ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದರೆ ಮುಟ್ಟಾಗುವುದು ಮಹಿಳೆ ಮಾತ್ರ

ಗಂಡಸರ ಶೇವಿಂಗ್ ಕ್ರೀಮಿಗೆ ಟ್ಯಾಕ್ಸುಂಟಲ್ಲ…?!

ಭಾರತದ ಸಂವಿಧಾನದ ವಿಧಿ 15(1) “The State shall not discriminate against any citizen on grounds only of religion, race, caste, sex, place of birth or any of them.” ಎಂದು ಹೇಳುತ್ತದೆ.  ಈ ತಳಹದಿಯ ಮೇಲೆ ಮಹಿಳೆಯರ ಮುಟ್ಟಿಗಾಗಲೀ, ಗರ್ಭಧಾರಣೆಗಾಗಲೀ ತೆರಿಗೆ ಹಾಕುವುದು ಸಲ್ಲದು ಎಂಬ ವಾದಕ್ಕೆ ಜಾಣತನದ ಪ್ರತಿವಾದ – ಗಂಡಸರಿಗೂ ಶೇವಿಂಗ್ ಕ್ರೀಮು, ಲೋಷನ್ನುಗಳಿಗೆ ತೆರಿಗೆ ಉಂಟಲ್ಲಾ? ಅದು ಭಾರತದ ಸಂವಿಧಾನಕ್ಕೆ ವಿರೋಧ ಅಲ್ಲವೇ ಎಂಬುದು!

ಮುಟ್ಟಿನ ಮೇಲಿನ ತೆರಿಗೆಯ ವಿರುದ್ಧ ಹೋರಾಟ ಮೊನ್ನೆ ನಟಿ ಮಾಳವಿಕಾ ಅವರ ಹೇಳಿಕೆಯ ವಿರುದ್ಧ ಆರಂಭ ಆದದ್ದೇನಲ್ಲ. ಆಕೆ ಪಾಪ, ಅವರ ಓರಗೆಯವರಂತೆ ಚರಿತ್ರೆ ಗೊತ್ತಿಲ್ಲದೆ ಮಾತನಾಡಿದರು. ಹೊಟ್ಟೆ ತುಂಬಿದವರಿಗೆ ಸಾಮಾನ್ಯವಾಗಿ ಅರ್ಥವಾಗದ ಇಂತಹ ಸಂಗತಿಗಳು ಸುಲಭವಾಗಿ ಅರ್ಥವಾಗುವುದು ಹಸಿದ ಹೊಟ್ಟೆಯ ನೋವಿನ ಅರಿವಿರುವವರಿಗೆ ಮಾತ್ರ. ಜಗತ್ತಿನಾದ್ಯಂತ ಕಳೆದೆರಡು ದಶಕಗಳಿಂದ ಮುಟ್ಟಿನ ತೆರಿಗೆಯ ವಿರುದ್ಧ  (Tampon Tax) ಮಹಿಳೆಯರು ಹೋರಾಡುತ್ತಲೇ ಇದ್ದಾರೆ.

ಗಮನಿಸಿ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ, ಜಗತ್ತಿನಲ್ಲಿ ಮುಟ್ಟಿನ ತೆರಿಗೆಯನ್ನು ರದ್ದುಪಡಿಸಿದ ಮೊದಲ ದೇಶ ಯುರೋಪಿನಲ್ಲೂ ಇಲ್ಲ, ಅಮೆರಿಕವೂ ಅಲ್ಲ. ಅದು ಬಡ ಆಫ್ರಿಕಾದ ಕೆನ್ಯಾ!

ಆ ಬಳಿಕ ಕೆನಡಾ, ಐರ್ಲಂಡ್ ಮತ್ತು ಕೆಲವು ಐರೋಪ್ಯ ದೇಶಗಳು ಈ ಹಾದಿಯಲ್ಲಿ ನಡೆದವು. ಇಂದು ಜಗತ್ತಿನ ಹಲವು ದೇಶಗಳಲ್ಲಿ ಮಹಿಳೆಯರು ತಮ್ಮ ತಮ್ಮ ಸರಕಾರಗಳೆದುರು “ನಮ್ಮ ಮುಟ್ಟು ಲಕ್ಸುರಿ ಅಲ್ಲ” ಎಂದು ಪ್ರತಿರೋಧ ತೋರಿಸುತ್ತಿದ್ದಾರೆ.

ಭಾರತದಲ್ಲಿ ಮೊನ್ನೆ GST ಚಾಲ್ತಿಗೆ ಬಂದಾಗ, ಸಾನಿಟರಿ ಪ್ಯಾಡುಗಳ ಮೇಲೆ ತೆರಿಗೆಯ ಕುರಿತು ಚರ್ಚೆ ಆರಂಭ ಆದಕೂಡಲೇ ಸರ್ಕಾರ ಏನೂ ಪ್ರತಿಕ್ರಿಯಿಸದಿದ್ದರೂ ಅದು ಸಾಕಿ ಬೆಳೆಸಿಟ್ಟಿರುವ ಭಕ್ತಗಢಣ ಮಾತ್ರ ತಮ್ಮ ಎಂದಿನ ವರಸೆಯಲ್ಲಿ ನಾವು ಹೊಸದಾಗಿ ತೆರಿಗೆ ಹಾಕಿದ್ದಲ್ಲ. ಹಿಂದೆ ಸೇಲ್ಸ್ ಟಾಕ್ಸ್ ಇದ್ದಾಗ, ವ್ಯಾಟ್ ವ್ಯವಸ್ಥೆ ಇದ್ದಾಗ ಕೂಡ ಸಾನಿಟರಿ ಪ್ಯಾಡುಗಳ ಮೇಲೆ ತೆರಿಗೆ ಇತ್ತು ಎಂದು ವಿತಂಡವಾದ ಹಿಡಿದಿದ್ದಾರೆ.

‘ಆ ಪ್ಯಾಡುಗಳನ್ನು ಬಳಸುವವರು 10-12%  ಮಂದಿ ಮಾತ್ರ. ಜೊತೆಗೆ ಸಾನಿಟರಿ ಪ್ಯಾಡು ಪರಿಸರಕ್ಕೆ ಹಾನಿಕರ. ಮಾರುಕಟ್ಟೆಯಲ್ಲಿ ಪ್ಯಾಡೊಂದರ 2-4 ರೂ ಗಳಿಂದ 8-12 ರೂ ಗಳ ತನಕ ಲಭ್ಯವಿರುವ ಇವನ್ನು ಮಹಿಳೆಯರು ಹೆಚ್ಚೆಂದರೆ ತಿಂಗಳೊಂದರ 8-10  ಬಳಸುತ್ತಾರೆ. ಹಾಗಾಗಿ ಖರ್ಚಿರುವುದು 40-150 ರೂಪಾಯಿಗಳದು. ಇಷ್ಟಕ್ಕೆ ಅಷ್ಟೆಲ್ಲ ರಾದ್ಧಾಂತ ಬೇಕೇ’ ಎಂಬೆಲ್ಲ ವಾದಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ.

ಬೇಸರದ ಸಂಗತಿಯೆಂದರೆ ಈ ಇಡಿಯ ವಾದ ಸರಣಿಯಲ್ಲಿ ಇನ್ನೂ ಈ ಪ್ಯಾಡುಗಳು ಕೈಗೆಟುಕದ ಮಹಿಳೆಯರು, ಇದಕ್ಕಾಗಿ ಶಾಲೆ ತಪ್ಪಿಸಿಕೊಳ್ಳಬೇಕಾದ ಹೆಣ್ಣುಮಕ್ಕಳು ಈ ದೇಶದಲ್ಲಿದ್ದಾರೆ ಎಂಬುದು ಈ ಉಳ್ಳವರ ಇಂಡಿಯಾದವರಿಗೆ ಅರ್ಥ ಆಗುವುದೆ ಇಲ್ಲ. ಅವರು ಸಾನಿಟರಿ ಪ್ಯಾಡುಗಳು ಪರಿಸರಕ್ಕೆ ಹಾನಿಕರವಾದ್ದರಿಂದ ಟಾಂಪೊನ್ ಗಳನ್ನು ಬಳಸಿ ಎಂಬ ವಾದ ಹೂಡುತ್ತಿದ್ದಾರೆ.

ಅವರದೇ ವಾದವನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋದರೆ, ವಿದೇಶಗಳಲ್ಲಿ ಚಾಲ್ತಿ ಇರುವ ಈ ಟಾಂಪೊನ್ ಗಳು ಅಲ್ಲಿ ಕಿರಿಕಿರಿ, ಸಂತಾನ ಹೀನತೆ, ಒಣಕಲು ಯೋನಿ, ದೀರ್ಘ ಅವಧಿಗೆ ಬಳಸಿದಾಗ ಸೋಂಕು, ಅಪರೂಪಕ್ಕೆ ಮರಣಾಂತಿಕ ವಿಷಾಘಾತ (TSS) ದಂತಹ ತೊಂದರೆಗಳಿಗೆ ಹಾದಿ ಮಾಡಿಕೊಟ್ಟಿವೆ ಎಂಬುದನ್ನೂ ಮರೆಯುವಂತಿಲ್ಲ.

ಈ ಇಡಿಯ ಪ್ರಕರಣವನ್ನು ಸಾಂವಿಧಾನಿಕ ದ್ರಷ್ಟಿಕೋನದಿಂದ ನೋಡಿದರೂ, ಮಹಿಳೆಯರು ಮುಟ್ಟಿನ ತೆರಿಗೆಯ ವಿರುದ್ಧ ಹೋರಾಟ ಆರಂಭಿಸಿರುವುದು ಸರಿಹಾದಿಯಲ್ಲೇ ಇದೆ ಅನ್ನಿಸುತ್ತದೆ. ಸರಕಾರದ ಪರವಾಗಿ ವಾದಿಸುವವರು ಎತ್ತುವ ಕೆಲವು ಸಾಂವಿಧಾನಿಕ ಪ್ರಶ್ನೆಗಳನ್ನು ಗಮನಿಸೋಣ:

ತೆರಿಗೆ ವಿಧಿಸಿದ್ದು ಮಹಿಳೆಯರ ಮೇಲಲ್ಲ; ವಸ್ತುವಿನ ಮೇಲೆ. ಹಾಗಾಗಿ ಸಂವಿಧಾನಬದ್ಧ ಎಂಬ ಸಮರ್ಥಕರ ವಾದದಲ್ಲಿ ಹುರುಳಿಲ್ಲ. ಈವರೆಗಿನ ಎಲ್ಲ ಸಾಂವಿಧಾನಿಕ ಚರ್ಚೆಗಳು ಹೇಳಿರುವುದು, ಒಂದು ಕಾನೂನು ಸಾಂವಿಧಾನಿಕವೇ ಎಂಬುದು ಸಿದ್ಧವಾಗುವುದು ಅದರ ‘ಉದ್ದೇಶ’ ಅಥವಾ ‘ವಿಧದ’ ಆಧಾರದಲ್ಲಲ್ಲ; ಬದಲಾಗಿ ಅದು ಪ್ರಜೆಗಳ ಹಕ್ಕುಗಳ ಮೇಲೆ ಮಾಡುವ ‘ಪರಿಣಾಮ’ದಿಂದ ಎಂದು. ಸುಪ್ರೀಂ ಕೋರ್ಟ್ ಈ ಬಗೆ ಈಗಾಗಲೇ ಸ್ಪಷ್ಟಪಡಿಸಿದೆ. (Khandige Sham Bhat vs Agricultural Officer, Prem Chand Garg vs Excise Commissioner, Anuj Garg vs Hotel Association.)

ಸಂವಿಧಾನದ ವಿಧಿ 15(1)ಹೇಳಿರುವುದು “Only on …sex” ಎಂದು. ಹಾಗಾಗಿ ಈ ತೆರಿಗೆ ಅನ್ವಯವಾಗುವುದು ಮುಟ್ಟಿನ ಪ್ರಾಯದಲ್ಲಿರುವವರಿಗೇ ಹೊರತು ಎಲ್ಲ ಮಹಿಳೆಯರಿಗಲ್ಲ ಎಂಬ ವಾದವಿದೆ. ಅದನ್ನು ಕೂಡ ಸುಪ್ರೀಂ ಕೋರ್ಟು (Air India vs Nargesh Mirza) ಗರ್ಭಿಣಿಯರಿಗೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿದ್ದು, ಎಲ್ಲ ಮಹಿಳೆಯರೂ ಗರ್ಭಿಣಿಯರಲ್ಲದಿರಬಹುದು, ಆದ್ರೆ ಗರ್ಭ ಧರಿಸುವುದು ಮಹಿಳೆ ಮಾತ್ರ ಎಂದು ಉಲ್ಲೇಖಿಸಿದೆ. ಅದೇರೀತಿ, ಎಲ್ಲ ಮಹಿಳೆಯರೂ ಮುಟ್ಟಾಗದಿರಬಹುದು; ಆದರೆ ಮುಟ್ಟಾಗುವುದು ಮಹಿಳೆಯರು ಮಾತ್ರ.

ಗಂಡಸರಿಗೆ ಶೇವಿಂಗ್ ಕ್ರೀಂ-ಲೋಷನ್ ಗಳಿಗೆ ತೆರಿಗೆ ಇಲ್ಲವೇ? ಹಾಗೇ ಇದೂ ಎಂಬುದು ಅನುಕೂಲಸಿಂಧು ವಾದ. ಇಲ್ಲಿ ಪಕ್ಷಪಾತದ ಅಥವಾ ಹೋಲಿಕೆಯ ಪ್ರಶ್ನೆ ಬರಬಾರದು. ಯಾಕೆಂದರೆ ಸಾನಿಟರಿ ಪ್ಯಾಡ್ ಎಂಬುದು ಮಹಿಳೆಯ ದೇಹದ ಪ್ರಜನನ ವ್ಯೂಹದ ಆರೋಗ್ಯದ ದ್ರಷ್ಟಿಯಿಂದ ಮತ್ತು ಆಕೆ ಪುರುಷನಿಗೆ ಸರಿಸಮನಾಗಿ ಉದ್ಯೋಗ-ಉತ್ಪಾದಕತೆಯ ರಂಗಗಳಲ್ಲಿ ನಿಲ್ಲಲು ಅದು ಅನಿವಾರ್ಯ. ಅದಕ್ಕಾಗಿ ಆಕೆಯ ಮೇಲೆ ತೆರಿಗೆಯ ಹೊರೆ ಹೊರಿಸುವುದು ಲಿಂಗ ಪಕ್ಷಪಾತವೇ ಆಗಿಬಿಡುತ್ತದೆ.

‍ಲೇಖಕರು avadhi

10 July, 2017

2 Comments

  1. ಸಂಧ್ಯಾ

    “ನಾವು ಹೊಸದಾಗಿ ತೆರಿಗೆ ಹಾಕಿದ್ದಲ್ಲ. ಹಿಂದೆ ಸೇಲ್ಸ್ ಟಾಕ್ಸ್ ಇದ್ದಾಗ, ವ್ಯಾಟ್ ವ್ಯವಸ್ಥೆ ಇದ್ದಾಗ ಕೂಡ ಸಾನಿಟರಿ ಪ್ಯಾಡುಗಳ ಮೇಲೆ ತೆರಿಗೆ ಇತ್ತು ಎಂದು ವಿತಂಡವಾದ ಹಿಡಿದಿದ್ದಾರೆ.”
    ಹಾಗಾದರೆ ಹಿಂದೆ ತೆರಿಗೆ ಇರಲಿಲ್ಲವೇ? GSTಗೆ ಮೊದಲು ಹಾಗೂ ನಂತರದ ಬೆಲೆಯ ಬಗ್ಗೆ ಮಾಹಿತಿ ನೀಡಬಲ್ಲಿರಾ?

    Tamponಗಳ ಬಗ್ಗೆ ನೀವು ಹೇಳಿರುವ ಅಪಾಯಗಳು sanitary padಗಳಿಂದಲೂ ಉಂಟ3ಗುತ್ತವೆ ಅನ್ನೋದು ನಿಮಗೆ ತಿಳಿದಿದೆಯೇ?
    Reusable cloth pads ಹಾಗೂ menstrual cupಗಳಂತಹ ಪರಿಸರಸ್ನೇಹಿ ಪರ್ಯಾಯಗಳ ಬಗ್ಗೆ ಯಾಕೆ ನಿಮ್ಮ ಮೌನ?

  2. Anonymous

    ಯಾರು ಏನು ಬಳಸಬೇಕೆಂದು, ಹೇಗೆ ಬದುಕಬೇಕೆಂದು ಹೇಳುವ ಹಕ್ಕಾಗಲೀ ಸೊಕ್ಕಾಗಲೀ ನನಗಿಲ್ಲ. ನಾನು ಹೇಳಿರುವುದು ಮಹಿಳೆಯ ಮುಟ್ಟಿಗೆ ತೆರಿಗೆ ಹಾಕುವುದು ಎಂದರೆ ಲಿಂಗ ಪಕ್ಷಪಾತ ಮಾಡಿದಂತೆ ಎಂದು. ಅದಕ್ಕೆ ನಿಮ್ಮದೂ ಒಪ್ಪಿಗೆ ಇದೆ ಎಂದುಕೊಂಡಿದ್ದೇನೆ. ಟಾಂಪೊನ್ ಗಳು ನಾನು ಓದಿರುವಂತೆ ಯೋನಿಮಾರ್ಗದ ಒಳಗೆ ಗರ್ಭಕೋಶದ ಕತ್ತಿನ ತನಕವೂ ತಲುಪಬಲ್ಲ ಪರಿಕರ. ಅದು ಖಂಡಿತವಾಗಿಯೂ ಪ್ಯಾಡಿಗಿಂತ ಹೆಚ್ಚು ಅಪಾಯಕಾರಿ ಎಂಬುದು ಕಾಮನ್ ಸೆನ್ಸ್. ಇನ್ನು ಕಪ್ ಗಳ ಬಗ್ಗೆ ನನಗೆ ಗೊತ್ತಿಲ್ಲ. ಸರಕಾರ ಅದನ್ನು ಉಚಿತವಾಗಿ ಮಹಿಳೆಯರಿಗೆ ಒದಗಿಸುವುದಾದಲ್ಲಿ, ಮಹಿಳೆ ಅದನ್ನು ಹೈಜೆನಿಕ್ ಆಗಿಟ್ಟುಕೊಂಡು ಮರುಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದಾದಲ್ಲಿ ಖುಷಿಪಡೋಣ. ನಿಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು – ರಾಜಾರಾಂ ತಲ್ಲೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading