ಎಲ್ ಎಸ್ ಎಸ್ ಸರ್.. ನಮ್ಮ ಪದ ನೀವು ಕೊಟ್ಟದ್ದು

ಬಿ ಕೆ ಸುಮತಿ 

ಮೆಲುದನಿ, ಮೃದುಮಾತು, ಖಚಿತ ನಿಲುವು, ಅಪಾರ ವಿದ್ವತ್ತು, ಕನ್ನಡ ಇಂಗ್ಲಿಷ್ ಸಾರಸ್ವತ ಲೋಕದ ಸೇತು. ವಾಮನ ರೂಪಿ. ಭಾಷಾ ತ್ರಿವಿಕ್ರಮ.
ಅವರೇ ನಮ್ಮ LS ಶೇಷಗಿರಿರಾಯರು.

ಕನ್ನಗಿ, ಧ್ರುವ, ದ್ರೌಪದಿ, ರಾಮ, ರಾವಣ, ಅಹಲ್ಯಾ, ವಾಲ್ಮೀಕಿ, ಅರ್ಜುನ,  ರವೀಂದ್ರನಾಥ ಠಾಕೂರ್, ಇವರ ಹೆಸರುಗಳನ್ನು ಬಾಲ್ಯದಲ್ಲಿ ನಾವು ಓದಿದ್ದರೆ, ಅದು ಶೇಷಗಿರಿರಾಯರು ನಮಗೆ ತೋರಿಸಿದ್ದು.
‘ಭಾರತ ಭಾರತಿ’ ಪುಸ್ತಕ ಮಾಲಿಕೆಯಲ್ಲಿ ನೂರಾರು ಪುಸ್ತಕಗಳನ್ನು ಸಂಪಾದನೆ ಮಾಡಿದರು. ಒಳ್ಳೆಯ ಭಾಷೆ, ಪುಟ್ಟ ವಾಕ್ಯ, ವ್ಯಕ್ತಿ ಪರಿಚಯ ಮತ್ತು ಕಥೆ ಕ್ರಮ ಸೊಗಸಾಗಿ ತಿಳಿಸಿ ಓದಿಗೆ ಅಡಿಪಾಯ ಹಾಕುವ, ಯಾವ ‘ಇಸಂ’ಗಳೂ ಇಲ್ಲದ ಸುಂದರ ಮಾಲಿಕೆ ಅದು.

ವಿದ್ಯೆ ಮನುಷ್ಯನಲ್ಲಿ ಸಂಸ್ಕಾರ ತರಬೇಕೆ ಹೊರತು ಸ್ವಾರ್ಥ ಮತ್ತು ಲೆಕ್ಕಾಚಾರ ಅಲ್ಲ ಎಂದು ಸದಾ ಹೇಳುತ್ತಿದ್ದರು .

ಬಿ. ಎಂ. ಶ್ರೀ, ರಾಜರತ್ನಂ, ವಿಸೀ, ಮುಂತಾದ ಗುರುಗಳ ಮಾರ್ಗದರ್ಶನ ಪಡೆದ ಮಹನೀಯರು .
ಅವರ ತಂದೆ ಸ್ವಾಮಿರಾವ್ ಸ್ವತಃ ಲೇಖಕರು ಮತ್ತು  ಅಧ್ಯಾಪಕರಾಗಿದ್ದರು.
LS ಶೇಷಗಿರಿ ರಾಯರು ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿದ್ದವರು.

ಘಾಟಿ ಸುಬ್ರಮಣ್ಯನಿಗೆ ಹರಕೆ ಹೊತ್ತು ಹುಟ್ಟಿದ ಗಂಡು ಮಗು. ಅದಕ್ಕೆ ಅವರಿಗೆ ಶೇಷಗಿರಿ ಎಂದು ಹೆಸರಿಟ್ಟರು ತಂದೆ ತಾಯಿಗಳು. ತಾಯಿ ಕಮಲಬಾಯಿ.
1925, ಫೆಬ್ರವರಿ,16 ಅವರ ಜನ್ಮದಿನ.
ಕನ್ನಡ, ಇಂಗ್ಲಿಷ್ ಎರಡರಲ್ಲೂ ಅಪಾರ ವಿದ್ವತ್ತು.

ಅವರ ನಿಘಂಟು ಹಿಡಿಯದ ಕನ್ನಡ ವಿದ್ಯಾರ್ಥಿಗಳು ಇಲ್ಲವೆನ್ನಬಹುದು. ಕನ್ನಡ ವಿಮರ್ಶಾಲೋಕದಲ್ಲಿ ಸ್ಥಾಯಿ ಸ್ಥಾನ ಪಡೆದರೂ, ಅವರು ಮೊದಲು ಬರೆದದ್ದು ಕತೆ.
1948ರಲ್ಲಿ ಅವರ ಮೊದಲ ಕಥಾ ಸಂಕಲನ ಹೊರಬಂತು. ಇದು ಜೀವನ, ಜಂಗಮ ಜಾತ್ರೆಯಲ್ಲಿ, ಮುಯ್ಯಿ, ಮತ್ತು ಮುಟ್ಟಿದಗುರಿ ಇವರ ಕಥಾಸಂಕಲನಗಳು.

ಒಮ್ಮೆ ಅವರನ್ನು ಕೇಳಿದ್ದೆ.. “sir , ಏನು ಓದಬೇಕು, ಹೇಗೆ ಓದಬೇಕು, ” ಎಂದು.
ಅವರು ನಕ್ಕಿದ್ದರು. ಸುಮ್ಮನೆ ದಿಟ್ಟಿಸಿ, “ಓದಬೇಕು ಎಂದಿದೆ ಅಲ್ಲವೇ.. ತಾನಾಗೇ ತಿಳಿಯುತ್ತೆ.” ಎಂದರು.
ಮತ್ತೆ ಅವರನ್ನು ಎಷ್ಟೋ ಬಾರಿ ನೋಡಿದ್ದೇನೆ. ಆದರೆ ಅವರೊಂದಿಗೆ ಮಾತಾಡಲು ಭಯ ಆಗುತ್ತಿತ್ತು. ವೇದಿಕೆ ಮತ್ತು ಕಾರ್ಯಕ್ರಮಗಳಲ್ಲಿ ಅವರ ಮಾತು ಕೇಳಿದ್ದೇನೆ.

ಅವರ ಮೌನವೇ ಮಾತಾಡುತ್ತಿತ್ತು.
ಅವರ ಪ್ರಖರ ಕಣ್ಣುಗಳು ದಾರಿ ತೋರಿಸುತ್ತಿದ್ದವು.

ಅವರ ಸಮಗ್ರ ವಿಮರ್ಶಾ ಸಾಹಿತ್ಯ ಕನ್ನಡ ಸಾಹಿತ್ಯ ಕನ್ನಡದ ವಿಮರ್ಶೆ ಪರಂಪರೆಯ ದಿಕ್ಸೂಚಿ.
ಹೊಸಗನ್ನಡ ಸಾಹಿತ್ಯ, ಎಲ್ಲ ಪ್ರಕಾರಗಳಲ್ಲಿ ಆಗಿರುವ ಬೆಳವಣಿಗೆ ಚಿತ್ರಿಸಿ ಕೊಡುವಂಥದ್ದು. ಪರಿಚಯ ಮಾಡಿಸುವಂಥದ್ದು. ಇಡೀ ಕನ್ನಡ ಸಾಹಿತ್ಯದ  ವಿವಿಧ ನೆಲೆಗಳನ್ನು ಗುರುತಿಸಿ, ತಮ್ಮದೇ ವ್ಯಾಖ್ಯೆ ಕೊಟ್ಟಿದ್ದಾರೆ. ಇದು ಒಂದು ಆಕರ ಗ್ರಂಥ.
ಅವರ ಪಾಶ್ಚಾತ್ಯ ಸಾಹಿತ್ಯ ವಿಚಾರ, ಇಂಗ್ಲಿಷ್ ಓದದವರಿಗೂ ಸಣ್ಣ ಪ್ರವೇಶಿಕೆ ಒದಗಿಸಿ, ಆಸಕ್ತಿ ಹುಟ್ಟಿಸುವ ಮನೋಹರ ರಚನೆ. ಶೇಕ್ಸ್ ಪಿಯರ್, ಟಾಲ್ಸ್ಟಾಯ್, ಕಾಫ್ಕಾ ಇವರನ್ನು ಆರಂಭಿಕ ಅಭ್ಯಾಸಕ್ಕೆ ಅರ್ಥಮಾಡಿಸುವ ಪ್ರಯತ್ನ  ಇಲ್ಲಿದೆ.

ಶೇಷಗಿರಿರಾಯರು ಅಂದ ಕೂಡಲೇ ವಿಮರ್ಶೆ ಎನ್ನುತ್ತೇವೆ. ಅವರು ನಾಟಕ, ಜೀವನ ಚರಿತ್ರೆ, ಬರೆದಿದ್ದಾರೆ. ಅನುವಾದ ಮಾಡಿದ್ದಾರೆ.

ಚಾರ್ಲ್ಸ್ ಡಿಕೆನ್ ನ ಎರಡು ನಗರಗಳ ಕಥೆ ಜನಪ್ರಿಯ.
ಎಂ ವಿಶ್ವೇಶ್ವರಯ್ಯ ಅವರ ಜೀವನವೃತ್ತಾಂತ ಬರೆದಿದ್ದಾರೆ.
ಸಂಪಾದಿತ ಕೃತಿಗಳಂತೂ ಹಲವಾರು.

2001 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1986 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಅರಸಿ ಬಂದವು.

6 ನಿಘಂಟು, ಸುಲಭ ಇಂಗ್ಲಿಷ್, ಇಂಗ್ಲಿಷ್ made easy..
ಇವುಗಳನ್ನು ಉಪಯೋಗಿಸದ ವಿದ್ಯಾರ್ಥಿ ಇದ್ದಾನೆಯೇ..?

ಅವರ ಇತರ ಪ್ರಮುಖ ಕೃತಿಗಳು..

A history of kannada literature,
An introduction to modern kannada literature,
ಗೀಕ್ ರಂಗಭೂಮಿ ಮತ್ತು ನಾಟಕ
ಸಾಹಿತ್ಯ ಬದುಕು
ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ,
ಅವರು ಕಂಡಂತೆ ತ ರಾ ಸು
ಇಂಗ್ಲಿಷ್ ಸಾಹಿತ್ಯ ಚರಿತೆ..
ಮುಂತಾದವು.

ಅವರು ಅಂದಿನ ಮುಖ್ಯಮಂತ್ರಿ ಗುಂಡೂರಾಯರ ಪತ್ರಿಕಾ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದರು.
ವಿನಯಕ್ಕೆ, ವಿದ್ಯೆಗೆ ಮತ್ತೊಂದು ಹೆಸರು ಶೇಷಗಿರಿರಾಯರು.
ಅಚ್ಚುಕಟ್ಟು, ಶಿಸ್ತು, ಪ್ರಾಮಾಣಿಕತೆ, ಅವರ ಆಯುಧಗಳು.

ಕಥೆ ಎಂದರೇನು, ಕಾದಂಬರಿ ಯಾವುದು, ಓದುವುದು ಹೇಗೆ ಎಂದು ತಿಳಿಸಿದ  ಶೇಷಗಿರಿರಾಯರು ಮೊನ್ನೆ ಡಿಸೆಂಬರ 20 ನೇ ತಾರೀಖು ನಮ್ಮನ್ನು ಅಗಲಿದರು.
ವಿಮರ್ಶೆ, ನಿಘಂಟು, ಭಾಷೆ ಅಂದಾಗ ಕೈ ಮುಗಿದು, ನಡೆಯಬೇಕಾದ ವ್ಯಕ್ತಿತ್ವ ಅವರದು.
ಮೌನಿಯಾಗಿದ್ದರು. ಯಾವ ತಕರಾರುಗಳಿಗೆ ಹೋಗಲಿಲ್ಲ. ಎಲ್ಲೂ ಆಡಂಬರ ಮಾಡಲಿಲ್ಲ. ಪ್ರಚಾರ ಬಯಸಲಿಲ್ಲ. ಭಾಷಣ ಬಿಗಿಯಲಿಲ್ಲ.
ಹಾಗಾಗಿಯೇ ಅವರ ಬಗ್ಗೆ ಎಲ್ಲೂ ಹೆಚ್ಚು ಪ್ರಕಟವಾಗಲಿಲ್ಲ.
ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸುವ ಅಭಿಮಾನಿಗಳು ಕಾಣಲಿಲ್ಲ.

ಶೇಷಗಿರಿರಾಯರದು ತುಂಬು ಜೀವನ.
ಆದರೂ ಅವರ ಬಗ್ಗೆ ನಮ್ಮ ಜ್ಞಾನ, ತಿಳುವಳಿಕೆ ಸದಾ “ಸಶೇಷ” ಅದು ಸಹ ಶೇಷವೂ ಹೌದು ಸಶೇಷವೂ ಹೌದು.
ಅಗಲಿದ ಚೇತನಕ್ಕೆ ನಮಸ್ಕಾರ.
Sir, ನಿಮಗೆ ನಾವು ಎಂದೂ ಋಣಿಗಳು.
ನಮ್ಮ ಪದ ನೀವು ಕೊಟ್ಟದ್ದು.

‍ಲೇಖಕರು avadhi

December 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: