಡಿಯುವುದು ಖಾತ್ರಿ. ಅದನ್ನು ತೆರೆದಾದಮೇಲೆ ಹುಡುಗರಿಗಿಂತ ಅತಿ ಎತ್ತರವಿರುವ, ದೊಡ್ಡ ಹಾಗೂ ಮೇಲೆ ತುಂಬ ಬಾಣಗಳಿರುವ ಗೇಟ್ ಇದೆ. ಅದನ್ನು ದಾಟುವುದೂ ಸವಾಲು.

ಹೇಗಾದರೂ ಹೊರಹೋಗುವ ಒಂದು ದಾರಿಸಿಕ್ಕೇಬಿಟ್ಟಿತಲ್ಲಾ ಅನ್ನುವ ಸಂತೋಷದಲ್ಲಿ ಅದನ್ನು ದಾಟುವುದಕ್ಕಿರುವ ತೊಂದರೆಗಳನ್ನೆಲ್ಲಾ ಮಕ್ಕಳು ಮರೆತರು. ಗ್ರೇಟ್ ಎಸ್ಕೇಪ್ ಪ್ಲಾನ್ ಕಾರ್ಯರೂಪಕ್ಕೆ ರಾತ್ರಿಗಾಗಿ ಕಾಯತೊಡಗಿದರು. ಮಠದ ತುಂಬ ಹುಡುಗರು. ಎಲ್ಲರ ಎರಡೂ ಕಿವಿಗಳಿಗೆ ತೂತು ಇರುವುದರಿಂದ ಈ ಕಡೆ ಹಾಕಿದರೆ ಆ ಕಡೆಯಿಂದ ಹೊರಬಿದ್ದು ಇನ್ಯಾರ ಕಿವಿಗಳಿಗೋ ತಲುಪಿ ಇನ್ನೇನೋ ಆಗುವುದಕ್ಕಿದೆ. ಹಾಗಾಗಿ ಇಂಥ ರಾಜತಾಂತ್ರಿಕ ರಹಸ್ಯ ವಿಚಾರಗಳನ್ನೆಲ್ಲಾ ಕೆಲವೇಕೆಲವು ನಂಬಲರ್ಹ ವಿದ್ಯಾರ್ಥಿಗಳಿಗೆ ಮಾತ್ರ ತಲುಪಿಸುವುದೆಂದು ಎಲ್ಲರೂ ಯೋಚಿಸಿಕೊಂಡರು. ಹಿಂಡಲಗಾ ಜೈಲ್ನಿಂದ ಪರಾರಿಯಾಗುವ ಪ್ಲಾನ್ ಕಾರ್ಯನಿರತವಾಗಿತ್ತು.

ಮುಂದೇನು ಮಾಡುವುದು?

ಊಟ ಆಯಿತು, ಓದುವುದೂ ಮುಗಿಯಿತು. ರಾತ್ರಿ ಮಲಗುವ ಕ್ಷಣ ಬಂದತಕ್ಷಣ ಹಾಸಿಗೆಯನ್ನು ಸುತ್ತಿ ಹಿಡಿದುಕೊಂಡು ಆ ಎಸ್ಕೇಪ್ ಗ್ರೂಪಿನ ಎಲ್ಲಾ ಸದಸ್ಯರೂ ಮೆಲ್ಲಮೆಲ್ಲ ಮಹಡಿಯಿಂದ ಕೆಳಗಿಳಿಯಬೇಕು. ‘ಅರೆ ನೀನ್ಯಾವಾಗಲೂ ಮೇಲೇ ಮಲಗುತ್ತಿದ್ಯಲ್ಲಾ, ಇವತ್ತೇನು ಕೆಳಗೆ ಮಲ್ಕೊಳ್ಳೋಕೆ ಹೋಗ್ತಿದೀಯಾ’ ಅಂತ ಯಾರಾದರೂ ಥಟ್ಟನೆ ಕೇಳಿಬಿಟ್ಟರೆ ಒಬ್ಬನ ಮುಖಕ್ಕೆ ಝಲ್ಲನೆ ರಕ್ತ ನುಗ್ಗಿಬಂದು, ನಾಲಗೆ ತಡವರಿಸಿ ಮಾತೇಹೊರಡದು. ಇನ್ನೊಬ್ಬ ಇದನ್ನೆಲ್ಲಾ ಸರಿ ಮಾಡುವಂತೆ, ‘ಅಯ್ಯೋ, ಯಾವಾಗ್ಲೂ ಇಲ್ಲೇ ಮಲಗಬೇಕು ಅಂತ ಏನಾದರೂ ರೂಲ್ಸ್ ಇದ್ಯಾ? ಸೆಕೆ ಸೆಕೆ ಅಂತಿದ್ದ, ನಾನೇ ಕೆಳಗೆ ಮಲ್ಕೋ ಅಂತ ಹೇಳಿದ್ದೀನಿ. ಬಾರೋ ಬಾರೋ, ಆಮೇಲೆ ಮಲ್ಕೊಳ್ಳೋದಕ್ಕೆ ಜಾಗ ಸಿಗಲ್ಲ’ ಅಂತ ಇವನನ್ನು ಎಳೆದುಕೊಂಡು ಅವನು ಹೊರಟೇಬಿಟ್ಟ.

ಹೋಗಿ ಹಾಸಿಗೆ ಹಾಸಿ, ಮಲಗಿ ಗಂಟೆ ಎಷ್ಟೊತ್ತಿಗೆ ಆಗುತ್ತದೆ ಅಂತ ಕಾಯುತ್ತಾ ಸೂರು ನೋಡುತ್ತಾ ಮಲಗಿಕೊಂಡರು. ಎಲ್ಲರೂ ನಿಧಾನಕ್ಕೆ ನಿದ್ದೆಗೆ ವಶವಾದರು. ಯಾರೋ ಒಬ್ಬನನ್ನು ತಿವಿದ, ‘ಏಳೋ ಲೇಟ್ ಆಯ್ತು’ ಅಂದ. ದಡಬಡನೆ ನಾಲ್ಕೈದು ಜನ ಎದ್ದು ಕುಳಿತರು. ಉಳಿದವರೆಲ್ಲಾ ನಿದ್ದೆಯಲ್ಲಿ ಯಾವ ಸದ್ದನ್ನೂ ಗ್ರಹಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ಬಿದ್ದಿದ್ದರು. ಗಾಳಿ ಅವರ ಗುಟ್ಟನ್ನು ಕದ್ದು ಕೇಳಿಸಿಕೊಳ್ಳುತ್ತಿತ್ತು.

lock with keysಎದ್ದು ಬಾಗಿಲು ದಾಟಿ, ಮೆಲ್ಲ ಹೆಜ್ಜೆಯಿಡುತ್ತಾ ದೈತ್ಯ ಬಾಗಿಲಿಗೆ ಬಂದರು. ಅದರ ದಪ್ಪನೆ ಚಿಲಕ ‘ಬನ್ನಿ ಒಂದು ಕೈ ನೋಡಿ’ ಅಂತ ಸವಾಲೆಸೆಯುತ್ತಿತ್ತು. ಒಬ್ಬ ಅದನ್ನು ಹಿಡಿದುಕೊಂಡ, ಇನ್ನೊಬ್ಬ ಅದು ಸದ್ದಾಗದಹಾಗೆ ನೋಡಿಕೊಂಡ. ಆದರೂ ಮೌನವನ್ನು ಸೀಳುವಂತೆ ಒಂದೆರಡು ಕರಕರ ಸದ್ದು ಮಾಡುತ್ತಾ ಚಿಲಕ ಸೋಲೊಪ್ಪಿಕೊಂಡಿತು. ಬಾಗಿಲು ತೆಗೆಯೇ ಸೇಸಮ್ಮಾ ಅನ್ನುತ್ತಾ ಕಿರ್ರುಗುಟ್ಟಿ ತೆಗೆದುಕೊಳ್ಳುವಂತೆ ಬಾಗಿಲು ತೆರೆಯಿತು. ದೂರದಲ್ಲಿ ಇನ್ನೊಂದೇ ಒಂದು ಗೇಟು, ಅದನ್ನು ಹಾರಿದರೆ ಮಠದಿಂದ ಬಯಲಿಗೆ. ಒಬ್ಬ ಗಂಟೆ ನೋಡಿಕೊಂಡ, ಇನ್ನೊಬ್ಬ ಗೇಟಿನ ಕಡೆ ಉಳಿದವರನ್ನು ಎಳೆದುಕೊಳ್ಳುತ್ತಾ ಸಮೀಪಿಸತೊಡಗಿದ.

ಗೇಟಿನಲ್ಲಿ ಹತ್ತುವುದಕ್ಕೆ ಸಾಕಷ್ಟು ಅವಕಾಶಗಳಿದ್ದವಾದರೂ ಎಲ್ಲಾ ಕಾಲಿಡುವ ಜಾಗದಲ್ಲೂ ಒಂದೊಂದು ಕಬ್ಬಿಣದ ಮುಳ್ಳಿನ ಮೊನಚು. ಸ್ವಲ್ಪ ಕಾಲನ್ನು ಬಲವಾಗಿ ಊರಿದಲೂ ಈ ಕಡೆ ನುಗ್ಗಿ ಆ ಕಡೆಯಿಂದ ಹೊರಬರುವುದು ಖಂಡಿತ. ಐದು ಜನರಲ್ಲಿ ಈ ಎಲ್ಲಾ ಯೋಜನೆಗಳ ರೂವಾರಿ ಮೊದಲು ಒಂದೊಂದೇ ಹೆಜ್ಜೆಗಳನ್ನು ಮೆಲ್ಲ ಇಡುತ್ತಾ ಏರತೊಡಗಿದ, ಅವನ ಹಿಂದೆ ಇನ್ನೊಬ್ಬ, ಇನ್ನೊಬ್ಬನ ಹಿಂದೆ ಮತ್ತೊಬ್ಬ. ಒಟ್ಟು ನಾಲ್ಕೂ ಜನ ಈ ಕಡೆಯಿಂದ ಏರಿ, ಆ ಕಡೆಯಿಂದ ಇಳಿಯುವ ಉತ್ಸಾಹದಲ್ಲಿದ್ದರು. ಒಬ್ಬ, ಇನ್ನೊಬ್ಬ, ಮತ್ತೊಬ್ಬ ನೋಡುನೋಡುತ್ತಿದ್ದಹಾಗೇ ಇಳಿದೇಬಿಟ್ಟ. ಅವರ ಅತಿಯಾದ ಆತ್ಮವಿಶ್ವಾಸಕ್ಕೆ ಗೇಟೂ ಸೋಲೊಪ್ಪಿಕೊಂಡಿತ್ತು. ಇನ್ನೇನು ಹೊರಟೇಬಿಟ್ಟೆವು ಅನ್ನುವಾಗ ಒಬ್ಬ ಜೋರಾಗಿ ಕೂಗಿಕೊಂಡ.

ಇಡೀ ಮೌನದ ಕೊಳವನ್ನೇ ಕೆಸರಾಗುವಂತೆ ಕಲಕಿದ ಆಕ್ರಂಧನವಾಗಿತ್ತದು. ಪಂಚಭೂತಗಳೂ, ಮುಕ್ಕೋಟಿ ದೇವತೆಗಳೂ ಆ ಸದ್ದಿಗೆ ಎದ್ದು ಕೂತುಬಿಡಬೇಕಾ?

ಎಸ್ಕೇಪ್ ಪ್ಲಾನ್ ರೂಪಿಸಿದ ಕರ್ಮಕ್ಕೆ ಮೊದಲು ಅವರ ಲೀಡರ್ ಮಾಡಿದ ಕೆಲಸ ಗೇಟಿನ ಮುಳ್ಳಿನ ಭಾಗದಿಂದಲೇ ಕೈ ಹಾಕಿ, ಬೊಬ್ಬೆ ಹೊಡೆದವನ ಬಾಯನ್ನು ಗಟ್ಟಿಯಾಗಿ ಅದುಮಿ ಹಿಡಿದುಕೊಂಡಿದ್ದು. ಅಷ್ಟರಲ್ಲಿ ಇವನ ಕೈಗೆ ಆ ಭರ್ಚಿಯಂಥ ಮುಳ್ಳು ಚುಚ್ಚಿಕೊಂಡುಬಿಟ್ಟಿತ್ತು, ರಕ್ತವೂ ಜಿನುಗುತ್ತಿತ್ತು. ದ್ರೋಣನಿಗೋಸ್ಕರ ತೊಡೆಯ ರಕ್ತವನ್ನೇ ಸಹಿಸಿಕೊಂಡ ಕರ್ಣನಂತೆ ಇವನು ತನ್ನ ನೋವು ಸಹಿಸಿಕೊಂಡು ಕೇಳಿದ: ‘ಹಾಳಾಗ್ ಹೋಗತ್ತೆ ನಮ್ಮ ಪ್ಲಾನು, ಏನ್ ಆಯ್ತೋ?’

ಅವನ ಬಾಯನ್ನೇ ಹೀಗೆ ಮುಚ್ಚಿ, ಮಾತನ್ನೇ ಕಿತ್ತುಕೊಂಡಿದ್ದಕ್ಕೆ ಸಿಟ್ಟು ಬಂದರೂ ಮಾತಾಡಲಿಕ್ಕಾಗದೇ ಕೈಸನ್ನೆಯಲ್ಲೇ ನೋಡು ಅಂತ ತನ್ನ ಅಂಗಿ ಕಡೆ ಬೆರಳು ತೋರಿಸಿದ. ಅಂಗಿಯನ್ನು ಗೇಟ್ನ ಒಂದು ಬಾಣ ಗಟ್ಟಿಯಾಗಿ ಹಿಡಿದು ಹರಿದಿತ್ತಲ್ಲದೇ,  ಬೆನ್ನಿನ ಮೇಲೆ ದೊಡ್ಡ ಗಾಯ ಆಗಿ ರಕ್ತ ಜಿನುಗುತ್ತಿತ್ತು. ಲೀಡರ್ ಕಿವಿ ಚುರುಕು. ಅಷ್ಟರಲ್ಲೇ ಯಾರೋ ಕಚಪಚ ಮಾತಾಡುತ್ತಾ, ಏನಾಯಿತೆಂದು ನೋಡಲು ಅತ್ತಲೇ ಬರತೊಡಗಿದರು. ಕೂಡಲೇ ಆ ಲೀಡರ್ ಈ ಗಾಯಾಳುವನ್ನು ಸರಕ್ಕನೆ ಎಳೆದುಕೊಂಡು ಐದೂ ಮಂದು ದಬಕ್ಕನೆ ಹಾರಿ, ಗೇಟಾಚೆ ಇರುವ ಕಲ್ಲಿನ ಮರೆಗೆ ಸರಿದು ಕುಳಿತರು.

ಒಂದು ಕ್ಷಣ ಮೌನ.

ಯಾರೋ ಇಬ್ಬರು ಬಂದು ಗೇಟ್ ಸುತ್ತಮುತ್ತ ಪರಿಶೀಲಿಸಿದರು.

ಯಾರೋ ದಾರಿಯಲ್ಲಿ ಹೋಗುತ್ತಿರುವವರು ಕೂಗಿದ್ದಿರಬೇಕು ಅಂತ ವಾಪಾಸು ಹೋದರು. ಇವರೆಲ್ಲಾ ಸದ್ಯ ಬಚಾವಾದೆವು ಎನ್ನುವಂತೆ ಅಲ್ಲಿಂದ ಎದ್ದರು.

‘ಗಂಟೆ ಎಷ್ಟಾಯಿತೋ’ ಅಂತ ಒಬ್ಬ ಕೇಳಿದ.

‘ಶೋ ಶುರು ಆಗೋದಕ್ಕೆ ಇನ್ನೂ ಕಾಲು ಗಂಟೆ ಇದೆ’ ಅಂದ ಮತ್ತೊಬ್ಬ, ಗಂಟೆ ನೋಡಿಕೊಳ್ಳುತ್ತಾ.

‘ಹಾಗಿದ್ದರೆ ಇಲ್ಲಿಂದ ಆರೇಳು ನಿಮಿಷ ಆದ್ರೂ ಬೇಕು, ನಡೀರಿ ನಡೀರಿ ಹೋಗೋಣ’ ಅಂತ ಲೀಡರ್ ಎಲ್ಲರನ್ನೂ ಎಬ್ಬಿಸಿದ.

‘ಅಯ್ಯೋ ನನ್ನ ಅಂಗಿ ಹರಿದಿದೆ, ಬೆನ್ನಲ್ಲಿ ರಕ್ತ ಬಂದು, ನೋವು ಬೇರೆ ಆಗ್ತಿದೆ ಕಣ್ರೋ’ ದುರ್ಬಲ ಹೃದಯದವ ಕುಯ್ ಕುಯ್ಯಿಗುಟ್ಟಿದ.

‘ಏಯ್ ನಿನ್ನ ಬೆನ್ನಲ್ಲಿ ಅಂಗಿ ಹರಿದಿದೆ ಅಂತ ಕಾಜೋಲ್ ಬಂದೇನೂ ಹೇಳಲ್ಲ. ಏನಾಗಲ್ಲ ಹೊರಡು ಹೊರಡು’ ಅಂತ ಅವನನ್ನು ಎಬ್ಬಿಸಿಕೊಂಡು ಹೊರಟ.

ಸ್ವಲ್ಪ ದೂರ ಓಟ, ಸ್ವಲ್ಪ ದೂರ ನಡುಗೆ, ಕೆಲವೊಮ್ಮೆ ಓಟವೂ ಅಲ್ಲದ ನಡುಗೆಯೂ ಅಲ್ಲ ದಾಪುಹೆಜ್ಜೆ. ಒಬ್ಬ ನಿಧಾನ ಆದರೆ ಇನ್ನೊಬ್ಬ, ಮತ್ತೊಬ್ಬ ನಿಧಾನ ಆದರೆ ಮಗದೊಬ್ಬ ಕೈಹಿಡಿದೆಳೆಯುತ್ತಾ ಹೋಗುವ ಹೊತ್ತಿಗೆ ಸರಿಯಾಗಿ ಟಿಕೇಟ್ ಕೊಟ್ಟು, ಜನ ಎಲ್ಲಾ ಒಬ್ಬೊಬ್ಬರಾಗಿ ಥಿಯೇಟರ್ ಬಾಗಿಲನ್ನು ದಾಟುತ್ತಿದ್ದರು.

ಒಬ್ಬೊಬ್ಬರೂ ಒಂದೊಂದು ಟಿಕೇಟ್ ತೆಗೆದುಕೊಳ್ಳುವುದಕ್ಕೆ ನಿಂತರು. ಆಗಲೇ ಟಿಕೆಟ್ ಎಲ್ಲಾ ಕೊಟ್ಟಾಗಿತ್ತಾದ್ದರಿಂದ, ‘ಎಲ್ಲರೂ ಒಟ್ಟಿಗೇ ತಗೋಬಾರ್ದಾ’ ಅಂತ ಕೌಂಟರ್ನ ಕೆಂಪುಕಣ್ಣಿನ ಧಡಿಯ ಗೊಣಗಿಕೊಂಡ. ಅಷ್ಟೂ ಮಂದಿಗೆ ಟಿಕೇಟ್ ತೆಗೆಯುವಷ್ಟು ಹಣವನ್ನೇನು ಇವನ ಅಪ್ಪ ಕೊಡುತ್ತಾನಾ ಅಂತ ಒಬ್ಬ ಸಿಟ್ಟನ್ನೆಲ್ಲಾ ನುಂಗಿಕೊಂಡ.

cinema hallಅಂತೂ ಇಂತೂ ಹೋಗಿ ಥಿಯೇಟರ್ ಒಳಗೆ ಕುಳಿತುಕೊಂಡರೆ ಕಿವಿ ಹರಿದುಹೋಗುವ ಬ್ಯಾಗ್ರೌಂಡ್ ಮ್ಯೂಸಿಕ್ ನಡುವೆ ಶಾರುಖ್ ಖಾನ್ ನಗುತ್ತಿದ್ದ, ಓಡಿ ಬಂದ ಸುಸ್ತಿಗೆ ಎಲ್ಲ ಹುಡುಗರ ಎದೆಯೂ ಲಯ ತಪ್ಪಿ ಏರಿಳಿಯುತ್ತಿತ್ತು. ಬೆವರು ತೊಪ್ಪೆಕೂದಲನ್ನು ದಾಟಿ ಕಿವಿ ಹತ್ತಿರ ಕೆಳಸರಿಯುತ್ತಿತ್ತು. ಆದರೆ ಕಾಜಲ್ ಬಂದು ಒಂದೇ ಟವೆಲ್ನಲ್ಲಿ ‘ಮೇರಿ ಕಾಬೋಮೇ ಜೋ ಆಯೇ’ ಅಂತ ಹಾಡುತ್ತಲೇ ಬಿಟ್ಟು ಬಂದ ಮಠ ಮರೆತಿತು, ಅವನ ಬೆನ್ನ ಮೇಲಿನ ಗಾಯವನ್ನು ಕಾಜೋಲ್ ಸವರಿ ವಾಸಿ ಮಾಡುತ್ತಿದ್ದಂತಿತ್ತು. ರಾಜ್ ಆ ಕಡೆಯಿಂದ ಸ್ಲೋ ಮೋಷನ್ನಲ್ಲಿ ಓಡೋಡಿ ಬರುತ್ತಿದ್ದ, ಸಿಮ್ರನ್ ಈ ಕಡೆಯಿಂದ ನಾಚುತ್ತಾ ಬರುತ್ತಿದ್ದಳು. ಹುಬ್ಬು ಕೂಡಿರುವ, ಸ್ವಲ್ಪವೇ ಕಾಜಕಣ್ಣುಗಳ, ತುಟಿ ಕಚ್ಚಿ ನಗುವ, ಕಣ್ಣು ಮಿಟುಕಿಸಿ ಜೀವ ಸೆಳೆಯುವ ಹುಡುಗಿ ತನ್ನ ಪ್ರೀತಿಯ ಹುಡುಗನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಲು ಹೊರಟಾಗ ಹುಡುಗರೆಲ್ಲಾ ಗೊಳೋ ಅಂತ ಅತ್ತರು. ಆ ಮದುಮಗನನ್ನೇ ಕಾಡಲ್ಲಿ ಬೀಳಿಸಿ, ಅವನನ್ನು ಕಾಪಾಡಿದಂತೆ ನಾಟಕವಾಡಿ ರಾಜ್ ಹೀರೋ ಥರ ಮದುವೆ ಮನೆಗೇ ನುಗ್ಗಿ ಅಲ್ಲಿದ್ದವರ ಸ್ನೇಹ ಸಂಪಾದಿಸಿಕೊಳ್ಳುತ್ತಿದ್ದಾಗ ಇನ್ನಿಲ್ಲದಂತೆ ಖುಷಿಪಟ್ಟರು. ಪ್ರೇಮಿಗಳು ಮರಳಿ ಸಿಕ್ಕರು, ಹಾಡುಗಳಲ್ಲಿ ತಬ್ಬಿಕೊಂಡರು, ಮದುವೆ ಮನೆಯೆಂಬೋ ಸಂತೆಯಲ್ಲೂ ಏಕಾಂತ ಹುಡುಕಿಕೊಂಡು ಅವನು ಅವಳನ್ನು ಮುದ್ದಿಸುವುದಕ್ಕಾಗಿ ತುಟಿ ಹತ್ತಿರ ತಂದ. ಕೂತ ಹುಡುಗರ ಅದರಗಳು ಅದುರಿದವು, ಹೊತ್ತು ಕಳೆದೇ ಹೋಯಿತು, ಯಾರೋ ಮಧ್ಯ ಬಂದ ಸದ್ದಾಗಿ ಮುತ್ತೂ ದೊರೆಯಬೇಕಾದವಳಿಗೆ ದೊರೆಯದೇ ಹೋಯಿತು.

ಕಣ್ಣೀರು, ತಮಾಷೆ, ರೋಷ, ಆಕ್ರಂಧನ, ಸುಖಾಂತ್ಯಗಳಲ್ಲಿ ಕತೆ ಮುಗಿದು ಲೇಜಾಯೇಂಗೇ ಲೇಜಾಯೇಂಗೇ ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೇ ಅಂತ ರಾಜ್ ಹಾಡಿ ಎಂಡ್ ಟೈಟಲ್ ಕಾರ್ಡ್ ರನ್ ಆಯಿತು. ಬೆವರು, ವಾಸನೆ, ನಿದ್ದೆ, ಭಯ, ಆತಂಕಗಳ ಮಧ್ಯೆ ಟಾಕೀಸಿಂದ ಹೊರ ಬಂದರೆ ಕಳ್ಳರು ಅಡ್ಡ ಬರುತ್ತಾರೆಂದರೆ ಹೋರಾಡುವುದಕ್ಕೆ ಶಾರುಖ್ ಖಾನ್ ಇಲ್ಲ. ಹುಡುಗರ ಬೆನ್ನಿಗೆ ಕಾಜೋಲ್ ಕೂಡ ಬರುವುದಿಲ್ಲ, ಬೆನ್ನಿನ ನೋವು ಮಾತ್ರ ಆ ಹುಡುಗನನ್ನು ಇನ್ನೂ ಜಾಸ್ತಿ ಬಾಧಿಸಹತ್ತಿತ್ತು. ಅಂಗಿ ಹರಿಯಿತಲ್ಲಾ ಅಂತ ನೋವೂ ಉಲ್ಬಣಗೊಳ್ಳುತ್ತಿತ್ತು. ಬೀಡಿನಗುಡ್ಡೆಯಿಂದ ಹೊರಟು, ಅಲ್ಲಿ ಬೀಡುಬಿಟ್ಟಿರುತ್ತದೆನ್ನಲಾದ ಭೂತಪ್ರೇತಗಳ ವಿರುದ್ಧ ದೆವರು ದಿಂಡಿರ ಜಪ ಮಾಡುತ್ತಾ, ಸಣ್ಣ ತರಗೆಲೆ ಸದ್ದಿಗೂ ಬೆಚ್ಚಿ ಹಿಂದೆಹಿಂದೆ ನೋಡುತ್ತಾ ಮಠದ ಬಳಿ ಬಂದು ನಿಂತರೆ ಮತ್ತೆ ಏರು ನೋಡೋಣ ಅಂತ ಗೇಟು ಎದೆಯುಬ್ಬಿಸಿ ನಿಂತಿದೆ. ಈ ಕಡೆಯಿಂದಾಕಡೆಗೆ ಓಡಿ, ಅಲ್ಲಿಂದಿಲ್ಲಿಗೆ ನಡೆದು, ಬೆನ್ನು, ಕೈಗಳನ್ನೆಲ್ಲಾ ನೋವು, ಗಾಯ ಮಾಡಿಕೊಂಡು ನಿಂತರೆ ಮತ್ತೆ ಹತ್ತುವ ಕರ್ಮ.

ಈ ಸಲ ಗಾಯಾಳುವನ್ನು ಮೊದಲೇ ಆಚೆ ಹತ್ತಿಸಿಬಿಟ್ಟರು. ಇಳಿಸಿದ್ದೇ ತಡ ಅವನು ಇವರೆಲ್ಲಾ ಬರುವ ಮೊದಲೇ ಓಡಿ ಹೋಗಿ ಬಾಗಿಲು ತೆಗೆದು ಒಳನುಗ್ಗುವುದರಲ್ಲಿದ್ದ.  ಇವರೆಲ್ಲಾ ಬೈದುಕೊಳ್ಳುತ್ತಾ ಇಳಿದು, ಮೆಲ್ಲ ಹೋಗಿ ನಿಂತರೆ ಅವನು ಬಾಗಿಲ ಹತ್ತಿರ ಪೆಕರನಂತೆ ನಿಂತಿದ್ದಾನೆ. ಮೆಲ್ಲದನಿಯಲ್ಲಿ ‘ಓಡಿ ಬಂದ್ಯಲ್ಲಾ, ಹೋಗು ಒಳಗೆ ಹೋಗಪ್ಪಾ’ ಅಂತ ಲೀಡರ್ ಸ್ವಲ್ಪ ಸಿಟ್ಟಲ್ಲೇ ಹೇಳಿದ. ಆ ಹುಡುಗ ಬಾಗಿಲ ಕಡೆ ನೋಡಿದ.

ಬೀಗ ಹಾಕಿದೆ!

ತುಂಬ ಕಷ್ಟದ ಸ್ಥಿತಿಯಲ್ಲಿದ್ದರೂ ಯಾವುದಕ್ಕೂ ಇರಲಿ ಅಂತ ಮೊದಲೇ ಓಡಿಬಂದ ಹುಡುಗನ ಮುಖ ನೋಡಿ ಲೀಡರ್ ಒಂದೇ ಸಮನೆ ನಗಲಾರಂಭಿಸಿದ. ಉಳಿದವರು ತಮಾಷೆ ಬೇಡ ಎನ್ನುವಂತೆ ಅವನನ್ನೇ ನೋಡತೊಡಗಿದರು. ಕೆಲಹೊತ್ತು ಹಾಗೇ ಕುಳಿತುಕೊಂಡರು. ಆಗಲೇ ಗಂಟೆ ಹನ್ನೆರಡು ದಾಟಿತ್ತು. ಬೆಳಿಗ್ಗೆ ಐದಕ್ಕೆ ಸ್ನಾನಕ್ಕೆ ಅಂತ ಬಾಗಿಲು ತೆಗೆದಾಗ ಅಡಗಿ ಕುಳಿತು ಒಳಸೇರಿಕೊಂಡರೆ ಹೇಗೆ ಎನ್ನುವ ಪ್ಲಾನನ್ನೂ ಲೀಡರ್ ಹೇಳಿ ಬೈಸಿಕೊಂಡ. ಅಲ್ಲಿಂದ ಒಳಹೋಗುವುದಕ್ಕೆ ಇನ್ನೆಲ್ಲಿಯಾದರೂ ಜಾಗ ಇದೆಯಾ ಅಂತ ಮತ್ತೊಬ್ಬ ನೋಡಿಕೊಂಡು ಬಂದ. ಏನೂ ದಾರಿ ಕಾಣದಾದಾಗ ನೀರಾದರೂ ಕುಡಿಯೋಣ ಅಂತ ಒಬ್ಬ ಕೊಡ ಬಿಟ್ಟ. ನೀರಿನೊಂದಿಗೆ ಕೊಡವೂ ಬಂತು, ಐಡಿಯಾವೂ ಬಂತು!

ನೀರು ಸೇದಿ ಐದೂ ಜನ ಕುಡಿದು ಸುಸ್ತಾಗಿ ಕುಳಿತುಕೊಂಡಾಗ ಅದೇ ಗಾಯಾಳು ಹುಡುಗ ತನಗೆ ಹೊಳೆದ ಒಂದು ಐಡಿಯಾ ಹೇಳಿಯೇಬಿಟ್ಟ.

ಕುಳಿತಿದ್ದವರೆಲ್ಲಾ ಸ್ಥಬ್ದರಾಗಿಹೋದರು. ವಾಟೆನ್ ಐಡಿಯಾ ಸರ್ಜೀ.

‘ಹೌದು. ಅವನು ಹೇಳಿದ್ದೂ ಸರಿ, ಈಗ ನಾವು ಒಂದೋ ಬೆಳಗಿನತನಕ ಇಲ್ಲೇ ಕುಳಿತುಕೊಳ್ಳಬೇಕು, ಇಲ್ಲ ಎಂದರೆ ಆ ದಾರಿಯಲ್ಲಿ ಹೋಗಿ ಒಳಸೇರಿಕೊಳ್ಳಬೇಕು. ಮಾನ ಮರ್ಯಾದೆ ಹೋಗುವ ಬದಲು ಈ ರಿಸ್ಕ್ ತೆಗೆದುಕೊಳ್ಳೋದೇ ಒಳ್ಳೇದಲ್ವಾ’ ಒಬ್ಬ ಹುಮ್ಮಸ್ಸಿನಿಂದ ಕೇಳಿ.

old wellಗಾಯಾಳುವಿನ ಬೆನ್ನಿನ ನೋವು ಅರ್ಧ ವಾಸಿ ಆದಂತೆ ಬೀಗುತ್ತಿದ್ದ. ಆದರೆ ಲೀಡರ್ ಮಾತ್ರ ಇದು ಬಿಲ್ಕುಲ್ ತನಗೆ ಇಷ್ಟವಿಲ್ಲ ಎಂದುಬಿಟ್ಟ.

‘ಹುಚ್ಚಾ, ಹೋಗಿಹೋಗಿ ಆ ಬಾವಿ ಹತ್ತಿ ಅಷ್ಟೊಂದು ಇಕ್ಕಟ್ಟಾಗಿರೋ ಕಟ್ಟೆ ಮೇಲೆ ನಡೆದುಕೊಂಡು ಹೋಗಿ ಆ ಕಡೆ ಅಡುಗೆ ಮನೆ ಹಾರೋದಾ?’ ಸಿಟ್ಟು ಮತ್ತು ಉದ್ವೇಗದಿಂದ ಕೇಳಿದ.

‘ಹೂಂ ಏನಾಗತ್ತೆ, ಹಾಗೆ ಹೋದ್ರೆ’ ಇನ್ನೊಬ್ಬ ಸವಾಲೆಸೆಯುವಂತೆ ಕೇಳಿದ.

‘ಅದೆಲ್ಲಾ ಆಗೋದಿಲ್ಲ, ನಾನೂ ಹೋಗೋದಿಲ್ಲ. ನೀವ್ಯಾರೂ ಹೋಗಕೂಡದು. ಕೊನೆಗೆ ನಾನು ನಿಮ್ಮನ್ನೆಲ್ಲಾ ಎಬ್ಬಿಸಿಕೊಂಡು ಬಂದಿದ್ದು. ನಾನೇ ನಿಮ್ಮನ್ನೆಲ್ಲಾ ಬಾವಿಗೆ ಹಾಕಿದೆ ಂತ ಜನ ಹೇಳ್ಳಿ. ನಿಮಗೆಲ್ಲಾ ಸಿನಿಮಾ ತೋರ್ಸಿದ್ದಲ್ಲದೇ ಬಾವಿಗೆ ಬೇರೆ ದೂಡೋದು.. ಏಯ್  ಇನ್ನೊಂದು ಕೊಡ ನೀರ್ ಎತ್ತು. ಕುಡ್ಕೊಂಡ್ ಇಲ್ಲೇ ಎಲ್ಲಾದ್ರೂ ಮಲ್ಗಿರೋಣ. ಬೆಳಿಗ್ಗೆ ಎದ್ದು ಹೋದ್ರೆ ಆಯ್ತು’ ತನ್ನ ನಿರ್ಧಾರವೇ ಅಂತಿಮ ಎನ್ನುವಂತೆ ಎದ್ದು ಹೋಗಿ ಇನ್ನೊಂದು ಕಟ್ಟೆ ಮೇಲೆ ಕುಳಿತುಕೊಂಡ.

ಜೋರಾಗಿ ಮಾತಾಡಲಾಗುವುದಿಲ್ಲ ಬೇರೆ. ನಿದ್ದೆಯಂತೂ ಕಣ್ಣು ತುಂಬಿ ಬರುತ್ತಿದೆ. ಅದರ ಮಧ್ಯೆ ಇವನು ಹೀಗೆ ಹಠ ಮಾಡಿಕೊಂಡು ಹೋಗಿ ಕುಳಿತುಕೊಂಡಿದ್ದಾನೆ. ಅಷ್ಟಕ್ಕೂ ನಾವು ನಾಲ್ಕು ಜನ ಆಗಬಹುದು ಅಂತ ಹೊರಟಿದ್ದೇವೆ, ಬೇಡ ಅನ್ನುವುದಕ್ಕೆ ಇವನ್ಯಾರು?

ಗುಸುಗುಸು ಅಂತ ಮಾತು ಶುರುವಾಯಿತು.

ಒಬ್ಬರಿಗೊಬ್ಬರು ಜಗಳ ಹಚ್ಚಿಕೊಂಡರು. ದೂರದಲ್ಲಿ ಸೆಟೆದುಕೊಂಡು ಕೂತಿದ್ದ ಆ ಲೀಡರ್ ಶ್ ಅಂತ ಅಲ್ಲಿಂದಲೇ ಕೈಸನ್ನೆ ಮಾಡಿ ಇವರ ಸಿಟ್ಟನ್ನು ಇನ್ನೂ ಜಾಸ್ತಿ ಮಾಡಿದ. ಈ ಹುಡುಗರಿಗೆಲ್ಲಾ ರೇಗಿಹೋಗಿ ಗಾಡ್ ಆಗಿ ಕಾಣುತ್ತಿದ್ದ ತಮ್ಮ ಲೀಡರೇ ಅವರಿಗೀಗ ದೊಡ್ಡ ದುಷ್ಮನ್ ಥರ ಕಾಣಹತ್ತಿದ.

ಕೊನೆಗೂ ಒಬ್ಬ ಆ ಗುಂಪಿನಿಂದ ಎದ್ದು ಬಂದ. ‘ನೀನು ಬೇಕಾದರೆ ಇಲ್ಲೇ ಇರು, ನಾವು ಆ ಬಾವಿ ಹತ್ತಿ ಒಳಹೋಗೋದೇ’ ಅಂತ ತನ್ನ ನಿರ್ಧಾರವನ್ನು ಪ್ರಕಟಿಸಿಯೇಬಿಟ್ಟ. ಉಳಿದವರೆಲ್ಲಾ ಎದ್ದು ಒಬ್ಬೊಬ್ಬರಾಗಿ ಶಿಸ್ತಿನಿಂದ ನಾಮುಂದು ತಾಮುಂದು ಅಂತ ಬಾವಿಯ ಎದುರು ನಿಂತುಕೊಂಡುಬಿಟ್ಟರು. ಲೀಡರ್ ನೋಡಿಯೇನೋಡುತ್ತಾನೆ, ಅವರೆಲ್ಲರ ಮುಂದಾಳತ್ವ ವಹಿಸಿಕೊಂಡಿರುವವನು ದಿ ಗ್ರೇಟ್ ಗಾಯಾಳು!

ಇವನಿಗಂತೂ ಇನ್ನೂ ರೇಗಿ ಹೋಯಿತು. ಅಲ್ಲ, ಗೇಟು ಹಾರುವುದಕ್ಕೆ ಕುಯ್ಯೋಮುರ್ರೋ ಅನ್ನುತ್ತಿದ್ದ ಈ ಸಣಕಲ ಇವರನ್ನೆಲ್ಲಾ ಬಾವಿ ದಾಟಿಸುತ್ತಾನಾ? ಎಲ್ಲಾ ಬಿದ್ದು ಸಾಯ್ತರೆ ಅಷ್ಟೇ ಅಂತ ಇವನಿಗೆ ಅನ್ನಿಸಿಹೋಯಿತು. ‘ಅಯ್ಯೋ, ಅವ್ನ ಮಾತು ಕೇಳ್ಬೇಡ್ರೋ, ಹೋಗಿ ಅಷ್ಟೂ ಜನ ಬಾವಿಗೆ ಬಿದ್ದು ಆಮೇಲೆ ನನ್ನ ಪ್ರಾಣ ತೆಗೀತೀರಿ’ ಅಂತ ಗೋಗರೆದ. ಆರಂಭದಿಂದ ಅಂಥ ಖ್ಯಾತಿಯಿದ್ದ ಈ ಲೀಡರ್, ಆಳ್ವಿಕೆಯ ಕೊನೆಯ ದಿನಗಳ ಥರ ಕಣ್ಣಲ್ಲಿ ನೀರು ತುಂಬಿಕೊಂಡ. ಆ ಗಾಯಾಳು ಸಾಕ್ಷಾತ್ ಕರುಣಾಳುವಿನ ಥರ ಬಾವಿಯ ಕಟ್ಟೆ ಹತ್ತಿ ನಿಂತುಕೊಂಡ, ಇತ್ತ ಲೀಡರ್ನ ಕಾಲು ಅದುರತೊಡಗಿತು. ಅವನು ಒಬ್ಬೊಬ್ಬರನ್ನೇ ಕೈಹಿಡಿದೆತ್ತಿ ನಿಧಾನವಾಗಿ ಕಟ್ಟೆ ಮೇಲೆ ಒಂದೊಂದೆ ಹೆಜ್ಜೆಯೆತ್ತಿ ಇಡುವಂತೆ ನಡೆಸಿ ಆಚೆ ದಡವನ್ನು ಕಾಣಿಸಿಯೇಬಿಟ್ಟ.

ನೋಡುತೋಡುತ್ತಿದ್ದಂತೇ ಮೂರೂ ಜನ ಆಚೆ ದಡದಲ್ಲಿ ನಿಂತುಕೊಂಡು ಬಚಾವಾಗಿಬಿಟ್ಟೆವು ಎನ್ನುವಂತೆ ವೀರಸ್ವರ್ಗ ಸಿಕ್ಕವರಂತೆ ಈ ಲೀಡರ್ ಕಡೆ ನೋಡತೊಡಗಿದರು. ಇನ್ನೊಬ್ಬ ನಿಂತು ಶ್ರೀಕೃಷ್ಣ ಪರಮಾತ್ಮನಂತೆ ನೋಡುತ್ತಿದ್ದವನೆಂದರೆ ಆ ಗಾಯಾಳು.

‘ನೀನೂ ಬಂದ್ಬಿಡೋ, ಇವ್ನ ದಾಟಿಸ್ತಾನೆ’ ಅಂದ ಆ ದಡ ಸೇರಿದವನೊಬ್ಬ. ‘ಬಂದ್ಬಿಡೋ, ನಾವೆಲ್ಲಾ ಬಂದಿಲ್ವಾ, ಯಾರನ್ನಾದ್ರೂ ಇವ್ನ ಕೆಳಗೆ ಬೀಳಿಸಿದ್ನಾ, ನಿನ್ನನ್ನೂ ದಾಟಿಸ್ತಾನೆ ಬಂದ್ಬಿಡು’ ಂದ ಮತ್ತೊಬ್ಬ. ‘ಬಾರೋ ನಾನಿದ್ದೀನಲ್ಲಾ, ಹುಷಾರಾಗಿ ದಾಟಿಸ್ತೀನಿ’ ಅಂತ ಗಾಯಾಳು ಅವನಲ್ಲಿ ಬೇಡಿಕೊಂಡ. ಅಷ್ಟರಲ್ಲೇ ಸಾಕಷ್ಟು ಅವಮಾನಕ್ಕೊಳಗಾಗಿದ್ದ ಈ ಲೀಡರ್ ಇನ್ನೂ ಹತಾಶನಾಗಿ ಕಣ್ಣು ತುಂಬಿಕೊಂಡುಬಿಟ್ಟ. ಉಳಿದವರಿಗೆಲ್ಲಾ ಗಾಬರಿಯಾಯ್ತು. ‘ಯಾಕೋ ಏನಾಯ್ತೋ..’ ಎಲ್ಲರೂ ಆತಂಕದಿಂದ ಕೇಳಿದರು. ಈಗ ಇವನು ನಿಜ ಬಾಯಿಬಿಟ್ಟ. ‘ಅಲ್ವೋ, ನಂಗೆ ನೀರು ಬಾವಿ ಅಂದ್ರೆ ಹೆದ್ರಿಕೆ. ಅದ್ರ ಮೇಲೆ ಹತ್ತಿ ನಿಂತ್ಕೊಳ್ಳೋದು ಯೋಚನೆ ಮಾಡಿದ್ರೇ ಸತ್ತು ಹೋಗೋ ಥರ ಆಗತ್ತೆ. ಇನ್ನು ಹತ್ತಿ ದಾಟಕ್ಕಾಗತ್ತೇನ್ರೋ? ನೀವೆಲ್ಲಾ ಸುಖವಾಗಿ ಹೋಗಿ ಮಲ್ಕೊಳ್ಳಿ. ನಾನು ಇಲ್ಲೇ ಸಾಯ್ತೀನಿ. ನಂಗೇನಾದ್ರೆ ನಿಮ್ಗೇನು?’ ಅಂತ ಹೆಚ್ಚುಕಡಿಮೆ ಕಣ್ಣೀರೇ ಹಾಕಿದ. ಉಳಿದವರೆಲ್ಲಾ ಉತ್ಸಾಹ ಜರ್ರನೆ ಇಳಿದು ಹೋಗಿ ಪೆಚ್ಚಾದರು.

ಆಗ ಗಾಯಾಳು ಬಾವಿಕಟ್ಟೆಯಿಂದಿಳಿದು ಕೆಳ ಬಂದವ ಲೀಡರ್ ಕೈ ಹಿಡಿದುಕೊಂಡುಬಿಟ್ಟ. ‘ಅಲ್ವೋ, ಇಲ್ಲೇ ಎಲ್ಲಾ ರಾತ್ರಿ ಕಳೆಯೋದಾದ್ರೆ ಕಳೆಯೋಣ. ಆದ್ರೆ ಅದ್ಕೆ ಯಾಕೆ ಬೇಜಾರು ಮಾಡ್ಕೋತಿ. ನಾನು ನಿನ್ನ ಕರ್ಕೊಂಡ್ ಹೋಗ್ತೀನಿ.. ಏನೂ ಆಗಲ್ಲ, ನೋಡು ಅವ್ರೆಲ್ಲಾ ದಾಟ್ಲಿಲ್ವಾ, ಯಾರಾದ್ರೂ ಒಂಚೂರು ಜಾರಿದ್ರಾ.. ನಿಂಗೂ ಏನೂ ಆಗಲ್ಲ ಬಾ’ ಅಂದ. ‘ಬೇಕಿದ್ದರೆ ನಿನ್ ಮನೆ ದೇವ್ರನ್ನ ನೆನಪು ಮಾಡ್ಕೋತಾ ಕಣ್ಮುಚ್ಕೋ.. ನಾನೇ ದಾಟಿಸ್ತೀನಿ.. ಏನೂ ಆಗಲ್ವೋ’ ಅಂತ ಅನುನಯದಿಂದ ಅವನ ಮನವೊಲಿಸಿದ.

ಧೈರ್ಯ ಬರದಿದ್ದರೂ ಏನಾದರೂ ಆಗಲಿ, ಮರ್ಯಾದೆ ಪ್ರಶ್ನೆ ಅಂತ ಲೀಡರ್ ಗಂಟಲೊಳಗೇ ಹೂಂ ಅಂದ. ಆಮೇಲಿನದ್ದು ಕ್ಷಣಾರ್ಧದಲ್ಲಿ ನಡೆದುಹೋಯಿತು. ಆ ಕಡೆ ಒಬ್ಬ ನಿಂತುಕೊಂಡ, ಈ ಕಡೆ ಗಾಯಾಳು ಸಹಾಯಕ್ಕೆ ನಿಂತ. ಅವನನ್ನು ಎತ್ತಿ ಕಟ್ಟೆಮೇಲೆ ನಿಲ್ಲಿಸಲಾಯಿತು. ಗಾಯಾಳು ಅವನ ಎರಡೂ ತೋಳುಗಳನ್ನೂ ಬಿಗಿಯಾಗಿ ಹಿಡಿದುಕೊಂಡಿದ್ದ. ನಿಧಾನವಾಗಿ ಹೆಜ್ಜೆ ಕಿತ್ತಿಡುವಂತೆ ಮಾರ್ಗದರ್ಶನ ಮಾಡಲಾಯಿತು, ಆ ಕಡೆಯವರು ಕಾಮೆಂಟರಿ ಶುರು ಮಾಡಿದರು. ಕಣ್ಬಿಟ್ಟರೆ ಎಲ್ಲಿ ಬಿದ್ದೇಬಿಡುತ್ತೇನೋ ಅಂತ ಅವನು ಕಣ್ಣನ್ನು ಮತ್ತಷ್ಟು ಬಲವಾಗಿ ಮುಚ್ಚಿಕೊಳ್ಳುತ್ತಾ ಹೆಜ್ಜೆ ಕಿತ್ತಿಡುತ್ತಾ ಹೋದ.

ಕಣ್ಣು ಬಿಡು ಅಂದಾಗ ಅವನು ಆಚೆ ದಡದಲ್ಲಿದ್ದ. ಸಂತೋಷ ಮತ್ತು ಕೆಳಗೆ ನೋಡಲಾರದ ಭಯಕ್ಕೆ ದೊಪ್ಪನೆ ಆಚೆಕಡೆ ಇರುವ ಅಡುಗೆ ಮನೆಗೆ ಬಿದ್ದ. ಆ ಸದ್ದಿಗೆ ಎಲ್ಲಿ ಯಾರಾದರೂ ಏಳುತ್ತಾರೋ ಅಂತ ಭಯವಾದರೂ ಎಲ್ಲರೂ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ನಕ್ಕರು. ಲೀಡರೂ ನಕ್ಕ. ಮೆಲ್ಲಮೆಲ್ಲ ಹೆಜ್ಜೆ ಇಡುತ್ತಾ ಹೋಗಿ ಹಾಸಿಟ್ಟಿದ್ದ ಹಾಸಿಗೆ ಮೇಲೆ ಸದ್ದಾಗದಂತೆ ಒರಗಿಕೊಂಡರು. ಕಾಜೋಲ್ ಕೂಡ ಅದು ಹೇಗೋ ಬಾವಿ ದಾಟಿ ಅವರ ಕನಸೊಳಗೆ ಕಾಲಿಡುತ್ತಿದ್ದಳು.

ಇನ್ನೇನು ಕಣ್ಮುಚ್ಚಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದವ ಗೊಣಗಾಟವೆಂಬಂತೆ ಹಾಡತೊಡಗಿದ: ‘ತುಜೆ ದೇಕಾ ತೋ ಯೇ ಜಾನಾ ಸನಮ್’. ಕನವರಿಸಿದ್ದೋ, ತಮ್ಮನ್ನು ಅವನು ಹಿಡಿದುಬಿಟ್ಟಿತ್ತೋ ಗೊತ್ತಾಗದೇ ಎಲ್ಲರೂ ಕಿಸಕ್ಕನೆ ನಕ್ಕರು.

‍ಲೇಖಕರು admin

March 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಆನಂದ್ ಋಗ್ವೇದಿ

    ಹ ಹ ತುಂಬಾ ಚೆನ್ನಾಗಿದೆ ವಿಕಾಸ ನೇಗಿಲೋಣಿ. ತೇಜಸ್ವಿ ಅವರ ಅಣ್ಣನ ನೆನಪು ಕೃತಿ ನೆನಪಿಸುವ ನವಿರು ಹಾಸ್ಯದ ಹೊನಲು ಚಂದ ಹರಿದಾಡಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: