ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನು ‘ಸರಿ’ಯಾಗಬೇಕು ಈ ದೇಶದಲ್ಲಿ…!!

ಸತ್ಯಬೋಧ ಜೋಶಿ

ಈ ಭಾರತ ಕಂಡ ಇತ್ತೀಚಿನ 2500 ಸಾವಿರ ವರ್ಷಗಳನ್ನ.. ಅದರಷ್ಟೇ ಆಯುಷ್ಯದ ಒಬ್ಬ ಮನುಷ್ಯನ ಮನಸ್ಥಿತಿಗೆ, ಹೋಲಿಸಿದರೆ, ಒಪ್ಪಿಕೊಂಡೊ ಅಥವಾ ಒಪ್ಪದೆಯೋ ಒಟ್ಟಾರೆ,
ವೇದ ಕಾಲದ ಬಹುದೇವೋಪಾಸನೆಯಿಂದ 15ನೇ ಶತಮಾನದ ಭಕ್ತಿ ಪಂಥದವರೆಗೂ.. ಭಾರತೀಯ ಮನುಷ್ಯ ಅದೆಷ್ಟು ಬಾರಿ ಬದಲಾದ ಗೊತ್ತಾ!! “ವೇದಗಳೇ ನೀವು ಹೇಳುತ್ತಿರುವುದರ ಅರ್ಥ ‘ಹಾಗಲ್ಲಾ ಹೀಗೆ’ “ಅಂತ ಕವಲೊಡೆದು, ಮಹಾವೀರ, ಬುದ್ಧರಿಗೆ ಬುದ್ಧಿ ಹೇಳಿದ ನಾವು, ಏಸು, ಮಹಮ್ಮದರನ್ನ ಸ್ವೀಕರಿಸಿದರೂ, ಅವರು ಹೇಳಿದ್ದನ್ನೂ ನಾವು ನಮಗೆ ಬೇಕಾದ ಹಾಗೆ ಬೇರೆ ಬೇರೆಯಾಗಿಯೇ ಅರ್ಥೈಸಿಕೊಂಡಿದ್ದೇವೆ!

ಇನ್ನು ಇಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು ಅನ್ನುವುದಾದರೆ
ಬಸವ, ಗುರುನಾನಕ, ಮಾದೇಶ್ವರ, ಮಾಳಿಂಗರಾಯ ಮಂಟೇಸ್ವಾಮಿಗಳು ಬರುವ ಅವಶ್ಯಕತೆ ಏನಿತ್ತು!! ಯಾಕಿತ್ತು ಅಂದರೆ.. ನಿನಗೆ, ನಿನ್ನ ದೈವ, ಅರಿವು, ಆಕಾಶ, ನಿನ್ನ ಗುರುವಿನ ಮೂಲಕ ನಿನಗೆ ಸಿಕ್ಕಿ ಬಿಡ್ತು, ಜೊತೆಗೆ, ನೀನು ಭೂಮಿಯ ಮೇಲೆ ಬಂದ ಉದ್ದೇಶದಿಂದ ಹಿಡಿದು, ಬದುಕಿ, ಕೊನೆಗೆ ಮರಣ ಹೊಂದಿ, ಮುಂದೆ ಎಲ್ಲಿ ಹೋಗುವೆ? ಅನ್ನುವ ತನಕದ ನಿನ್ನ ಪ್ರಶ್ನೆಗಳಿಗೆ, ನಿನ್ನ ಗುರು, ನಿನ್ನ ದೇವರು, ಉತ್ತರಿಸಿಬಿಟ್ಟ, ಆದರೆ ನನಗೆ ಅದು ತಲುಪಲೇ ಇಲ್ಲವಲ್ಲ! ಆಗ ನಾನೇನು ಮಾಡಬೇಕು! ಅಥವಾ ನನಗೆ ನಿಮ್ಮ ಗುರುವಿನ ಉಪದೇಶ ಮೆದುಳಿಗಿಳಿದರೂ ಎದೆಗೆ ಇಳಿಯಲೇ ಇಲ್ಲ, ಕೆಲವೊಮ್ಮೆ ಎದೆಗಿಳಿದರೂ ಹಸಿವು ನೀಗಿಸಲಿಲ್ಲ! ಅಂದ ಮೇಲೆ, ನನ್ನವನಿಗಾಗಿ ನಾನು ಕಾಯಲೇ ಬೇಕಲ್ಲವೇ..!!

