ಎಲ್ಲಿಯ ಹೊನ್ನೆಮರಡು, ಎಲ್ಲಿಯ ಹೊಸನಗರ?

ಸಾಗರದಿಂದ ಹುಲಿದೇವರ ಬನದ ಮೂಲಕ ಬರುವ ವಾಹನಗಳು, ಜನರೂ ನಿಟ್ಟೂರು ಕಡೆ ಹೋಗಲು ಮುಂದಿರುವ ಹಸಿರುಮಕ್ಕಿ ಎನ್ನುವಲ್ಲಿ ಬಾರ್ಜನಲ್ಲಿ ದಾಟುವ ವ್ಯವಸ್ಥೆಯಿದೆ ಎಂದೂ ಲಕ್ಷ್ಮಿನಾರಾಯಣ ಹೇಳಿದರು.

ತುಸು ದೂರ ಹೋಗುತ್ತಿದ್ದಂತೇ ಬಾರ್ಜ ಇತ್ತಣಿಂದ ಅತ್ತ ಸಾಗುತ್ತಿರುವದು ಕಾಣಿಸಿತು. ಇಕ್ಕೆಲಗಳ ದಡದಲ್ಲಿ ಬಸ್ಸು, ಲಾರಿ ಮುಂತಾದ ವಾಹನಗಳೂ, ಜನರೂ ಇರುವದು ಸಣ್ಣದಾಗಿ ಕಾಣಿಸಿತು.

ಅಲ್ಲಿ ಒಂದಿಷ್ಟು ಮನೆಗಳೂ ಕಂಡವು. ಮನುಷ್ಯರ ಹಂಗಿಲ್ಲದೇ ಏಕಾಂಗಿಯಾಗಿದ್ದ ಪರಿಸರ, ಜಲರಾಶಿಯನ್ನು ಹಿಂದಕ್ಕೆ ಬಿಟ್ಟು ಅಲ್ಲಿಂದ ಮುಂದೆ ಪುನ: ಲೋಕ ಜಗತ್ತಿಗೆ ಅಡಿಯಿಡುತ್ತಿದ್ದೇವೆ ಅನ್ನಿಸಿತು.

ಹಸಿರುಮಕ್ಕಿಯ ನೀರಿನ ಮಡವು ನಮಗೆ ಎಲ್ಲಿಲ್ಲದ ಕಷ್ಟ ಕೊಡತೊಡಗಿತ್ತು. ಏನೇ ಮಾಡಿದರೂ ಕೊರೆಕಲ್ಗಳು ಮುಂದುವರಿಯುತ್ತಲೇ ಇರಲಿಲ್ಲ. ಜೊತೆಯಲ್ಲಿದ್ದ ಒಂದೆರಡು ಕೊರೆಕಲ್‍ಗಳು ಅತ್ತಿತ್ತ ಸಾಗಿ ಏನೇ ಪ್ರಯತ್ನಪಟ್ಟರೂ ದಡದ ಅಂಚಿಗೆ ಸರಿಯುತ್ತಿದ್ದವು. ಪ್ರಯಾಸಪಟ್ಟು ಹುಟ್ಟು ಹಾಕಿದರೂ ಇದ್ದಲ್ಲೇ ಇರುತ್ತಿತ್ತು. ‘ಇದೇನಪ್ಪಾ, ಹೊಸ ಗ್ರಹಚಾರ’ ಎನ್ನುವ ಚಿಂತೆ ಮೂಡಿತು.

ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಎನ್ನುವಲ್ಲಿಂದ ಹುಟ್ಟುವ ಶರಾವತಿ ಹೊಸನಗರದವರೆಗೂ ಸಣ್ಣ ಹಳ್ಳವಾಗಿಯೇ ಹರಿದುಬರುತ್ತದೆ. ನಾನು ಕೆಲವು ವರ್ಷಗಳ ಹಿಂದೆ ಅಂಬುತೀರ್ಥವನ್ನು ನೋಡಿದ್ದೆ. ಶರಾವತಿ ಉಗಮದ ಸ್ಥಳದಲ್ಲಿ ಪುಟ್ಟ ದೇವಸ್ಥಾನವನ್ನೂ, ಅಲ್ಲೊಂದು ಪುಷ್ಕರಣಿಯನ್ನೂ ನಿರ್ಮಿಸಿದ್ದಾರೆ. ಹೊಸನಗರದವರೆಗೂ ಅದೊಂದು ನದಿ ಎನ್ನುವ ಕಲ್ಪನೆಯೇ ಬರಲಾರದು. ಮೊದಲನೇ ದಿನ ಗಜಾನನ ಶರ್ಮಾ ಶರಾವತಿ ನದಿ ಬಗ್ಗೆ ವಿವರಿಸುವಾಗ ಹೇಳಿದ ಮಾತು ನೆನಪಾಯ್ತು. ಹೊಸನಗರದಿಂದ ಹೊನ್ನೆಮರಡುವಿನವರೆಗೆ ಹರಿದ್ರಾವತಿ, ಮಳಲಿ, ಹರದೂರು, ಎಣ್ಣೆಹೊಳೆ, ತಳಕಳಲೆ, ಸಿರೂರು ಹಳ್ಳ ಮುಂತಾಗಿ 12 ಹಳ್ಳಗಳು ಸೇರುವ ಕಾರಣ ಶರಾವತಿಗೆ ಬಾರಂಗಿ ಹೊಳೆ ಎಂದು ಕರೆಯುತ್ತಾರೆಂದೂ, ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಅವು ಶರಾವತಿಯಲ್ಲಿ ಸೇರಿಕೊಳ್ಳುವದು ಗೋಚರಿಸುತ್ತದೆಯೆಂದೂ ವಿವರಿಸಿದ್ದರು.

ನಾವು ಯಾನ ಮಾಡುವ ಸಮಯದಲ್ಲಿ ಹೆಚ್ಚಿನ ನೀರು ಇದ್ದ ಕಾರಣ ಈ ಹಳ್ಳಗಳ ನೀರು ಶರಾವತಿಗೆ ಸೇರುವದು ಗೊತ್ತೇ ಆಗುತ್ತಿರಲಿಲ್ಲ. ಶರಾವತಿಗೆ ಸೇರುವ ಆ ಹಳ್ಳಗಳ ಕೋವಿನಲ್ಲೂ ಹಿನ್ನೀರು ತುಂಬಿಕೊಂಡಿತ್ತು. ಅವುಗಳ ನೀರು ನಿಧಾನವಾಗಿ ಹಿನ್ನೀರಿನಲ್ಲಿ ಬೆರೆತುಕೊಳ್ಳುತ್ತಿರುತ್ತಿತ್ತು. ಸಮುದ್ರದ ಬಗ್ಗೆ ಅಲ್ಪಸ್ವಲ್ಪ ತಿಳಿದವರಿಗೂ ಅಲ್ಲಿನ ಒಳ ಪ್ರವಾಹಗಳ ಬಗ್ಗೆ ಗೊತ್ತಿರುತ್ತದೆ. ಮಾನ್ಸೂನ್‍ಗಳನ್ನು ಉಂಟುಮಾಡುವ ಈ ಪ್ರವಾಹಗಳು ಅಲ್ಲಿನ ಉತ್ಪಾತಗಳಿಗೂ ಕಾರಣವಾಗುತ್ತದೆಯಂತೆ. ಹಂಬೋಲ್ಟ ಬಿಸಿ ನೀರಿನ ಪ್ರವಾಹ ಅವುಗಳಲ್ಲೊಂದು. ಮೇಲ್ಭಾಗದಲ್ಲಿ ಗೋಚರವಾಗದೇ ತಳಭಾಗದಲ್ಲಿ ಪ್ರವಹಿಸುವ ಅವುಗಳಂತೆ ಈ ಹಳ್ಳಗಳ ನೀರೂ ಹಿನ್ನೀರಿನ ಆಳದಲ್ಲಿ ಹರಿಯುತ್ತಿರಬಹುದೇ? ಆ ಕಾರಣದಿಂದ ಸೆಳೆತ ಉಂಟಾಗುತ್ತಿದೆಯೇ? ಎನ್ನುವ ಅನುಮಾನವೂ ಬಂತು.

ಅಂತೂ ಏನೇನೋ ಒದ್ದಾಟ ಮಾಡಿ ಸುಮಾರು 3-4 ಕಿಮೀ ಉದ್ದದ ಆ ಮಡುವನ್ನು ದಾಟುವ ಪ್ರಯತ್ನ ಮಾಡುವಾಗ ಪುನ: ಸಂಧಿಗ್ಧ ಎದುರಾಗಿತ್ತು. ಅಲ್ಲಿ ನದಿಗೆ ಮೂರು ಕೋವುಗಳಿದ್ದವು. ಯಾವುದರಲ್ಲಿ ಹೋಗುವದು ಎನ್ನುವ ನಿರ್ಧಾರವೂ ಅಲ್ಲಿ ಆಗಬೇಕಿತ್ತು. ಸ್ವಾಮಿ ಏನೇನೋ ಲೆಕ್ಕಾಚಾರ ಹಾಕಿದಂತೆ ಮಾಡಿ ಎದುರಿನಲ್ಲಿದ್ದ ಪುಟ್ಟ ಕೋವಿನಲ್ಲೇ ಹೋಗುವದು ಎಂದು ತೀರ್ಮಾನಿಸಿದರು.

ಆ ಕೋವನ್ನು ಸಾಗತೊಡಗಿದ ನಂತರ ಸುತ್ತಲಿನ ಪರಿಸರವೇ ಬದಲಾಗತೊಡಗಿತ್ತು. ಅಲ್ಲಿಂದ ಮುಂದೆ ಶರಾವತಿ ಪುಟ್ಟ ಹೊಳೆಯಂತಾಗಿಬಿಟ್ಟಿತ್ತು. ಎರಡೂ ದಡಗಳು ಸಮೀಪವಾಗಿದ್ದವು. ಹಸಿರುಮಕ್ಕಿ ಮಡುವನ್ನು ದಾಟುವ ಪ್ರಯತ್ನದಲ್ಲಿ ಎಲ್ಲರೂ ಸುಸ್ತಾಗಿದ್ದರು. ಎಲ್ಲಾದರೂ ಒಂದಿಷ್ಟು ಹೊತ್ತು ವಿಶ್ರಮಿಸುವದು ಅನಿವಾರ್ಯವಾಗಿಬಟ್ಟಿತು. ಹಾಗಾಗಿ ಎದುರಿನಲ್ಲಿ ಕಂಡ ಜಾರು ನೆಲದ ದಿನ್ನೆಯೊಂದರ ಬಳಿ ನಿಲುಗಡೆಯಾದರು.

“ಈಗ ಹನ್ನೊಂದು ಗಂಟೆ. ನಾವು ಸುಮಾರು ಒಂದೂವರೆ, ಎರಡರ ಹೊತ್ತಿಗೆ ಹೊಸನಗರ ತಲುಪಬಹುದು” ಎನ್ನುವ ಸೂಚನೆಯನ್ನು ಸ್ವಾಮಿ ಕೊಟ್ಟರು.
ಅಷ್ಟರನಂತರ ಆದಷ್ಟು ಬೇಗ ಹೊಸನಗರ ತಲುಪುವ ಹಂಬಲದಲ್ಲಿ ಎಲ್ಲರ ಕೊರೆಕಲ್‍ಗಳು ವೇಗವಾಗಿ ಚಲಿಸತೊಡಗಿದರೂ ಕೆಲವೇ ಹೊತ್ತಿನಲ್ಲಿ ಮಾಮೂಲಿ ಸ್ಥಿತಿಗೇ ಬಂದವು. ನೀರು ಹರಿದುಬರುತ್ತಿದ್ದ ಕಾರಣ ಮೇಲೆ ಹೋದಷ್ಟು ನಮ್ಮನ್ನು ಕೆಳಗೇ ತಳ್ಳುತ್ತಿತ್ತು. ಎರಡೂ ದಡಗಳಲ್ಲಿ ಅಲ್ಲಲ್ಲಿ ಅಡಕೆ ತೋಟಗಳೂ, ಗದ್ದೆಗಳು ಕಾಣತೊಡಗಿದವು. ಕೆಲವೆಡೆ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕೊರೆಕಲ್‍ನಲ್ಲಿ ಹೋಗುತ್ತಿದ್ದ ನಮ್ಮನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. ಕೆಲವರು ನೀರ ಬಳಿಗೆ ಓಡಿ ಬರುತ್ತಿದ್ದರು.

ನಮ್ಮ ಕೊರೆಕಲ್‍ಗೆ ಆ ಬೆಳಿಗ್ಗೆ ವಿಕ್ರಮ ಎನ್ನುವ ಯುವಕರೊಬ್ಬರು ಸೇರಿಕೊಂಡಿದ್ದರು. ಅವರ ಊರು ನಾವು ಸಾಗುತ್ತಿದ್ದ ಪ್ರದೇಶದಲ್ಲೇ ಇತ್ತು. ತನ್ನ ಮನೆ ಇಲ್ಲೇ ಎರಡು ಕಿಮೀ.ದೂರ ಇರುವದಾಗಿಯೂ, ಅಲ್ಲಿಗೆ ಹೋಗೋಣ ಎಂದು ದುಂಬಾಲು ಬಿದ್ದರು. ನಮಗೆಲ್ಲ ಆದಷ್ಟು ಬೇಗ ಹೊಸನಗರ ತಲುಪುವದೇ ಮುಖ್ಯವಾಗಿದ್ದ ಕಾರಣ ನಾವು ಅದಕ್ಕೆ ಸಮ್ಮತಿಸಲಿಲ್ಲ.

ಹೊಸನಗರ ಹತ್ತಿರವಾದಂತೆಲ್ಲ ಹೊಳೆ ಕಿರಿದಾಗತೊಡಗಿದ್ದಲ್ಲದೇ ಆಳವೂ ಕಡಿಮೆಯಾಗುತ್ತಿತ್ತು. ಕೆಲವೆಡೆಯಂತೂ ನೀರಿನಲ್ಲಿ ನಡೆದುಕೊಂಡೇ ಬರಬಹುದಾಗಿತ್ತು. ಜನರು, ಮನೆಗಳು ಕಾಣತೊಡಗಿದ್ದರಿಂದ ಎಲ್ಲರಿಗೂ ಇನ್ನೇನು ಹೊಸನಗರ ಬಂತು ಎನ್ನುವ ಆಶಾಭಾವನೆ ಉಂಟಾಯಿತು. ಆದರೆ ಎಷ್ಟೇ ಸಾಗಿದರೂ ಅದು ಮರೀಚಿಕೆಯಂತೆ ಮುಂದುವರಿಯುತ್ತಿತ್ತು.

ಸ್ವಾಮಿಯವರ ಲೆಕ್ಕಾಚಾರ ತಪ್ಪಾಗಿತ್ತು. ಅವರೆಣಿಸಿದಂತೆ ಎರಡು ಗಂಟೆಯಿರಲೀ, ಮೂರಾದರೂ ನಾವಿನ್ನೂ ಹೊಸನಗರದಿಂದ ಅದೆಷ್ಟೋ ದೂರದಲ್ಲಿದ್ದೆವು. ಆದರೆ ನಾವು ತಿಳಿದಂತೇ ಸ್ವಾಮಿ ಲೆಕ್ಕ ತಪ್ಪಿರಲಿಲ್ಲ. ನಿಜವಾದ ದೂರವನ್ನು ಹೇಳಿದರೆ ನಾವೆಲ್ಲ ಉತ್ಸಾಹ ಕಳೆದುಕೊಳ್ಳಬಹುದು ಎಂದು ಹಾಗಂದಿದ್ದರು. ನಾನು ಚಿಕ್ಕವನಿದ್ದಾಗ ನನ್ನ ತಂದೆ ಅಥವಾ ತಾಯಿ ಎಲ್ಲಿಗಾದರೂ ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗುವಾಗ ‘ಇದೇ, ಇಲ್ಲೇ ಬಂತು, ಓ, ಅಲ್ಲಿ ಕಾಣ್ತದಲ್ಲಾ ಆ ಗುಡ್ಡದ ಆಚೆಗೇ’ ಎಂದು ತಲುಪಬೇಕಾದ ಸ್ಥಳವನ್ನು ಗುರುತಿಸುತ್ತಿದ್ದರು. ಆದರೆ ಅವರು ಹೇಳಿದ ದೂರವನ್ನು ತಲುಪಿದರೂ ಮತ್ತೆ ಅದು ಮುಂದುವರಿದೇ ಇರುತ್ತಿತ್ತು.

ವಿಕ್ರಮ ಅವರಿಗೆ ಆ ಪ್ರದೇಶ ಗೊತ್ತಿದ್ದರಿಂದ ಹೊಸನಗರ ಇನ್ನೂ ನಾಲ್ಕಾರು ಕಿಮೀ.ದೂರವಿದೆಯೆಂತಲೂ, ಅಲ್ಲಿ ಮುಟ್ಟುವಾಗ ಕನಿಷ್ಠ ನಾಲ್ಕು ಗಂಟೆಯಾಗುತ್ತದೆಯೆಂದೂ ಹೇಳಿದರು.

ನಮ್ಮೆಲ್ಲರ ಪರಿಸ್ಥಿತಿ ಮಾತ್ರ ಹೈರಾಣವಾಗಿತ್ತು. ಹೇಗಿದ್ದರೂ ಒಂದೆರಡು ಗಂಟೆಗೆಲ್ಲ ಹೊಸನಗರ ತಲುಪುತ್ತೇವೆಂದು ಮಧ್ಯಾಹ್ನದ ಲಂಚ್‍ಗೆ ವ್ಯವಸ್ಥೆ ಮಾಡಿರಲಿಲ್ಲ. ಮುಂಜಾನೆ ತಿಂದ ಒಂದಿಷ್ಟು ಉಪ್ಪಿಟ್ಟು, ಮಧ್ಯೆ ಒಂದುಕಡೆ ಒಂದೆರಡು ಹಣ್ಣು ತಿಂದದ್ದು ಬಿಟ್ಟರೆ ಹೊಟ್ಟೆಯಲ್ಲಿ ಏನೂ ಇಲ್ಲದೇ ಹಸಿವು ಕೆರಳಿತ್ತು. ಮೇಲ್ಮುಖವಾಗಿ ಹುಟ್ಟು ಹಾಕಿ, ಹಾಕಿ ಸೋತುಹೋಗಿದ್ದೆವು. ಮೇಲೆ ಬಿರು ಬಿಸಿಲು ಬೇರೆ, ಎಷ್ಟೂ ಅಂತ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವದು?

ಲಕ್ಷ್ಮಿನಾರಾಯಣ ತನ್ನ ಬಳಿ ಹುಟ್ಟು ಹಾಕಲು ಸಾಧ್ಯವೇ ಇಲ್ಲವೆಂತಲೂ, ಬೇಕಾದರೆ ದಡದಲ್ಲಿ ನಡೆದುಕೊಂಡಾದರೂ ಬರುತ್ತೇನೆಂತಲೂ ಕೈ ಚೆಲ್ಲಿ ಕುಳಿತುಬಿಟ್ಟಿದ್ದರು. ಅವರ್ಯಾಕೋ ಮ್ಲಾನವದನರಾಗಿದ್ದನ್ನು ಕಂಡು ‘ ಏನಾಯ್ತ್ರೀ’ ಎಂದೆ. ‘ ಏನಿಲ್ಲ, ಬೆನ್ನು ನೋವು’ ಅಂದರೂ ಯಾಕೋ ಬೇಸರದಲ್ಲಿದ್ದಂತೇ ಕಂಡಿತು.

ವಾಸ್ತವಿಕವಾಗಿ ನನಗೂ ಒಂದು ಥರದ ಬೇಸರ ಮನಸ್ಸಿನಲ್ಲಿತ್ತು. ಮೊದಮೊದಲು ಹೊಸನಗರವನ್ನು ಎಷ್ಟು ಹೊತ್ತಿಗೆ ತಲುಪುತ್ತೇವೋ ಎನ್ನುವ ಧಾವಂತದಲ್ಲಿದ್ದರೂ, ಹೊಸನಗರ ಹತ್ತಿರ ಬಂದಂತೆಲ್ಲ ‘ ‘ಛೇ, ಯಾನ ಮುಗಿದೇಹೋಗ್ತಿದೆಯಲ್ಲ’ ಎನ್ನುವ ವಿಷಾದ ಹುಟ್ಟಿಕೊಳ್ಳತೊಡಗಿತ್ತು.
ನಾನು, ಲಕ್ಷ್ಮಿನಾರಾಯಣ ಇಬ್ಬರೂ ಬೇರೆ ಯಾರಾದರೂ ಹುಟ್ಟು ಹಾಕುವವರಿದ್ದರೆ, ಹೊತ್ತಿಗೆ ಸರಿಯಾಗಿ ಊಟ ಕೊಡುವವರಿದ್ದರೇ ಜೀವನಪರ್ಯಂತ ಬೇಕಾದರೂ ಕೊರೆಕಲ್‍ನಲ್ಲಿ ತೇಲಿಕೊಂಡೇ ಇರಲು ಸಿದ್ಧರಿದ್ದೆವು.

ಹೊಳೆ ಎನ್ನುವದು ಈಗ ಪುಟ್ಟ ಹಳ್ಳವಾಗಿಬಿಟ್ಟಿತ್ತು. ಎರಡೂ ದಡಗಳು ಕೈ ಚಾಚಿದರೆ ಸಿಗುವಷ್ಟು ಹತ್ತಿರವಾಗಿದ್ದವು. ಸುವಿಶಾಲವಾದ ಸಮುದ್ರದಿಂದ ಪುಟ್ಟದೊಂದು ಹೊಂಡಕ್ಕೆ ಬಂದ ಕಪ್ಪೆಯ ಸ್ಥಿತಿ ನಮ್ಮದಾಗಿತ್ತು. ಯಾರೂ ಇದೇ ಹಳ್ಳ ಕೆಳಗೆ ಹೋದಂತೆಲ್ಲ ವಿಸ್ತಾರವಾದ ಶರಧಿಯಾಗಬಹುದು ಎಂದು ಊಹಿಸುವಂತೆಯೇ ಇರಲಿಲ್ಲ.

ಅಷ್ಟು ಹೊತ್ತಿಗೆ ತೀರಾ ಮುಂದೆ ಇದ್ದ ಕೊರೆಕಲ್‍ನಲ್ಲಿದವರು ‘ ಹೊಸನಗರ ಕಾಣ್ತಿದೆ’ ಎಂದು ಉತ್ಸಾಹಭರಿತರಾಗಿ ಕೂಗಿದರು. ಹತ್ತಿರ ಹೋದಂತೆಲ್ಲ ದೂರದಲ್ಲಿ ಕಟ್ಟಡಗಳೂ, ಎತ್ತರದ ನೀರಿನ ಟ್ಯಾಂಕ್‍ಗಳೂ ಗೋಚರಿಸತೊಡಗಿದವು. ನಾವು ಸಾಗುತ್ತಿದ್ದ ಹಳ್ಳ ಜೊಂಡು ಬೆಳೆದಿದ್ದ ಒಂದು ಕೆರೆಗೆ ಹೋಗಿ ಸೇರಿಸಿತು.

ಅಲ್ಲಿ ಎಲ್ಲ ಕೊರೆಕಲ್‍ಗಳು ಒಟ್ಟಾಗಿ ಸೇರಿದವು. ಕೆರೆಯ ಆಚೆಗಿರುವ ದೂರದ ದಡದಲ್ಲಿ ಸಾಕಷ್ಟು ಜನರಿರುವದು, ಅಲ್ಲೊಂದು ಶಾಮಿಯಾನಾ ಹಾಕಿರುವುದು ಕಾಣುತ್ತಿತ್ತು. ಹಲವು ವಾಹನಗಳೂ ನಿಂತಿದ್ದವು. ‘ ಅಲ್ಲಿ ನೀರಯಾನ ಮುಗಿಸಿಬಂದವರಿಗೆ ಸ್ವಾಗತ ಕಾರ್ಯಕ್ರಮ ಇರುವದಾಗಿಯೂ, ಇಲ್ಲಿಂದ ಎಲ್ಲ ಕೊರೆಕಲ್‍ನವರೂ ಒಟ್ಟಾಗಿ ದಡ ತಲುಪಬೇಕೆಂತಲೂ’ ತಂಡದ ಮುಖ್ಯಸ್ಥರು ಘೋಷಿಸಿದರು. ಅದೆಲ್ಲಿಂದ ಅಂಥ ಹುಮ್ಮಸು ಬಂತೋ ಏನೋ? ಎಲ್ಲ ಕೊರೆಕಲ್‍ನವರೂ ಶಕ್ತಿಮೀರಿ ಹುಟ್ಟು ಹಾಕುತ್ತ ದಡದ ಕಡೆ ವೇಗವಾಗಿ ಸಾಗತೊಡಗಿದರು.

ದಡ ತಲುಪಿದವರನ್ನ ಅಲ್ಲಿದ್ದವರೆಲ್ಲ ತಬ್ಬಿಕೊಂಡು ಸ್ವಾಗತಿಸಿದ ಪರಿ ಅಪೂರ್ವವಾಗಿತ್ತು. ನಿಜಕ್ಕೂ ಆ ಕ್ಷಣದಲ್ಲಿ ಅವರ ಪಾಲಿಗೆ ನಾವೆಲ್ಲ ವೀರಯೋಧರಂತೆ ಕಂಡಿರಬೇಕು. ಮೂರು ದಿನಗಳ ಕಾಲ ಪುಟ್ಟ ಕೊರೆಕಲ್‍ನಲ್ಲಿ ಸಮುದ್ರದಂಥ ನೀರಲ್ಲಿ ತೇಲಿಕೊಂಡು ಬರುವುದು ಹುಡುಗಾಟದ ಕೆಲಸವೇ ಎನ್ನುವ ಭಾವ ಅವರಲ್ಲಿ ಮೂಡಿದಂತೆ ಕಂಡಿತು.

ಸ್ವಾಗತ, ಸನ್ಮಾನ ಮುಂತಾದ ಆ ಕಾರ್ಯಕ್ರಮಗಳ ಗಜಿಬಿಜಿ ತಪ್ಪಿಸಿಕೊಂಡು ಬ್ಯಾಗ್ ಎತ್ತಿಕೊಂಡು ದೂರಕ್ಕೆ ಬಂದು ನಿಂತೆ. ಎದುರಿನಲ್ಲಿ ಶರಾವತಿ ಎನ್ನುವ ಪುಟ್ಟ ಹೊಳೆಯಿತ್ತು. ಹಿಂದೆಂದೂ ದೊರಕಿರದ, ಮುಂದೆ ಖಂಡಿತಕ್ಕೂ ಸಾಧ್ಯವಾಗದ ಸ್ಮೃತಿಪಟಲದಲ್ಲಿ ಅಚ್ಚಳಿಯದ ಅಪರೂಪದ ಅನುಭವವನ್ನು ಅದು ನೀಡಿತ್ತು.

ಎಲ್ಲಿಯ ಹೊನ್ನೆಮರಡು, ಎಲ್ಲಿಯ ಹೊಸನಗರ?

ಬಸ್ಸಿನಲ್ಲಿ ಬಂದರೆ ಎರಡು, ಮೂರು ತಾಸಿನಲ್ಲಿ ಬರಬಹುದಾದ ದೂರವನ್ನು ಮೂರುದಿನಗಳ ಕಾಲ ಸೆಣಸಾಟ ಮಾಡಿ ಕ್ರಮಿಸಿ ಬಂದಿದ್ದೆವು. ಬದುಕಿನಲ್ಲಿ ಇಂಥ ಅದ್ಭುತ ಅನುಭವ ಸಿಕ್ಕೀತೆಂದು ಎಂದೂ ಅಂದುಕೊಂಡಿರಲಿಲ್ಲ. ಇಂಥ ಅದೆಷ್ಟೋ ಸಾಹಸಯಾನ ಮಾಡಿದ, ಚಾರಣ ನಡೆಸಿದ ಸ್ವಾಮಿ ಮತ್ತು ನೊಮಿಟೊ ಅವರು ನನ್ನಂಥ ಅನನುಭವಿಗೆ ಜನ್ಮದಲ್ಲಿ ಮರೆಯಲಾಗದ ಅವೀಸ್ಮರಣೀಯ ಅನುಭವವನ್ನು ಒದಗಿಸಿಕೊಟ್ಟಿದ್ದರು. ವಿನಾಕಾರಣ ಕಣ್ಣು ಮಂಜಾದಂತೆ ಅನ್ನಿಸಿತು. ಅಷ್ಟರಲ್ಲಿ ಲಕ್ಷ್ಮಿನಾರಾಯಣ ನನ್ನ ಕರೆಯುತ್ತ ಬಂದಾಗ ಎದ್ದು ಬಂದೆ. ಸ್ವಾಮಿಯವರಿಗೆ ವಿದಾಯ ಹೇಳಿ ಹೊರಟೆವು.

ಮತ್ತೆ ಅದೇ ಮೊದಲಿನ ಗದ್ದಲ, ಗೌಜಿ, ಗಡಿಬಿಡಿ. ಹೊಸನಗರದಲ್ಲಿ ಬಸ್ ಹತ್ತಿ ಕುಳಿತರೆ ಎಷ್ಟು ಹೊತ್ತಿಗೆ ಮನೆ ತಲುಪಬಹುದು ಎನ್ನುವ ಕಾತರ. ಸಾಗರದಲ್ಲಿ ಎಂಟೂವರೆ ಕೊನೆಯ ಬಸ್ ತಪ್ಪಿದರೆ ಎನ್ನುವ ಚಿಂತೆ. ಸೀಟಿನಲ್ಲಿ ಕೂತರೆ ಕೊರೆಕಲ್‍ನಲ್ಲಿ ತೊನೆದಾಡಿದಂತೇ, ಕಣ್ಣು ಮುಚ್ಚಿದರೆ ನೀರಿನಲ್ಲಿ ತೇಲಿದಂತೆ ಅನುಭವ.

ಬಸ್ ಹೊರಟರೂ ಲಕ್ಷ್ಮಿನಾರಾಯಣ ನಾಪತ್ತೆಯಾಗಿದ್ದರು. ಅವರು ಎಲ್ಲಿಹೋದರೆಂದು ಬಸ್ಸಿನ ಕಿಡಕಿಯಲ್ಲಿ ಹಣಕಿ ಅತ್ತಿತ್ತ ನೋಡುತ್ತಿದ್ದಂತೆ ಗಡಿಬಿಡಿಯಲ್ಲಿ ಹತ್ತಿಬಂದು ಕೂತವರ ಕೈ ಮುಷ್ಠಿಯಲ್ಲಿ ನಾಲ್ಕಾರು ಗುಟ್ಕಾ ಪ್ಯಾಕೇಟ್!

‘ಏನ್ರೀ ನಿಮ್ಮ ಕತೆ. ಅಷ್ಟೆಲ್ಲಾ ಪಟಾಕಿ ಹೊಡೆದು ಮತ್ತೆ ಅದನ್ನೇ ತಿಂತೀರಲ್ರೀ’ ಎಂದು ರೇಗಿ ಆ ಪ್ಯಾಕೆಟ್‍ಗಳನ್ನು ಕಸಿದುಕೊಂಡು ಕಿಟಕಿಯಿಂದ ಹೊರಗೆ ಎಸೆದೆ. ಎಸೆದ ನಂತರ ನನ್ನ ಚರ್ಯೆಗೆ ಲಕ್ಷ್ಮಿನಾರಾಯಣ ಬೇಸರ ಮಾಡ್ಕೊಂಡ್ರೇನೋ ಎಂದು ಅವರ ಮುಖ ನೋಡಿದೆ. ಬೇಸರದ ಲವಲೇಶವೂ ಇಲ್ಲದೇ ಕುಲು ಕುಲು ನಗುತ್ತ ಮತ್ಯಾವುದೋ ಸಂಗತಿಯನ್ನು ಎತ್ತಿಕೊಂಡು ಹರಟತೊಡಗಿದರು. ಅವರ ಮನಸ್ಸಿನಲ್ಲಿ ಮತ್ಯಾವುದೋ ಐಡಿಯಾ ಸಣ್ಣಗೆ ಹರಿದಾಡತೊಡಗಿರುವಂತೆ ಅನ್ನಿಸಿತು.

++ ಇಲ್ಲಿಗೀಕಥೆ ಮುಗಿಯಿತು.. ++

‍ಲೇಖಕರು avadhi

November 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Mamatha

    ಇಷ್ಟು ಬೇಗ ಮುಗಿದು ಹೋಯಿತ.
    ತುಂಬಾ ಸೊಗಸಾದ ವರ್ಣನೆ ಹಾಗೂ ಅಪರೂಪದ ಅನುಭವ.

    ಪ್ರತಿಕ್ರಿಯೆ
  2. sumangalagm

    ಎಂಥ ಮಾರಾಯರೇ… ನಿಮ್ಮನ್ನು ಹೊಸನಗರ ಮುಟ್ಟಿಸುತ್ತ ನಂಗೆ ಅರಿವಾಯಿತು… ನಾ ಇಳಿಯಬೇಕಿದ್ದ ಬಸ್ ಸ್ಟಾಪ್ ದಾಟಿಯೇಬಿಟ್ಟಿದೆ ಅಂತ… ಅರೆಕ್ಷಣ ಎಲ್ಲಿದ್ದೇನೆ ಎಂತ ತಿಳಿಯದೇ ಕಣ್ಣು ಕಣ್ಣು ಬಿಟ್ಟೆ… ನೀವು ನೋಡಿದರೆ ಅಲ್ಲಿ ಜನರ ಮಧ್ಯೆ ಇದ್ದಿರಿ, ಒಬ್ಬರ ಕೈಯಿಂದ ಗುಟ್ಕಾ ಪ್ಯಾಕೆಟ್ ಕಿತ್ತು ಹಣಿದಿರಿ… ನಾನು ಈ ಬೆಂದಕಾಳೂರಿನ ಏಳೂಮುಕ್ಕಾಲಿಗೇ ಶುರುವಾದ ಟ್ರಾಫಿಕ್ ನಲ್ಲಿ ಬಸ್ ಇಳಿದವಳು ಒಂದು ಸ್ಟಾಪ್ ಮುಂದೆ ಬಂದೆನಾ ಅಥವಾ ಎರಡು ಸ್ಟಾಪ್ ಮುಂದೆ ಬಂದೆನಾ ಎಂದು ತಿಳಿಯದೇ ಅವಕ್ಕಾಗಿ ನಿಂತೆ!! ಅದ್ಭುತ ಯಾನ… ಸಣ್ಣಗೆ ಹೊಟ್ಟೆಕಿಚ್ಚೂ ಕೂಡ ಆಗ್ತಾ ಇದೇರಿ!!! ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: