ಏನಿದು ಭೀಮಾ ಕೋರೆಗಾಂವ್ ಸಂಘರ್ಷ..?

 

 

 

 

ಪಲ್ಲವಿ ಐದೂರ್ 

 

 

ತಲೆತಲಾಂತರದ ಬಳುವಳಿ ಎಂಬಂತೆ ದಲಿತರ ಮೇಲಿನ ದೌರ್ಜನ್ಯ 21 ನೇ ಶತಮಾನದಲ್ಲೂ ಮುಂದುವರೆದಿದೆ ! ಪ್ರತಿವರ್ಷ ಜನವರಿ 1ನೇ ತಾರೀಖನ್ನು ಭೀಮಾ ಕೋರೆಗಂವ್ ನಲ್ಲಿ ದಲಿತರ ವಿಜಯೋತ್ಸವದ ದಿನವಾಗಿ ಆಚರಿಸಲಾಗುತ್ತಿದೆ. ಈ ಆಚರಣೆಗೆ 200 ವರ್ಷಗಳ ಇತಿಹಾಸವೂ ಇದೆ. ಈ ಬಾರಿಯ 200ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲು ಹೊರಟಿದ್ದ ದಲಿತರ ಗುಂಪಿನ ಮೇಲೆ ಹಿಂದೂ ಏಕತಾ ಅಘಡಿ ಹೆಸರಿನ ಸಂಘ ಪರಿವಾರದ ಸಂಘಟನೆಯವರು ಅಮಾನವೀಯವಾಗಿ ಕಲ್ಲು ತೂರಾಟ ನಡೆಸಿ ಸಾವು ನೋವಿಗೆ ಕಾರಣರಾಗಿದ್ದಾರೆ. ಈ ವಿಜಯೋತ್ಸವವನ್ನು ತಲೆತಲಾಂತರದಿಂದ ತುಳಿತಕ್ಕೊಳಗಾಗಿರುವ ದಲಿತರು ತಮ್ಮ ಆತ್ಮಾಭಿಮಾನದ ಸಂಕೇತವೆಂಬಂತೆ ಆಚರಿಸಿಕೊಂಡು ಬರುತ್ತಿದ್ದರು. ಅದಕ್ಕಾಗಿ ದೇಶದ ಮೂಲೆ ಮೂಲೆಯಿಂದ ಭಾರೀ ಸಂಖ್ಯೆಯಲ್ಲಿ ದಲಿತರ ಸಮಾಗಮವಾಗುತ್ತದೆ. ಈ ಬಾರಿಯ ಕಲ್ಲು ತೂರಾಟ ಇಡೀ ದೇಶದ ದಲಿತರ ಮೇಲಿನ ಮೇಲ್ವರ್ಗದವರ ಆಕ್ರೋಶಕ್ಕೆ ಕಳಶವಿಟ್ಟಂತಿದೆ.

ಇಡೀ ಘಟನೆಯ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಈ ವಿಜಯೋತ್ಸವ ದಿವಸಕ್ಕೊಂದು ಐತಿಹಾಸಿಕ ಹಿನ್ನೆಲೆಯಿದೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹಲವಾರು ಯುದ್ಧಗಳು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅವುಗಳಲ್ಲಿ ಬಹಳಷ್ಟು ಯುದ್ಧಗಳು ಬ್ರಿಟಿಷರ ವಿರುದ್ಧ ನಡೆದಿದ್ದರೆ, ಇನ್ನೂ ಅನೇಕ ಯುದ್ಧಗಳು ತಮ್ಮ ಸ್ವಂತ ಲಾಭಕ್ಕಾಗಿ ಬ್ರಿಟಿಷರ ಜೊತೆ ಕೈ ಜೋಡಿಸಿ ತಮ್ಮದೇ ದೇಶದೊಳಗಿನ ಇತರ ರಾಜರುಗಳೊಂದಿಗೆ ಕಿತ್ತಾಡಿದ್ದಾರೆ. ಇವೆಲ್ಲವುಗಳಿಗೂ ವಿಭಿನ್ನವಾಗಿ ನಡೆದದ್ದು ಭೀಮಾ ಕೋರೆಗಾಂವ್. ಇದೊಂದು ಜನಾಂಗದ ಅಳಿವು ಉಳಿವಿನ ಸಂಕೇತವಾಗಿ ನಡೆದದ್ದು.

ಜಾತೀಯತೆಯ ಚಕ್ರವ್ಯೂಹದಲ್ಲಿ ಸಿಲುಕಿ, ಅಸ್ಪ್ರಶ್ಯರೆಂಬ ಹಣೆ ಪಟ್ಟಿ ಹೊತ್ತು ನಿರಂತರ ತುಳಿತಕ್ಕೆ ಒಳಗಾಗಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಕೆಲಸ ಕೇಳಿಕೊಂಡು,ನ್ಯಾಯ ಕೇಳಿಕೊಂಡು ಆಗ ಆಡಳಿತ ನಡೆಸುತ್ತಿದ್ದ ಪೇಶ್ವೆ ಎರಡನೇ ಬಾಜಿರಾಯನಲ್ಲಿಗೆ ಹೋದ ಮಹಾರ್ ಜನಾಂಗದ ಜನರನ್ನು ಅಸ್ಪ್ರಶ್ಯರು ಅನ್ನುವ ಕಾರಣಕ್ಕೆ ಹೊಡೆದೋಡಿಸುತ್ತಾನೆ ಎರಡನೇ ಬಾಜೀರಾಯ. ಆಗ ಅವರ ಸಹಾಯಕ್ಕೆ ನಿಂತ ಬ್ರಿಟಿಷರು ಈ ಮಹಾರರ ಸೇನೆ ಕಟ್ಟಿ ಕೇವಲ 500 ಜನ ಮಹಾರ್ ಸೈನಿಕರನ್ನು ಬಿಟ್ಟು ಸುಮಾರು ಇಪ್ಪತ್ತೈದು ಸಾವಿರದಷ್ಟಿದ್ದ ಪೇಶ್ವೆಯ ಸೇನೆಯನ್ನು ಸೋಲಿಸುತ್ತಾರೆ. 1818 ರ ಜನವರಿ 1 ರಂದು ಪೇಶ್ವೆಗಳ ದುರಾಡಳಿತದ ವಿರುದ್ಧ ದಂಗೆಯೆದ್ದು ಈ ಯುದ್ಧ ಗೆದ್ದ ಮಹಾರರು ಬ್ರಿಟಿಷರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇತಿಹಾಸದ ಪುಟದಲ್ಲಿ ಈ ಘಟನೆ ಚಿರಸ್ಥಾಯಿಯಾಗುತ್ತದೆ.

ಅದಾದ ಮೇಲೆ ನಿರಂತರವಾಗಿ 1893ರವರೆಗೆ ಅಂದರೆ ಭಾರತದಲ್ಲಿ 1857ರ ನಂತರ ಸ್ವಾತಂತ್ರ್ಯದ ಹೋರಾಟ ತೀವ್ರವಾಗುವವರೆಗೂ ಬ್ರಿಟಿಷ್ ಸೇನೆಯಲ್ಲಿ ಮಹಾರ್ ದಳವಾಗಿ ಕೆಲಸಮಾಡುತ್ತಾರೆ. 1851 ರಲ್ಲಿ ಈ ವಿಜಯೋತ್ಸವದ ಸಂಕೇತವಾಗಿ ಕೋರೆಗಾಂವ್ ನಲ್ಲಿ ಸ್ಥಂಭವೊಂದನ್ನು ಸ್ಥಾಪಿಸುವ ಬ್ರಿಟಿಷರು ಅದರಲ್ಲಿ ಯುದ್ಧದಲ್ಲಿ ಮಡಿದ ಮಹಾರ್ ಯೋಧರ ಹೆಸರನ್ನು ಕೆತ್ತಿಸಿ ವಿಜಯೋತ್ಸವವನ್ನು ಆಚರಿಸಲು ಮಹಾರ್ ಜನರಿಗೆ ಅನುವು ಮಾಡಿಕೊಡುತ್ತಾರೆ. ಈ ಗೆಲುವು ದಲಿತ ದಮನಿತ ವರ್ಗಗಳ ಆತ್ಮಾಭಿಮಾನಕ್ಕೆ ಕಿರೀಟ ತಂದಿಟ್ಟ ಘಟನೆಯಾಗುತ್ತದೆ.

ಶೂದ್ರ ದೊರೆಯಾಗಿ ಬಲಿಷ್ಠ ಮರಾಠಾ ಸಾಮ್ರಾಜ್ಯವನ್ನೇ ಕಟ್ಟಿ ಪ್ರತಿಯೊಬ್ಬರನ್ನೂ ಸಮಾನರಾಗಿ ಕಾಣುತ್ತಿದ್ದ  ಶಿವಾಜಿ ಮಹಾರಾಜನಿಂದ ಕುತಂತ್ರದಿಂದ ಆಡಳಿತ ಕಿತ್ತುಕೊಂಡು ಅವರನ್ನು ಕೇವಲ ನಾಮಕಾವಸ್ಥೆಯ ರಾಜನನ್ನಾಗಿಸಿ ರಾಜ್ಯವಾಳುತ್ತಿದ್ದ ಪುರೋಹಿತಶಾಹಿ ಪೇಶ್ವೆಗಳ ಮನಸ್ಥಿತಿ ಮರಾಠ ದೊರೆ ಶಿವಾಜಿಗೆ ತದ್ವಿರುದ್ಧವಾಗಿತ್ತು. ಶಿವಾಜಿಯ ಕಾಲದಲ್ಲಿ ಸುಸ್ಥಿತಿಯಲ್ಲಿದ್ದ ಸಮಾಜದ ಕೆಳವರ್ಗದ ಜನ ಅತೀವ ಜಾತಿವಾದಿಯಾಗಿದ್ದ ಪೇಶ್ವೆಗಳ ಕಾಲದಲ್ಲಿ  ನಲುಗಿಹೋಗಿದ್ದರು. ಆಗ ಮಹಾರ್ ಜನಾಂಗಕ್ಕೆ ಘನತೆ ತಂದುಕೊಟ್ಟ ಬ್ರಿಟಿಷರು ಅವರದೊಂದು ಪ್ರತ್ಯೇಕ ಸೇನಾ ದಳವನ್ನೇ ಸ್ಖಾಪಿಸಿ ಯೋಧರನ್ನಾಗಿಸಿ ಬದುಕು ಕಟ್ಟಿ ಕೊಟ್ಟಿದ್ದರು. ಇಂತಹ ಮಹಾರ್ ಕುಟುಂಬವೊಂದರಲ್ಲೇ ಜನಿಸಿದ್ದು ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಂಬೇಡ್ಕರ್ ರು ಬದುಕಿರುವವರೆಗೂ ಜನವರಿ 1 ರಂದು ಈ ವಿಜಯೋತ್ಸವದಲ್ಲಿ ಭಾಗಿಯಾಗುತ್ತಿದ್ದುದು ವಿಶೇಷವಾಗಿತ್ತು.

ಅಂದಿನಿಂದ ಇಂದಿನವರೆಗೂ ಇದು ಈ ದೇಶದ ಮೇಲ್ವರ್ಗದ ಜನರಿಗೆ ನುಂಗಲಾರದ ತುತ್ತಾಗಿದೆ. ಪುರೋಹಿತ ಶಾಹಿ ಮನಸ್ಥಿತಿಯ ಮನುವಾದಿಗಳಿಗೆ ಅಂಬೇಡ್ಕರ್ ಅನ್ನುವುದೇ ಗಂಟಲಿನ ಮುಳ್ಳಾಗಿರುವಾಗ ದಲಿತ ಸಮುದಾಯವೊಂದು ವಿಜಯೋತ್ಸವ ಆಚರಿಸುವುದನ್ನು ಹೇಗೆ ತಾನೆ ಸಹಿಸಿಕೊಂಡಾರು!! ಹಾಗಾಗಿ ಪ್ರತೀ ಬಾರಿಯೂ ಸಣ್ಣ ಪುಟ್ಟ ಕಿರಿಕಿರಿಗಳ ನಡುವೆಯೇ ನಡೆಯುತ್ತಿದ್ದ  ಸಂಭ್ರಮಾಚರಣೆಗೆ ಈ ಬಾರಿ ಕಲ್ಲು ತೂರಾಡುವ ಮೂಲಕ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ಹೊರಹಾಕಿದರು ಮನುವಾದಿಗಳು!!

ಇಲ್ಲೊಂದು ವಿಚಾರವನ್ನು ಗಮನಿಸಬೇಕಾಗಿದೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಅಲ್ಪ ಸಂಖ್ಯಾತರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುವ ಸಂಘ ಪರಿವಾರಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಒಬ್ಬ ದೇಶದ್ರೋಹಿಯಾಗಿ ಕಾಣಿಸುತ್ತಾನೆ.  ಸಂಸ್ಕೃತಿಯನ್ನು ಹಾಳುಗೆಡವಿದ ಕೊಲೆಗಡುಕನಂತೆ ಕಾಣುತ್ತಾನೆ. ಅಲ್ಲಿ ಮಹಾರಾಷ್ಟ್ರದಲ್ಲಿ ಬ್ರಿಟಿಷರಜೊತೆ ಸೇರಿ ಉಳಿವಿಗಾಗಿ ಹೋರಾಡಿದ ದಲಿತರೂ ಇವರ ದೃಷ್ಟಿಯಲ್ಲಿ ದೇಶದ್ರೋಹಿಗಳು!  ಇಲ್ಲಿ ನಿಜವಾಗಲೂ ಗೊಂದಲ ಹುಟ್ಟಿಸುವುದು ಸಂಘಿಗಳ ದ್ವಂದ್ವ ನಿಲುವು.

ಬ್ರಿಟಿಷರ ವಿರುದ್ಧ ಹೋರಾಡಿದರೂ ದೇಶದ್ರೋಹ, ತಮ್ಮದೇ ಕೆಟ್ಟ ಆಡಳಿತದ ವಿರುದ್ಧವಾಗಿ ಬ್ರಿಟಿಷರ ಜತೆ ಸೇರಿ ಹೋರಾಡಿದರೂ ದೇಶದ್ರೋಹವೆಂದಾದರೆ, ಸಂಘ ಪರಿವಾರದವರ ಲೆಕ್ಕದಲ್ಲಿ ದೇಶಪ್ರೇಮವೆಂದರೇನು?!  ಮೇಲ್ವರ್ಗಿಗಳ ಕಪಿಮುಷ್ಟಿಯಲ್ಲಿ ಎಲ್ಲವೂ ನಿಯಂತ್ರಿಸಲ್ಪಡುವ ಪುರೋಹಿತ ಶಾಹಿ ಮನಸ್ಥಿತಿಯಲ್ಲಿ ನಿರ್ದ್ಶಿಸುವ ಪ್ರತಿಯೊಂದನ್ನೂ ಒಪ್ಪಿಕೊಂಡರೆ ಅದು ದೇಶಪ್ರೇಮವೆನಿಸಿಕೊಳ್ಳುತ್ತದೆಯೇ?!  ಹಾಗಾದರೆ, ಇದರರ್ಥ ಸಂಘಿಗಳ ಹೋರಾಟ ದೇಶಕ್ಕಾಗಿ ಅಲ್ಲ ಬದಲಿಗೆ ದೇಶದ ಹೆಸರಿನಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಪ್ರತಿಯೊಂದನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡು ಸಾವಿರಾರು ವರ್ಷಗಳ ಇತಿಹಾಸವಿರುವ ಮೂಲ ನಿವಾಸಿಗಳೆನಿಸಿಕೊಂಡ ದೀನ ದಲಿತರನ್ನು ಕೆಳವರ್ಗದ ಜನರನ್ನು, ನೂರಾರು ವರ್ಷಗಳಿಂದ ಇಲ್ಲಿಯೇ ಹುಟ್ಟಿ ಬೆಳೆದು ಬದುಕು ಕಟ್ಟಿಕೊಂಡಿರುವ ಅಲ್ಪ ಸಂಖ್ಯಾತರನ್ನು ತುಳಿಯುವುದು ಎಂದಾಯಿತಲ್ಲವೇ?! …

‍ಲೇಖಕರು avadhi

January 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Praveen Chandra

    Very nicely articulated about the importance of Koregaon victory day which not many people were aware Pallavi. Although it was seen as the victory of Mahars against the upper caste peshwas. The same mahar troop had fought for Peshwas earlier on as well. Keep writing and bring out the history for the knowledge of the people.. Good luck to you

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: