3
ಏಕ್ ಥಿ ಮೀನಾಕುಮಾರಿ

ಲಕ್ಷ್ಮೀಕಾಂತ ಇಟ್ನಾಳ
ಯೆ ಚಿರಾಗ್ ಬುಝ್ ರಹೀ ಹೈ,
ಯೆ ಚಿರಾಗ್ ಬುಝ್ ರಹೀ ಹೈ
ಮೇರೆ ಸಾಥ್ ಜಲ್ತೇ ಜಲ್ತೇ
ಈ ದೀಪ ಆರುತ್ತಲಿದೆ
ನನ್ನೊಡನೆ ಉರಿದುರಿದು
ದೀಪವಿದು ಆರುತ್ತಲಿದೆ
ಹಾಡುತ್ತಾಳೆ ಮೀನಾಕುಮಾರಿ, ಅದೇ ನೋವಿನಲ್ಲಿ, ಪಾಕೀಜಾದ ‘ಚಲ್ತೇ ಚಲ್ತೇ ಮುಝೆ ಕೋಯೀ ಮಿಲ್ಗಯಾ ಥಾ……’ಹಾಡಿಗೆ ಕುಣಿಯುತ್ತಿದ್ದವು ಕಾಲುಗಳು, ಕಥಕ್ ನ ಹೆಜ್ಜೆಗಳಲ್ಲಿ, ಗುಲಾಮ್ ಮೊಹಮ್ಮದ್ರ ಹುಚ್ಚೆದ್ದ ನಾದದ ತಬಲಾದ ತಾಳದ ಚೀಜೊಂದಕ್ಕೆ, ರಕ್ತಸಿಕ್ತ ಪಾದಗಳಲ್ಲಿ. ಕುಣಿತದ ಪರಾಕಾಷ್ಠೆಯಲ್ಲಿರುವಾಗಲೇ ಅಚಾನಕ್ಕಾಗಿ, ಒಮ್ಮೆಲೆ ಕುಣಿತ ಸ್ಥಗಿತಗೊಳ್ಳುತ್ತದೆ, ರೈಲಿನ ಸಿಳ್ಳಿನ ಉಸಿರೊಂದಕ್ಕೆ… ಹಾಡಿನ ಅಂತ್ಯವಾಗುತ್ತದೆ, ಅದರೊಂದಿಗೆ ತಬಲಾ ನಾದ …ತಾಳ…, ಅವಳ ಹೃದಯ ಮಿಡಿತವೂ….ಅದೇ ಅವಳ ಬದುಕಿನ ನಿಶ್ಚಲತೆಯ ಸಂಕೇತವಾಗಿ, ಅಲ್ಲ ಅಲ್ಲ, ….ಹೌದು ಹೌದು ……ಅವಳ ಸಾವಿನ ರೂಪಕವಾಗಿ…..!! ಅದ್ಭುತ ‘ಮೆಟಾಫೊರ್ ‘ರೂಪುಗೊಂಡಿದೆ ಅಲ್ಲಿ.
ಈ ಯಜ್ಞದಲ್ಲಿ, ಈ ತಪ:ದಲ್ಲಿ ಅವಳಿಗೆ ದಾರಿಗೆದುರಾಗಿ ಬಂದ ಒಣಬಯಲಗಾಡುಗಳೆಷ್ಟೊ, ಭಯಂಕರ ಕಾಡುಗಳೆಷ್ಟೊ, ನಿರ್ಜನ ಮರುಭೂಮಿಗಳೆಷ್ಟೋ, ಬುದ್ಧಿಗೆ ಕವಿದ ಮಂಜಿನ ಪದರುಗಳೆಷ್ಟೊ! ಎಲ್ಲವನ್ನೂ ಮೌನವಾಗಿ, ಒಂದೊಂದೇ ದಾಟುತ್ತ, ಪಯಣ ನಡೆದೇ ಇತ್ತು, ಇಂದಲ್ಲ ನಾಳೆ ಚಂದದ ರಾಜಕುಮಾರ ಅಮ್ರೋಹಿ ಮತ್ತೆ ಬಂದು, ‘ಮಂಜು’ ಎಂದು ಹುಡುಕಿ ಬಂದಾನೆಂದು! ಆದರೆ ‘ಚಂದನ್’ ಬಲುದೂರ ತೇಲುತ್ತಿದ್ದ, ಆಗಸದ ಚಂದಿರನಾಗಿದ್ದ. ಅದಕ್ಕಾಗಿಯೇ ಹೀಗೆ ಬರೆದಿದ್ದಾಳೆ ಎಂದು ತೋರುತ್ತದೆ…..ದು:ಖಿತಳಾಗಿ, ಅಲ್ಲಾಹುವಿಗೆ,
ಆಬಲಾಪಾ ಕೋಯೀ ದಶ್ತ್ ಮೇಂ ಆಯಾ ಹೋಗಾ
ವರ್ಣಾ ಆಂಧೀ ಮೇಂ ದಿಯಾ ಕಿಸನೇ ಜಲಾಯಾ ಹೋಗಾ?
( ಸುಟ್ಟಗಾಲಲ್ಲಿ, ವಿನಾಶಗಾಡಿನ ಬರಡಲ್ಲಿ ಬಂದು ಹೋಗಿರಬಹುದು ನೀನು
ಇಲ್ಲದಿರೆ, ಬಿರುಗಾಳಿಯಲ್ಲಿ ದೀಪವಿದನ್ನು ಇನ್ನಾರು ಹಚ್ಚಿರಬಹುದು?)
ಕೇಳುತ್ತಾಳೆ ಮೀನಾಕುಮಾರಿ ಎಂಬ ಅತೃಪ್ತ ಆತ್ಮ. ಅಲ್ಲಾಹುವಿಗೆ, ದೈವಕ್ಕೆ ದೈನ್ಯದಿಂದ ಕಣ್ಣೀರಾಗುತ್ತ.. ಇಂತಹ ಬಿಡುಬೀಸು ಬಿರುಗಾಳಿಯಲ್ಲಿ ಹೊತ್ತಿ ಉರಿಯುತ್ತಿರುವ ದಟ್ಟ ಮರುಭೂಮಿಯಲ್ಲಿ ರೌರವ ತಾಣದಲ್ಲಿ ತಾನು ಜನಿಸಿರಬಹುದೇ ಎಂದು ಕನವರಿಸುತ್ತಾಳೆ. ನನಗೇಕೆ ಈ ಶಿಕ್ಷೆ. ಬಯಸಿದ್ದೊಂದೂ ಕೈಗೂಡದ ಬಯಕೆ, ಯಾವ ದಿಕ್ಕಿಗೂ ದಡಕಾಣದ ನನಗೇಕೆ ಹೀಗೆ, ಕಣ್ಣು ತೆರೆದಾಗಿನಿಂದಲೂ, ಹೃದಯಕ್ಕೆ ಘಾಸಿಗೊಳಿಸುವ, ಬೆನ್ನಿಗಿರಿಯುವ ದಿಶೆ ದಿಕ್ಕು ನನ್ನವು, ಅವೇ ಇರಿಯುವ ಬಾಣಗಳು, ಅದೇಕೆ ಈ ನಿರ್ದಯ!? ಕೇಳುತ್ತಾಳೆ, ಮೀನಾ, ಕಂಬನಿದುಂಬಿದ ಕಣ್ಣುಗಳಲ್ಲಿ ಆರ್ತವಾಗಿ. ಹುಟ್ಟಿಸಿದ ದೇವರಿಗೆ! ಬದುಕಗೊಡದ ಜಗಕ್ಕೆ! ನಮ್ಮನ್ನೇ ಹಾಂ,…. ನಿಮ್ಮನ್ನೇ……!
ಮೀನಾಳ ಹಾಬಿಗಳೂ ಕೂಡ ಅಪರೂಪದವೇ ಇರುತ್ತಿದ್ದವು. ಪಕ್ಕದ ಮನೆಯ ಚಿಗರೆಯಂತಹ ಯುವ ನಾಯಕಿ ರೇಖಾ ಆಗಾಗ ಮೀನಾಕುಮಾರಿ ಮನೆಗೆ ಬರುತ್ತಿದ್ದಳು. ರೇಖಾ ಹೇಳುತ್ತಾಳೆ, ”ತನ್ನ ಮನೆಯಲ್ಲಿ ಅನೇಕ ತರತರದ ಕಲ್ಲುಗಳನ್ನು ಸಂಗ್ರಹಿಸಿಡುತ್ತಿದ್ದಳು, ಶಂಖಗಳನ್ನು, ಕಪ್ಪೆ ಚಿಪ್ಪುಗಳನ್ನು ಸಂಗ್ರಹಿಸಿ ಇಟ್ಟಿದ್ದಳು, ಅಲ್ಬಂವೊಂದರಲ್ಲಿ ಹಳೆಯ ಎಲೆಗಳನ್ನು ಅದರಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವ ಹಾಬಿ ಅವಳಲ್ಲಿ ನೋಡಿದ್ದೆ” ಎನ್ನುತ್ತಾಳೆ ರೇಖಾ. ‘ಬಹುತೇಕ ಭೇಟಿಗಳಲ್ಲಿಯೂ ತನ್ನ ಡೈರಿಯಲ್ಲಿ, ನೋಟ್ಬುಕ್ನಲ್ಲಿ ಶಾಯರಿಗಳನ್ನು ಬರೆಯುತ್ತಿರುವುದನ್ನು ನೋಡುತ್ತಿದ್ದೆ, ಅವುಗಳಲ್ಲಿ ಕೆಲವನ್ನು ನನ್ನ ಮುಂದೆ ಹೇಳುತ್ತಿದ್ದಳು, ಭಾರೀ ಹೈ ಫಂಡಾ ಉರ್ದುವಿನಲ್ಲಿ ರಚಿಸುತ್ತಿದ್ದಳು, ಬಹುತೇಕ ಅವು ನನಗೆ ಬೌನ್ಸರ್ಗಳಾಗುತ್ತಿದ್ದವು, ನನ್ನ ತಲೆಗೆ ಎಟುಕುತ್ತಿರಲಿಲ್ಲ” ಎನ್ನುವಳು ಮುಗುಳುನಗುತ್ತ ರೇಖಾ ಅಂದಿನ ದಿನಗಳ ನೆನೆದು.
ಅನೇಕ ಸಾರಿ ಸೇರಿದಾಗ ಮೀನಾಜಿ ಹೇಳುತ್ತಿದ್ದಳು ರೇಖಾಗೆ, ”ಜನ್ಮಶ: ಹೆಣ್ಣು ಗಂಡಿಗಿಂತ ಹೆಚ್ಚು ಸಹನಶೀಲಳು, ಈ ಆರ್ಟ್ ಎಂಬುದು ಅವಳಿಗೆ ರಕ್ತಗತವಾಗಿ ಬಂದಿದ್ದು,. ಏನೋ ಹೇಳುತ್ತಿದ್ದಳಲ್ಲ, ಹಾಂ, ‘ಜಿಂದಗೀ ಮೇಂ ಅಕೇಲಾ ಚಲ್ನಾ ಪಡತಾ ಹೈ” ಈ ಮಾತು ರೇಖಾಳ ಬದುಕಲ್ಲಿಯೂ ನಿಜವಾಯಿತು. ತನ್ನದೇ ಧಾಟಿಯಲ್ಲಿ ಬದುಕಲ್ಲಿ ಹೆಜ್ಜೆ ಹಾಕಿದರಿಬ್ಬರು, ಆದರೆ ಅದಕ್ಕೆ ಕೊಡಮಾಡಿದ ಬೆಲೆ ಕೂಡ ಅಂಕೆಗೆ ಸಿಗದಷ್ಟು! ……ಅಸಾಮಾನ್ಯರು, ಅಮಾನ್ಯರು, ಮಾನ್ಯರು……ಸಾಮಾನ್ಯರಿಗೆ ನಿಲುಕದ ದೂರದಲ್ಲಿ ಹಲವರಿಗೆ ಕಂಡ ಬಗೆ ಇವರು .
ಬಾಲಿವುಡ್ ಗಲ್ಲಿಗಳಲ್ಲಿ ಕೆಲವು ಕತೆಗಳು ಹರಿದಾಡುತ್ತವೆ ಕಿವಿಯಿಂದ ಕಿವಿಗೆ. ಮೀನಾಳೊಂದಿಗೆ ಧರ್ಮೇಂದ್ರನ ಕತೆಯೂ ಹರಿದಾಡುತ್ತದೆ….. ಈ ಧರ್ಮೇಂದ್ರ ಎಂಬ ಸುಂದರ ತರುಣ ಬಾಲಿವುಡ್ನಲ್ಲಿ ಅವಕಾಶಕ್ಕಾಗಿ ಓಡಾಡುತ್ತಿದ್ದಾಗ ಯಾವುದೋ ಸೆಟ್ನಲ್ಲಿ ಮೀನಾಳ ಕಣ್ಣಿಗೆ ಬಿದ್ದು ಪರಿಚಯವಾಗಿ, ಅವನ ಪ್ರಾಮಾಣಿಕತನ, ಹೃದಯಾತರಾಳದ ಬಣ್ಣವಿಲ್ಲದ ಮಾತುಗಳು ಇವಳನ್ನು ಸೆಳೆಯುತ್ತವೆ. ಗೆಳೆತನ ಗಾಢವಾಗಿ ಅವನನ್ನೇ ತನ್ನೆದುರು ಲೀಡ್ ರೋಲ್ ಗೆ ಶಿಫಾರಸ್ಸು ಮಾಡುತ್ತಿದ್ದಳು. ಅಭಿನಯದ ಟಿಪ್ಸನ್ನೂ ಹೇಳಿಕೊಡುತ್ತಿದ್ದಳು. ಮೈಂ ಭೀ ಲಡಕೀ ಹೂಂ (1964), ಕಾಜಲ್, ಪೂರ್ಣಿಮಾ (1965), ಫೂಲ್ ಔರ್ ಪತ್ಧರ್ (1966), ಚಂದನ್ ಕಾ ಪಲನಾ (1967) ಚಿತ್ರಗಳಲ್ಲಿ ಅಭಿನಯಿಸುವಾಗ ತೀರ ಸಮೀಪವಾದರು. ಇಬ್ಬರೂ ‘ಲ್ಯಾಂಡಮಾರ್ಕ್’ನಲ್ಲಿ ಸಂಧಿಸುತ್ತಿದ್ದರು.
ಮೂರು ವರ್ಷಗಳವರೆಗಿನ ಸ್ನೇಹದ ಒಡನಾಟದಿಂದ ಕ್ರಮೇಣ ಧರ್ಮೇಂದ್ರ ದೂರವಾಗತೊಡಗಿದ. ಸ್ಟಾರ್ ಪಟ್ಟ ಅವನದೀಗ! ಮೀನಾ ಎಂಬ ಮೆಟ್ಟಿಲು ಈಗ ಬೇಕಾಗಿರಲಿಲ್ಲ. ಆದರೂ ಅವನ ಬಗ್ಗೆ ಮೀನಾಳಿಗೆ ಯಾವ ದೂರು ಇರುತ್ತಿರಲಿಲ್ಲ. ಒಂದೊಮ್ಮೆ ‘ಲ್ಯಾಂಡ್ಮಾರ್ಕ’ ನಿಂದ ಮೀನಾಳ ಕೋಣೆಯಿಂದ ಅಳುತ್ತ ಹೊರಬಂದಾಗ ಖುರ್ಷಿದ್ ನೋಡಿ ಕೇಳಿದ್ದಳು, ‘ಇದು ಬಿಟ್ಟು ನಾನೇನೂ ಮಾಡಲಾರೆ’ಎಂದು ಕಣ್ಣೀರಾಗಿದ್ದ.. ಮತ್ತೊಂದು ಕಾರಣವೆಂದರೆ, ತಾನೇ ಬೆಳೆಸಿದ ತನ್ನ ಗರಡಿ ಹುಡುಗ ಧರ್ಮೇಂದ್ರ , ಅವನ ಯಾವುದೇ ಚಿತ್ರ ಹಿಟ್ ಆದರೂ ಇವಳಿಗೆ ಖುಷಿ. ಹೀಗೆ ಅವನ ಬಗ್ಗೆ ಯಾವ ದೂರನ್ನೂ ಮೀನಾ ಹೇಳುತ್ತಿರಲಿಲ್ಲ.
ಧರ್ಮೇಂದ್ರ ಕೂಡ ಮೀನಾಳ ಬಗ್ಗೆ ಎಲ್ಲಿಯೂ ಕೊಚ್ಚಿಕೊಳ್ಳುತ್ತಿರಲಿಲ್ಲ. ಅವನೊಬ್ಬ ಮೌನ ಮಾತುಗಾರ. ಅದೊಮ್ಮೆ ದೆಹಲಿಯಲ್ಲಿ ‘ಕಾಜಲ್’ ಪ್ರೀಮಿಯರ್ ಮುಗಿಸಿ, ಮುಂಬಯಿಗೆ ತೆರಳಲು ಫ್ಲೈಟ್ಗಾಗಿ ಟಿಕೆಟ್ ದೊರಕದಾದಾಗ ನಶೆಯ ಅಮಲಿನಲ್ಲಿ ‘ಅಲ್ಲಿ ಮೀನಾ ಕಾದಿರುತ್ತಾಳೆ, ಅದಕ್ಕೆ ತಾನು ಈಗಲೇ ಹೋಗಬೇಕು’ ಎಂದು ಹಠಹಿಡಿದಿದ್ದ. ಅದೇ ಯಥಾವತ್ತಾಗಿ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮೀನಾ ಅದರ ಬಗ್ಗೆ ಚಕಾರವೆತ್ತಲಿಲ್ಲ. ಬದಲು ಅವನೊಡನೆ ಪಿಕ್ನಿಕ್ಗೆ ಹೋಗಿದ್ದಳು. ಬರುವಾಗ ತನ್ನ ಕಾರಿನಲ್ಲಿ ಧರ್ಮೇಂದ್ರ ಬರದಿದ್ದಾಗ ಆತಂಕಗೊಂಡು ನಡುರಸ್ತೆಯಲ್ಲಿಯೇ ಕಾರು ನಿಲ್ಲಿಸಿ, ಇಳಿದು ಅವನ ಕಾರಿಗಾಗಿ ಕಾದು ನಿಂತಿದ್ದಳು ದಾರಿಯಲ್ಲಿ, ಶಕುಂತಲೆಯಂತೆ ತನ್ನ ದುಶ್ಯಂತನಿಗಾಗಿ. ‘ಕ್ರಶ್’ ಎಂದರೆ ಇದೇ ಇರಬೇಕು. ಅವನೆಂದರೆ ಬಲು ಅಭಿಮಾನ ಕೊನೆವರೆಗೂ ಇತ್ತು. ಕೆಲದಿನಗಳ ಗೆಳೆಯ ಧರ್ಮೇಂದ್ರ ಮತ್ತೊಮ್ಮೆ ಮೀನಾಳ ಕಣ್ಣಲ್ಲಿ ಕನಸುಗಳನ್ನು ಬಿತ್ತಿ ಮರೆಯಾಗಿದ್ದ. ಅದರೆ ಆ ಕನಸುಗಳು ಈಗ ಖಾಲಿಯಾಗಿಬಿಟ್ಟಿದ್ದವು.
ಯೆ ರಾತ ಯೆ ಖಾಮೋಶಿ , ಯೆ ಖ್ವಾಬ್ ಸೆ ನಜಾರೇ,
ಜುಗ್ನು ಹೈ ಯಾ ಜಮೀಂ ಪರ್ ಉತರೇ ಹುಯೇ ಹೈಂ ತಾರೆ,
ಬೇಖ್ವಾಬ್ ಮೇರೀ ಆಂಖೇಂ, ಮದಹೋಶ್ ಹೈ ಜಮಾನಾ
ಈ ರಾತ್ರಿ, ಈ ಮೌನ, ಸ್ವಪ್ನದಂತಹ ನೋಟವು
ಸುರಹೊನ್ನೆಗಳೋ ಇಲ್ಲಾ ಧರೆಗಿಳಿದಿಹವೊ ತಾರೆ
ಕನಸಿಲ್ಲದ ಖಾಲಿ ಕಂಗಳು, ಅಮಲೇರಿದ ಈ ಮಾಹೋಲಿನಲ್ಲಿ
ತನ್ನ ಜೀವನದ ಏಕಾಂತದ, ದು:ಖದ ಗಳಿಗೆಗಳನ್ನು, ಉದಾಸ ಭಾವಗಳ ಕ್ಷಣಗಳನ್ನು ಹುಬಹು ಹಿಡಿದಿಡುವ ಕಲೆ ಅವಳಿಗೆ ಹುಟ್ಟಿನಿಂದಲೇ ಕರಗತ. ಅದು ನಟನೆಯಾಗಿರಲಿಲ್ಲ. ಅದು ಅವಳ ನಿತ್ಯದ ಸಹಜ ನಿಜ ಬದುಕು. ಅದಕ್ಕೆ ಅವಳಿಗೆ ಸೆಲ್ಯೂಲಾಯ್ಡ್ನಲ್ಲಿ ಟ್ರ್ಯಾಜೆಡಿ ಕ್ವೀನ್ ಇಷ್ಟ….. ಹೊರಗೂ ಕೂಡ ಅದುವೇ ಪಟ್ಟ. ಅವಳು ನೋವನ್ನೂ ಪ್ರೀತಿಸುತ್ತಿದ್ದಳು!, ಬಾಲ್ಯದಿಂದಲೂ ಅವುಗಳನ್ನೇ ಉಂಡು ಅಭ್ಯಾಸವಾಗಿತ್ತಲ್ಲವೇ ಮೀನಾಗೆ, ಅವನೆಲ್ಲಾ ತನ್ನ ಹೃದಯದ ಕೋಟೆಯೊಳಗೆ ಜತನವಾಗಿ ಕಾಪಿಟ್ಟು, ಅದೇ ನೋವಿನ ಭಾವ ತೀವ್ರತೆಯಲ್ಲಿ ನಟಿಸುತ್ತಿದ್ದಳು, ಅವಳ ಶಾಯರಿಗಳಲ್ಲಿ ಭಾವಗಳು ಅಕ್ಷರಗಳಾಗಿ ಅರಳುತ್ತಿದ್ದವು, ಅದೇ ಭಾವ ಕ್ಯಾಮರಾ ಮುಂದೆ ದೃಶ್ಯಗಳಾಗಿ….ಏಕಾಂತ, ಶರಾಬು ಮತ್ತು ಶಾಯರಿಗಳು ಒಬ್ಬರಿಗೊಬ್ಬರು ಗಂಟುಬಿದ್ದ ಗೆಳೆಯರಾಗಿದ್ದರಲ್ಲ. ಬಿಟ್ಟಿರಲು ಯಾರೂ ತಯಾರಿಲ್ಲ. ಬಿಡುವ ಮನಸೂ ಇಲ್ಲ.
ಆ ದಿನದ ಈದ್ನ ಕರಾಳ ರಾತ್ರಿಯಲ್ಲಿ ಅಮ್ರೋಹಿಯ ಬಾಗಿಲು ತೊರೆದು ಹೊರಕ್ಕೆ ಹೆಜ್ಜೆ ಹಾಕಿದ ಮೇಲೆ, ಜುಹುವಿನ ಕಾರ್ಟರ್ ರಸ್ತೆಯ ಒಂಟಿ ಕಾಡಿನಂತಿದ್ದ ಸ್ಥಳದಲ್ಲಿದ್ದ ಅಪಾರ್ಟಮೆಂಟ್ ‘ದಿ ಲ್ಯಾಂಡ್ಮಾರ್ಕ’ ನಲ್ಲಿ ಏಕಾಂತ ವಾಸಕ್ಕೆ ಹೊಂದಿಕೊಳ್ಳತೊಡಗಿದ್ದಳು ಮೀನಾ.. ಮತ್ತೆ ಅಮ್ರೋಹಿಯ ಸೆಳೆತಗಳು ಅಯಸ್ಕಾಂತದಂತೆ ಸೆಳೆದುಕೊಂಡು, ಅವನಿಗಾಗಿ ಪರಿತಪಿಸುತ್ತಿದ್ದವು, ವಿರಹದ ಅಲೆಗಳು ಅಪ್ಪಳಿಸಿ, ಒಂಟಿ ಜೀವದ ಬರಿದಾದ ಹೃದಯ ಮಿಡಿತಗಳಲ್ಲಿ….ಕರಗುತ್ತಿದ್ದವು, …ಆದರೂ ತನ್ನ ಅಮ್ರೋಹಿಯನ್ನೇ ನೆನೆಯುತ್ತಿತ್ತು ಮನಸ್ಸೆಂಬ ಮನಸ್ಸು. ಕೈಲಿ ಜಾಮು ಹಿಡಿದು ನಿಂತಳೆಂದರೆ ಕಣ್ಣಮುಂದೆ ಅವನೇ ಕಾಣುತ್ತಿದ್ದ, ಮಧುವಲ್ಲಿ ಅವನ ಬಿಂಬ ಅವಳೊಂದಿಗೆ ಮಾತನಾಡುತ್ತಿತ್ತು. ಅವನಿಗೆ ಹಾಡಿ ಹರಸುತ್ತಿತ್ತು ಅವಳ ಹೃದಯ, ಅವನಿಗಾಗಿ ತುಡಿಯುತ್ತಿತ್ತು, ಅವನನ್ನೇ ಮಿಡಿಯುತ್ತಿತ್ತು, ……ಎಂತಹ ಅದೃಷ್ಟವಂತ ಅಮ್ರೋಹಿ ಎಂಬ ಕಮಾಲ್!
ಸೂರಜ್ ಕಹೀಂ ಭೀ ಜಾಯೆ, ತುಮ್ ಪರ್ ನ ಧೂಪ್ ಆಯೆ
ತುಮ್ಕೊ ಪುಕಾರತೇ ಹೈಂ ಇನ್ ಗೇಸುವೋಂ ಕೆ ಸಾಯೆ
ಆಜಾವೋ ಮೈಂ ಬನಾದೂಂ, ಪಲಕೋಂ ಕಾ ಶಾಮಿಯಾನಾ
ರವಿ ಎತ್ತ ಹೋದರೂ, ತಾಗದಿರಲಿ ನಿನಗೆ ಬಿಸಿಲು
ಕರೆಯುತಿದೆ ನಿನಗೆ, ಈ ಹೆರಳಿನ ದಟ್ಟ ನೆರಳು
ಬಾ ಇನಿಯಾ ಕಟ್ಟುವೆನು, ರೆಪ್ಪೆಗಳ ತೋರಣ
ಒಂಟಿ ಬದುಕಿನಲ್ಲಿ ಅಮ್ರೋಹಿಗಾಗಿ ಕಾಯುತ್ತ ಅವನ ದಾರಿಯೆಡೆಗೆ ದೃಷ್ಟಿ ನೆಟ್ಟು ನಿಂತೇ ಇದ್ದಳು, ಬಾಲ್ಕಣಿಯಲ್ಲಿ , ಅವನು ಬಂದಾನೆಂದೇ ನೋಡುತ್ತಿದ್ದಳು ಹೊರಗಿಣಿಕಿ, ದೂರ ದೂರದವೆರಗೂ ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ! ಆದರೆ ಕಮಾಲ್, ಬರಲಿಲ್ಲ, ಇವಳು ದಾರಿಯನ್ನು ನೋಡುವುದು ಕೊನೆಯವರೆಗೂ ನಿಲ್ಲಿಸಲಿಲ್ಲ. ದೇವನಿಗೂ ಈ ಭೇಟಿಗೆ ಬೇಡುತ್ತಿದ್ದಳು, ಸಣ್ಣ ಪವಾಡವೊಂದನ್ನು ಮಾಡಲು. ಆದರೆ ಯಾರ ಕಿವಿಗೂ, ಹೃದಯಕ್ಕೂ ಅದು ಕೇಳುತ್ತಿರಲಿಲ್ಲ, ತಲುಪುತ್ತಿರಲಿಲ್ಲ, ಅಷ್ಟು ಎತ್ತರದಲ್ಲಿದ್ದಳೇ? ನಿಲುಕಲಾರದ ನೆಲೆಯಲ್ಲಿದ್ದಳು ಸಾಮಾನ್ಯರಿಗೆ! ರೌರವ ರಾತ್ರಿಗಳಲ್ಲಿ ಹಾಡಿಕೊಳ್ಳುವಳು ತನ್ನದೇ ಚಿತ್ರದ ಹಾಡುಗಳನ್ನು, ಗುಣಿಗುಣಿಸುತ್ತ, ಪಂಜರದಂತಹ ಮನೆಯಲ್ಲಿ ಖುದ್ದು ಬಂಧಿಯಾಗಿ,……
‘ಸಾಂಸೋಂ ಮೆಂ ಛುಪೀ ರಾಝ್ ಕಿಸೆ ಪೇಶ ಕರೂಂ,
ನರ್ಮ್ ಹೋಟೊಂ ಮೇಂ ದಬೀ ಬಾತ್ ಕಿಸೆ ಪೇಶ್ ಕರೂಂ’
‘ಹಮ್ ಇಂತಜಾರ್ ಕರೇಂಗೆ ತೇರಾ ಕಯಾಮತ್ ತಕ್,
ಖುದಾ ಕರೇಂ ಖಯಾಮತ್ ಹೋ ಔರ್ ತೂ ಆಯೆ’.
ಆದರೆ ಆ ‘ಕಯಾಮತ್ ‘ (ಪವಾಡ) ಜರುಗಲೇ ಇಲ್ಲ. ‘ಚಂದನ್’ ಎಲ್ಲೂ ಕಾಣುತ್ತಿರಲಿಲ್ಲ. ಆದರೆ ಕಾಣುತ್ತಿದ್ದುದು ಮುಚ್ಚಿದ ಕಣ್ಣುಗಳ ಮುಂದೆ ಮಾತ್ರ,… ತೆರೆದಾಗ ಮಾತ್ರ ಬರೀ ಶೂನ್ಯವೇ! ಅವನ ಮನೆಯ ದಿಕ್ಕಿನಿಂದ ಬರುವ ಆ ತಂಗಾಳಿಯನ್ನೇ ಹಿಡಿದು ಚುಂಬಿಸಿ, ಅವನಿಗೆ ಮೇಘ ಸಂದೇಶ ನೀಡುವುದೆಂದರೆ, ಅಪರಿಮಿತ ಆನಂದದ ಹುಚ್ಚು ಗಳಿಗೆ ಅವಳಿಗೆ!
ಮತ್ತೆ ಮತ್ತೊಂದು ರಾತ್ರಿಯ ಏಕಾಂತದಲ್ಲಿ ಚಂದ್ರನ ಆಗಮನದೊಂದಿಗೆ, ಹೊಳೆವ, ಮಿಣುಗುವ ಚುಕ್ಕೆಗಳ ಸಾಥ್ ಇವಳಿಗೆ, ಅಮ್ರೋಹಿ ಅಲ್ಲೆಲ್ಲಾದರೂ ಕಾಣುವನೋ ಎಂದು ಅವುಗಳೂ ಕೂಡ ತಮ್ಮ ಮಿಣುಗುಗಣ್ಣುಗಳನ್ನು ಕಿರಿದುಮಾಡಿ, ಸೋತು ನಿದ್ದೆಗೆ ಜಾರುತ್ತಿದ್ದವು, ಅಸಹಾಯಕ ತಾರೆಗಳು. ಸುತ್ತಲೂ ನಿಶ್ಯಬ್ದಗಳಲ್ಲಿ, ಸುದ್ದಿ ಹೊತ್ತು ತರುವ ಒಣಗಾಳಿ, ಹೇಳುತ್ತಿತ್ತು, ಅವನೆಲ್ಲೂ ಕಾಣುತ್ತಿಲ್ಲ ಇಲ್ಲೆಲ್ಲೂ, ಅವನು ಬರಲಿಲ್ಲ. ನೀನು ಮಲಗು, ಎಂದು ಅವಳನ್ನು ಆವರಿಸಿ ಮಲಗಿಸುತ್ತಿತ್ತು, ನಿತ್ಯದಂತೆ ತಂಗಾಳಿ. ಆದರೂ ಕರೆಯುತ್ತಿತ್ತು ಅವಳ ಮನ ಮತ್ತೆ ಮತ್ತೆ….
ಮೌಸಮ್ ಹೈ ಆಶಿಕಾನಾ
ಯೆ ದಿಲ್ ಕಹೀಂ ಸೆ ಉನ್ಕೊ ಐಸೆ ಮೇಂ ಢೂಂಢ್ ಲಾನಾ
ಕಹನಾ ಕೆ ರುತ್ ಜವಾಂ ಹೈ ಔರ್ ಹಮ್ ತರಸ್ ರಹೇ ಹೈಂ
ಕಾಲಿ ಘಟಾ ಕೆ ಸಾಯೆ ಬಿರಹನ್ ಕೊ ಡಸ್ ರಹೇ ಹೈ
ಡರ್ ಹೈ ನಾ ಮಾರ ಡಾಲೆ, ಸಾವನ್ ಕಾ ಕ್ಯಾ ಠಿಕಾನಾ
ಪ್ರಣಯಮತ್ತ ಹೊತ್ತಿದು
ಎಲೆ ಮನಸೆ ಅವನೀ ಜಗಕೆ ಹೇಗಾದರೂ ಹುಡುಕಿತಾರೆ
ಹೇಳವಗೆ, ತಾರುಣ್ಯದಲಿದೆ ಕಾಲ, ವಿರಹ ಬುಗ್ಗೆಯಲಿಹೆ ನಾನು
ಕಾರ್ಮೋಡದಾ ನೆರಳು ವಿರಹಿಣಿಗೆ ಕುಟುಕುತಿಹುದು
ಸಾಯುವ ಭೀತಿ ಒಳಗೆ, ಭರವಸೆ ಇದೆಯೆ ಮಳೆಗೆ
….ಅನಾಥಭಾವದಲ್ಲಿ ಹೊರಹೊಮ್ಮುತ್ತಿದ್ದ, ಶಾಯರಿಗಳ ಒಂದೊಂದು ಶಬ್ದವನ್ನು ಹೊರಹಾಕುತ್ತಿತ್ತು ಒಳ ಶರಾಬು, ಅರೆ ಎಚ್ಚರದ ಬದುಕಿನಲ್ಲಿ, ರಜನಿಯ ಬೆಳದಿಂಗಳುಗಳಲ್ಲಿ, ಹೊಟ್ಟೆಯೆಂಬುದು ಗರ್ಭ ಕಳೆದುಕೊಂಡ ಮಧುಬಟ್ಟಲು ಈಗ. ಎದೆಯಂಬುದು ಕಮ್ಮಾರನ ಕುಲುಮೆ. ಇದೇ ಮಂಥನದಲ್ಲಿ ಶಾಯರಿಗಳು ತನ್ನ ಕನಸಿನ ‘ಚಂದನ್’ ಎಂಬ ‘ಅಮ್ರೋಹಿ’ ಗಾಗಿ ಮೂಡುತ್ತಿದ್ದವು…..ಸ್ಥಬ್ಧ ಗಳಿಗೆಗಳಲ್ಲಿ, ಬಿರುಗಾಳಿಗೆ ಸಿಕ್ಕ ಹೃದಯದ ದೋಣಿಯಲ್ಲಿ ಅರಚುತ್ತಿದ್ದಳು. ಒಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರೂ, ಹೊರಗೆ ನಿಶ್ಯಬ್ದವಾಗಿರುತ್ತಿದ್ದಳು, ಬಾಲ್ಕನಿಯಲ್ಲಿ ನಿಂತು ನೆಟ್ಟ ನೋಟದಲ್ಲಿ ನಿಶ್ಚಲ ಚಂದಿರನನ್ನು ನೋಡುತ್ತ, ಕೈಯಲ್ಲಿರುವ ಗೆಳೆಯನಂತಿರುವ ಜಾಮಿನಲ್ಲಿ ಇನ್ನಷ್ಟು, ಇನ್ನಷ್ಟು , ಇನ್ನಷ್ಟು ……
”ಯೆ ರಾತ್ ಯೆ ತನ್ಹಾಯಿ ಯೆ ದಿಲ್ ಕಿ ಧಡಕನೇ ಕಿ ಆವಾಜ್,
ಯೆ ಸನ್ನಾಟಾ, ಯೆ ಡೂಬತೇ ತಾರೋಂಕಿ ಖಾಮೋಶ್ ಗಜಲ್ ಸಾಯೇ,
ಯೆ ವಕ್ತ್ ಕಿ ಪಲಕೋಂ ಪರ್ ಸೋತಿ ಹುಯಿ ವೀರಾನೇ,
ಜಜ್ಬಾತೇ ಮೊಹಬ್ಬತ್ ಕಿ ಯೆ ಆಖರೀ ಅಂಗಡಾಯಿ,
ಬಜತೀ ಹುಯೀ ಹರ್ಜಾಯೆ ಯೆ ಮೌತ್ ಕೆ ಶಹನಾಯೆ,
ಸಬ್ ತುಮ್ ಕೊ, ತುಮ್ ಕೊ ಬುಲಾತೇ ಹೈಂ,
ಪಲ್ ಭರ್ ಕೊ ತುಮ್ ಆಜಾವೊ,
ವಕ್ತ್ ಸೋತಿ ಹುಯೀ ಮೇರೀ ಆಂಖೋ ಮೇಂ
ಮೊಹಬ್ಬತ್ ಕಾ ಇಕ್ ಖ್ವಾಬ್ ಸಜಾ ಜಾವೋ..
ಈ ರಾತ್ರಿ ಈ ಏಕಾಂತ ಈ ಎದೆಮಿಡಿತದ ಸದ್ದು
ಈ ನಿರ್ಮಾನ, ಈ ಮುಳುಗುವ ತಾರೆಗಳ ನಿಶ್ಯಬ್ದ ಹಾಡಿನ ಮಾರ್ದನಿ
ಈ ಕಾಲನ ರೆಪ್ಪೆಗಳ ಮೇಲೆ ಮಲಗುವ ನಿರ್ಗತಿ,
ಭಾವದಲದ್ದಿದ ಪ್ರೀತಿಗೆ ಕೊನೆ ಹೇಳಿದ ಆಕಳಿಕೆ
ಧಿಮಿಗಿಡುವ ಅಲೆಮಾರಿಯ ಸಾವಿನ ಶಹನಾಯಿ
ಎಲ್ಲವೂ ಕರೆಯುತಿವೆ ನಿನಗೆ, ಹೌದು ನಿನಗೆ
ಕ್ಷಣವಾದರೂ ನೀ ಬಂದು ಹೋಗು
ಹೇ, ಕಾಲನೇ, ಕೋರುವೆನು, ಈ ಕಣ್ಣಲ್ಲಿ ಅರೆಗಳಿಗೆ ನಿದ್ರಿಸಿ
ಪ್ರೀತಿಯ ಒಂದೇ ಒಂದು ಕನಸನ್ನು ಅಂಕುರಿಸಿ ಹೋಗು!
ದಿನಗಳು ಹೀಗೆ ಉರುಳುತ್ತಿದ್ದವು, ಕೆಲವೊಮ್ಮೆ ನಿಂತು ನಿಂತು ತೆವಳುತ್ತಿದ್ದವು, ಕೆಲವೊಮ್ಮೆ ಕ್ಷಣಗಳಾಗಿ ನಡೆದರೆ, ಇನ್ನೊಮ್ಮೆ ದಾಪುಗಾಲಿನ ದಿನಗಳ ಹೆಜ್ಜೆಗಳಲ್ಲಿ ಉರುಳುತ್ತಿದ್ದವು. ಗೆಳೆಯರನೇಕರು ಬರುತ್ತಿದ್ದರು, ಬಂದವರು ನಿಲ್ಲದೇ ಹೋಗುತ್ತಿದ್ದರು, ಕೊನೆಗುಳಿಯುವವರು ತಾನು, ತನ್ನ ಜಾಮಷ್ಟೆ!
ಇಬ್ಬರ ಅಗಲುವಿಕೆಯಿಂದ ಅನಾಥವಾದದ್ದು ‘ಪಾಕೀಜಾ’ ಎಂಬ ದೃಶ್ಯಕಾವ್ಯ. ಅದು ಇಬ್ಬರದೂ ಕನಸು. ಪಾಕೀಜಾ ಅರೆಜೀವ ಹಿಡಿದು, ಅರ್ಧಮರ್ಧವಾಗಿ ಪೆಟ್ಟಿಗೆಯಲ್ಲಿಯೇ ಕೊಳೆಯತೊಡಗಿತ್ತು. ಅದೊಮ್ಮೆ ಈ ಚಿತ್ರದ ಕೆಲ ರೀಲುಗಳನ್ನು ನೋಡಿದ ಸುನೀಲದತ್ತ ನರ್ಗೀಸ್ ಗರಬಡಿದಂತಾದರು. ಓಹೋ! ಅಪೂರ್ವ ಕೊಹಿನೂರ್ ವಜ್ರವಿದು. ಇದಕ್ಕೆ ಬೆಳಕು ನೀಡಲೇಬೇಕು. ಭಾರತೀಯ ಸಿನೆ ಲೋಕ ಕಂಡರಿಯದ ಚಿತ್ರವೊಂದು ಈ ರೀತಿ ಡಬ್ಬದಲ್ಲಿ ಕೊಳೆಯಬಾರದೆಂದು, ಆಪ್ತಗೆಳೆಯರಾದ ಸುನೀಲದತ್, ನರ್ಗೀಸ್, ಖಯ್ಯಾಮ್ ಹಾಗೂ ಖಯ್ಯಾಮ್ ಹೆಂಡತಿಯಾದ ಗಾಯಕಿ ಜಗಜಿತ್ ಕೌರ್ ಎಲ್ಲ ಸೇರಿ, ಅದಾಗಲೇ ಪರಸ್ಪರ ದೂರವಾಗಿದ್ದ, ಅಮ್ರೋಹಿ ಹಾಗೂ ಮೀನಾಳನ್ನು ಸಂಧಿಸಿ, ‘ಪಾಕೀಜಾ’ ಎಂಬ ಅದ್ಭುತ ಕಾವ್ಯದ ಚಿತ್ರವನ್ನು ಮುಗಿಸಲು ವಿನಂತಿಸಿಕೊಂಡರು. ಅಂದು ಅವರಿಬ್ಬರು ಸಂಧಿಸಿದ ಗಳಿಗೆಗಳಲ್ಲಿ ಮಾತುಗಳೇ ಇಲ್ಲದೇ ಕಣ್ಣಿರೇ ಹೆಚ್ಚು ಹರಿದದ್ದು ಇತಿಹಾಸ.
ಅಮ್ರೋಹಿ ಮರಳಿ ಮನೆಗೆ ಬಂದ ಮೇಲೆ ತನ್ನ ‘ಮಂಜು’ ಗೆ ಒಂದು ಪತ್ರ ಬರೆದ. ಪ್ರಿಯ ಮಂಜು, ನಿನ್ನ ಚಂದನ್ನ ಸಲಾಮ್. ನಾವಿಬ್ಬರೂ ಈಗ ನಿನ್ನದೇ ‘ಪಾಕೀಜಾ’ ಮುಗಿಸೋಣ. ಅದರಲ್ಲಿ ಅನೇಕ ಸಂಸಾರಗಳ ಜೀವಮಾನವಿಡೀ ದುಡಿದ ಬೆವರಿದೆ. ನಿನ್ನದೂ, ನನ್ನದೂ ಕೂಡ. ನಮ್ಮೊಡನೆ ಅವರೆಲ್ಲರ ನಸೀಬು ಪಣಕ್ಕೊಡ್ಡಿದೆ. ಪಾಕೀಜಾಕ್ಕೆ ಬೆಳಕೆಂಬ ಮುಕ್ತಿ ನಿನ್ನಿಂದ ಮಾತ್ರ ಸಾಧ್ಯ. ಹಿಂದೊಮ್ಮೆ ನೀನು ಹೇಳಿದ್ದೆ. ” ‘ಚಂದನ್’ ನೀನು ನನಗೆ ತಲಾಖ್ ನೀಡಿದರೆ ಮಾತ್ರ ನಾನು ಪಾಕೀಜಾ ಮಾಡುವೆ”, ಆಗ ನಾನು ನಿನ್ನ ಬೇಡಿಕೆಯನ್ನು ತಿರಸ್ಕರಿಸಿದ್ದೆ. ಆದರೆ ಈಗ ನಿನ್ನ ಮುಂದೆ ಕೈಯೊಡ್ಡಿ ಬೇಡುತ್ತ, ”ಇದೋ ನಿನಗೆ ತಲಾಖ್ ನೀಡಿ, ನಿನ್ನನ್ನು ಮುಕ್ತಗೊಳಿಸಿದ್ದೇನೆ. ನೀನು ನಿನ್ನದೇ ‘ಪಾಕೀಜಾ’ ವನ್ನು ನನಗಾಗಿ ದಯಮಾಡಿ ಮುಗಿಸಿಕೊಡು”. ಎಂದು ದೈನ್ಯವಾಗಿ ಬೇಡಿದ್ದ, ಮೀನಾ ಕೇಳಿದಾಗಲೇ ‘ತಲಾಖ್’ ಕೊಟ್ಟಿದ್ದರೆ ಮೀನಾಳ ಬದುಕು ದುರಂತವಾಗುತ್ತಿರಲಿಲ್ಲ ಎನ್ನುವ ವಾದವಿದೆ.
ಆದರೆ ಮುದ್ದಾಂ ಅವಳ ಮೇಲಿನ ಪ್ರೀತಿ ದ್ವೇಷವಾಗಿ ತಿರುಗಿದ್ದ ಯೌವ್ವನದ ಹಠದ ಸಂದರ್ಭದಲ್ಲಿ ಅಮ್ರೋಹಿ ತಲಾಖ್ಗೆ ಒಪ್ಪಿರಲಿಲ್ಲ. ಅವಳು ಇನ್ನೊಬ್ಬರ ಪಾಲಾಗುವುದು ಅವನಿಗೆ ಬೇಕಿರಲಿಲ್ಲ. ಅಷ್ಟೊಂದು ‘ಪೊಸೆಸಿವ್’ ಅವಳೆಡೆಗೆ! ಎಂದೆಂದಿಗೂ ಮೀನಾ ನನ್ನವಳೇ ಎಂಬ ಹಠದ ನಿಲುವು ಅಮ್ರೋಹಿಯದು. ಆದರೆ ಈಗ ಈ ಹೊತ್ತಿನಲ್ಲಿ, ಎಲ್ಲ ಮುಗಿದಾದ ಮೇಲೆ, ಅಂಕದ ಪರದೆ ಬೀಳುವ ಸಮಯದಲ್ಲಿ ಅಮ್ರೋಹಿಯ ತಲಾಖ್ ಈಗ ಅವಳಿಗೆ ಬೇಕಾಗಿಯೂ ಇರಲಿಲ್ಲ. ಪಯಣದ ಅಂತಿಮ ಚರಣದಲ್ಲಿ ತಾನಿರುವೆ ಎಂದು ಮೀನಾಗೆ ಆಗಲೇ ಗೊತ್ತಾಗಿ ಬಿಟ್ಟಿತ್ತು. ಅದಾಗಲೇ ಲಂಡನ್ನ ವೈದ್ಯರು ಅವಳ ಲಿವರ್ ಸಿರೋಸಿಸ್ನ್ನು ಗುಣಪಡಿಸಿ, ಮರಳಿ ಬಿಡುಗಡೆಗೊಳಿಸುವಾಗ ಹೇಳಿದ್ದರು.. ”ಇನ್ನೊಮ್ಮೆ ಕುಡಿದರೆ ನೀನು ಸಾಯುತ್ತಿ,” ಆದರೆ ಮೀನಾ ಕುಡಿತ ಬಿಡಲಿಲ್ಲವೋ ಅಥವಾ ಮಧು ಬಿಟ್ಟಿರಲಾರದಷ್ಟು ಅವಳನ್ನು ಆವರಿಸಿಕೊಂಡಿತ್ತೋ, ಮೀನಾಗೆ ಗೊತ್ತು!
ಅಂದು ತಾವೆಲ್ಲ ಕೂಡಿದಾಗ ಅಮ್ರೋಹಿ ಸುಮ್ಮನೆ ಟೋಕನ್ ರೂಪದಲ್ಲಿ ಚಿನ್ನದ ನಾಣ್ಯವೊಂದನ್ನು ಮೀನಾಗೆ ನೀಡಿದ್ದು, ಚಿತ್ರದ ಮುಂದುವರಿಕೆಯ ಸಂಕೇತವಾಗಿತ್ತು. ಸಿಹಿಯೊಂದನ್ನು ತನ್ನ ಕೈಯಾರೆ ಮೀನಾಗೆ ತಿನ್ನಿಸಿದ ಪ್ರೀತಿಯಿಂದ. ಮಾತಿಗಿಂತ ಹೆಚ್ಚು ಕಣ್ಣೀರೇ ಹೆಚ್ಚು ಹರಿದಿತ್ತು. ತನ್ನ ಬದುಕನ್ನು ಕಡೆಗಣಿಸಿದ ಅಮ್ರೋಹಿಯನ್ನು ಕ್ಷಮಿಸಿದ್ದಳು ಮೀನಾ, ಹಿರಿಯರ ಅಣತಿಗೆ ಕಟ್ಟುಬಿದ್ದು. ಅದೇನೋ ನಿಟ್ಟುಸಿರು ಎಲ್ಲರಿಗೂ. ಸಮಸ್ಯೆಯೊಂದು ಇಷ್ಟು ಸರಳವಾಗಿ ಬಗೆಹರಿಯಿತಲ್ಲ ಎಂದು. ‘ಆದರೆ ಈಗಾಗಲೇ ಸಾಕಷ್ಟು ವರ್ಷ ಕಳೆದಿದೆ ಪಾಕೀಜಾ ಸೆಟ್ಟೇರಿ, ತಾನು ಮೊದಲಿನಂತೆ ಕಾಣುವೆನೆ? ಈ ಸಿರೋಸಿಸ್ ತನಗೆ ಕುಣಿಯಲು ಬಿಡಲು ಸಾಧ್ಯವೇ?’ ಆತಂಕಗಳು ತುಂಬಿದ್ದವು ಮೀನಾಳಲ್ಲಿ. ಮೀನಾಗೆ ತನ್ನ ಆರೋಗ್ಯದ ಮೇಲೆ ತನಗೇ ನಂಬಿಕೆ ಕಳೆದುಬಿಟ್ಟಿತ್ತು. ಎಲ್ಲವನ್ನೂ ತೂಗಿಸುವುದಾಗಿ, ಅವಳನ್ನು ಮೊದಲಿನಂತೆಯೇ ಸುಂದರವಾಗಿಯೇ ತೋರಿಸುವುದಾಗಿ ಎಲ್ಲರೆದುರಿಗೆ ಮಾತು ಕೊಟ್ಟ ಅಮ್ರೋಹಿ. ಸಾಕಷ್ಟು ಹೆಚ್ಚಿನ ಚಿತ್ರೀಕರಣದ ತುಣುಕುಗಳಿವೆ. ಎಡಿಟಿಂಗ್ಗೆ ಸಾಕಾಗುತ್ತವೆ ಎಂದು ಹೇಳಿ ಮೀನಾಳನ್ನು ಸಮಾಧಾನಿಸಿದ.
ಇದರಿಂದ ಮತ್ತೆ ಚಿತ್ರಕ್ಕೆ ಚಾಲನೆ ನೀಡಿ,ತನ್ನ ತೀವ್ರ ಅನಾರೋಗ್ಯದ ಸಂದರ್ಭದಲ್ಲಿಯೂ ಚಿತ್ರದ ಗತಿಗೆ ತೊಂದರೆಯಾಗದಂತೆ ತನ್ನ ಕಾರ್ಯವನ್ನು ಅದ್ಭುತವಾಗಿ ನಿರ್ವಹಿಸಿದ ಮೀನಾಗೆ ಸಲಾಮ್ ಹೇಳಲೇಬೇಕು. ಎದ್ದು ಕುಳಿತುಕೊಳ್ಳಲೂ ಆಗದಾದಾಗ, ಪಲ್ಲಂಗದ ಮೇಲೆ ಮಲಗಿಸಿ, ಡಾಯಲಾಗ್ಗಳನ್ನು ಬದಲಿಸಿ, ಟೇಕ್ ತೆಗೆದುಕೊಂಡ ಕಮಾಲ್. ಅದೆಂದೋ ಅವಳಿಗೆ ತನ್ನ ಅಂತ್ಯದ ಅರಿವಾಗಿತ್ತು. ತಾನಿನ್ನು ಹೆಚ್ಚು ದಿನ ಬದುಕಿರಲಾರೆನೆಂಬ ಸತ್ಯ ಅವಳಿಗೀಗಾಲೇ ಗೊತ್ತಾಗಿಬಿಟ್ಟಿತ್ತು, ಅದು ಲಿವರ್ ಸಿರೋಸಿಸ್, ಬದುಕುವ ಸಾಧ್ಯತೆಯೇ ಇಲ್ಲವೆನ್ನುವುದು ಗೊತ್ತಿದ್ದೇ ಚಿತ್ರದಲ್ಲಿ ನಟಿಸಿದ ಮೀನಾಳ ಆತ್ಮಸ್ಥೈರ್ಯವನ್ನು ಏನೆಂದು ಕರೆಯೋಣ. ಭಾರತೀಯ ಚಿತ್ರ ಜಗತ್ತಿಗೆ ಇಂತಹದೊಂದು ಅಪೂರ್ವ ಚಿತ್ರವನ್ನು ಕೊಡುಗೆಯಾಗಿ ನೀಡಿದ ಅವಳಿಗಾಗಿ ಅಭಿಮಾನ ಪಡುತ್ತದೆ ಮನಸ್ಸು. ಮೊದಲು ಕಪ್ಪು ಬಿಳುಪಿನ ಸಿನಿಮಾ ನಂತರ ಕಲರ್ನಲ್ಲಿ ಪರಿವರ್ತಿಸಲಾಯಿತು. ನಂತರ ಸಿನಿಮಾ ಸ್ಕೋಪ್ ಬಂತು, ಅದನ್ನೂ ಮಾಡಿಕೊಳ್ಳಲಾಯಿತು.
ಅತ್ಯುತ್ತಮವಾದುದನ್ನು, ಹಿಂದೆಂದೂ ಯಾರೂ ಕೊಡಲಾರದ್ದನ್ನು ನೀಡಲು ಹೊರಟಿದ್ದನಲ್ಲವೇ ಅಮ್ರೋಹಿ. ಹೀಗಾಗಿ ಎಲ್ಲ ರೀತಿಯಿಂದ ತಯಾರಾಗಿ, ಅಂತಿಮವಾಗಿ 16 ವರ್ಷಗಳ ನಂತರ ಚಿತ್ರದ ಪ್ರೀಮಿಯಂ ಶೋಗೆ ಎಲ್ಲವೂ ವ್ಯವಸ್ಥೆಯಾಯಿತು. …..ಥೇಟರಿನಲ್ಲಿ. ಅಲ್ಲಿ ಮೀನಾ ಹಾಗೂ ಚಂದನ್ ಕೂಡಿಯೇ ಎರಡನೇ ಸಾಲಿನಲ್ಲಿ ಕುಳಿತಿದ್ದರು. ಅವರ ಮುಂದೆ ಖಯಾಮ್ ಹಾಗೂ ಜಗಜಿತ್ಕೌರ್ ಕುಳಿತಿದ್ದರು,, ಜಗಜಿತ್ ನೆನಪಿಸಿಕೊಳ್ಳುತ್ತಾರೆ. ಎಲ್ಲೆಲ್ಲಿ ಮೀನಾಳ ದೃಶ್ಯಗಳು ಬಂದು ಅವಳ ಅದ್ಭುತ ನಟನೆ ಮೆಚ್ಚಿದ ಚಂದನ್, ಮಂಜೂ ಎನ್ನುತ್ತಿದ್ದ, ಎಷ್ಟೊಂದು ಚನ್ನಾಗಿ ಅಭಿನಯಿಸಿರುವೆ. ಎಂದು ಪ್ರಶಂಸಿಸುತ್ತಿದ್ದ, ಬೇರೆ ಸೀನ್ಗಳಲ್ಲಿ ಮೆಚ್ಚಿದ ಕಲಾವಂತಿಕೆಯನ್ನು, ನಿರ್ದೇಶನ ಮೆಚ್ಚಿ ‘ಮಂಜು’ ತಾನೂ ಕೂಡ ಚಂದನ್ನ ಕೈಹಿಡಿದು, ಓಹೋ, ‘ಚಂದನ್’ ಎಷ್ಟು ಭಾರೀಯಾಗಿದೆ, ‘ಕ್ಯಾ ಬಾತ್ ಹೈ’ ‘ಬಢಿಯಾ’ ಎಂದು ಅವನೆಡೆಗೆ ಅಭಿಮಾನದಿಂದ ಪರಸ್ಪರ ಪ್ರಶಂಸಿಸುತ್ತ, ಕೈಹಿಡಿದೇ ಕುಳಿತಿದ್ದರು”, ಎಂದು ಆರ್ಧ್ರವಾಗಿ ನೆನಪಿಸಿಕೊಳ್ಳುತ್ತಾರೆ ಕೌರ್.
ಮೀನಾ ಬಲಿತ ಅನಾರೋಗ್ಯದಲ್ಲಿಯೇ ಥಿಯೇಟರ್ಗೆ ಬಂದಿದ್ದಳು . ನಡೆಯಲು ಕಷ್ಟಪಡುತ್ತಿದ್ದಳು. ಮಾತೂ ಕ್ಷೀಣವಾಗಿತ್ತು. ಚಿತ್ರದ ಇಂಟರ್ವಲ್ನಲ್ಲಿ ಜಗಜಿತ್ ಕೌರಳನ್ನು ಕರೆದು ಮಾತನಾಡಿದಳು, ‘ಈಗ ಸಮಾಧಾನವಾಯಿತೇ’ ಎಂದು ನಕ್ಕಿದ್ದಳು. ಇದನ್ನು ಪೂರ್ಣಗೊಳಿಸುವಲ್ಲಿ ಅವರ ಕೊಡುಗೆಯನ್ನು ಈ ರೀತಿ ಸ್ಮರಿಸಿದ್ದಳು ಮೀನಾ. ಪ್ರೀಮಿಯರ್ ಮುಗಿದ ನಂತರ ಸಿನಿಮಾ ತುಂಬ ನೀರಸವೆಂಬ ಮಾತು ಹರಿದಾಡಿತು. ಬಹುಶ: ಸುದೀರ್ಘ ಅವಧಿಯಲ್ಲಿ ನಿರ್ಮಿಸಿರುವುದರಿಂದ ಹೀಗಾಗಿರಬಹುದೇ ಎಂದರು ಕೆಲವರು.
ಅಂತೂ 1972 ರಲ್ಲಿ 4ನೇ ಫೆಬ್ರವರಿಯಂದು ಚಿತ್ರ ರಿಲೀಸ್ ಆಯಿತು. ಪ್ರಾರಂಭದಲ್ಲಿ ಅಂತಹ ಸೂಕ್ತ ಪ್ರತಿಕ್ರಿಯೆ ಬಾರದೇ ದಿನದಿಂದ ದಿನಕ್ಕೆ ಜನಮಾನಸದಲ್ಲಿ ಇದರ ಜನಪ್ರಿಯತೆ ಅಷ್ಟಿಷ್ಟು ಹರಡುತ್ತಲಿತ್ತು, ಚಿತ್ರ ರಿಲೀಸ್ ಆಗಿ ಇನ್ನೂ ಮೂರು ವಾರಗಳೂ ಮುಗಿದಿರಲಿಲ್ಲ. ಚಿತ್ರಕ್ಕೆ ಫ್ಲಾಪ್ ಅಥವಾ ಹಿಟ್ ಪಟ್ಟ ನಿಖರವಾಗತೊಡಗಿತ್ತು. ಇದರ ಆಘಾತವೂ ಮೀನಾಳ ಮೇಲಾಗಿರಬೇಕು. ಇತ್ತ ಬವಣೆಯ ಬದುಕು, ಅತ್ತ ಸೋಲಿನ ಆಘಾತದಲ್ಲಿಯೇ, ಮೀನಾಳ ರೋಗ ಈಗ ಉಲ್ಬಣವಾಯಿತು. ಡಾಕ್ಟರ್ ಷಾ ಬಂದು ಚಿಕಿತ್ಡೆಯನ್ನೇನೋ ಮಾಡಿದರು. ಆದರೆ ಪರಿಸ್ಥಿತಿ ಕೈಮೀರುತ್ತಲಿತ್ತು. ಮನೆಯಲ್ಲಿ ಚಿಕಿತ್ಸೆ ಕಷ್ಟ. ಕೂಡಲೇ ಆಸ್ಪತ್ರೆಗೆ ದಾಖಲಾಗಲು ಡಾಕ್ಟರ್ ಷಾ ಸಲಹೆ ನೀಡಿದರು. ಮೀನಾ ಮರುದಿನ ದಾಖಲಾಗುವುದಾಗಿ ತಿಳಿಸಿ ಡಾಕ್ಟರರನ್ನು ಕಳುಹಿಸಿದಳು. ಖುರ್ಷಿದ್ಳನ್ನು ಕರೆದು ಮನೆಯಲ್ಲಿ ಎಷ್ಟು ಹಣವಿದೆ ಎಂದು ಕೇಳಿದಾಗ ‘ನೂರು ರೂಪಾಯಿ’ ಎಂದಳು ಖುರ್ಷಿದ್. ನೂರು ರೂಪಾಯಿಯಲ್ಲಿ ದಾಖಲಾಗುವುದು ಹೇಗೆ, ಅದರಲ್ಲಿ ಎಂಥ ಆರೈಕೆ ಪಡೆಯಲು ಸಾಧ್ಯ. ಮೀನಾ ಉಚ್ಛ್ರಾಯದಲ್ಲಿದ್ದಾಗ ಮನೆತುಂಬ ಮೂವತ್ತೈದು ಸಂಬಂಧಿಕರನ್ನೆಲ್ಲಾ ಸಾಕಿದ್ದಳು. ಈಗ ಸುತ್ತ ಯಾರೂ ಇಲ್ಲ. ಎಲ್ಲಾ ಅವಳನ್ನು ತೊರೆದಿದ್ದರು. ಅಲುಗಾಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಮೈಸುತ್ತಲೂ ಹುಣ್ಣುಗಳಾಗಿದ್ದವು. ದಿಂಬುಗಳನ್ನು ಆಸರೆಗೆ ಇಡಲಾಗಿತ್ತು. ನರಳುತ್ತಿದ್ದಳು, ಮೀನಾ…ನೋವಿನಲ್ಲಿ, ಅದಕ್ಕೂ ಹೆಚ್ಚು ಹೃದಯದ ಗಾಯಕ್ಕಾದ ನೋವಿಗಾಗಿ.
ಬದುಕಿನ ಒಳಪುಟಗಳನ್ನು ನೋಡಿದಾಗೊಮ್ಮೆ ನೋವುಗಳೇ ಕಾಣುತ್ತಿದ್ದವು. ತಂಗಾಳಿ ಎಂಬುದು, ಸುಖವೆಂಬುದು ಏನೆಂದು, ನೆಮ್ಮದಿ ಎಂದರೆ ಹೇಗಿರುತ್ತದೆ ಎಂಬುದನ್ನೇ ಅರಿಯದ ಮರೀಚಿಕೆಯಲ್ಲಿ, ನರಳುತ್ತಿತ್ತು, ಜೀವ ಒಂಟಿಯಾಗಿ, ಏಕಾಂತದಲ್ಲಿ, ಮೌನಕಂಬನಿಗಳಲ್ಲಿ, ಚಂದನ್ನನ್ನು ನೆನೆಯುತ್ತ,, ಕೊನೆಪಕ್ಷ ಒಂದು ಒಳ್ಳೆಯ ನಿದ್ದೆಗಾಗಿ ‘ದುವಾ’ ಮಾಡುತ್ತಿದ್ದಳು ಮೀನಾ, ಸಂಕಟದಲ್ಲಿ. ಯಾವುದೂ ಕೈಗೂಡದೇ, ಮತ್ತೆ ನರಳುತ್ತಿದ್ದಳು. ……ನರಳುತ್ತಿದ್ದಳು, ನೋವುಗಳ ಶರೀರವನ್ನು ಹೊತ್ತು, …ಭೀಷ್ಮನ ಶರಶಯ್ಯೆಯಲ್ಲಿ,… ದೇಹ ಬಿಡುವ ಗಳಿಗೆಗಾಗಿ ಕಾಯುತ್ತ….. ಅದೊಂದನ್ನು ಮಾತ್ರ ಅವಳು ಮಾಡಬಹುದಾಗಿತ್ತು ಈಗ, ಮೀನಾ ಎಂಬ ನಂಜುಂಡಿ!
ಮೊದಮೊದಲ ಕರಿಯರ್ನ ಖಾಯಂ ಹೀರೋ ಪ್ರದೀಪ ಕುಮಾರ್ ಹೇಳಿದ್ದನೊಮ್ಮೆ, ಅದು ಮೀನಾ, ಕಮಾಲ್ನಿಂದ ದೂರ ಸರಿದ ಕಾಲದಲ್ಲಿ . ‘ಮೀನಾ ನೀನಂತೂ ಹಡಗನ್ನು ತೊರೆದಿರುವೆ, ದೋಣಿಯಲ್ಲಿ ಇಳಿದಿರುವೆಯಾ! ದಡವನ್ನು ತಲುಪುವ ಪ್ರಯತ್ನ ಮಾಡು’ ಎನ್ನುತ್ತಿದ್ದ, ಆದರೆ ಅಸಲು ಅವಳಿಗೆ ಅದರ ಪರಿವೆ ಇರಲಿಲ್ಲ. ಯಾವಾಗಲೂ ಡಿಪ್ರೆಶನ್ ಮೂಡ್ನಲ್ಲಿ ದು:ಖಿತ ಮನದಲ್ಲಿಯೇ ಇರುತ್ತಿದ್ದಳು.
ನೆನಪಿನ ದೋಣಿಯಲ್ಲಿ ಹಿಂಬದಿ ಯಾಣದಲ್ಲಿ ತೇಲುತ್ತಿತ್ತು ಮೀನಾಳ ಮನ. ”ಫಿರ್ದೋಶ್ನ ಬಗ್ಗೆ ಹೇಳಲೇಬೇಕು, ಅವನೊಬ್ಬ ನನ್ನ ದೂರದ ಸಂಬಂಧಿಯೆಂದು ಹೇಳುತ್ತ ಬಂದ. ತುತ್ತು ಊಟಕ್ಕೂ ಕೊರತೆ ಇದ್ದುದನ್ನು ಗಮನಿಸಿದೆ. ಏನಾದರೂ ಮಾಡೋಣ ಪಾಪ ಎಂದು ಆಶ್ರಯ ನೀಡಿ, ನನ್ನ ಹತ್ತಿರ ನೌಕರಿಗೂ ಇಟ್ಟುಕೊಂಡೆ, ನೌಕರಿ ಎಂದರೂ ಎಂತಹದು, ನನ್ನೊಡನೆ ಸೆಟ್ಗಳಲ್ಲಿ ಜೊತೆಗಿರುವುದು. ಮನೆಯಲ್ಲಿ ಆಗಲೇ ಮೂವತ್ತು ಮೂವತ್ತೈದು ಜನ ಆಪ್ತರೆಲ್ಲ ತುಂಬಿದ್ದರಲ್ಲ. ಇಲ್ಲಿ ಕಾಲಿಡಲೂ ಜಾಗವಿರಲಿಲ್ಲ. ಮಗನ ಒತ್ತಾಯಕ್ಕೆ ಮೀನಾಳ ಮನೆಗೊಮ್ಮೆ ಬಂದ, ‘ಚಂದನ್’ ಮನೆಯ ವಾತಾವರಣವನ್ನು ನೋಡಿ ಹೇಳಿದ್ದ, ”ಮನೆಯನ್ನು ‘ದಾಸೋಹ’ದ ಧರ್ಮಛತ್ರ ಮಾಡಿಬಿಟ್ಟಿರುವೆಯಲ್ಲಾ? ಬೇಡಿಕೊಂಡಿರುವೆಯೇನು ಹಾಗಂತ?” ಅಂದಿದ್ದ. ಅವನು ಸರಿಯಾಗಿ ಗುರುತಿಸಿದ್ದ, ತೀಕ್ಷ್ಣಮತಿ. ನನಗೆ ಅರಿವಾಗಲು ಇಷ್ಟೊತ್ತು ಬೇಕಾಯಿತು ನೋಡಿ. ಮನೆಯಲ್ಲಿ ಜಾಗವಿರಲಿಲ್ಲವೆಂದು ಹೇಳಿದೆನಲ್ಲಾ, ಫಿರ್ದೋಶನಿಗೆ ಅಪ್ಪನ ಮನೆಯಲ್ಲಿ ಇರಲು ಜಾಗ ಮಾಡಿಸಿಕೊಟ್ಟೆ. ಇವರೆಲ್ಲರ ಹುಚ್ಚಾಟ ನೋಡಿ, ಅವನೊಡನೆ ನನ್ನ ನಿಕಾಹ್ ಮಾಡುವ ತಯಾರಿ ಮಾಡಿಕೊಂಡಿದ್ದರು. ಸುಮ್ಮನೆ ಒಂದು ದಿನ ಅವನನ್ನು ದೂರಸರಿಸಿಬಿಟ್ಟೆ”
ಮತ್ತೊಂದು ಘಟನೆ ನೆನಪಾಯಿತು. ಅದೊಮ್ಮೆ ತನ್ನ ಸಂಬಂಧಿ ಸಹೋದರ ಮೀನಾಳಿಗೆ ಸಿನಿಮಾದಲ್ಲಿ ಕೆಲಸ ಕೊಡಿಸಲು ದುಂಬಾಲು ಬಿದ್ದಾಗ, ಒಬ್ಬ ನಿಮರ್ಾಪಕರ ಹತ್ತಿರ ಅವನಿಗೇನಾದರೊಂದು ‘ರೋಲ್’ ಕೊಡಲು ವಿನಂತಿಸಿದಾಗ, ತನಗೆ ಐದುನೂರು ಕೊಡಲು ಸಾಧ್ಯ ಎಂದಿದ್ದರು ನಿಮರ್ಾಪಕ. ಆಗ ಮೀನಾ ತಾನು ಹದಿನೈದು ನೂರು ಕೊಡುತ್ತೇನೆ. ಅವನಿಗೆ ಎರಡು ಸಾವಿರ ಕೊಡಿ, ನಾನು ಕೊಟ್ಟೆ ಎಂದು ಹೇಳಬೇಡಿ ಎಂದಿದ್ದಳು. ಮರುವಾರ ಆ ಸಹೋದರ ಬಂದು ಹತ್ತು ಸಾವಿರವನ್ನಾದರೂ ಕೊಡಿಸಲು ದುಂಬಾಲು ಬಿದ್ದದ್ದು ಈಗ ಮೀನಾಗೆ ನೆನಪಾಗುತ್ತಿತ್ತು. ಅನೇಕ ನಿರ್ಮಾಪಕರು ಸಂಕಷ್ಟದಲ್ಲಿರುವುದು ಗೊತ್ತಾದಾಗ ಅವರಿಂದ ಸಂಭಾವನೆಯನ್ನೇ ಕೇಳಿರಲಿಲ್ಲ ಮೀನಾ. ಅನೇಕರ ಸಂಕಷ್ಟಗಳಲ್ಲಿ ಭಾಗಿಯಾಗಿ ಧಾರಾಳವಾಗಿ ದಾನವೀಯುತ್ತಿದ್ದ ಮೀನಾಳ ಹತ್ತಿರ ಈಗ ಯಾರೂ ಸುಳಿಯುತ್ತಿರಲಿಲ್ಲ.
ಮೀನಾಳ ಅನಾರೋಗ್ಯದ ವಿಷಯ ಗೊತ್ತಾಗುತ್ತಲೇ ‘ದುಶ್ಮನ್’ ಚಿತ್ರದ ನಿರ್ಮಾಪಕ ಕೂಡಲೇ ಹತ್ತು ಸಾವಿರ ರೂಪಾಯಿಗಳನ್ನು ಕೊಡಬೇಕಾದ ಬಾಕಿ ಹಣವನ್ನು ಕೊಟ್ಟದ್ದು , ಈಗ ಮೀನಾಳ ಆಸ್ಪತ್ರೆಯ ದಾಖಲಾತಿಗೆ ಅನುಕೂಲವಾಯಿತು. ಆಸ್ಪತ್ರೆಗೆ ಸೇರಿಸಿದ ಮೇಲೆ ವಿಷಯ ಕಾಳ್ಗಿಚ್ಚಿನಂತೆ ಹರಡಿತು. ಬಹುತೇಕ ಸಂಬಂಧಿಗಳು ಅಲ್ಲೆಲ್ಲ ನೆರೆದರು. ಬಾಲಿವುಡ್ನ ದಿಗ್ಗಜರೊಂದಿಗೆ ತಾರಾ ಸಮೂಹ, ಹರಿದು ಬರತೊಡಗಿತು. ಮೀನಾಳ ಹೃದಯಕ್ಕೆ ಬಲು ಹತ್ತಿರದವರಾದ, ಅವಳೊಂದಿಗಿನ ಸ್ನೇಹಕ್ಕೆ ಅನೇಕ ರೆಕ್ಕೆ ಪುಕ್ಕಗಳು ಬಲಿತು ಗಾಸಿಪ್ಗೂ ತಿರುಗಿದ್ದ ಗುಲ್ಜಾರರು ಅಲ್ಲಿದ್ದರು. ಗುಲ್ಜಾರರಿಗೆ. ಪ್ರತಿ ವರ್ಷದ ರಮ್ಜಾನ್ ಮಾಸದಲ್ಲಿ ಉಪವಾಸವಿರುತ್ತಿದ್ದ ಮೀನಾಕುಮಾರಿಗೆ ಒಂದೆರಡು ವರ್ಷಗಳ ಹಿಂದೆ ಅನಾರೋಗ್ಯದ ನಿಮಿತ್ತ ಪಾಲಿಸದಾದಾಗ ಅವಳ ಪರವಾಗಿ ಉಪವಾಸವಿದ್ದು ಅದನ್ನು ಪೂರ್ಣಗೊಳಿಸಿದ್ದರು, ಆ ಸ್ನೇಹದ ಸೇವೆಯನ್ನು ಅವಳಿಗಾಗಿ ಇಂದಿಗೂ ಪ್ರತಿವರ್ಷವೂ ಅದನ್ನು ಪಾಲಿಸುತ್ತ ಬಂದಿದ್ದಾರೆ ಗುಲ್ಜಾರ್ ಸಾಹಬ್.
ಅದೊಮ್ಮೆ ನಾದಿರಾ ಹೇಳುತ್ತಿದ್ದಳು, ತನ್ನ ಮುಂದಿರುವ ವಿಸ್ಕಿಯ ಗ್ಲಾಸ್ನಲ್ಲಿ ಐಸ್ ಕರಗುತ್ತಿರುವಾಗ, ಅವಳ ಕಣ್ಣುಗಳಲ್ಲಿ ಕಂಬನಿ ಕೂಡ ಹನಿ ಹನಿಯಾಗಿ ಸೈಲೆಂಟ್ ಆಗಿ ಕೆನ್ನೆಯಿಂದ ಇಳಿಯುತ್ತಿದ್ದವು, ಯಾಕಿರಬಹುದು? ಅವಳೀಗ ಮೀನಾಕುಮಾರಿಯ ಫ್ಲಾಶ್ಬ್ಲಾಕ್ನಲ್ಲಿ ನೆನೆಯುತ್ತಿದ್ದಳು, ಮೀನಾಳನ್ನು ಎರಡೇ ಶಬ್ದಗಳಲ್ಲಿ ಹೇಳಬೇಕೆಂದರೆ, ‘ಅಫಸಾನಾ ಪಸಂದ್’ (ಸಿಹಿಗಾಥೆ) ದಂತೆ ಎನ್ನುವಳು. ತನ್ನ ಜೀವಮಾನವನ್ನೆಲ್ಲ ‘ಝೂಟಿ’ ದುನಿಯಾ ದಲ್ಲಿಯೇ, ಭ್ರಾಂತಿಯನ್ನು ಬೆಂಬತ್ತಿ, ಮರಿಚಿಕೆಯಲ್ಲಿಯೇ ಬದುಕಿದಳು. ‘ಪಾಕೀಜಾ’ದ ಗುಲಾಬ್ ಮಹಲ್, ಮೀನಾ ಬಜಾರ್ ಸೆಟ್ನಲ್ಲಿಯೇ ಬಹುಪಾಲು ಅವಳೊಡನಿದ್ದರೂ, ಅವಳು ಯಾವ ಅಳತೆಗೂ ಸಿಗುತ್ತಿರಲಿಲ್ಲ. ಅವಳೀಗ ಮಂಜೂನೋ, ಮಹಜಬೀನ ಬಾನೋ, ಮೀನಾಕುಮಾರೀನೋ, ನಾಜ್ಳೋ, ಅರ್ಥವಾಗುತ್ತಿರಲಿಲ್ಲ. ಇಷ್ಟು ಮಾತ್ರ ನಿಜ. ಅವಳೊಂದು ಕನಸಿನಂತೆ, ರಾಜಕುಮಾರಿಯ ಕಥೆಯಂತಿದ್ದಳು.





‘ಸಾಂಸೋಂ ಮೆಂ ಛುಪೀ ರಾಝ್ ಕಿಸೆ ಪೇಶ ಕರೂಂ,
ನರ್ಮ್ ಹೋಟೊಂ ಮೇಂ ದಬೀ ಬಾತ್ ಕಿಸೆ ಪೇಶ್ ಕರೂಂ’ She departed with all the untold secrets in her small heart & all she wanted say hidden deep in her mouth. A real Tragedy Queen. If a biopic is to be made on her, only Rekha can justify the role for she too has equally suffered agony.
ಡಾ. ಪ್ರಭಾಕರ ನಿಂಬರಗಿ ಸರ್, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಲಕ್ಷ್ಮೀಕಾಂತ ನಿಮ್ಮ ಮನಕಲಕುವ ಮನ ಶೋಧಿಸುವ ಜಾಣ್ಮೆ, ಶಬ್ದಗಳಲ್ಲೇ ಎಲ್ಲವನ್ನು ಸೆರೆಹಿಡಿಯುವ ಮಾಂತ್ರಿಕ ಚಿತ್ರಕ ಶೈಲಿ, ಉರ್ದು ಗೀತೆಗಳನ್ನು ಕನ್ನಡೀಕರಿಸುವ ಅದ್ಭುತ ಕೌಶಲ -ಇವೆಲ್ಲ ನನ್ನನ್ನು ಬೆರಗು ಗೊಳಿಸಿವೆ. ನಾನು ಉರ್ದು ಕಾವ್ಯದ ನೇರ ಅಭ್ಯಾಸಿ. ನಿಮಗೆ Hats Off! keep it up!
ಒಂದು ವಿಷಯ ಹೇಳಬೇಕೇನಿಸುತ್ತದೆ: ಆಮ್ರೋಹಿ ಜೊತೆ ಮದುವೆಯಾದ ಹೊಸತರಲ್ಲೇ ಆತ ಒಂದು ಫಿಲ್ಮ ಮಾಡಿದ್ದ.ಹೆಸರು- ” ದಾಯರಾ” ಅದರ ನಾಯಕಿ ಆಕೆಯೇ. ನಾಸಿರ ಖಾನ (ದಿಲೀಪ ಕುಮಾರನ ತಮ್ಮ) ನಾಯಕ.
ಆ ಚಿತ್ರದ ಪ್ರಾರಂಭದಲ್ಲಿ ಸ್ವಯಂ ಮೀನಾಕುಮಾರಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾಳೆ. ಚಿತ್ರ ಬಹಳ ಕಾವ್ಯಮಯವಾಗಿತ್ತು. K.A.Abbas “it is a poem on cellulold” ಎಂದಿದ್ದ. ದು ಆಕೆಯ ಜೀವನದ ದುರಂತವನ್ನು ಸೂಚಿಸಿದಂತೆ ಇತ್ತು. ನೀವು ಅದನ್ನು ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು. ನೀವೆ ಅದನ್ನು ನೋಡಿಲ್ಲವೆಂದರೆ, ಸಾದ್ಯಮಾಡಿ ನೋಡಿರಿ. ಆಕೆಯ ಭಿಮಾನಿಗಳಿಗೂ ಅದು ಮಸ್ಟ್
ಪ್ರಿಯ ಬಸವರಾಜ ಪುರಾಣಿಕ ರವರೆ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಮೂಕನಾದೆ. ತಮ್ಮ ಆತ್ಮೀಯ ಮೆಚ್ಚುಗೆಗೆ ಹೃತ್ಪೂರ್ವಕ ವಂದನೆಗಳು ಸರ್.