ಇಲ್ಲಿ ಬಂದ ಪ್ರತಿ ಗುರು, ದೈವ, ಮೇಲ್ನೋಟಕ್ಕೆ ಇನ್ನೊಬ್ಬ ಗುರುವನ್ನ , ಮತ್ತವನ ಸಿದ್ಧಾಂತವನ್ನ ಅಲ್ಲಗಳೆದರೂ, ಅಲ್ಲಗಳೆದಂತನ್ನಿಸಿದರೂ ಅವರೆಲ್ಲ ಬಂದಿದ್ದು, ಇನ್ಯಾರನ್ನೋ ತುಳಿಯಲಿಕ್ಕಲ್ಲ, ತನ್ನವರನ್ನ ಮೇಲೆತ್ತುವುದಕ್ಕೆ ಅಲ್ಲವೇ!! ಹಾಗಾಗಿ ಭಾರತೀಯನಾದ ನಾನು ‘ನನ್ನದೇ..’ ಅನ್ನುವ ಮುನ್ನ” ‘ನನ್ನ ದೈವ ‘ ಸಮಾಜದ ಎಲ್ಲರನ್ನೂ ಮುಟ್ಟಲಿಲ್ಲ, ಹಾಗಾಗಿ ‘ಹಲವರಿದ್ದಾರೆ ಇಲ್ಲಿ’ ” ಅನ್ನುವ ಕನಿಷ್ಠ ಪ್ರಜ್ಞೆ ಯನ್ನ ಬೆಳೆಸಿಕೊಳ್ಳಲೇ ಬೇಕು, ಇಲ್ಲವಾದರೆ ಇಂದ್ರನಿಗೊಬ್ಬ ನಾರಾಯಣ, ಬುದ್ಧನಿಗೊಬ್ಬ ಶಂಕರ,
ಅವರಿಗೆ ರಾಮಾನುಜ, ಮಧ್ವರು, ಅವರಿಗೊಬ್ಬ ಬಸವಣ್ಣ…ಆದರೆ ಒಬ್ಬರನ್ನೊಬ್ಬರು ಅಲ್ಲಗಳೆಯಲು ಬಂದ ಎಲ್ಲರೂ ನಮ್ಮೊಂದಿಗೆ ಉಳಿದರೆ, ಯಾರನ್ನ ನಂಬಬೇಕು? ಅನ್ನುವ ಸಂಘರ್ಷ ನಮ್ಮನ್ನ ಬೇರೆಯನ್ನಾಗಿಸುತ್ತಲೇ ಇರುತ್ತವೆ! ಸಹಜವೇ, ದೇವರೇ ಇಲ್ಲಿ ಬಂದಿಳಿಯ ಬೇಕಾದರೆ, ದೇವರ ಸಂದೇಶವಾಹಕರನ್ನ ನಂಬಬೇಕಾ! ಇಲ್ಲವೇ ಆ ದೇವರು ನನ್ನ ಅಳಲು ಕೇಳಿಸಿಕೊಳ್ಳಲಾರದಷ್ಟು ದೂರ, ಹಾಗಾಗಿ ಸಂದೇಶವಾಹಕರನ್ನ ಕಳಿಸಿದನಾ?? ಇಲ್ಲ ನಾನೇ ಪರಬಹ್ಮ ಸ್ವರೂಪಿ ಆಗಬಹುದಾದರೆ, ಇನ್ನೊಬ್ಬ ದೈವ ಬೇಕೇ! ಹೀಗಂತನ್ನೊ ಅನಂತ ಪ್ರಶ್ನೆಗಳು ಶತ ಶತಮಾನಗಳಿಂದ ತಮ್ಮ ಉತ್ತರ ಹುಡುಕುತ್ತ ಬೇರೂರಿದ ಮಣ್ಣಿನಲ್ಲಿ, ನಾವು ಹುಟ್ಟಿರುವಾಗ, ಶ್ರೇಷ್ಠತೆಯ ದಿಬ್ಬ, ಹಬ್ಬಗಳು ಕೊರೆದ ಕಂದಕಗಳೂ ನೂರಾರು, ಅವುಗಳನ್ನ ದಯೆ, ಭಕ್ತಿ, ವಿವೇಕದಿಂದ ಅರಿತು, ತಿದ್ದಿಕೊಳ್ಳುತ್ತಲೇ ಬಂದ ನಾವೆಲ್ಲ, ದಿಬ್ಬ, ಕಂದಕಗಳಿರದೇ, ಎಲ್ಲರೂ ಕೂಡಿ ನಡೆಯಬಹುದಾದ ಸಮತಟ್ಟಾದ ಹಾದಿಗಾಗಿಯೇ ತಾನೇ ಪ್ರಜಾಪ್ರಭುತ್ವವನ್ನ ಆಯ್ಕೆ ಮಾಡಿಕೊಂಡಿರೋದು..!! ಮತ್ತಿನ್ನೇನು!!
ಆದರೆ ನಾವು ಮುಟ್ಟಬೇಕೆನ್ನುವ ಆದರ್ಶ
“ಯುಟೋಪಿಯಾ”ವನ್ನ ಎಂದು ಮುಟ್ಟುತ್ತೇವೆಯೋ ಗೊತ್ತಿಲ್ಲ!!? ಆದರೆ ಆ ಹಾದಿಯಲ್ಲಿ ಅಟ್ಟಕ್ಕೇರಿದ್ದವ ಕೆಳಗಿಳಿದು ಬರಲೇಬೇಕು ಅನ್ನುವುದು ಎಷ್ಟು ಮುಖ್ಯವೇ ತುಳಿಯಲ್ಪಟ್ಟವ ಘನತೆಯಿಂದ ಎದ್ದು ನಿಂತು ಕೊಳ್ಳುವುದರ ಜೊತೆಗೆ, ತನ್ನ ಯುಗದ ಕೀಳಿರಿಮೆಯಿಂದ, ಹೊರಕ್ಕೆ ಬರಲೇ ಬೇಕು ಅನ್ನುವುದೂ ಅಷ್ಟೇ ಮುಖ್ಯವಾದದ್ದು, ಜೊತೆಗೆ ಈ ನಮ್ಮ ಧರ್ಮ ಗ್ರಹಿಕೆಗಳ ಮಧ್ಯದಲ್ಲಿನ ಭಿನ್ನ ಅಭಿಪ್ರಾಯಗಳನ್ನ ಅರಿತು, ಅವುಗಳಲ್ಲಿನ ಉದಾತ್ತತೆಗಳನ್ನ ಗೌರವಿಸದ ಹೊರತು, ವೈರುಧ್ಯಗಳನ್ನ ವೈವಿಧ್ಯತೆಗಳನ್ನಾಗಿ ಸಂಭ್ರಮಿಸದ ಹೊರತು, ಈ ದೇಶದಲ್ಲಿ ಏನೂ ಸರಿಯಾಗಲಿಕ್ಕೆ ಸಾಧ್ಯವಿಲ್ಲ!! ಯಾಕಂದ್ರೆ ಈ ದೇಶದ ಯಾವ “ಸರಿಯಿಲ್ಲ” ಅನ್ನುವುದರಲ್ಲಿಯೇ.. ಹತ್ತಾರು ಜಗತ್ತಿನ ಶ್ರೇಷ್ಠ ಸಿದ್ಧಾಂತಗಳು ತಮ್ಮ ‘ಸರಿ’ಯನ್ನ ಕಂಡು ಕೊಂಡಿವೆ, ಅದರಲ್ಲಿಯೇ ಈ ನಮ್ಮ ಅನನ್ಯ ಭಾರತೀಯ ಸಂಸ್ಕೃತಿಯ ಗರಿಮೆಯೂ ಕೂಡ ಅಡಗಿರೋದು…

‍ಲೇಖಕರು Admin

30 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading