ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಬಿ ಜೋಗೂರರ ಹೊಸ ಕಾದಂಬರಿ

ಎಸ್ ಬಿ ಜೋಗೂರರ ಹೊಸ ಕಾದಂಬರಿ ನಿದರ್ಶನದ ಮುಖಪುಟ ಮತ್ತು

ಕೆಲವು ಪುಟಗಳು ಅವಧಿ ಓದುಗರಿಗಾಗಿ


 

ಕಾದಂಬರಿಯ ಆಯ್ದ ಭಾಗ

ಅಲ್ಲಿ ಏನು ನಡದಿತ್ತು ಅಂತ ನಸುಕಿನೊಳಗೇ ಊರ ತುಂಬಾ ಸುದ್ದಿ ಆಗಿತ್ತು. ಸೂರ್ಯ ಮುಖ ಮೂಡಿಸೋ ಮೊದಲೇ ಮಂದಿ ಹಳಕ ಹಳಕಾಗಿ ಬಯಲ ಆಗಲಿಕ್ಕ ಶುರು ಮಾಡಿದ್ದರು. ಬೇವಿನ ಗಿಡದ ಕಡ್ಡಿ ಮುರಕೊಂಡು ಹಲ್ಲ ತಿಕ್ಕೊಂತ ಬಂದವರು, ಬಯಲುಕಡಿಗಿ ಹೋಗಿ ಖಾಲಿ ತಂಬಗಿ ಹಿಡಕೊಂಡು ಹೊಂಟವರು, ಎದ್ದು ಕೂಡಲೇ ಕ್ಯಾವ ಮಾರಿ ತೊಳಿಲಾರದೇ ಬಂದವರು.. ಹೊಲಕ್ಕ ಕವಣಿ ಹೊಡಿಲಾಕ ಹೊಂಟವರು ಸೀದಾ ಸಿದಗೊಂಡಪ್ಪಗೌಡನ ಮನಿ ಮುಂದ ಅವತ್ತು ನಡೀಲಿರೋ ಪಂಚಾಯತಿ ಕೇಳಾಕ ಜಮಾ ಆಗಿದ್ದರು. ಎಳಿ ಬಿಸಿಲ ಬಸರೀ ಗಿಡದ ಚಿಗುರು ಎಲಿ ಮ್ಯಾಲ ಚೆಲ್ಲಿದ್ದೇ ಹಸರು ಎಲಿಗಿ ಬಂಗಾರದ ನೀರ ಸುರದಂಗ ಕಾಣತಿತ್ತು. ಹೊತ್ತ ಏರತಾ ಹೋದಂಗ ಮಾತೂರಿನ ಸಿದಗೊಂಡಪ್ಪಗೌಡನ ಮನಿ ಮುಂದಿನ ದೊಡ್ಡ ಬಸರೀಗಿಡದ ಬುಡಕ, ಇಡೀ ಊರಿಗೂರೇ ಹರಕೊಂಡು ಬಂದು ಅಲ್ಲಲ್ಲಿ ಗುಂಡಾಕಾಗಿ ಕುಂತಗೊಂಡಿತ್ತು. ಮಂದಿ ಅಂದ ಮ್ಯಾಲ ಮಾತು ಮೂಡದಿದ್ದರ ಹ್ಯಾಂಗ..?
‘ಇದು ಯಾರು ಮಾಡಿದ್ದಂತ..?
‘ ಈರಭದ್ರಯ್ಯನ ಮಗ ಸಂಗಯ್ಯ ಮಾಡಿದ್ದಂತ’
‘ ಅಂವಗೇನು ಬಂತು ಕುರಸಾಲ್ಯಾಗ.. ಹೋಗಿ ಹೋಗಿ ಇಲ್ಲಿ ಕೈ ಹಾಕ್ಯಾನ..!’
‘ ಯಾರೋ ಅಂವಗ ಅಲ್ಲಿ ನಿಧಿ ಐತಿ ಅಂತ ಹೇಳಿದ್ದರಂತ’
‘ ಭೇಷಿ ಒಂದು ಸಣ್ಣ ಬಾವಿ ಹಡ್ಡದಂಗ ಹಡ್ಯಾನ..’
‘ಇದೇನು ಒಬ್ಬನೇ ಹಡ್ಯಾನಾ..?’
‘ ಅವನ ಜೋಡಿ ಅದಾರಲ್ಲ ರಿಕಾಮಿ ಕುರಸಾಲ್ಯಾಗೋಳು, ಸೈಪನ್ ಮಗ ಇಬ್ರಾಂ, ಮತ್ತ ಕಟಬರ ಲಚ್ಚಪ್ಪನ ಮಗ ಎಂಕ್ಯಾ’
‘ ಅವರ ಧೈರ್ಯ ಮಾತ್ರ ಮೆಚ್ಚಬೇಕು..’
‘ ಧೈರ್ಯ ಏನು ಬಂತು ಮಣ್ಣ… ಕುಡದ ನಶೆದೊಳಗ ಹಡ್ಡಿರತಾವ’
‘ ಗಿಡದ ಬೇರಿಗೂ ತುಸು ಹೊಡತ ಬಿದ್ದಂಗ ಕಾಣತೈತಿ’
ಹಿಂಗ ಅಲ್ಲಿ ನೆರೆದ ಮಂದಿ ತಲಿಗೊಂದು ಮಾತಾಡಕೊಂತ ನಿಂತಿದ್ದರು. ಮಾಡೂದು ಮಾಡಿ ಮೂರೂ ಮಂದಿ ಓಡಿ ಹೋಗಿ ಸೈಪಾನನ ಗುಡಸಲದೊಳಗ ಡೊಕ್ಕ ಹೊಡದು ಕುಂತಿದ್ದರಂತ. ಗೌಡ ಎಲ್ಲಿ ಹೋದರೂ ಬಿಡೂದಿಲ್ಲ ಅಂತ ಗೊತ್ತಾಗಿ ಬೆಳಕ ಹರಿಯೂದರೊಳಗ ಅಲ್ಲಿ ನಿಂತ ಜನರ ನಡುವ ಅವರೇ ಖುದ್ದಾಗಿ ಕಾಣಿಸಿಕೊಂಡಿದ್ದರು. ಬಾಳ ಹೊತ್ತಿನ ಮಟ ಇವರು ಹಡ್ಡೂ ಆವಾಜ್ ಗೌಡರ ಮನ್ಯಾಗ ಯಾರಿಗೂ ಕಿವಿಗಿ ಬಿದ್ದಿರಲಿಲ್ಲ. ತಣ್ಣಗ ಥಂಡಿ ಅಂತ ಯಾರೂ ಮಾಳಗಿ ಮ್ಯಾಲ ಮಲಗಿರಲಿಲ್ಲ. ಅದೆಲ್ಲಾ ನೋಡೇ ಇವರು ಅವತ್ತ ರಾತ್ರಿ ಹಡ್ಡೂ ಪ್ಲ್ಯಾನ್ ಮಾಡಿದ್ದರು. ತಗ್ಗು ದೊಡ್ಡದಾದಂಗ ಆವಾಜ್ ಜೋರ ಆಗಾಕತ್ತತು. ಗೌಡತಿ ಗೌರಾಬಾಯಿಗಿ ಎಚ್ಚರಾಗಿ ಗೌಡಗ ಹಗೂರಕ ಅಲ್ಲಾಡಿಸಿ ಎಬ್ಬಿಸಿ, ‘ಅಲ್ಲಿ ಕೇಳ್ರಿ ಹೊರಗ ಮನಿ ಮುಂದ ಏನೋ ಹಡ್ಡದಂಗ ಕೇಳಸತೈತಿ’ ಅಂದದ್ದೇ ಗೌಡ ಹಗೂರಕ ಮಾಳಗಿ ಮ್ಯಾಲ ಹೋಗಿ ಬ್ಯಾಟರಿ ಹೊಡದಿದ್ದೇ ಅವರೆಲ್ಲಾ ಪರಾರಿ ಆದರು. ಹಂಗ ಓಡೂ ವ್ಯಾಳೆದೊಳಗ ಇಬ್ರಾಂ ಬಿದ್ದ, ಅವನ ಮುಖಕ್ಕ ಗೌಡ ನಿಚ್ಚಳಾಗಿ ಬ್ಯಾಟರಿ ಹಿಡದಿದ್ದ. ಅವರನ್ನ ಹಿಡಿಲಾಕ ಗೌಡಗ ಅಷ್ಟು ಸಾಕಾಗಿತ್ತು. ಗೌಡಗ ಅಷ್ಟೇ ಸಮಾಧಾನ ಆಗಲಿಲ್ಲ. ತಲಬಾಗಲು ತಗದು ಹೊರಗ ಬಂದು ನೋಡದ. ಬಸರೀಗಿಡದ ಬುಡಕ್ಕ ಇರೋ ಲಕ್ಷ್ಮೀ ಗುಡಿ ಬಾಗಿಲ ತಗದು, ದೇವರ ಮೂತರ್ಿ ಒಡದಿದ್ದರು. ದೇವರ ಇಟ್ಟ ಜಾಗದ ಕೆಳಗ ಭೇಷಿ ನಾಕೈದು ಅಡಿ ಹಡ್ಡಿದ್ದರು. ಆ ಗುಡಿ ಬೀಗದ ಕೈ ಒಡಿಲಾರದೇ ತಗದಿದ್ದಿತ್ತು. ಹಿಂಗಾಗಿ ಗೌಡಗ ಈರಭದ್ರಯ್ಯನ ಮಗ ಸಂಗಯ್ಯನ ಕಿತಾಪತಿ ಇದರೊಳಗ ಐತಿ ಅಂತ ಗೊತ್ತಾಗಿತ್ತು. ಹಂಗಾಗಿ ಈರಭದ್ರಯ್ಯನೂ ಅಲ್ಲಿ ಬಂದಿದ್ದಿತ್ತು.
ಆ ಗುಡಿ ಸಿದಗೊಂಡಪ್ಪನ ಅಪ್ಪ ಸಂಗನಬಸಪ್ಪ ಕಟ್ಟಿಸಿದ್ದು. ಕಟ್ಟಿ ಹೆಚ್ಚೂ ಕಮ್ಮಿ ಇಪ್ಪತ್ತು ವರ್ಷ ಆಗಿತ್ತು. ಲಕ್ಷ್ಮಿ ಗುಡಿ ಅಂದರ ಅಲ್ಲಿ ಲಕ್ಷ್ಮೀ ಮೂರ್ತಿ ಇರಲಿಲ್ಲ. ಇದ್ದದ್ದು ಒಂದು ಮೂರು ಮೂಲಿ ಕರಿ ಕಲ್ಲು. ಗುಡಿ ಕಟ್ಟಿಸಿ ಅದನ್ನ ಅಲ್ಲಿಟ್ಟು ಅದರ ಮ್ಯಾಲ ದಿನ್ನಾ ಎಣ್ಣಿ, ಕುಂಕುಮ, ಅರಿಶಿಣ ಬಿದ್ದು, ಅದಕ್ಕೂ ದೇವರಾಗೋ ಭಾಗ್ಯ ಬಂದಿತ್ತು. ಸಂಗನಬಸಪ್ಪ ಎರಡು ಬೆಳ್ಳಿ ಕಣ್ಣು ಅದಕ್ಕ ಕೂಡಿಸಿದ್ದೇ ಅದು ಪಕ್ಕಾ ಲಕ್ಷ್ಮೀನೇ ಆಗಿತ್ತು. ಊರಾಗಿರೋ ಎಲ್ಲರೂ ಆ ಲಕ್ಷ್ಮಿಗೆ ನಡಕೋಳವರೇ.. ಹೊಸದಾಗಿ ಲಗ್ನ ಆಗಿ ಹೋಗೋ ಹೆಂಗಸರಂತೂ ಈ ಲಕ್ಷ್ಮಿಗೆ ಉಡಿ ತುಂಬದೇ ಹೋಗತಿರಲಿಲ್ಲ. ಲಕ್ಷ್ಮೀ ಮಹಿಮಾ ಚುಲೋ ಐತಿ ಪಾಟೀಲರ ಸುಲೋಚನಾಗ ಡಾಕ್ಟರು ಮಕ್ಕಳು ಆಗೋದಿಲ್ಲಂತ ಹೇಳದ ಮ್ಯಾಲ ಅಕಿ ಹದಿನಾರು ಶುಕ್ರವಾರ ಲಕ್ಷ್ಮಿಗೆ ನಡಕೊಂಡಿದ್ದೇ ಮಕ್ಕಳಾಗಿದ್ದು ಆ ಮಾತೂರಿನ ಬಸರೀ ಗಿಡದ ಲಕ್ಷ್ಮೀ ಮಹಿಮಾ ಪಕ್ಕದ ಊರಿಗೂ ಹಬ್ಬಿತ್ತು. ಇಂಥಾ ಲಕ್ಷ್ಮೀ ಗುಡಿಯೊಳಗ ಅದ್ಯಾವನೋ ಮಾಟಾ ಮಾಡವನು ಅಲ್ಲಿ ನಿಧಿ ಐತಿ ಅಂತ ಹೇಳಿದ್ದಕ ಈ ಮೂರೂ ರಿಕಾಮಿಗಳು ನಿಧಿ ಆಸೆಗಾಗಿ, ಮೂತರ್ಿ ಒಡದು, ಗರ್ಭ ಗುಡಿ ಹಡ್ಡಿ ಸಿಗಿಬಿದ್ದಿದ್ದರು.
ಸಿದಗೊಂಡಪ್ಪಗೌಡ ನ್ಯಾಯ ಅಂದರ ನ್ಯಾಯ ಅನ್ನೂವಂಗ ತೀರ್ಮಾನ ಕೊಡವನು. ಈರಭದ್ರಯ್ಯ ತನ್ನ ಮನಿ ಗುರಗೋಳು ಇದ್ದರೂ ಅಂವಾ ಪಂಚಾಯತಿಕಿ ಕಟ್ಟಿಗಿ ಕುಂತ ಅಂದರ ಮುಗೀತು. ಹೊಟ್ಟೀಲೇ ಹುಟ್ಟಿದ ಮಕ್ಕಳಿದ್ದರೂ ಅದೇ ನ್ಯಾಯ. ಈರಭದ್ರಯ್ಯಗ ಅಲ್ಲಿ ನೆರೆದ ಮಂದಿ ಮುಂದ ಮಾತಾಡಲಿಕ್ಕ ದಾರಿ ಇರದಂಗ ಆಗಿತ್ತು. ಮನಿಯೊಳಗ ಸಿಗಸಿರೋ ಗುಡಿ ಕೀಲಿ ಕೈ ತಗೊಂಡು ಹೋಗಿ ತನ್ನ ಮಗಾನೇ ಇಂಥಾ ಹಲ್ಕಾ ಕೆಲಸ ಮಾಡ್ಯಾನ ಅಂತ ಅವನಿಗೂ ಗೊತ್ತಿತ್ತು. ಹಿಂಗಾಗಿ ಗೌಡ ಅದೇನು ಶಿಕ್ಷೆ ಕೊಡ್ತಾನ ಅದನ್ನ ಒಪ್ಪಕೊಳೂದು ಅಷ್ಟೇ ಉಳಿದಿತ್ತು. ಮಗ ಅಲ್ಲೇ ಸೊಟ್ಟ ಮುಖ ಮಾಡಕೊಂಡು ನಿಂತಿದ್ದ. ಅವನ ಜೋಡಿ ಇಬ್ರಾಂ ಮತ್ತ ಎಂಕಪ್ಪನೂ ಇದ್ದರು. ಗೌಡ ಅವರ ಅಪ್ಪದೇರಿಗೂ ಕರಸಿದ್ದ. ಊರ ಜನರು ಅಂದ ಮ್ಯಾಲ ಅಲ್ಲಿ ಎಲ್ಲಾ ಕೇರಿ ಮಂದಿನೂ ಸೇರಿದ್ದರು. ಮಾತೂರೊಳಗ ಮ್ಯಾಲಿನಕೇರಿ, ಕುರುಬರ ಕೇರಿ ಮತ್ತ ಕೆಳಗಿನ ಕೇರಿ ಅಂತ ಇದ್ವು. ಈ ಮೂರನ್ನೂ ಬಿಟ್ಟರ ಮುಸಲರ ಕೇರಿ ಅನ್ನೂದಿತ್ತು. ಅಲ್ಲಿದ್ದದ್ದು ಎಂಟತ್ತು ಮನಿ ಅಷ್ಟೇ. ಗೌಡ ಪಟಗಾ ಸುತಗೊಂಡು, ಮಲಮಲ ದೋತರ ಉಟಗೊಂಡು, ಬಿಳಿ ಟರಲಿನ್ ಅಂಗಿ ಹಾಕೊಂಡು, ಗಡ್ಡೀ ಮೆಟ್ಟ ಉಟಗೊಂಡು ಗತ್ತೀಲೇ ಪಂಚಾಯತಿ ಕಟ್ಟೀ ಕಡಿ ಬರೂದು ನೋಡಿ ಅಲ್ಲಿದ್ದ ಜನರೆಲ್ಲಾ ಗೌಡಗ ಎದ್ದು ನಿಂತು ಗೌರವ ಕೊಡತಿದ್ದರು. ಗೌಡ ಎಲ್ಲರಿಗೂ ಕೂಡಾಕ ಹೇಳದ. ತಪ್ಪು ಮಾಡಿದವರು ಮಾತ್ರ ನಿಂತಗೊಂಡಿದ್ದರು. ಅಲ್ಲಿ ಕುಳಿತ ಜನರ ಮುಖವನ್ನೊಮ್ಮೆ ಸುತ್ತಲೂ ಕಣ್ಣು ಹೊರಳಿಸಿ ನೋಡಿ, ಎಲ್ಲಾ ಕೇರಿಯವರು ಬಂದಿದ್ದಾರೋ..ಇಲ್ಲವೋ ಅಂತ ಖಾತ್ರಿ ಮಾಡಿಕೊಂಡ. ಈರಭದ್ರಯ್ಯನ್ನ ಕರದು ತನ್ನ ಬಾಜೂ ಕೂಡಿಸಿಕೊಂಡ.
‘ಹೇಳ್ರೆಪಾ ಅದನ್ಯಾಕ ಹಡ್ಡದರಿ’
‘…………….’
‘ನಿಮಗೇ ಕೇಳಾಕತ್ತೀನಿ’ ಸಂಗಯ್ಯ ಹಗೂರಕ
‘ ನಮಗ ಅಲ್ಲಿ ನಿಧಿ ಐತಿ ಅಂತ ಹೇಳಿದ’ ಅಂದದ್ದೇ ಈರಭದ್ರಯ್ಯ ಓಡಿ ಹೋಗಿ ಮಗನಿಗೆ ಎಲ್ಲರೆದುರು ಝಾಡಿಸಿ ಒದ್ದ.
‘ ಐನೋರ ಹಂಗಲ್ಲ.. ಇದು ಪಂಚಾಯತಿ ಕಟ್ಟೆ. ಅದೇನಿದ್ದರೂ ಮನೆಯಲ್ಲಿ’
‘ಇಲ್ಲ ಗೌಡರೇ ನನಗೂ ಇವನ ಸಲಾಗಿ ಸಾಕಾಗಿ ಹೋಗೈತಿ.’
‘ ನಿಮಗ ಅಲ್ಲಿ ನಿಧಿ ಐತಿ ಅಂತ ಹೇಳಿದವರಾರು..?’
‘ ದಿಂಡೂರೊಳಗ ಒಬ್ಬ ಮಾಟಾ ಮಾಡವನದಾನ ಅಂವಾ ಹೇಳಿದ’
‘ ಸಿಕ್ಕತಾ..?’
‘………..’ ಗೌಡ ಸಿಟ್ಟೀಲೇ..
‘ ಯಾವನೋ ತಿರಬೋಕಿ ಏನೋ ಹೇಳಿದ ಅಂತ ದೇವಸ್ಥಾನನೇ ಹಡ್ಡದರೆಲ್ಲೋ.. ನನಗ ಅದೇನೂ ಗೊತ್ತಿಲ್ಲ ಒಂದು ವಾರದೊಳಗ ಗುಡಿ ಮೊದಲ ಹ್ಯಾಂಗಿತ್ತು ಹಂಗ ಮಾಡಿ ಕೊಡಬೇಕು’ ಅಂದಾಗ ಆ ಮೂರೂ ಜನ ಏನೂ ಮಾತಾಡದೇ ಸುಮ್ಮನೇ ನಿಂತಿದ್ದರು. ಆಗ ಆ ಮೂವರ ಅಪ್ಪದೇರು ಮುಂದೆ ಬಂದು ‘ ನಾವು ಮಾಡಿಸಿ ಕೊಡತೀವಿ’ ಅಂದದ್ದೇ ಅಲ್ಲಿ ನೆರೆದ ಮಂದಿ ದೊಡ್ಡ ನಿಟ್ಟುಸಿರು ಬಿಟ್ಟು, ಗೌಡನ ನ್ಯಾಯ ಅಂದರ ನ್ಯಾಯ ತನ್ನ ಮನಿ ಗುರಗೋಳಿಗೂ ಬಿಡಲಿಲ್ಲ ಅನ್ಕೊಂತ ಎಲ್ಲರೂ ಅಲ್ಲಿಂದ ನಡದರು.
ಮಾತೂರಿನ ಕಟ್ಟೀ ಸಿದಗೊಂಡಪ್ಪಗೌಡನ ಮನಿ ಊರ ನಟ್ಟ ನಡುವೇ ಇತ್ತು. ಆ ಪರಿ ದೊಡ್ಡ ಮನಿ ಆ ಊರಾಗ ಮಾತ್ರ ಅಲ್ಲ, ಸುತ್ತಮುತ್ತ ಎಲ್ಲೂ ಇರಲಿಲ್ಲ. ತೀರಾ ಕಡಿಮಿ ಅಂದರೂ ಐದು ನೂರು ವರ್ಷದ ಇತಿಹಾಸ ಇರೋ ಆ ಮನಿ ನೋಡಲಿಕ್ಕ ಒಂದು ರಾಜವಾಡೆ ಇದ್ದಂಗಿತ್ತು. ಇಡೀ ಮನೆ0ುನ್ನ ಕರಿ ಕಲ್ಲಿಂದ ಮಜಭೂತಾಗಿ ಕಟ್ಟಿದ್ದರು. ಮನಿ ಮುಂದೆ ವಿಶಾಲವಾದ ಕಟ್ಟೆ. ಕಟ್ಟೆಯ ಆ ತುದಿ, ಈ ತುದಿ ಎರಡೂ ಬದಿ ಅರಾಮ ಮೈ ಆನಿಸಿ ಕೂಡಿವಂಗ ಕಲ್ಲಿಂದಲೇ ದಿಂಬು ತರಾ ಮಾಡಿದ್ದರು. ಆ ಬಸರೀ ಗಿಡ ಮತ್ತು ಆ ಕಟ್ಟೆ ಆ ಮನೆತನಕ್ಕೆ ಇನ್ನಷ್ಟು ವಜನ್ ತಂದಿದ್ವು. ಆ ಮನೆಗೆ ದೊಡ್ಡ ತೊಲೆಬಾಗಿಲು. ಬಾಗಿಲಿನ ಸುತ್ತ ಮುತ್ತಲೂ ಕೆತ್ತನೆಯ ಕೆಲಸ. ಮೇಲ್ಬದಿಯ ಮಧ್ಯಭಾಗದಲ್ಲಿ ಗಣಪತಿ ಚಿತ್ರ. ಅದರ ಕೆಳಗಡೆ ಕಮಲದ ಹೂವಿನ ಕೆತ್ತನೆ. ಎಡಬದಿ, ಬಲಬದಿ ಮುಖಾ ಮುಖಿಯಾಗಿರೋ ಆನೆಗಳ ಚಿತ್ರ..ಬಾಗಿಲಿನ ಎರಡೂ ಬದಿಯೂ ತೊಲೆಯ ಮೇಲೆ ಹೂಬಳ್ಳಿಯ ಶೃಂಗಾರ. ನಟ್ಟ ನಡುವೆ ತಾಮ್ರದ ಹೂವಿನ ಅಲಂಕಾರ. ಕೆಳಬದಿ ದೊಡ್ದದಾದ ಹೊಸ್ತಿಲು. ಅದು ಆಲಸಿಗಳು ದಾಟಲಾಗದಂತಿರುವ ದೊಡ್ಡ ತೊಲೆಯ ಹೊಸ್ತಿಲು. ಅದರ ಮಧ್ಯ ಭಾಗದೊಳಗ ಆಮೆಯ ಚಿತ್ರ. ಹೊಸ್ತಲಿನ ಹೊರಮೈ ಮೇಲೆ ಎರಡೂ ಬದಿ ನವಿಲಿನ ಚಿತ್ರ.. ಆ ನವಿಲುಗಳ ನಡುವ ಹೂವಿನ ಚಿತ್ರ. ಹಿಂಗ ಇಡೀ ಬಾಗಿಲಿನ ನಾಲ್ಕೂ ಚೌಕಟ್ಟು ಒಂದಿಲ್ಲಾ ಒಂದು ಬಗೆಯ ಅಪರೂಪದ ಕೆತ್ತನೆಯಿಂದ ಕೂಡಿದ್ವು.
ಹೊಸ್ತಲಿನ ಮೆಲ್ಬದಿ ಎರಡೂ ಕಡೆಯಲ್ಲಿ ಕುದುರೆಯ ಮುಖಗಳ ಕೆತ್ತನೆ. ಜೀವಂತ ಕುದುರುಗಳೇ ಇಣುಕುತ್ತಿವೆಯೇನೋ..? ಎನ್ನುವಷ್ಟು ಅವು ನಿಚ್ಚಳವಾಗಿದ್ದವು… ಲಕ್ಷಣವಾಗಿದ್ದವು. ಎರಡೂ ಬಾಗಿಲುಗಳ ಪಡಕಿನ ಮೇಲೆಯೂ ಆಕರ್ಷಕವಾದ ಕೆತ್ತನೆ. ಆ ಬಾಗಿಲುಗಳನ್ನು ಮುಚ್ಚೋದು ಮತ್ತು ತೆಗೆಯೋದು ಒಂದು ಕೋಟೆ ಬಾಗಿಲನ್ನು ಹಾಕಿದಷ್ಟೇ.. ತೆರೆವಷ್ಟೇ ಸಾಹಸ ಪಡಬೇಕು. ಇಂಥಾ ಅಪಾರವಾಗಿರುವ ಬಾಗಿಲು ತೆಗೆದು, ಹೊಸ್ತಿಲನ್ನು ದಾಟಿ ಒಳನಡೆದರೆ ಅಲ್ಲೊಂದು ಅರಮನೆಯ ದೃಶ್ಯ ವೈಭವ. ಒಳಗೆ ವಿಶಾಲವಾದ ಅಂಗಳ. ಮನೆಯ ಒಳಗಿನ ನಾಲ್ಕೂ ಮಗ್ಗಲು ಕಟ್ಟಿಗೆಯ 32 ಕಂಬಗಳು. ಅವುಗಳ ಮೇಲೆ ಅದೇ ಗಾತ್ರದ ತೊಲೆಗಳು. ಕಿಡಕಿಗಳು, ಸಣ್ಣ ಸಣ್ಣ ಮಾಡುಗಳು.. ಕಮಾನುಗಳು, ಕುಳಿತುಕೊಳ್ಳುವಂತೆ ಕಲ್ಲುಹಾಸಿನಿಂದ ಮಾಡಿದ ಗಗ್ಗರಗಟ್ಟೆ ಇಡೀ ಮನೆ, ಒಳಬದಿ ಒಂದು ಅಂದದ ಅರಮನೆಯನ್ನೇ ಹೋಲುವಂಗಿತ್ತು. ಇಂಥಾ ಮನೆಯಲ್ಲಿದ್ದದ್ದು ಕೇವಲ ಆರು ಜನ. ಸಿದಗೊಂಡಪ್ಪ ಮತ್ತು ಅವನ ಪತ್ನಿ ಗೌರಾಬಾಯಿ. ಮಕ್ಕಳಾದ ಮಾಂತೇಶ, ಶಿವಬಸು, ಗುರಲಿಂಗ ಮತ್ತು ಮಗಳು ಅನ್ನಪೂರ್ಣಾ.
ಸಿದಗೊಂಡಪ್ಪ ಹಾಗೂ ಅವನ ಹೆಂಡತಿ ಗೌರಾಬಾಯಿ ಇಬ್ಬರೂ ಶಾಲೆಯ ಪಾವಟಣಗಿ ಹತ್ತಿದವರಲ್ಲ. ಆದರೂ ಶಿಕ್ಷಣ ಪಡೆದವರಲ್ಲಿ ಸಿಗಲಾರದ ಮೌಲ್ಯಗಳು..ಬದುಕಿನ ಬದ್ದತೆಗಳು ಅವರಲ್ಲಿದ್ವು. ನ್ಯಾಯ..ನಿಷ್ಟುರತೆಗೆ ಹೆಸರಾಗಿದ್ದ ಸಿದಗೊಂಡಪ್ಪ ಇಡೀ ಮಾತೂರು ಗೌರವಿಸುವಂಗ ಬದುಕಿದ್ದ. ಮಾತು ಆಡಿದರೆ ಹೋಯಿತು ಅನ್ನೋದು ಅವನ ತತ್ವ. ಇವನಿಗಿಂತಲೂ ಇವನ ತಂದೆ ಸಂಗನಬಸಪ್ಪ ಮಾತು..ನ್ಯಾಯ..ನೀತಿ ವಿಷಯದಲ್ಲಿ ಮತ್ತೂ ಖಡಕ್ ಆಗಿದ್ದ ಅನ್ನೋದನ್ನ ಅನೇಕ ಹಿರಿ ತಲೆಗಳು ಹೇಳೊದಿತ್ತು. ಮಾತೂರಿನ ಕಟ್ಟೀ ಸಿದಗೊಂಡಪ್ಪ ಅವನಪ್ಪ ಸಂಗನಬಸಪ್ಪನ ತರಾನೇ.. ಮಾತು ಕೊಟ್ಟರ ಮುಗೀತು ಅನ್ನೂ ತತ್ವದಂವ. ಎಂದೂ ಎರಡು ಮಾತಾಡದಂವ ಅಲ್ಲ. ನ್ಯಾಯ ಪಂಚಾಯ್ತಿಕಿ ಮಾಡೂ ವಿಷಯದೊಳಗೂ ಅಷ್ಟೇ. ತನ್ನ ಜಾತಿಯವರೇ ಇರಲಿ, ಇಲ್ಲಾ ಕೆಳಗಿನ ಕೇರಿಯವರೇ ಇರಲಿ, ನೆರೆದ ಮಂದಿ ಬರೊಬ್ಬರಿ.. ಬರೊಬ್ಬರಿ.. ಅನ್ನೂವಂಗ ನ್ಯಾಯಾ ಕೊಡ್ತಿದ್ದ. ಊರೊಳಗ ಯಾರರೇ ಸಾಯಲಿ ಮೊದಲ ತಾ ಅಲ್ಲಿ ಹಾಜರ್ ಇರತಿದ್ದ. ಅಷ್ಟು ಮಾತ್ರ ಅಲ್ಲ, ಊರಾಗ ಯಾರು ಬೇಕಾದವರ ಮನ್ಯಾಗ ಸಾಯಲಿ ಅವತ್ತೊಂದಿನ ಗೌಡ ಒಟ್ಟಾರೆ ಊಟಾ ಮಾಡತಿರಲಿಲ್ಲ. ಹೊಸದಾಗಿ ಮದುವಿ ಆಗಿ ಬಂದಾಗ ಅವನ ಹೆಂಡತಿ ಗೌರಾಬಾಯಿ ಗಂಡ ಕಟಬರ ದರೆಪ್ಪ ಸತ್ತಾಗ ಆ ದಿವಸ ಊಟಾ ಮಾಡದೇ ಇದ್ದದ್ದು ಕಂಡು ‘ಅಂವೇನು ನಿಮಗ ಹತ್ತದವನಾ.. ಹೊಂದದವನಾ..? ನೀವ್ಯಾಕ ಉಪವಾಸ ಮಾಡಬೇಕು..?’ ಅಂತ ಕೇಳಿದ್ದೇ ಗೌಡ ಗರಂ ಆಗಿ ‘ಉಪ್ಪಾಸ ಮಾಡೋದು ನಾನು..ನೀನಲ್ಲ’ ಅಂದಿದ್ದೇ ಅವತ್ತಿನಿಂದ ಮತ್ತೆಂದೂ ಹೆಂಡತಿ ಅಂಥಾ ಪ್ರಶ್ನೆ ಎತ್ತಿದ್ದಿಲ್ಲ.
ಕಟ್ಟೀ ಸಿದಗೊಂಡಪ್ಪಗೌಡಗ ಅಪರಾತಪರಾ ಮಾತಾಡೂದು, ಮಾತಾಡಿ ಮರಿಯೂದು, ಮಾತು ಮುರಿಯೋದು, ಮಾತಾಡಿ ಮಾಡದೇ ಇರೂದು ಇವಾವೂ ಸೇರಕಿ ಆಗತಿರಲಿಲ್ಲ. ಕಳಕೊಂಡರೂ ನಮದೇ ಕಳಕೋಬೇಕೇ ಹೊರತು ಯಾರಿಗೂ ಟೋಪಿ ಹಾಕಬಾರದು ಅನ್ನೋ ಸಿದಗೊಂಡಪ್ಪ ಊರಾಗ ಯಾರದೂ ಹತ್ತು ಪೈಸೆ ತಗೊಂಡಂವಲ್ಲ. ಅಂವಾ ಇರೂಮಟ ಪೋಲಿಸರು ಮಾತೂರು ಸನ್ಯಾಕ ಹೈದಿರಲಿಲ್ಲ.
ಅದು ಹೇಳಿ ಕೇಳಿ ಒಕ್ಕಲುತನದ ಮನೆತನ. ಅಂದ ಮ್ಯಾಲ ಎಂಟೆತ್ತು, ಎರಡಾಳು ಮನಿಯೊಳಗ ಯಾವತ್ತೂ ಇರವರೇ.. ಅವರನ್ನೆಂದೂ ಅಂವಾ ಆಳುಗಳು ಅಂತ ನೋಡಿದ್ದೇ ಇಲ್ಲ. ತನ್ನ ಮನಿ ಮಕ್ಕಳಂಗ ನೋಡೂದಿತ್ತು. ರೇವಣಸಿದ್ದ ಮತ್ತು ತುಳಜಪ್ಪ ಅನ್ನೋ ಆಳುಗಳು ಸಿದಗೊಂಡಪ್ಪನ ತೋಟದೊಳಗೇ ಮುಪ್ಪ ಕಂಡಿದೈತಿ. ತನ್ನ ಜೀವ ಇರೂಮಟ ಸಿದಗೊಂಡಪ್ಪ ಗೌಡರ ಸೇವೆ ಮಾಡ್ತೀನಿ ಅನ್ನೋ ರೇವಣಸಿದ್ದ ಮುಪ್ಪಿನಕಾಲಕ್ಕೂ ಹೊಲದೊಳಗ ಗುಡಿಸಲ ಹಾಕೊಂಡು ಜೀವ ತಗದವನು. ರೇವಣಸಿದ್ದನ ಸಹವಾಸದೊಳಗ ತುಳಜಪ್ಪನೂ ಲಗ್ನ ಆಗದೇ ಉಳಿವಂಗ ಆಗಬಾರದು ಅಂತ ಸ್ವತ: ಸಿದಗೊಂಡಪ್ಪ ಚಾಂದಕವಟಿ ಊರಿನ ಕನ್ಯೆ ತಗದು, ಅಂವಗ ಮದುವಿ ಮಾಡಿದ್ದ.
ಸಿದಗೊಂಡಪ್ಪಗ ಚನಮಲ್ಲಪ್ಪ ಅನ್ನೋ ಒಬ್ಬ ಖಾಸಾ ಅಣ್ಣಿದ್ದ. ಅಪ್ಪ ಸಂಗನಬಸಪ್ಪ ತೀರಿಕೊಂಡ ಮ್ಯಾಲ ಇಬ್ಬರೂ ಬ್ಯಾರೆ ಆಗಿದ್ದರು. ಇಬ್ಬರ ಹೆಸರಲೆ ನೂರು ನೂರು ಎಕರೆ ಜಮೀನ ಒಂದೊಂದು ಮನಿ, ಬಯಲ ಜಾಗ ಬಂದಿದ್ದಿತ್ತು. ಕಟ್ಟೀ ಸಂಗನಬಸಪ್ಪನ ಜಮೀನು ಬಾಳ ಚುಲೋ ಮಸಾರಿ ಜಮೀನು. ಹಿಂಗೇ ಒಂದು ಹನಿ ಮಳಿ ಆದರೂ ಸಾಕು ಮನಿಯೊಳಗಿನ ಹಗೆ ತುಂಬೂವಂಗ ಕಾಳು ಕಡಿ ಆಗತಿದ್ವು. ಅಣ್ಣ ಚನಮಲ್ಲಪ್ಪನ ಹೆಸರಲೆ ತಗ್ಗಿನಕೇರಿ ತೋಟ ಬಂದಿತ್ತು. ಅದು ಬಾಳ ಚುಲೋ ತೋಟ. ಅವನಿಗೆ ಬಂದ ಮನಿ ಅಟ್ಟಕ್ಕಷ್ಟೇ.. ಹಿಂಗಾಗಿ ಆ ತೋಟ ಅಂವಗ ದಕ್ಕಿತ್ತು. ಇಬ್ಬರಿಗೂ ಕೂಡಿಸಿಕೊಂಡು ಊರ ಹಿರೇರು ಬರೊಬ್ಬರಿ ಅನ್ನೂವಂಗ ಪಾಲು ಮಾಡಿದ್ದಿತ್ತು. ಇಬ್ಬರಿಗೂ ಇಪ್ಪತ್ತು ಇಪ್ಪತ್ತು ಮಾವಿನ ಗಿಡಗೋಳು ಪಾಲಿಗಿ ಬಂದಿದ್ದವು. ಅಣ್ಣ ಚನಮಲ್ಲಪ್ಪ ತಮ್ಮನಂಗ ಧಾಡಸಿ ಅಲ್ಲ. ಕೊಡೂದು ತಗೋಳುದು.. ಮಾರೂದು..ಇಂಥದಕ್ಕೆಲ್ಲಾ ಸಣಗೌಡ ಸಿದಗೊಂಡಪ್ಪನೇ ಹೆಸರಾದವನು. ಊರಾಗ ಯಾರದರೆ ಮದುವಿ, ಮುಂಜವಿ ಐತೆಂದರೆ ಎಂದೂ ಬರೀ ಗೈಲಿ ಹೋಗವನಲ್ಲ. ಊರಾಗಿನ ಯಾವದೇ ಕಾರ್ಯ ಇರಲಿ ಅದನ್ನ ಸಿದಗೊಂಡಪ್ಪನೇ ಮುಂದಾಗಿ ಮಾಡಬೇಕು ಅಂತ ಎಲ್ಲರೂ ಬಯಸತಿದ್ದರು.
ಸಿದಗೊಂಡಪ್ಪಗ ಜಾತಿ..ಧರ್ಮ..ಗಳ ಹಂಗಿರಲಿಲ್ಲ. ಹಿಂಗಾಗೇ ಅವನ ಜೋಡಿ ಕಾಟಕರು..ಕಬ್ಬಲಿಗೇರು.. ಕುರಬರು.. ಮುಸಲರು ಕಾಕಾ.. ಕಾಕಾ. ಅಂತ ಹರಕೊಂಡು ಬರತಿದ್ದರು. ಅದೇ ಅವರಣ್ಣ ಚನಮಲ್ಲಪ್ಪನ ಮನಿಮುಂದ ಹಂಗಲ್ಲ. ಅಂವಾ ಬ್ಯಾರೆ ಜಾತಿಯವರನ್ನ ಕಂಡರೆ ಸೇರತಿರಲಿಲ್ಲ. ‘ಅಂವಾ ಬಾಳ ಸಲಗಿ ಕೊಟ್ಟಾನ ಯಾರನ್ನ ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು’ ಅನ್ಕೋಂತೇ ತನ್ನ ಗೌಡಕಿ ಮೆರೆಯೋ ಚನಮಲ್ಲಪ್ಪನ್ನ ಕಂಡರ ಊರಲ್ಲಿ ಯಾರಿಗೂ ಆಗ್ತಿರಲಿಲ್ಲ. ಮಾತೆತ್ತದರ ಬರೀ ‘ನಮ್ಮ ದೈವದವರು’ ಅನ್ನೋ ಆ ಚನಮಲ್ಲಪ್ಪಗ ತನ್ನ ಜಾತಿ ಜನ ಬಿಟ್ಟರ ಬ್ಯಾರೆ ಯಾರೂ ಕಾಣ್ತಿರಲಿಲ್ಲ. ಸಿದಗೊಂಡಪ್ಪ ಹಂಗಲ್ಲ ಇಡೀ ಊರ ಮೆಚ್ಚೂವಂಗ ಬದುಕಬೇಕು ಅನ್ನಂವ. ತನ್ನ ಅಪ್ಪ ಇದ್ದದ್ದು ಹಂಗೆನೇ.. ಅಷ್ಟಕ್ಕೂ ವೀರಶೈವ ಧರ್ಮದವನಾಗಿರೋ ತಾನು, ಊರೊಳಗ ಜಾತಿ..ಧರ್ಮ ಅಂತ ಹಿಡಕೊಂಡು ಹೊಂಟರ ಬಸವಣ್ಣಪ್ಪನ ತತ್ವಕ್ಕ ವಿರುದ್ಧ ಹೋದಂಗ ಆಗತೈತಿ ಅಂತ ಮತ್ತ ಮತ್ತ ಹೇಳೊ ಸಿದಗೊಂಡಪ್ಪ ಎಂದೂ ಜಾತಿ ಭೇದ ಮಾಡದಂವ ಅಲ್ಲ. ಹಂಗಾಗೇ ಅವನ ಬಳಿ ಮುಸಲರ ಕೇರಿ ಜಗಳಾನೂ ಬರತಿದ್ವು.. ಹೊಲಗೇರಿ ಜಗಳಾನೂ ಬರತಿದ್ವು. ಎರಡನ್ನೂ ಹೌದೌದು ಅನ್ನೂವಂಗ ಬಗೆಹರಿಸಿ ಕಳಿಸೋ ಸಿದಗೊಂಡಪ್ಪ ಯಾರಿಗೂ ಕೆಟ್ಟಾಗಿರಲಿಲ್ಲ.
ಅದೊಂದು ವರ್ಷ ಬಾಳ ಕೆಟ್ಟ ಬರಗಾಲ ಬಿದ್ದಿತ್ತು. ಕಟಕರ ಇಮಾಮಸಾಬ್ ಟ್ರಕ್ ತಗೋಂಡು ಸೀದಾ ಮಾತೂರಿಗೆ ಬಂದು ದನಕರಗಳನ್ನ ಲೋಡ್ ಮಾಡಕೊಂಡು ಹೋಗಿದ್ದಿತ್ತು. ಜನರು ದನಗಳಿಗೆ ಮೇವಿಲ್ಲ, ಕುಡಿಯಾಕ ನೀರಿಲ್ಲ ಅನ್ನೋ ಕಾರಣಕ್ಕ ಆ ಕಟಕರ ಇಮಾಮ್ ಏನು ರೇಟ್ ಹೇಳ್ತಾನ ಅದೇ ರೇಟಿಗೆ ಕೊಟ್ಟು ಟ್ರಕ್ ಹತ್ತಸಿದ್ದರು. ಅಂತದರೊಳಗ ಎಮ್ಮೀ ಮಲಕಾಜಿ ಆಲಮೇಲಕ್ಕ ಹೋಗಿ ಹಾಲು ಮಾರಿ ಬದಕವನು. ಅವನ ಎಮ್ಮಿಗೋಳಿಗಿ ಮೇವು ಇರಲಾರದೇ ಹ್ಯಾಂಗ ಮಾಡಬೇಕು ಅಂತ ದಿಕ್ಕ ತೋಚಲಾರದೇ ಮಲಘಾಣ ನಿಂಗಪ್ಪನ ಹೊಲದಾಗಿರೋ ಬಣವಿಗಿ ಕೈ ಹಾಕಿದ್ದ. ಎಂಟತ್ತು ಸೂಡು ಕಣಕಿ ಹಿರದಿದ್ದ. ಅಷ್ಟರೊಳಗ ನಿಂಗಪ್ಪ ಬಂದವನೇ ಮಲಕಾಜಿನ್ನ ತಡತಡ ಅಂತ ಒಂದು ಸವನ ಬೈಯಾಕ ಸುರು ಮಾಡದ. ‘ಎದಕ್ಕ ಕಿಸಿಲಾಕ ಎಮ್ಮೀ ಕಟಬೇಕು.? ಹಾಲ ಮಾರಿ ರೊಕ್ಕಾ ತಗೋಳಾಕ ಬರತೈತಿ ಮೇವು ಹಾಕಾಕ ಬರಲ್ಲನೂ.. ಮೇಯ್ಸಲಿಕ್ಕ ಆಗಲಿಕ್ಕಂದ್ರ ಕುಂತು ಎಮ್ಮೀ ಮುಂದ ಹೇಲಬೇಕು, ಮಳ್ಳಬೋಳಿಮಗನ್ನ ತಗೊಂಡು ಬಂದು’ ಹಂಗ ಹಿಂಗ ಅಂತ ಬಾಯಿಗಿ ಬಂದಂಗ ಬೈದಿದ್ದಿತ್ತು. ಮಲಕಾಜಿಗಿ ಏನು ಮಾತಾಡಬೇಕಂತ ಗೊತ್ತೇ ಆಗಲಿಲ್ಲ. ಮರುದಿನ ಕಣಕಿ ಸಮೇತ ಮಲಕಾಜಿನ್ನ ನಿಂಗಪ್ಪ ಪಂಚಾಯತಿ ಕಟ್ಟೀಗಿ ಸೇರಸಿದ್ದ.
ಇಲ್ಲಾಂದ್ರ ಉಪ್ಪಾಸ ಬೀಳಬೇಕು, ಆದರ ಕಳ್ಳತನ ಮಾಡಬಾರದು ಅನ್ನೋ ತತ್ವದ ಸಿದಗೊಂಡಪ್ಪ ಅವತ್ತ ಬಾಳ ಯೋಚನೆ ಮಾಡಿ ನ್ಯಾಯ ಪಂಚಾಯ್ತಿಕಿ ಮಾಡಿದ್ದ. ‘ಮಲಕಾಜಿ ಕಣಕಿ ಕದ್ದಿದ್ದು ಹೌದು, ಆದರ ಅದನ್ನ ಎಮ್ಮಿಗಿ ತಿನಸಿಲ್ಲ. ಅದೂ ಅಲ್ಲದೇ ಬರಗಾಲ ಬ್ಯಾರೆ, ಏನೂ ದಾರಿ ಕಾಣಲಾರದಕ್ಕ ಹಂಗ ಮಾಡ್ಯಾನ. ಮಾಡಿದ್ದು ತಪ್ಪೇ.. ಆದರ ಶಿಕ್ಷೆ ಕೊಡೂ ಮಟ್ಟದ ತಪ್ಪಲ್ಲ. ಒಂದಂತೂ ಹೌದು. ಕದ್ದಿದ್ದು ಹೌದು ಅಂತ ಮಲಕಾಜಿನೇ ಒಪ್ಪಿಕೊಂಡಾನ ಅಂದ ಮ್ಯಾಲ ಅದಕ್ಕೇನರೆ ಶಿಕ್ಷೆ ಆಗಬೇಕಲ್ಲ.. ? ಮಲಕಾಜಿ, ನೀ ಹಿಂಗ ಮಾಡು, ಈಗ ನೀ ಏನು ಕಣಕಿ ತಂದೀದಿ ಅದನ್ನ ನಿನ್ನ ಎಮ್ಮಿಗಿ ಹಾಕು. ಮತ್ತೆಂದೂ ಇಂಥಾ ಕೆಲಸ ಮಾಡಬ್ಯಾಡ. ಆ ಕಣಕೀ ಬದಲೀ ನೀ ನಿಂಗಪ್ಪನ ಮನಿಗಿ ಒಂದು ವಾರ ಎರಡೂ ಹೊತ್ತು ಒಂದೊಂದು ಶೇರ್ ಹಾಲು ಕೊಡು ಅಲ್ಲಿಗಿ ಮುಗೀತು’ ಅಂತ ಹೇಳಿ ನ್ಯಾಯಾ ಬಗಿಹರಿಸಿದ್ದ. ಅಲ್ಲಿಗೆ ಮಲಕಾಜಿನೂ ಹಗರಾಗಿದ್ದ, ಹಂಗೇ ನಿಂಗಪ್ಪನೂ.. ಇದೊಂದೇ ಅಲ್ಲ ಇಂಥಾ ಹತ್ತಿಪ್ಪತ್ತು ತಾರಾತಿಗಡಿಗಳನ್ನು ಸರಿ ಮಾಡಿರೋ ಸಿದಗೊಂಡಪ್ಪಗೆ ಮಾತಿಗೆ ತಪ್ಪದರ ಆಗತಿರಲಿಲ್ಲ. ಊರಲ್ಲಿ ಯಾರೇ ಆಗಲಿ ತನಗ ಆಗಲಿಲ್ಲ ಅಂದ್ರ ತನ್ನ ಕಡಿಂದ ನೀಗೂದಿಲ್ಲ ಅಂತ ಮೊದಲೇ ಹೇಳಬೇಕು ಅದನ್ನ ಬಿಟ್ಟು, ಏನ್ಕನರೇ ಸುಳ್ಳು ಹೇಳಾಕ ಸುರು ಮಾಡದರ ಸಿದಗೊಂಡಪ್ಪ ಬೆಂಕಿ ಆಗತಿದ್ದ. ಇದು ಇಡೀ ಊರಿಗೇ ಗೊತ್ತಿತ್ತು. ಹಿಂಗಾಗಿ ಯಾರೂ ಗೌಡನ ಮುಂದ ಸುಳ್ಳ ಹೇಳೂ ಧೈರ್ಯ ಮಾಡ್ತಿರಲಿಲ್ಲ.
ಮಾತೂರ ಮಕ್ಕಳು ಹೆಗಲಿಗಿ ಪಾಟಿಚೀಲ ಸಿಗಸಕೊಂಡು ಪಕ್ಕದ ದಿಂಡೂರಿಗಿ, ಇಲ್ಲಾ ಹೂನಳ್ಳಿಗೆ ನಡಕೋಂತ ಹೋಗೂದು ನೋಡಿ ಸಿದಗೊಂಡಪ್ಪಗೌಡ ಎಮ್.ಎಲ್.ಎ ಗ ಬೆನ್ನಿಗಿ ಬಿದ್ದು ಮಾತೂರೊಳಗೆ ಸಾಲಿ ಮಾಡಸದ ಮ್ಯಾಲ ಪರ ಊರಿಗೆ ನಡಕೊಂತ ಹೋಗಿ ಕಲಿಯೋ ಹುಡುಗರಿಗಿ ಆ ಸಾಲಿ ಬಾಳ ಆಸರ ಆದಂಗ ಆಯ್ತು. ಊರಿನ ಮಕ್ಕಳು ಅಲ್ಲಿ ಓದೂದು..ಬರಿಯೂದು ಕಂಡು ಅಂವಗ ಬಾಳ ಖುಷಿ ಆಗತಿತ್ತು. ತನ್ನ ಹಿರಿ ಮಗ ಮಹಾಂತೇಶಗೂ ಅಲ್ಲೇ ಹಾಕಿದ್ದ. ಅಂವಾ ಸಾಲಿಯೊಳಗ ಪಾಟೀಚೀಲ ಇಟ್ಟು ಮಂಗಮಾಯ ಆಗತಿದ್ದ. ಆ ಸಾಲಿ ಮಾಸ್ತರು ಆ ಪಾಟೀ ಚೀಲನ್ನ ಗೌಡರ ಮನಿಮಟ ಬಂದು ಕೊಟ್ಟು ಹೋಗಬೇಕಿತ್ತು. ಗೌಡ ಮಹಾಂತೇಶನ್ನ ದನಕ್ಕ ಹೊಡದಂಗ ಹೊಡದ ಮ್ಯಾಲೂ ಅಂವಾ ಸಾಲಿಗಿ ಹೋಗಲಿಲ್ಲ.. ಓದಲಿಲ್ಲ. ಎರಡನೆ ಮಗ ಶಿವಬಸು ಮತ್ತು ಮೂರನೇ ಹುಡುಗ ಗುರಲಿಂಗಾದರೂ ಓದಲಿ ಅಂತ ಸಾಲಿಗಿ ಹಾಕದ.
ಶಿವಬಸು ಓದೂದರೊಳಗ ತುಸು ಚುರುಕಿದ್ದ. ಆದರ ಗುರಲಿಂಗಗ ಮಾತ್ರ ಓದು, ಬರಹ ತಲಿಗಿ ಇಳೀಲಿಲ್ಲ. ಹಂಗೂ ಹಿಂಗೂ ಮಾಡಿ ನಾಕನೆತ್ತೆ ಮಟ ಮುಗಿಸಿ ಬಿಟ್ಟ. ಶಿವಬಸು ಮಾತ್ರ ಏಳನೆತ್ತೆಮಟ ಓದಿ, ಆವಾಗಿನ ಮುಲ್ಕಿ ಪರೀಕ್ಷೆ ಪಾಸಾಗಿ ಊರಿಗಿ ಊರೇ ಹೊಗಳುವಂಗ ಮಾಡಿದ್ದ. ಗೌಡಗ ಬಾಳ ಖುಷಿ ಆಗಿತ್ತು. ತನ್ನ ಮನ್ಯಾಗ ಒಬ್ಬ ಮಗಾ ಆದ್ರೂ ಓದೂದು ಬರಿಯೂದು ಕಲತ. ಅದೇನು ಖರ್ಚಾಗತೈತಿ ಆಗಲಿ ಅವನಿಗಿ ಮುಂದಕ್ಕ ಓದಸೂದೇ ಅನ್ನೂ ತೀರ್ಮಾನಕ್ಕ ಬಂದಿದ್ದ. ಹಿರಿ ಮಗ ಮಹಾಂತೇಶ ಒಕ್ಕಲುತನಕ್ಕ ನಿಂತಂಗಾಗಿತ್ತು. ಮಗಳು ಅನ್ನಪೂರ್ಣನ ಓದಸರಿ ಅಕಿ ಹುಷಾರಿ ಅದಾಳ ಅಂತ ಹೆಂಡತಿ ಗೌರಾಬಾಯಿ ಎಟ್ಟು ಹೇಳಿದರೂ ಸಿದಗೊಂಡಪ್ಪ ‘ಹೆಣಮಕ್ಕಳು, ಅದೂ ನಮ್ಮ ಮನಿತನದೊಳಗ ಓದೂದಾ..? ಅದ್ಯಾಂಗ ಆಗತೈತಿ..? ಹುಚ್ಚುಚ್ಚಾರ ಮಾತಾಡಬ್ಯಾಡ ಸುಮ್ಮಿರು ನಿನಗ ಏನೂ ತಿಳಿಯೂದಿಲ್ಲ’ ಅಂತ ಹೇಳಿ ಅನ್ನಪೂರ್ಣಗ ಓದಾಕ ಬರಿಯಾಕ ಆಸೆ ಇದ್ದರೂ ಅದು ಕೈಗಿ ನಿಲುಕಲಾರದಂಗ ಮಾಡಿದ್ದ.
 

‍ಲೇಖಕರು avadhi

10 August, 2013

2 Comments

  1. ಹನುಮಂತ ಹಾಲಿಗೇರಿ

    ನಮ್ಮ ಭಾಗದ ಹಳ್ಳಿಗಳ ಕಥಿ ಇದ್ದಂಗಿದೆ. ಆದಷ್ಟು ಬೇಗ ಓದಬೇಕು. ಜೋಗುರ ಸರ್ ಕಥೆಗಳನ್ನು ಓದಿದ್ದೆ. ಅವರ ಕಾದಂಬರಿ ಬರಿದದ್ದು ಖುಷಿ ಆತು.

  2. shanthi k.a.

    melina saalugalanna oduvaaga kaadambari odalebelemba tudita untaagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading