ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಿ ಶಿವಶಂಕರ್ ಬರೆದ ಸಣ್ಣಕತೆ ’ಚಿರತೆ’

ಎಸ್ ಜಿ ಶಿವಶಂಕರ್

“ಯಾರು ಚಂದ್ರಗಿರಿ..? ಇಳೀರಿ..”
ಜಯಣ್ಣ ತೊಡೆಯ ಮೇಲೆ ಇಟ್ಟುಕೊಂಡಿದ್ದ ಬುತ್ತಿಯ ಚೀಲವನ್ನು ಎತ್ತಿಕೊಂಡು ಇಳಿಯಲು ಅನುವಾದ.
ಅಲ್ಲಿ ಇಳಿದವನು ಅವನೊಬ್ಬನೇ. ಬಸ್ಸಿನಿಂದ ಇಳಿದು ಎದುರಿಗಿದ್ದ ಬೃಹದಾಕಾರವಾಗಿದ್ದ ಬೆಟ್ಟದತ್ತ ನೋಡಿದ. ಬೆಟ್ಟದ ಬುಡದಲ್ಲೇ ರಸ್ತೆ ಹಾದು ಹೋಗಿತ್ತು. ಹಾಗಾಗಿ ಬೆಟ್ಟದ ಪಾದದ ಹತ್ತಿರವೇ ಜಯಣ್ಣ ನಿಂತಿದ್ದ. ಒಮ್ಮೆ ಸುತ್ತಲೂ ನೋಡಿದ. ಬೆಟ್ಟದ ಹಾದಿಯ ಇಕ್ಕೆಲಗಳಲ್ಲಿ ಒಬ್ಬಿಬ್ಬರು ಕಂಡರು. ಅವರುಗಳು ಅಲ್ಲಿ ಸಣ್ಣಸಣ್ಣ ಗುಡಿಸಿಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದ ವ್ಯಾಪಾರಸ್ಥರು.
“ಇವತ್ತು ಸ್ವಾಮಾರಲ್ಲ. ಬೆಟ್ಟದಲ್ಲಿ ಜನ ಇರೊಲ್ಲ. ಯಾಕೋಗ್ತೀಯ..? ತಿಂಗ್ಳಿಂದ ಒಂದೆರಡು ಚಿರತೆ ಬ್ಯಾರೆ ಕಂಡವಂತೆ. ಸ್ವಾಮಾರ ಹೋಗಿದ್ದ ಬಸವ್ರಾಜ ಹೇಳ್ತಿದ್ದ. ಮೇಯೋಕೋಗಿದ್ದ ದನ ತಿಂದವಂತೆ. ಈಗ ದನ ಮೇಯಿಸೋರೂ ಅಲ್ಲಿಗೋಗ್ತಾ ಇಲ್ಲ. ಬೆಟ್ಟದ ತುಂಬಾ ಅದೇ ಮಾತಂತೆ”
ಊರಲ್ಲಿ ಅವ್ವ ಹೇಳಿದ್ದಳು.
“ಹೋಗ್ಬೇಕೂನ್ನಿಸ್ತಿದೆ. ಹೋಗಿ ಬತರ್ಿನಿ. ಹುಷಾರಾಗಿತರ್ಿನಿ”
ಹಟ ಮಾಡುವ ಹುಡುಗನಂತೆ ಹೇಳಿದ್ದ ಜಯಣ್ಣ. ಅದು ಅವ್ವನಿಗೆ ಅರ್ಥವಾಗಿತ್ತು. ಆ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರುವುದು ತನಗೆ ಕಷ್ಟವಾಗುತ್ತದೆ ಎಂದು ಅವ್ವನಿಗೆ ಮಾತ್ರ ಗೊತ್ತಿತ್ತು.
ತುಂಬಿದ ಮನೆಯೊಂದು ಛಿದ್ರವಾಗಹೊರಟಿತ್ತು. ಅದನ್ನು ಸುಸೂತ್ರವಾಗಿ ಮಾಡಲು ಸಾಧ್ಯವಿದ್ದುದು ತನಗೆ ಮಾತ್ರ. ಅದು ಅವ್ವನಿಗೆ ಗೊತ್ತು. ಅಕ್ಕ ಮತ್ತು ತಂಗಿಗೂ ಗೊತ್ತಿತ್ತು. ಅದೇ ವಿಶ್ವಾಸ ಹಾಲೇಶಣ್ಣನಿಗೂ ಬಸವರಾಜನಿಗೂ ಇದ್ದಂತೆ ಕಾಣಿಸುತ್ತಿರಲಿಲ್ಲ.
“ಹೋಗ್ಲೀ ಪುಟ್ಟನ್ನಾದ್ರೂ ಕಕರ್ೊಂಡು ಹೋಗು”
ಹನ್ನೊಂದು ವರ್ಷದ ಬಸವರಾಜನ ಮಗನನ್ನು ಕರೆದುಕೊಂಡು ಹೋಗುವಂತೆ ಅವ್ವ ಹೇಳಿದ್ದಳು.
“ಬೇಡವ್ವ, ಚಿರತೆ ಬೇರೆ ಇದೇಂತಿಯಾ..? ಯಾರೂ ಬೇಡ ಒಬ್ಬನೇ ಹೋಗ್ಬತರ್ಿನಿ”
“ಬೆಟ್ಟ ಹತ್ಬೇಡ. ಕೆಳಗಿನ ದೇವಸ್ಥಾನದಲ್ಲೇ ಪೂಜೆ ಮಾಡಿಸ್ಕಂಡು ಬಾ. ಅಲ್ಲಿ ತಿನ್ನಾಕೂ ಏನೂ ಸಿಗಲ್ಲಾ. ಬುತ್ತಿ ಕಟ್ಕೊಡ್ತೀನಿ. ತಗೊಂಡು ಹೋಗು. ಇಲ್ಲಾನ್ಬೇಡ”
ಅವ್ವನ ಮಾತಿಗೆ ಊಗುಟ್ಟಿದ್ದೆ. ಅತ್ತಿಗೆ ಮಾತ್ರ ಈ ಬಗ್ಗೆ ಒಂದೇ ಒಂದು ಮಾತು ಅಡಿರಲಿಲ್ಲ.
ಪಂಚಾಯತಿ ಮುಖಂಡರು ಬರೋದು ರಾತ್ರಿಯಾದುದರಿಂದ ಊರಲ್ಲಿ ಕೆಲಸವಿರಲಿಲ್ಲ. ಅಕ್ಕಪಕ್ಕದವರು, ನೆಂಟರು ತಲೆಕೆಡಿಸಲು ಕಾಯುತ್ತಿದ್ದರು. ಕೆಲವರು ಹಾಲೇಶನ ಪಕ್ಷದವರು, ಇನ್ನು ಕೆಲವರು ಬಸವರಾಜನ ಪರವಹಿಸಿದವರು. ಹೇಳಿಕೇಳಿ ಇದು ಪಾಲಿನ ವಿಷಯ. ಒಡ ಹುಟ್ಟಿದ ಹಾಲೇಶ, ಬಸವರಾಜ ಆಗಲೇ ವೈರಿಗಳಾಗಿ ಕತ್ತಿ ಮಸೆಯುತ್ತಿದ್ದರು. ಅಕ್ಕ ಮಹಾದೇವಿ, ತಂಗಿ ರಾಜಿ ಪಾಲಿನ ವಾಸನೆ ಹಿಡಿದೇ ಊರಿಗೆ ಬಂದಿಳಿದಿದ್ದರು. ಪಾಲಿನಲ್ಲಿ ಅವರೂ ತಮ್ಮ ಹಕ್ಕು ಪ್ರತಿಪಾದಿಸುವವರಿದ್ದರು. ಅದಕ್ಕೆ ತನ್ನ ಸಪೋರ್ಟ್ ಇದೆ ಎನ್ನುವ ವಿಶ್ವಾಸ ಅವರಿಗಿದ್ದಂತಿತ್ತು.
ಕಮ್ಮಾರನ ಕುಲುಮೆಯಂತೆ ಮನಸ್ಸುಗಳು ಬುಸುಗುಟ್ಟುತ್ತಿದ್ದವು. ಅದರ ಬಿಸಿ ಊರಲಲ್ಲೇ ಹರಡಿತ್ತು. ಊರಿನ ಪ್ರತಿಷ್ಟಿತ ಕುಟುಂಬ ಪಾಲಿನ ಹೊಸ್ತಿಲಲ್ಲಿ ನಿಂತಿತ್ತು.
ಜಯಣ್ಣ ಹಿಂದೆ ಮುಂದೆ ನೋಡದೆ ಬೆಟ್ಟದ ಕಡೆಗೆ ನಡೆದ. ಅವ್ವ ಹೇಳಿದಂತೆ ಕೆಳಗಿನ ದೇವಸ್ಥಾನದಲ್ಲೇ ಪೂಜೆ ಮುಗಿಸಿಕೊಂಡು ಬರುವುದು ಅವನ ಉದ್ದೇಶವಾಗಿರಲಿಲ್ಲ. ಬೆಟ್ಟ ಹತ್ತಿ ಮನೆದೇವರು ಚಂದ್ರಮೌಳೇಶ್ವರನ ಪಕ್ಕದ್ದಲ್ಲೇ ಇದ್ದ ಅಂತರಗಂಗೆಯ ನೀರಿನಲ್ಲಿ ಮೈ ತೋಯಿಸಿಕೊಂಡು, ದರ್ಶನ ಮಾಡಿ ಸಂಜೆಯ ಹೊತ್ತಿಗೆ ಕೆಳಗಿಳಿದು ಬರುವುದು. ಹೇಗೂ ರಾತ್ರಿಯ ಹೊತ್ತಿಗೆ ಊರಿಗೆ ಬಂದರಾಯಿತು ಎಂದುಕೊಂಡಿದ್ದ.
“ಬೆಟ್ಟ ಹತ್ತತೀರಾ..?”
ಯಾರೋ ಕೂಗಿದಂತಾಯಿತು. ಹಿಂದೆ ತಿರುಗಿ ನೋಡಿದ ಜಯಣ್ಣ. ಹತ್ತು ಹೆಜ್ಜೆ ದೂರದಲ್ಲಿ ಒಬ್ಬ ಕಾವಿ ಬಟ್ಟೆ ಧರಿಸಿದವ ಕಂಡ. ಆ ಬೆಟ್ಟದ ಕೆಲವು ಭಾಗಗಳಲ್ಲಿ ಸಂನ್ಯಾಸಿಗಳಿದ್ದುದ್ದು ಜಯಣ್ಣನಿಗೆ ತಿಳಿದಿತ್ತು.
“ಹೌದು” ಅವನು ಹತ್ತಿರವಾದಗ ಜಯಣ್ಣ ಹೇಳಿದ.
“ನಿಲ್ಲಿ ನಾನೂ ಬರ್ತೀನಿ. ತಿಂಗಳಿಂದ ಚಿರತೆ ಕಾಟ ಜಾಸ್ತಿಯಾಗೈತೆ. ಒಬ್ಬರಿಗಿಂತ ಇಬ್ಬರು ವಾಸಿ. ನಿಮ್ಕೈಯಾಗೇನೂ ಇಲ್ಲ. ಏನಾದ್ರೂ ತಗೊಂಡಿದ್ರೆ ಉತ್ತಮ”
ಮಧ್ಯ ವಯಸ್ಸಿನ ಅವನು ಅರೆ ಬೆತ್ತಲಾಗಿದ.್ದ ಬಲಗೈಯಲ್ಲಿ ಕಬ್ಬಿಣದ ತ್ರಿಶೂಲ, ಎಡಗೈಯಲ್ಲಿ ಒಂದು ಚೀಲ ಕಂಡಿತು. ಮೊದಲ ಬಾರಿಗೆ ಜಯಣ್ಣನಿಗೆ ಕೊಂಚ ಹೆದರಿಕೆಯಾಯಿತು. ಹಾಗಾದರೆ ಚಿರತೆ ಇರುವುದು ನಿಜ.
“ನೀವೇನು ಬೆಟ್ಟದಲ್ಲಿ..?” ಜಯಣ್ಣ ಕೇಳಿದ.
“ಅಲ್ಲೇ ವಾಸ. ದೇವರಿರೋ ಗುಹೆಗೆ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಗುಹೆ ಇದೆ. ಅಲ್ಲಿ ನಾವು ಮೂರ್ಜನ ಇದ್ದೀವಿ. ಸೋಮವಾರ ಬಿಟ್ಟರೆ ಭಕ್ತರು ಕಮ್ಮಿ. ಸ್ವಲ್ಪ ದಿನಸಿ ಬೇಕಾಗಿತ್ತು ಅದಕ್ಕೇ ಕೆಳಗೆ ಬಂದಿದ್ದೆ. ಸಾಮನ್ಯವಾಗಿ ನಾವು ಕೆಳಗೇ ಬರೊಲ್ಲ. ಅಲ್ಲೇ ನಮ್ಮ ಪೂಜೆ, ಧ್ಯಾನ, ವಾಸ ಎಲ್ಲಾ”
“ತಮ್ಮದು ಯಾವ ಸ್ಥಳ..? ದೇವರ ದರ್ಶನವೋ..?”
“ಬೆಂಗ್ಳೂರು..ದರ್ಶನಕ್ಕೆ ಬಂದಿರೋದು”
“ಒಬ್ಬರೇ…?”
“ಹೂ..”
ಸಂನ್ಯಾಸಿ ಸಿಕ್ಕಿದ್ದು ಒಳ್ಳೆಯದೇ ಆಯಿತು ಎನ್ನಿಸಿತು ಜಯಣ್ಣನಿಗೆ ಇಲ್ಲದಿದ್ದರೆ ಚಿರತೆಯ ಭಯ ಕಾಡದೆ ಇರುತ್ತಿರಲಿಲ್ಲ. ತಲೆಯಲ್ಲಿ ಗುಂಯ್ಗುಡುತ್ತಿದ್ದ ಪಾಲಿನ ವಿಷಯ ಕೊಂಚ ಕಾಲ ಮರೆಯಾಗಬಹುದು ಎನ್ನಿಸಿತು. ಊರಿಗೆ ಬಂದಾಗಿನಿಂದ ಜನ ಕಿವಿ ತುಂಬುತ್ತಿದ್ದರು. ಅತ್ತೆ ಮತ್ತು ಸೋದರ ಮಾವ ಇಬ್ಬರೂ ‘ನೀನೂ ಪಾಲು ತಗೋ..ನೀನೇನು ಸಂನ್ಯಾಸಿಯಾ..ನಿನಗೂ ಹೆಂಡರು ಮಕ್ಕಳಿಲ್ವಾ..? ಬೇಡಾಂದ್ರೆ ಮಾರಿಬಿಡು. ಇನ್ನು ಹೆಣ್ಣು ಮಕ್ಕಳಿಗೆ ಯಾಕೆ ಪಾಲು..? ಅವರೇನು ಈ ಊರಿನಲ್ಲಿರುವವರೆ..? ಗಂಡ, ಮಕ್ಕಳು ಎಲ್ಲಾ ಅನುಕೂಲ ಇರುವಾಗ ಅವಯರ್ಾಕೆ ಪಾಲಿಗೆ ಬರಬೇಕು..?’ ಎಂದು ಹಿತೋಪದೇಶ ಮಾಡುತ್ತಿದ್ದರು. ಅವರಿಂದ ದೂರ ಇರಬೇಕು ಎನ್ನಿಸಿತ್ತ್ತು. ತಾನು ಪಾಲು ಕೇಳುವುದಿಲ್ಲ ಎನ್ನುವ ಅನುಮಾನ ಅವರಿಗೆ ಬಂದಿರಬೇಕು.
“ಸಂನ್ಯಾಸ ಸ್ವೀಕರಿಸಿ ಎಷ್ಟು ವರ್ಷ ಆಯ್ತೋ?”
“ಹತ್ತು ವರ್ಷ ಆಯ್ತು. ಧೀಕ್ಷೆಗೀಕ್ಷೆ ಏನೂ ತಗೊಂಡಿಲ್ಲ. ಹೀಗೇ..ಸಂಸಾರ ಬೇಡ ಅನ್ನಿಸಿ ಎಲ್ಲಾ ಬಿಟ್ಟು ಬಂದೆ”
ಬೆಟ್ಟಕ್ಕೆ ಇದೇ ಸರಿಯಾದ ದಾರಿ ಅನ್ನುವಂತೇನೂ ಇರಲಿಲ್ಲ. ಬೆಟ್ಟ ಹತ್ತುವವರು, ದನಗಾಹಿಗಳು ನಡೆದಾಡಿದ ಜಾಡು ಹಿಡಿದೇ ಹತ್ತಬೇಕಾಗಿತ್ತು. ಜೊತೆಯಲ್ಲಿ ಆ ಸಂನ್ಯಾಸಿ ಇದ್ದುದರಿಂದ ಹಾದಿ ತಪ್ಪುವ ಭಯ ಇರಲಿಲ್ಲ. ಬೆಟ್ಟದ ದಾರಿ ಕಡಿದಾಗಿದ್ದು ಮಾತಾಡುತ್ತಾ ಹತ್ತುವಾಗ ಆಯಾಸ ಕಡಿಮೆಯಾಗುತಿತ್ತು.
“ಬೆಂಗ್ಳೂರಲ್ಲಿ ತಮ್ಮದೇನು ಗೌರ್ನಮೆಂಟ್ ಕೆಲಸವೋ..?”
“ಇಲ್ಲ, ಪ್ರೈವೇಟ್ ಪ್ರ್ಯಾಕ್ಟೀಸು, ಚಾರ್ಟಡ್ ಅಕೌಂಟೆಂಟು”
“ನನ್ನ ತಮ್ಮ ಒಬ್ಬ ಬೆಂಗ್ಳೂರಾಗಿದಾನೆ..?”
“ಅಲ್ಲಾ ಸ್ವಾಮಿ ಸಂಸಾರ ಬಿಟ್ಟಿದೀನಿ ಅಂತೀರಿ, ತಮ್ಮ ಅಂತೀರಿ..”
ಜಯಣ್ಣನ ಮಾತಿಗೆ ಅವನು ನಕ್ಕ.
“ನೀವು ಹೇಳಾದೂ ನಿಜ. ಆದರೆ ನಾನು ಸ್ವಭಾವ ಸಂನ್ಯಾಸಿ ಅಲ್ಲ. ಅಭಾವ ಸನ್ಯಾಸಿ. ನಿಮ್ಮಂತ ಕಲಿತವರ ಹತ್ರ ಏನು ಮುಚ್ಚಿಡೋದು. ನಾನು ಸ್ವಭಾವತಃ ಸೋಮಾರಿ, ಹೆಂಡತಿಗೆ ನನ್ನ ಸ್ವಭಾವ ಸರಿಹೋಗುತ್ತಿರಲಿಲ್ಲ. ನನ್ನ ಸರಿದಾರಿಗೆ ತರೋಕೆ ಹೆಣಗ್ತಾ ಇದ್ದಳು. ಯಾವಗಲೋ ಇವೆಲ್ಲಾ ಬೇಡ ಅನ್ನಿಸಿಬಿಡ್ತು ಊರು ಕೇರಿ ಬಿಟ್ಟು ತಿರುಗ್ತಾ ತಿರುಗ್ತಾ ಇಲ್ಲಿ ಬಂದೆ” ಎಂದು ಹೇಳಿ ನಕ್ಕ.
ಮಾತಿನ ನಡುವೆ ದಾರಿ ಸವೆಯತೊಡಗಿತು.
ಆಗೀಗ ಆಡುವ ಇವರ ಮಾತು ಬಿಟ್ಟರೆ ಚಂದ್ರಗಿರಿಯಲ್ಲಿ ನೀರವತೆ ನೆಲಸಿತ್ತು. ಕ್ರಿಮಿ ಕೀಟಗಳ ಸದ್ದು. ಹಾದಿಯ ಇಕ್ಕೆಲಗಳಲ್ಲೂ ಗಿಡಗಂಟೆಗಳು ಹುಲುಸಾಗಿ ಬೆಳೆದಿದ್ದವು. ಮರಗಳಿಂದ ಕೆಳಗಿಳಿದು ಸ್ವಚ್ಛಂದವಾಗಿ ಆಡುತ್ತಿದ್ದ ಅಳಿಲುಗಳು ಇವರನ್ನು ಕಂಡು ಸರಸರನೆ ಮರ ಏರುತ್ತಿದ್ದವು. ಅಲ್ಲಲ್ಲಿ ವಾನರಸೇನೆಗಳು ಕಾಣುತ್ತಿದ್ದವು. ಬೆಟ್ಟದಲ್ಲಿ ಕಲ್ಲು ಬಂಡೆಗಳಿಗಿಂತಾ ಮರಳಿನಂತಾ ಕಲ್ಲು ಹೆಚ್ಚು. ಕುಟ್ಟಿದರೆ ಪುಡಿಯಾಗುವಂತ ಕಲ್ಲು. ಇತ್ತ ಮಣ್ಣೂ ಅಲ್ಲ, ಅತ್ತ ಕಲ್ಲೂ ಅಲ್ಲ ಎನ್ನುವಂತ ಭೂಮಿ.
ಮಾತಿಗೆ ಬರವಿರಲಿಲ್ಲ. ಜಯಣ್ಣ ಸುಮ್ಮನಿರಲು ಸಂನ್ಯಾಸಿ ಬಿಡಲಿಲ್ಲ. ಹಾದಿಯುದ್ದಕ್ಕೂ ಮಾತು. ಜಯಣ್ಣನಿಗೆ ಬೆಟ್ಟ ಹತ್ತಿ ಅಭ್ಯಾಸವಿಲ್ಲದೆ ದಣಿವಿನಿಂದ ಆಗಾಗ್ಗೆ ಅಲಲ್ಲಿ ಕೂರುತ್ತಿದ್ದ.್ದ ಸಂನ್ಯಾಸಿಗೆ ಆ ಜಾಗ ಚಿರಪರಿಚಿತ; ಹತ್ತಿ ಇಳಿದು ಅಭ್ಯಾಸವಿತ್ತು. ಹತ್ತುವಾಗ ಅತ್ತಿತ್ತ ನೋಡುತ್ತಾ ಚಿರತೆಯ ಬಗ್ಗೆ ಗಮನವಹಿಸಿ ಇಬ್ಬರೂ ನಡೆದಿದ್ದರು.

ಬೆಟ್ಟದ ಮೇಲಕ್ಕೆ ಬಂದಾಗ ಹತ್ತು ಮುಕ್ಕಾಲು ಗಂಟೆಯಾಗಿತ್ತು. ತಾನು ಬಸ್ಸಿನಿಂದ ಇಳಿದಾಗ ಹತ್ತಾಗಿತ್ತು ಎಂದು ಜಯಣ್ಣ ನೆನಪಿಸಿಕೊಂಡ. ಹತ್ತಲು ಮುಕ್ಕಾಲು ಗಂಟೆಯಾದರೆ ಇಳಿಯಲು ಅರ್ಧ ಗಂಟೆ ಸಾಕು ಎಂದು ಅಂದಾಜು ಮಾಡಿದ.
“ನಮ್ಮ ಆಶ್ರಮ ಇನ್ನೂ ಮೇಲೈತೆ ಬರ್ತೀರಾ..? ಬನ್ನಿ ಪ್ರಸಾದ ಮಾಡ್ಕೊಂಡು ಹೋಗ್ಬಹುದು”
ಸಂನ್ಯಾಸಿ ಕೇಳಿದ.
“ದರ್ಶನ ಆದ್ಮೇಲೆ ನೋಡ್ತೀನಿ..”
ಸನ್ಯಾಸಿ ಇನ್ನೂ ಮೇಲೆ ಏರುತ್ತಾ ಹೋದ.
ಚಂದ್ರಮೌಳೇಶ್ವರನ ಗುಹೆಯ ಮುಂದೆ ಸಮತಟ್ಟಾದ ಜಾಗವಿತ್ತು. ಅದರೆ ಬಲ ಪಾರ್ಶ್ವದಲ್ಲಿ ಇನ್ನೂ ಮೇಲೆ ಹತ್ತಲು ಜಾಗವಿತ್ತು. ಜಯಣ್ಣ ಸಂನ್ಯಾಸಿ ಮರೆಯಾಗುವತನಕ ನೋಡಿದ. ಅಷ್ಟರಲ್ಲಿ ಹತ್ತಿದ ದಣಿವು ಸ್ವಲ್ಪ ಕಡಿಮೆಯಾಗಿತ್ತು.
ಲಿಂಗರೂಪಿ ಚಂದ್ರಮೌಳೇಶ್ವರನ ಗುಹೆಯನ್ನು ಜಯಣ್ಣ ಪ್ರವೇಶಿಸುವಾಗ ಏನೋ ಒಂದು ರೀತಿಯ ಭಯವಾಯಿತು. ಅದಕ್ಕೆ ಕಾರಣ ತಿಳಿಯದೆ ಒಳಗೆ ಪ್ರವೇಶಿಸಿದ. ಬೆಟ್ಟ ಹತ್ತುವಾಗ ಧಾರಾಕಾರವಾಗಿ ಬೆವರು ಸ್ರವಿಸಿ, ಅವನ ಒಳ ಉಡುಪುಗಳ ಜೊತೆಗೆ ಷಟರ್ು ಕೂಡ ನೆನೆದಿತ್ತು. ಗುಹೆಯನ್ನು ಪ್ರವೇಶಿಸುತ್ತಲೇ ಹವಾನಿಯಂತ್ರಿತ ವಾತಾವರಣದ ಅನುಭವ. ಗುಹೆಯ ಇಕ್ಕೆಲಗಳಲ್ಲೂ ನೀರು ಹರಿದ ಗುರುತು. ಭಕ್ತರು ಅಂತರಗಂಗೆಯಲ್ಲಿ ಸ್ನಾನ ಮಾಡಿದ ನೀರು ಈಚೆ ಹರಿದು ಬಂದ ಬರುತ್ತಿತ್ತು. ಶನಿವಾರವಾದುದರಿಂದ ಭಕ್ತರು ಇರಲಿಲ್ಲ. ಶುಕ್ರವಾರ ನಡೆದ ಪೂಜೆಯ ಗುರುತು ಇನ್ನೂ ಉಳಿದಿತ್ತು. ಕಪರ್ೂರ, ಊದುಬತ್ತಿ, ತುಪ್ಪದ ದೀಪ, ಎಣ್ಣೆಯ ದೀಪ, ವೀಭೂತಿಗಳ ವಾಸನೆ ತೆಳುವಾಗಿ ಹರಡಿತ್ತು. ಗುಹೆ ನಿರ್ಜನವಾಗಿತ್ತು. ಅರ್ಚಕರಾದರೂ ಇರುತ್ತಾರೋ ಇಲ್ಲವೋ ಎಂಬ ಅನುಮಾನವಾಯಿತು.
ಅದು ಇಡೀ ಬೆಟ್ಟದಲ್ಲಿಯೇ ದೊಡ್ಡ ಗುಹೆ. ಪ್ರವೇಶ ಕಿರಿದು, ಒಳಗೆ ಹೋಗುತ್ತಾ ವಿಶಾಲವಾಗಿ ಸುಮಾರು ನೂರು ಜನರು ಹಿಡಿಸುವಷ್ಟು ದೊಡ್ಡದಾಗಿತ್ತು. ಅಕ್ಕಪಕ್ಕ ಬೃಹತ್ ಬಂಡೆಗಳ ಸಂದುಗಳಲ್ಲಿ ಸೋರಿ ಬರುವ ಬೆಳಕು ಗುಹೆಯ ಕತ್ತಲಿನ ಸಾಂದ್ರತೆ ಕಮ್ಮಿ ಮಾಡಿತ್ತು.
ಕಪ್ಪು ಶಿಲೆಯ ಶಿವಲಿಂಗ ಮಿರಿಮಿರಿ ಮಿಂಚುತ್ತಿತ್ತು. ಕಂಚಿನ ಐದು ಹೆಡೆಯ ಸರ್ಪದ ಪ್ರಭಾವಳಿ ಅದಕ್ಕೆ ಭವ್ಯತೆ ಕೊಟ್ಟಿತ್ತು. ಬೆಳಗುತ್ತಿದ್ದ ದೀಪವೊಂದು ಅಲ್ಲಿ ಕೆಲ ಸಮಯದ ಹಿಂದೆ ಪೂಜೆ ನಡೆದಿದೆ ಎನ್ನುವ ಕುರುಹು ತೋರುತ್ತಿತ್ತು. ಅರ್ಚಕರು ಬಂದು ಹೋಗಿದ್ದಿರಬಹುದು ಎನಿಸಿತು. ನಿರ್ಜನವಾಗಿದ್ದ ಆ ಗುಹೆಯಲ್ಲಿ ಏನೋ ಒಂದು ರೀತಿಯ ಭಯದ ವಾತಾವರಣ. ಅಲ್ಲಿ ಇನ್ಯಾರಾದರೂ ಅಡಗಿರಬಹುದು ಎಂಬ ಭಾವನೆ.
ದೇವರಿಗೆ ನಮಸ್ಕರಿಸಿ, ಅಂತರಗಂಗೆಯ ತೊಟ್ಟಿಯ ಪಕ್ಕದಲ್ಲಿದ್ದ ಬಿಂದಿಗೆಯಿಂದ ನೀರು ಮೊಗೆದು ತಂದು ತಲೆಯ ಮೇಲೆ ಸುರಿವಿಕೊಂಡ ಜಯಣ್ಣನಿಗೆ ಆಯಾಸವೆಲ್ಲಾ ಪರಿಹಾರವಾದಂತಾಯಿತು. ತಣ್ಣಗಿನ ನೀರು ಹಿತ ನೀಡಿತು. ಇನ್ನೊಂದೆರಡು ಬಿಂದಿಗೆ ನೀರು ತಲೆಯ ಮೇಲೆ ಸುರಿವಿಕೊಂಡು ಒಂದಿಷ್ಟು ಕುಡಿದ. ದೇವರ ಪಕ್ಕದಲ್ಲಿದ್ದ ವೀಭೂತಿಗಟ್ಟಿಯಿಂದ ಭಸ್ಮ ಪೂಸಿಕೊಂಡು ದೇವರಿಗೆ ನಮಸ್ಕರಿಸಿದ. ಕೆಲವು ನಿಮಿಷಗಳ ಮೌನವನ್ನು ಸವಿದ. ಆಹಾ ಎನಿಸಿತು. ಎಷ್ಟೋ ಕಾಲದಿಂದ ಇಂತಾ ನೆಮ್ಮದಿ ಸಿಕ್ಕಿರಲಿಲ್ಲ ಎನಿಸಿತು. ಬೆಟ್ಟಕ್ಕೆ ಪ್ರತಿ ವರ್ಷವೂ ತಪ್ಪದೆ ಹೆಂಡತಿ-ಮಕ್ಕಳೊಂದಿಗೆ ಬರುತ್ತಿದ್ದಾಗ ಸಿಗದಿದ್ದ ನಮ್ಮದಿ ಈಗ ಸಿಕ್ಕಿತ್ತು. ತುಂಬಾ ಆಪ್ಯಾಯವೆನಿಸಿತು.
ಆ ನೆಮ್ಮದಿ ಬಹುಕಾಲ ಉಳಿಯಲಿಲ್ಲ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎನಿಸಿತು. ಇದ್ದಕ್ಕಿದ್ದಂತೆ ಆವರೆಗೂ ಇಲ್ಲದಿದ್ದ ಚಿರತೆಯ ನೆನಪಾಯಿತು. ಅನುಮಾನದಿಂದ ಸುತ್ತ ನೋಡಿದ ಏನೂ ಕಾಣಲಿಲ್ಲ. ಮೇಲೆ ನೋಡಿದರೆ ಬಂಡೆಯೊಂದರ ಮೇಲೆ ಕುಳಿತಿದ್ದ ಕೋತಿಯೊಂದು ಜಯಣ್ಣನ ಚೀಲವನ್ನ್ತು ನೋಡುತ್ತಿತ್ತು. ಒಮ್ಮೆಲೇ ಚೀಲದತ್ತ ಧಾವಿಸಿ ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಯಾರೋ ಬಿಟ್ಟು ಹೋಗಿದ್ದ ಕೋಲೊಂದನ್ನು ಕೈಗೆತ್ತಿಕೊಂಡ. ಕೋತಿ ಸಣ್ಣಗೆ ಗುರ್ರೆಂದಿತು.
ಇನ್ನು ಇಲ್ಲಿ ನೆಮ್ಮದಿ ಸಿಗುವುದಿಲ್ಲ ಎನಿಸಿ ಮತ್ತೊಮ್ಮೆ ದೇವರಿಗೆ ನಮಸ್ಕಾರ ಮಾಡಿ ಗುಹೆಯಿಂದೀಚೆ ಬಂದ. ಈಚೆ ಬಂದಾಗ ಸಮಯ ನೋಡಿಕೊಂಡ. ಒಂದು ಗಂಟೆಯನ್ನು ಸಮೀಪಿಸುತ್ತಿತ್ತು. ಬಸ್ಸು ಬರುವುದು ನಾಲ್ಕು ಗಂಟೆಗೆ. ಅಷ್ಟರೊಳಗೆ ತಾನು ಕೆಳಗಿಳಿಯಬೇಕೆಂದು ನೆನಪು ಮಾಡಿಕೊಂಡ. ಇನ್ನು ಇಲ್ಲಿ ಮಾಡುವುದೇನಿದೆ ಬೆಟ್ಟ ಇಳಿಯೋಣ ಎನಿಸಿತು. ಚಿರತೆಯ ಭಯ ಕಾಡಿತು. ಇದುವರೆಗೂ ಇಲ್ಲದಿದ್ದ ಭಯ ಈಗ ಕಾಣಿಸಿತು. ಬೆಟ್ಟಾ ಹತ್ತುವಾಗ ಸಂನ್ಯಾಸಿ ಇದ್ದ. ಅವನ ಕೈಯಲ್ಲಿ ಕಬ್ಬಿಣದ ತ್ರಿಶೂಲವಿತ್ತು. ಈಗ ತನ್ನ ಕೈಯಲ್ಲಿರುವುದು ಒಂದು ಚೀಲ ಮತ್ತು ಒಂದು ಕೋಲು ಅಷ್ಟೆ! ತಾನು ತಪ್ಪು ಮಾಡಿದೆನೇನೋ ಎಂಬ ಅಳುಕು ಮೂಡಿತು. ಅವ್ವ ಹೇಳಿದ ಹಾಗೆ ಸುಮ್ಮನೆ ಕೆಳಗಿನ ದೇವಸ್ಥಾನಕ್ಕೆ ಹೋಗಿದ್ದರೆ ಸಾಕಾಗಿತ್ತು. ಈಗ ತಾನೊಬ್ಬನೇ! ಇಳಿಯುವಾಗ ಚಿರತೆ ತನ್ನ ಮೇಲೆ ಆಕ್ರಮಣ ಮಾಡಿದರೆ..? ತನ್ನ ಗತಿ ಮುಗಿದಂತೆಯೇ!! ಅದಕ್ಕೆ ಆಹಾರವಾಗುತ್ತೇನೇನೋ ಎಂಬ ಆತಂಕದಿಂದ ಜಯಣ್ಣ ಖಿನ್ನನಾದ.
ಕೆಲ ಹೊತ್ತು ಗುಹೆಯಿಂದಾಚೆ ಸಮತಟ್ಟಾದ ಬಂಡೆಯೊಂದರ ಮೇಲೆ ಕೂತ. ಹಸಿವು ಕಾಣಿಸಿತು. ಅಶ್ಚರ್ಯವಾಯಿತು. ಒಂದೆಡೆ ಚಿರತೆಯ ಭಯ, ಇನ್ನೊಂದೆಡೆ ತಾನು ತಂದ ಆಹಾರಕ್ಕಾಗಿ ಕಾದಿದ್ದ ಕೋತಿ. ಇದರ ನಡುವೆ ತನ್ನ ಹಸಿವು! ಎಂತಾ ವೈರುಧ್ಯಗಳು!!?
ಊರಿಗಾದರೂ ಫೋನು ಮಾಡೋಣ ಎಂದು ಮೊಬೈಲು ತೆಗೆದ. ನೆಟ್ವಕರ್ೆ ಇರಲಿಲ್ಲ!! ಗುಹೆಯಲ್ಲಿ ಕಂಡ ಕೋತಿ ಜಯಣ್ಣನನ್ನೇ ಹಿಂಭಾಲಿಸುತ್ತಾ ಬಂದಿತ್ತು. ಜಯಣ್ಣನ ಎಲ್ಲಾ ಚಯರ್ೆಗಳನ್ನೂ ಗಮನಿಸುತ್ತಾ ಕೂತಿತ್ತು.
ಕೋಲನ್ನು ತೆಗೆದು ಆಡಿಸುತ್ತಾ ಅವ್ವ ಕೊಟ್ಟಿದ್ದ ಬುತ್ತಿಯ ಚೀಲವನ್ನು ಜಯಣ್ಣ ಬಿಚ್ಚಿದ. ಎರಡು ಅಕ್ಕಿ ರೊಟ್ಟಿ, ಚಟ್ನಿ ಮತ್ತು ಒಂದು ಸ್ಟೀಲ್ ಡಬ್ಬಿಯಲ್ಲಿ ಒಂದಿಷ್ಟು ಮೊಸರು ಕಂಡಿತು. ಅದೂ ಅವ್ವ ಮಾಡಿದ್ದು. ಇಬ್ಬರು ಸೊಸೆಯರಿಗೂ ಅವ್ವನಿಗೂ ಆಗದು. ಯಾವಾಗಲೂ ಮನೆಯಲ್ಲಿ ಜಗಳ. ಹೆಂಗಸರ ಸ್ವಭಾವ ಜಯಣ್ಣನಿಗೆ ಈಗಲೂ ಅರ್ಥವಾಗಿರಲಿಲ್ಲ. ಹೊಂದಾಣಿಕೆಯೆನ್ನುವುದು ಅಷ್ಟು ಕಷ್ಟವೇ..? ಅತ್ತಿಗೆಯರಾಗಲೀ ಅವ್ವನಾಗಲೀ ರಾಜೀ ಸ್ವಭಾವದವರಾಗಿರಲಿಲ್ಲ. ಈ ಇಳಿ ವಯಸ್ಸಿನಲ್ಲೂ ಅವ್ವ ಎಲ್ಲಾ ನಿಭಾಯಿಸಿಕೊಂಡು ಹೋಗುವುದು ಕೆಟ್ಟದೆನಿಸಿತು. ಅವ್ವ ಈಗಲೂ ಎಲ್ಲದರ ಮೇಲೂ ತನ್ನ ಹತೋಟಿ ಇಡಲು ಹೆಣಗುತ್ತಾಳೆ. ಇದು ಎಲ್ಲರಿಗೂ ಒಪ್ಪಿಗೆಯಾದಂತಿರಲಿಲ್ಲ. ಅವ್ವನಿಗಾದರೂ ಈ ಕೆಟ್ಟ ಹಠ ಯಾಕೆ ಎಂದು ಜಯಣ್ಣನಿಗೆ ಅರ್ಥವಾಗಿರಲಿಲ್ಲ. ಎಷ್ಟೋ ಸಲ ಅವ್ವನಿಗೆ ಬುದ್ಧಿ ಹೇಳಿದ್ದ. ನಿನ್ನ ಮಾತು ಕೇಳಿದ್ರೆ ಅವ್ರೆಲ್ಲಾ ಸೇರ್ಕಂಡು ಮೂಲೆಗಾಕ್ತಾರೆ! ಎರಡೊತ್ತು ಕೂಳೂ ಹಾಕೊಲ್ಲ. ನಿಂಗಿವೆಲ್ಲಾ ಗೊತ್ತಾಗಲ್ಲ ಸುಮ್ನಿರು. ನಿನಗೆ ನಿನ್ನ ಅಣ್ಣ, ತಮ್ಮ, ಅತ್ತಿಗೆಯರ ವಿಷಯ ಗೊತ್ತಿಲ್ಲ. ನಾನು ಇಷ್ಟು ಜೋರಾಗಿರೋಕೆ ನನ್ನ ಹೊಟ್ಟೆ ತುಂಬ್ತಾ ಐತೆ. ಇಲ್ದಿದ್ರೆ ಈಟೊತ್ತಿಗೆ ನಂಗೆ ಶಿವನ ಪಾದ ಸೇರಿಸಿಬಿಡೋರು’ ಎಂದು ಬಾಯಿ ಮುಚ್ಚಿಸುತ್ತಿದ್ದಳು. ಎಲ್ಲಾ ಸರಿಯಾಗಿದ್ದರೆ ಅವ್ವನನ್ನು ತಾನೇ ಕರೆದುಕೊಂಡು ಹೋಗಬಹುದಿತ್ತು. ಆದರೆ ಸುಗುಣ ಇದಕ್ಕೆ ಸಮ್ಮತಿಸಿರಲಿಲ್ಲ. ‘ಯಾವ ಕಾರಣಕ್ಕೂ ಅವರು ಇಲ್ಲಿಟ್ಕೊಂಡು ಸಾಕ್ತಿನೀಂತ ಒಪ್ಪಿಕೋಬಾರದು. ಆ ಆಸ್ತಿಯಲ್ಲಿ ಪಾಲೂ ಬೇಡ, ಅದರ ಹೊಣೆಗಾರಿಕೇನೂ ಬೇಡ’ ಎಂದು ಎಚ್ಚರಿಸಿದ್ದಳು.
ರೊಟ್ಟಿಯನ್ನು ಕೆಂಪು ಮೆಣಸಿನ ಕಾಯಿಯ ಚಟ್ನಿಯ ಜೊತೆ ತಿಂದು ಬಾಯಿ ಚಪ್ಪರಿಸಿದ ಜಯಣ್ಣ. ಬೆಂಗ್ಳೂರಲ್ಲಿ ಬಿಸಿಬೇಳೆ ಬಾತು, ಇಡ್ಲಿ ತಿಂದು ಬಾಯಿ ಜಡ್ಡು ಹಿಡಿದಂತಾಗಿತ್ತು. ಇಷ್ಟು ವರ್ಷಗಳಾದರೂ ಅವ್ವನ ಕೈರುಚಿ ಮಾತ್ರ ಹಾಗೇ ಇತ್ತು. ಅಪ್ಪನಿಗೂ ಅವ್ವನಿಗೂ ಅಜಗಜಾಂತರ ವ್ಯತ್ಯಾಸ. ಅಪ್ಪ ಎಂದೂ ಸಂಸಾರದ ನೊಗ ಹಿಡಿದವನೇ ಅಲ್ಲ. ರಾಜಕೀಯದ ಚಟ! ಜನರನ್ನು ಕಟ್ಟಿಕೊಂಡು ಊರೂರು ತಿರುಗುತ್ತಾ ಅದು ಮಾಡಿಸಿಕೊಡುತ್ತೇನೆ, ಇದು ಮಾಡಿಸುತ್ತೇನೆ ಎಂದು ಓಡಾಡುತ್ತಿದ್ದವ. ತಾನು ಎಸ್.ಎಸ್.ಎಲ್.ಸಿ ಪರೀಕ್ಷೆ ಕಟ್ಟಿದಾಗಲೇ ಅಪ್ಪ ತೀರಿಕೊಂಡಿದ್ದು. ಅಪ್ಪ ತೀರಿಕೊಂಡಿದ್ದರಿಂದ ಅವ್ವನ ಪಾತ್ರದಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಹೊಲ, ಗದ್ದೆ, ಮನೆ, ಜಾನುವಾರು ಎಂದು ಅಪ್ಪನ ಕೈಹಿಡಿದಾಗಿನಿಂದ ಹೋರಾಡುತ್ತಾ ಬಂದವಳು ಇಂದಿಗೂ ಹಾಗೇ ಮಾಡುತ್ತಿದ್ದಾಳೆ.
ಐದು ಜನ ಮಕ್ಕಳಲ್ಲಿ ಓದಿದವ ತಾನೊಬ್ಬನೇ! ಅದೂ ಎಸ್.ಎಸ್.ಎಲ್.ಸಿ ಮುಗಿದಾಗ ಮನೆ ಬಿಟ್ಟವನು ಮತ್ತೆ ಮನೆ ಸೇರಿಲ್ಲ. ಅವರಿವರ ಕಾಲು ಹಿಡಿದು, ಉಚಿತ ಹಾಸ್ಟೆಲ್ಲುಗಳ ಸಹಾಯ, ಕೆಲವು ದಾನಿಗಳ ಸಹಾಯದಿಂದ ಓದಿ ಮುಂದುವರಿಸಿದ್ದ. ಉಳಿದವರಲ್ಲಿ ರಾಜಿ ಮತ್ತು ಮಾದೇವಿ ಪ್ರೈಮರಿಗೇ ಸುಸ್ತಾದರು. ಹಾಲೇಶಣ್ಣನ ಮತ್ತು ಬಸವರಾಜ ಎಸ್.ಎಸ್.ಎಲ್.ಸಿಯಲ್ಲೇ ಸುಸ್ತಾಗಿದ್ದರು. ಅಪ್ಪ ಸತ್ತಾಗ ಹಾಲೇಶಣ್ಣನಿಗೆ ಯಜಮಾನಿಕೆ ಬಂದಿತ್ತು. ಅವನಿಗೂ ರಾಜಕೀಯದ ಅಮಲು. ಮೊದಲು ಪಂಚಾಯತಿ ಛೇರ್ಮನ್ನಾಗಿದ್ದವನು ನಂತರ ಇನ್ನೂ ಹೆಚ್ಚಿನ ಹುದ್ದೆಗಾಗಿ ರಾಜಕೀಯ ಪಕ್ಷವೊಂದನ್ನು ಹಚ್ಚಿಕೊಂಡಿದ್ದ. ಮನೆ ಸೇರುತ್ತಿರಲಿಲ್ಲ. ಬೇಸಾಯವನ್ನೆಲ್ಲಾ ನೋಡುತ್ತಿದ್ದವರು ಅವ್ವ ಮತ್ತು ಕಿರಿಯವ ಬಸವರಾಜ. ಬಸವರಾಜ ಶ್ರಮಜೀವಿ. ಅವನಿಂದಲೇ ವ್ಯವಸಾಯದಲ್ಲಿ ಕಾಳು, ಕಡ್ಡಿ ಕಾಣುತ್ತಿದ್ದುದು. ಅವ್ವ ಆಳುಕಾಳು, ಹಣಕಾಸಿನ ವ್ಯವಹಾರ ನೋಡಿಕ್ಕೊಳ್ಳುತ್ತಿದ್ದಳು. ಹೆಸರಿಗೆ ಮಾತ್ರ ಹಾಲೇಶ ಮನೆಯ ಮುಖ್ಯಸ್ಥ! ಅವನ ರಾಜಕೀಯದ ಹಂಬಲದಿಂದ ಬೆಳೆದಿದ್ದರಲ್ಲಿ ಅರ್ಧ ಆದಾಯ ಪೋಲಾಗುತ್ತಿತ್ತು. ಬಸವರಾಜ ತೆಂಗು ಮತ್ತು ಅಡಿಕೆ ತೋಟವನ್ನು ಚೆನ್ನಾಗಿ ಅಭಿವೃದ್ಧಿ ಮಾಡಿದ್ದ. ಖಾಲಿ ಜಾಗಗಳಲ್ಲಿ ಹೊಸ ಸಸಿ ನೆಟ್ಟು ಅದರಲ್ಲಿ ಆದಾಯ ಬರುವಂತೆ ಮಾಡಿದ್ದ. ಸ್ವಭಾವತಃ ಅದರ ಮೇಲೆ ತನಗೆ ಹಕ್ಕಿದೆ ಎನ್ನುವ ಮಾತು ಊರಲ್ಲಾಡಿದ್ದ. ಆದಾಯ ಪೋಲು ಮಾಡುತ್ತಿದ ಅಣ್ಣನ ಸ್ವಭಾವ ಅವನಿಗೆ ಹಿಡಿಸದೆ ಪಾಲಿನ ಹಕ್ಕು ಸ್ಥಾಪಿಸಿದ್ದ. ಹುಟ್ಟುವಾಗ ಅಣ್ಣ ತಮ್ಮಂದಿರು, ಬೆಳೆದಾಗ ದಾಯಾದಿಗಳು ಎಂಬ ಹಳ್ಳಿಗಾಡಿನ ಮಾತನ್ನು ನಿಜ ಮಾಡ ಹೊರಟಿದ್ದ. ಅವ್ವ ಎಲ್ಲವನ್ನೂ ಮೌನದಿಂದ ಸಹಿಸಿದ್ದಳು.
ಕೋತಿ ಹತ್ತಿರ ಬರುತ್ತಿತ್ತು. ಜಯಣ್ಣ ಎದ್ದು ಕೋಲನ್ನು ಅದರತ್ತ ಝಳಪಿಸಿದ್ದಕ್ಕೆ ಹೆದರಿ ತಾನು ಮೊದಲು ಕೂತಿದ್ದ ಜಾಗಕ್ಕೆ ಹೋಗಿ ಕೂತಿತು.
ಅರ್ಧ ರೊಟ್ಟಿ ಮುಗಿಯುವ ಹೊತ್ತಿಗೆ ಖಾರ ನೆತ್ತಿಗೇರಿದಂತಾಗಿ ಜಯಣ್ಣ ಬಿಕ್ಕಳಿಸಿದ. ಮತ್ತೆ ಗುಹೆಯೊಳಕ್ಕೆ ಹೋಗಿ ಅಂತರಗಂಗೆಯಲ್ಲಿ ನೀರು ಕುಡಿಯುವುದು ಅನಿವಾರ್ಯವಾಗಿತ್ತು. ಉಳಿದಿದ್ದ ರೋಟ್ಟಿ ಚಟ್ನಿಯನ್ನು ಮತ್ತೆ ಕಟ್ಟಿ ಚೀಲದೊಳಕ್ಕೆ ಇಟ್ಟು ಗುಹೆಯೊಳಕ್ಕೆ ಹೋಗಿ ನೀರು ಕುಡಿದ. ಯಾರೂ ಇಲ್ಲದಿರುವಾಗ ಇಲ್ಲಿರುವ ಪಾತ್ರೆಯನ್ನು ಉಪಯೋಗಿಸಬಹುದಲ್ಲ ಎಂಬ ಯೋಚನೆ ಬಂತು. ಅಲ್ಲಿದ್ದ ಚೊಂಬಿನಲ್ಲಿ ನೀರನ್ನು ತುಂಬಿಕೊಂಡು ಈಚೆ ಬಂದ. ತಾನು ತಿಂದಿದ್ದು ಮುಗಿದ ಮೇಲೆ ಅದನ್ನು ವಾಪಸ್ಸು ಇಡುವ ಯೋಚನೆ ಮಾಡಿದ.
ಮತ್ತೆ ಬುತ್ತಿ ಬಿಚ್ಚಿ ಕೂತ. ಎರಡು ಚೂರು ರೊಟ್ಟಿಯನ್ನು ಆಪ್ಯಾಯಮಾನವಾಗಿ ತಿಂದ. ಅವ್ವ ಚಟ್ನಿ ಮಾಡುವಾಗಲೇ ತೆಂಗಿನ ಕಾಯನ್ನು ಒಡೆಯುವುದು. ಹಾಗಾಗಿ ಅದರ ರುಚಿಯೇ ಬೇರೆ. ಸುಗುಣ ಮಾಡುವ ಚಟ್ನಿ ರೆಫ್ರಿಜಿರೇಟರಿನಲ್ಲಿಟ್ಟ ಕಾಯಿಯದು. ಅದಕ್ಕೆ ಅಂತಾ ಸ್ವಾದ ಬರುವುದಿಲ್ಲ ಎನಿಸಿತು.
ಹಾಲೇಶಣ್ಣನದೇ ಕಿತಾಪತಿ ಪಾಲಿಗೆ. ಬಸವರಾಜನಿಗೆ ಇಂತಾ ಬುದ್ದಿ ಬಂದಿರಲಿಕ್ಕಿಲ್ಲ. ಮೊದಲಿಂದಲೂ ಇಬ್ಬರೂ ಹಾವು ಮುಂಗಸಿಗಳ ತರಾ ಆಡುತ್ತಿದ್ದರು. ಇನ್ನು ಅಪ್ಪ ಸತ್ತ ಮೇಲೆ ಅವರನ್ನು ಹಿಡಿಯುವವರೇ ಇಲ್ಲ. ಈಗೀಗ ಅವ್ವನ ಮೇಲೂ ಅವರ ಜೋರು ಶುರುವಾಗಿತ್ತಂತೆ. ಎಲ್ಲಾ ಪಾಲು ಮಾಡು ಎಂದೇ! ಎಲ್ಲರಿಗೂ ಸ್ವತಂತ್ರರಾಗಬೇಕು ಎಂಬ ಹಂಬಲ. ಆದರೆ ಅವ್ವನ ವಿಷಯ ಮಾತ್ರ ಯಾರಿಗೂ ಬೇಡ! ಅವ್ವ ಇನ್ನೆಷ್ಟು ಕಾಲ ಬಡಿದಾಡಿಯಾಳು..? ಅವಳಿಗೂ ವಿಶ್ರಾಂತಿ ಎನ್ನುವುದು ಬೇಡವೆ..? ಆ ವಿಶ್ರಾಂತಿ ಅವಳಿಗೆ ಸಿಗುವ ಬಗೆ ಹೇಗೆ..? ಅಣ್ಣನಿಗೂ ಬೇಡ, ತಮ್ಮನಿಗೂ ಬೇಡ ಕೊನೆಗೆ..ತಾನೂ ಅವಳನ್ನು ಸಾಕುವ ಸ್ವತಂತ್ರ್ಯವನ್ನು ಹೊಂದಿಲ್ಲ. ಎಲ್ಲರೂ ಅವರವರ ಪತ್ನಿಯರ ಆಶೋತ್ತರಗಳಿಗೆ ಮನ್ನಣೆ ನೀಡಲೇಬೇಕು ! ಆದರೆ ಅವ್ವ..? ಅಕ್ಕ ಮತ್ತು ತಂಗಿಯರು ಹೊರಗಿನವರಾಗುತ್ತಾರೆ. ಅವರ ಗಂಡಂದಿರು ಇದಕ್ಕೆ ಸಮ್ಮತಿಸಿಯಾರೆ..? ಮಕ್ಕಳೇ ಒಪ್ಪದಿದ್ದರೆ ಇನ್ನು ಅಳಿಯಂದಿರು ಒಪ್ಪಿಯಾರೆ..? ಆಸ್ತಿಯಲ್ಲಿ ಒಂದಿಷ್ಟು ಪಾಲು ಕೊಟ್ಟರೆ ಅವ್ವನನ್ನು ಸಾಕಲು ಒಪ್ಪಿಯಾರು. ಅದು ತನ್ನ ಗಮನದಲ್ಲಿದೆ. ಇಲ್ಲಾ ತನ್ನದೆಂದು ಬರುವ ಆಸ್ತಿಯನ್ನು ಅವ್ವನಿಗೆಂದು ಬಿಟ್ಟುಬಿಟ್ಟು ಅವರನ್ನು ಸಾಕುವವರಿಗೆ ಅದು ಸೇರುತ್ತೆ ಎಂದು ಕರಾರು ಮಾಡಬಹುದು. ಇದೆಲ್ಲಕ್ಕೂ ಹಾಲೇಶಣ್ಣ ಒಪ್ಪುವುದು ಅನುಮಾನವೇ. ಅವನು ರಾಜಕೀಯ ಸೇರಿದ ಮೇಲೆ ಅವನ ಚಾರಿತ್ರ್ಯ ಅಷ್ಟಕ್ಕಷ್ಟೆ! ಒಂದೆರಡು ಕೊಲೆಯ ವಿಷಯದಲ್ಲೂ ಅವನ ಹೆಸರು ಗುಸುಗುಟ್ಟುತ್ತದೆ.
ಜಮೀನಿನ ಪಾಲು ತನಗೆ ಬೇಕಾಗಿಯೇ ಇಲ್ಲ. ಏಕೆಂದರೆ ತಾನು ಸಾಕಷ್ಟು ಸಂಪಾದಿಸಿರುವೆ, ಒಳ್ಳೆಯ ಕೆಲಸ, ದುಡಿಮೆ, ಸ್ವಂತ ಮನೆ ಎಲ್ಲಾ ಇವೆ. ತನಗೆ ಪಿತ್ರಾಜರ್ಿತವಾದ ತುಂಡು ಭೂಮಿಯೂ ತನಗೆ ಬೇಡ. ತಾನು ಇದನ್ನು ಅವಲಂಬಿಸಿಯೂ ಇಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕೆನ್ನುವುದು ತನ್ನ ಅಭಿಪ್ರಾಯ. ಇಷ್ಟಕ್ಕೂ ಭೂಮಿ ತೆಗೆದುಕೊಂಡು ತಾನು ಮಾಡುವುದೇನಿದೆ..? ಎಂದಿಗೂ ವ್ಯವಸಾಯದ ಕಡೆ ಗಮನ ಹರಿಸಿರಲಿಲ್ಲ. ಬರೀ ಓದಿಗೆ ಮನಸ್ಸು ಕೊಟ್ಟವನು. ಅವ್ವನಿಗೆ ಈ ಮಾತು ಆಗಲೇ ಹೇಳಿದ್ದೇನೆ. ‘ನಿಂಗೆ ಈ ವ್ಯವಹಾರ ಗೊತ್ತಾಗಲ್ಲ. ಸುಮ್ಮನಿದ್ದುಬಿಡು. ಏನಾಗುತ್ತೋ ಅದು ಆಗಲಿ. ಬೇಡ ಅಂತಾ ಮಾತ್ರ ಹೇಳ್ಬೇಡ. ನಿಂಗೂ ಇಬ್ಬರು ಹೆಣ್ಮಕ್ಕಳಿದ್ದಾರೆ’ ಎಂದು ಅವ್ವ ಗದರಿದ್ದಳು.
ಇಂದು ರಾತ್ರಿ ತನ್ನ ಮನೆ ಭಾಗವಾಗುವುದು ಖಚಿತ. ಅದು ಇಡೀ ಊರಿಗೇ ಗೊತ್ತಾಗಿದೆ. ಪಟೇಲ್ ಸೋಮಣ್ಣನ ಮನೆ ಪಾಲಾಗ್ತಿದೆ ಅಂತ ಊರಿಗಷ್ಟೇ ಅಲ್ಲ ಸುತ್ತಲ ಹತ್ತೂರಿಗೂ ಗೊತ್ತಾಗಿತ್ತು.
ರೊಟ್ಟಿಯಲ್ಲಿ ಒಂದಿಷ್ಟು ಮಿಗಿಸಿ ಕೋತಿಯತ್ತ ಎಸೆದ ಜಯಣ್ಣ. ಚತುರ ಕ್ರಿಕೆಟಿಗನಂತೆ ಕೋತಿ ರೊಟ್ಟಿಯನ್ನು ಕ್ಯಾಚ್ ಹಿಡಿಯಿತು. ಅದರಲ್ಲಿ ಅದು ಪಳಗಿದಂತಿತ್ತು. ಅಲ್ಲಿಯೇ ಅದನ್ನು ತಿನ್ನುತ್ತ ಕೂತಿತು.
ಒಂದು ಕಪ್ಪಿನಷ್ಟು ಇದ್ದ ಮೊಸರನ್ನು ಅರ್ಧ ರೊಟ್ಟಿಯ ಜೊತೆಗೆ ತಿಂದಿದ್ದ ಜಯಣ್ಣ. ಉಳಿದರ್ಧವನ್ನು ಕುಡಿದು ಸಂತೃಪ್ತಿಯಿಂದ ನೀರು ಕುಡಿದು ಯಾವ ಅಂಜಿಕೆಯಾಗಲೀ ಮುಜುಗರವಾಗಲೀ ಇಲ್ಲದೆ ಢರ್ರನೆ ತೇಗಿದ. ತನ್ನ ಕೃತ್ಯಕ್ಕೆ ಅವನಿಗೆ ನಗು ಬಂದಿತು. ಹೀಗೆ ತೇಗಿದ್ದು ಯಾವಾಗ ಎಂದು ನಕ್ಕ. ಅವನು ತೇಗಿದ ಶಬ್ದಕ್ಕೆ ಕೋತಿ ತಿರುಗಿ ನೋಡಿತು.
ಗಡಿಯಾರ ಎರಡು ತೋರಿಸುತ್ತಿತ್ತು. ಇಳಿಯಲು ಇನ್ನರ್ಧ ಗಂಟೆ ಸಾಕು. ಬಸ್ಸು ಬರುವುದು ಇನ್ನೂ ದೂರವಿದೆ. ಇಳಿಯಬೇಕು ಎಂದಾಗ ಚಿರತೆಯ ನೆನಪಾಯಿತು. ಬೆಟ್ಟ ಹತ್ತುವಾಗ ಇಲ್ಲದ ಭಯ ಈಗೇಕೆ..? ಯಾರಾದರೂ ಬರಬಹುದೆ..? ಬಂದರೆ ಅವರ ಜೊತೆ ಹೋಗಬಹುದಲ್ಲ ಎನಿಸಿತು. ಪೂಜೆಗೆ ಬರುವವರಿದ್ದರೆ ಇಷ್ಟೊತ್ತಿಗೆ ಬರಬೇಕಿತ್ತು. ಈವರೆಗೆ ಬರದವರು ಇನ್ನು ಬರುವುದಿಲ್ಲ! ಬಂದು ಇಳಿಯುವುದರಲ್ಲಿ ಸಂಜೆಯಾಗುತ್ತದೆ. ಸಂಜೆಯೆಂದರೆ ಯಾರಿಗಾದರೂ ಹೆದರಿಕೆಯೇ! ಅದೂ ಶನಿವಾರ..?
ಏನು ಮಾಡಬೇಕೆಂದು ತೋಚದೆ ಜಯಣ್ಣ ರೊಟ್ಟಿ ಮತ್ತು ಚಟ್ನಿ ಕಟ್ಟಿದ್ದ ಪ್ಲಾಸ್ಟಿಕ್ ಕವರು ಮುದುರಿ ಒಂದೆಡೆ ಒಗೆದ. ಅಲ್ಲಿ ಈಗಾಗಲೇ ಯತೇಚ್ಛವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಕವರುಗಳ ರಾಶಿ ನೋಡಿ ಖಿನ್ನನಾದ. ಮೊಸರಿದ್ದ ಡಬ್ಬಿಯನ್ನು ಸ್ವಲ್ಪ ನೀರಿನಿಂದ ತೊಳೆದು ಬ್ಯಾಗಿನಲ್ಲಿಟ್ಟು ಎದ್ದ.
“ಸಂನ್ಯಾಸಿ ನೆನಪಾದ. ನಮ್ಮ ಆಶ್ರಮಕ್ಕೆ ಬನ್ನಿ ಎಂದಿದ್ದು ನೆನಪಾಯಿತು. ಅಲ್ಲಿಗೆ ಹೋದರೆ ಹೇಗೆ ಎನ್ನಿಸಿತು. ಹೋಗಿ ಏನು ಮಾಡುವುದು..? ಮುಖ್ಯ ಕೆಳಗಿಳಿಯಬೇಕು. ಚಿರತೆಯ ಭಯವಿದೆ. ಸಂನ್ಯಾಸಿಯ ಆಶ್ರಮಕ್ಕೆ ಹೋದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ ಎನಿಸಿತು. ಅವನು ದಿನಸಿ ತರಲು ಬಂದವ. ತಾನು ಹೋದರೆ ತನ್ನ ಜೊತೆ ಕೆಳಕ್ಕೇಕೆ ಬರುತ್ತಾನೆ..? ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಚಿರತೆ ಮುಂತಾದ ಕಾಡು ಪ್ರಾಣಿಗಳು ಬೇಟಯಾಡುವುದು ಕಮ್ಮಿ. ಏನಿದ್ದರೂ ರಾತ್ರಿಯೇ ಅವಕ್ಕೆ ಪ್ರಶಸ್ತವಾದ ಸಮಯ! ತಾನು ಧೈರ್ಯದಿಂದ ಇಳಿಯಬಹುದು ಎನಿಸಿತು. ಅಕಸ್ಮಾತ್ ಚಿರತೆಯೇ ಬಂದು ತನ್ನ ಮೇಲೆರೆಗಿದರೆ ಏನು ಮಾಡುವುದು..? ಸಂನ್ಯಾಸಿಯ ಕೈಯಲ್ಲಿದ್ದ ತ್ರಿಶೂಲ ನೆನಪಾಯಿತು. ಈಗ ಅದು ಇದ್ದಿದ್ದರೆ ಕನಿಷ್ಟ ಅದನ್ನು ತೋರಿಸಿಯಾದರೂ ಹೆದರಿಸಿ ಆತ್ಮರಕ್ಷಣೆ ಮಾಡಿಕ್ಕೊಳ್ಳಬಹುದು. ಆಶ್ರಮಕ್ಕೆ ಹೋಗಿ ತ್ರಿಶೂಲ ಕೇಳಲೆ..? ಅದನ್ನು ಹಿಡಿದು ಕೆಳಗಿಳಿದ ಮೇಲೆ ಅದನ್ನು ಹಿಂತಿರುಗಿಸುವವರು ಯಾರು..? ಅದೆಲ್ಲಾ ಆಗದ ಮಾತು. ಹೆಚ್ಚಿನ ಚಿಂತೆ ಬೇಡ ಆದದ್ದಾಗಲಿ ಇಳಿದುಬಿಡೋಣ ಎಂದು ಮನಸ್ಸು ಮಾಡಿ ಜಯಣ್ಣ ಬೆಟ್ಟ ಇಳಿಯತೊಡಗಿದ.
ಚಿರತೆಯ ಭಯ ಹೆಪ್ಪುಗಟ್ಟಾತೊಡಗಿತ್ತು. ಯಾಕಾದರೂ ಇಲ್ಲಿಗೆ ಬಂದೆ..? ಏನಾದರಾಗಲೀ ಎಂದು ಊರಲ್ಲೇ ಇದ್ದಿದ್ದರೆ ಚೆನ್ನಾಗಿತ್ತು ಎನಿಸಿತು. ಬೆಟ್ಟ ಹತ್ತುವುದು ಎಷ್ಟು ಕಠಿಣವೋ ಇಳಿಯುವುದು ಅಷ್ಟೇ ಸುಲಭ. ಚಿರತೆಯ ಭಯದಿಂದ ಬೇಗಬೇಗನೆ ಇಳಿಯತೊಡಗಿದ್ದ ಜಯಣ್ಣ. ಎದೆ ಡವಗುಟ್ಟುತ್ತಿತ್ತು. ರಕ್ತದೊತ್ತಡ ಒಮ್ಮೆಲೇ ಹೆಚ್ಚಿದಂತೆ ತಲೆ ಧಿಮಿಧಿಮಿ ಎನ್ನತೊಡಗಿತು. ಹೆಜ್ಜೆ ನೆಲವನ್ನು ತಾಕಿದಂತೆ ಭಾಸವಾಗುತ್ತ, ಅದು ನೇರವಾಗಿ ಮಿದುಳಿಗೇ ಷಾಕ್ ಕೊಡುತ್ತಿದೆ ಎನಿಸುತ್ತಿತ್ತು. ಒಂದೊಂದು ಹೆಜ್ಜೆಯೂ ಭಯವನ್ನು ಹೆಚ್ಚಿಸುತ್ತಿತ್ತು.
ಸುತ್ತಲಿನ ಪೊದೆಯಿಂದ ಚಿರತೆ ಯಾವ ಕ್ಷಣದಲ್ಲಾದರೂ ತನ್ನ ಮೇಲೆ ಎಗರುತ್ತದೆ ಎಂಬ ಭೀತಿಯಲ್ಲೇ ಕಾಲುಭಾಗ ಬೆಟ್ಟ ಇಳಿದಿದ್ದ. ಇನ್ನೊಂದಿಪ್ಪತು ನಿಮಿಷ ಕಳೆದರೆ ಕೆಳಗಿನ ನೆಲದ ಮೇಲಿರುತ್ತೇನೆ ಎಂದು ಧೈರ್ಯತಂದುಕೊಂಡು ಸುತ್ತ ನೋಡದೆ ಮುಂದಿನ ದಾರಿಯಷ್ಟೇ ನೋಡತೊಡಗಿದ. ಇನ್ನೊಂದಿಪ್ಪತ್ತು ಹೆಜ್ಜೆ ಹಾಕುವಷ್ಟರಲ್ಲಿ ಹಿಂದಿನಿಂದ ಸರಪರ ಸದ್ದು! ಅದು ಚಿರತೆ ಎಂಬ ಭಯಕ್ಕೆ ಬಾಯಲ್ಲಿ ದ್ರವ ಆರಿತು. ಅದು ಹಿಂದಿಂದ ತನ್ನ ಕುತ್ತಿಗೆಗೆ ಬಾಯಿ ಹಾಕುತ್ತದೆ ಎಂಬ ಹೆದರಿಕೆಗೆ ಇನ್ನಷ್ಟು ವೇಗವಾಗಿ ಹೆಜ್ಜೆ ಹಾಕಿದ. ಇಳಿಜಾರಿನಲ್ಲಿ ನಡಿಗೆಯ ವೇಗ ನಿಯಂತ್ರಿಸಲಾರದೆ ಕೆಳಗೆ ಬಿದ್ದ! ಆ ವೇಗಕ್ಕೆ ಎರಡು ಪಲ್ಟಿ ಹೊಡೆದಿದ್ದ! ಚಿರತೆ ಹಾರಿ ತನ್ನ ಮೇಲೆ ಎರಗಿದಂತೆ ಜಯಣ್ಣನಿಗೆ ಭಾಸವಾಯಿತು. ಕಿಟಾರನೆ ಕಿರುಚಿದ. ಚಿರತೆ ಎದಯ ಮೇಲೆಯೇ ಹಾರಿದಂತಾಯಿತು. ಕುತ್ತಿಗೆಗೇ ಬಾಯಿ ಹಾಕಿದಂತಾಯಿತು. ಕತ್ತಲಿಟ್ಟಿದ್ದ ಕಣ್ಣಿಗೆ ಕಂಡಿದ್ದು ಚಿರತೆಯಲ್ಲ! ಮನುಷ್ಯನ ಮುಖ! ಕುತ್ತಿಗೆಯ ಮೇಲೆ ಬಿದ್ದ ಮಚ್ಚಿನ ಏಟಿಗೆ ತತ್ತರಿಸಿದ ಜಯಣ್ಣ! ನೆತ್ತರು ಚಿಲುಮೆಯಂತೆ ಆಳೆತ್ತರಕ್ಕೆ ಚಿಮ್ಮಿದ್ದು ಕಂಡ!
‘ಹಾಲೇಶಣ್ಣ’ ಎಂದು ಕೂಗು ಅವನ ಗಂಟಲಲ್ಲೇ ಉಳಿಯಿತು!
 

‍ಲೇಖಕರು G

18 May, 2015

9 Comments

  1. Krishnamurthy

    Nimma kathe tumba channigide. EE kathe nange chikkandinalli aadha anubhavakke holutthde.Tamma viswasi-Krishnamurthy

  2. ಬಂದೇನವಾಜ ಮ್ಯಾಗೇರಿ

    ನಿಮ್ಮ ಬರಹ ಚೆನ್ನಾಗಿದೆ ಸರ್, ಚಿರತೆ ಸ್ಟೋರಿ ನನಗೆ ತುಂಬಾ ಇಷ್ಟವಾಗುತ್ತೆ

  3. Hingyake Ashok

    ಒಂದು ವನ್ಯ ಮೃಗದ ಮೇಲಿನ ಭಯದ ಮೇಲೆ ಮೂಡಿದ ಕಥೆ ಕೊನೆಗೆ ಮನುಷ್ಯ ಪ್ರಾಣಿಯಷ್ಟು ಯಾವ ಮೃಗವೂ ಕ್ರೂರಿಯಲ್ಲ ಎಂಬುದನ್ನು ವೈಯಕ್ತಿಕ ಸಂಬಂಧಗಳ ಗೋಜಲುಗಳ ಮೂಲಕ ತಿಳಿಸಿದ್ದು ಮೆಚ್ಚುಗೆಯಾಯಿತು.
    ಸ್ವಭಾವ ಸನ್ಯಾಸಿ ಮತ್ತು ಅಭಾವ ಸನ್ಯಾಸಿ ಎಂಬ ಹೊಸ ಪದಗಳು ಇಷ್ಟವಾದವು

  4. jayashree

    Enjoyed reading this.

  5. ಲಲಿತಾ ಸಿದ್ಧಬಸವಯ್ಯ

    ಅಯ್ಯೋ ಮನುಷ್ಯನೇ!!

  6. Anil Talikoti

    ಪರಿಣಾಮಕಾರಿಯಾದ ಕಥೆ -ನಿಜವಾದ ಚಿರತೆ ಆಕ್ರಮಣ ಮಾಡಿದ್ದರೆ ಖಂಡಿತ ನಂಬಿಕೆ ಬರುತ್ತಿರಲಿಲ್ಲ
    ~ಅನಿಲ

  7. ಮಲ್ಲಪ್ಪ

    ಒಂದು ಚಿಕ್ಕ ಸಮಯದಲ್ಲಿ ನಡೆಯುವ ಒಂದು ಚಿಕ್ಕ ಘಟನೆಯ ಸುತ್ತ ಹೆಣೆದ ಚಿಕ್ಕ ಕಥೆಯಲ್ಲಿ,ಇಷ್ಟುದ್ದ ಇರುವ ಮನುಷ್ಯ ಸ್ವಭಾವದ bandwidthನ ಸ್ವಲ್ಪು ಭಾಗದ ಪರಿಚಯ ಲೇಖಕರು ಬಹಳ ನವುರಾಗಿ ಮಾಡಿದ್ದಾರೆ. Positive ಸ್ವಭಾವಗಳಾದ “ಚಾಗದ ಬೋಗದ…ಜೊತೆಗೆ negative ಸ್ವಭಾವಗಳಾದ ದ್ವೇಷ ಸ್ವಾರ್ಥಗಳೂ ಮನುಷ್ಯನ ಮೂಲ ಸ್ವಭಾವಗಳೇ.ಕಥಾಕಾರರಾದ ಲೇಖಕರು ನಿರೂಪಕರೂ ಆಗಿ ಇರುವ ಕೆಲವೇ ಪಾತ್ರಗಳ ಮುಖಾಂತರ ಮನುಷ್ಯ ಸ್ವಭಾವ ದರ್ಶನ ಮಾಡಿಸಿದ್ದಾರೆ. ಆದರೆ ಜಯಣ್ಷನ ಕೊಲೆಯ ಉದ್ದೇಶ ತಿಳಿಯಲಿಲ್ಲ.ಪೂರ್ತಿ ಆಸ್ತಿಯನ್ನು ನುಂಗಬೇಕಾದರೆ ಹಾಲೇಶಣ್ಣ ಇನ್ನೂ ಕೊಲೆ ಮಾಡಬೇಕು. ಮಾಡುತ್ತಾನಾ?
    2. ಸನ್ಯಾಸಿಯ ಪಾತ್ರ ಏಕೆ? ಕಥೆಯಲ್ಲಿ ಇಲ್ಲದಿದ್ದರೆ ನಡೆಯುತಿತ್ತು.ಮುಂಚೆಯಿಂದಲೂ ರಂಗವರ್ಷದಂತಹ ರಂಗಭೂಮಿಯ ರಂಗಕಲಾವಿದರಾದ ಶಿವಶಂಕರ ಅವರು ಕಥೆಯ ಕೈಮ್ಯಾಕ್ಸನಲ್ಲಿ ನಾಟಕೀಯ ತಿರುವು ಕೊಟ್ಟದ್ದು ಸೂಕ್ತವಾಗಿದೆ. ಅವರಿಂದ ಇನ್ನಷ್ಟು ಕಥೆಗಳು ಬರಲಿ

  8. shivashankar s.g

    ಕಥೆ ಓದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು.
    ಶಿವಶಂಕರ್

  9. ಅಮಿತ ಪಾಟೀಲ

    ಅತ್ತ್ಯುತ್ತಮವಾದ ಮತ್ತು ವಿಭಿನ್ನವಾದ ಕಥೆ. ತುಂಬಾ ಚೆನ್ನಾಗಿದೆ. ನಿಜವಾದ ಚಿರತೆ ಮನುಷ್ಯನೆ ಅಂತ ಕೊನೆಯ ಸಾಲಿನಲ್ಲಿ ತಿಳಿಯುತ್ತೆ. ಈ ಕ್ಲೈಮಾಕ್ಸ್ ಕಥೆಗೆ ಕಳಸವಿಟ್ಟಂತೆ ಮೂಡಿಬಂದಿದೆ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading