'ಏಸುವಿನ ಕೊನೆಯ ಭೋಜನ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಭೋಜನ ಎನ್ನುವುದು ಮನುಷ್ಯನ ನಿತ್ಯದ ಕ್ರಿಯೆ. ಊಟವಿಲ್ಲದೆ ದಿನ ದೂಡುವವರು ಉಪವಾಸ ಕೈಗೊಂಡವರು. ಊಟವಿಲ್ಲದೆ ಮನುಷ್ಯ ಬದುಕಲಾರ. ಆದರೆ ತನ್ನ ಕೊನೆಯ ಭೋಜನ ಯಾವುದು ಎಂಬುದನ್ನು ಯಾರೂ ಹೇಳಲಾರರು. ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಕೊನೆಯ ಭೋಜನವನ್ನು ನಿರ್ಧರಿಸಬಹುದು. ಅವನಿಗೆ ತನ್ನ ಕೊನೆಯ ಊಟ ಗೊತ್ತಿರುತ್ತದೆ. ಆ ಊಟದ ನಂತರ ಅವನಿಗೆ ಊಟವಿಲ್ಲ; ಬದುಕೂ ಇಲ್ಲ. ಇದನ್ನೆಲ್ಲ ತಿಳಿದ ಮನುಷ್ಯ ಆ ಊಟವನ್ನು ಮಾಡುವುದು ಸಾಧ್ಯವೇ? ನಿನಗೆ ಇಷ್ಟವಾದದ್ದು ಯಾವುದು ತಿಳಿಸು, ಅದನ್ನು ಕೊಡುತ್ತೇವೆ ಎನ್ನುವ ಉದಾರತೆಯನ್ನು ಮರಣದಂಡನೆಗೆ ಗುರಿಪಡಿಸಿದವರು ತೋರಬಹುದು. ಆದರೆ ಅದನ್ನು ಸವಿಯುವ ಮನಸ್ಥಿತಿಯೇ ಕೊನೆಯ ಭೋಜನದ ಮನುಷ್ಯನಿಗೆ ಇರುವುದಿಲ್ಲ. ಸಾವನ್ನು ಎದುರಿಗೆ ಕೂಡಿಸಿಕೊಂಡು ಊಟಮಾಡುವುದು ಹೇಗೆ? ತನ್ನನ್ನೇ ತುತ್ತುಮಾಡಿ ತಿನ್ನಲು ಸಿದ್ಧವಿರುವ ಸಾವೇ ಕಣ್ಮುಂದೆ ಇರುವಾಗ ತಾನು ತುತ್ತನ್ನು ಎತ್ತಿ ಉಣ್ಣುವ ಧೈರ್ಯ, ಉತ್ಸಾಹ ಯಾರಿಗಿರುತ್ತದೆ?
ಇಂಥ ಧೈರ್ಯವನ್ನು ತೋರಿದವನು ಏಸುಕ್ರಿಸ್ತ. ಈತನನ್ನು ದೇವದೂತ ಎನ್ನುವವರಿದ್ದಾರೆ; ದೇವಮಾನ ಎನ್ನುವವರಿದ್ದಾರೆ. ಈತ ದೇವರ ಅವತಾರ ಎಂದು ನಂಬುವವರೂ ಇದ್ದಾರೆ. ಅದೇನಲ್ಲದಿದ್ದರೂ ಈತ ಮಹಾಮಾನವ. ತನ್ನೊಡಲ ತುಂಬ ಪ್ರೀತಿ, ಕರುಣೆ, ಸತ್ಯವನ್ನೇ ತುಂಬಿಕೊಂಡಿದ್ದ. ತನ್ನಂತೆಯೇ ಬದುಕುವ ಮನುಷ್ಯರನ್ನು ಪ್ರೀತಿಸಿದ. ದ್ವೇಷ ಬೆಂಕಿಯಂತೆ ಸುಡುತ್ತದೆ; ಅದನ್ನು ದೂರವಿಡಿ. ಪ್ರೀತಿ ಪೊರೆಯುತ್ತದೆ, ಹತ್ತಿರಕ್ಕೆ ತಂದುಕೊಳ್ಳಿ, ನಿಮ್ಮೆದೆಗೆ ತುಂಬಿಕೊಳ್ಳಿ ಎಂದ ಈ ಗುರು.
ಈತನಿಗೂ ಒಂದು ಕೊನೆಯ ಭೋಜನವಿತ್ತು. ಇದು ತನ್ನ ಅಂತಿಮ ಭೋಜನ ಎಂಬುದು ಏಸುವಿಗೆ ತಿಳಿದಿತ್ತು. ಈ ಭೋಜನವನ್ನು ಆತ ತನ್ನ ಶಿಷ್ಯರ ಜೊತೆ ಮಾಡಿದ; ತನ್ನ ಊಟವನ್ನು ಹಂಚಿಕೊಂಡು ತಿಂದ. ತಾನು ನಂಬಿಕೊಂಡ ಸತ್ಯವನ್ನು ತನ್ನ ಶಿಷ್ಯರು ಮನುಕುಲಕ್ಕೆ ಮುಟ್ಟಿಸಬೇಕು, ಆ ಮೂಲಕ ಮನುಕುಲ ನೆಮ್ಮದಿಯಿಂದ ಬದುಕಬೇಕೆಂದು ಬಯಸಿದ್ದ ಏಸು ತನ್ನ ಕೊನೆಯ ಭೋಜನವನ್ನು ಈ ಶಿಷ್ಯರ ಜೊತೆಗೆ ಮಾಡಿದ. ತನ್ನ ತಟ್ಟೆಯಲ್ಲಿದ್ದ ಬ್ರೆಡ್ಡನ್ನು ಮುರಿದು ಮುರಿದು ಶಿಷ್ಯರಿಗೆ ಹಂಚಿದ. ದ್ರಾಕ್ಷಾರಸವನ್ನು ಕಪ್ಪುಗಳಲ್ಲಿ ತುಂಬಿ ತುಂಬಿ ನೀಡಿದ. ‘ಈ ಬ್ರೆಡ್ಡು ಕೇವಲ ಬ್ರೆಡ್ಡಲ್ಲ, ನನ್ನ ದೇಹದ ಒಂದು ಭಾಗ; ಅದನ್ನೇ ನಿಮಗೆ ಹಂಚುತ್ತಿದ್ದೇನೆ’ ಎಂದು ಹೇಳಿದ. ಶಿಷ್ಯರ ಕಪ್ಪುಗಳನ್ನು ತುಂಬಿದ್ದ ದ್ರಾಕ್ಷಾರಸ ತನ್ನ ದೇಹದ ರಕ್ತವಲ್ಲದೆ ಬೇರಲ್ಲ ಎಂದ. ಈ ರಕ್ತ ಪಾಪಗಳನ್ನು ತೊಳೆಯುವುದೆಂದು ಹೇಳಿದ. ತನ್ನ ಶಿಷ್ಯರು, ಮನುಕುಲದ ಒಳಿತಿಗಾಗಿ ಅಗತ್ಯ ತ್ಯಾಗಕ್ಕೂ ಸಿದ್ಧವಾಗಬೇಕೆಂದು ವಿನಂತಿಸಿದ.
ಏಸು ಇನ್ನೊಂದು ಸಂಗತಿಯನ್ನೂ ಅರಿತಿದ್ದ. ತನ್ನ ಶಿಷ್ಯರಲ್ಲಿಯೇ ಒಬ್ಬ ದ್ರೋಹಿ ಇರುವುದು ಅವನಿಗೆ ತಿಳಿದಿತ್ತು. ಆದರೂ ಆತ ಆ ಶಿಷ್ಯನನ್ನು ಹೊರಗಿಡಲಿಲ್ಲ. ಎಲ್ಲರಂತೆ ಅವನನ್ನೂ ಹತ್ತಿರದಲ್ಲಿಯೇ ಕುಳ್ಳಿರಿಸಿಕೊಂಡ. ಅವನ ಪಾದವನ್ನೂ ತೊಳೆದ. ಅವನಿಗೂ ಬ್ರೆಡ್ಡು ಮತ್ತು ದ್ರಾಕ್ಷಾರಸ ನೀಡಿದ. ಈ ಭೋಜನ ತನ್ನ ಕೊನೆಯ ಭೋಜನ ಎಂಬ ವಿಷಾದವಾಗಲೀ, ನೋವಾಗಲೀ ಈ ಮಹಾಗುರುವಿಗೆ ಇರಲೇ ಇಲ್ಲ. ಬದುಕನ್ನು ಅದು ಇರುವಂತೆಯೇ ಎದುರಿಸಲು ಆತ ತಯಾರಾಗಿದ್ದ. ಈ ಭೋಜನವನ್ನು ಸಂತೋಷದಿಂದಲೇ ಸವಿದ. ಈ ಭೋಜನಕ್ಕೆ ಹೊಸ ಅರ್ಥವನ್ನು, ಸಾರ್ಥಕತೆಯನ್ನು ತಂದ. ಹಾಗಾಗಿಯೇ ಈ ಭೋಜನ ಒಂದು ಮಹಾ ಭೋಜನವಾಗಿ ಇತಿಹಾಸದಲ್ಲಿ ಉಳಿಯಿತು. ಕ್ರಿಶ್ಚಿಯನ್ನರಿಗೆ ಪವಿತ್ರ ಆಚರಣೆಯಾಗಿಯೂ ಉಳಿದಿದೆ.

ತನ್ನ ಹನ್ನೆರಡು ಜನ ಶಿಷ್ಯರನ್ನು ಆತ ಸ್ನೇಹಿತರೆಂದು ಕರೆದ. ‘ನೀವು ನನ್ನ ಸೇವಕರಲ್ಲ, ಸ್ನೇಹಿತರು; ನನ್ನ ನಂತರ ನನ್ನ ವಿಚಾರಗಳನ್ನು ಜನರಿಗೆ ತಿಳಿಸುವ ಗೆಳೆಯರು. ನಾನು ಕಂಡುಕೊಂಡ ಸತ್ಯವನ್ನು, ಕರುಣೆ, ಪ್ರೀತಿಗಳನ್ನು ಜನರಿಗೆ ಹೇಳುವವರು’ ಎಂದು ಹೇಳಿದ. ಇದು ಶಿಷ್ಯರ ಒಳನಂಬಿಕೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ತನ್ನ ಅಗಲಿಕೆಯ ನಿಜವನ್ನೂ ಅವರು ಅರಿಯಲಿ ಎಂಬ ಒಳಮರ್ಮವೂ ಏಸುವಿಗೆ ಇತ್ತು. ಅಗಲಿಕೆ ಅನಿವಾರ್ಯ, ಗುರು ತೀರಿ ಹೋದರೂ, ಅವನ ಬೋಧೆ ಮುಗಿಯುವುದಲ್ಲ, ಅವನ ತತ್ವ ಮನುಕುಲಕ್ಕೆ ಮುಟ್ಟಬೇಕು, ಈ ತತ್ವವನ್ನು ತಿಳಿದವರು ತಿಳಿಯದವರಿಗೆ ಹೇಳಬೇಕು ಎಂಬ ಆಶಯ ಏಸುವಿಗೆ ಇತ್ತು. ತನ್ನ ಶಿಷ್ಯರನ್ನು ಗಟ್ಟಿಗೊಳಿಸುತ್ತಲೇ ಅವರು ಮಾಡಬೇಕಾದ ಕೆಲಸವನ್ನೂ ಈ ಗುರು ತಿಳಿಸಿದ್ದ. ಮುಂದೆ ಬಂದೆರಗಬಹುದಾದ ಆಪತ್ತನ್ನು ಆತ ಅರಿತಿದ್ದ. ಹೀಗಾಗಿಯೇ ಏಸು ತಾನು ಸಾರದಲ್ಲಿ ಹೇಳಬೇಕಾಗಿದ್ದ ಮಾತುಗಳನ್ನು ಹೇಳಿ ಮುಗಿಸಿದ. ಇದೇ ವಿದಾಯದ ಸಂಕಥನ; ಇದೇ ಧರ್ಮಬೋಧೆ; ಕ್ರೈಸ್ತಧರ್ಮದ ಸಾರವೂ ಇದೇ.
ಹೀಗಾಗಿಯೇ ಈ ಭೋಜನಕೂಟಕ್ಕೆ ಇತಿಹಾಸದಲ್ಲಿ ದೊಡ್ಡ ಜಾಗ. ಇನ್ನೂ ಕೆಲವು ಕಾರಣಗಳಿಗೂ ಇದೊಂದು ಮಹಾ ಸನ್ನಿವೇಶ. ಏಸುವಿಗೆ ಮಹಾ ದ್ರೋಹ ಬಗೆದ ಸನ್ನಿವೇಶವೂ ಇದೇ. ಈ ಊಟದ ನಂತರವೇ ಏಸುವನ್ನು ಬಂಧಿಸಲಾಯಿತು; ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಶಿಲುಬೆಗೂ ಏರಿಸಲಾಯಿತು. ತನ್ನ ಶಿಲುಬೆಯನ್ನು ತಾನೇ ಹೊತ್ತು ಸಾಗಿದ ಏಸು ಇಡೀ ಮನುಕುಲಕ್ಕೆ ‘ತನ್ನ ಶಿಲುಬೆಯನ್ನು ತಾನೇ ಹೊರುವ’ ಪಾಠವನ್ನು ಹೇಳದೆಯೇ ಹೇಳಿದ; ಸಹನೆಯನ್ನು ಕಲಿಸಿದ. ಶತ್ರುವನ್ನೂ ಕರುಣೆಯಿಂದ ನೋಡುವುದನ್ನು ಹೇಳಿಕೊಟ್ಟ.
ಶಿಲುಬೆಗೆ ಏರಿಸುವಾಗ ಈ ಗುರುವಿನ ಎಡಕ್ಕೊಬ್ಬ ಕಳ್ಳ; ಬಲಕ್ಕೊಬ್ಬ ಕಳ್ಳ. ಕೆಳಗಡೆ ತಾಯಿ ಮೇರಿ ಮತ್ತು ಶಿಷ್ಯೆ ಮೇರಿಮ್ಯಾಗ್ಡಲೀನ್. ಎಲ್ಲರನ್ನೂ ಏಸು ಕರುಣೆ, ಪ್ರೀತಿ ತುಂಬಿದ ಕಣ್ಣುಗಳಿಂದ ನೊಡಿದ. ಈತ ಎಲ್ಲರ ಪಾಪಗಳಿಗಾಗಿ ಸತ್ತ ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ.
ಸಹಪಂಕ್ತಿ ಭೋಜನ ನಮ್ಮ ದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ. ಅನಿಷ್ಟ ಪದ್ಧತಿಯಾಗಿ ನಮ್ಮಲ್ಲಿ ಇನ್ನೂ ಉಳಿದಿರುವ ಜಾತಿ ವ್ಯವಸ್ಥೆಗೇ ನೇತುಹಾಕಿಕೊಂಡಿರುವವರು, ಎಲ್ಲರೂ ಸಾಲಾಗಿ ಕುಂತು ಒಟ್ಟಿಗೇ ಊಟಮಾಡುವುದನ್ನು ಅಲ್ಲಗಳೆಯುತ್ತಾರೆ. ‘ಸಹನೌ ಭುನಕ್ತು’ ಎಂಬುದು ಒಂದು ಗಾಳಿ ಮಾತಾಗಿ ಮಾತ್ರ ಉಳಿಯುವಂತೆ ಮಾಡಿದ್ದೇವೆ. ಆದರೆ ಏಸು ಎಲ್ಲರೊಡನೆ ಕುಳಿತು ಉಂಡ; ತನ್ನ ಊಟವನ್ನು ಹಂಚಿಕೊಂಡ; ತನ್ನ ವಿಚಾರಗಳನ್ನು ಹಂಚಿಕೊಂಡ.
ನಮ್ಮ ಬುದ್ಧ ಕೂಡಾ ಇಂಥವನೇ. ಈತ ಮಹಾನ್ ವಿಚಾರವಾದಿ. ‘ಸಹನೌ ಭುನಕ್ತು’ ಎಂಬುದು ಬುದ್ಧನಂಥ ಮಹಾನ್ ಚೇತನಕ್ಕೆ ಕೇವಲ ಗಾಳಿಯ ಮಾತಾಗಿರಲಿಲ್ಲ. ಬುದ್ಧ ಮನೆಮನೆಯ ಮುಂದೆ ಭಿಕ್ಷೆಗಾಗಿ ಕೈಯೊಡ್ಡಿ ಅವರು ಕೊಟ್ಟದ್ದನ್ನು ತಿಂದು ಹೊಟ್ಟೆತುಂಬಿಸಿಕೊಂಡ. ಅವನ ಭಿಕ್ಷೆಗೆ ಜಾತಿಯೆಂಬುದು ಅಡ್ಡಗೋಡೆಯಾಗಿರಲಿಲ್ಲ; ಧರ್ಮವೂ ಅವನ ಹಾದಿಯಲ್ಲಿ ಮುಳ್ಳಾಗಿರಲಿಲ್ಲ. ಅಷ್ಟೇಕೆ, ಭಿಕ್ಷಾಪಾತ್ರೆ ಹಿಡಿಯುವ ಮೂಲಕ ಅವನು ತನ್ನೊಳಗಿನ ಅಹಂಕಾರವನ್ನು ಮೀರಿದ್ದ. ತನ್ನ ಅನುಯಾಯಿಗಳೆಲ್ಲರೂ ಹೀಗೆಯೇ ಇರಬೇಕೆಂದು ಅವನು ಬಯಸಿದ. ‘ಎಲ್ಲಿಯೂ ನಿಲ್ಲದೆ’, ‘ಮನೆಯನೆಂದೂ ಕಟ್ಟದೆ’ ಬಯಲಲ್ಲೇ ಆಲಯವನ್ನು ಕಟ್ಟಿದ, ಮಹಾಯಾತ್ರಿ ಬುದ್ಧನಿಗೆ ಭೋಜನವೆಂಬುದು ದೊಡ್ಡ ವಿಷಯವೇ ಆಗಿರಲಿಲ್ಲ. ಮನುಷ್ಯರನ್ನು ವಿಂಗಡಿಸಲು, ಒಡೆಯಲು ನಾವು ಭೋಜನ ಕೂಟಗಳನ್ನು ಬಳಸುತ್ತಿದ್ದೇವೆ; (ರಾಜಕೀಯ ಭೋಜನಕೂಟಗಳಂತೂ ರಾಜಕೀಯ ತಂತ್ರಗಳಾಗಿ ಮಾರ್ಪಟ್ಟಿವೆ) ಬುದ್ಧನನ್ನು ಓಡಿಸಿದ ನಾಡು ನಮ್ಮದು.
ಉಂಡ ಎಲೆಗಳನ್ನೂ ನಾವು ಸುಮ್ಮನೆ ಎಸೆಯುವುದಿಲ್ಲ. ಮೌಢ್ಯಗಳನ್ನು ಬಿತ್ತಲು ಈ ಎಲೆಗಳನ್ನು ಬಳಸುತ್ತೇವೆ. ‘ಮಡೆಸ್ನಾನ’ ಎಂಬ ಮೌಢ್ಯ ನಂಬ ನಂಬಿಕೆಯ ನೆಲೆಯಾಗಿ ಉಳಿದುಕೊಳ್ಳುತ್ತದೆ. ಅದಕ್ಕೆ ನೀರೆರೆದು ಪೋಷಿಸುವ ಮಹಾನ್ ಕಾರ್ಯಕ್ಕೆ ನಮ್ಮ ಧಾಮರ್ಿಕ ಮುಖಂಡರು ಮುಂದಾಗುತ್ತಾರೆ. ನಮಗೆ ಜಾತಿಯೂ ಬೇಕು; ಮೌಢ್ಯವೂ ಬೇಕು. ಏಸು, ಅಲ್ಲಾ, ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ್, ಗಾಂಧಿ ಎಲ್ಲರನ್ನೂ ಬದಿಗೆ ತಳ್ಳಿ ನಾವು ಅಪ್ಪಿಕೊಳ್ಳುವ ಹಾದಿಯಲ್ಲಿ ನಮಗೆ ನಿತ್ಯವೂ ಭೋಜನವೇ. ಅಂತಿಮ ಭೋಜನವೆನ್ನುವುದು ನಮಗೆ ಇಲ್ಲವೇ ಇಲ್ಲ.
 

‍ಲೇಖಕರು G

June 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

    • kvtirumalesh

      ಜಿ.ಪಿ. ಬಸವರಾಜು ಅವರ ಲೇಖನ ಮತ್ತು ದತ್ತರಾಜು ಅವರ ಪ್ರತಿಕ್ರಿಯೆ ಎರಡೂ ಸ್ವಾರಸ್ಯಕರವಾಗಿವೆ. ನಾವು ನಮ್ಮ ಇಂದಿನ ಸಮಸ್ಯೆಗಳನ್ನು ಕಂಡುಕೊಳ್ಳುವುದಕ್ಕೆ ಮತ್ತು ಪರಿಹರಿಸಿಕೊಳ್ಳುವುದಕ್ಕೆ ಯೇಸು, ಬುದ್ಡ, ಶಂಕರರ ಸಹಾಯ ಪಡೆಯುವ ಅಗತ್ಯವಿದೆಯೆಂದು ನನಗನಿಸುವುದಿಲ್ಲ. ಇವರೆಲ್ಲ ಎಷ್ಟೇ ಖ್ಯಾತನಾಮರಾದರೂ ತಂತಮ್ಮ ಕಾಲದ ಪರಿಮಿತಿಗಳನ್ನು ಸಂಪೂರ್ಣ ಮೀರಿದವರೇನಲ್ಲ.
      ನನಗೆ ಕೆಲವು `ಕೀಟಲೆ’ ಪ್ರಶ್ನೆಗಳು ಮನಸ್ಸಿಗೆ ಬರುವುದಿದೆ: ಬುದ್ಡನ ಕುರಿತಾದ ನಮ್ಮ ಇಮೇಜ್ ಅವನನ್ನು ಕ್ಲೀನ್-ಶೇವನ್ ಆಗಿ ತೋರಿಸುತ್ತದೆ (ಅದೇ ರೀತಿ ಶಂಕರರು ಕೂಡಾ). ಆತ ದಿನವೂ ಕ್ಷೌರ ಮಾಡಿ(ಸಿ)ಕೊಳ್ಳುತ್ತಿದ್ದನೇ?! ಊಟಕ್ಕೆ ಅವನು ಭಿಕ್ಷೆ ಎತ್ತುತ್ತಿದ್ದ; ಆದರೆ ಅಡುಗೆ ಯಾರು ಮಾಡುತ್ತಿದ್ದರು? ಇನ್ನು ಅವನ ಬಟ್ಟೆ ಬರೆ ಇತ್ಯಾದಿ? ಕಾಲಿಗೆ ಚಪ್ಪಲಿ? ರಾತ್ರಿ ದೀಪಕ್ಕೆ ಅವನು ಏನು ಮಾಡಿಕೊಳ್ಳುತ್ತಿದ್ದ? ಕುಡಿಯುವುದಕ್ಕೆ ನೀರು? ಮಲಗಲು ಚಾಪೆ? ಇದನ್ನೆಲ್ಲ ಅವನ ಶಿಷ್ಯರು ಅದು ಹೇಗೋ ನೋಡಿಕೊಳ್ಳುತ್ತಿದ್ದರೇ? ಹೇಗೆ? ಭಿಕ್ಕುಗಳು ಸಂಘವನ್ನು ಕಟ್ಟಿಕೊಳ್ಳುತ್ತಿದ್ದುದು ಇದಕ್ಕೆಯೇ?
      ಎಲ್ಲರೂ ಭಿಕ್ಷುಗಳಾಗಿಬಿಟ್ಟರೆ (ಅದೇ ತಾನೆ ಉದ್ದೇಶ?) ಭಿಕ್ಷೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತಿದೆಯಲ್ಲ? (ರೋಗಿಗಳಿಗೆ, ಅದರಲ್ಲೂ ಸಾಂಕ್ರಾಮಿಕ ರೋಗಗಳಿರುವವರಿಗೆ, ಸನ್ಯಾಸ ದೀಕ್ಷೆಯನ್ನು ಬುದ್ಡಿಸಮಿನಲ್ಲೂ ಕೊಡುತ್ತಿರಲಿಲ್ಲ ಎಂದು ನಾನು ಒಂದೆಡೆ ಓದಿದ ನೆನಪು. ಇದು ಯಾಕೆ ಹೀಗೆ?) ಮಹಾನ್ ವಿಚಾರವಾದಿ ಬುದ್ಡ ಇದಕ್ಕೆ ಏನು ಹೇಳುತ್ತಾನೆ?
      ಅಹಿಂಸಾವಾದಿಯಾದ ಬುದ್ಡ ಆಹಾರಕ್ಕೆ ಪ್ರಾಣಿಗಳನ್ನು ಕೊಲ್ಲಬಹುದು ಎನ್ನುವ ಅಭಿಪ್ರಾಯ ಹೊಂದಿದ್ದನೇ? ಹಾಗನಿಸುತ್ತಿದೆ, ಯಾಕೆಂದರೆ ಬುದ್ಧ ಸ್ವತಃ ಮಾಂಸಾಹಾರ ಮಾಡುತ್ತಿದ್ದ ಎಂದು ಅನಿಸುತ್ತದೆ (ಅಂಥಾ ನಂಬಿಕೆಯಂತೂ ಕೆಲವರಲ್ಲಿದೆ).
      ಈ ಏಸು, ಬುದ್ಡ, ಶಂಕರ ಮುಂತಾದವರ ನಮ್ಮ ಕಲ್ಪನೆಗಳಲ್ಲಿ ವಾಸ್ತವಾಂಶ ಎಷ್ಟು, ನಮ್ಮದೇ ಕಲ್ಪನೆಗಳೆಷ್ಟು ಎಂದು ಗೊತ್ತಾಗುವುದು ಹೇಗೆ? ನಾವು ಅವರನ್ನೆಲ್ಲ ನಮಗೆ ಬೇಕಾದಂತೆ ಕಲ್ಪಿಸಿಕೊಳ್ಳುತ್ತಿಲ್ಲವೇ? (ನಾನೊಮ್ಮೆ ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಬರೆದಾಗ ನನಗೊಬ್ಬರು ಈಮೇಲ್ ಕಳಿಸಿ, ಆತ ಎ‍ಷ್ಟು ಹೆಣ್ಣುಹಿಡುಕನಿದ್ದ ಎನ್ನುವುದು ನಿಮಗೆ ಗೊತ್ತಿಲ್ಲವೇ ಎಂದು ಕೇಳಿದರು. ನನಗೆ ಗೊತ್ತಿರಲಿಲ್ಲ. ನಂತರ ಅಂಥ ಕೆಲವು ವದಂತಿಗಳು ಇತರ ಮೂಲಗಳಿಂದ ನನ್ನ ಕಿವಿಗೆ ಬಿದ್ದುವು. ಯಾಕೆ ಹೇಳುತ್ತಿದ್ದೇನೆ ಎಂದರೆ ನನ್ನ ರಾಧಾಕೃಷ್ಣನ್ ಕಲ್ಪನೆ ಪಠ್ಯಪುಸ್ತಕದ್ದಾಗಿದ್ದಿತು. ಇತರ ವಿಷಯಗಳು ನನ್ನ ಕಣ್ಣಿಗೆ ಬೀಳುತ್ತಿರಲೇ ಇಲ್ಲ. ಸಾರಾಂಶ: ನಾವು ಏನನ್ನು ನೋಡಲು ಬಯಸುತ್ತ್ತೇವೆಯೋ ಅದನ್ನು ಮಾತ್ರ ಕಾಣುತ್ತೇವೆ.)
      ಭಿಕ್ಷೆ ವಿನೀತತೆಯ, ನಿರಹಂಕಾರದ ಸಂಕೇತವಾದರೆ, ಮಡೆಸ್ನಾನವನ್ನು ಬೆಂಬಲಿಸುವವರು (ನಾನು ಬೆಂಬಲಿಸುವುದಿಲ್ಲ) ಕೂಡಾ ಇದನ್ನೇ ಹೇಳುತ್ತಾರೆ: ಇತರರ ಎಂಜಲೆಲೆಗಳ ಮೇಲೆ ಹೊರಳುವುದು ನಿರಹಂಕಾರದ ಅತ್ಯುನ್ನತ ಸಂಕೇತ! ನೀವು ಹೊರಳಿ ನೋಡೋಣ!! ಹೊರಳಲಾರಿರಿ; ಯಾಕೆಂದರೆ ನಿಮ್ಮಲ್ಲಿ ಇನ್ನೂ ಅಹಂ ಇದೆ. ಭಿಕ್ಷೆಯೆತ್ತಿ ನೋಡೋಣ!!! ಎತ್ತಲಾರಿರಿ; ಯಾಕೆಂದರೆ ಅಹಂ!
      ಇನ್ನು ಸಹಭೋಜನದ ಕುರಿತಾಗಿ ಜಿ.ಪಿ. ಯವರ ಮಾತನ್ನು ಇಂದು ನಾವೆಲ್ಲ ಒಪ್ಪುವವರೇ. ಅದೇನೂ ಈಗ ಹೊಸ ಸಂಗತಿಯಾಗಿ ಉಳಿದಿಲ್ಲ; ಇಲ್ಲಿ ನಡೆಯುವ ಜಾತಿ ಭೇದವನ್ನು ತೊಡೆಯಲು ಆಮೂಲಾಗ್ರ ಕಾರ್ಯಕ್ರಮ ಅಗತ್ಯವಿದೆ. ಅದರೆ ಅವರು ನೀಡಿದ ಯೇಸುವಿನ ಉದಾಹರಣೆ ಇಲ್ಲಿ ಸಮಂಜಸವೆನಿಸುವುದಿಲ್ಲ: ಶಿಷ್ಯರ ಜೊತೆ ಊಟ ಮಾಡುವುದಕ್ಕೂ ನಾವು ಅನ್ನುವ ಸಹಭೋಜನದ ಸಂದರ್ಭಕ್ಕೂ ವ್ಯತ್ಯಾಸವಿದೆ. ಜಿ.ಪಿ. ಉದ್ದೇಶಿಸುವುದು ದೇವಸ್ಥಾನಗಳಲ್ಲಿ ನಡೆಯುವ ಸಾರ್ವಜನಿಕ ಭೋಜನ. ಅಲ್ಲಿ ಜಾತಿ ಮತ ಭಿನ್ನತೆಯಿಲ್ಲದೆ (ಪರಿಚಿತ-ಅಪರಿಚಿತ ವ್ಯತ್ಯಾಸವಿಲ್ಲದೆ) ಸಹಪಂಕ್ತಿ ಭೋಜನ ಇರಬೇಕು ಎನ್ನುವುದನ್ನು ವಾದಿಸಲು ಯೇಸುವಿನ ಕೊನೆಯ ಭೋಜನ ಸಮರ್ಪಕ ಉದಾಹರಣೆಯಾಗದು.
      ಯೇಸು ಬುದ್ಡರು ದೂರದ ಮಾತು; ಮಹಾತ್ಮಾ ಗಾಂಧಿಯವರ ಉದಾಹರಣೆ ನಮ್ಮ ಕಣ್ನ ಮಂದೆಯೇ ಇದೆ. ಏನಾಯಿತು? ಆಯಿತು, ಸ್ವಲ್ಪ ಮಟ್ಟಿಗೆ–ಅದನ್ನು ನಿರಾಕರಿಸುವಂತಿಲ್ಲ. ಆದರೂ ಇನ್ನು ಆಗಲಿರುವುದು ತುಂಬಾ ಇದೆ.
      ಮಡೆಸ್ನಾನದ ಪ್ರಶ್ನೆ ಬಂದಾಗ ಮಡೆಸ್ನಾನವನ್ನು ವಿರೋಧಿಸುತ್ತ ನಾನು, ಜನ ಬೇಕಾದರೆ ದೇವಸ್ಥಾನದ ಖಾಲಿ ಪ್ರಾಂಗಣದಲ್ಲಿ ಹೊರಳಲಿ ಎಂದಿದ್ದೆ. ಮಡೆಸ್ನಾನ ಕೆಲವು ದುರ್ಬಲ ವರ್ಗಗಳ ವಿರುದ್ಧ ನಡೆಯುವ ಶೋಷಣೆ ಎನ್ನುವುದು ನನ್ನ ವಿಚಾರವಾಗಿತ್ತು; ಈಗಲೂ ಅದೇ ಆಗಿದೆ. ಆದರೆ ಇಂಥ ವರ್ಗದವರೇ ಮಡೆಸ್ನಾನವನ್ನು ನಿಶೇಧಿಸಬಾರದು ಎಂದು ದೇಶದ ಉಚ್ಚ ನ್ಯಾಯಾಲಯದ ತನಕ ಹೋದರು, ಯಶಸ್ವಿಯೂ ಆದರು! ಇದೇನನ್ನು ಹೇಳುತ್ತದೆ ಎಂದು ಸ್ವಲ್ಪ ಯೋಚಿಸಿ ನೋಡಿ. ಜನ ಅದು ಯಾಕೋ ತಂತಮ್ಮ ಜಾತಿಗಳಿಗೆ, ತತ್ಸಂಬಂಧವಾದ ಆಚಾರ ವಿಚಾರಗಳಿಗೆ ಅಂಟಿಕೊಳ್ಳುವುದರಲ್ಲೇ ತಮ್ಮ ಶಕ್ತಿಯಿದೆ ಎಂದು ಹೆಚ್ಚು ಹೆಚ್ಚು ನಂಬಿಕೊಂಡಿದ್ದಾರೆ. ಈಚೆಗೆ ನಾನು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದಾಗ ಕಂಡುಬಂದುದು–ಎಷ್ಟೊಂದು ದೇವಸ್ಥಾನಗಳ ಬ್ರಹ್ಮಕಲಶಗಳು, ಜೀರ್ಣೋದ್ಧಾರಗಳು, ನೇಮಗಳು, ಭೂತಕೋಲಗಳು! ನನ್ನ ಸ್ವತಃ ನಂಬಿಕೆ ಏನೇ ಇರಲಿ, ನಾನು ಇದನ್ನೆಲ್ಲ ಇಲ್ಲದೆ ಮಾಡಬೇಕೆಂದು ಹೇಳುವವನಲ್ಲ. ಈ ನಮ್ಮ ದೇಶದ ಎಲ್ಲಾ ಧಾರ್ಮಿಕ ಪೂಜಾ ಮತ್ತು ಪ್ರಾರ್ಥನಾ ಸ್ಟಳಗಳನ್ನು ನಾಶಪಡಿಸುವುದು ಸಾಧ್ಯವೇ, ಅದರಿಂದ ಆಗುವ ಪರಿಣಾಮಗಳನ್ನಾದರೂ ನಾವು ಊಹಿಸಬಲ್ಲೆವೇ? ಆದ್ದರಿಂದ ಮಡೆಸ್ನಾನವನ್ನು ಸಹಾ ಕಾನೂನು ಮೂಲಕ ಹತ್ತಿಕ್ಕಬೇಕು ಎಂದು ಹೇಳುವವ ನಾನಲ್ಲ. ಆದರೆ ಮಡೆಸ್ನಾನದಿಂದ ಆಗುವ ಒಳಿತಿಗಿಂತ ಕೆಡುಕೇ ಹೆಚ್ಚು ಎನ್ನುವ ತಿಳುವಳಿಕೆ ಜನರಿಗೆ ಬರಬೇಕಿದೆ.
      ಅಷ್ಟರ ಮಟ್ಟಿಗೆ ಜಿ.ಪಿ.ಯವರ ಈ ಬರಹ, ಇಂಥ ನೂರಾರು ಬರಹಗಳು, ಸ್ವಾಗತಾರ್ಹವೇ. ಆದರೆ ಕನ್ವರ್ಟ್ ಆದವರಿಗೆ ಮತಬೋಧೆ ಮಾಡಿ ಪ್ರಯೋಜನವಿಲ್ಲ.
      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ
      • Anonymous

        ದತ್ತರಾಜ್‍ ಅಂಥವರು ‘ಪದ’ ಮತ್ತು ‘ಅರ್ಥ’ವನ್ನು ಹುಡುಕಲು ಎಲ್ಲೆಲ್ಲಿಗೋ ಹೋಗಿ ಕಷ್ಟಪಡುತ್ತಾರೆ. ಇತಿಹಾಸ, ಪುರಾಣ, ಶಬ್ದಕೋಶ ಎಲ್ಲ ಬೆದಕಿದರೂ ಅಂಥವರಿಗೆ ಇವತ್ತಿನ ‘ಪದಾರ್ಥವೇ’ ಸಿಕ್ಕುವುದಿಲ್ಲ. ಪದ ಮತ್ತು ಅರ್ಥವನ್ನು ಮೀರಿದ್ದು ‘ಪದಾರ್ಥ’ದಲ್ಲಿರುತ್ತದೆ ಎಂಬುದು ತಿಳಿಯದಿದ್ದರೆ ಬುದ್ಧ, ಗಾಂಧೀ, ಬಸವ,ಅಂಬೇಡ್ಕರ್ ವ್ಯಕ್ತಗಳಾಗದೆ ಎಳೆದು ತಂದ ವಸ್ತುಗಳಾಗಿ ಕಾಣಿಸುತ್ತಾರೆ.
        ”ಎಲ್ಲಿಗೆ ಬಂತೋ ಸಂಗಯ್ಯ ..? ಅಲ್ಲಿಗೆ ಬಂತೋ ಸಂಗಯ್ಯ ..!”
        -ಜಿ.ಪಿ.ಬಸವರಾಜು

        ಪ್ರತಿಕ್ರಿಯೆ
  1. Dattaraj

    ಜೆ.ಪಿ ಬಸವರಾಜು ಅವರಿಗೆ ನಮಸ್ಕಾರ. ನೀವು ಯಾವುದೋ ವಿಷಯ ಹೇಳಲಿಕ್ಕೆ ಹೋಗಿ ಮತ್ಯಾವುದೋ ವಿಷಯ ಪ್ರಸ್ತಾಪಿಸಿ ಗುಡಿಸಿ ಸಾರಿಸುವುದನ್ನು ನೋಡಿದರೆ ನಾವು ಬಾಲ್ಯದಲ್ಲಿ ಆಡುತ್ತಿದ್ದ ಆಟವನ್ನು ನೆನಪಿಸುತ್ತದೆ. ”ಎಲ್ಲಿಗೆ ಬಂತೋ ಸಂಗಯ್ಯ ..? ಅಲ್ಲಿಗೆ ಬಂತೋ ಸಂಗಯ್ಯ ..!” ಅನ್ನೋ ಆಟದ ಹಾಗೆ ಕ್ರಿಸ್ತನ ಕೊನೆಯ ಭೋಜನದ ಬಗ್ಗೆ ಹೆಡ್ಡಿಂಗು ಹಾಕಿ ಮತ್ತೆ ಯಥಾ ಪ್ರಕಾರ ಮಡೇಸ್ನಾನ ಪಂಕ್ತಿ ಭೋಜನ… ಬುದ್ಧ.. ಗಾಂಧೀ.. ಬಸವಣ್ಣ ..ಅಂಬೇಡ್ಕರ್. ಇದನ್ನೆಲ್ಲಾ ಎಳೆದು ತಂದಿದ್ದೀರಿ.
    ಇಂತಹ ಒಂದಿಷ್ಟು ಶಬ್ದಗಳಿಲ್ಲದೇ ಹೇಳಬೇಕಾದನ್ನು ಹೇಳಲು ಸಾಧ್ಯವೇ ಇಲ್ಲವೇ..?
    ಕೆಲವು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲಿಕ್ಕೆ ಬಯಸುತ್ತೇನೆ
    ೧. ಅದು ಯೇಸು ಕ್ರಿಸ್ತನ ಕೊನೆಯ ಭೋಜನವಾಗಿರಲಿಲ್ಲ. ಶಿಲುಬೆಗೆ ಏರಿಸಿದ ನಂತರವೂ ಕೂಡ ಕ್ರಿಸ್ತ ಬದುಕಿದ್ದ. ಶಿಲುಬೇಗೆರಿಸಿದವರೆಲ್ಲ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದ ಮೇಲೆ ಕ್ರಿಸ್ತನನ್ನು ಶಿಲುಬೆಯಿಂದ ಕೆಳಗಿಳಿಸಿ ಅವನಿಗೆ ರಹಸ್ಯವಾಗಿ ಚಿಕಿತ್ಸೆ ನೀಡಲಾಯಿತು. ಕ್ರಿಸ್ತ ತನ್ನ ತೊಂಭತ್ತಾರು ವರ್ಷ ವಯಸ್ಸಿನ ವರೆಗೆ ಬದುಕಿದ್ದ. ಈ ಬಗ್ಗೆ ಅನೇಕರು ಈಗಾಗಲೇ ಸಂಶೋಧನೆ ನಡೆಸಿ ದಾಖಲೆಗಳನ್ನು ಒಟ್ಟು ಮಾಡಿದ್ದಾರೆ. ಅಂತರ್ಜಾಲದಲ್ಲಿ ಅಂತಹ ಸಂಶೋಧನೆಗಳಿಗೆ ಸಂಬಂಧಿಸಿದ ಪುಸ್ತಕಗಳ ಮಾಹಿತಿ ನಿಮಗೆ ಸಿಗುತ್ತದೆ. ಪೆಂಗ್ವಿನ್..ಪ್ರಕಾಶನ.. ಹಾರ್ಪರ್ ಕಾಲಿನ್ ..ಮುಂತಾದ ಪ್ರಕಾಶನ ಸಂಸ್ಥೆಗಳು ಈ ಬಗ್ಗೆ ಅನೇಕ ಪುಸ್ತಕಗಳನ್ನು ಆಧಾರಸಹಿತವಾಗಿ ಪ್ರಕಟಿಸಿವೆ.
    ೨. ”ಸಹ ನೌ ಭುನಕ್ತು” ಸಂಸ್ಕೃತದ ಸಾಲನ್ನು ಉದಾಹರಿಸಿದ್ದೀರಿ. ಅದರ ಅರ್ಥ ನಾವೆಲ್ಲಾ ಒಟ್ಟಿಗೆ ಊಟ ಮಾಡೋಣ ಎಂದು ಅಲ್ಲ. ದಯಮಾಡಿ ಸಂಸ್ಕೃತ ಶಬ್ದಕೋಶ ನೋಡಿ. ”ನೌ” ಅನ್ನುವುದು ದ್ವಿವಚನ. ಈ ದ್ವಿವಚನ ಕನ್ನಡ ಭಾಷೆಯಲ್ಲಿ ಇಲ್ಲ. ಸಹ ನೌ ಭುನಕ್ತು ಎಂದರೆ ” ನಾವಿಬ್ಬರೂ ಒಟ್ಟಿಗೆ ಭುಜಿಸೋಣ” ಎಂದರ್ಥ. ಒಬ್ಬ ಗುರು ಮತ್ತು ಅವನ ಶಿಷ್ಯ ಸಃ ನೌ ಅವತು, ಸಹ ನೌ ಭುನಕ್ತು, ಸಹ ವೀರ್ಯಂ ಕರವಾವಹೈ. ತೆಜಸ್ವಿನೌ ಅಧೀತಮಸ್ತು . ಎಂದು ಅಧ್ಯಯನದ ಆದಿಯಲ್ಲಿ ಮಾಡಿಕೊಳ್ಳುವ ಪ್ರಾರ್ಥನೆ. ”ಸಃ” ಎಂದರೆ ”ಅವನು”. ಅವನು ನಮ್ಮಿಬ್ಬರನ್ನು ಕಾಪಾಡಲಿ, ನಾವಿಬ್ಬರೂ ಒಟ್ಟಿಗೆ ಭುಜಿಸೋಣ, ನಾವಿಬ್ಬರೂ ಒಟ್ಟಿಗೆ ವೀರ್ಯವತ್ತಾದ ಕಾರ್ಯಗಳನ್ನು ಮಾಡೋಣ, ನಾವಿಬ್ಬರೂ ಅಧ್ಯಯನ ಮಾಡಿದ ಮಂತ್ರಗಳು ನಮ್ಮಿಬ್ಬರನ್ನೂ ತೆಜಸ್ವಿಯನ್ನಾಗಿ ಮಾಡಲಿ, ನಾವಿಬ್ಬರೂ ಒಬ್ಬರನ್ನೋಬ್ಬರೂ ದ್ವೆಷಿಸುವುದಿಲ್ಲ” ಎಂದು ಆ ಶಾಂತಿ ಮಂತ್ರದ ಅರ್ಥ. ಇದರಲ್ಲಿ ಪ್ರಪಂಚದ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಸಂಸ್ಕೃತ ಸುಭಾಷಿತಗಳನ್ನು ಮತ್ತು ವೇದದ ವಾಕ್ಯಗಳನ್ನು ತಮಗೆ ಹೇಗೆ ಬೇಕೋ ಹಾಗೆ ತಮಗೆ ಬೇಕಾದ ಅರ್ಥ ಕೊಟ್ಟು ಕೊಟ್ ಮಾಡುವ ಪರಂಪರೆ ಬಹಳ ಹಳೆಯದು. ಇನ್ನಾದರೂ ಆ ಸವಕಲು ಪದ್ಧತಿಯನ್ನು ನಾವು ಬಿಡಬೇಕು. ಸಹನಾವವತು ಶಾಂತಿ ಮಂತ್ರವು ಒಬ್ಬ ಗುರು ಮತ್ತು ಅವನ ಶಿಷ್ಯ ಒಟ್ಟಿಗೆ ಅಧ್ಯಯನಕ್ಕೆ ಮುಂಚೆ ಹೇಳಿಕೊಳ್ಳಲಾಗುತ್ತಿದ್ದ ಶಾಂತಿ ಮಂತ್ರ. ಅದರ ಎಲ್ಲಾ ವಾಕ್ಯಗಳಲ್ಲಿ ದ್ವಿವಚನ ಪ್ರಯೋಗವಿದೆ. ಬಹುವಚನ ಇಲ್ಲವೇ ಇಲ್ಲ.
    ೩. ”ಬುದ್ಧ ಮನೆಮನೆಯ ಮುಂದೆ ಭಿಕ್ಷೆಗಾಗಿ ಕೈಯೊಡ್ಡಿ ಅವರು ಕೊಟ್ಟದ್ದನ್ನು ತಿಂದು ಹೊಟ್ಟೆತುಂಬಿಸಿಕೊಂಡ. ಅವನ ಭಿಕ್ಷೆಗೆ ಜಾತಿಯೆಂಬುದು ಅಡ್ಡಗೋಡೆಯಾಗಿರಲಿಲ್ಲ; ಧರ್ಮವೂ ಅವನ ಹಾದಿಯಲ್ಲಿ ಮುಳ್ಳಾಗಿರಲಿಲ್ಲ. ಅಷ್ಟೇಕೆ, ಭಿಕ್ಷಾಪಾತ್ರೆ ಹಿಡಿಯುವ ಮೂಲಕ ಅವನು ತನ್ನೊಳಗಿನ ಅಹಂಕಾರವನ್ನು ಮೀರಿದ್ದ. ” ಅಂತ ಬರೆದಿದ್ದೀರಿ. ತಾವು ದಯಮಾಡಿ ಭಾರತದ ಪ್ರಾಚೀನ ಇತಿಹಾಸ ಗಮನಿಸಬೇಕು. ಬುದ್ಧ ಹುಟ್ಟುವುದಕ್ಕೆ ಕನಿಷ್ಠ ಹತ್ತು ಸಾವಿರ ವರ್ಷ ಹಿಂದೆಯೇ ಭಾರತದಲ್ಲಿ ಭಿಕ್ಷೆ ಚಾಲ್ತಿಯಲ್ಲಿತ್ತು. ಗುರುಕುಲಗಳಲ್ಲಿ ಅಧ್ಯಯನ ಮಾಡುತ್ತಿದ್ದ ವಟುಗಳು ಭಿಕ್ಷೆ ಬೇಡಿ ಅದನ್ನು ತಂದು ಗುರುಕುಲದಲ್ಲಿ ಕೊಟ್ಟು ಅದನ್ನೇ ಹಂಚಿಕೊಂಡು ಉಣ್ಣುತ್ತಿದ್ದರು. ಗುರುಕುಲದ ವಿದ್ಯಾರ್ಥಿಗಳು ಮತ್ತು ಅಗ್ನಿಹೋತ್ರಿ ಬ್ರಾಹ್ಮಣರು ಭಿಕ್ಷೆಯ ಮೇಲೆಯೇ ಜೀವಿಸುತ್ತಿದ್ದರು. ಋಷಿಗಳು ಕೂಡ. ದಯಮಾಡಿ ಬುದ್ಧನಿಗಿಂತ ಮುಂಚೆ ಕೂಡ ಜಗತ್ತು ಇತ್ತು ಮತ್ತು ಆ ಜಗತ್ತು ಹೇಗಿತ್ತು.. ? ಭಾರತ ಹೇಗಿತ್ತು ? ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ವೇದದ ಅಂಗವಾದ ಶಿಕ್ಷಾ ಶಾಸ್ತ್ರ ದಲ್ಲಿ ಭಿಕ್ಷೆಯನ್ನೇ ಕಡ್ಡಾಯ ಅಂತ ಹೇಳಿದ್ದಾರೆ. ಆಚಾರ್ಯ ಶಂಕರರು ”ಭಿಕ್ಷೌಷಧಂ ಭುಜ್ಯತಾಂ” ಅಂತ ಹೇಳಿದ್ದಾರೆ. ಅವರೂ ಕೂಡ ಭಿಕ್ಷೆಯ ಮೇಲೆಯೇ ಬದುಕಿದ್ದಾರೆ. ಈ ಮಣ್ಣಿನಲ್ಲಿ ಕೋಟ್ಯಂತರ ಋಷಿಗಳು.. ಭಿಕ್ಷೆಯ ಮೇಲೆಯೇ ಬದುಕಿದ್ದಾರೆ. ಬುದ್ಧನಿಗಿಂತ ಎಷ್ಟೋ ಮುಂಚೆ.. ಮತ್ತು ಆಮೇಲೆ ಕೂಡ. ಇವತ್ತಿಗೂ ಕೇವಲ ಐದು ಮನೆಗಳಲ್ಲಿ ಭಿಕ್ಷೆ ಬೇಡಿ ಏನು ಸಿಗುತ್ತದೋ ಅದನ್ನು ಒಂದು ಬಟ್ಟೆಯಲ್ಲಿ ಹಾಕಿ ಹರಿಯುವ ಹೊಳೆಯ ನೀರಿನಲ್ಲಿ ಅದ್ದಿ ಅದರ ರಸವೆಲ್ಲ ಹೊರಟು ಹೋದಮೇಲೆ ಅದನ್ನು ತಿಂದುಕೊಂಡು ತಮ್ಮ ದೇಹವನ್ನು ಪೋಷಿಸಿಕೊಳ್ಳುವ ಆಧ್ಯಾತ್ಮಿಕ ಸಾಧಕರು ಭಾರತದಲ್ಲಿ ಇಂದಿಗೂ ೨೦೧೪ ರ ಲ್ಲಿಯೂ ಕೂಡ ಇದ್ದಾರೆ. ನಾನು ನಿಮಗೆ ತೋರಿಸಬಲ್ಲೆ.

    ಪ್ರತಿಕ್ರಿಯೆ
  2. gpbasavaraju

    ‘ಪದ’ ಮತ್ತು ‘ಅರ್ಥ’ಕ್ಕಾಗಿ ಇತಿಹಾಸ, ಪುರಾಣ, ಶಬ್ದಕೋಶ-ಹೀಗೆ ಎಲ್ಲೆಲ್ಲಿಯೋ ಸುತ್ತಾಡಿ ಬಂದರೂ ದತ್ತರಾಜ್‍ ಅಂಥವರಿಗೆ ‘ಪದಾರ್ಥ’ ಸಿಕ್ಕುವುದೇ ಇಲ್ಲ. ‘ಪದಾರ್ಥ’ಸಿಕ್ಕದಿದ್ದರೆ, ಬುದ್ಧ, ಬಸವ,ಏಸು, ಅಂಬೇಡ್ಕರ್‍ ಎಲ್ಲರೂ ವ್ಯಕ್ತಿಗಳಾಗಿ, ತತ್ವ ಸಿದ್ಧಾಂತಗಳಾಗಿ ಕಾಣುವ ಬದಲು, ಎಳೆದುತಂದ ವಸ್ತುಗಳಾಗಿ ಕಾಣಿಸುತ್ತಾರೆ. ಇಂಥವರಿಗೆ ಕೊನೆಗೂ ಉಳಿಯುವ ಸತ್ಯವೆಂದರೆ:
    ‘ಎಲ್ಲಿಗೆ ಬಂತೋ ಸಂಗಯ್ಯ ..? ಅಲ್ಲಿಗೆ ಬಂತೋ ಸಂಗಯ್ಯ ..!’
    ಜಿ.ಪಿ.ಬಸವರಾಜು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: