ಎಲ್ಲ ಶುರುವಾದದ್ದು ಅವತ್ತು ಅಂಗಡಿಯಿಂದ ಸೇವು ಕಟ್ಟಿಸಿಕೊಂಡು ಬಂದಾಗ..

venkatramana gowda

ವೆಂಕಟ್ರಮಣ ಗೌಡ

ಎಲ್ಲ ಶುರುವಾದದ್ದು ಅವತ್ತು ಅಂಗಡಿಯಿಂದ ಸೇವು ಕಟ್ಟಿಸಿಕೊಂಡು ಬಂದಾಗ.

ನನಗೆ ಸಣ್ಣವನಿದ್ದಾಗ ಅಂಗಡಿಯಿಂದ ಬರುವ ಪೇಪರಿನ ತುಂಡುಗಳನ್ನು ಓದುವ ಚಟ. ಅವತ್ತಂತೂ ಮೂಗಿಗೆ ಘಮ ಘಮ ಅಡರುವಂತಿದ್ದ ಸೇವು ಕಟ್ಟಿಸಿಕೊಂಡು ತಂದಿದ್ದ ಆ ಹಾಳೆ ವಿಶೇಷವಾಗಿ ನನ್ನ ಮನಸ್ಸನ್ನು ಸೆಳೆದಿತ್ತು. ಕೇಸರಿ ಬಣ್ಣದ ರಂಗೋಲಿಯಂಥ ಗೆರೆಯಿಂದ ಪುಟದ ಅಂಚನ್ನು ಅಲಂಕರಿಸಲಾಗಿದ್ದ ಆ ಹಾಳೆಯನ್ನು ಓದತೊಡಗಿದೆ. ಮೊದಲು ದಪ್ಪಕ್ಷರಗಳಲ್ಲಿ ಶ್ಲೋಕ. ಅದು ನನಗೆ ಅರ್ಥವಾಗದ ಭಾಗವಾಗಿತ್ತು. ಅದಾದ ಬಳಿಕ ಪುಟದ ಮುಕ್ಕಾಲು ಭಾಗದಲ್ಲಿ ನಾನು ಆಗಿನ ನನ್ನ ಶಕ್ತಿಯ ಮಿತಿಯಲ್ಲಿ ಕೊಂಚವಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದಾಗಿದ್ದ ಗದ್ಯವಿತ್ತು. ಅಲ್ಲಿಯವರೆಗೆ ಕೇಳಿ ತಿಳಿದುಕೊಂಡ ಹಿನ್ನೆಲೆಯಲ್ಲಿ ಅದು ರಾಮಾಯಣದ ಕಥೆಯೆಂದು ನನಗೆ ಗೊತ್ತಾಯಿತು.

ಎಲ್ಲೋ ನಡುದಾರಿಯಿಂದ ಶುರುವಾಗಿ, ಮುಂದಿನ ಕಥೆಗಾಗಿ ಕಾತರಿಸುತ್ತಿದ್ದ ನನ್ನನ್ನು ಮತ್ತೆ ಅತಂತ್ರ ಸ್ಥಿತಿಯಲ್ಲಿ ಕೈಬಿಟ್ಟ ಆ ಹಾಳೆ ಹಿಡಿದುಕೊಂಡು ಸೀದಾ ಅಂಗಡಿಗೆ ಓಡಿದೆ. ಆ ಇಡೀ ಪುಸ್ತಕವೇ ಸಿಗಬಹುದೇನೋ ಎಂಬ ಆಸೆ. ಹೋಗಿ ನೋಡಿದರೆ ಅಂಗಡಿಯವನು ಅಂಥದೇ ಹಾಳೆಯೊಂದನ್ನು ಹರಿದು ಮತ್ತಾರಿಗೋ ಏನನ್ನೋ ಕಟ್ಟಿಕೊಡುತ್ತಿದ್ದ. ನಾನು ನನ್ನ ಕೈಯಲ್ಲಿದ್ದ ಹಾಳೆ ತೋರಿಸಿ, ಆ ಪುಸ್ತಕವಿದ್ದರೆ ಕೊಡುತ್ತೀರಾ ಕೇಳಿದೆ. ಅದಕ್ಕವನು ರದ್ದಿ ಪೇಪರ್ ಕೊಟ್ಟರೆ ಕೊಡುತ್ತೀನಿ ಎಂದ. ಮತ್ತೆ ಮನೆಗೆ ಓಡಿಬಂದೆ. ಗುಟ್ಟಾಗಿ ತಡಕಾಡಿ ಒಂದಿಷ್ಟು ಪೇಪರ್ ಸೇರಿಸಿಕೊಂಡು, ಬಂದಷ್ಟೇ ಧಾವಂತದಿಂದ ಮರಳಿ ಅಂಗಡಿಗೆ ಹೋದೆ. ಕಡೆಗೂ, ಕೆಂಪು ಬಣ್ಣದ ರಟ್ಟಿನ ಕವರ್ ಇದ್ದ ಆ ಪುಸ್ತಕ ಸಿಕ್ಕಾಗ ಆಕಾಶವೇ ಕೈಗೆ ಬಂದಷ್ಟು ಖುಷಿಯಾಗಿತ್ತು. ಪುಸ್ತಕದ ಬೈಂಡಿನ ಮೇಲೆ, ಶ್ರೀ ವಾಲ್ಮೀಕಿ ವಿರಚಿತ ಶ್ರೀ ಮದ್ರಾಮಾಯಣ ಎಂದಿತ್ತು.

ಅದನ್ನು ಅಡಗಿಸಿಟ್ಟುಕೊಂಡು ಮನೆಯೊಳಗಡೆ ತಂದದ್ದೇ ಒಂದು ಸಾಹಸ. ಅಮ್ಮ ಕಂಡರೆ ಎಲ್ಲಿಂದ ತಂದೆ, ಏನು ಕೊಟ್ಟು ತಂದೆ ಎಂಬೆಲ್ಲ ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆ ಎಂಬುದು ಗೊತ್ತಿತ್ತು. ಆಗತ್ಯ ಬಿದ್ದಾಗ ನಾಲ್ಕು ಕಾಸು ಸಿಗುತ್ತದೆ ಎಂದು ಅಮ್ಮ ಸಂಗ್ರಹಿಸಿಟ್ಟಿದ್ದ ರದ್ದಿ ಕಾಗದ ಕೊಟ್ಟು ತಂದದ್ದು ಗೊತ್ತಾದರೆ ಸರಿಯಾಗಿ ಪೆಟ್ಟು ತಿನ್ನಬೇಕಾಗುತ್ತದೆ ಎಂಬ ಆತಂಕವೂ ಕಾಡುತ್ತಿತ್ತು. ಸದ್ಯ ಅಮ್ಮನ ಕಣ್ಣಿಗೆ ಬೀಳಲಿಲ್ಲ ಎಂಬ ಖುಷಿಯಲ್ಲೇ, ಮೊದಲಿನ ಹಲವಾರು ಪುಟಗಳನ್ನು ಕಳೆದುಕೊಂಡಿದ್ದ ಆ ಪುಸ್ತಕ ಓದಲು ಶುರು ಮಾಡಿದೆ.

ಮುಂದಿನ ಹಲವಾರು ದಿನಗಳವರೆಗೆ ಅದೇ ನನ್ನ ಸಂಭ್ರಮವಾಯಿತು. ಆದರೆ, ಕಥೆ ಕೈಗೆ ಸಿಗುತ್ತಿದೆ ಅನ್ನಿಸುವಾಗಲೇ ಮುಂದಿನ ಪುಟಗಳು ನಾಮಾವಶೇಷವಾಗಿರುತ್ತಿದ್ದುದು ಗೊತ್ತಾಗಿ ಸಂಕಟವಾಗುತ್ತಿತ್ತು. ಕಥೆ ಕೈತಪ್ಪಿಹೋಗುತ್ತಿತ್ತು. ಮತ್ತೆ ಇರುವ ಪುಟಗಳ ಆಸರೆಯಲ್ಲಿ ಕಥೆಯನ್ನು ಹಿಡಿಯುವ ಉಮೇದು. ಓದು ಮುಂದುವರಿಯುತ್ತಿದ್ದ ಹಾಗೆಯೇ ಮತ್ತೆ ಅದೇ ಸಂಕಟ. ಮಾಯವಾಗಿರುವ ಪುಟಗಳ ದೆಸೆಯಿಂದ ನಿರಾಸೆ. ಅಂತೂ ಇಲ್ಲದ ಪುಟಗಳ ಕಾರಣದ ದುಃಖ ಮತ್ತು ಇರುವ ಪುಟಗಳ ಸೊಗಸಿನಲ್ಲಿ ನನ್ನೊಳಗೆ ತುಂಬಿಕೊಳ್ಳುತ್ತಿದ್ದ ಸುಖದಲ್ಲೇ ವಾಲ್ಮೀಕಿ ರಾಮಾಯಣದ ಸುಳಿವುಗಳನ್ನು ಹಿಡಿದುಕೊಂಡಿದ್ದೆ.

ಇದಾದ ಬೆನ್ನಲ್ಲೇ ಅದೊಂದು ದಿನ ಅಮ್ಮನಿಗೆ ತಾನು ತೆಗೆದಿಟ್ಟಿದ್ದ ರದ್ದಿ ಕಾಗದಗಳು ಮಾಯವಾಗಿರೋ ವಿಚಾರ ತಿಳಿದುಹೋಗಿತ್ತು. ಶುರುವಾಯಿತು ನನ್ನ ವಿಚಾರಣೆ. ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಒಪ್ಪಿಕೊಂಡ ಮೇಲೂ ಶಿಕ್ಷೆಯಲ್ಲಿ ಯಾವ ರಿಯಾಯಿತಿಯೂ ಸಿಗಲಿಲ್ಲ. ಅಮ್ಮನ ಸಂಕಟ, ಅದರ ಕಾರಣದಿಂದ ಹುಟ್ಟಿದ ಅವಳ ಸಿಟ್ಟು ನನ್ನ ಮೈಮೇಲೆ ಬಾಸುಂಡೆ ಮೂಡಿಸಿದ್ದವು. ಆದರೆ, ಅದೇ ಅಮ್ಮ ನಾನು ಬೆಂಗಳೂರಲ್ಲಿ ಕೆಲಸಕ್ಕೆ ಸೇರಿದ ಹೊತ್ತಲ್ಲಿ ಊರಿಗೆ ಅಪರೂಪಕ್ಕೊಮ್ಮೆ ಹೋದಾಗಲೆಲ್ಲ ಅಲ್ಲಿದ್ದ ನನ್ನ ಪುಸ್ತಕಗಳ ರಾಶಿಯಲ್ಲಿ ಪ್ರತಿಸಲವೂ ಒಂದಿಷ್ಟನ್ನು ಬ್ಯಾಗಿಗೆ ಹಾಕಿಕೊಂಡು ಬರುವುದನ್ನು ನೋಡುವಾಗ ಕಣ್ಣೀರು ಹಾಕುತ್ತಿದ್ದಳು.

ಇಲ್ಲಿರುವ ಪುಸ್ತಕಗಳೆಲ್ಲ ಖಾಲಿಯಾಗಿಬಿಟ್ಟರೆ ಮಗ ತಮ್ಮಿಂದ ದೂರವಾಗಿಬಿಡುತ್ತಾನೆ ಎಂಬ ವೇದನೆಯಲ್ಲಿ ಹಾಕುತ್ತಿದ್ದ ಕಣ್ಣೀರಾಗಿತ್ತು ಅದು. ಅದೆಷ್ಟು ದಿನಗಳಿಂದ ತಡೆದಿದ್ದಳೊ, ಅದೊಂದು ದಿನ ತನ್ನ ಮನಸ್ಸಲ್ಲಿ ಏಳುತ್ತಿದ್ದ ಸಂಕಟವನ್ನು ಅವಳು ಅಳುತ್ತಳುತ್ತಲೇ ನನ್ನೆದುರು ಇಟ್ಟಿದ್ದಳು. ಮೌನವಾಗಿಯೇ ಎಲ್ಲವನ್ನೂ ನುಂಗಿಕೊಳ್ಳಬಲ್ಲವಳಾಗಿದ್ದ ನನ್ನಮ್ಮನೊಳಗೆ ಅಂಥದೊಂದು ಸಂಕಟ ಕುದಿಯುತ್ತಿರುವುದು ತಿಳಿದ ಆ ಘಳಿಗೆ ನಾನು ತತ್ತರಿಸಿಹೋಗಿದ್ದೆ. ಮತ್ತೆ ಯಾವತ್ತೂ ನಾನು ಬೆಂಗಳೂರಿಗೆ ಬರುವಾಗ ಮನೆಯೊಳಗಿದ್ದ ಪುಸ್ತಕಗಳನ್ನು ತರಲಿಲ್ಲ. ಅಮ್ಮನ ಸಮಾಧಾನಕ್ಕಾದರೂ ಅವು ಅಲ್ಲಿರಲಿ ಎಂದುಕೊಂಡೆ.

ಇವತ್ತು ಅಮ್ಮ ಇಲ್ಲ. ರದ್ದಿಪೇಪರಿನ ಸಲುವಾಗಿ ಅಮ್ಮ ನನ್ನನ್ನು ಹೊಡೆಯಲು ಕಾರಣವಾಗಿದ್ದ ವಾಲ್ಮೀಕಿ ರಾಮಾಯಣ ಪುಸ್ತಕ, ಮಗ ದೂರವಾಗುತ್ತಿದ್ದಾನೆ ಎಂಬ ಆತಂಕದಲ್ಲಿ ಕಣ್ಣೀರಾದ ಅಮ್ಮನ ಮುಖ ಕಾಡುವಾಗಲೂ ನೆನಪಿಗೆ ಬರುತ್ತದೆ. ಪುಟಗಳ ಕಣ್ಣಾಮುಚ್ಚಾಲೆಯಾಟದಿಂದಲೇ ರಾಮಾಯಣ ಬಿಡಿಸಿಟ್ಟ ಆ ಪುಸ್ತಕ ಕೂಡ ಇವತ್ತು ನನ್ನ ಬಳಿ ಇಲ್ಲ.

‍ಲೇಖಕರು Admin

January 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. kvtirumalesh

    ಪುಸ್ತಕಲೋಕಕ್ಕೆ ಎಷ್ಟೊಂದು ದಾರಿಗಳು! ಯಾವುದೂ ಸುಗಮವಲ್ಲ. ಚೆನ್ನಾಗಿದೆ, ಗೌಡರೆ, ನಿಮ್ಮ ಬರಹ.
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
    • venkatramana gowda

      ಕೆ ವಿ ತಿರುಮಲೇಶ್ ಸರ್, ಧನ್ಯವಾದಗಳು. ನೀವು ಮೆಚ್ಚಿದಿರಿ ಎಂಬುದು ನನಗೆ ಮರೆಯಲಾರದ ಖುಷಿ.

      ಪ್ರತಿಕ್ರಿಯೆ
  2. Chandraprabha B

    ಮನಸ್ಸನ್ನು ತಟ್ಟುವ ವಸ್ತು, ಮನಸ್ಸನ್ನು ಗೆಲ್ಲುವ ನಿರೂಪಣೆ…ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  3. narayan Raichur

    nimma niroopane/vishaya prastavane istavaadavu – Good ! ! !

    Narayan Raichur

    ಪ್ರತಿಕ್ರಿಯೆ
  4. chi.na. halli kirana

    Sir,
    E nimma lekhana odida takshna nanagu entaha ammana sakyada nenapugalu kadalarambisidavu ettichege nanu nanna ammanannu kaledukonde, tatshanada nenapendare avara koneya kshanada mouna haagu saddillade hariyuva nadhi….bhavukathe hagu preetiya nenapinagalakke diidirane karedoyada nimage dhanyavadagalu.
    Bye,
    Kirana

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: