ವಾಮನ್ ಗೋಪಾಲರಾವ್ ಕುಲಕರ್ಣಿ
ಪುಸ್ತಕಗಳನ್ನು ಅಡವು ಇಟ್ಟು ಇಂದು ಸಾಲ ಪಡೆಯುತ್ತೇನೆಂದರೆ ಆಶ್ಚರ್ಯದ ಮಾತಾದೀತು. ಕಾಗದದ ಬಳಕೆ ಅಷ್ಟಾಗಿ ಇಲ್ಲದ ದಿನಗಳವು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರ ಗ್ರಾಮದ ಹಬ್ಬಣಮನೆ ಎಂಬಲ್ಲಿ ನಡೆದ ಪ್ರಸಂಗವಿದು. ೨೧ ೧/೨” x ೨” ಅಳತೆಯ ೧೭೨ ಓಲೆಗರಿಗಳ ಈ ಗ್ರಂಥದ ಹೆಸರು ’ಕೌಸಲ್ಯೆ ವಿವಾಹ’. ಗರಿಯ ಒಂದೇ ಕಡೆ ಕನ್ನಡದಲ್ಲಿ ಬರೆದಿದ್ದು ಅದರ ಮೂಲ ಪಾಠ ಹೀಗಿದೆ:
ವಿರೋಧಿ ಸಂವತ್ಸರದ ಭಾದ್ರಪದ ಬಹುಳ ೧೪ ರಲ್ಲೂ ಹಿಲ್ಲೂರ ಹಬ್ಬಣಮನೆ ಕ್ರುಷ್ನ ಹೆಗಡೆರಿಗೆ ಇದೆ ವಾರ ಹಡವಿನ ಕ್ರುಷ್ಣಯ್ಯನ ಮಗ ದೇವಪ್ಪನು ಪ್ಯಾಕು. ನಿಮ್ಮ ಕೈಯ ಇದೆ ಭಾಗವತ ಪುಸ್ತಕ ಒಂದನ್ನು ನಿಮಗೆ ಕೊಟ್ಟು ನಿಮ್ಮ ಕೈಯ ತೆಗೆದುಕೊಂಡದ್ದು ಬತ್ತ ಖಂಡಿಗೆ ಐದು ಖಂಡುಗ ಬತ್ತಕ್ಕೆ ಒಂದು ವರುಷ ಮಾಡಿದ್ದು ಇದೆ. ವೆಂಕಪ್ಪ ಹೆಗಡೆ ಮೃತ ಬಿದ್ದಾವಾಗ್ಗೆ ತನ್ನ ಅತ್ತಿಗೆಗೆ ಅಮ್ಮನ ಪುತ್ರ ಪೇಳಿದರಿಂದ ಇದೇ ಪುಸ್ತಕವನ್ನು ನಿಮಗೆ ಒಳಗೆ ಬರೆದ ವರಷಕೆ ನಿರ್ಣಯ ಮಾಡಿ ಕೊಟ್ಟಿದ್ದೇನೆ. ಈ ಪುಸ್ತಕಯನ್ನು ಬರಬೇಕಂತ ಕೆಳ ಕಾರಣ ಇಲ್ಲ ಎಂದು ನನ್ನ ಆತ್ಮಸಂತೋಷದಿಂದ ಬರೆಸಿಕೊಟ್ಟ ರಸೀದಿ. ಕರ್ತುವಾರ್ಸಕೆಯಿಂದ ಇದಕೆ ಸಾಕ್ಷಿಗಳು ಮಾಣಿಕಾರ ತಮ್ಮಣ ಭಟ್ಟರು ಹೆಗ್ಗಾರಗದ್ದೆ ತಿಮ್ಮಪ್ಪ ಹೆಗಡೇರು ತಿಮ್ಮಪ್ಪನ ರುಜು ಈ ಉಭಯತರ ಸಮ್ಮತದಿಂದ ದಾರೇಶ್ವರದ ನಾಗತೀರ್ಥದ ಗೋವಿಂದಭಟ್ಟನು ಬರೆಸಿದ ರಸೀದಿ

ಕಂಸಲೆ ವಿವಾಹ. ಅಗ್ನಿಮೂಷಿಕ ಚೊರೇಭ್ಯೋಶಿವೋ ರಕ್ಷತ್ತು ಪುಸ್ತಕಂ.
ವಿರೋಧಿ ಸಂವತ್ಸರದಲ್ಲಿ ಬರೆದುದು ಎಂದರೆ ಸುಮಾರು ೧೮೮೯ನೇ ಇಸವಿಯಲ್ಲಿ ಬರೆದ ಓಲೆ ಇದು. ಒಂದು ಖಂಡುಗ ಎಂದರೆ ೭೦ ಕೆಜಿ. ಕೇವಲ ಒಂದು ಓಲೆಗರಿ ಗ್ರಂಥಕ್ಕೆ ಆಗಿನ ಜನ ನೀಡುತ್ತಿದ್ದ ಮನ್ನಣೆಯಾದರೂ ಎಷ್ಟಿರಬೇಡ?






Wow, we were cultured, long time ago albeit.