
(ಇದು ಕೈದಿಗಳೇ ಅಭಿನಯಿಸಿದ ನಾಟಕಗಳ ಸಂದರ್ಭದಲ್ಲಿ
ಪತ್ರಕರ್ತ ಗಣೇಶ್ ಅಮೀನಗಡ ಕೈದಿಗಳನ್ನು ಮಾತನಾಡಿಸಿ
ಬರೆದ ಪುಸ್ತಕ ‘ಕೈದಿಗಳ ಕಥನ’ ದಿಂದ ಆಯ್ದ ಭಾಗ).

ವೀರಪ್ಪನಗೆ ನೆರವು:ಕಂಡಿದ್ದು ಜೈಲು
*ಯು ಎ ಅನ್ಬು
ತಮಿಳುನಾಡು ಪೆರಿಯಾರ ಜಿಲ್ಲೆಯ ಭವಾನಿ ತಾಲ್ಲೂಕಿನ ಅಂದಿಯೂರು ಪುದುಕ್ಕಾಡು ಊರು.
ಕಾಡು ಮತ್ತು ನಮ್ಮ ಹಳ್ಳಿ ಪಕ್ಕ ಪಕ್ಕ. ಊರಲ್ಲಿ ಎಂಟನೇ ಕ್ಲಾಸು ಓದಿದೆ. ಓದೋಕೆ ಇಷ್ಟ ಇಲ್ಲ. ಮೆಕ್ಯಾನಿಕ್ ಕೆಲ್ಸ ಮಾಡ್ತಾ ಇದ್ದೆ. ಸುರೇಶ ಮತ್ತು ನಾನು ಅಂಗಡೀಲಿ ಕೆಲಸ ಮಾಡತಿದ್ವಿ. ಅಪ್ಪ ಉತ್ತರಾಜ್. ಅಮ್ಮ ಅನ್ನಕುಡಿ.ತಮ್ಮ- ತಂಗಿಯರಿದ್ದಾರೆ. ಇಷ್ಟೇ ಫ್ಯಾಮಿಲಿ. ಮನೇಲಿ ಕೈಮಗ್ಗ ಉದ್ಯೋಗ. ಅಂದಿಯೂರಲ್ಲಿ ಮೆಕ್ಯಾನಿಕ್ ಕೆಲಸ ಮಾಡ್ತಿದ್ದೆ. ಬಿಡುವು ಸಿಕ್ಕಾಗ ಕಾಡಿಗೆ ಹೋಗೋದು, ಸುತ್ತಾಡಿಕೊಂಡು ಬಂದ್ರೆ ತೃಪ್ತಿ.
ನಾನು, ದೊಡ್ಡಪ್ಪ ಮಕ್ಳು ಸೇರಿ 1996ರ ಡಿಸೆಂಬರನಲ್ಲಿ ಕಾಡಿಗೆ ಹೋಗಿದ್ವಿ. ನೀರಿದ್ದ ಜಾಗದಲ್ಲಿ ಮನೆ ತಿಂಡಿ ತಿನ್ನೋಕೆ ಕೂತಾಗ ವಿರಪ್ಪನ್ ತಂಡ ಅಡುಗೆ ಮಾಡ್ತಿತ್ತು. ಅವರು ನಮ್ಮನ್ನು ಹಿಡ್ಕೊಂಡ್ರು. ನಮಗೆ ಮಾಧ್ಯಮದಲ್ಲಿ ಎಷ್ಟು ಬಂದಿತ್ತೋ ಅಷ್ಟೇ ವಿರಪ್ಪನ್ ಬಗ್ಗೆ ಗೊತ್ತು. ಮಾಹಿತಿದಾರರು ಅಂತ ನಮ್ಮನ್ನು ಹಿಡ್ಕೊಂಡ್ರು. ಹೆದರಿಕೊಂಡ್ವಿ. ರಜೆ ಸಿಕ್ಕಾಗ ಬರೋರು ಅಂತ ಹೇಳಿದ್ವಿ. ತಮಿಳಲ್ಲಿ 3-4ತಾಸು ಮಾತಾಡಿದ್ವಿ. ಜನರ ಬಾಯಿಂದ ಕೇಳಿದ್ದು ಪೇಪರಲ್ಲಿ ಓದಿದ್ದು ಕೇಳಿದ್ದಕ್ಕಿಂತ ವೀರಪ್ಪನ್ ಭಿನ್ನ ಇದ್ದ. ಸಾಮಾನ್ಯ ಮನುಷ್ಯ. ವೀರಪ್ಪನ್ ನಮ್ಮನ್ನು ಹೆದರಿಸಲಿಲ್ಲ. ತೊಂದ್ರೆ ಕೊಡಲಿಲ್ಲ. ಕಾಡಿಗೆ ಬರಬೇಡಿ.ಎಸ್.ಟಿ.ಎಫ್.(ವಿಶೇಷ ಕಾರ್ಯಾಚರಣೆ ಪಡೆ )ನವರು ಹೊಡೆದು ಹಾಕಿಬಿಡ್ತಾರೆ ಅಂತ ಹೇಳಿದ್ರು. ಅವರು ಬಂದ್ರೆ ಹೇಗೆ ಓಡಿಹೋಗ್ತಿರಿ ಅಂತ ಬೈದ್ರು.
ನಾನು ಕೇಳಿದೆ ‘ಯಾಕೆ ಕಾಡಲ್ಲಿದ್ದೀರಿ? ಪೊಲೀಸರನ್ನ್ಯಾಕೆ ಹೊಡಿಬೇಕು?’
‘ನಿಮಗೆ ಅರ್ಥ ಆಗಲ್ಲ. ಬಂದೂಕು ಹಿಡ್ಕೊಂಡು ಓಡಬೇಕಂತ ಆಸೆಯಿಲ್ಲ. ನೆಂಟರ ಮಧ್ಯೆ ಘರ್ಷಣೆ ಸುರುವಾಗಿ ಇಲ್ಲಿಗೆ ಬಂದು ನಿಂತಿದೆ. ಊರಲ್ಲಿದ್ದಾಗ ರಾಜಕಾರಣಿಗಳು ಬಳಸಿಕೊಂಡ್ರು. ತೊಂದ್ರೆಯಾಗೋ ಸಮಯದಲ್ಲಿ ಕೈಬಿಟ್ರು. ನನ್ನ ಜೀವ ಉಳಿಸಿಕೊಳ್ಳೋಕೆ ಪೊಲೀಸರನ್ನು ಹೊಡೆದೆ. ಸರ್ಕಾರದ ಹತ್ರ ಕ್ಷಮೆ ಕೇಳ್ತಿನಿ. 10-15 ವರ್ಷ ಶಿಕ್ಷೆ ಅಂತ ತೀರ್ಮಾನಿಸಿದರೆ ಶರಣಾಗ್ತೀನಿ. ಕಾನೂನು ದೃಷ್ಟೀಲಿ ನಂದು ತಪ್ಪೆ. ಆದ್ರೆ ಯಾರೂ ಪ್ರಯತ್ನಿಸಲಿಲ್ಲ’ ಎಂದ ವೀರಪ್ಪನ್.
‘ರೇಷನ್ ತರ್ತೀರಾ’ಅಂತ ಕೇಳಿದ್ರು. ‘ಒಂದು ಸರ್ತಿ ತರಬಹುದು. ಮನೇಲಿ ಗೊತ್ತಾದ್ರೆ ಕಷ್ಟ’ಅಂತ ಹೇಳಿದ್ವಿ.
’20 ಕೆಜಿ ಅಕ್ಕಿ, ಸಕ್ಕರೆ ತನ್ನಿ’ ಎಂದು 500 ರೂಪಾಯಿ ಕೊಟ್ರು. ‘ಎರಡು ದಿನ ಬಿಟ್ಟು ಇದೇ ಜಾಗಕ್ಕೆ ಬನ್ನಿ ನಾವಿರಲ್ಲ. ನಮ್ಮ ಹುಡುಗರು ಕಾಯ್ತಿರ್ತಾರೆ. ಕರ್ಕೊಂಡು ಬರ್ತಾರೆ ‘ಅಂದ್ರು. ಮನೆಗೆ ಬಂದೆ. ನಮ್ಮೂರಲ್ಲಿ ಕಾರ್ಮಿಕ ಸಂಘಟನೆಯಲ್ಲಿದ್ದ ಗೆಳೆಯರಿದ್ದಾರೆ. ಅವರಿಗೆ ಹೇಳಿದೆ. ‘ವೀರಪ್ಪನ್ ಶರಣಾಗಲು ಸಿದ್ದರಿದ್ದಾರೆ. ನಾವು ಏರ್ಪಾಡು ಮಾಡಬಹುದಾ?’ ಕೇಳಿದೆ.
‘ಇದಕ್ಕೆಲ್ಲ ಕೈ ಹಾಕಬೇಡಿ. ಎಸ್.ಟಿ.ಎಫ್.ನವರಿಗೆ ಗೊತ್ತಾದ್ರೆ ಸಮಸ್ಯೆ ಆಗ್ತದೆ. ನೀವು ಹೋಗಬೇಡಿ’ಎಂದು ಗೆಳೆಯರು ಹೇಳಿದ್ರು.
ನನಗೆ ಆಗ 18ವರ್ಷ. ಏನು ಮಾಡಬೇಕಂತ ಗೊತ್ತಾಗದೆ ವೀರಪ್ಪನ್ ಹೇಳಿದ ಟೈಮಿಗೆ ಒಯ್ದೆವು. ನಮ್ಮ ಅಣ್ಣಂದಿರಾದ ತಂಗಂ ಹಾಗೂ ಅಪ್ಪಾರ್ ಅವರೂ ಇದೇ ಜೈಲಲ್ಲಿದ್ದಾರೆ. ಮೂರು ಜನ ಒಟ್ಟಿಗೆ ಹೋದ್ವಿ. ವೀರಪ್ಪನ್ ಕಡೆಯ ಸೇತುಕುಲಿ ಗೋವಿಂದನ್ ಮತ್ತು ಮಾದೇಸನ್ ಕಾಯ್ತಿದ್ರು. ವೀರಪ್ಪನ್ ಹತ್ರ ಕರ್ಕೊಂಡು ಹೋದ್ರು. ಟೀ ಕೊಟ್ರು.
‘ನೀವು ಮೂರು ಜನ ನಮಗೆ ಹೆಲ್ಪ್ ಮಾಡೋಕೆ ಬಯಸ್ತೀರಾ?’ಅಂತ ವೀರಪ್ಪನ್ ಕೇಳಿದ್ರು. ‘ಏನು ಮಾಡಬೇಕು?’ಕೇಳಿದ್ವಿ
‘ಸರಂಡರ್ ಆಗಲಿಕ್ಕೆ ಹೆಲ್ಪ್ ಮಾಡಿ. ಕರ್ನಾಟಕದ ಸಿ.ಎಂ. ಜೆ.ಎಚ್.ಪಟೇಲ್ ಅಥವಾ ತಮಿಳುನಾಡಿನ ಸಿ.ಎಂ. ಕರುಣಾನಿಧಿ ಹತ್ರ ಮಾತುಕತೆ ನಡೆಸಬೇಕಾಗಿದೆ. ಸಹಾಯ ಮಾಡಿದ್ರೆ ಸರಂಡರ್ ಆಗ್ತೀವಿ’. ನಮಗೆ ಖುಷಿ ಆಯ್ತು. ನಮ್ಮಿಂದ ಆಗೋದಾದ್ರೆ ಆಗ್ಲಿ ಅಂತ ಅಂದ್ಕೊಂಡ್ವಿ. ಅಣ್ಣಂದಿರನ್ನು ಕೇಳಿದೆ. ತಂಗಂ ಗಾರೆ ಕೆಲಸಗಾರ. ಅಪ್ಪಾರ್ ಡ್ರೈವರ್ ಬೇಡಾ ಅಂದ್ರು. ‘ರೇಷನ್ ಕೊಟ್ಟಿದ್ದು ಸಾಕು. ವೆಪನ್ ತಂದು ಕೊಟ್ಟಿಲ್ಲ. ಹೋಗೋಣ’ಅಂದ್ರು. ‘ಕಾನೂನು ವಿರುದ್ಧವಾಗಿ ಏನೂ ಮಾಡಿಲ್ಲ. ಸರಂಡರ್ ಆಗ್ಲಿ’ಅಂದೆ. ನನ್ನ ಮಾತಿಗೆ ಸುಮ್ಮನಾದ್ರು. ವೀರಪ್ಪನ್ ಹತ್ರ ಹೋಗಿ ಸರಂಡರ್ ಆಗ್ಲಿಕ್ಕೆ ಹೇಳಿದೆ. ಆಗ ವೀರಪ್ಪನ್ ‘ನಕ್ಕೀರನ್ ಪತ್ರಿಕೆಗೆ ಪೋಸ್ಟ್ ಮಾಡಬೇಕು. ನಾವು ಹೇಳಿದ್ದಲ್ಲಿಗೆ ಬರಬೇಕು’ಅಂದ್ರು. ಆಯ್ತೆಂದು ಒಪ್ಪಿಕೊಂಡೆ.
‘ಇನ್ನೊಂದು ತಿಂಗಳು ಬಿಟ್ಟು ಈ ಕೆಲಸ ಸುರು ಮಾಡಬೇಕು. ಖರ್ಚಿಗೆ ಹಣ ತರಲಿಕ್ಕೆ ಯಾರಿಗೋ ಹೇಳಿದ್ದೀವಿ. 10ದಿವಸ ನಮ್ಮ ಜೊತೆ ಇರಿ’ಅಂದ್ರು. ಭಯ ಬಂತು. ನಮ್ಮೂರಿನವ ಬಿದಿರು ಕಡಿಯಲು ಬಂದಾಗ ನೋಡಿದ. ವೀರಪ್ಪನ್ಗೆ ವಿಷಯ ಹೇಳಿದ್ವಿ. ಅವನನ್ನು ಕರೆಸಿ ಊಟ ಮಾಡಿಸಿದ್ರು. ಯಾರ ಹತ್ರ ಹೇಳಬಾರದು ಅಂತ ವೀರಪ್ಪನ್ ಹೇಳಿ ಕಳಿಸಿದ್ರು. ಆದ್ರೆ ಅವನು ಎಣ್ಣೆ ಹೊಡೆದಾಗ ಹೇಳಿಬಿಟ್ಟ. ಸುದ್ದಿ ಹರಡಿ ಎಸ್.ಟಿ.ಎಫ್ಗೆ ಸುದ್ದಿ ಮುಟ್ಟಿತು. ಯಾರೋ ಮೂವರು ಹುಡುಗ್ರು ಅಂತ ಹೇಳಿದ್ದ. ಅವನನ್ನು ಎಸ್.ಟಿ.ಎಫ್ನವರು ತಮ್ಮ ಕ್ಯಾಂಪಿಗೆ ಕರ್ಕೊಂಡು ಹೋದ್ರು. ನಮ್ಮ ಬಗ್ಗೆ ಬಾಯಿ ಬಿಟ್ಟಿಲ್ಲ. ಹೆಸರೂ ಹೇಳಿಲ್ಲ. ಹೇಳಿದ್ರೆ ವೀರಪ್ಪನ್ ಕಡೆಯಿಂದ ತೊಂದ್ರೆ ಅಂತ ಸುಮ್ಮನಾಗಿದ್ದ.
ನಾವು 10 ದಿನಗಳ ನಂತ್ರ ಊರಿಗೆ ಬಂದ್ವಿ. ದನ ಮೇಯಿಸೋಕೆ ಬಂದವರನ್ನು ಕೇಳಿದ್ವಿ. ‘ಊರಲ್ಲಿ ಗಲಾಟೆ ಆಗಿದೆಯಾ’ ಅಂತ ನಮ್ಮನ್ನು ನೋಡಿದ ವ್ಯಕ್ತಿಯನ್ನು ಎಸ್.ಟಿ.ಎಫ್ನವರು ಹಿಡ್ಕೊಂಡು ಹೋಗಿದ್ದಾರಂತೆ ಹೇಳಿದಾಗ ಅವನು ನಮ್ಮ ಬಗ್ಗೆ ಮಾಹಿತಿ ಹೇಳಿದ್ದಾನಂತ ತಿಳಕೊಂಡ್ವಿ. ಊರೊಳಗೆ ಹೋಗೋಕೆ ಭಯ ಆಯ್ತು. ತಿರುಗಿ ವೀರಪ್ಪನ್ ಹತ್ರ ಹೋಗಿ ಹೇಳಿದ್ವಿ.
‘ಯೋಚನೆ ಮಾಡೋಣ. ಅವಸರ ಮಾಡ್ಬೇಡಿ’ ಅಂದ್ರು. ಅಷ್ಟೊತ್ತಿಗೆ ನಮ್ಮ ಮನೆಯವರು ಪೋಲೀಸರಿಗೆ ನಮ್ಮ ಹುಡುಗ್ರು ಕಾಣೆಯಾಗಿದ್ದಾರೆಂದು ದೂರು ಕೊಟ್ಟಿದ್ದಾರೆ. ಇದು ಎಸ್.ಟಿ.ಎಫ್ನವರಿಗೂ ಮಾಹಿತಿ ಹೋಯ್ತು. ಹಿಡ್ಕೊಂಡಿದ್ದ ವ್ಯಕ್ತಿಗೆ ಮತ್ತಷ್ಟು ಹಿಂಸೆ ಕೊಟ್ಟಾಗ ಹೆಸರು ಹೇಳಿದ್ದಾನೆ. ಆಗ ನಮ್ಮ ತಂದೆ, ದೊಡ್ಡಪ್ಪನನ್ನು ಹಿಡ್ಕೊಂಡು ಹೋಗಿದ್ದಾರೆ. ಮಾರನೆ ಬೆಳ್ಳಿಗೆ ವೀರಪ್ಪನ್ ಹೇಳಿದ್ರು ‘ಕರ್ನಾಟಕದ ಕೊಳ್ಳೇಗಾಲ ತಾಲ್ಲೂಕಿನ ನಲ್ಲೂರಿನಲ್ಲಿ ನಿಮ್ಮ ತರವೇ ನಮ್ಮನ್ನು ನೋಡಿ ಊರೆಲ್ಲ ಹೇಳಿದಾಗ ಎನ್ಕೌಂಟರ್ ಆದ್ರು. ನೀವೂ ಎನ್ಕೌಂಟರ್ ಆಗ್ತೀರಿ’ಅಂದ್ರು.
‘ಮನೆಗೆ ಹೋಗ್ತೀವಿ’ಅಂದೆವು. ‘ಈಗ ಬೇಡ. ನಕ್ಕೀರನ್ ಪತ್ರಿಕೆ ಅಥವಾ ನಂದನ್ ಪತ್ರಿಕೆಯವರ ಮೂಲಕ ಕಳಿಸಿಕೊಡ್ತೀನಿ. ಅವರ ಜೊತೆ ಹೋದ್ರೆ ಮಾತ್ರ ಸೇಫ್ಟಿ. ನ್ಯಾಯಾಲಯದಲ್ಲಿ ಸರಂಡರ್ ಮಾಡಿಸ್ತಾರೆ. ಅರ್ಜೆಂಟ್ ಮಾಡಿ ಹೋದ್ರೆ ತೊಂದ್ರೆ ಆಗುತ್ತೆ’ಅಂದ್ರು. ನಮಗೆ ಆಗ ತಿಳವಳಿಕೆ ಇರಲಿಲ್ಲ. ಸರಿಯಾಗಿ ಕಾಡೂ ಗೊತ್ತಿರಲಿಲ್ಲ. ಹೆದರಿಕೆ ಆಯ್ತು. ಪತ್ರಿಕೆಯವರಿಗಾಗಿ ಕಾಯ್ತಾ ಇದ್ವಿ. ಎಸ್.ಟಿಎಫ್ನವರು ಕಾಡೆಲ್ಲಾ ಹುಡುಕಾಡೋಕೆ ಸುರು ಮಾಡಿದಾಗ ವೀರಪ್ಪನ್ ‘ಈ ಕಾಡು ಬೇಡ. ಕರ್ನಾಟಕದ ಕಾಡಿಗೆ ಹೋಗೋಣ’ ಅಂದ್ರು.
ದಿವಸ, ವಾರ, ತಿಂಗಳು ಆಗಿ ಒಂದೂವರೆ ವರ್ಷ ಆಯ್ತು. ವೀರಪ್ಪನ್ ಕಳಿಸಲು ಪ್ರಯತ್ನಿಸಿದಾಗೆಲ್ಲ ಏನೋ ಅಡ್ಡಿ ಆಗೋದು. ತಮಿಳುನಾಡಿನ ಸತ್ಯಮಂಗಲಂ ಕಾಡಿನಲ್ಲಿದ್ದಾಗ ನಕ್ಕೀರನ್ ಪತ್ರಿಕೆಯ ಗೋಪಾಲನ್, ಶಿವಸುಬ್ರಮಣ್ಯಂ ಮತ್ತು ಸುಬ್ಬು ಬಂದ್ರು. ಎಲ್ಲರೂ ಶರಣಾಗಲು ಮಾತುಕತೆ ನಡೆಸಿದ್ರು. ಗೋಪಾಲನ್ ಹೇಳಿದ್ರು. ‘ತಮಿಳುನಾಡು ಸರ್ಕಾರದ ಜೊತೆ ಮಾತಾಡೋದು ಕಷ್ಟ. ಸ್ವಲ್ಪ ತಿಂಗಳ ನಂತರ ಗೃಹ ಸಚಿವರ ಹತ್ರ ಮಾತಾಡ್ತೀನಿ’ಅಂದ್ರು. ಆಗ 10 ಕ್ಯಾಸೆಟ್ ಮಾಡ್ಕೊಂಡ್ರು. ಬೇಡಿಕೆಗಳನ್ನೆಲ್ಲ ರಾಷ್ಟ್ರಪತಿಗೆ, ಮುಖ್ಯಮಂತ್ರಿ ಜೆ.ಎಚ್.ಪಟೇಲರಿಗೆ, ಕರುಣಾನಿಧಿ ಅವರಿಗೆ ಪ್ರತ್ಯೇಕ ಕ್ಯಾಸೆಟ್ ಮಾಡಿದ್ರು. ವೀರಪ್ಪನ್ ಕ್ಯಾಸೆಟ್ಟಲ್ಲಿ ಹೇಳಿದ್ದು. ‘ಕದಲ್ಲಿ ಕಡವೆ, ಜಿಂಕೆ ಬೇಟೆಯಾಡಿ ಬದುಕೋದು ನಮ್ಮ ಕಸುಬು. ಅರಣ್ಯಾಧಿಕಾರಿಗಳು ಅಡ್ಡಿಯಾದ್ರು. ತೊಂದ್ರೆ ಮಾಡಿದ್ರು. ನಾನು ಸಿಗದೆ ಇದ್ದಾಗ ನಮ್ಮಣ್ಣನ ಮೇಲೆ, ಅಕ್ಕ, ಅಕ್ಕನ ಗಂಡನ ಮೇಲೆ ಕೇಸು ಹಾಕಿ, ಜೈಲಿಗೆ ಕಳಿಸಿದ್ರು. ಸಿಟ್ಟಿತ್ತು. ಫಾರೆಸ್ಟ್ ರೇಂಜರ್ ಚಿದಂಬರನಾಥನ್ ಅವರನ್ನು ಸುಟ್ಟುಬಿಟ್ಟೆ. ಇದು ನಾನು ಮಾಡಿದ ಮೊದಲ ತಪ್ಪು.
ನಾನು ಬದುಕೋಕೆ ಕೊಲೆ ಮಾಡ್ತಾ ಹೋದೆ. ತಪ್ಪು ಒಪ್ಪಿಕೊಂಡು ಸರಂಡರ್ ಆಗ್ತೀನಿ. ಫೂಲನ್ ದೇವಿ ಶರಣಾಗಲು ಆದ ವ್ಯವಸ್ಥೆ ನನಗೂ ಮಾಡಿ’ ಕೇಳಿಕೊಂಡ್ರು.
ಆಗ ನಾವು ಗೋಪಾಲನ್ ಹೋಗೋಣ ಅನ್ನಿಸಿತು. ಆದ್ರೆ ವೀರಪ್ಪನ್ ‘ಈಗ ಹೋಗೋದು ಬೇಡ. ಸರ್ಕಾರ ಒಪ್ಪಿಕೊಂಡ್ರೆ ಎಲ್ಲರೂ ಶರಣಾಗೋಣ’ಅಂದಾಗ ಗೋಪಾಲನ್ ಒಪ್ಪಿಕೊಂಡು ಹೋದ್ರು. ಅವರು ಹೋಗಿ ಮೂರು ತಿಂಗಳಾದ್ರು ಮಾಹಿತಿಯಿಲ್ಲ. ವೀರಪ್ಪನ್ಗೆ ಬೇಸರಯಿತು. ವೀರಪ್ಪನ್ ಜೊತೆಗೆ ಸೇತುಕುಳಿ ಗೋವಿಂದನ್, ಬೇಬಿ ವೀರಪ್ಪನ್, ರಂಗಸಾಮಿ, ಮಾದೇಸ ಈ ಐವರೂ ಪ್ರತ್ಯೇಕ ಮಾತಾಡಿಕೊಂಡ್ರು. ಸುಮ್ಮನಿದ್ರೆ ಸರ್ಕಾರ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಯಾರನ್ನಾದ್ರೂ ಕಿಡ್ನಾಪ್ ಮಾಡೋಣ ಅಂತ ನಿರ್ಧರಿಸಿದ್ರು. ನಮ್ಮನ್ನೇನೂ ಕೇಳಲಿಲ್ಲ ಬೆಳಿಗ್ಗೆದ್ದು ಹೊರಟು ಸತ್ಯಮಂಗಲಂದಿಂದ ಕೊಳ್ಳೇಗಾಲದ ಹತ್ತಿರದ ಗುಂಡಾಲ ಅರಣ್ಯಕ್ಕೆ ಬರಲು ಒಂದು ತಿಂಗಳಾಯಿತು. ಆಗ ಎರಡು ಭಾಗ ಮಾಡಿದ್ರು.
ನಮ್ಮ ಜೊತೆ ಮಾದೇಸ ಉಳಿದ್ರು. ಎರಡೂ ಕ್ಯಾಂಪ್ ಹತ್ತಿರದಲ್ಲಿದ್ದವು. ಹತ್ತಿರವೆಂದರೂ 2-3ಕಿಲೋಮೀಟರು ಅಂತರ. ಒಂದು ವಾರ ಬಿಟ್ಟು ವೀರಪ್ಪನ್ ತಂಡ, ಗುಂಡಾಲ ಅರಣ್ಯದ ಬೈಲೂರು ವ್ಯಾಪ್ತಿಗೆ ಒಳಪಟ್ಟ ಫಾರೆಸ್ಟು ಗಾರ್ಡ್, ಕಾವಲುಗಾರ ಸೇರಿ 10 ಜನರನ್ನು ಅಪಹರಿಸಿದ್ರು. ಎಲ್ಲರಿಗೂ ಹ್ಯಾಂಡ್ ಕಫ್ (ಕೈಕೋಳ) ಹಾಕಿದ್ರು. ಇದೆಲ್ಲ ಏನು ಅಂತ ನಾವು ಕೇಳಿದಾಗ ‘ನಿಮಗೆ ಗೊತ್ತಾಗಲ್ಲ. ಇವ್ರು ಓಡಿ ಹೋಗದಂತೆ ನೋಡಿಕೊಳ್ಳಿ. ಊಟದ ವ್ಯವಸ್ಥೆ ಮಾಡಿ’ಅಂದ್ರು ವೀರಪ್ಪನ್.
ಅವರನ್ನೆಲ್ಲ ಕರ್ಕೊಂಡು ತಮಿಳುನಾಡಿನ ಅರಣ್ಯಕ್ಕೆ ಬಂದ್ವಿ. ಆ ಕಾಡಿನ ಹೆಸರು ಗೊತ್ತಿಲ್ಲ. ನಕ್ಕೀರನ್ ಪತ್ರಿಕೆಯ ಗೋಪಾಲನನ್ನು ಕರೆಸಿದ್ರು. ಇಷ್ಟೊತ್ತಿಗೆ 10 ದಿನಗಳಾಗಿತ್ತು. ಅಪಹರಿಸಿದವರಲ್ಲೇ ಒಬ್ಬರಿಗೆ ಕ್ಯಾಸೆಟ್ಟು ಕೊಟ್ಟು ಕರ್ನಾಟಕದ ಆಗಿನ ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಕಡೆ ಕಳಿಸಿದ್ರು. ಮೊದಲ ದಿನ ಮಾತ್ರ ಕೈಕೊಳ ಹಾಕಿದ್ರು ಆಮೇಲೆ ಹಾಕಲಿಲ್ಲ. ಅವರನ್ನು ನಮ್ಮ ಜೊತೆ ಓಡಾಡಲು ಬಿಟ್ರು. 4-5ದಿನಗಳಲ್ಲಿ ನಮ್ಮಂತೇನೆ ಆದ್ರು. ನಮ್ಮ ಸಹಕಾರದಿಂದ ಬರೋದಾದ್ರೆ. ಬನ್ನಿ ಅಂತ ಅಧಿಕಾರಿಗಳು ಹೇಳಿದ್ರು. ಯಾರನ್ನೂ ಸಾಯಿಸಲ್ಲ ಅಂತ ವೀರಪ್ಪನ್ ಹೇಳಿದ್ರು.
ಗೋಪಾಲನ್ ಬಂದಾಗ ಶರಣಾಗುವ ಕುರಿತು ವೀರಪ್ಪನ್ ಹೇಳಿದ್ರು, ‘ಬಿಡುಗಡೆಯಾದ ಮೇಲೆ ಸರ್ಕಾರ ಸಾಲ ಕೊಡಬೇಕು. ನನ್ನ ಹೆಸರು ಹೇಳಿ ಅಮಾಯಕರಿಗೆ ತೊಂದ್ರೆ ಕೊಟ್ಟಿದ್ದಾರೆ. ತೊಂದರೆಗೊಳಗಾದವರಿಗೆ ಪರಿಹಾರ ಕೊಡಬೇಕು’. ಹೀಗೆ ಕ್ಯಾಸೆಟ್ ಮಾಡಿಕೊಂಡು ಗೋಪಾಲನ್ ಒಯ್ದ ಎರಡೂ ರಾಜ್ಯದ ಸರ್ಕಾರಗಳ ಜೊತೆ ಮಾತಾಡಿದ್ರು.
ಸರ್ಕಾರದಿಂದ ಮಾಹಿತಿ ಬಂತು. ಅವರನ್ನು ಏನೂ ಮಾಡಬೇಡಿ ಶರಣಾಗುವ ಕುರಿತು ಚರ್ಚೆ ಮಾಡ್ತೀವಿ ಅಂತ ಸರ್ಕಾರಗಳು ಹೇಳಿದ್ವು. ಆದ್ರೆ ರಾಷ್ಟ್ರಪತಿ ಒಪ್ಪಬೇಕು ಅಂತ ವೀರಪ್ಪನ್ ಹೇಳಿದ್ರು. ಗೋಪಾಲನ್ ಹೇಳಿದ್ರು ‘ನ್ಯಾಯಾಲಯದಲ್ಲಿ ಮೊದಲು ಶರಣಾಗಿರಿ. ಶಿಕ್ಷೆ ಕೊಟ್ಟ ಮೇಲೆ ಒಪ್ಪಿಕೊಳ್ಳಬೇಕು ಅಂತ ಸರ್ಕಾರಗಳು ಹೇಳುತ್ತಿವೆ. ಆದ್ರೆ ವೀರಪ್ಪನ್ ‘ನನ್ನ ತಮ್ಮ ಅಜರ್ ನನ್ನು ಎನ್ಕೌಂಟರ್ನಲ್ಲಿ ಸಾಯಿಸಿದ್ರು. ನಿಮ್ಮ ಮಾತಿಗೆ ಒಪ್ಪಲ್ಲ’ ಅಂದ್ರು.
ಗೋಪಾಲನ್ ‘ಸರ್ಕಾರಕ್ಕೆ ಸಂದೇಶ ತಿಳಿಸ್ತೀನಿ. ಸರ್ಕಾರದ ಜೊತೆ ಸಂಪರ್ಕ ಮಾಡುವೆ ಅಷ್ಟೇ. ಇದರಾಚೆಗೆ ಏನೂ ಮಡೋಕೆ ಆಗಲ್ಲ’ಅಂದ್ರು. ಒಂಬತ್ತು ಜನರಲ್ಲಿ ರಜು ಎಂಬುವರಿಗೆ ಹುಷಾರಿರಲಿಲ್ಲ. ಗೋಪಾಲನ್ ಜೊತೆ ಕಳಿಸಿದ್ರು. ಮತ್ತೆ ಮತ್ತೆ ಚಿಂತೆ ವೀರಪ್ಪನ್ಗೆ. ಪಾಪದ ಜನ ಇವರು. ಈ ಎಂಟು ಜನರನ್ನು ಬಿಟ್ಟು ಬಿಡೋಣ ಅಂತ ವೀರಪ್ಪನ್ ಹೇಳಿದ್ರು. ಎರಡು ದಿನಗಳ ನಂತರ ಗೋಪಾಲನ್ ಕರೆಸಿ ಎಲ್ಲರನ್ನೂ ಕಳಿಸಿಕೊಟ್ರು. ತಮಗೆ ಬೇಕಾದ ವ್ಯಕ್ತಿ ಕಡೆಯಿಂದ ಕ್ಯಾಸೆಟ್ ಕಳಿಸಿ ಗೋಪಾಲನ್ಗೆ ತಲುಪುಸೋದು. ಆಗ ಅವರು ಹೊರಟು ಬರೋರು. ಕ್ಯಾಸೆಟ್ಟಲ್ಲಿ ಬರೋ ದಾರಿ ಹೇಳೋರು. ಕಾಡಲ್ಲಿ ವಾಹನ ಇಳಿಸಿದ ಮೇಲೆ 10-15 ಕಿಲೋಮೀಟರು ನಡೆಸಿಕೊಂಡು ಬರೋರು.
ಅರಣ್ಯಾಧಿಕಾರಿಗಳ ಬಿಡುಗಡೆ ಆಯ್ತು. ಅವರ ಜೊತೆ ನಾವು ಹೋಗೋದು ಬೇಡ ಅಂದ್ರು. ಮಾರನೆ ದಿನ. ನಮ್ಮನ್ನು ಬಿಡುಗಡೆ ಮಾಡಿ ಅಂತ ಬೇಡಿಕೊಂಡ್ವಿ. ಆಗ ವೀರಪ್ಪನ್ ‘ಈ ಕಾಡಲ್ಲಿ ಬೇಡ. ಇನ್ನೊಂದು ಕಾಡಲ್ಲಿ ಬಿಡುಗಡೆ ಮಾಡ್ತೀವಿ’ ಅಂತ ಕರ್ಕೊಂಡು ಹೋದ್ರು. ಆಗ ಗೋಪಾಲನ್ಗೆ ಹೇಳಿಕಳಿಸಿದ್ರೂ ಬರಲಿಲ್ಲ. ಕರ್ನಾಟಕದ ಪೊಲೀಸರ ಕಡೆಯಿಂದ ತೊಂದರೆ ಆಗ್ತದೆ ಎಂದು ಬರಲಿಲ್ಲ ಅಂತ ಗೊತ್ತಾಯಿತು. ವೀರಪ್ಪನ್ ಅಸಹಾಯಕರಾದ್ರು.
ವೀರಪ್ಪನ್ ಹೇಳಿದ್ದಕ್ಕೆ ಸಣ್ಣ ಪುಟ್ಟ ಹೆಲ್ಪ್ಗೆ ಬಂದ್ವಿ. ನಮ್ಮ ಊರ ಪಕ್ಕದ ಊರಲ್ಲಿ ಅಂಗಡಿ ಇಟ್ಕೊಂಡ ತಂದೆ-ಮಗನಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ರು ಅಂತ ಕೇಳಿದ್ವಿ. ಈಗ ಇಬ್ಬರೂ ಮಾನಸಿಕ ರೋಗಿಗಳಾಗಿದ್ದಾರೆ. ಇದನ್ನು ಕೇಳಿದ ಮೇಲೆ ಭಯ ಆಯ್ತು. ಯಾವ ಕಾರಣಕ್ಕೂ ಇರಲಿಕ್ಕೆ ಆಗಲ್ಲಂತ ವೀರಪ್ಪನ್ಗೆ ಹೇಳಿದ್ವಿ. ನೆಟ್ರಿಕನ್ ಪತ್ರಿಕೆಯ ಸಂಪಾದಕ ಮದನ್ ಮುತ್ತು ಹಾಗೂ ಎ.ಎಸ್. ಮಣಿ ಅವರನ್ನು ಕರೆಸಿದ್ರು. ಅವರೊಂದಿಗೆ ಕಳಿಸಿಕೊಟ್ರು. ತಮಿಳುನಾಡು-ಕರ್ನಾಟಕದ ಜಂಟಿ ಕಾರ್ಯಾಚರಣೆ ಅಧ್ಯಕ್ಷ ಕಾಳಿಮುತ್ತು ಅವರ ಚಿನ್ನೈನ ಕಚೇರಿಯಲ್ಲಿ ಶರಣಾದೆವು. ಆಗ ಪತ್ರಕರ್ತರೂ ಇದ್ದರು. ಹಾಗಂತ ಬೇಡಿಕೆ ಇಟ್ಟಿದ್ದೆವು.
1998ರ ಏಪ್ರಿಲ್ 10ರಂದು ಮೂವರು ಶರಣಾದೆವು ಇದಾದ 10 ದಿನಗಳ ಮೇಲೆ ಎ.ಎಸ್.ಮಣಿ ನಮ್ಮ ಮನೆಯವರನ್ನು ಕರ್ಕೊಂಡು ಬಂದ್ರು. ಒಂದೂವರೆ ವರ್ಷದ ನಂತರ ಮನೆಯವರನ್ನು ನೋಡಿದೆವು. ನಮ್ಮ ತಂದೆ ಮತ್ತು ದೊಡ್ಡಪ್ಪ ಎಸ್.ಟಿ.ಎಫ್. ಕ್ಯಾಂಪ್ ನಲ್ಲಿದ್ದುದು ಗೊತ್ತಾಯಿತು. ‘ಕುಟುಂಬದ ಮರ್ಯಾದೆ ಹೋಯ್ತು’ ಅಂತ ಬೈದ್ರು. ಟೀ ಅಂಗಡಿಯಿತ್ತು. ಎಸ್.ಟಿ.ಎಫ್ನವರು ಬಂದ್ರೆ ಟೀ ಕೊಡಬೇಕಿತ್ತು. ದುಡ್ಡು ಕೊಡುತ್ತಿರಲಿಲ್ಲ. ಹಿಂಗಾಗಿ ಅಂಗಡಿ ಮುಚ್ಚಿದ್ರು. ಕೆಲಸಕ್ಕೂ ಹೋಗ್ತಿರಲಿಲ್ಲ. ಮನೇಲಿ 15-20 ಕುರಿಗಳಿದ್ದವು. ತಾಯಿಗೆ ಹುಷಾರಿಲ್ಲದ್ದಕ್ಕೆ ಅವನ್ನೂ ಮಾರಿದ್ರು. ಚೆನ್ನೈನಲ್ಲಿರುವ ಮದ್ರಾಸ್ ಸೆಂಟ್ರಲ್ ಜೈಲಿಗೆ ಹೋದೆವು. ಅಪಹರಣ ಕೇಸೊಂದರಲ್ಲಿ ನಮ್ಮನ್ನು ಸೇರಿಸಿದ್ರು. ನಾಲ್ಕು ವರ್ಷಗಳ ನಂತರ ಕೇಸು ಖುಲಾಸೆಯಾಯ್ತು. ಶರಣಾದ ಮೂರು ತಿಂಗಳಲ್ಲಿ ಅರಣ್ಯಾಧಿಕಾರಿಗಳ ಅಪಹರಣ ಕೇಸಲ್ಲಿ ಬಾಡಿ ವಾರೆಂಟ್ ಕೇಸು ಬಂತು. ಕೊಳ್ಳೇಗಾಲ ಪಕ್ಕದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಮನೆಯವರು ಸಾಲ ಮಾಡಿ ವಕೀಲರನ್ನು ನೇಮಿಸಿದ್ರು. ಕೋರ್ಟಲ್ಲಿ ನಡೆದುದನ್ನೆಲ್ಲ ಹೇಳಿದ್ವಿ. 2004ರಲ್ಲೇ ಮೈಸೂರು ಜೈಲಿಗೆ ಬಂದೆ. 2006ರಲ್ಲಿ ಜೀವಾವಧಿ ಶಿಕ್ಷೆಯಾಯ್ತು. ಇಲ್ಲಿ ವಿದ್ಯುತ್ ಮಗ್ಗದ ರಿಪೇರಿ ಮಾಡುವೆ. 1998ರಲ್ಲಿ ಮೈಸೂರು ಕೋರ್ಟ್ ಗೆ ಬಂದಾಗ ಕಟ್ಟಿಮನಿಯವರು ‘ಮಾರನಾಯಕ’ ನಾಟಕ ಆಡಿಸಿದ್ರು. ನಾಟಕ ನೋಡಿದೆ. ಅರ್ಥ ಆಗಲಿಲ್ಲ. ಇಷ್ಟು ವರ್ಷಗಳಲ್ಲಿ ಸಮಾಜ, ಜನರು, ದೇಶದ ಬಗ್ಗೆ ಮಾಹಿತಿ ತಿಳಕೊಂಡೆ. ಮೈಸೂರು ಜೈಲಿಗೆ ಬಂದ ಮೇಲೆ ಕನ್ನಡವನ್ನು ಓದೋಕೆ, ಬರೆಯೋಕೆ ಕಲಿತೆ. ಜೈಲಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿರುವೆ. ಮತ್ತ ಕಟ್ಟಿಮನಿಯವರು ನಾಟಕ ಕಲಿಸೋಕೆ ಬಂದಾಗ ಗಣೇಶನಾಯ್ಕ ಕರೆದಾಗ ಬಂದೆ. ಆಗ ಕಟ್ಟಿಮನಿ ‘ಯಾತಕ್ಕಾಗಿ ಬರ್ತೀರಿ?’ ಕೇಳಿದಾಗ ‘ರಂಗಭೂಮಿ ಬಗ್ಗೆ ಗೊತ್ತಿಲ್ಲ. ತಿಳ್ಕೊಳ್ಳೋಕೆ ಬರ್ತೀನಿ. ಕಲಿಯೋ ಆಸಕ್ತಿ ಇದೆ’ ಅಂದೆ. ತಲೆದಂಡ ನಾಟಕದಲ್ಲಿ ಸೈನಿಕನ ಪಾತ್ರ, ಮಾಧವಿಯಲ್ಲಿ ಯಯಾತಿ ಆಶ್ರಮವಾಸಿ. ಕಸ್ತೂರಬಾದಲ್ಲಿ ಡರ್ಬನ್ನಲ್ಲಿ ತಮಿಳಿನ ಕರಾರುಕೂಲಿಯಾಗಿ ಪಾತ್ರ ಮಾಡಿರುವೆ. ನಾಟಕಕ್ಕೆ ಸೇರುವ ಮೊದಲು ಹಿಂಗಿರಲಿಲ್ಲ. ಈಗ ಸಮಯ ಪರಿಪಾಲನೆ ಮಾಡ್ತಿರುವೆ. ಇಷ್ಟೊತ್ತಿಗೆ ಬರೆಯಬೇಕು. ಓದಬೇಕು ಅಂತ ತೀರ್ಮಾನಿಸಿದೆ. ಟೈಮನ್ನ ಹೇಗೆ ಬಳಸಬೇಕಂತ ಕಲಿತೆ. ಈಗ 31 ವಯಸ್ಸು. 11ವರ್ಷ ಜೈಲಲ್ಲೇ ಕಳೆದಿರುವೆ. ಸರ್ಕಾರ ಕರುಣೆ ತೋರಿದರೆ ಬಿಡುಗಡೆ ಆಗಬಹುದು.
ಜೈಲಿಗೆ 19ನೇ ವಯಸ್ಸಲ್ಲೇ ಬಂದೆ. ಮದುವೆಯಾಗಿಲ್ಲ. ಜೈಲಿಗೆ ಬಂದ ಮೇಲೆ ದೇಶ, ಕಾನೂನು, ಚೌಕಟ್ಟು ಗೊತ್ತಾಯ್ತು. ಈಗ ಹೇಗೆ ಬದುಕಬೇಕು ಅನ್ನೋದು ಗೊತ್ತಾಯ್ತು. ಊರಲ್ಲಿದ್ರೆ ಖಂಡಿತ ಗೊತ್ತಾಗ್ತಿರಲಿಲ್ಲ. ಇದಕ್ಕಾಗಿ ಸಂತೋಷಪಡ್ತೀನಿ. ನನಗೆ ಆಗ ತಿಳಿವಳಿಕೆ ಇರಲಿಲ್ಲ. ನನ್ನ ತಪ್ಪಿನಿಂದಾಗಿ ಇಬ್ರು ಅಣ್ಣಂದಿರು ನನ್ನೊಂದಿಗೆ ಇದೇ ಜೈಲಲ್ಲಿ ಇದ್ದಾರೆ. ನಮ್ಮೊಟ್ಟಿಗೆ ಸಿದ್ದು ಅವರಿಗೆ ಜೀವಾವಧಿ ಶಿಕ್ಷೆ ಆಗಿದೆ. ಅಲ್ಲಿ ತೋಟದ ಕೆಲಸ ಮಾಡುತ್ತಿದ್ದಾರೆ ನೋಡಿ, ಅವರು. ಅರಣ್ಯಾಧಿಕಾರಿಗಳ ಅಪಹರಣದಲ್ಲಿ ಸಹಾಯ ಮಾಡಿದವರೂ ನಮ್ಮೊಂದಿಗೇ ಇದ್ದಾರೆ. ಬುಡಕಟ್ಟು ಜನಾಂಗವಾದ ಸೋಲಿಗರು ಅವರು. ಅವರ ಜಮೀನು ಕಿತ್ತುಕೊಳ್ಳಲು ನಮ್ಮೊಂದಿಗೆ ಅವರನ್ನೂ ಸೇರಿಸಿದ್ರು.
ತಂಗಿಗೆ ಮದುವೆಯಾಗಿದೆ. ಅಪ್ಪ-ಅಮ್ಮ ಬದುಕಿದ್ದಾರೆ. ಅಷ್ಟೇ. ಪುದುಕ್ಕಾಡು ಊರಲ್ಲಿ ತಮ್ಮ ಸೇಂದಿಲ್ ಕೃಷಿ ಮಾಡ್ತಾನೆ. ಅವನಿಗೆ 29 ವಯಸ್ಸು. ಅವನಿಗೂ ಮದುವೆಯಾಗಿಲ್ಲ. ನನ್ನ ಬಿಡುಗಡೆಗೆ ಕಾಯ್ತಿದ್ದಾನೆ.

ಮುಂಬೈಗೆ ಮಾರಾಟ ಆಗ್ತಿದ್ದೆ….
ಚೆನ್ನೈನ ಕೊಯಂಬೋಡ ಪಕ್ಕ ಚುಲೈ ಊರು.
ಒಬ್ಬಳೇ ಮಗಳು. ತಂದೆ-ತಾಯಿ ಇಬ್ರೂ ಅಪಘಾತಕ್ಕೀಡಾಗಿ ಹೋಗಿಬಿಟ್ರು. ಆಗ ನಂಗೆ ಎಂಟು ವರ್ಷ. ನಮ್ಮಜ್ಜಿ ಸತ್ರು. ಚಿಕ್ಕಪ್ಪ ಆಸ್ತಿ ಬೇಕಂತ ಹಟ ಹಿಡಿದು ಅಜ್ಜಿ ಹತ್ರ ಜಗಳಾಡ್ತಿದ್ದ. ಆ ಕೊರಗಲ್ಲೇ ಅಜ್ಜಿ ತೀರಿಕೊಂಡ್ಳು. ಚಿಕ್ಕಪ್ಪನ ಮನೆಯಲ್ಲಿದ್ದೆ. ತುಂಬಾ ಹಿಂಸೆ ಕೊಡೋರು. ಹುಟ್ಟಿದ ಗಳಿಗೆ ಸರಿಯಿಲ್ಲ ಅಂತ ಬೈತಿದ್ರು. ಎಲ್ಲಾದರೂ ಓಡಿಹೋಗೋಣ ಅನ್ನಿಸೋದು. ಒಂದಿನ ಮನೆಬಿಟ್ಟೆ. ಬೇರೆ ಮನೆಯ ಕೆಲಸಕ್ಕೆ ಸೇರಿದೆ. 2003 ರಲ್ಲಿ ಸಂಬಂಧಿಕರೊಬ್ಬರು ಬೆಂಗಳೂರಿಗೆ ಆಂಟಿ ಮನೆಗೆ ಕಳಿಸಿಕೊಟ್ರು. ಒಂದು ತಿಂಗಳು ಚೆನ್ನಾಗಿ ನೋಡಿಕೊಂಡ್ರು. ಆಂಟಿ ಮನೆಯಲ್ಲಿದ್ದೆ. ಅವರು ಅಪಾರ್ಟ್ ಮೆಂಟನಲ್ಲಿದ್ದರು. ಅವರಿಗೆ ಗಂಡ ಸತ್ತುಹೋಗಿದ್ದ. ಇಬ್ರು ಮಕ್ಕಳು. ವಿದೇಶದಲ್ಲಿ ವೈದ್ಯರು. ಆದ್ರೆ ನನ್ನನ್ನು ಮುಂಬೈಗೆ ಮಾರಬೇಕೆಂದು ಪ್ರಯತ್ನಪಟ್ರು. ದುಡ್ಡು ಇಸಕೊಂಡಿದ್ರು. ‘ದುಡ್ಡು ಇಸಕೊಂಡಿದ್ದೀನಿ. ಮುಂಬೈಗೆ ಹೋಗಬೇಕು’ ಅಂತ ಒತ್ತಾಯಿಸಿದ್ರು. ನಾನು ಒಪ್ಪಲಿಲ್ಲ. ಕಾಲು ಹಿಡ್ಕೊಂಡು ಕೇಳಿದೆ. ‘ಎಲ್ಲಿಂದ ಕರ್ಕೊಂಡು ಬಂದೀರಿ, ಅಲ್ಲಿಗೇ ಕಳಿಸಿ’ ಅಂತ ಒತ್ತಾಯ ಮಾಡಿದೆ. ಜಗಳಾ ಆಯ್ತು.
ಒಂದಿನ ಜಗಳ ಆಗುವಾಗ ಚಾಕು ತಂದು ಎಡಗೈಗೆ ಚುಚ್ಚಿದ್ರು. ಹೊಟ್ಟೆಗೂ ಚುಚ್ಚಿದ್ರು. ನಾಲ್ಕು ಕಡೆ ಗಾಯವಾಯ್ತು. ‘ನಿನ್ನಂಥ ಸಾವಿರ ಹುಡುಗಿಯರನ್ನು ನೋಡಿದ್ದೀನಿ. ನಾನು ಹೇಳೋ ತರಹ ರೆಡಿಯಾಗಬೇಕು’ ಅಂತ ಡ್ರೆಸ್, ಒಡವೆ ತೋರಿಸಿದ್ರು. ಗಾಯವಾದಾಗ ಸಿಟ್ಟು ಬಂತು. ಅದೇ ಚಾಕುವಿನಿಂದ ಅವರ ಹೊಟ್ಟೆಗೆ ಚುಚ್ಚಿದೆ. ಹೆದರಿಕೆಯಾಗಿ ಪ್ರಜ್ಞೆ ತಪ್ಪಿ ಬಿದ್ದೆ.
ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಹುಷಾರಾದ ಮೇಲೆ ರಿಮ್ಯಾಂಡ್ ಹೋಂಗೆ ಹಾಕಿದ್ರು. ಆಗ ನಂಗೆ 18 ವರ್ಷ. ಎಲ್ಲ ನಿಜ ಹೇಳಿದೆ. ಪೋಲಿಸರು ಹೊಡೆಯಲಿಲ್ಲ. ಕೋರ್ಟಲ್ಲೂ ನಿಜ ಹೇಳಿದೆ. ಆದರೆ ಕೊಲೆ ಮಾಡಿದ್ದು ನಿಜವೆಂದು 2006 ರ ಜೂನ್ ತಿಂಗಳಲ್ಲಿ ಜೀವಾವಧಿ ಶಿಕ್ಷೆ ಆಯ್ತು.
ನನಗೆ ಯಾರೂ ಇಲ್ಲ. ಯಾರೂ ನೋಡೋಕೆ ಬರಲ್ಲ.ಇಲ್ಲಿರುವ ಅನ್ಬು ಅಣ್ಣ ಹೇಳ್ತಾರೆ, ನಮ್ಮ ಮನೆಗೆ ಬನ್ನಿ, ತಂಗಿಯಾಗಿರಿ ಅಂತಾರೆ. ಈಗ ನಂಗೆ 23 ವರ್ಷ. ನವೆಂಬರ್ ಬಂದ್ರೆ ಐದು ವರ್ಷ ಕಳೆಯುತ್ತದೆ ಜೈಲಲ್ಲಿ.
ನಾಟಕದ ಶಿಬಿರದಲ್ಲಿ ಮಣ್ಣಿಂದ ಗೊಂಬೆ ಮಾಡಿದೆ. ಕೋಲಾಟ ಆಡಿದೆ. ಗಾಂಧೀಜಿ ಬಗ್ಗೆ ತುಂಬಾ ತಿಳ್ಕೊಂಡೆ. ಅವರಿಗೆ ಎಷ್ಟು ಮಕ್ಕಳಿದ್ರು ಎನ್ನುವುದು ಗೊತ್ತಿರಲಿಲ್ಲ. ಮಾಧವಿ ನಾಟಕದಲ್ಲಿ ದಾಸಿ ಪಾತ್ರ ಮಾಡುವೆ.
ಜೈಲಿಗೆ ಬಂದ ಮೇಲೆ ಕನ್ನಡ ಓದೋಕೆ, ಬರೆಯೋಕೆ ಬರುತ್ತೆ. ತಮಿಳು ಓದೋಕೆ ಬರುತ್ತೆ. ಆಚೆ ಇದ್ದಾಗ ಓದೋಕೆ ಇಷ್ಟ ಇತ್ತು. ಆದ್ರೆ ಯಾರೂ ಕಲಿಸಲಿಲ್ಲ. ಈಗ ಓದುತ್ತಿರುವೆ. ಮೊದಲು ಯಾರ ಜೊತೆ ಮಾತಾಡ್ತಿರಲಿಲ್ಲ. ಬೆಂಗಳೂರಿನಿಂದ ನಾಟಕ ಆಡುವ ಸಲುವಾಗಿ ಬಂದೆ. ಸಣ್ಣ ವಯಸ್ಸಲ್ಲೇ ಒಂಟಿಯಾಗಿ ಬೆಳೆದೆ ಈಗ ಎಲ್ಲರ ಹತ್ರ ಮಾತಾಡುವೆ. ಕಾದಂಬರಿಗಳನ್ನು ಓದ್ತೀನಿ.
ಬೇಗ ಬಿಡುಗಡೆ ಆಗ್ಲಿ ಅಂತ ಕೇಳ್ತೀನಿ…

*ಇಂದ್ರಾ
ಕೇಸಾದಾಗ ಮದುವೆಯಾಗಿರಲಿಲ್ಲ.
ತವರು ಮನೆ ಕನಕಪುರ ತಾಲ್ಲೂಕಿನ ಕುಂಟಕೆರೆದೊಡ್ಡಿ ಗ್ರಾಮ. ಗಂಡನ ಮನೆ ಚಾಮರಾಜನಗರದ ತಾಲ್ಲೂಕಿನ ಮಂಗಲ ಹೊಸೂರು. ಏನು ಓದಿಲ್ಲ.
ದೊಡ್ಡಮ್ಮನ ಮಗಳು ನಾಗರತ್ನಾ ಮತ್ತು ನಾನು ಒಳಗಿದ್ದೀವಿ. ನಾಲ್ಕೂವರೆ ವರ್ಷವಾಯಿತು. ನಾನು ಬಂದು ಎರಡೂವರೆ ವರ್ಷವಾಯಿತು. ಹಾಫ್ ಮರ್ಡರ್ ಕೇಸು. ನಾನು ಮತ್ತು ಅಕ್ಕ ನಾಗರತ್ನಾ ಮನೆಗೆಲಸ ಮಾಡ್ತಿದ್ವಿ. ಬೆಂಗಳೂರಿನ ಗಿರಿನಗರದ ಮನೆಯೊಂದರಲ್ಲಿ.
ಅಕ್ಕ ಹೇಳಿ ತಲೆ ಕೆಡಿಸಿದಳು. ಆಕೆ ಹೇಳಿದ್ದು; ಗಂಡ ಕುಡೀತಾನೆ. ಚೀಟಿ ಕಟ್ಟಬೇಕು. ಎರಡು ಮಕ್ಕಳು. ಹೆಲ್ಪ್ ಮಾಡು ಅಂದ್ಲು.
‘ಏನಂತ?’ ಕೇಳಿದೆ.
‘ನೀನು ಮನೆಗೆಲಸ ಮಾಡ್ತೀಯಲ್ಲ. ಆಕೆಯ ಗಂಡ ಇಲ್ಲದ ಸಮಯದಲ್ಲಿ ಹೊಡೆದು, ಹಣ ಮತ್ತು ಒಡವೆ ತರೋಣ’ ಅಂತ ಕರ್ಕೊಂಡು ಹೋದ್ಲು. ಬೇಡಂದೆ. ಒತ್ತಾಯ ಮಾಡಿದ್ಲು. ಕೊನೆಗೆ ಆಕೆ ಜೊತೆ ಹೋಗುವಾಗ ಕೈಕಾಲು ನಡುಕ ಬಂತು. ಇದಕ್ಕೂ ಮೊದಲು ಎರಡು ದಿನ ನನ್ನ ಜೊತೆ ಕೆಲಸಕ್ಕೆ ಬಂದಿದ್ಲು. ಅವತ್ತೂ
ಕೆಲಸಕ್ಕೆ ಬಂದ್ಲು. ನಾನು ಹೊರಗಡೆಯೇ ಇದ್ದೆ. ಅವಳು ಒಳಹೋದಳು. ಓನರ್ ಕೇಳಿರಬೇಕು. ‘ಇಂದ್ರಾ ಹೊರಗೆ ಇದ್ದಾಳೆ. ನಾನು ಕೆಲಸಕ್ಕೆ ಬಂದೀನಿ’ ಅಂದಿದ್ದಾಳೆ. ಸ್ವಲ್ಪ ಹೊತ್ತು ಬಿಟ್ಟು ಬಂದು ‘ಹೊಡೆದಿದ್ದೀನಿ’ ಅಂತ ಹೇಳಿ ಹಣ, ಒಡವೆ ತಂದಿದ್ಲು. ಮಾರನೆ ದಿನ ಮನೆ ಹತ್ರ ಪೊಲೀಸರು ಬಂದ್ರು. ‘ಇಂದ್ರಾ ಯಾರು?’ ಅಂತ ಕೇಳಿದಾಗ
‘ನಾನು’ ಎಂದೆ.
‘ನಮ್ಮ ಜೊತೆ ಬಾರಮ್ಮಾ’ ಅಂದ್ರು
‘ಯಾಕೆ?’ ಕೇಳಿದೆ.
ಮತ್ತೆ ಅವರು, ‘ನಾಗರತ್ನ ಯಾರು?’ ಅಂತ ಕೇಳಿದ್ರು.
‘ಕೆಳಗಡೆ ಇದ್ದಾರೆ’ ಅಂದೆ. ‘ತೋರಿಸು ಬಾ’ ಅಂದ್ರು. ಅವರನ್ನು ಕರಕೊಂಡು ನಾಗರತ್ನ ಮನೆಗೆ ಹೋದೆ. ಪೊಲೀಸರನ್ನು ನೋಡಿದವಳೆ ‘ನಾಗರತ್ನ ನಾನಲ್ಲ. ಇನ್ನೊಬ್ಬರಿದ್ದಾರೆ’ ಅಂದ್ಲು. ಅನುಮಾನ ಬಂತು. ಪೊಲೀಸರಿಗೆ. ‘ನೀನೇ ಬಾ’ ಎಂದು ಸ್ಟೇಷನ್ಗೆ ಕರಕೊಂಡು ಹೋದ್ರು.
ಪೊಲೀಸರು ವಿಚಾರಿಸಿದಾಗ ಅಕ್ಕ ಮಾಡಿದ್ದೆಂದು ಹೇಳಿದೆ. ಹಣ, ಒಡವೆ ಸಿಕ್ತು. ಮತ್ತೆ ಸ್ಟೇಷನ್ಗೆ ಕರ್ಕೊಂಡು ಬಂದ್ರು. ಅಲ್ಲಿದ್ದ ಅಕ್ಕ ನನ್ನ ಕಾಲು ಹಿಡ್ಕೊಂಡು ‘ನೀನೊಬ್ಬಳೇ ಮಾಡಿದ್ದು’ ಅಂತ ಹೇಳು ಅಂದ್ಲು. ನಾನೊಪ್ಪಲಿಲ್ಲ. ಇದಾದ ಎಂಟು ದಿನಕ್ಕೆ ಜಾಮೀನು ಸಿಕ್ತು. ಕೇಸು ನಡೀತಿತ್ತು. ಡೇಟು ಬಂದಾಗ ಹೋಗ್ತಿದ್ವಿ. ವಿಚಾರಣೆ ವೇಳೆ ಆಸ್ಪತ್ರೆಯಲ್ಲಿದ್ದ ಯಜಮಾನತಿ ನಮ್ಮಿಬ್ಬರ ಹೆಸರು ಹೇಳಿದ್ದರಂತೆ ಕಾಣುತ್ತೆ. ಆಮೇಲೆ ಕೋರ್ಟಲ್ಲಿ ಸಾಕ್ಷಿಗೆ ಬಂದಾಗ ಯಜಮಾನತಿ ‘ಇವರಿಬ್ರೂ ಬಂದು ಹೊಡೆದ್ರು. ಅಬಾರ್ಷನ್ ಆಯ್ತು’ ಅಂತ ಹೇಳಿದ್ರು ಆಗ ಏಳು ವರ್ಷ ಶಿಕ್ಷೆಯಾಯಿತು.
ಎರಡೂವರೆ ವರ್ಷದಿಂದ ಬೆಂಗಳೂರಿನ ಜೈಲಲ್ಲಿರುವೆ. ಜಾಮೀನು ಸಿಕ್ಕಾಗ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಈಜುಗೋಳದಲ್ಲಿ ಕೆಲಸ ಮಾಡ್ತಿದ್ದೆ. ಅಲ್ಲಿ ದಿನೇಶ್ ಅಂತ ಕೆಲಸ ಮಾಡ್ತಿದ್ರು. ಬೇರೆಯವರ ಹತ್ರ ನನ್ನ ಬಗ್ಗೆ ಕೇಳಿದ್ರು. ಮದುವೆಯಾಗ್ತೀನಿ ಅಂದ್ರು. ನಾನೊಪ್ಪಲಿಲ್ಲ. ಆದ್ರೂ ಒತ್ತಾಯಿಸಿದ್ರು. ನಮ್ಮ ತಂದೆ-ತಾಯಿ ಒಪ್ಪಲಿಲ್ಲ. ಕೊನೆಗೆ ಮದುವೆಯಾಯ್ತು.
ಕೇಸಿಗೆ ಸಂಬಂಧಿಸಿ ಕೋರ್ಟ್ಗೆ ಹೋಗುವಾಗ ದೊಡ್ಡ ಮಗಳು ಹುಟ್ಟಿದ್ಲು. ಮತ್ತೆ ಗರ್ಭಿಣಿಯಾದೆ. ಶಿಕ್ಷೆ ಕಾಯಂ ಆಯ್ತು. ಬಸುರಿಯಾಗಿದ್ದಾಗಲೇ ಒಳಬಂದೆ. ಜೈಲಲ್ಲೇ ಮಗ ಹುಟ್ಟಿದ. ಅವನು ಹುಟ್ಟಿದ 15 ದಿನಕ್ಕೆ ಹೈಕೋರ್ಟಿನಿಂದ ಜಾಮೀನು ಸಿಕ್ತು. ನಾಲ್ಕು ತಿಂಗಳಿನ ಕಂಡೀಷನ್ ಜಾಮೀನು. ಒಟ್ಟು ಎರಡು ವರ್ಷ ಎರಡು ತಿಂಗಳು ಹೊರಗಡೆ ಇದ್ದೆ; ಮಗುವಿಗೆ ಹುಷಾರಿಲ್ಲವೆಂದು, ಗಂಡನಿಗೆ ಹಾರ್ಟ್ ವೀಕೆಂದು ಹೊರಗಡೆ ಇದ್ದೆ. ಮತ್ತೆ ಒಳಗೆ ಬಂದೆ . ಮಗಳನ್ನು ಮನೇಲಿ ಬಿಟ್ಟು ಬಂದೆ. ಮಗನನು ಎತ್ತಿಕೊಂಡು ಬಂದೆ. ಒಂದೂವರೆ ವರ್ಷದ ನಂತರ ಗಂಡನ ಜೊತೆ ಕಳಿಸಿದೆ. ಅವರು ಆಗಾಗ ನೋಡೋಕೆ ಬರ್ತಿದ್ರು. ಆದ್ರೆ ಒಂದು ವರ್ಷದ ನಂತರ ಬೇರೆ ಮದುವೆಯಾಗಿದ್ದೀನಿ ಅಂತ ಆಕೇನ ಕರ್ಕೊಂಡು ಬಂದಿದ್ರು. ‘ನನ್ನ ಕೇಸು ಆಗಿದ್ದು ಗೊತ್ತಿತ್ತು. ಆದ್ರೂ ಯಾಕೆ ಮದುವೆಯಾದ್ರಿ?’ ಕೇಳಿದೆ.
‘ನನ್ನನ್ನು ನೋಡೋಕೆ, ಮಕ್ಕಳನ್ನು ನೋಡೋಕೆ ಯಾರೂ ಇಲ್ಲಂತ ಮದುವೆಯಾದೆ’ ಅಂದ್ರು. ನಾನು ಬದುಕಿರುವಾಗಲೇ ಇನ್ನೊಂದು ಮದುವೆಯಾದ ಗಂಡನ ವಿರುದ್ಧ ದೂರು ಕೋಡೋಕೆ ರೆಡಿಯಾದೆ. ಆದ್ರೆ ಮತ್ತೆ ಯೋಚನೆ ಮಾಡ್ದೆ ಅವರು ಒಳಗೆ ಬಂದ್ರೆ ಮಕ್ಕಳನ್ನು ನೋಡಿಕೊಳ್ಳೋರು ಯಾರು ಅಂತ. ಹಾಗಾಗಿ ಸುಮ್ಮನಾದೆ.
ವಕೀಲರು ಹೇಳಿದ್ದಾರೆ. ನಮ್ಮ ಕೇಸು ಸ್ಟ್ರಾಂಗ್ ಇಲ್ಲಂತ. ಆದ್ರೆ ಕೇಸು ನಡೆಸೋಕೆ ನಮ್ಮ ಯಜಮಾನ್ರು ಒಪ್ತಾಯಿಲ್ಲ. ನಾನು ಹೊರಬಂದ್ರೆ ಸಂಸಾರ ನಡೆಸಬೇಕಲ್ಲಂತ ವಕೀಲರು ಹತ್ರ ಹೋಗುತ್ತಿಲ್ಲ. ಪೇರೋಲ್ ಮೇಲೆ ನಾನು ಹೋಗೋದು ಅವರಿಗೆ ಇಷ್ಟವಿಲ್ಲ.
ಕೇಸಾದ ಮೇಲೆ ತಂದೆ ತೀರಿಹೋದ್ರು. ಅಣ್ಣ ಇದ್ದಾನೆ. ತಾಯಿ ಬರ್ತಾಳೆ ನೋಡೋಕೆ. ಆಕೆ ಜೊತೆ ಮಕ್ಕಳು ಬರ್ತವೆ. ಗಂಡ ಬರ್ತಾರೆ ಯಾವಾಗಲೋ. ಮಗಳು ಚೈತ್ರಶ್ರೀಗೆ ಏಳು ವರ್ಷ. ಮಗ ವೀರೇಶಗೆ ನಾಲ್ಕು ವರ್ಷ. ಬೆಂಗಳೂರಿನಿಂದ ಮೈಸೂರಿಗೆ ನಾಟಕ ಆಡೋಕೆ ಬಂದೆ. ಅಲ್ಲಿದ್ದಾಗ ಮಕ್ಳ ಕಡೆ. ಮನೆ ಕಡೆ ತುಂಬಾ ಚಿಂತೆ ಆಗ್ತಿತ್ತು. ನಾಟಕಕ್ಕೆ ಬಂದ ಮೇಲೆ ಬ್ಯುಜಿಯಾಗಿಬಿಟ್ಟೆ.
ಮಾಧವಿ ನಾಟಕದಲ್ಲಿ ಮೇಳದಲ್ಲಿದ್ದೀನಿ. ಇನ್ನೂ ಎರಡೂವರೆ ವರ್ಷ ಕಳೆಯಬೇಕು. ಐದು ವರ್ಷ ಕಳೆದ ಮೇಲೆ ಬಿಡುಗಡೆ ಅಂತೆ. ಮಗಳು ಕೇಳ್ತಾಳೆ ‘ಮಮ್ಮಿ ನೀನ್ಯಾಕೆ ಇಲ್ಲಿದ್ದೀಯಾ? ನಮ್ಮೊಟ್ಟಿಗೆ ಬಾ’ ಅಂತ. ನಮ್ಮ ತಾಯಿಗೆ ಮಕ್ಕಳನ್ನು ಕರ್ಕೊಂಡೋಗಿ ಇಟ್ಟುಕೊಳ್ಳೋಕ್ಕೆ ಆಗಲ್ಲ. ಹೀಗಾಗಿ ನನಗೆ ಮಕ್ಕಳದೇ ಚಿಂತೆ.

ಅತ್ಕೊಂಡು, ನಗಾಡ್ಕೊಂಡು ಡೈಲಾಗು
*ಗಣೇಶ ನಾಯ್ಕ
ಎಸ್ ಎಸ್ ಎಲ್ ಸಿ ರಿಜಲ್ಟು ಬರೋ ಹೊತ್ತಿಗೆ ಉಜಿರೆಯಲ್ಲಿದ್ದ ಮನೆ ಬಿಟ್ಟೆ.
ಕಾಲೇಜಿಗೆ ಸೇರಿಸ್ತಾರಂತ ಓಡಿ ಹೋದೆ. ಒಂಬತ್ತನೇ ತರಗತಿ ಮುಗಿದಾಗ ತಾಯಿ ಮೋನಮ್ಮ ತೀರಿಕೊಂಡ್ರು. ವಿದ್ಯಾಭ್ಯಾಸದ ಕಡೆಗೆ ಬೇಜಾರಾಯಿತು. ಕಾಲೇಜು ಓದೋದು ಬೇಡ ಅನ್ನಿಸ್ತು. ಹಾಗೆ ನೆಂಟರ ಮನೆಗೆಲ್ಲ ಸುತ್ತಾಡಿದೆ. ಮಂಗಳೂರು, ಬೆಂಗಳೂರು ಓಡಾಡಿದೆ.
ತಂದೆ ಧರ್ಮಣ್ಣ ನಾಯ್ಕರಿಗೆ ನಾನು ಸಣ್ಣವನಿರುವಾಗಲೇ ಪ್ಯಾರಲಿಸಿಸ್ ಆಗಿತ್ತು. ಸುತ್ತಾಡಿ ಊರಿಗೆ ಬಂದ ಮೇಲೆ ಐಟಿಐಗೆ ಸೇರಿಸಬೇಕಂತ ನನ್ನ ತಂದೆ ವಿರೇಂದ್ರ ಹೆಗ್ಗಡೆಯವರ ಹತ್ರ ಕರ್ಕೊಂಡು ಹೋದ್ರು. ಅವರಿಂದಾಗಿ ಐಟಿಐಗೆ ಪ್ರವೇಶ ಸಿಕ್ತು. ಫೀಸು ಕಡಿಮೆ ಮಾಡಿದ್ರು. ದುಡ್ಡು ಕಟ್ಟೋ ಟೈಮಿಗೆ ಊರು ಬಿಟ್ಟೆ. ಮಂಗಳೂರಲ್ಲಿ ನೋವೆಲ್ಟಿ ಕೆಮಿಕಲ್ ಏಜೆನ್ಸಿಯ ಕಾರ್ಖಾನೆಗೆ ಹೆಲ್ಪರ್ ಆಗಿ ಸೇರಿದೆ. ಬ್ಲೀಚೀಂಗ್ದಿಂದ ಹಿಡಿದು ಫಿನಾಯಿಲ್, ಲಿಕ್ವಿಡ್ ಸೋಪು ತಯಾರಿಸೋ ಕೆಲಸ. ಇದನ್ನೆಲ್ಲ ತಿಳಕೊಂಡೆ. ಗಲಾಟೆಯಾಯ್ತು. ಆದ್ರೂ ಮಂಗಳೂರಲ್ಲೇ ಫ್ಯಾಕ್ಟರಿಗೆ ಗೊತ್ತಾಗದಂತೆ ಆಸಿಡ್ , ಕೆಮಿಕಲ್ ಮಾರಾಟ ಮಾಡಲು ಶುರು ಮಾಡಿದೆ. ಫ್ಯಾಕ್ಟರಿಯಲ್ಲಿ ಮತ್ತೆ ಗಲಾಟೆಯಾಯ್ತು. ಕೆಲ್ಸ ಬಿಟ್ಟು ಉಜಿರೆಗೆ ಬಂದು ಶ್ರೀ ಗಣೇಶ ಹೋಂ ಪ್ರಾಡಕ್ಟ್ ಅಂತ ಸುರು ಮಾಡಿದೆ. ಫಿನಾಯಿಲ್, ಲಿಕ್ವಿಡ್ ಸೋಪು ತಯಾರು ಮಾಡಿ ಮಾರಾಟ ಮಾಡಿದೆ. ಧರ್ಮಸ್ಥಳದ ಹೋಟೆಲ್, ಇಸ್ತ್ರಿಅಂಗಡಿ, ಸರ್ವಿಸ್ ಸ್ಟೇಷನ್ಗಳಿಗೆ ಲಿಕ್ವಿಡ್ ಸೋಪು ಮಾರ್ತಿದ್ದೆ. ಐವತ್ತು ಪರ್ಸೆಂಟ್ ಮಾರ್ಜಿನ್ ಬರ್ತಿತ್ತು.
ಅಷ್ಟೊತ್ತಿಗೆ ಹಿಂದೂ ಜಾಗರಣ ವೇದಿಕೆ ಪರಿಚಯ ಇತ್ತು. ಮೊದಲಿಂದ ಆರ್ಎಸ್ಎಸ್ ಸಂಘಟನೆಯಲ್ಲಿದ್ದೆ. ಸಣ್ಣಪುಟ್ಟ ಗಲಾಟೆಯಾದಾಗ ಭಾಗವಹಿಸುತ್ತಿದ್ದೆ. ಸಂಘಟನೆಯ ಸಂಚಾಲಕ ಮಹೇಶ ಶೆಟ್ಟಿಗೂ ಉಜಿರೆಯ ಸೀನ ನಾಯ್ಕಗೂ ಗಲಾಟೆಯಾಗಿತ್ತು. ಗಲಾಟೆಯಾಗುವಾಗ ಮಹೇಶ ಜೊತೆಗಿದ್ದೆ. ಆಗ ಸೀನ ನಾಯ್ಕನಿಗೆ ನನ್ನ ಮೇಲೆ ಸಿಟ್ಟು ಬಂತು. ನನ್ನ ಸಂಬಂಧಿ ಕೂಡಾ. ಉಜಿರೆಯಲ್ಲಿ ಮರಾಠಿ ನಾಯ್ಕ ಸಂಘ ಸುರುವಾಯ್ತು. ಆಗ ನನಗೆ ಬೇಕಾದ ಗೆಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಿದೆ. ಆದ್ರೆ ಸೀನ ನಾಯ್ಕಗೆ ಅಧಿಕಾರ ಕೊಡಲಿಲ್ಲ. ಆತ ಹೋಂ ಗಾರ್ಡ್ ನಲ್ಲಿದ್ದ. ಗ್ಯಾಸ್ ಏಜೆನ್ಸಿ ವಹಿಸಿಕೊಂಡಿದ್ದ. ಸಂಘಕ್ಕೆ ಸೇರಿಸಿಕೊಳ್ಳದಾಗ ನನ್ನ ಮೇಲಿನ ಮನಸ್ತಾಪ ಹೆಚ್ಚಾತು. ನಮಗೆ ತೊಂದ್ರೆ ಕೊಡೋಕೆ ಕಾಯ್ತಾ ಇದ್ದ.
ಆಗ ನನ್ನಕ್ಕ ಸುನೀತಾಳಿಗೆ ಮದುವೆ ನಿಶ್ಚಿತಾರ್ಥ ಆಗೋದಿತ್ತು. ಆದ್ರೆ ನಿಶ್ಚಯ ಆಗೋದನ್ನು ಸೀನ ನಾಯ್ಕ ತಪ್ಪಿಸಿದ. ನನ್ನ ಗೆಳೆಯ ವೆಂಕಪ್ಪನಾಯ್ಕನ ತಂಗಿಯ ನಿಶ್ಚಿತಾರ್ಥ ತಪ್ಪಿಸಿದ. ಆಗ ನನ್ನ ಸಂಬಂಧಿಕ ಭೀಮ ವಸಂತ ನಾಯ್ಕನ ಜೊತೆಗೆ ಸೀನ ನಾಯ್ಕ ಗಲಾಟೆ ಮಾಡಿದ. ನನ್ನ ಅಣ್ಣನ ಮಗ ಸುಧಾಕರ ನಾಯ್ಕನ ಜೊತೆಲೂ ಜಗಳಾಡಿದ. ಇವರೆಲ್ಲ ಸೇರಿ ನನ್ನನ್ನು ಹುರಿದುಂಬಿಸಿದ್ರು. ಅವನನ್ನು ಬಿಡಬ್ಯಾಡ, ಕೈ ಕಾಲು ಕಡಿ ಅಂತ ಹೇಳಿದ್ರು. ಆಗ ನಂಗೆ 19 ವಯಸ್ಸು.
ಇಷ್ಟೊತ್ತಿಗೆ ಸಣ್ಣ ಪುಟ್ಟ ಕೇಸಾಗಿ ಸ್ಟೇಷನ್, ಕೋರ್ಟ್ ಗೆ ಅಲೆದಿದ್ದೆ. ಅಷ್ಟೊತ್ತಿಗೆ ನನ್ನಣ್ಣ ಚೆಂದಯ್ಯ ನಾಯ್ಕ ಮತ್ತು ಸೀನ ನಾಯ್ಕ ಹೊಡೆದಾಡಿದಾಗ ನನ್ನಣ್ಣನಿಗೆ ಹೆಚ್ಚು ಏಟು ಬಿತ್ತು. ನನಗೂ ಹೊಡೆಯೋಕೆ ಕಾಯುತಿದ್ರು. ಆದ್ರೆ ನಾನು ಗೆಳೆಯರೊಂದಿಗೆ ತಿರುಗಾಡುತಿದ್ದೆ. ಅವರಿಗೆ ಹೊಡೆಯೋಕೆ ಆಗಲಿಲ್ಲ. ಹೊಡೆಯೋಕಂತ ಪುತ್ತೂರು, ಉಪ್ಪಿನಂಗಡಿ ಕಡೆಯಿಂದ ಸೀನ ನಾಯ್ಕ ಜನರನ್ನು ಕರ್ಕೊಂಡು ಬಂದಿದ್ದ. ನಾನಾಗ ಮಂಗಳೂರಿನಲ್ಲಿದ್ದೆ. ಸೀನ ನಾಯ್ಕ ಹೊಡೆಸ್ತಾನಂತ ಗೊತ್ತಾದಾಗ ಅವರ ತಮ್ಮ ರಮೇಶನ ಜೊತೆ ವಿಚಾರಿಸಿದೆ.
‘ಯಾವ ಕಾರಣಕ್ಕೂ ಬಿಡಲ್ಲ’ ಅಂತ ಹೆದರಿಸಿದ.
‘ನೀವು ಮಾಡೋದಾದ್ರೆ ನಾನು ಕೂಡಾ ಮಾಡ್ತಿನಿ’ಅಂತ ಬೆದರಿಸಿ ಬಂದೆ.
ಒಂದಿನ ಸೀನ ನಾಯ್ಕ, ಅವನ ತಮ್ಮ ರಮೇಶ ಮತ್ತವರ ಗೆಳೆಯರು ನಮ್ಮ ಮನೆ ಹತ್ರ ಬಂದು ಗಲಾಟೆ ಮಾಡೋಕೆ ಬಂದಾಗ ಮಚ್ಚು ತಗೊಂಡು ಓಡಿಸಿದೆ. ಅವರು ನನ್ನ ಹೊಡೆಯೋಕೆ ಕಾಯುತಿದ್ರು. ನಾನವರನ್ನು ಅಟ್ಯಾಕ್ ಮಾಡೋಕೆ ಕಾಯ್ತಿದ್ದೆ. ನನ್ನಣ್ಣನ ಮಗ ಸುಧಾಕರ ನನಗೆ ಸಪೋರ್ಟ್ ಮಾಡ್ತಿದ್ದ. ಬೇರೆಯವರ ಹೆಸರು ಬರದಂಗೆ ನಾನೊಬ್ನೆ ಹೊಡಿಬೇಕಂತ ಕಾಯ್ತಿದ್ದೆ.
ಅದು 1998,ನವಂಬರ್ 6, ಯಾವಾಗಲೂ ಕತ್ತಿ ಇಟ್ಕೊಂಡಿರ್ತಿದ್ದೆ. ಉಜಿರೆಯ ನಾಗಬನದ ಹತ್ರ ಬರುವಾಗ ಸೀನ ನಾಯ್ಕ, ಅವನ ತಮ್ಮ ರಮೇಶ ಮತ್ತು ಜಯಾನಂದ ಬೈಕಲ್ಲಿ ಬಂದ್ರು. ಮಾತಿಗೆ ಮಾತು ಬೇಳಿತು. ನನ್ನ ಹೊಡಿಲಿಕ್ಕೆ ಬಂದ್ರು. ನನ್ನತ್ರ ಇದ್ದ ಕತ್ತಿಯಿಂದ ಸೀನ ನಾಯ್ಕಗೆ ಹೊಡೆದೆ. ರಮೇಶ ಮತ್ತು ಜಯಾನಂದ ಅಟ್ಯಾಕ್ ಮಾಡಿದ್ರು. ಎಡಗೈನ ನಾಲ್ಕು ಬೆರಳು ಕಟ್ ಆದ್ವು. ಬಲಗೈಗೆ ಏಟು ಬಿತ್ತು. ಎದೆಗೆ ,ಸೊಂಟಕ್ಕೆ ಕತ್ತಿಯಿಂದ ಇರಿದ್ರು, ಚೈನಿನಿಂದ ತಲೆಗೆ ಹೊಡೆದ್ರು, ನಾನೂ ತಿರುಗಿ ಹೊಡೆದಾಗ ಸೀನ ನಾಯ್ಕ ಅರ್ಧ ಸತ್ತು ಹೋಗಿದ್ದ. ಅಲ್ಲಿಂದ ತಪ್ಪಿಸಿಕೊಂಡು ಹತ್ತಿರದಲ್ಲೇ ಇದ್ದ ಮನೆಗೆ ಹೋದೆ. ಬೆಳ್ತಂಗಡಿ
ಆಸ್ಪತ್ರೆಗೆ ಸೇರಿಸಿದ್ರು. ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿದೆ. ಮೂರುವರೆ ತಿಂಗಳು ಅಲ್ಲಿದ್ದೆ. ಎರಡೂ ಕೈಗೆ ಏಟಾಗಿದ್ದರಿಂದ ಬೇರೆಯವರು ಊಟ ಮಾಡಿಸುತ್ತಿದ್ರು. ಅಷ್ಟೊತ್ತಿಗೆ ಸೀನ ನಾಯ್ಕ ಸತ್ತಿದ್ದು ಗೊತ್ತಾಯ್ತು. ಆಮೇಲೆ ಮಂಗಳೂರು ಜೈಲಿಗೆ ಹಾಕಿದ್ರು. ಎರಡು ವರ್ಷ ಐದು ತಿಂಗಳು ವಿಚಾರಾಣಾಧೀನ ಮಂಗಳೂರು ಜೈಲಲ್ಲಿದ್ದೆ. ಜಾಮೀನು ಸಿಗಲಿಲ್ಲ. ರಮೇಶ ಮತ್ತು ಜಯಾನಂದ ಸಾಕ್ಷಿ ಹೇಳಿದ್ದರಿಂದ 2001ರಲ್ಲಿ ಜೀವಾವಧಿ ಶಿಕ್ಷೆ ಆಯ್ತು. ಅಲ್ಲಿಂದ ಧಾರವಾಡ ಜೈಲಿಗೆ ಹೋದೆ. 23 ವಯಸ್ಸನೊಳಗಿನವರಿಗೆ ಅಲ್ಲಿಗೆ ಹಾಕ್ತಾರೆ. ಅಲ್ಲಿ ಒಂದೂವರೆ ವರ್ಷ ಇದ್ದೆ. ಅಲ್ಲಿದ್ದ ಕೈದಿಗಳ ಜೊತೆ ಗಲಾಟೆಯಾಯ್ತು. 25 ವಯಸ್ಸಿನವರೆಗೆ ಅಲ್ಲಿರಬೇಕಂತ ಇತ್ತು. 23ನೆಯ ವಯಸ್ಸಿಗೆ ಮೈಸೂರು ಜೈಲಿಗೆ ಕಳಿಸಿದ್ರು. ಧಾರವಾಡ ಜೈಲಲ್ಲಿದ್ದಾಗ ಕ್ರಿಕೆಟ್ ಆಡ್ತಿದ್ದೆ. ಫ್ರೀಯಾಗಿತ್ತು. ಮೈಸೂರು ಜೈಲು ತುಂಬಾ ಸ್ಟ್ರಿಕ್ಟ್ ಕೆಲಸ ಮಾಡಬೇಕಿತ್ತು. ಬೇಜಾರಲ್ಲಿ ದಿನಾ ಕಳೀತಿದ್ದೆ. ವಿದ್ಯುತ್ ಮಗ್ಗದಲ್ಲಿ ಕೆಲಸ ಮಾಡ್ತಿದ್ದೆ.
2004ರಲ್ಲಿ ಚಿತ್ರದುರ್ಗದ ಮುರಘರಾಜೇಂದ್ರ ಶರಣರು ಕಾರಾಗೃಹ ವಾಸಿಗಳ ಮನ ಪರಿವರ್ತನೆ ಶಿಬಿರ ನಡೆಸಿದ್ರು. ನಾಟಕ ಕಲಿಸಿದ್ರು. ನಾಟಕದಲ್ಲಿ ಕಳ್ಳನೊಬ್ಬ ಲಿಂಗಧಾರಣೆ ಮಾಡಿಕೊಂಡು ಪರಿವರ್ತನೆಯಾಗುವ ನಾಟಕವನ್ನು 10 ದಿನಗಳಲ್ಲಿ ಮುರುಘರಾಜೇಂದ್ರ ಶರಣರ ಕಲಾ ತಂಡದವರು ಕಲಿಸಿದ್ರು. ಅದುವರೆಗೆ ಸಿಟ್ಟು ಜಾಸ್ತಿಯಿತ್ತು. ಯಾರತ್ರ ಮಾತಾಡ್ತ ಇರಲಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ ಮಾಡ್ತಿದ್ದೆ. ನಾಟಕಕ್ಕೆ ತುಂಬಾ ಜನರ ಜೊತೆ ಬೆರೆತ ಮೇಲೆ ಖುಷಿಯಾಯಿತು. ಮುರುಘರಾಜೇಂದ್ರ ಶರಣರು ಬಂದು ಲಿಂಗಧಾರಣೆ ಮಾಡಿಸಿದ್ರು. ಬಸವಣ್ಣನ ವಚನಗಳನ್ನು ಕಲಾತಂಡದವರು ಹಾಡ್ತಿದ್ರು. ಅದನ್ನೆಲ್ಲ ಕೇಳಿ ಮನಸ್ಸು ಕರಗಿ ಕಣ್ಣೀರು ಹಾಕಿದೆ. ಕ

2005ರಲ್ಲಿ ಹುಲಗಪ್ಪ ಕಟ್ಟಿಮನಿಯವರು ನಾಟಕ ಕಲಿಸೋಕೆ ಬಂದ್ರು. ಆರಂಭದಲ್ಲಿ ಸೇರಿರಲಿಲ್ಲ. 10 ದಿನಗಳಾದ ಮೇಲೆ ಸೇರಿದೆ. ಮೊದಮೊದಲು ಬೇಡ ಅನ್ನಿಸ್ತಿತ್ತು. ಸಿಂಗಲ್ ಆಗಿರೋದೆ ಇಷ್ಟ. ಜೈಲಿಗೆ ಬಂದಾಗಿನಿಂದ ನನ್ನಷ್ಟಕ್ಕೆ ಇರೋಕೆ ಇಷ್ಟಪಡ್ತೀದ್ದೆ. ಆದ್ರೂ ಕಟ್ಟಿಮನಿಯವರು ಕೇಳಿದ್ರು. ಅಲ್ಲಿಂದ ದಿನ ಬೆಳಿಗ್ಗೆ ಧ್ವನಿ ಏರಿಳಿತ ಪ್ರಯೋಗ, ಕೋಲಾಟ, ಕಂಸಾಳೆ ಮಾಡಿಸ್ತಿದ್ರು. ಎಲ್ಲರ ಜೊತೆ ಕೋಲಾಟ ಆಡುವಾಗ ಖುಷಿ ಕೊಡ್ತು. ಅಲ್ಲಿಂದ ಬದಲಾವಣೆ ಆಗುತ್ತ ಬಂದೆ. ಮಣ್ಣಲ್ಲಿ 10ರಿಂದ 15 ಹೂಜಿ, ಗೊಂಬೆ ತಯಾರು ಮಾಡಿದೆ. ಇನ್ನೂ ಮಾಡಬೇಕಂತ ಅನ್ನಿಸ್ತು.
ಶಿಬಿರದ ನಂತರ’ತಲೆದಂಡ’ನಾಟಕದಲ್ಲಿ ಬಿಜ್ಜಳನ ಪಾತ್ರ ಮಾಡಿದೆ. ಇದಕ್ಕೂ ಮೊದಲು ಬಿಜ್ಜಳನ ಪಾತ್ರಕ್ಕೆ ಐದು ಜನ ಸೆಲೆಕ್ಟ್ ಆಗಿದ್ವಿ. ಯಾರು ಚೆನ್ನಾಗಿ ಮಾಡ್ತಾರೆ ಅವರಿಗೆ ಪಾತ್ರ ಕೊಡೋದು ಅಂತ ಆಗಿತ್ತು. ಆರಂಭದಲ್ಲಿ ಸಂಭಾಷಣೆಯನ್ನು ಡ್ಯಾನ್ಸು ಮಾಡ್ಕೊಂಡು, ಅತ್ಕೊಂಡು, ನಗಾಡಕೊಂಡು ಹೇಳೋದು ಮಾಡಿದೆ. ಫೈನಲ್ ಆಗಿ ಬಿಜ್ಜಳನ ಪಾತ್ರಕ್ಕೆ ಸೆಲೆಕ್ಟ್ ಆದೆ. ನಾಟಕದಲ್ಲಿ ಉತ್ತರ ಕನರ್ಾಟಕ ಭಾಷೆ ಇರೋದ್ರಿಂದ ದಕ್ಷಿಣ ಕನ್ನಡದವನಾದ ನನಗೆ ಭಾಷೆ ತೊಡಕಾಗಿತ್ತು. ಪ್ರಯತ್ನಪಟ್ಟೆ. ಸರಿಹೋಗದ ಕಾರಣ ಮಹೇಶ ಬಿಜ್ಜಳನ ಪಾತ್ರ ಮಾಡಿದ್ರು. ನಾನು ದಾಮೋದರ ಭಟ್ಟನ ಪಾತ್ರ. ಮಾಡಿದೆ. ಮೈಸೂರಿನ ಕಲಾಮಂದಿರದಲ್ಲಿ ನಾಟಕ ಆದಾಗ ಚೆನ್ನಾಗಿ ಬಂತು ಅಂತ ಜನ ಹೇಳಿದ್ರು. ಮುಂದೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಡುವಾಗ ಬಿಜ್ಜಳನ ಪಾತ್ರ ಮಾಡಿದೆ. ಆಗ ನಾಟಕ ಅಕಾಡೆಮಿ ಆಧ್ಯಕ್ಷ ಕಪ್ಪಣ್ಣ ಹಾರ ಹಾಕಿದ್ರು. ತುಂಬಾ ಖುಷಿಯಾಯಿತು.
ಮತ್ತೆ ಹಾಸನ, ಮಂಗಳೂರು, ಶ್ರವಣಬೆಳಗೊಳ, ಹಂಪಿಯಲ್ಲಿ ‘ತಲೆದಂಡ’ನಾಟಕ ಆಡಿದ್ವಿ. ಎಸ್ಕಾಟರ್್ ಸಮಸ್ಯೆಯಿಂದಾಗಿ ಭಾಳ ಪ್ರಯೋಗ ಕ್ಯಾನ್ಸಲ್ ಆದ್ವು. ಅಲ್ಲಿಂದ ಎಲ್ಲರ ಜೊತೆ ಮಾತಾಡ್ತೀನಿ. ಯಾರಾದ್ರೂ ರೇಗಿಸಿದ್ರೆ ರೇಗತಿದ್ದೆ. ಈಗ ಸಖತ್ ತಾಳ್ಮೆ ಬಂದಿದೆ.
ಈ ವರ್ಷ ‘ಮಾಧವಿ’ನಾಟಕದಲ್ಲಿ ಯಯಾತಿ ಮಹಾರಾಜನ ಪಾತ್ರ, ಕಸ್ತೂರಬಾ ನಾಟಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿಯ ಗಾಂಧಿ ಪಾತ್ರ ಮಾಡಿರುವೆ.
ಈಗ ನಂಗೆ 29ವರ್ಷ. ಈ ನವೆಂಬರ್ಗೆ 10 ವರ್ಷ ಆಗ್ತದೆ ಜೈಲಲ್ಲಿದ್ದು. ರಜೆ ಸಿಕ್ಕಿಲ್ಲ. ರಜೆ ಮೇಲೆ ಬಂದ್ರೆ ಗಲಾಟೆ ಮಾಡ್ತಾನಂತ ಸ್ಟೇಷನ್ಗೆ ಹೇಳಿದ್ರು. ರಜೆ ರಿಜೆಕ್ಟ್ ಆಯ್ತು. ಹೀಗಾಗಿ ಊರಿಗೆ ಹೋಗಿಲ್ಲ. ಬಿಡುಗಡೆಯಾದ ಮೇಲೆ ಬೇರೆ ಊರಿಗೆ ಹೋಗಿ ಯಾದಾದ್ರೂ ಕೆಲಸ ಮಾಡ್ತಾ ನೆಮ್ಮದಿಯಾಗಿರ್ತೇನೆ. ಜೈಲು ಸಹವಾಸ ಸಾಕಾಗಿದೆ. ಕೂಲಿ ಕೆಲಸ ಮಾಡಿದ್ರೂ ಪರವಾಗಿಲ್ಲ. ಕೆಟ್ಟ ಕೆಲಸವನ್ನು ಯಾವ ಕಾರಣಕ್ಕೂ ಮಾಡಲ್ಲ. 10ವರ್ಷದಿಂದ ತಂದೆಯವರ ಸೇವೆ ಮಾಡುವ ಭಾಗ್ಯ ಸಿಗಲಿಲ್ಲ. ಅದನ್ನು ಬಡ್ಡಿ ಸಮೇತ ತೀರಿಸೋ ಯೋಚನೆ ಇದೆ.





0 Comments