ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನು ಮಾಯೆ ಮಾಡಿಸಿಬಿಟ್ಟೆ ಸರಾಯಿ ಬಾಟ್ಲವ್ವಾ..

                 ಕಾಣದ ಕಡಲಿಗೆ ಹಂಬಲಿಸಿದೆ ಮನ..

                                                                       ಹೆಜ್ಜೆ 22                                                                

                           ಸ್ಯಾಟಿಸ್ಫೈ ಮಾವನ ರಂಪಾಟ             

avadhi-column-rahul bw-edited2                                                                  

ಬೆಳಿಗ್ಗೆ ಹೋಟೆಲ್‍ನಿಂದ ನಡೆದು ಸಿದ್ದೇಶ್ವರ ಪ್ರೌಢಶಾಲೆಗೆ ತಲುಪಿದೆ. ಅಲ್ಲಿಯ ಒಬ್ಬ ಶಿಕ್ಷಕನಿಗೆ ನನ್ನ ವಿಚಾರ ತಿಳಿದು ನನಗೆ ಅವಕಾಶ ಮಾಡಿಕೊಡಬೇಕೆಂಬ ಆಸೆಯಾಯಿತು. ಅದಕ್ಕೆ ಮುಖ್ಯೋಪಾಧ್ಯಾಯರು ಬಂದು ತಣ್ಣೀರೆರಚಿದರು. ಶಿಕ್ಷಕ ಒತ್ತಾಯಮಾಡಿದ ಮೇಲೆ ಮಧ್ಯಾಹ್ನ ಊಟದ ಸಮಯದ ನಂತರ ಬರುವಂತೆ ತಿಳಿಸಿದರು. ನಂತರ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಗೆ ಹೋದರೆ ಅವರೂ ಕೂಡ ಹಲವು ಕಾರಣಗಳನ್ನು ನೀಡಿ ಅವಕಾಶ ನೀಡಲು ನಿರಾಕರಿಸಿ, ಅನ್ಯತಾ ಭಾವಿಸಬಾರದೆಂದು ವಿನಂತಿಸಿಕೊಂಡರು.

avadhi- column- rahul- low res- editedರಾಣೆಬೆನ್ನೂರಿನಲ್ಲಿ ಕೆಲಸಕೆಟ್ಟಿತು ಎಂದುಕೊಂಡು ಮತ್ತೆ ಬಸ್ ನಿಲ್ದಾಣದ ಕಡೆಗೆ ನಡೆದು ಬಂದು ಕೆ.ಎಲ್.ಇ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿದೆ. ಒಂದು ಮನವಿ ಪತ್ರ ಬರೆದುಕೊಡಿ ನೋಡೋಣ ಎಂದು ನಡೆಯುತಿದ್ದ ಒಂದು ಸಭೆಗೆ ಹೊರಟು ಹೋದರು. ಸರಿ ಅದೂ ನಡೆದು ಹೋಗಲಿ ಎಂದು ಒಂದು ಮನವಿ ಪತ್ರ ಬರೆದು ಅವರನ್ನು ಕಾಯುತ್ತಾ ಕುಳಿತೆ. ಶಾಲೆಯ ವಾತಾವರಣ ಚೆನ್ನಾಗಿದ್ದು ಮತ್ತು ವಿದ್ಯಾರ್ಥಿಗಳ ದಾಖಾಲಾತಿ ಸಂಖ್ಯೆಯು ಐನೂರಕ್ಕಿಂತ ಜಾಸ್ತಿಯಿದ್ದರಿಂದ ಒಳ್ಳೆಯ ಉಪನ್ಯಾಸವಾಗಬಹುದೆಂಬ ಆಸೆಯಿಂದಿದ್ದೆ.

ಮನೆಯವರೊಂದಿಗೆ ಮಾತನಾಡಿದೆಂತೆಲ್ಲಾ, ಬೇಗ ಮೈಸೂರಿಗೆ ವಾಪಸ್ಸಾಗಬೇಕೆಂಬ ಆಸೆಯೂ ಹೆಚ್ಚಾಯಿತು. ಈ ತರಹ ಜನರಿಂದ ಪ್ರೋತ್ಸಾಹ ಸಿಗದೇಯಿರುವ ಸಮಯದಲ್ಲೆಲ್ಲಾ, ಒಂದು ಬಸ್ಸು ಹಿಡಿದು ಮೈಸೂರಿಗೆ ಹೋಗಿಬಿಡುವ ಆಲೋಚನೆ ಸುಳಿದಾಡುತ್ತಿತ್ತು. ಸುಮಾರು ಎರಡು ಗಂಟೆಯಾದರೂ ಅವರು ಸಭೆಯಿಂದ ಹೊರಗೆ ಬರಲೇ ಇಲ್ಲ. ಊಟದ ಸಮಯವಾದ್ದರಿಂದ ಇನ್ನು ಕಾಯುವುದು ಒಳಿತಲ್ಲ ಎಂದು ತಿಳಿದು, ಹೊಟ್ಟೆಗೆ ಒಂದಷ್ಟು ಮೇವು ಹಾಕಿಕೊಂಡು ಒಂದು ಮೈಲು ನಡೆದು ಮತ್ತೆ ಸಿದ್ದೇಶ್ವರ ಪ್ರೌಢಶಾಲೆಗೆ ಹೋದರೆ ಅಲ್ಲಿಯೂ ಅರ್ಧ ಗಂಟೆ ಕಾಯಿಸಿ, ಕುಡಿಯಲು ನೀರು ಕೊಡದೆ ಸತಾಯಿಸಿ, ಕೊನೆಗೆ ಉಪನ್ಯಾಸಕ್ಕೆ ಅವಕಾಶ ಕೊಡಲಾಗುವುದಿಲ್ಲ ಎಂದು ಹಲವು ಕಾರಣಗಳನ್ನು ಕೊಟ್ಟರು. ಕೈ ಮುಗಿದು ಧನ್ಯವಾದ ತಿಳಿಸಿ ಮತ್ತೆ ಕೆ.ಎಲ್.ಇ ಪ್ರೌಢಶಾಲೆಗೆ ಬಂದು ಮುಖ್ಯೋಪಾಧ್ಯಾಯರನ್ನು ಕಾದು ಕುಳಿತೆ.

ಅಹಂನನ್ನು ಮನೆಯಲ್ಲೇ ಬಿಟ್ಟು,

ಸ್ವಾರ್ಥವನ್ನು ಬದಿಗೊತ್ತಿ ಬಂದೆ.

ಸಹನೆಯನ್ನು ಮೈಗೂಡಿಸಿ, ಕಂಡುಕಾಣದವರನ್ನು ಮಾತನಾಡಿಸಿ,

ಕಷ್ಟ ತೊಂದರೆಗಳನ್ನು ಗ್ರಹಿಸಿಕೊಂಡೆ.

ಕತ್ತಲೆಯಿಂದ ಹಸಿರೆನೆಡೆಗೆ ನಡೆದ ಮೈಲುಗಳೆಷ್ಟೋ,

ನಿದ್ದೆಯಿಲ್ಲದೆ ಕಳೆದ ರಾತ್ರಿಗಳೆಷ್ಟೋ.

ನನಗಿರಲ್ಲಿಲ್ಲ ಯಾವುದೇ ಆಮಿಷಗಳು,

ನಾನು ಕೇಳಿದ್ದು ಕೆಲವೇ ನಿಮಿಷಗಳು.

ಕಾಯಿಸಿ ಸತಾಯಿಸಿ ಎನ್ನ ಬರಿಗೈಲಿ ಕಳುಹಿಸಿದ

ಶಿಕ್ಷಕರಿಂದ ಹಸಿರು ಕ್ರಾಂತಿ ಮೊಳಗುವುದೆಂತೋ? ಓ ಪ್ರಕೃತಿ

ಊಟವಾದ ನಂತರ ಬಂದ ಮುಖ್ಯೋಪಾಧ್ಯಾಯರು ನನ್ನನ್ನು ಕಂಡರೂ ಕಾಣದಂತೆ ನಿಂತಿದ್ದರು. ನಾನೇ ಹೋಗಿ ನನ್ನ ವಿನಂತಿ ಪತ್ರವನ್ನು ನೆನಪುಮಾಡಿದೆ. ಬಹಳ ಆಲೋಚನೆ ಮಾಡಿ ಹತ್ತನೇ ತರಗತಿಯ ಒಂದು ವಿಭಾಗಕ್ಕೆ ಮಾತ್ರ ಉಪನ್ಯಾಸ ಕೊಡಲು ಅವಕಾಶ ಮಾಡಿಕೊಟ್ಟರು. ಕೇವಲ ಎಪ್ಪತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಪರಿಸರದ ಬಗ್ಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟು ತಿಳಿಸತೊಡಗಿದೆ.  “ಸೈನಿಕರು ಮಾಡುತ್ತಿರುವ ಕೆಲಸ ಮಾತ್ರ ದೇಶ ಸೇವೆಯೇ? ನಾವೆಲ್ಲರೂ ಗಿಡ ನೆಡುವುದು ದೇಶ ಸೇವೆಯಲ್ಲವೇ?

ನಾವು ಪರಿಸರವನ್ನು ಉಳಿಸಿ ಬೆಳೆಸಿದರೆ, ನಮ್ಮ ನಾಡಿನಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಚೆನ್ನಾಗಿಯಾಗುತ್ತದೆ. ರೈತಬಾಂಧವರು ಮತ್ತು ನಾಗರೀಕರಲ್ಲಿನ ವರಮಾನ ಹೆಚ್ಚುತ್ತದೆ. ಅವರ ಮಕ್ಕಳಿಗೆ ಅಂದರೆ ನಿಮಗೆಲ್ಲಾ ಒಳ್ಳೆಯ ಶಿಕ್ಷಣ ದೊರೆಯುತ್ತದೆ. ಶಿಕ್ಷಣ ಪಡೆದ ಸಮಾಜದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಅವೆಲ್ಲದರಿಂದ ದೇಶ ಸಮೃದ್ಧವಾಗುತ್ತದೆ. ನಿಮ್ಮಿಂದ ಹತ್ತಾರು ಮಂದಿ ಜಾಗೃತರಾಗಬೇಕು. ಎಲ್ಲರೂ ಒಟ್ಟಾಗಿ ಕೆಲಸಮಾಡಿ ಬದಲಾವಣೆ ತರೋಣ.” ಎಂದು ಹೇಳಿ ಹುರಿದುಂಬಿಸಿದೆ. ಮಕ್ಕಳೆಲ್ಲರೂ ಇಷ್ಟಪಟ್ಟು ಪ್ರತಿಜ್ಞೆ ಸ್ವೀಕರಿಸಿದರು. ಶಾಲೆಗೆ ಬಂದು ಯಾವುದೇ ಅಪೇಕ್ಷೆಯಿಲ್ಲದೆ ಮಕ್ಕಳಿಗೆ ಉಪನ್ಯಾಸ ಕೊಟ್ಟ ಅತಿಥಿಯ ಒಣಗಿದ ಕಂಟಕ್ಕೆ ಒಂದೆರಡು ಹನಿ ನೀರೆರೆಯಬಾರದೇ?

ಆದರೂ ಈ ದಿನ ನಾನಂದುಕೊಂಡಂತೆ ನಡೆಯಲಿಲ್ಲ. ಅದಕ್ಕೆ ನನ್ನ ತಪ್ಪುಗಳೂ ಕಾರಣ. ಕಲಾಂರವರು ವಿಧಿವಶರಾದ ಮಾರನೇ ದಿನ ಪೂರ್ತಿ ಕೋಣೆಯ ಒಳಗೇ ಇದ್ದೆ. ಹೊರಗೆ ಬಂದು ಒಂದೆರಡು ಶಾಲೆ ತಿರುಗಿದ್ದರೆ ಒಂದೆರಡು ಉಪನ್ಯಾಸಗಳಾದರೂ ಮುಗಿಯುತ್ತಿದ್ದವು. ಒಂದು ಸಾವಿರದ ಇನ್ನೂರು ರೂಪಾಯಿ ಖರ್ಚು ಮಾಡಿ, ಎರಡು ದಿನಗಳ ಸಮಯ ಕಳೆದು ಬೋಧನೆ ಮಾಡಿದ್ದು ಮಾತ್ರ ಒಂದೇ ಶಾಲೆಯ ಎಪ್ಪತ್ತು ಮಕ್ಕಳಿಗೆ. ನೀರನ್ನು ಸಹ ಕುಡಿಯದೇ, ಊಟವೂ ಸರಿಯಾಗಿ ಆಗದೇ ಇದ್ದರಿಂದ ಬಿಸಿಲಿನ ಝಳಕ್ಕೆ ತಲೆ ಬಿಸಿಯಾಗಿ ಸಿಡಿಯುತ್ತಿತ್ತು.

ಹಳೇ ಪಿ.ಬಿ. ರಸ್ತೆಯಲ್ಲಿ  ಮೂರು ಮೈಲು ನಡೆದು ಹೆದ್ದಾರಿ ಹಿಡಿದು ಎಡಕ್ಕೆ ತಿರುಗುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು. ಕರಿಮೋಡಗಳು ಸುಳಿದಾಡುತ್ತಾ ತುಂತುರು ಮಳೆ ಶುರುವಾಯಿತು. ಎಡಕ್ಕೆ ಸಿಕ್ಕ “ತುಂಗಭದ್ರಾ ರೈತರ ಸಹಕಾರಿ ನೂಲಿನ ಗಿರಣಿ ನಿಗಮ”, ಪಾಳು ಬಿದ್ದ ಕಟ್ಟಡಗಳ ಸುತ್ತಾ  ಬೆಳೆದಿದ್ದ ಮರಗಿಡಗಳಿಂದ ಸ್ಮಶಾನದಂತೆ ಭಾಸವಾಯಿತು.

ಉತ್ತರ ಕರ್ನಾಟಕದ ಹೆಮ್ಮೆಯ ಪ್ರತೀಕವೆಂಬಂತೆ ಫೋರ್ಸ್‍ನ ತೂಫಾನ್ ಎಂಬ ವಾಹನದಲ್ಲಿ ಜನರನ್ನು ಕಿಕ್ಕಿರಿದು ತುಂಬಿಸಿಕೊಂಡು ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದವು. ತೂಫಾನ್‍ನ ಹೆಸರಿಗೆ ತಕ್ಕಂತೆ ಚಾಲಕರು ಅತಿಯಾದ ವೇಗದಿಂದಲೇ ಓಡಿಸುತ್ತಿದ್ದರು. ಹಾಗೆಯೇ ಇನ್ನೊಂದು ಬಹಳ ಸಂತೋಷ ತರುವ ಸಂಗತಿಯೆಂದರೆ, ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆ, ದೊಡ್ಡಾಟ ಮತ್ತು ನಾಟಕ ಸಂಸ್ಕತಿಯು ಇನ್ನೂ ಉಸಿರಾಡುತ್ತಿರುವುದು. ಅಲ್ಲಲ್ಲಿ ನಾಟಕಗಳ ಭಿತ್ತಿಪತ್ರಗಳನ್ನು ನೋಡಿದೆ. ನನಗೆ ಇಷ್ಟವಾದ ಜಾನಪದ ಗೀತೆಯೆಂದರೆ “ಏನು ಮಾಯೆ ಮಾಡಿಸಿಬಿಟ್ಟೆ ಸರಾಯಿ ಬಾಟ್ಲವ್ವಾ, ಮನೆ ಮುಂದಿನ ಹೊಲಾಗದ್ದೆಯ ಮಾರಿಸಿ ಬಿಟ್ಟ್ಯವ್ವಾ”.

footಶಿವಣ್ಣನವರ ಮಗ ವಿನಯ್ ಇಂಜಿನಿಯರಿಂಗ್ ಪದವಿ ಪಡೆದು ಉನ್ನತ ಶಿಕ್ಷಣ ಪಡೆಯಲು ಅಣಿಯಾಗುತ್ತಿದ್ದ. ಹಾಗಾಗಿ ನನಗೆ ಅವನ ಪರಿಚಯವಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಮನೆಯ ಮೊದಲನೆಯ ಅಂತಸ್ತಿನಲ್ಲಿದ್ದ ಕೋಣೆಯನ್ನು ವಾಸ್ತವ್ಯಕ್ಕಾಗಿ ಕೊಟ್ಟು, ತಮ್ಮ ಮನೆಯಲ್ಲೇ ಊಟದ ವ್ಯವಸ್ಥೆ ಮಾಡಿ ಬಹಳ ಅಕ್ಕರೆಯಿಂದ ಕಂಡರು.

ಶಿವಣ್ಣನವರು ತಮ್ಮ ಜೀವನದ ಕಥೆಗಳನ್ನು ಬಿಚ್ಚಿಟ್ಟರು. ಗ್ರಾ.ಪಂ ಸದಸ್ಯರಾದ ಮಹೇಶ್‍ರವರು ನನ್ನ ಕೆಲಸದ ಬಗ್ಗೆ  ಮಾತನಾಡಲು ವಿನಯ್ ಮನೆಗೆ ಬಂದಿದ್ದರು. ಕುಡಿದ ನಶೆಯಲ್ಲಿದ್ದ ಅವರು ಬಹಳ ಭಾವೋದ್ವೇಗದಿಂದ ಮಾತನಾಡಿ ನನಗೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ಸುಸ್ತು ಹೊಡೆಸಿದರು. ಹೊಸ ಸದಸ್ಯರಾದ ಅವರಿಗೆ ಊರಿನ ಸ್ವಚ್ಛತೆ, ಶಿಕ್ಷಣ, ಶೌಚಾಲಯ ನಿರ್ಮಾಣ ಬಗ್ಗೆ ಬಹಳ ಕೆಲಸಮಾಡಬೇಕೆಂಬ ಆಸಕ್ತಿ. ನಶೆಯಲ್ಲಿ ಹೊರಡುವ ಮಾತುಗಳ ನಿಷ್ಠೆಯ ಅರಿವಿದ್ದ ನನಗೆ, ಅವರ ಪುಂಖಾನುಪುಂಖಗಳೆಲ್ಲವೂ ತಿಳಿಯಿತು. ಆತನಿಗೆ ಆಂಗ್ಲ ಪದಗಳನ್ನು ಬಳಕೆ ಮಾಡುವ ಹಂಬಲ ಬೇರೆ. ನಶೆಯಲ್ಲಿ ಕನ್ನಡ ಪದಗಳೇ ಸರಿಯಾಗಿ ಬರುವುದಿಲ್ಲ. ಇನ್ನು ಆಂಗ್ಲ ಭಾಷೆಯ ಪದಗಳು ಬರುತ್ತವೆಯೇ?

‘ಸ್ಯಾಟಿಸ್ಫೈ’ ಎಂಬ ಆಂಗ್ಲ ಪದವನ್ನು ತನ್ನ ಒಂದು ಗಂಟೆಯ ಭಾಷಣದಲ್ಲಿ ಸುಮಾರು ಐವತ್ತು ಬಾರಿಯಾದರೂ ಬಳಕೆ ಮಾಡಿದ. ಮಾತಿನ ಎಲ್ಲಾ ಮಜಲುಗಳಲ್ಲೂ ‘ಸ್ಯಾಟಿಸ್ಫೈ’ ‘ಸ್ಯಾಟಿಸ್ಫೈ’ ಎಂದು ಉಪಯೋಗಿಸುತ್ತಿದ್ದ. ಆದ್ದರಿಂದ ಅವನಿಗೆ ಸ್ಯಾಟಿಸ್ಫೈ ಮಾವ ಎಂದೇ ಹೆಸರಿಟ್ಟಿದ್ದೆ. ರಾತ್ರಿಯ ಶೌಚಾಲಯ ಕೆಲಸ ಮುಗಿಸಲೂ ಬಿಡಲಿಲ್ಲ ಮಾರಾಯ. ಕೊನೆಗೆ ವಿನಯ್ ನನ್ನ ಸಹಾಯಕ್ಕೆ ಬಂದು ಸ್ಯಾಟಿಸ್ಫೈ ಮಾವನಿಂದ ನನ್ನನ್ನು ಪಾರು ಮಾಡಿದ. ವಿನಯ್ ದೂರವಾಣಿಯಿಂದ ಕರೆಮಾಡಿ ಕುಟುಂಬದವರ ಜೊತೆ ಮಾತನಾಡಿದ ನಂತರ ನಿದ್ರೆಗೆ ಜಾರಿದೆ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 164 ಮೈಲುಗಳು]

‍ಲೇಖಕರು admin

5 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading