2
ಏಕ ಥೀ ಮೀನಾಕುಮಾರಿ

ಲಕ್ಷ್ಮೀಕಾಂತ ಇಟ್ನಾಳ
ಪ್ರೀತಿಯ ಕಡಲು ಆವಿಯಾಗಿ, ಭಾವ ಬರಿದಾಗತೊಡಗಿದಾಗಲೇ, ಕಡಲಿನಷ್ಟು ಪ್ರೀತಿಸುತ್ತಿದ್ದ, ಅಮ್ರೋಹಿಯೊಂದಿಗಿನ ಪ್ರೀತಿಯ ಪಡಿಯಚ್ಚು ಓಲಾಡುವ ದೋಣಿಯ ಸಂಸಾರದಲ್ಲಿಯೇ ಒಂದೊಮ್ಮೆ ಗರ್ಭಕಟ್ಟಿ ಹೆಪ್ಪುಗಟ್ಟಿದಾಗ, ತನ್ನೊಡಲಿನ ಕೂಸಿಗೆ ಉಣಿಸುವ, ತಿಣಿಸುವ, ತೊಡಿಸುವ, ಎದೆಗಪ್ಪಿಕೊಳ್ಳುವ ಕನಸು
ಕಾಣತೊಡಗಿತು ಮೀನಾಳ ಪುಟ್ಟ ತಾಯಿ ಹೃದಯ. ಅಂಬೆಗಾಲಲ್ಲಿ ಬೊಚ್ಚುಬಾಯಲ್ಲಿ ಕಿಲಕಿಲನೆ ನಗುತ್ತ ತನ್ನೆಡಗೆ ಧಾವಿಸಿ ಬರುವ ತನ್ನ ಕಂದನ ಕನಸು ನನಸಾಗಿತ್ತು.
ಚಿಕ್ಕಂದಿನಿಂದಲೂ ತನ್ನದೆಂಬುದೊಂದು ಮಡಿಲ ಮಗುವಿಗೆ ಪ್ರೀತಿಯ ಧಾರೆ ಎರೆಯುವ, ತನ್ನದೆಲ್ಲವನ್ನೂ ಅದಕ್ಕೆ ಬಸಿದು ಬಿಡುವ ಹಂಬಲ, ಮಮತೆ, ಬುಗ್ಗೆಯಾಗಿ ಪುಟಿಯುತ್ತಿತ್ತು ಕನಸುಗಂಗಳ ತಾಯಿ ಹೃದಯದಲ್ಲಿ. ಇದನೆಲ್ಲಾ ಮನದಲ್ಲಿ ಕಾಪಾಟ್ಟುಕೊಂಡಿದ್ದ ಮೀನಾಳಿಗೆ ತನ್ನ ಒಂಟಿತನಕ್ಕೆ ಇದೊಂದು ಪರಿಹಾರದಂತೆಯೂ ಗೋಚರಿಸಿತ್ತು. ಈ ಇಳೆಯ ಫಲಭರಿತ ಕೂಸು ತಾನು ಎಂದು ಸಾಬೀತುಪಡಿಸುವ ಹಂಬಲಕ್ಕೆ ಫಲ ಕಾಣಿಸಿಕೊಂಡಿತ್ತು. ಅದಕ್ಕಾಗಿ ಅಲ್ಲಾನಲ್ಲಿ ನಿತ್ಯವೂ ಪ್ರಾರ್ಥಿಸುತ್ತಿದ್ದಳಲ್ಲವೇ. ಅಂತೂ ಕೊನೆಗೂ ತಾನು ತನ್ನದೇ ಮಗುವಿಗೆ ಎದೆಹಾಲುಣಿಸುವ ಅದಮ್ಯ ಆಸೆ ಒಬ್ಬ ಹೆಣ್ಣಾಗಿ ಸಹಜವಾಗಿದ್ದರೂ, ಅದೊಂದು ಅದ್ಭುತ ಕಥಾನಕವೊಂದರ ಅನುಪಮ ಸುಂದರ ಸ್ವಪ್ನಲೋಕದ ಕನಸಿನ ನೋಟವಾಗಿ ಭಾಸವಾಗತೊಡಗಿತ್ತು.
ಒಂದು ಸಾರಿ ಸಮಯಸಾಧಿಸಿ ಸಿಹಿಸುದ್ದಿಯನ್ನು ಕಮಾಲ್ನ ಕಿವಿಯಲ್ಲಿ ಗುಟ್ಟಾಗಿ, ಸಂಕೋಚತುಂಬಿದ ನಗುವಿನಲ್ಲಿ ಮೆಲ್ಲಗೆ ಉಸುರಿದ್ದಳು, ಆನಂದತುಂದಿಲವಾಗಿ, ನಾಚಿ ನೀರಾಗಿ. ಕಮಾಲ್ನ ಸಂಭ್ರಮವನ್ನು ಆಗಲೇ ಊಹಿಸಿ. ಆದರೆ ಆದದ್ದೇ ಬೇರೆ. ಕಮಾಲ್ ನಗಲಿಲ್ಲ. ಇದು ಗೊತ್ತಾಗುತ್ತಲೇ ಸುಮ್ಮನೆ ಒಂದು ದಿನ ಪ್ರೀತಿಯಿಂದಲೇ ಕರೆದೊಯ್ದು ತಣ್ಣಗೆ ಅವಳ ಗರ್ಭವನ್ನು ಸಿಗಿದು ಜಾರಿಸಿಬಿಟ್ಟ ಅವನಿಗೆ ತನ್ನ ಮೊದಲ ಹೆಂಡತಿಯಿಂದ ಪಡೆದ ಮಕ್ಕಳಷ್ಟೇ ಸಾಕು. ಮೀನಾನಿಂದ ಯಾವ ಮಗುವೂ ಬೇಡವೆಂಬ ವಿಚಿತ್ರ ನಿಲುವು. ಧರೆಗಿಳಿದುಹೋದಳು ಮೀನಾಕುಮಾರಿ. ಮೊದಲ ಬಾರಿ ಸಾಯುವ ಯೋಚನೆಯೊಂದು ಒಳಸುಳಿದು ಹೋಗಿಬಿಟ್ಟಿತು. ಅಪ್ಪ ಬಾಲ್ಯ ಕಸಿದುಕೊಂಡ , ಗಂಡ ತಾಯ್ತನ ಕಸಿದ. ಕನಸುಗಳನ್ನು ಕಳೆದುಕೊಂಡ ಮೀನಾಳ ಬದುಕು ಅರ್ಥಹೀನ ದೋಣಿಯ ಪಯಣದಂತಾಯಿತು.
ಮೀನಾ ಈಗ ನಿಜವಾಗಿಯೂ ಜರ್ಜರಿತಳಾಗಿದ್ದಳು, ಅನಾಥಳಾಗಿದ್ದಳು. ಪ್ರೀತಿಯ ಬದುಕಿನ ಕುರುಹು, ತನ್ನೊಡಲಿನ ಹೂವಂಥ ಹಸುಗೂಸಿನ ಮುದ್ದು ಮುಖವನ್ನೂ ಕೂಡ ನೋಡದ, ಆ ಮೃದು ಬೆರಳ ಸ್ಪರ್ಶಗಳ ಅನುಭವವನ್ನೂ ಕಾಣದೇ, ತನ್ನೆದೆ ಹಾಲನ್ನು ಉಣಿಸಿ ತಣಿಸುವ ಆ ಪರಮಾನಂದ ಗಳಿಗೆಯ ದಿವ್ಯಾನುಭೂತಿಯ ಸುಖದ ಕ್ಷಣಗಳನ್ನು ಕಳೆದುಕೊಂಡ ಅವಳ ಬದುಕು ಶೂನ್ಯವಾಗಿತ್ತು, ಹೆಣ್ಣು ತಾನು. ತಾಯಿಯಾಗುವ ಸಹಜ ಕನಸನ್ನೇ ಕಸಿದುಕೊಂಡ ಜಗದ ಮುಂದೆ ಅಸಹಾಯಕಳಾಗಿ ಮಂಡಿಯೂರಿದಳು. ಹೆಣ್ಣೆಂದರೆ ಏನೆಂಬುದೇ ಅನುಭವಕ್ಕೆ ದಕ್ಕದೇ, ಅವಳಿಂದ ಎರವಾಯಿತು. ಈ ಇಳೆಯ ಫಲಭರಿತ ಸಸಿತಾನು ಎನ್ನುವುದಕ್ಕೆ ಪುರಾವೆಯೇ ಇಲ್ಲದಾಯಿತು. ತನ್ನದೆಂಬ ಕುಡಿಯ ಕಿಲ ಕಿಲ, ಕಲ್ಪನೆಯಲ್ಲಿಯೇ ಉಳಿಯಿತು. ಅಸಲು ಬದುಕಿನ ನೋವನ್ನು ಹೊರತುಪಡಿಸಿ, ಸುಖದ ವಿಚಾರಗಳಿಗೆ ಮೀನಾ ಕೇವಲ ಕಲ್ಪನೆಯಾಗಿಯೇ ಉಳಿದಳು. ಸೆಲ್ಯೂಲಾಯ್ಡ್ನಂತೆ!
ಈಗ ಅವಳ ಹೃದಯ ಒಡೆದು ಹೋಯಿತು, ನೂರು ಹೋಳಾಗಿ ಛಿದ್ರಗೊಂಡಿತು…..ತನ್ನದೇ ಬದುಕಿನಂತೆ! ತನ್ನ ದುರದೃಷ್ಟಕ್ಕೆ ತನ್ನನ್ನೇ ಹಳಿದುಕೊಂಡಳು. ಸ್ವಯಂಕೃತ ಅಪರಾಧದ ಘೋರ ಅರಿವು ಈಗ ಮೂಡತೊಡಗಿತ್ತು. ಅವಳು ತನ್ನ ಕೈಯಾರೆ ಮಾಡಿಕೊಂಡಿದ್ದ ಘೋರ ತಪ್ಪೊಂದು ಅವಳಿಗೆ ಸೂರ್ಯನಷ್ಟು ದಿಟವಾಗಿ ಕಂಡಿತ್ತು ಈಗ. ಇತ್ತ ಮನೆಯೂ ಇಲ್ಲ, ಮತ್ತೆ ಗಂಡನ ಪ್ರೀತಿಯೂ ಇಲ್ಲ. ಎಲ್ಲ ಇದ್ದೂ ಎಲ್ಲವನ್ನೂ ಕಳೆದುಕೊಂಡ, ಜೊತೆಯಲ್ಲಿದ್ದರೂ ಎಲ್ಲರಿಂದಲೂ ದೂರವಾದಳು ಮೀನಾ. ಬಿರುಗಾಳಿಯಲ್ಲಿ ಸಿಕ್ಕ ದೋಣಿಗೆ ಯಾವ ದಿಕ್ಕೂ ಇರುವುದಿಲ್ಲ. ಅಂತಾಯಿತು ಬದುಕು. ಇದೆಲ್ಲ ತಾನು ಮಾಡಿದ ತಪ್ಪೋ, ಕಮಾಲ್ನ ತಪ್ಪೋ, ಅವಳಿಗೇನೇ ದ್ವಂದ್ವ. ಒಮ್ಮೆ ತನ್ನನ್ನು ಹಳಿದುಕೊಂಡರೆ, ಮತ್ತೊಮ್ಮೆ ಕಮಾಲ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿತ್ತು ಮೀನಾಳ ವ್ಯಗ್ರ ಮನಸ್ಸು. ಪೂರ್ಣ ಚಂದ್ರನನ್ನೇ ಬದುಕಿನಲ್ಲಿಯೂ ಬೇಡುತ್ತಿದ್ದ ಮೀನಾ ಅಸಲಿನಲ್ಲಿ ವರಿಸಿದ್ದು, ಪಾಲಿಗೆ ಪಡೆದಿದ್ದು ಅರ್ಧ ಚಂದ್ರನನ್ನಷ್ಟೆ. ಇವಳಿಗಿಂತ ಮೊದಲೇ ಮೂರು ಮಕ್ಕಳ ತಾಯಿಗೆ ಅರ್ಧ ಚಂದ್ರನಾಗಿ ಅಮ್ರೋಹಿ ಆಗಲೇ ಹಂಚಿಕೆಯಾಗಿಬಿಟ್ಟಿದ್ದನಲ್ಲವೇ?
ಮೀನಾ ಎಂಬ ಸುಂದರ ದೇವಮಾಡಿದ ಬೊಂಬೆ, ಪ್ರಲಾಪದಿಂದ ಅತ್ತು ಅತ್ತು ಬರಿದಾಯಿತು. ಇದಕ್ಕೆ ಉತ್ತರವೆಂಬ ಸಾಂತ್ವನ ದೊರಕಿದ್ದೇ ಮಧುಮಯ ಲೋಟದಲ್ಲಿ. ಇದೇ ಲೋಟದಲ್ಲಿ ಕರಗ ತೊಡಗಿತು ಮೀನಾಳ ಬದುಕು. ಏಕಾಂತ, ಶರಾಬು, ಶಾಯರಿಗಳು ಈಗ ಅವಳ ಹೊಸ ಗೆಳೆಯರು. ಕಿಶೋರಾವಸ್ಥಯಿಂದಲೇ ಬರೆಯುತ್ತಿದ್ದ ಮೀನಾ ಈಗ ಹೆಚ್ಚು ಹೆಚ್ಚು ಶರಾಬಿನೊಂದಿಗೆ ಶಾಯರಿಗಳಲ್ಲಿ ಮುಳುಗತೊಡಗಿದ್ದಳು. ಅವಳೆಂದೂ ಖುಷಿಗಾಗಿ ಕುಡಿಯುತ್ತಿರಲಿಲ್ಲ. ನಶೆಗಾಗಿ ಕುಡಿಯುತ್ತಿದ್ದಳು. ಮತ್ತೆ ಮತ್ತೆ ಅದೇ ಅಮ್ರೋಹಿಗಾಗಿ ಪರಿತಪಿಸುತ್ತ! ತಾನು ಮರ್ಲಿನ್ ಮನ್ರೋಳಂತೆ ದುರದೃಷ್ಟೆ ಹಾಗೂ ಪರಿತ್ಯಕ್ತೆಯಂತೆಯೇ ಭಾವಿಸಿದ್ದಳು. ತನ್ನಷ್ಟಕ್ಕೆ ತಾನೇ ದು:ಖಿತಳಾಗುತ್ತಿದ್ದಳು. ಕಲ್ಪಿತ ವಿಷಾದ ಲೋಕದಲ್ಲಿ.
ಸಾಹಿಬ್ ಬೀಬಿ ಗುಲಾಮ್ ಚಿತ್ರದ ಛೋಟಿ ಬಹು ಪಾತ್ರ ಅವಳ ನಿಜ ಜೀವನದ ಪ್ರತಿಬಿಂಬ.
‘ನ ಜಾವೋ ಸಂಯ್ಯಾ ಛುಡಾಕೆ ಬಂಯ್ಯಾ
ಕಸಮ್ ತುಮ್ಹಾರೀ ಮೈ ರೋ ಪಡೂಂಗಿ,
ಮಚಲ್ ರಹಾ ಹೈ ಸುಹಾಗ ಮೇರಾ,
ಜೊ ತುಮ್ ನ ಹೋಂಗೆ ….ತೊ ಕ್ಯಾ ಕರೂಂಗಿ….’
ಹೋಗದಿರು ಇನಿಯಾ, ಮುಂಗೈ ಕೊಸರಿ
ನಿನ್ನಾಣೆ ಗೆಳೆಯಾ, ನಾನತ್ತು ಬಿಡುವೆ,
ಕನಲಿ ಬಳಲಿದೆ ತಾಳಿ, ವಿರಹಿ ಸಿಂಧೂರ,
ನೀನಿಲ್ಲದೇ ನಾನಿಲ್ಲಿ ಹೇಗಿರಲಿ? ದೊರೆಯೇ…
ಅಂಗಲಾಚಿ ಬೇಡುತ್ತಿದ್ದಳಲ್ಲವೇ ಛೋಟಿ ಬಹು, ಮೀನಾಳ ಆತ್ಮವೇ ಹಾಡುತ್ತಿತ್ತು, ಅಳುತ್ತಿತ್ತು, ಮಧುವಲ್ಲಿ ಮಿಂದು.. ಸುಖದಿಂದ ವಂಚಿತಳಾದ ಹದಿಹರೆಯದ ಚಲುವೆ, ಹಸಿಹಸಿಯಾಗಿ ವಿರಹಿಯಾಗಿ, ಬದುಕಿನ ದಾಹಕ್ಕೆ ಆಹುತಿಯಾಗುತ್ತ, ಕ್ಷಣ ಕ್ಷಣವೂ ಸಾಯುತ್ತ, ಬದುಕಿನ ಹೋರಾಟದಲ್ಲಿ ಬಳಲಿ, ಪ್ರೀತಿಗೆ ಹಂಬಲಿಸಿದ ಕಾಮನೆಯ ಶರೀರದ ಜೀವ, ಅತ್ತು ಅತ್ತು ಕೊನೆಗೂ, ಅಮ್ರೋಹಿಗೆ ತಲಾಖ್ ನೀಡಿ ಅವನಿಂದ ದೂರವಾಗಿ ನೆಮ್ಮದಿಯನ್ನು ಪಡೆಯಿತು…. ನೋಡಿದಿರಾ! ಹೇಗೆ ಸಾಹಿಬ್ ಬೀಬಿ ಗುಲಾಮ್ನ ಛೋಟಿ ಬಹು ಮತ್ತೆ ಅಸಲು ಮೀನಾ ಇಬ್ಬರೂ ಒಂದೇ ಆಗಿದ್ದರು ಎಂಬುದಕ್ಕೆ ಮೇಲಿನ ಮಾತೇ ಸಾಕೆನಿಸುತ್ತದೆ ಅಲ್ಲವೇ?.
ಆದರೆ ಛೋಟಿ ಬಹುವಾಗಿ ನಟನೆಯಲ್ಲಿ ಅವಳು ಒಂದೇ ಒಂದು ಹನಿ ಶರಾಬು ಕುಡಿದಿರಲಿಲ್ಲ, ಸ್ವತ: ಅಮ್ರೋಹಿ ಗುರುದತ್ನ ಬೇಡಿಕೆಯಂತೆ ಮೀನಾಳಿಗೆ ಶರಾಬಿನ ನಶೆಯಲ್ಲಿ ನಟನೆಯನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಟ್ಟಿದ್ದ, ಮೀನಾಗೆ. ಚಿತ್ರದಲ್ಲಿ ಅದು ನಟನೆಯಷ್ಟೆ. ಆದರೆ ನಮ್ಮ ಮೀನಾ ಈಗ ಅದರ ದಾಸಳಾಗಿದ್ದಳು. ಬೆಂಕಿಯಿಂದ ಬಾಣಲೆಗೆ ಬದುಕಿನ ಪಯಣ ಹುಟ್ಟು ಹಾಕತೊಡಗಿತ್ತು. ಶರಾಬು ಶಾಯರಿಗಳನ್ನು ಹುಟ್ಟುಗಳನ್ನಾಗಿಸಿ,….. ಏಕಾಂತಯಾಣದಲ್ಲಿ, ಅನಾಥ ಪ್ರಜ್ಞೆಯಲ್ಲಿ, ಬರಿದಾದ ಬಯಲಿನಲ್ಲಿ. ಒಳ ಪಯಣದಲ್ಲಿದ್ದಳು, ಮೌನ ಕಣಿವೆಯೊಳಗೆ ಇಳಿಯಹತ್ತಿದ್ದಳು, ಒಳಗೆ ಇನ್ನೂ ಒಳಗೆ ಆಳಕ್ಕೆ ಇನ್ನೂ ಆಳಕ್ಕೆ, ನೆಲೆಕಾಣದ ಪ್ರಪಾತಕ್ಕೆ, ….ತಾನೇ ತೋಡಿಕೊಂಡ ಹಳ್ಳಕ್ಕೆ! ಅಮ್ರೋಹಿಗೆ ತಲಾಖ್ ಕೊಟ್ಟು ಹೊರಬರುವಾಗ ಹೀಗೆ ಬರೆದಿದ್ದಳು,
ತಲಾಖ್ ತೊ ದೇರಹೇ ಹೋ, ನಜರ್ -ಎ-ಕೆಹರ್ ಕೆ ಸಾಥ್
ಜವಾನೀ ಭೀ ಮೇರೀ ಲೌಟಾ ದೊ ಮೆಹರ್ ಕೆ ಸಾಥ್
ವಿಚ್ಛೇದನ ನೀಡುವಿಯಲ್ಲಾ ಬಿರುಗಣ್ಣು ಬಿಟ್ಟು
ಯೌವ್ವನವನ್ನೂ ಮರಳಿಸು, ದಯ ಮಾಡಿಬಿಟ್ಟು
ದು:ಖವನ್ನು, ಒಂಟಿತನವನ್ನು, ದೇಹದ ಕಾಮನೆಗಳನ್ನು ಮರೆಯಲು ಏಕಾಂತದೊಂದಿಗೆ ಮಧುವಿನ ದಾಸಳಾಗಿದ್ದಳಲ್ಲವೇ, ಅಸಲು ಅವಳು ಎಂದಿನಿಂದ ಕುಡಿತಕ್ಕೆ ದಾಸಳಾದಳು ಎಂದು ನಿಖರವಾಗಿ ಹೇಳಲಾಗದಾದರೂ, ಬಿಡುವಿಲ್ಲದ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡರೂ, ತೀರ ದಣಿವು ಆವರಿಸಿದರೂ, ನಿದ್ದೆ ಬಾರದೇ ತನ್ನ ಫಿಸಿಷಿಯನ್ ಡಾಕ್ಟರ್ ಸಯೀದ್ ತಿಮುರ್ಜಾರಲ್ಲಿ ಭೇಟಿಯಾದಾಗ, ನಿದ್ದೆಗುಳಿಗೆಯ ಪರ್ಯಾಯವಾಗಿ ಎರಡು-ಮೂರು ಬೂಚು ಬ್ರಾಂದಿ ತೆಗೆದುಕೊಳ್ಳಲು ಹೇಳಿದ್ದರು, ಅವರಿಗೂ ಕೂಡ ಗೊತ್ತಿರಲಿಲ್ಲ. ಅಸಲು ಇದೇ ಕುಡಿತ ಅವಳ ಜೀವವನ್ನು ಅಂತಿಮವಾಗಿ ನುಂಗಿಬಿಡುತ್ತದೆಂದು. ಬರಬರುತ್ತ ಇದು ಅರ್ಧ ಬಾಟಲಿವರೆಗೂ ಹೋಗುತ್ತಿತ್ತು, ಅವಳೀಗಾಗಲೇ ಶರಾಬಿನ ದಾಸಳಾಗಿಬಿಟ್ಟಿದ್ದಳು. ಬಾತರೂಂನಲ್ಲಿ ಡೆಟಾಲ್ ಬಾಟಲಿಗಳಲ್ಲೂ ಕೂಡ ಶರಾಬು ತುಂಬಿ ಇಟ್ಟುಕೊಂಡಿರುತ್ತಿದ್ದಳೆಂದರೆ, ಅದು ಇವಳನ್ನಾವರಿಸಿದ ಪರಿ ಅರ್ಥೈಸಿಕೊಳ್ಳಬಹುದು.
ಸಿನಿಮಾ ಸೆಟ್ಗಳಲ್ಲಿ ತನ್ನ ವ್ಯಾನಿಟಿಯಲ್ಲಿ ಸಣ್ಣ ಸಣ್ಣ ಬಾಟಲಿಗಳ ಪೆಟ್ಸ್ಗಳಲ್ಲಿ ತರುತ್ತಿದ್ದ ದೇಶೀ ಹಾಗೂ ವಿದೇಶಿ ಶರಾಬನ್ನು ಗುಟುಕಿ ಬಿಡುತ್ತಿದ್ದಳು. ಅದು ಅಭ್ಯಾಸವಾಗಿಯೇ ಬಿಟ್ಟಿತ್ತು. ಆದರೂ ತನ್ನ ಚಂದನ್ಗಾಗಿ ಸದಾ ತುಡಿಯುತ್ತಲೇ ಇತ್ತು ‘ಮಂಜು’ಳ ಹೃದಯ. ಅವನಿಗಾಗಿ ಶಾಯರಿಗಳು ಮೂಡುತ್ತಿದ್ದವು, ಬೇಡ ಬೇಡವೆಂದರೂ ಅವನಲ್ಲಿಯೇ ಕರಗುವ ಹಂಬಲ ಅವಳನ್ನೂ ಮೀರಿ ಪುಟಿ ಪುಟಿದು ಉಕ್ಕುತ್ತಿತ್ತು, ಅದಕ್ಕೂ ಹೆಚ್ಚು ಮಡುಗಟ್ಟುತ್ತಿತ್ತು. ಒಮ್ಮೆ ಅವನನ್ನು ನೋಡಬೇಕು. ಒಮ್ಮೆಯಾದರೂ ಅವನು, ‘ಚಂದನ್’ ಎಂಬ ತನ್ನ ಅಮ್ರೋಹಿ, ‘ಮಂಜು’ ಎನ್ನುತ್ತ ತನ್ನೆಡೆಗೆ ಬಾರನೇ! ಎಂದು ಅಂಗಲಾಚುವ ಹಂಬಲ ಹೆಡೆಯೆತ್ತುತ್ತಿತ್ತು. ಅಂದುಕೊಂಡಾಗ ಬರಲು, ಅದೇನು ಸಿನಿಮಾ ದೃಶ್ಯವೇ?. ಇಲ್ಲಾ ನಾಟಕದ ಅಂಕವೇ, ಅಲ್ಲ ಅಲ್ಲ, ಈಗ ಇದು ಘೋರ ‘ಹಕೀಕತ್’…… ಬದುಕೆಂಬ ಪಂಜರದಲ್ಲಿ ಬಂಧಿಯಾದ ಪಕ್ಷಿಯೊಂದರ ಆರ್ತ, ಆದ್ರ್ರ ಕೂಗಷ್ಟೆ. ಅವಳಿಗಿನ್ನೂ ಅರಿವಿರಲಿಲ್ಲ, ಬದುಕಿನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಗಳಿರುವುದಿಲ್ಲ. ಕೆಲವೊಮ್ಮೆ ಪ್ರಶ್ನೆಗಳೇ ಉತ್ತರಗಳಾಗುತ್ತವೆ. ಇನ್ನೊಮ್ಮೆ ಉತ್ತರಗಳೇ ಪ್ರಶ್ನೆಗಳು! ಹೀಗೆಯೇ ಆಗಿತ್ತು ಈಗ ಮೀನಾಳ ಬದುಕು, ಒಂದೊಂದೆ ಮೊಳೆಯನ್ನು ತನ್ನ ಕಫನ್ಗೆ ಜಡಿಯುತ್ತ ಸಾಗುತ್ತಿತ್ತು ತನಗೇ ಅರಿವಿಲ್ಲದಂತೆ. ಕೊನೆಕೊನೆಗೆ ಅರಿವಾದರೂ, ಅನಿವಾರ್ಯವಾಗಿಯೂ ಮೊಳೆಯ ಹೊಡೆತಗಳನ್ನು ಸಹಿಸತೊಡಗಿದ್ದಳು ನರಕವಾಸಗಳಲ್ಲಿ!
ಹೀಗೆಯೇ ಇನಿಯನಿಗಾಗಿ, ಬಾರದ ‘ಚಂದನ್’ಗಾಗಿ ಹನಿಹನಿಯಾಗಿ, ಶಾಯರಿಗಳ ಮಾರ್ದನಿಗಳಲ್ಲಿ ಗುನುಗುನಿಸಿ ಕಾಯುವ ಗಳಿಗೆಗಳು ತನ್ನ ಜೊತೆಗೆ….; ಮತ್ತೆ ಶಕೀಲ್ ಸಾಲುಗಳು ಮೀನಾಕುಮಾರಿ ಎಂಬ ನಟೀಮಣಿಯ ತುಟಿಗಳನ್ನು ಅಲಂಕರಿಸುತ್ತವೆ. ‘ಮೈ ತುಮ್ಹರಿ ದಾಸೀ, ಜನಮ್ ಕೀ ಪ್ಯಾಸೀ, ತುಮ್ಹೀಹೋ ಮೇರಾ ಸಿಂಗಾರ್ ಪ್ರೀತಮ್, ತುಮ್ಹಾರೆ ರಸ್ತೇ ಕೀ ಧೂಲ್ ಲೇ ಕರ್, ಮೈಂ ಮಾಂಗ್ ಅಪನೀ ಸದಾ ಭರೂಂಗಿ, ಸದಾ ಭರೂಂಗಿ’ ಮನ ಕೊರಗುತ್ತ, ಕರೆಯುತ್ತ ಹಾಡುತ್ತಲೇ ಇತ್ತು, ಛೋಟಿ ಬಹು ಹೃದಯ, ಅವಳಿಗೂ ಅರಿವಿಲ್ಲದಂತೆ! ಕೊನೆಗೆ ಉದಾಸ ಚಂದ್ರ ಮುಳುಗಿದ ಮೇಲೆ, ಮಿಣುಗುವ ತಾರೆಗಳು ಮನೆಗೆ ಮರಳಿದ ಮೇಲೆ, ಬಾಲ್ಕಣಿಯಲ್ಲಿ ನಿಂತು ನಿಶ್ಯಬ್ದ, ಮೌನ ಜಗತ್ತನ್ನು ತನ್ನ ಕಾಡು ಬಯಲಿನಲ್ಲಿಂತಿದ್ದ ಜುಹು ಬಂಗಲೆಯ ‘ದಿ ಲ್ಯಾಂಡಮಾರ್ಕ್’ ಫ್ಲಾಟಿನ ಸುಂಯ್ಯಗುಡುವ ತಂಗಾಳಿಗೆ ತನ್ನ ಮನದಾಳವನ್ನು ಹೇಳಿಕೊಳ್ಳುವಳು, ನಶೆಯ ಅಮಲಿನಲ್ಲಿ ಕೇಳುತ್ತಿದ್ದಳು ಶರೀಫ ಜಗತ್ತಿಗೆ ಸವಾಲಿನಂತೆ,
‘ ಜಿಂದಗೀ ಕ್ಯಾ ಇಸೀಕೊ ಕೆಹತೇ ಹೈಂ, ಜಿಸ್ಮ್ ತನ್ಹಾ ಹೈ ಔರ್ ಜಾನ್ ತನ್ಹಾ, ಚಾಂದ ತನ್ಹಾ ಹೈ, ಆಸಮಾ ತನ್ಹಾ, ದಿಲ್ ಮಿಲಾ ಹೈ ಕಹಾಂ ಕಹಾಂ ತನ್ಹಾ’
ತನ್ನ ಜೊತೆಗಿರುವ ಏಕಾಂತವಾದ ಮಿಣುಗುವ ದೀಪ ಒಂದೊಂದೇ ಬಿಂದು ಎಣ್ಣೆಯನ್ನು ಕುಡಿದಂತೆ, ಮೀನಾಳೂ ಒಂದೊಂದೆ ಗುಟುಕು ಹಾಕುತ್ತ ದಹಿಸುತ್ತಿದ್ದಳು ದೇಹವನ್ನು……ಇದೊಂದಿರದಿದ್ದರೆ ನಾನು ಎಂದೊ ಸತ್ತು ಹೋಗುತ್ತಿದ್ದೆ ಎಂದು ತನ್ನ ಕೈಯಲ್ಲಿಯ ಜಾಮನ್ನು ಮುತ್ತಿಕ್ಕುತ್ತಾಳೆ, ತನ್ನ ಬದುಕನ್ನು ಉಳಿಸಿದ ದೇವತೆಯಂತಹ ಸಖಿಯಂತೆ ಕಾಣುತ್ತಾಳೆ ಮಧುವನ್ನೀಗ.
”ಛೂ ಲೇನೆ ದೊ ನಾಜೂಕ್ ಹೋಟೋಂ ಕೊ, ಕುಛ್ ಔರ್ನಹೀ ಹೈ ಜಾಮ್ ಹೈ ಯೆ ಕುದರತ್ ನೆ ಜೊ ಹಮ್ ಕೊ ಬಕ್ಷಾ ಹೈ, ಯೆ ಸಬ್ ಸೆ ಹಸೀನ್ ಇನಾಮ್ ಹೈ ಯೆ”,ಎಂದು ಸಾಹಿರ್ನ ಸಾಲುಗಳನ್ನು ಗುನುಗುನಿಸುತ್ತ, ನಶೆಯಮಲಿನಲ್ಲಿ ಕುಳಿತಲ್ಲಿಯೇ ಕಣ್ಣುಗಳನ್ನು ಮುಚ್ಚುತ್ತಿದ್ದಳು, ಹೀಗೆಯೇ ದಿನವೂ ಸಾಯುತ್ತಿದ್ದಳು. ಸಾಯುವವರ ಸಾಲಿನಲ್ಲಿ ಮೊದಲಿಗಳಾಗಿದ್ದಳು. ಅದಿಲ್ಲದೇ ಜೀವನವೇ ಇಲ್ಲವೆನ್ನುವ ಮಟ್ಟಿಗೆ ಅವಳನ್ನು ಅವರಿಸಿಕೊಂಡಿತ್ತು, ಮಧು. ಮತ್ತೊಂದು ಮಧುಮಯ ರಾತ್ರಿಯ ಪಾನು ಹೀಗೆ ತನ್ನ ಪುಟ ತಿರುವಿಕೊಳ್ಳುತ್ತಿತ್ತು. ಶೈಲೇಂದ್ರ ಇದಕ್ಕಾಗಿಯೇ ಬರೆದನೇ ಇದನ್ನು,….
ದಿಲ್ ಕೊ ತೇರೀ ಹೈ ತಮನ್ನಾ, ದಿಲ್ ಕೊ ಹೈ ತುಝ್ಸೆ ಹೀ ಪ್ಯಾರ
ಚಾಹೆ ತೂ ಆಯೆ ನ ಆಯೆ, ಹಮ್ ಕರೇಂಗೆ ಇಂತಜಾರ್
ಯೆ ಮೇರಾ ದೀವಾನಾಪನ್ ಹೈ, ಯಾ ಮೊಹಬ್ಬ್ತ್ ಕಾ ಸುರೂರ್
ಮನದಿಚ್ಛೆ ಕಾದಿದೆ ನಿನಗೆ, ಮನದಲಿದೆ ಪ್ರೀತಿಯ ಜೇನು
ಬರುವೆಯೋ, ಬರದಿರುವೆಯೋ, ಕಾಯುವೆನು ನಾನು
ಮರುಳಮನವೊ, ಪ್ರೇಮದಮಲೊ, ಅರಿಯೆ ನಾನು
ತನ್ನ ಪ್ರೀತಿಯ ಪರಾಕಾಷ್ಠೆಯಲ್ಲಿದ್ದಾಗ, ಎಂದೂ ಯಾರೂ ಮಾಡದ ಚಿತ್ರವೊಂದನ್ನು ಮಾಡುವುದಾಗಿ, ಅಮ್ರೋಹಿ 56ರಲ್ಲಿ ಘೋಷಿಸಿದಾಗ, ತನ್ನಲ್ಲಿರುವ ಎಲ್ಲವನ್ನೂ ಅಂದರೆ ನಲವತ್ತು ಲಕ್ಷ ರೂಪಾಯಿಗಳನ್ನು ನೀಡಿ ತನ್ನ ಸರ್ವಸ್ವವನ್ನೂ ಅಮ್ರೋಹಿಗಾಗಿ ತ್ಯಾಗ ಮಾಡಿದ್ದಳು. ಒಂದುವೇಳೆ ಚಿತ್ರ ಸೋತರೆ ಅಥವಾ ಅಮ್ರೋಹಿಯಾಗಲಿ ಕೈಬಿಟ್ಟರೆ ಮುಂದೇನೂ ಎಂಬ ಪರಿಕಲ್ಪನೆಯನ್ನೂ ಮಾಡದೇ ತನ್ನದೆಲ್ಲವನ್ನು ಧಾರೆ ಎರೆದಿದ್ದಳು, ತನ್ನ ಪ್ರೀತಿಗೆ, ತನ್ನ ಆರಾಧ್ಯ ಪತಿ ಅಮ್ರೋಹಿಯ ಮೇಲೆ, ಅವನ ಚಿತ್ರದ ಬಗ್ಗೆ ಎಳ್ಳಷ್ಟೂ ಸಂಶಯವೇ ಇಲ್ಲದೇ. ಚಿತ್ರ ಸೆಟ್ಟೇರಿ ಆರು ರೀಲುಗಳಷ್ಟು ಆಗಿರುವಾಗ, ಅಮ್ರೋಹಿ ಮತ್ತು ಮೀನಾಳ ಬದುಕಿನ ಬಿರುಕು ತೀರ ಸಹಿಸದಾದಾಗತೊಡಗಿತು. ‘ಕೆಹನೇ ಕೊ ಹೈ ಅಪನಾ , ಹೋ ಗಯೆ ಪರಾಯೆ’ ಅಂತಾದ ಬದುಕು ಭಾರವಾಗತೊಡಗಿತ್ತು.
ಮೀನಾ, ‘ಪಾಕಿಜಾ’ ಜೊತೆ ಬೇರೆ ಚಿತ್ರಗಳಲ್ಲೂ ನಟಿಸುತ್ತ ಹೆಚ್ಚು ಬೇಡಿಕೆಯೊಂದಿಗೆ ಹಿಟ್ ಚಿತ್ರಗಳನ್ನು ನೀಡುತ್ತಲೇ ನಡೆದಿದ್ದಳು. ಅವಳಿಗಿರುವ ‘ಟ್ರ್ಯಾಜೆಡಿ ಕ್ವೀನ್’ ಇಮೇಜ್ ಹಾಗೂ ಅವಳ ಅಪ್ಪಟ ಅಭಿನಯಕ್ಕೆ ಮಾರುಹೋದ ಯುವಕರ ದಂಡಿನ ಕಣ್ಮಣಿಯಾಗಿದ್ದಳು, ಹೆಂಗಳೆಯರ ಅಚ್ಚುಮೆಚ್ಚಿನ ನಟಿಯಾಗಿದ್ದಳು ಮೀನಾ.
ಅದೊಮ್ಮೆ ಮೀನಾ ಅನಿವಾರ್ಯವಾಗಿ, ವೃತ್ತಿಧರ್ಮ ಪಾಲಿಸಿ, ಸೆಟ್ನಿಂದ ತುಸು ತಡವಾಗಿ ಮನೆಗೆ ಹೋದಾಗ, ಅಮ್ರೋಹಿ ಇನ್ನು ಮುಂದೆ ಹೀಗೆ ತಡವಾಗಿ ಬರದಂತೆ ತಾಕೀತು ಮಾಡಿದ. ಇನ್ನು ಚಿತ್ರಗಳಲ್ಲಿ ನಟಿಸುವುದಾದರೆ, ತನ್ನೊಟ್ಟಿಗೆ ಇರುವುದಾದರೆ , ಪ್ರತಿನಿತ್ಯ ಶೂಟಿಂಗ್ ಎಲ್ಲೇ ಇರಲಿ, ಸಂಜೆ ಆರು ಗಂಟೆಗೆ ಮನೆಗೆ ಮರಳಬೇಕು. , ಮೀನಾಳ ಗ್ರೀನ್ ರೂಮಿಗೆ ಯಾವ ಗಂಡಸೂ ಪ್ರವೇಶಿಸಬಾರದು.. ಹಾಗೂ ಸೆಟ್ನಲ್ಲಿ ಇತರೆ ಗಂಡಸರೊಂದಿಗೆ ಮಾತಿಗಿಳಿಯಬಾರದು. ಬೇರೆ ಗಂಡಸರ ಕಾರನ್ನು ಹತ್ತಕೂಡದು, ಮೈ ಕಾಣುವ ತುಂಡುಡುಗೆ ಧರಿಸಕೂಡದು…ನಿರ್ಬಂಧಗಳ, ತಾಕೀತುಗಳ ಸರಮಾಲೆಗಳೇ ಅವಳ ಹೆಜ್ಜೆಗಳಲ್ಲಿ ಇಡಲ್ಪಡಹತ್ತಿದವು. ಎಲ್ಲವನ್ನೂ ಸಹಿಸಿಕೊಂಡು ಸಾಧ್ಯವಾದಷ್ಟು ಅದರಂತೆ ನಡೆಯುತ್ತಿದ್ದಳು ಮೀನಾ…. ಈ ಗಂಡಸರೇ ಹೀಗೆ ಎಂದು ಅವಳಿಗೆ ಗೊತ್ತಾಗಿಬಿಟ್ಟಿತ್ತು. ಅಮ್ರೋಹಿಯ ಡೆಫನಿಷನ್ ಸಿಕ್ಕುಬಿಟ್ಟಿತ್ತು.
ಆದರೂ ಅದೊಂದು ದಿನ ಅನಿವಾರ್ಯವಾಗಿ ಶೂಟಿಂಗ್ ಮುಗಿಸಿ ಮನೆಗೆ ಮರಳುವಲ್ಲಿ ತಡವಾಗಿಯೇ ಬಿಟ್ಟಿತು. ಅದು ‘ಈದ್’ ದಿನ. ರಾತ್ರಿ ಜಗಳವಾಗಿ ಇವನ ಮಿಥ್ಯಾರೋಪಗಳನ್ನು ಸಹಿಸದೇ ಅವನ ಕುತರ್ಾದ ಕಾಲರು ಹಿಡಿದು ಎಳೆದು ಹರಿದು ಬಿಟ್ಟಳು, ರೊಚ್ಚಿಗೆದ್ದ ಅಮ್ರೋಹಿ ಮೀನಾಳ ಮೇಲೆ ಕೈಮಾಡಿಬಿಟ್ಟ. ಈಗ ಮಾಹೋಲು ಹದಗೆಟ್ಟು ಬಿಟ್ಟಿತು. ಜೋರಾಗಿ ಇಬ್ಬರ ನಡುವೆ ಕದನವೇ ಆಯಿತು. ಇದೇ ರೋಷದಲ್ಲಿ ಬೆಳಿಗ್ಗೆ 11 ಗಂಟೆಗೆ ಚಿತ್ರವೊಂದರ ಮುಹೂರ್ತಕ್ಕೆ ಹೋದಳು. ಮನಸ್ಸು ಎಂಬುದು ಕಾದ ಹಂಚಾಗಿತ್ತು…..
ಅದು 5ನೇ ಮಾರ್ಚ 64ರ ದಿನ. ‘ಪಿಂಜರೇ ಕೆ ಪಂಛಿ’ ಚಿತ್ರದ ಮುಹೂರ್ತದ ದಿನ. ತಯ್ಯಾರಿಯ ಬಗ್ಗೆ ನೊಡಿಕೊಳ್ಳಲು ಬಾಕರ್ ಮೊದಲೇ ಸೆಟ್ಗೆ ಬಂದಿದ್ದ, 11 ಗಂಟೆಯ ಮುಹೂರ್ತ. ಮೀನಾ 11.30 ಗಂಟೆಗೆ ಬಂದು ತನ್ನ ಕೋಣೆಗೆ ಹೋಗುತ್ತಿರುವಾಗ, ತನ್ನ ಹೇರ್ ಡ್ರೆಸರ್ ಹೇಳಿದ ಮಾತಿನಿಂದ ಪಿತ್ಥ ನೆತ್ತಿಗೇರಿತು. ಅವಳು ಹೇಳಿದ್ದೇನೆಂದರೆ, ಮೀನಾಳ ಗ್ರೀನ್ ರೂಮಿಗೆ ಯಾವ ಗಂಡಸರೂ ಪ್ರವೇಶಿಸುವಂತಿಲ್ಲ. ಅಲ್ಲಿಯೇ ಇದ್ದ ಗುಲ್ಜಾರರನ್ನು ತನ್ನ ರೂಮಿಗೆ ಕರೆದ ಮೀನಾ ತನ್ನ ಕೋಣೆಯತ್ತ ಬರಲು ತಿಳಿಸಿ ನಡೆದಳು. ಅಮ್ರೋಹಿಯ ನಿರ್ಭಂಧವನ್ನು ಆಗಲೇ ಮುರಿದು ಹಾಕಲು ಅಲ್ಲಿಯೇ ಇದ್ದ ಗುಲ್ಜಾರರಿಗೆ ಬರಲು ಹೇಳಿದ್ದಳು. ಆಗಲೇ ಅಮ್ರೋಹಿಯ ಸಂಗ ಸಾಕಾಗಿಬಿಟ್ಟಿತ್ತು ಅವಳಿಗೆ. ಸಂಶಯ ಅವನನ್ನು ಹೊಕ್ಕುಬಿಟ್ಟಿತ್ತು. ಅವಳು ಮುಂದೆ ಸಾಗುವಷ್ಟರಲ್ಲಿ ಅವಳ ಹಿಂದೆ ಬಾಕರ್ಅಲಿ ಅವಳನ್ನು ಹಿಂಬಾಲಿಸಿದ, ಅವನ ಹಿಂದೆ ಗುಲ್ಜಾರ. ಮೀನಾಳ ಡ್ರೆಸಿಂಗ್ ರೂಂಗೆ ಕೆಲ ಮೆಟ್ಟಿಲುಗಳನ್ನು ಏರಬೇಕಾಗಿತ್ತು. ಗುಲ್ಜಾರರು ಏರುತ್ತಿರಬೇಕಾದರೆ, ಬಾಕರ್ ಅಡ್ಡಿಪಡಿಸಿದ, ಅವರನ್ನು ತಡೆಹಿಡಿದು ತಳ್ಳಿದ. ಇದನ್ನು ಕಂಡ ಮೀನಾ ತೀರ ವ್ಯಗ್ರಳಾಗಿ ಬಾಕರನತ್ತ ಜೋರುದನಿಯಲ್ಲಿ, ನನ್ನ ಡ್ರೆಸಿಂಗ್ರೂಂಗೆ ಯಾರು ಬರಬೇಕು, ಯಾರು ಹೋಗಬೇಕು ನಿರ್ಭಂಧಿಸುವವನು ನೀನು ಯಾರು? ನನ್ನನ್ನು ವೇಶ್ಯೆಯಂದು ತಿಳಿದಿರುವೆಯಾ? ಹಾಳಾದವನೆ. ಎಂದು ಚೀರಿದಾಗ. ಬಾಕರ್ ಕೂಡ ಅವಳಿಗೆ ಕೆನ್ನೆಗೆ ಹೊಡೆದು ತನ್ನ ರೋಷ ವ್ಯಕ್ತಪಡಿಸಿದನೆಂಬಸುದ್ದಿಯೂ ಇದೆ. ಆದರೆ ಅಸಲು ನಾನು ಹಾಗೆ ಮಾಡಿಯೇ ಇಲ್ಲ ಎಂದು ಬಾಕರ್ ನಂತರವೂ ಸಮಜಾಯಿಷಿಯಲ್ಲಿ ಹೇಳಿದ್ದ.. ಪಕ್ಕದ ಸೆಟ್ನಲ್ಲಿ ನರ್ಗೀಸ್, ಅಲ್ಲಿಯೇ ಇದ್ದ ಬಲರಾಜ್ ಸಹಾನಿ ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದರು. ಗುಲ್ಜಾರರನ್ನು ಹಿಡಿದುಕೊಂಡು ಇವರನ್ನು ತಡೆಯಲು ನಿನಗೆಷ್ಟು ಧೈರ್ಯ? ಎಂದು ಕೂಗಾಡಿಬಿಟ್ಟಳು.
ಎಂಥ ಜೋರುದನಿಯದು. ಯಾವತ್ತೂ ಮೆಲು ದನಿಯ ಮೀನಾ ಇಂದು ತೀರ ವ್ಯಗ್ರವಾಗಿದ್ದಳು. ಅವಳಿಗೆ ಗೊತ್ತಿತ್ತು ಇದನೆಲ್ಲ ನಿರ್ಬಂಧ ವಿಧಿಸಿದವನು ಬಾಕರ್ನಲ್ಲ. ಅಸಲು ಅಮ್ರೋಹಿ, ಸಿಟ್ಟಿನಿಂದ ಸೆಟ್ನಿಂದ ಹೊರನಡೆದ ಮೀನಾ, ಕಮಾಲ್ ಸಾಹೇಬರಿಗೆ ಹೇಳು, ‘ನಾನಿನ್ನು ಅವನಲ್ಲಿಗೆ ಬರಲಾರೆ’ ಎಂದು ಹೇಳಿ ಹೊರನಡೆದಳು. ಮತ್ತೆ ಅಮ್ರೋಹಿಯೆಡೆಗೆ ಮರಳಲಿಲ್ಲ. ಅದಾಗಲೇ ತನ್ನ ಕೆಲ ಸಾಮಾನು ಗೆಳತಿ ಅಚಲಾ ಸಚ್ದೇವಳ ಮನೆಗೆ ಸ್ಥಳಾಂತರಿಸಿಬಿಟ್ಟಿದ್ದಳು. ಅಂದು ಮುಂಜಾನೆಯೇ ಬೆಡ್ರೂಂಗೆ ಬಂದ ಅಮ್ರೋಹಿ, ಮೀನಾಳ ಮುಖವನ್ನು ತನ್ನ ಕೈಗಳಲ್ಲಿ ಹಿಡಿದು, ”ರಾತ್ರಿಯ ಘಟನೆಯನ್ನು ಮರೆತುಬಿಡು, ನನ್ನನ್ನು ಬಿಟ್ಟು ಹೋಗಬೇಡ ‘ಮಂಜು”’ ಎಂದು ಗೋಗರೆದಿದ್ದ. ಆದರೆ ಅವನ ಸಹವಾಸವೇ ಅಸಹ್ಯವೆನಿಸಿ. ಅವನ ಮುಖವನ್ನೂ ನೋಡಲು ಬಯಸದಷ್ಟು ದೂರವಾಗಿದ್ದಳು. ಮೀನಾ ಈಗ ತನ್ನದೇ ದುನಿಯಾದಲ್ಲಿ ಒಂಟಿಯಾಗಿ, ಏಕಾಂತವಾಗಿದ್ದಳು. ತನ್ನದೇ ಬಿರುಗಾಳಿಯಲ್ಲಿ ಸಿಲುಕಿದ ತೇಲುತೊಟ್ಟಿಯಲ್ಲಿ.
ಅವಳನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿಯಿಂದ ನೊಂದ ಮೀನಾಕುಮಾರಿ ಇನ್ನು ಇವನೊಡನೆ ಇರಲಾರೆನೆಂದು ನಿರ್ಧರಿಸಿ, ಜುಹುವಿನ ಬಂಗಲೆ, ‘ದಿ ಲಾಂಡಮಾರ್ಕ’ ಗೆ ಖಾಯಂ ಸ್ಥಳಾಂತರಿಸಿಕೊಂಡುಬಿಟ್ಟಳು. ಅಲ್ಲಿಗೆ ಇವರಿಬ್ಬರ ಕಥೆ ಒಂದು ಅಂತ್ಯಕ್ಕೆ ಬಂದು ನಿಂತು ಬಿಟ್ಟಿತು. ಪಾಕೀಜಾ ಡಬ್ಬದಲ್ಲಿ ಕೊಳೆಯತೊಡಗಿತು. ಮೀನಾ ಶರಾಬಿನ ಗುಂಗಿನಲ್ಲಿ ಒಂದಾಗಿ ಬಿಟ್ಟಿದ್ದಳು , ಜಗದ ಯಾವ ಪರಿವೆಯೂ ಅವಳಿಗಿರಲಿಲ್ಲ ಈಗ. ಇದೇ ಶಾಯರಿಯನ್ನು ಬರೆದಿದ್ದಳೆಂದು ಕಾಣುತ್ತದೆ, ಅಂದು ಅವನೊಡನೆ ಜಗಳವಾಡಿ ‘ದಿಲ್ಯಾಂಡ ಮಾರ್ಕ’ಗೆ ಬಂದ ದಿನ!
ಹೋ ಕೆ ತನ್ಹಾ ಔರ್ ಮಜಬೂರ ಚಲೀ ಜಾವೂಂಗಿ,
ತುಮ್ಹಾರಿ ದುನಿಯಾ ಸೆ ಮೈಂ ದೂರ, ಕಹೀಂ ಬಹೊತ್ ದೂರ ಚಲೀ ಜಾವೂಂಗಿ
ತುಮ್ಹಾರೆ ನಮ್ಸಿ ಜಾದೂಗರಿ ಸೆ ದೂರ ಕಹೀಂ,
ತುಮ್ಹಾರೆ ಕದಮೋಂ ಕಿ ಆಹಟ್ ಸೆ ದೂರ, ದೂರ ಕಹೀಂ, ದೂರ ಐಸಿ ಜಗಾ ಕೆ ಕೋಯೀ ಭಿ ಪರಛಾಯಿ ನ ಹೋ
ಜಹಾಂ ವಜೂದ್ ಮೇರಾ ವಾಜೆ ಬಾಕಸ್ತ ಬನ್ಕರ್ ಖಲಲ್ ಕೆ ದೌರ್ ಕೆ ಶೆಕೂರ್ ಪರ್ ಬಿಖರ್ ಜಾಯೆ,
ಹೋ ಕೆ ತನ್ಹಾ ಔರ್ ಮಜಬೂರ ಚಲೀ ಜಾವೂಂಗಿ,
ತುಮ್ಹಾರಿ ದುನಿಯಾ ಸೆ ದೂರ, ಕಹೀಂ ಬಹುತ್ ದೂರ ಚಲೀ ಜಾವೂಂಗಿ
ಕಣ್ಣೀರಿನಲ್ಲಿಯೇ ತೊಯ್ದು ತೊಪ್ಪಡಿಯಾಗಿದ್ದಳು, ಮುಂದೇನು? ಹೆಣ್ಣು ತಾನು, ಒಂಟಿಯಾಗಿ ಈಜಬಲ್ಲೆನೇ?, ಜನಪ್ರಿಯತೆಯ ತುತ್ತತುದಿಯ ಎತ್ತರದಲ್ಲಿ ಒಂಟಿಯಾಗಿ ನಿಂತ ಏಕಾಂತವಾಸವೆಂಬುದು ಅದೊಂತರಹದ ಹಿಂಸೆಯೂ ಹೌದು ಎನ್ನುವುದು ಈಗಾಗಲೇ ತಿಳಿದಿತ್ತಾದರೂ, ಒಂಟಿ ಬದುಕಿನ ಹಿಂಸೆ, ನೋವು ಇನ್ನೂ ಅರಿವಾಗುವುದು ಬಾಕಿ ಇತ್ತು. ಒಂಟಿ ಬದುಕಿನಲ್ಲಿ ಒಂದು ಅರ್ಥದಲ್ಲಿ ಮೀನಾಳ ಕೈಹಿಡಿದದ್ದೇ ಶಾಯರಿಗಳು. ರವೀಂದ್ರನಾಥ ಠಾಕೂರ ಘರಾನೆಯ ‘ರೂಹ್’ (ಆತ್ಮ)ನ ಕುಡಿಯಿದು. ಅದರ ಸಂಪೂರ್ಣ ಸಾರ, ಸ್ವಾದ ಅವಳಲ್ಲಿ ಗಾಢವಾಗಿತ್ತು. ಆ ದಿನಗಳಲ್ಲಿ ಅವಳ ಬದುಕಿನ ತುಂಬ ಶಾಯರಿಗಳೇ ತುಂಬಿಕೊಂಡಿದ್ದವು. ಮೀನಾಳನ್ನು ಡಿಪ್ರೆಶನ್ಗೆ ಹೋಗದಂತೆ ತಡೆದವು. ಮೀನಾ ಈಗ ಅಪ್ಪಟ ಕವಿಯಿತ್ರಿಯಾಗಿದ್ದಳು, ನಾಜ್ ಎಂಬ ಕಾವ್ಯನಾಮದಿಂದ ಮೊದಲಿನಿಂದಲೂ ಕವನಗಳನ್ನು, ಶಾಯರಿಗಳನ್ನು ಬರೆಯುತ್ತಿದ್ದಳು, ತನ್ನದೇ ಡೈರಿಯಲ್ಲಿ ಅವುಗಳನ್ನು ಗುಪ್ತವಾಗಿ ಬಂಧಿಸಿಡುತ್ತಿದ್ದಳು, ತನ್ನಷ್ಟಕ್ಕೆ ಹೇಳಿಕೊಳ್ಳುತ್ತಿದ್ದಳು, ಮುಶಾಯಿರಾಗಳಲ್ಲಿ ಓದುತ್ತಿದ್ದಳು. ನೋವು ತುಂಬಿದ ಆ ಕಂಠದುಂಬಿ ಅವಳು ಹೇಳುತ್ತಿರುವಾಗ ಶಾಯರಿಗಳಿಗೆ ಜೀವಂತಿಕೆ ಬರುತ್ತಿತ್ತು.
ಅದಕ್ಕೆ ಇನ್ನೂ ಅರ್ಥ ತುಂಬಿಕೊಳ್ಳುತ್ತಿತ್ತು.
ಪ್ಯಾರ ಸೋಚಾ ಥಾ, ಪ್ಯಾರ ಢೂಂಢಾ ಥಾ
ಠಂಡೀ ಠಂಡೀ ಸೀ ಹಸರತೇಂ ಢೂಂಢೀ
ಸೋಂಧೀ ಸೋಂಧೀ ಸಿ ರೂಹ್ ಕೀ ಮಿಟ್ಟೀ
ತಪತೇ, ನೋಕೀಲೇ, ನಂಗೇ ರಸ್ತೋಂ ಪರ್
ನಂಗೇ ಪೈರೋಂ ನೆ ದೌಡಕರ್, ಥಮಕರ್
ಧೂಪ ಮೇಂ ಸೇಂಕೀ ಛಾಂವ್ ಕೀ ಚೋಟೇಂ
ಛಾಂವ್ ಮೇಂ ದೇಂಖೇ ಧೂಪ್ ಕೆ ಛಾಲೇಂ
ಅಪನೇ ಅಂದರ್ ಮೆಹಕ್ ರಹಾ ಥಾ ಪ್ಯಾರ್-
ಖುದ್ ಸೆ ಬಾಹರ್ ತಲಾಶ್ ಕರತೇ ಥೇ
ಪ್ರೀತಿಗೆ ಧ್ಯಾನಿಸಿ, ಅದಕೆ ಹಂಬಲಿಸಿ,
ತಣ್ಣನೆಯ ಕಾಮನೆಗಳ ಬೆಚ್ಚನೆ ಅರಸಿ
ಅದವಾಸನೆ ಭರಿತ ಆತ್ಮದೀ ಮಣ್ಣಿನೊಳು
ತಪಿತ, ಮೋಹಿತ, ಬೆತ್ತಲೆ ರಸ್ತೆಗಳಲ್ಲಿ
ಏದುಸಿರಲ್ಲಿ ನಿಂತು, ಓಡುವ ಬರಿಗಾಲುಗಳು,
ಬಿಸಲಲ್ಲಿ ಸುಟ್ಟ ನೆರಳ ಗಾಯಗಳಲ್ಲಿ
ನೆರಳಲ್ಲಿ ಕಂಡ ಬಿಸಿಲು ಗುಳ್ಳೆಗಳಲ್ಲಿ
ನಿಲ್ಲದ ಹುಡುಕಾಟ!
ಸುಗಂಧದಂತಹ ಪ್ರೀತಿ, ತುಂಬಿತ್ತು ನನ್ನೊಳಗೆ
ಅದನೆ ಹುಡುಕಿತ್ತು ಹೃದಯ ಎಲ್ಲೆಲ್ಲೋ ಹೊರಗೆ!
ಹೊರಗಿನಿಂದ ಒಳಗನ್ನು, ಒಳಗಣ್ಣು ಹುಡುಕುವ ಈ ಪಯಣ ಅದೆಷ್ಟೊಂದು ಸುದೀರ್ಘವಾಗಿತ್ತು. ಈ ಒಳ ಪಯಣದ ಗಮ್ಯ ತಲುಪುವಲ್ಲಿ ಮೀನಾಗೆ ಇಡೀ ಜನುಮವೇ ಸಾಕಾಗಲಿಲ್ಲವೆಂದು ತೋರುತ್ತದೆ. ನಡೆದೇ ನಡೆದಳು, ಇಳಿದೇ ಇಳಿದಳು, ಅವಳ ಗಮ್ಯದ ದಂಡೆಯ ತುಣುಕು ಕೂಡ ಅವಳಿಗೆ ದೊರಕಲೇ ಇಲ್ಲ, ಬದುಕಿನ ಬಾಳ ಪಯಣವೆನ್ನುವುದು ಕೆಲವರಿಗೆ ಮರೀಚಿಕೆಯೇ ಸರಿ. ಅಂದುಕೊಂಡಿದ್ದು ಒಂದೂ ಕೈಗೂಡದಿದ್ದಾಗ, ಮನಸ್ಸು ಅದೆಷ್ಟೊಂದು ಹತಾಶೆಯಾಗುತ್ತದಲ್ಲವೇ? ಇಲ್ಲ, ಎಲ್ಲರಿಗೂ ಅರ್ಥವಾಗುವುದಿಲ್ಲ ಅದು, ಆ ಬೆಂಕಿಯಲ್ಲಿ, ಆ ತಾಪದ ಪರಿತ್ಯಕ್ತದಲ್ಲಿ ಕಾದ ಕೊಪ್ಪರಿಗೆಯಲ್ಲಿ ಕೊತ ಕೊತ ಕುದಿವವರಿಗೆ ಅರ್ಥವಾಗುವಂತಹದು. ನೋವು ಹೇಗೆ ಇರುತ್ತದೆಂದರೆ, ಬಿಡಿಸಿ ಹೇಳುವುದು ಹೇಗೆ, ತೆರೆದು ತೋರುವುದು ಹೇಗೆ?, ಖುದ್ದು ಅನುಭವಕ್ಕೆ ಬಂದರೆ ಮಾತ್ರ ಹೇಳಬಹುದಲ್ಲವೇ!
ಮತ್ತೆ ನಟನೆಯ ವಿಷಯಕ್ಕೆ ಬಂದರೆ ಮತ್ತೆ ಆ ಪಾತ್ರದಲ್ಲಿ ತಲ್ಲೀಣಳಾಗಿಬಿಡುತ್ತಿದ್ದಳು, ಮೀನಾ ಜಿ. ಈ ನಟನೆಯಿದೆಯಲ್ಲಾ ಅದು, ಅವಳಲ್ಲಿ ರಕ್ತಗತವಾದಷ್ಟು ಸಲೀಸು ಹಾಗು ಅಷ್ಟೊಂದು ಪರಫೆಕ್ಟ್. ಸುಮ್ಮನೆ ಒಂದು ಉದಾಹರಣೆಯಾಗಿ, ದುಶ್ಮನ್ ಚಿತ್ರ ನೆನಪಿದೆಯಲ್ಲಾ. ಅದರಲ್ಲಿ ರಾಜೇಶಖನ್ನಾ ನ ಆ ಹಾಡು, ‘ಸಬ್ನೆ ಮಾಫ ಕಿಯಾ ಮಝಕೋ ಪರ್, ಮೈ ಹೂಂ ಜಿಸ್ಕಾ ದೋಷಿ, ಕಬ್ ಟೂಟೇಗಿ ಉಸಕೇ ಘಾಯಲ್ ಹೋಟೋಂ ಕಿ ಖಾಮೋಶಿ?’ ಎನ್ನುತ್ತಲೇ, ಮೀನಾಕುಮಾರಿಯ ಹತ್ತು ಸೆಕೆಂಡುಗಳಲ್ಲಿಯ ಆ ಅಭಿನಯ, ಒಲೆಯ ಮೇಲಿನ ರೋಟಿಯನ್ನು ತೆಗೆದು, ಬರಿಹಣೆಗೆ ಕೈಯೂರಿ ತನ್ನ ಬರಿದಾದ ಕಣ್ಣುಗಳನ್ನು ಶೂನ್ಯಭಾವದಲ್ಲಿ ಕೆಳಗಿಳಿಸಿ, ಅವನ ಕೋರಿಕೆಗೆ ತನ್ನ ‘ನಕಾರ’ ತೋರಿಸುವ ರೀತಿ. ಅಬ್ಬಾ! ಇದಕ್ಕಿಂತಲೂ ಕ್ಲಾಸಿಕ್ ಸಾಧ್ಯವೇ? ಆ ಹಾಡಿನ ಆ ಹತ್ತು ಸೆಕೆಂಡುಗಳ ಮೀನಾ, ಇಂದಿಗೂ ಕಣ್ಣಿಗೆ ಕಟ್ಟಿದಂತಿದ್ದಾಳೆ, ಶಿ ವಾಸ್ ಅಲ್ಟಿಮೇಟ್!
ಮೇರೆ ಅಪ್ನೆಯಲ್ಲಿ ವೃದ್ಧೆಯ ಪಾತ್ರದ ನಂತರ ಖುರ್ಷಿದಳಿಗೆ ಹೇಳಿದ್ದಳು, ನಾನಂತೂ ಜವಾನಿಯಲ್ಲಿಯೇ ವೃದ್ಧಾಪ್ಯ ನೋಡಿಬಿಟ್ಟೆ. ಅಲ್ಲಿಯವರೆಗೆ ಜೀವಿಸುತ್ತೇವೆಂದು ಭರೋಸಾ ಆದರೂ ಎಲ್ಲಿ ಇದೆ ನನಗೆ, ಇನ್ನು ನನಗೆ ವೃದ್ಧೆಯಾಗುವವರೆಗೂ ಬದುಕಬೇಕೆಂಬಾಸೆಯೂ ಉಳಿದಿಲ್ಲ ಈಗ ಎಂದು ನಗುತ್ತ ಹೇಳಿದ್ದಳು.





She was ‘true love’ personified as well as ‘pathos personified.’ ‘Chalte chalte’ she met him to lose herself forever, she couldn’t ever reach herself again.
ಹೌದು ಡಾ. ಪ್ರಭಾಕರ್ ಜಿ, ಅವಳೆಂದೂ ತನ್ನ ಬದುಕಿನ ಟ್ರ್ಯಾಕನ್ನು ಮತ್ತೊಮ್ಮೆ ಲಯಬದ್ದವಾಗಿ ಪಡೆಯಲೇ ಇಲ್ಲ. ನತದೃಷ್ಟೆ. ನೋವಿಗೆ ಮತ್ತೊಂದು ಹೆಸರಾಗಿಯೇ ಅಮರತ್ವ ಪಡೆದಳು. ಮೀನಾಕುಮಾರಿ ಎಂಬ ಆರ್ರ್ತ ಆತ್ಮಕ್ಕೆ ಚಿರಶಾಂತಿ ಕೋರುತ್ತ, ವಂದನೆಗಳು ಸರ್
I have read Meenakumari ki Shayri which is edited by Gulzar… Her works of poetry were exceptionally fabulous… This column is making me feel nostalgic… Sometimes it feels like grief fuels the pen!!
– Prasad, Luanda, Angola
ಪ್ರಸಾದ್ , ಅಂಗೋಲಾ ರವರೆ, ತಮ್ಮ ಮೆಚ್ಚುಗೆಗೆ ತಲೆಬಾಗಿ ವಂದನೆ ಸರ್.
ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಮೀನಾ ಕುಮಾರಿಯ ಕುರಿತು ಮನ ಮುಟ್ಟವ ರೀತಿಯಲ್ಲಿ ಚಿತ್ರಿಸುತ್ತಿದ್ದಿರಿ, ಮೀನಾ ನಿಮ್ಮ ಲೇಖನಿಯಲ್ಲಿ ಮೈದುಂಬಿ ಬರುತ್ತಿದ್ದಾಳೆ ಅವಳ ಆತ್ಮ ಚರಿತ್ರೆಯೆ ಇದು ಎನ್ನುವಷ್ಟು ದಟ್ಟವಾಗಿ ಮೂಡಿ ಬರುತ್ತಿದೆ, ನೀವು ಮಾಹಿತಿ ಕಲೆ ಹಾಕಿ ಅದಕ್ಕೊಂದು ಕಲಾತ್ಮಕ ಮತ್ತು ಭಾವನಾತ್ಮಕ ರೂಪ ನೀಡಿದ್ದಿರಿ, ಧನ್ಯವಾದಗಳು.
ಸರ್ ತಮ್ಮ ಆತ್ಮೀಯ ಪ್ರೀತಿದುಂಬಿದ ಮಾತಿಗೆ ವಂದನೆಗಳು. ತಮ್ಮ ಮೆಚ್ಚುಗೆ ನನ್ನನ್ನು ಇನ್ನಷ್ಟು ಜವಾಬ್ದಾರನನ್ನಾಗಿಸುತ್ತಿದೆ. ವಂದನೆಗಳು ಸರ್.
ಏಕ ಥೀ ಮೀನಾಕುಮಾರಿ: ಶಿ ವಾಸ್ ಅಲ್ಟಿಮೇಟ್!
ವೊಟ್ ಎನ್ ಎಕ್ಸ್ಲಂಟ ಟೈಟಲ್ ಇನ್ ಕೆನರೀಸ್ 🙂
ಅಜಿತ್ ಅವರೆ ನಮಸ್ತೆ. ಹೌದು, ಎಲ್ಲವೂ ಕನ್ನಡವಲ್ಲದ ಟೈಟಲ್ ಗಳು. ಚನ್ನಾಗಿ ನೆನೆಪಿಸಿದಿರಿ. ಧನ್ಯವಾದ.’ಏಕ್ ಥೀ….” ಸರಿಯೆನ್ನಿಸಿ, ಹಾಗಿಟ್ಟೆ ಅಷ್ಟೆ. ವಂದನೆಗಳು